ಕರ್ನಾಟಕದ ರಾಜಕೀಯ ಮತ್ತು ಕಾನೂನು ವಲಯದಲ್ಲಿ ತೀವ್ರ ಸಂಚಲನ ಮೂಡಿಸಿರುವ ಯೋಗೇಶ್ ಗೌಡ ಕೊಲೆ ಪ್ರಕರಣವು ದಿನದಿಂದ ದಿನಕ್ಕೆ ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಈ ಹಿಂದೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು (ಸತ್ರ ನ್ಯಾಯಾಲಯ) ಶಾಸಕ ವಿನಯ್ ಕುಲಕರ್ಣಿ (Vinay Kulkarni) ಸೇರಿದಂತೆ ಹಲವರಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಈ ತೀರ್ಪನ್ನು ಪ್ರಶ್ನಿಸಿ ವಿನಯ್ ಕುಲಕರ್ಣಿ ಅವರು ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು. ಅಲ್ಲಿ ವಿಚಾರಣಾ ನ್ಯಾಯಾಲಯದ ತೀರ್ಪಿಗೆ ತಡೆಯಾಜ್ಞೆ ನೀಡಿ, ಅವರಿಗೆ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ಮೂಲಕ ಮಧ್ಯಂತರ ಜಾಮೀನು ಮಂಜೂರು ಮಾಡಲಾಗಿತ್ತು.
ಇದೀಗ ಹೈಕೋರ್ಟ್ ನೀಡಿರುವ ಈ ಮಧ್ಯಂತರ ತಡೆಯಾಜ್ಞೆ ಮತ್ತು ಜಾಮೀನನ್ನು ಪ್ರಶ್ನಿಸಿ, ಮೃತ ಯೋಗೀಶ್ ಗೌಡ ಅವರ ಸಹೋದರ ಗುರುನಾಥ್ ಗೌಡ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಈ ಮಹತ್ವದ ಹಂತದಲ್ಲಿ, ವಿನಯ್ ಕುಲಕರ್ಣಿ ಅವರ ಪರವಾಗಿ ಸುಪ್ರೀಂ ಕೋರ್ಟ್ನಲ್ಲಿ ಮಂಡಿಸಲಾಗುವ ಪ್ರಮುಖ ಲಿಖಿತ ವಾದಗಳ ದಾಖಲೆಯು (Written Submissions) ಸಿಬಿಐ ತನಿಖೆಯ ಬಂಡವಾಳವನ್ನು ಬಯಲು ಮಾಡಿದೆ. ತಳಹಂತದ ನ್ಯಾಯಾಲಯದ ತೀರ್ಪಿನಲ್ಲಿ ಏನೆಲ್ಲಾ ಗಂಭೀರ ಲೋಪಗಳಿವೆ? ಸಿಬಿಐ ತನಿಖೆ ಹೇಗೆ ಕಾನೂನುಬಾಹಿರವಾಗಿದೆ? ಎಂಬುದರ ಬಗ್ಗೆ ನ್ಯಾಯವಾದಿಗಳ ಲಿಖಿತ ವಾದಗಳ ವಿವರವಾದ ವಿಶ್ಲೇಷಣೆ ಇಲ್ಲಿದೆ.
ಹಿನ್ನೆಲೆ ಮತ್ತು ಕಾನೂನುಬಾಹಿರ ‘ಮರು ತನಿಖೆ’ಯ ಕಥೆ
- ಮೂಲ ಕೊಲೆ ಮತ್ತು ಮೊದಲ ಚಾರ್ಜ್ಶೀಟ್: 2016ರ ಜೂನ್ 15ರಂದು ಯೋಗೇಶ್ ಗೌಡ ಹತ್ಯೆಯಾಯಿತು. ಆರಂಭದಲ್ಲಿ ತನಿಖೆ ನಡೆಸಿದ ಸ್ಥಳೀಯ ಧಾರವಾಡ ಸಬ್-ಅರ್ಬನ್ ಪೊಲೀಸರು, 61 ಸಾಕ್ಷಿಗಳ ವಿಚಾರಣೆ ನಡೆಸಿ 6 ಜನರ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಿದ್ದರು. ಆ ಹಂತದಲ್ಲಿ ವಿನಯ್ ಕುಲಕರ್ಣಿ (Vinay Kulkarni) ಅವರ ಹೆಸರೇ ಇರಲಿಲ್ಲ.
- ಸುಪ್ರೀಂ ಕೋರ್ಟ್ ಆದೇಶಕ್ಕೇ ತಿಲಾಂಜಲಿ: ಸಿಬಿಐ ತನಿಖೆ ಕೋರಿ ಮೃತನ ಕುಟುಂಬದವರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ (SLP No. 5760-61/2019) ಸ್ಪಷ್ಟವಾಗಿ ವಜಾಗೊಳಿಸಿದ್ದವು.
- ರಾಜಕೀಯ ಬದಲಾವಣೆ ಮತ್ತು ಸಿಬಿಐ ಪ್ರವೇಶ: ಆದರೆ, 2019ರ ಸೆಪ್ಟೆಂಬರ್ನಲ್ಲಿ ರಾಜ್ಯದಲ್ಲಿ ಸರ್ಕಾರ ಬದಲಾಗುತ್ತಿದ್ದಂತೆ, ಅದೇ ತಿಂಗಳ 6ರಂದು ಹೊಸ ಸರ್ಕಾರವು ಸಿಬಿಐ ತನಿಖೆಗೆ ಆದೇಶಿಸಿತು. ಕಾನೂನಿನ ಪ್ರಕಾರ (CrPC Section 173(8)), ವಿಚಾರಣೆಯು ಅಂತಿಮ ಹಂತಕ್ಕೆ ತಲುಪಿದ್ದಾಗ ನ್ಯಾಯಾಲಯದ ಅನುಮತಿಯಿಲ್ಲದೆ ಸಿಬಿಐ ‘ಮರು ತನಿಖೆ’ (Further Investigation) ನಡೆಸುವ ಹಾಗಿಲ್ಲ. ಆದರೆ ಇದನ್ನು ಮೀರಿ ಸಿಬಿಐ ಹೊಸದಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿತು.
- ತನಿಖಾಧಿಕಾರಿಯ ವಿವಾದಾತ್ಮಕ ಚಿನ್ನದ ಪದಕ: ವಿನಯ್ ಕುಲಕರ್ಣಿ ಅವರನ್ನು ಬಂಧಿಸಿ ಚಾರ್ಜ್ಶೀಟ್ ಸಲ್ಲಿಸಿದ್ದಕ್ಕಾಗಿ ಸಿಬಿಐ ತನಿಖಾಧಿಕಾರಿ ರಾಕೇಶ್ ರಂಜನ್ (PW-113) ಅವರು ಭಾರತ ಸರ್ಕಾರದಿಂದ “ಚಿನ್ನದ ಪದಕ” ಪಡೆದಿರುವುದನ್ನು ಒಪ್ಪಿಕೊಂಡಿದ್ದಾರೆ. ಇದು ತನಿಖೆಯು ಸತ್ಯಾನ್ವೇಷಣೆಗಾಗಿ ನಡೆದಿಲ್ಲ, ಬದಲಿಗೆ ರಾಜಕೀಯ ಪ್ರೇರಿತ ಮತ್ತು ಪುರಸ್ಕಾರಕ್ಕಾಗಿ ನಡೆಸಿದ ಕಸರತ್ತು ಎಂಬುದನ್ನು ಸಾಬೀತುಪಡಿಸುತ್ತದೆ.
ಇದನ್ನೂ ಓದಿ: ಸಿದ್ದುಗೆ ಸ್ವಪಕ್ಷೀಯರ ಬೆನ್ನಿರಿತ, ‘ಸಂಧಾನ’ಕ್ಕೆ ಬಂದ ನಾಯಕರಿಗೆ ಗುದ್ದು! ಹೈಕಮಾಂಡ್ ಅಂಗಳಕ್ಕೆ ‘ಸ್ಟಿಂಗ್’ ಕಿಚ್ಚು?
ಕೊಲೆಗೆ ಸಿಬಿಐ ಕಟ್ಟಿದ ‘ಉದ್ದೇಶದ ಕಥೆ’ ಸಂಪೂರ್ಣ ಸುಳ್ಳು?
ಅಪರಾಧ ಪ್ರಕರಣಗಳಲ್ಲಿ ಕೊಲೆಗೆ ಕಾರಣವಾದ ‘ಉದ್ದೇಶ’ (Motive) ಅತ್ಯಂತ ಮುಖ್ಯ. ಆದರೆ ಸಿಬಿಐ ಈ ವಿಚಾರದಲ್ಲಿ ಎರಡು ವಿರೋಧಾತ್ಮಕ ಕಥೆಗಳನ್ನು ಸೃಷ್ಟಿಸಿದೆ:
- ಮೊದಲ ಕಥೆ: ಸ್ಥಳೀಯ ಪೊಲೀಸರ ಪ್ರಕಾರ, ಮೃತನಿಗೆ ಮತ್ತು ಪ್ರಕರಣದ 1ನೇ ಆರೋಪಿ (ಮಾಫಿಸಾಕ್ಷಿ) ನಡುವೆ 27.5 ಎಕರೆ ಜಮೀನಿನ ವಿವಾದವಿತ್ತು. ಮೃತನ ಹೆಂಡತಿ ಮಲ್ಲವ್ವ (PW-50) ಕೂಡ ಆರಂಭದಲ್ಲಿ ಇದನ್ನೇ ಹೇಳಿದ್ದರು.
- ಸಿಬಿಐ ಸೃಷ್ಟಿಸಿದ ಹೊಸ ಕಥೆ: ನಂತರ ಬಂದ ಸಿಬಿಐ, “ಜಿಲ್ಲಾ ಪಂಚಾಯತ್ ಸಭೆಯಲ್ಲಿ ಯೋಗೇಶ್ ಗೌಡ ಮತ್ತು ವಿನಯ್ ಕುಲಕರ್ಣಿ ನಡುವೆ ಮಾತಿನ ಚಕಮಕಿ ನಡೆದಿತ್ತು, ಆ ರಾಜಕೀಯ ದ್ವೇಷದಿಂದ ಕೊಲೆ ಮಾಡಲಾಗಿದೆ” ಎಂಬ ಹೊಸ ಕಥೆ ಹೆಣೆದಿತು.
- ದಾಖಲೆಗಳಿಂದ ಸಿಬಿಐ ಕಥೆ ಧೂಳಿಪಟ:
- ಸಭೆಯ ಅಧಿಕೃತ ನಡಾವಳಿ ಪುಸ್ತಕ (Ex.D.3): ಸಿಬಿಐ ವಶಪಡಿಸಿಕೊಂಡ ಜಿ.ಪಂ. ನಡಾವಳಿ ಪುಸ್ತಕದ ಪ್ರಕಾರ, ವಿನಯ್ ಕುಲಕರ್ಣಿ ಅವರು ಯೋಗೇಶ್ ಗೌಡ ಎತ್ತಿದ ಸಮಸ್ಯೆಯನ್ನು ವಿರೋಧಿಸಲಿಲಿಲ್ಲ, ಬದಲಿಗೆ ಬೆಂಬಲಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.
- ಮೃತನ ಹೆಂಡತಿಯ ಸಾಕ್ಷ್ಯ (PW-50): ಮೃತನ ಪತ್ನಿ ಮಲ್ಲವ್ವ ಅವರು ಕೋರ್ಟ್ನಲ್ಲಿ ಸಾಕ್ಷ್ಯ ನುಡಿಯುತ್ತಾ, ತಮ್ಮ ಕುಟುಂಬಕ್ಕೂ ವಿನಯ್ ಕುಲಕರ್ಣಿ ಕುಟುಂಬಕ್ಕೂ ಉತ್ತಮ ಒಡನಾಟವಿತ್ತು ಎಂದೂ, ಯೋಗೇಶ್ ಗೌಡ ತಾಲೂಕು ಪಂಚಾಯತ್ ಅಧ್ಯಕ್ಷರಾಗಲು ವಿನಯ್ ಕುಲಕರ್ಣಿಯೇ ಕಾರಣವಾಗಿದ್ದರು ಎಂದೂ ಸ್ಪಷ್ಟಪಡಿಸಿದ್ದಾರೆ.
- ಪತ್ರಿಕಾ ವರದಿಗಳ ಹಾವಳಿ: ಸಿಬಿಐ ಕೇವಲ ಒಂದು ಪತ್ರಿಕಾ ವರದಿಯನ್ನು (Ex.P.206) ಆಧಾರವಾಗಿಟ್ಟುಕೊಂಡು ಆರೋಪ ಮಾಡಿದೆ. ಆದರೆ ಕಾನೂನಿನ ಪ್ರಕಾರ ಪತ್ರಿಕೆಗಳಲ್ಲಿ ಬರುವ ವರದಿಗಳು ನೇರ ಸಾಕ್ಷಿಯಾಗುವುದಿಲ್ಲ (Hearsay evidence). ಆ ವರದಿ ಬರೆದ ವರದಿಗಾರನಾಗಲಿ ಅಥವಾ ಸಂಪಾದಕರಾಗಲಿ ಕೋರ್ಟ್ನಲ್ಲಿ ಸಾಕ್ಷಿ ನೀಡಿಲ್ಲ.
ಸಾಕ್ಷಿಗಳೇ ಪಲ್ಟಿ: ಸಿಬಿಐ ಬೆದರಿಕೆಯೇ ಅಸಲಿ ಸತ್ಯ!
- ಪ್ರತ್ಯಕ್ಷದರ್ಶಿಗಳೆನಿಸಿಕೊಂಡವರ ಮಾತು ಬದಲಾವಣೆ: ಸಿಬಿಐ ಯಾರನ್ನು ನಂಬಿ ತನ್ನ ವಾದವನ್ನು ಮಂಡಿಸಿತ್ತೋ, ಆ ಪ್ರಮುಖ ಪ್ರತ್ಯಕ್ಷದರ್ಶಿಗಳಾದ PW-1, PW-31, PW-32, PW-33 ಹಾಗೂ PW-34 ಎಲ್ಲರೂ ಕೋರ್ಟ್ನಲ್ಲಿ ಸಂಪೂರ್ಣವಾಗಿ ಪಲ್ಟಿಯಾದರು (Hostile). “ಸಿಬಿಐ ಅಧಿಕಾರಿಗಳು ನಮಗೆ ಬೆದರಿಕೆ ಹಾಕಿ, ದಬ್ಬಾಳಿಕೆ ನಡೆಸಿ ಬಲವಂತವಾಗಿ ಸುಳ್ಳು ಹೇಳಿಕೆ ಬರೆಸಿಕೊಂಡಿದ್ದರು” ಎಂದು ಅವರು ನ್ಯಾಯಾಲಯದ ಮುಂದೆ ಒಪ್ಪಿಕೊಂಡಿದ್ದಾರೆ.
- 8 ವರ್ಷಗಳ ಬಳಿಕ ಬಂದ ನಕಲಿ ಸಾಕ್ಷಿ: ಲಕ್ಷ್ಮಿ ಬೆನಕಟ್ಟಿ (PW-30) ಎಂಬ ಮಹಿಳೆ ಘಟನೆ ನಡೆದು ಎಂಟು ವರ್ಷಗಳ ಬಳಿಕ (2025ರಲ್ಲಿ) ಬಂದು ಹೊಸದಾಗಿ ಸಾಕ್ಷಿ ಹೇಳಿದರು. ಆದರೆ 2017ರಲ್ಲಿ ಈಕೆ ಧಾರವಾಡ ಕೋರ್ಟ್ನಲ್ಲಿ “ನಾನು ಘಟನಾ ಸ್ಥಳದಲ್ಲೇ ಇರಲಿಲ್ಲ” ಎಂದಿದ್ದರು. ಜಿಮ್ ಮ್ಯಾನೇಜರ್ (PW-35) ಕೂಡ ಈಕೆ ಆ ದಿನ ಜಿಮ್ಗೆ ಬಂದಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕೊಲೆಗೆ ಬಳಸಿದ ಆಯುಧಗಳೇ ಸಿಕ್ಕಿಲ್ಲ!
- ಯಾವುದೇ ಕೊಲೆ ಪ್ರಕರಣದಲ್ಲಿ ‘ಕೃತ್ಯಕ್ಕೆ ಬಳಸಿದ ಆಯುಧಗಳು’ ಪ್ರಮುಖ ಸಾಕ್ಷ್ಯವಾಗಿರುತ್ತವೆ. ಆದರೆ ಈ ಪ್ರಕರಣದಲ್ಲಿ ಸಿಬಿಐ ಸಂಪೂರ್ಣ ಎಡವಟ್ಟಾಗಿದೆ.
- ಸ್ಥಳೀಯ ಪೊಲೀಸರು ಮೊದಲಿಗೆ ವಶಪಡಿಸಿಕೊಂಡಿದ್ದ ಆಯುಧಗಳನ್ನು ಸಿಬಿಐ “ಅವೆಲ್ಲವೂ ಪೊಲೀಸರೇ ನಕಲಿಯಾಗಿ ಸೃಷ್ಟಿಸಿದ ಆಯುಧಗಳು (Planted weapons)” ಎಂದು ತಳ್ಳಿಹಾಕಿತು.
- ಆದರೆ, ಹೊಸದಾಗಿ ಆರೋಪ ಹೊರಿಸಲಾದ ಆರೋಪಿಗಳಾದ A-8 ರಿಂದ A-14 ವರೆಗಿನ ಯಾರೊಬ್ಬರ ಬಳಿಯಿಂದಲೂ ಸಿಬಿಐಗೆ ಕೊಲೆ ಆಯುಧಗಳನ್ನು ವಶಪಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಕೃತ್ಯಕ್ಕೆ ಬಳಸಿದ ಆಯುಧಗಳೇ ಸಿಗದಿದ್ದ ಮೇಲೆ ಕೊಲೆಗೂ ಆರೋಪಿಗಳಿಗೂ ಸಂಬಂಧ ಕಲ್ಪಿಸುವುದು ಹೇಗೆ ಎಂಬುದು ವಕೀಲರ ಪ್ರಮುಖ ಪ್ರಶ್ನೆಯಾಗಿದೆ.
ತಾಂತ್ರಿಕ ಹಾಗೂ ಎಲೆಕ್ಟ್ರಾನಿಕ್ ಸಾಕ್ಷಿಗಳ ಲೋಪಗಳು
- CDR ಮತ್ತು ಸೆಕ್ಷನ್ 65(B) ಪ್ರಮಾಣಪತ್ರ ಇಲ್ಲ: ವಿನಯ್ ಕುಲಕರ್ಣಿ ಮತ್ತು ಇತರ ಆರೋಪಿಗಳ ನಡುವೆ ಮೊಬೈಲ್ನಲ್ಲಿ ಮಾತನಾಡಿದ್ದಕ್ಕೆ ಯಾವುದೇ ಸ್ಪಷ್ಟ ಧ್ವನಿ ದಾಖಲೆಗಳಿಲ್ಲ. ಮೊಬೈಲ್ ಕಾಲ್ ರೆಕಾರ್ಡ್ಸ್ (CDR) ನೀವಾಗಲಿ ಅಥವಾ ಇಲೆಕ್ಟ್ರಾನಿಕ್ ದಾಖಲೆಗಳಾಗಲಿ ಕಾನೂನುಬದ್ಧವಾಗಿ ಸ್ವೀಕಾರವಾಗಬೇಕಾದರೆ ಸೆಕ್ಷನ್ 65(B) ಪ್ರಮಾಣಪತ್ರ ಕಡ್ಡಾಯ. ಆದರೆ ನೋಡಲ್ ಅಧಿಕಾರಿಗಳಾದ PW-106 ಮತ್ತು PW-109 ಅವರು ಕೋರ್ಟ್ನಲ್ಲಿ ಒಪ್ಪಿಕೊಂಡಂತೆ, ಸಿಡಿಆರ್ ನೀಡುವಾಗ ಯಾವುದೇ ಅಂತಹ ಪ್ರಮಾಣಪತ್ರವನ್ನು ಆರಂಭದಲ್ಲಿ ನೀಡಿರಲಿಲ್ಲ.
- ಅಸ್ಪಷ್ಟ ಸಿಸಿಟಿವಿ ದೃಶ್ಯಗಳು: ಸಿಸಿಟಿವಿ ಕ್ಯಾಮೆರಾದಲ್ಲಿ ಯಾರ ಮುಖವೂ ಸ್ಪಷ್ಟವಾಗಿ ಕಾಣುತ್ತಿಲ್ಲ ಎಂದು ಸ್ವತಃ ಪ್ರಾಸಿಕ್ಯೂಷನ್ ಸಾಕ್ಷಿಗಳೇ ಹೇಳಿದ್ದಾರೆ. ವಿಧಿವಿಜ್ಞಾನ ತಜ್ಞ (PW-47) ಕೂಡ ಕಡಿಮೆ ಬೆಳಕಿನಲ್ಲಿ ಮುಖ ಗುರುತಿಸುವುದು ಅಸಾಧ್ಯ ಹಾಗೂ ತಾನು ಯಾವುದೇ ವಿಶೇಷ ಸಾಫ್ಟ್ವೇರ್ ಬಳಸಿಲ್ಲ ಎಂದು ಒಪ್ಪಿಕೊಂಡಿದ್ದಾರೆ.
ಅಪ್ರೂವರ್ (ಮಾಜಿ ಆರೋಪಿ) ಸಾಕ್ಷಿಯ ವಿಶ್ವಾಸಾರ್ಹತೆ ಎಷ್ಟು?
- ಪ್ರಕರಣದ 1ನೇ ಆರೋಪಿಯಾಗಿದ್ದು ನಂತರ ‘ಅಪ್ರೂವರ್’ (ಸರ್ಕಾರಿ ಸಾಕ್ಷಿ) ಆದ (PW-10) ನೀಡಿದ ಹೇಳಿಕೆಯನ್ನು ಆಧರಿಸಿ ಕೆಳ ನ್ಯಾಯಾಲಯ ಶಿಕ್ಷೆ ನೀಡಿತ್ತು.
- ಆದರೆ ಈ ಅಪ್ರೂವರ್ ಒಬ್ಬ ಬ್ಲ್ಯಾಕ್ಮೇಲರ್ ಮತ್ತು ಸುಲಿಗೆಕೋರ ಎಂಬುದು ಆಡಿಯೋ ದಾಖಲೆಗಳಿಂದ (Ex.D.24) ಸಾಬೀತಾಗಿದೆ ಎಂದು ನ್ಯಾಯವಾದಿಗಳು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ.
- ಶಾಸಕರ ಭವನದಲ್ಲಿ ವಿನಯ್ ಕುಲಕರ್ಣಿಯನ್ನು ಭೇಟಿಯಾಗಿರುವುದಾಗಿ ಈತ ಹೇಳಿದ್ದರೂ, ಅಲ್ಲಿನ ಅಧಿಕೃತ ಪ್ರವೇಶ ರಿಜಿಸ್ಟರ್ನಲ್ಲಿ (Ex.D.23) ಆತನ ಹೆಸರೇ ಇಲ್ಲ. ಸ್ವತಂತ್ರ ಸಾಕ್ಷ್ಯಗಳ ಬೆಂಬಲವಿಲ್ಲದ ಇಂತಹ ಅಪ್ರೂವರ್ ನುಡಿಗಳನ್ನು ನಂಬಲು ಸಾಧ್ಯವಿಲ್ಲ ಎಂಬುದು ನ್ಯಾಯವಾದಿಗಳ ವಾದವಾಗಿದೆ.
ಇದನ್ನೂ ಓದಿ: ಎಂಎಲ್ಸಿ ಚುನಾವಣೆಯಲ್ಲಿ ಧೂಳಿಪಟ; ಸಿದ್ದರಾಮಯ್ಯ ಸೈಡ್ಲೈನ್ ಏಫೆಕ್ಟ್? ಹೈಕಮಾಂಡ್ಗೆ ಎಚ್ಚರಿಕೆ ಗಂಟೆ!
ವಿಚಾರಣಾ ನ್ಯಾಯಾಲಯ ಮಾಡಿದ ದೊಡ್ಡ ತಪ್ಪುಗಳು
- ಸಮಾನ ಆರೋಪಿಗಳಿಗೆ ಬೇರೆ ಬೇರೆ ನ್ಯಾಯ: ಇದೇ ಪ್ರಕರಣದಲ್ಲಿ ಒಂದೇ ರೀತಿಯ ಸಾಕ್ಷ್ಯಗಳನ್ನ ಹೊಂದಿದ್ದ ಆರೋಪಿಗಳಾದ A-20 ಮತ್ತು A-21 ಅವರನ್ನು ಕೆಳ ನ್ಯಾಯಾಲಯವು ಖುಲಾಸೆಗೊಳಿಸಿದೆ (ಬಿಡುಗಡೆ ಮಾಡಿದೆ). ಆದರೆ ಅದೇ ಸಾಕ್ಷ್ಯದ ಮೇಲೆ ವಿನಯ್ ಕುಲಕರ್ಣಿಗೆ ಶಿಕ್ಷೆ ನೀಡಿರುವುದು ತಾರತಮ್ಯ ಮತ್ತು ಕಾನೂನುಬಾಹಿರ.
- ನ್ಯಾಯಾಂಗ ತತ್ವಗಳ ಉಲ್ಲಂಘನೆ: ಅಪರಾಧ ನ್ಯಾಯಶಾಸ್ತ್ರದ ಪ್ರಕಾರ, “ಸಂಶಯವೆಷ್ಟೇ ಬಲವಾಗಿದ್ದರೂ ಅದು ಅಂತಿಮ ಸಾಕ್ಷಿಯಾಗಲಾರದು”. ಆದರೆ ಕೆಳ ನ್ಯಾಯಾಲಯವು ಕಾನೂನಿನ ಸಾಕ್ಷ್ಯಗಳ ಬದಲು ಸಮಾಜದ ಭಾವನೆಗಳು ಮತ್ತು ನೈತಿಕ ಊಹೆಗಳ (Moral Conjectures) ಆಧಾರದ ಮೇಲೆ ತೀರ್ಪು ನೀಡಿದೆ.
- ಸುಪ್ರೀಂ ಕೋರ್ಟ್ ತೀರ್ಪುಗಳ ನಿರ್ಲಕ್ಷ್ಯ: ವಕೀಲರು ಸುಪ್ರೀಂ ಕೋರ್ಟ್ನ 42 ಕ್ಕೂ ಹೆಚ್ಚು ಹಳೆಯ ತೀರ್ಪುಗಳನ್ನು ಉದಾಹರಣೆಯಾಗಿ ನೀಡಿದ್ದರೂ, ವಿಚಾರಣಾ ನ್ಯಾಯಾಲಯ ಅವುಗಳನ್ನು ಪರಿಗಣಿಸದೆ ಏಕಪಕ್ಷೀಯವಾಗಿ ತೀರ್ಪು ನೀಡಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಸಿಬಿಐ ನಡೆಸಿರುವ ತನಿಖೆಯು ಸಾಕ್ಷ್ಯಾಧಾರಗಳ ಕೊರತೆಯಿಂದ ಕೂಡಿದೆ ಹಾಗೂ ರಾಜಕೀಯ ಪ್ರೇರಿತವಾಗಿದೆ ಎಂಬುದು ವಿನಯ್ ಕುಲಕರ್ಣಿ ಪರ ವಕೀಲರು ಸುಪ್ರೀಂ ಕೋರ್ಟ್ನಲ್ಲಿ ಮಂಡಿಸುತ್ತಿರುವ ಪ್ರಮುಖ ವಾದವಾಗಿದೆ. ಪ್ರತ್ಯಕ್ಷದರ್ಶಿಗಳೇ ಇಲ್ಲದಿರುವುದು, ಕೃತ್ಯದ ಆಯುಧಗಳು ಸಿಗದಿರುವುದು, ತಾಂತ್ರಿಕ ದಾಖಲೆಗಳಲ್ಲಿ ಲೋಪವಿರುವುದು ಮತ್ತು ಅಪ್ರೂವರ್ ಸಾಕ್ಷಿಗಳು ಸುಳ್ಳಾಗಿರುವುದು ಹೈಕೋರ್ಟ್ ನೀಡಿದ ಮಧ್ಯಂತರ ತಡೆಯಾಜ್ಞೆ ಹಾಗೂ ಜಾಮೀನು ಆದೇಶವನ್ನು ಸಮರ್ಥಿಸಲು ಅತ್ಯಂತಬಲವಾದ ಕಾರಣಗಳಾಗಿವೆ. ಈ ಎಲ್ಲ ಅಂಶಗಳು ಸುಪ್ರೀಂ ಕೋರ್ಟ್ನಲ್ಲಿ ಯಾವ ರೀತಿಯ ತಿರುವು ನೀಡಲಿವೆ ಎಂಬುದನ್ನು ಕಾದುನೋಡಬೇಕಿದೆ.
(Disclaimer: ಈ ಲೇಖನವು ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೌರವಾನ್ವಿತ ಸುಪ್ರೀಂ ಕೋರ್ಟ್ಗೆ ಸಲ್ಲಿಕೆಯಾಗಿರುವ ವಿನಯ್ ಕುಲಕರ್ಣಿ ಪರ ವಕೀಲರ ಲಿಖಿತ ವಾದಗಳ ದಾಖಲೆಯನ್ನು (Written Submissions) ಆಧರಿಸಿದ ವರದಿಯಾಗಿದೆ. ಪ್ರಕರಣದ ಅಂತಿಮ ತೀರ್ಪು ನ್ಯಾಯಾಲಯದ ವಿಚಾರಣೆಗೆ ಒಳಪಟ್ಟಿರುತ್ತದೆ.)
ಯಾರ ಹಂಗೂ ಇಲ್ಲದ, ಯಾರಿಗೂ ಬಗ್ಗದ ಸ್ವತಂತ್ರ ಮಾಧ್ಯಮಕ್ಕೆ ನಿಮ್ಮ ಬೆಂಬಲದ ಅವಶ್ಯಕತೆ ಇದೆ...






