Wednesday, November 25, 2026
Home ವಿಶ್ಲೇಷಣೆ Sting Operation ಮಾಡಿದವರು ಎಸ್ಕೇಪ್, ಅಪ್‌ಲೋಡರ್‌ಗಳೇ ಟಾರ್ಗೆಟ್! ಹಾದಿ ತಪ್ಪಿತಾ ಸಿಸಿಬಿ ತನಿಖೆ?

Sting Operation ಮಾಡಿದವರು ಎಸ್ಕೇಪ್, ಅಪ್‌ಲೋಡರ್‌ಗಳೇ ಟಾರ್ಗೆಟ್! ಹಾದಿ ತಪ್ಪಿತಾ ಸಿಸಿಬಿ ತನಿಖೆ?

Sting Operation ಮಾಡಿದವರು ಎಸ್ಕೇಪ್, ಅಪ್‌ಲೋಡರ್‌ಗಳೇ ಟಾರ್ಗೆಟ್! ಹಾದಿ ತಪ್ಪಿತಾ ಸಿಸಿಬಿ ತನಿಖೆ?

ಕರ್ನಾಟಕದ ರಾಜಕೀಯ ರಂಗದಲ್ಲಿ ಬಿರುಗಾಳಿ ಎಬ್ಬಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧದ ನಕಲಿ ಸ್ಟಿಂಗ್ ಆಪರೇಷನ್ (Sting Operation) ಪ್ರಕರಣ ಈಗ ಕೇವಲ ಒಂದು ವಿಡಿಯೋ ವಿವಾದವಾಗಿ ಉಳಿದಿಲ್ಲ; ಬದಲಿಗೆ ಇದು ರಾಜ್ಯದ ತನಿಖಾ ಸಂಸ್ಥೆಗಳ ದ್ವಿಮುಖ ನೀತಿ ಮತ್ತು ರಾಜಕೀಯ ಒತ್ತಡಗಳ ಬೆತ್ತಲೆ ದರ್ಶನ ಮಾಡಿಸುತ್ತಿದೆ. ರಾಜ್ಯದಲ್ಲಿ ಅಧಿಕಾರ ಹಸ್ತಾಂತರವಾಗಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಚುಕ್ಕಾಣಿ ಹಿಡಿದಿದ್ದಾರೆ, ಇದೀಗ ರಾಜಕೀಯ ದ್ವೇಷದ ಕಿಚ್ಚು ಮಾತ್ರ ಹೊತ್ತಿಯುರಿತ್ತಿದೆ…

ಸಿಸಿಬಿ (CCB) ಪೊಲೀಸರು ನಡೆಸುತ್ತಿರುವ ನಕಲಿ ಸ್ಟಿಂಗ್ ಆಪರೇಷನ್ ಪ್ರಕರಣದ ತನಿಖೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಜನರ ಮನಸ್ಸಿನಲ್ಲಿ ಕಾಡುತ್ತಿರುವ ದೊಡ್ಡ ಪ್ರಶ್ನೆ ಒಂದೇ: “ಅಸಲಿಗೆ ಈ ನಕಲಿ ಸ್ಟಿಂಗ್ ವೀಡಿಯೊ ಮಾಡಿ ರಾಜ್ಯದ ಮುತ್ಸದ್ಧಿ ನಾಯಕನಿಗೆ ಕಳಂಕ ತಂದವರು ಹಾಗೂ ಅದರ ಹಿಂದೆ ನಿಂತು ಮಾಡಿಸಿದ ‘ನೀಚರು’ ಯಾರು ಎಂಬುದು ಎಲ್ಲರಿಗೂ ಗೊತ್ತಿದ್ದರೂ, ಪೊಲೀಸರು ಮಾತ್ರ ಅವರ ಕಡೆ ಕಣ್ಣೆತ್ತಿಯೂ ನೋಡದೆ ಕೇವಲ ವೀಡಿಯೊ ಅಪ್‌ಲೋಡ್ ಮಾಡಿದವರ ಬೆನ್ನೇರಿ ಹರಸಾಹಸ ಪಡುತ್ತಿರುವುದೇಕೆ?”

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಮೈತ್ರಿ ನಾಯಕರ ಖಡಕ್ ಎಚ್ಚರಿಕೆ!

ನಕಲಿ ಸ್ಟಿಂಗ್ ಆಪರೇಷನ್ (Sting Operation) ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಏಕಪಕ್ಷೀಯ ಮತ್ತು ರಾಜಕೀಯ ಪ್ರೇರಿತವಾಗಿ ನಡೆಸುತ್ತಿದ್ದಾರೆ ಎಂದು ಖಂಡಿಸಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಬಿಜೆಪಿ-ಜೆಡಿಎಸ್ ಮುಖಂಡರು ತೀವ್ರವಾಗಿ ಕಿಡಿಕಾರಿದ್ದಾರೆ,. ತನಿಖೆಯ ವೈಖರಿಯ ಬಗ್ಗೆ ಜೋಶಿ ಅವರು ನೇರವಾಗಿ ಪ್ರಶ್ನಿಸಿರುವುದನ್ನು ಹೀಗೆ ವಿಶ್ಲೇಷಿಸಬಹುದು:

  • ಪೊಲೀಸರು ರಾಜಕೀಯ ಹೇಳಿಕೆ ನೀಡುವುದು ತಪ್ಪು: “ಪೊಲೀಸ್ ಅಧಿಕಾರಿಗಳು ತನಿಖೆಯ ಹಂತದಲ್ಲಿ ರಾಜಕೀಯ ಹೇಳಿಕೆಗಳನ್ನು ನೀಡುವುದು ಸರಿಯಲ್ಲ. ಇವರ ಕೆಲಸ ಇನ್ವೆಸ್ಟಿಗೇಷನ್ ಮಾಡುವುದೇ ಹೊರತು, ಮಾಧ್ಯಮಗಳ ಮುಂದೆ ಬಂದು ಬೇರೆ ರಾಜಕೀಯ ನಾಯಕರ ವಿರುದ್ಧ ಸ್ಟೇಟ್‌ಮೆಂಟ್ ಕೊಡುವುದಲ್ಲ.”
  • ಅಪ್‌ಲೋಡರ್ ಬೆನ್ನೇರಿರುವ ಸಿಸಿಬಿ: “ಸ್ಟಿಂಗ್ ಮಾಡಿದವರ ವಿರುದ್ಧ ಅಥವಾ ಆ ವಿಡಿಯೋ ಮಾಡಿಟ್ಟುಕೊಂಡವರ ವಿರುದ್ಧ ಯಾವುದೇ ತನಿಖೆ ನಡೆಯುತ್ತಿಲ್ಲ; ಕೇವಲ ಅದು ವೈರಲ್ ಆದ ಹಾಗೂ ಅಪ್‌ಲೋಡ್ ಮಾಡಿದ ತಾಂತ್ರಿಕ ಸಂಗತಿಗಳ ಹಿಂದೆ ಮಾತ್ರ ಪೊಲೀಸರು ಬಿದ್ದಿದ್ದಾರೆ. ವಿಡಿಯೋ ಮಾಡಿದವರನ್ನು ಹಾಗೇ ಬಿಟ್ಟು ಅಪ್‌ಲೋಡ್ ಮಾಡಿದವರನ್ನು ಹಿಡಿಯಲು ಹೊರಟಿರುವುದರ ಅರ್ಥವೇನು?”
  • ಸರ್ಕಾರದ ಮುಖಭಂಗ ಮುಚ್ಚುವ ಡ್ರಾಮಾ: “ಕಾಂಗ್ರೆಸ್ ಪಕ್ಷದೊಳಗಿನ ಬೇಗುದಿಯನ್ನು ತಣ್ಣಗೆ ಮಾಡಲು ಮತ್ತು ಯಾರನ್ನೋ ಬಚಾವು ಮಾಡಲು ಸರ್ಕಾರ ಈ ರೀತಿ ಅಧಿಕಾರಿಗಳನ್ನು ಬಳಸಿಕೊಂಡು ಡ್ರಾಮಾ ಆಡಿಸುತ್ತಿದೆ. ಸರಿಯಾಗಿ ತನಿಖೆ ಮಾಡುವ ಧೈರ್ಯ ತೋರಿ.”

ಇದನ್ನೂ ಓದಿ: ಸಿದ್ದುಗೆ ಸ್ವಪಕ್ಷೀಯರ ಬೆನ್ನಿರಿತ, ‘ಸಂಧಾನ’ಕ್ಕೆ ಬಂದ ನಾಯಕರಿಗೆ ಗುದ್ದು! ಹೈಕಮಾಂಡ್ ಅಂಗಳಕ್ಕೆ ‘ಸ್ಟಿಂಗ್’ ಕಿಚ್ಚು?

ಅಸಲಿ ತಪ್ಪಿತಸ್ಥರನ್ನು ಬಿಟ್ಟು, ತಾಂತ್ರಿಕತೆಯುಳ್ಳ ನೆಪಗಳ ಹಿಂದೆ ಪೊಲೀಸರ ಓಟ!

ಈ ನಕಲಿ ಸ್ಟಿಂಗ್ ಆಪರೇಷನ್ (Sting Operation) ಪ್ರಕರಣದಲ್ಲಿ ತನಿಖೆ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದನ್ನು ನೋಡಿದರೆ ಆಶ್ಚರ್ಯವಾಗುತ್ತದೆ. ದೆಹಲಿಯಲ್ಲಿ ಮೊಬೈಲ್ ಖರೀದಿಸಿದ್ದು ಯಾರು, ಯಾವ ಅಂಗಡಿಯಲ್ಲಿ ಸಿಮ್ ಹಾಕಿ ಚೆಕ್ ಮಾಡಿದರು, ವೈಫೈ ಐಪಿ ಅಡ್ರೆಸ್ ಯಾವುದು ಎಂಬೆಲ್ಲಾ ತಾಂತ್ರಿಕ ವಿವರಗಳನ್ನು ಕಲೆಹಾಕುವುದನ್ನೇ ಪೊಲೀಸರು ತಮ್ಮ ಮಹಾನ್ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ.

ಆರೋಪಿ ರಿತೇಶ್ ಪಾಂಡೆ ಬಾಯಬಿಟ್ಟ ಮಾಹಿತಿಯ ಪ್ರಕಾರ, ಆ ಮೊಬೈಲ್ ವಿನಿಮಯವಾಗಿದ್ದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಅಧಿಕೃತ ದೆಹಲಿ ನಿವಾಸದಲ್ಲಿ. ಇಲ್ಲಿ ಕುಮಾರಸ್ವಾಮಿ ಅವರನ್ನು ಸಿಲುಕಿಸುವ ಅಥವಾ ರಾಜಕೀಯವಾಗಿ ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನಗಳು ತೆರೆಮರೆಯಲ್ಲಿ ನಡೆಯುತ್ತಿರಬಹುದು. ಆದರೆ, ಪ್ರಶ್ನೆ ಇರುವುದು ಕುಮಾರಸ್ವಾಮಿ ಅವರ ಮೇಲಲ್ಲ; “ಈ ಕೀಳು ಮಟ್ಟದ ನಕಲಿ ಸ್ಟಿಂಗ್ ಆಪರೇಷನ್ ಮಾಡಿಸಿದ ಅಸಲಿ ಮಾಸ್ಟರ್‌ಮೈಂಡ್‌ಗಳು ಯಾರು?” ಎಂಬುದು!

  • ಮಾಧ್ಯಮದಲ್ಲಿ ಕುಳಿತು ತಾನೇ ಮಾಡಿದ್ದು ಎಂದವನನ್ನು ಬಿಟ್ಟಿದ್ದೇಕೆ?

ಪವರ್ ಟಿವಿ ಎಂಡಿ ರಾಕೇಶ್ ಶೆಟ್ಟಿ ತಾನೇ ಈ ಸ್ಟಿಂಗ್ ಮಾಡಿದ್ದಾಗಿ ಟಿವಿ ಪರದೆ ಮುಂದೆ ಹೇಳಿಕೊಂಡಿದ್ದ. ಆತನನ್ನು ವಶಕ್ಕೆ ಪಡೆದು ಕಸ್ಟಡಿಗೆ ತೆಗೆದುಕೊಂಡು, “ಈ ಸುಳ್ಳು ವೀಡಿಯೊ ಮಾಡಲು ನಿನಗೆ ಹಣ ಕೊಟ್ಟವರು ಯಾರು? ಹಿಂದೆ ನಿಂತು ಸ್ಕ್ರಿಪ್ಟ್ ಬರೆಸಿದ ನಾಯಕರು ಯಾರು?” ಎಂದು ಗರ್ಭಾಳ ಬಗೆದು ಸತ್ಯ ಹೊರಹಾಕಬೇಕಿದ್ದ ಪೊಲೀಸರು, ಆತನಿಗೆ ಸುಲಭವಾಗಿ ಜಾಮೀನು ಸಿಗಲು ಅವಕಾಶ ಮಾಡಿಕೊಟ್ಟು ಸುಮ್ಮನಿದ್ದಾರೆ.

  • ಬುರ್ಕಾಧಾರಿ ಮಹಿಳೆ ಮತ್ತು ಕೃಪಾ ಆಳ್ವಾ ನಾಪತ್ತೆ ನಾಟಕ:

ವೀಡಿಯೊದಲ್ಲಿದ್ದ ಬುರ್ಕಾಧಾರಿ ಮಹಿಳೆಯನ್ನು ವಿಚಾರಣೆ ನಡೆಸಿದಾಗ “ನಾನು ಸಿದ್ದರಾಮಯ್ಯನವರ ಮುಖವನ್ನೇ ನೋಡಿಲ್ಲ” ಎಂದು ಆಕೆಯ ಮೂಲಕವೇ ಅಪ್ಪಟ ಸುಳ್ಳು ಕಥೆ ಸೃಷ್ಟಿಸಿದ್ದು ಬಯಲಾಯಿತು. ಹಾಗೆಯೇ ಈ ನಾಟಕದಲ್ಲಿ ಕಾಣಿಸಿಕೊಂಡ ಕಾಂಗ್ರೆಸ್ ನಾಯಕಿ ಕೃಪಾ ಆಳ್ವಾ, ಪೊಲೀಸರ ಭೇಟಿಯ ನಂತರ ದೇಶ ಬಿಟ್ಟೇ ಪರಾರಿಯಾಗುತ್ತಿದ್ದರೂ ತಡೆಯುವಲ್ಲಿ ಪೊಲೀಸರು ವಿಫಲರಾದರು.

ಇಷ್ಟೆಲ್ಲಾ ಸ್ಪಷ್ಟ ಸಾಕ್ಷ್ಯಗಳು ಕಣ್ಣ ಮುಂದಿದ್ದರೂ, ಪೊಲೀಸರ ತನಿಖೆ ಮಾತ್ರ ಕೇವಲ “ವೀಡಿಯೊ ಅಪ್‌ಲೋಡ್ ಮಾಡಲು ಫೋನ್ ತಂದುಕೊಟ್ಟವರು ಯಾರು?” ಎನ್ನುವ ಸಣ್ಣಪುಟ್ಟ ಕೊಂಡಿಗಳ ಸುತ್ತಷ್ಟೇ ಸುತ್ತುತ್ತಿರುವುದು ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಅಲುಗಾಡಿಸುತ್ತಿದೆ.

ಅಸಲಿ ಪ್ರಶ್ನೆ: ನಕಲಿ ಸ್ಟಿಂಗ್ ಮಾಡಿದವರು ಮತ್ತು ಮಾಡಿಸಿದವರೇ ಮಹಾನೀಚರಲ್ವೇ?

ರಾಜ್ಯದ ಹಿರಿಯ ನಾಯಕರೊಬ್ಬರ ವರ್ಚಸ್ಸಿಗೆ ಮಸಿ ಬಳಿಯಲು, ರಾಜಕೀಯವಾಗಿ ಅವರ ಬಲೆಯನ್ನು ಮುರಿಯಲು ಇಂತಹ ಹಸಿಹಸಿ ಸುಳ್ಳಿನ ‘ನಕಲಿ ಸ್ಟಿಂಗ್’ ಸೃಷ್ಟಿಸುವುದು ಅಕ್ಷರಶಃ ಅಪರಾಧ ಮಾತ್ರವಲ್ಲ, ಮಹಾನೀಚ ಕೃತ್ಯ.

  • ವೀಡಿಯೊದಲ್ಲಿ ಇಲ್ಲದ್ದನ್ನು ಇದ್ದಂತೆ ತೋರಿಸಿ ಸಮಾಜಕ್ಕೆ ವಿಷ ಉಣಿಸಿದ ಮಹಾಪ್ರಭು ಯಾರು?
  • ತೆರೆಮರೆಯಲ್ಲಿ ಕುಳಿತು ಹಣದ ಕಂತೆ ಎಸೆದು ಈ ಕೃತ್ಯಕ್ಕೆ ಸ್ಕ್ರಿಪ್ಟ್ ಬರೆಸಿದ ರಾಜ್ಯದ ಅಸಲಿ ನಾಯಕರು (ರೂವಾರಿಗಳು) ಯಾರು?

ಇವರನ್ನು ಬಿಟ್ಟು, ಕೇವಲ ಆ ವೀಡಿಯೊವನ್ನು ‘ಅಪ್‌ಲೋಡ್’ ಮಾಡಿದವರು ಅಥವಾ ಮೆಸೆಂಜರ್ ರೀತಿ ಕೆಲಸ ಮಾಡಿದವರ ಹಿಂದೆ ಸಿಸಿಬಿ ಪೊಲೀಸರು ಬಿದ್ದಿರುವುದು ನೋಡಿದರೆ, “ಅಸಲಿ ಅಪರಾಧಿಗಳನ್ನು ರಕ್ಷಿಸಲು ಪೊಲೀಸರೇ ಮಾಡುತ್ತಿರುವ ಕೃಪಾಪೋಷಿತ ನಾಟಕವೇ?” ಎಂಬ ಅನುಮಾನ ಬಲವಾಗಿ ಮೂಡುತ್ತದೆ.

ಇದನ್ನೂ ಓದಿ: ಬ್ಲಾಕ್‌ಮೇಲ್ ತಂತ್ರದ ಸ್ಟಿಂಗ್ ಕಹಾನಿ; ಸಿದ್ದರಾಮಯ್ಯ ಮುಗಿಸಲು ಸ್ವಪಕ್ಷೀಯರಿಂದಲೇ ಷಡ್ಯಂತ್ರ?

ಒಂದು ನಕಲಿ ಸ್ಟಿಂಗ್ ವೀಡಿಯೊ ಮಾಡಿ ಇಡೀ ರಾಜ್ಯವನ್ನು ದಿಢೀರ್ ಗೊಂದಲಕ್ಕೊಳಪಡಿಸಿದ ಅಸಲಿ ಕಿಂಗ್‌ಪಿನ್‌ಗಳಿಗೆ ಕಠಿಣ ಶಿಕ್ಷೆಯಾಗಬೇಕು. ಅದನ್ನು ಬಿಟ್ಟು ಸಿಮ್ ಕಾರ್ಡ್ ಇಲ್ಲದ ಮೊಬೈಲ್ ಫೋನ್, ವೈಫೈ ರೂಟರ್‌ಗಳ ಬೆನ್ನುಹತ್ತಿ ಕಾಲಹರಣ ಮಾಡುತ್ತಿರುವ ತನಿಖಾಧಿಕಾರಿಗಳ ನಡೆ ನಿಜಕ್ಕೂ ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ. ಪೊಲೀಸರು ಇನ್ನು ಮುಂದೆಯಾದರೂ ಕೇವಲ ಅಪ್‌ಲೋಡರ್‌ಗಳ ಹಿಂದೆ ಓಡುವುದನ್ನು ಬಿಟ್ಟು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮತ್ತು ಮೈತ್ರಿ ನಾಯಕರು ಆಗ್ರಹಿಸಿರುವಂತೆ ಈ ನಕಲಿ ಸ್ಟಿಂಗ್‌ನ ಮೂಲ ಸಂಚುಕೋರರ ಹೆಡೆಮುರಿ ಕಟ್ಟುವ ಧೈರ್ಯ ತೋರಬೇಕಿದೆ.

ಸ್ವತಂತ್ರ ಮಾಧ್ಯಮ ಬೆಂಬಲಿಸಿ

ಯಾರ ಹಂಗೂ ಇಲ್ಲದ, ಯಾರಿಗೂ ಬಗ್ಗದ ಸ್ವತಂತ್ರ ಮಾಧ್ಯಮಕ್ಕೆ ನಿಮ್ಮ ಬೆಂಬಲದ ಅವಶ್ಯಕತೆ ಇದೆ...