Sunday, September 13, 2026
Home ವಿಶ್ಲೇಷಣೆ Satish Jarkiholi: ವಿಚಾರವಾದಿ ಸಚಿವರ PWD ಇಲಾಖೆಯಲ್ಲಾಯಿತೇ ‘ಬಿಗ್ ಡೀಲ್’?: ‘The file’ ಬಯಲಿಗಳೆದ ಅಕ್ರಮಕ್ಕೂ,...

Satish Jarkiholi: ವಿಚಾರವಾದಿ ಸಚಿವರ PWD ಇಲಾಖೆಯಲ್ಲಾಯಿತೇ ‘ಬಿಗ್ ಡೀಲ್’?: ‘The file’ ಬಯಲಿಗಳೆದ ಅಕ್ರಮಕ್ಕೂ, ED ಎಂಟ್ರಿಗೂ ಬೆಸೆದುಕೊಂಡಿತಾ ಕೊಂಡಿ?

Satish Jarkiholi: ವಿಚಾರವಾದಿ ಸಚಿವರ PWD ಇಲಾಖೆಯಲ್ಲಾಯಿತೇ 'ಬಿಗ್ ಡೀಲ್'?: 'The file' ಬಯಲಿಗಳೆದ ಅಕ್ರಮಕ್ಕೂ, ED ಎಂಟ್ರಿಗೂ ಬೆಸೆದುಕೊಂಡಿತಾ ಕೊಂಡಿ?

ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ವೇದಿಕೆಗಳಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಅವರ ವೈಚಾರಿಕ ತತ್ವಗಳನ್ನು ಪ್ರತಿಪಾದಿಸುತ್ತಾ, ತಮ್ಮ ಸರಳತೆಯ ನಡೆ-ನುಡಿಯಿಂದಲೇ ಗುರುತಿಸಿಕೊಂಡಿರುವ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಅವರ ಆಡಳಿತಾವಧಿಯ ಸುತ್ತ ಈಗ ತನಿಖಾ ಸಂಸ್ಥೆಗಳ ನಿಗಾ ಬಿದ್ದಿದೆ. “ಸಾಮಾಜಿಕ ನ್ಯಾಯ ಮತ್ತು ಪಾರದರ್ಶಕತೆ”ಯ ಬೋಧನೆ ಮಾಡುವ ನಾಯಕರ ಸ್ವಂತ ಇಲಾಖೆಯಲ್ಲೇ ನಿಯಮಗಳನ್ನು ಗಾಳಿಗೆ ತೂರಿ ಸಾವಿರಾರು ಕೋಟಿ ರೂಪಾಯಿಗಳ ಬಿಗ್ ಡೀಲ್ ನಡೆದಿದೆ ಎಂಬ ವಿಷಯಗಳು ಮಾಧ್ಯಮಗಳ ತನಿಖೆಯಿಂದ ಬಹಿರಂಗಗೊಂಡಾಗ, ಸಾರ್ವಜನಿಕ ವಲಯದಲ್ಲಿ ಸಹಜವಾಗಿಯೇ ದೊಡ್ಡ ಮಟ್ಟದ ಕೌತುಕ ಹಾಗೂ ವಿಶ್ಲೇಷಣೆಗಳು ಆರಂಭವಾಗುತ್ತವೆ.

ಇತ್ತೀಚೆಗೆ ಜಾರಿ ನಿರ್ದೇಶನಾಲಯ (ED) ಬಿಡುಗಡೆ ಮಾಡಿರುವ ಅಧಿಕೃತ ಪತ್ರಿಕಾ ಪ್ರಕಟಣೆ ಮತ್ತು ಅದಕ್ಕಿಂತಲೂ ಮುನ್ನವೇ ತನಿಖಾ ಪೋರ್ಟಲ್ ‘The File’ ದಾಖಲೆಗಳ ಸಮೇತ ಪ್ರಕಟಿಸಿದ್ದ ಸರಣಿ ಸ್ಪೋಟಕ ವರದಿಗಳನ್ನು ತೆರೆದು ನೋಡಿದಾಗ, ಲೋಕೋಪಯೋಗಿ ಇಲಾಖೆಯಲ್ಲಿ ನಡೆದಿವೆ ಎನ್ನಲಾದ ಆಡಳಿತಾತ್ಮಕ ಅಕ್ರಮಗಳ ಕೊಂಡಿ ಬಿಚ್ಚಿಕೊಳ್ಳುತ್ತದೆ.

‘The File’ ಸರಣಿ ಲೇಖನಗಳು ಬಯಲಿಗೆಳೆದ ಕಡತಗಳ ಅಸಲಿಯತ್ತು

ವಿಧಾನಮಂಡಲ ಕಡತಗಳು, ಸರ್ಕಾರಿ ರಹಸ್ಯ ದಾಖಲೆಗಳು ಹಾಗೂ ಆರ್‌ಟಿಐ (RTI) ಮಾಹಿತಿಗಳ ಆಧಾರದ ಮೇಲೆ ಲೋಕೋಪಯೋಗಿ ಇಲಾಖೆಯಲ್ಲಿ ನಡೆದ ಟೆಂಡರ್ ಲೋಪಗಳ ಕುರಿತು ‘The File’  ಹಂತ ಹಂತವಾಗಿ ಸರಣಿ ಲೇಖನಗಳನ್ನು ಪ್ರಕಟಿಸಿತ್ತು.

  • ಸಿಬಿಐ ಎಫ್‌ಐಆರ್ ಎದುರಿಸುತ್ತಿದ್ದ ಕಂಪನಿಗೆ 10,000 ಕೋಟಿ ರುಪಾಯಿಗೂ ಹೆಚ್ಚಿನ ಗುತ್ತಿಗೆ!

‘The File’ ಪ್ರಕಟಿಸಿದ್ದ ವರದಿಯ ಪ್ರಕಾರ, ಪಶ್ಚಿಮ ಬಂಗಾಳ ಮೂಲದ ‘ಭಾರತ್ ವಾಣಿಜ್ಯ ಈಸ್ಟರ್ನ್‌ ಪ್ರೈವೇಟ್ ಲಿಮಿಟೆಡ್’ (BVEPL) ಕಂಪನಿಯು 2025ರ ಜುಲೈನಲ್ಲೇ ಸಿಬಿಐನಿಂದ ವಂಚನೆ ಹಾಗೂ ಲಂಚ ಪ್ರಕರಣದಲ್ಲಿ ಎಫ್‌ಐಆರ್ (FIR) ಎದುರಿಸುತ್ತಿತ್ತು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಗುಣಮಟ್ಟ ಪರಿಶೀಲನಾ ತಂಡದ ಅಧಿಕಾರಿಗಳಿಗೆ ಲಕ್ಷಾಂತರ ರೂಪಾಯಿ ಲಂಚ ನೀಡಿದ ಆರೋಪ ಈ ಕಂಪನಿಯ ಸಿಇಒ ಮನೀಶ್ ಮಿಶ್ರಾ ಮೇಲಿತ್ತು. ಇಂತಹ ಗಂಭೀರ ಪ್ರಕರಣ ಎದುರಿಸುತ್ತಿದ್ದ ಕಂಪನಿಗೆ ರಾಜ್ಯ PWD ಇಲಾಖೆಯು ಸುಮಾರು 10,000 ಕೋಟಿ ರೂಪಾಯಿ ಮೊತ್ತದ ಬೃಹತ್ ರಸ್ತೆ ಕಾಮಗಾರಿಗಳಿಗೆ ಗುತ್ತಿಗೆ ನೀಡಿರುವುದು ಶಾಸನಸಭೆಯ ಪ್ರಶ್ನೋತ್ತರ ಕಡತಗಳಿಂದ ಬಹಿರಂಗವಾಗಿತ್ತು.

  • L1 ಬಿಡ್‌ದಾರನ ಅಮಾನವೀಕರಣ & ಮರು-ಟೆಂಡರ್ ಕಾಯ್ದೆಯ ಉಲ್ಲಂಘನೆ:

ಇಲಾಖೆಯು ಕೈಗೆತ್ತಿಕೊಂಡಿದ್ದ ಮಾಲೂರು-ಹೊಸಕೋಟೆ ವ್ಯಾಪ್ತಿಯ ಸೇರಿದಂತೆ 123 ಕಿ.ಮೀ ರಸ್ತೆ ಅಭಿವೃದ್ಧಿಯ 3,190 ಕೋಟಿ ರೂಪಾಯಿ ಯೋಜನಾ ವೆಚ್ಚದ ಪೈಕಿ, 2,477.90 ಕೋಟಿ ರೂಪಾಯಿ ಮೊತ್ತದ ಕಾಮಗಾರಿಯ ಟೆಂಡರ್‌ನಲ್ಲಿ ಅತ್ಯಂತ ಕಡಿಮೆ ಬಿಡ್ (L1) ಸಲ್ಲಿಸಿದ್ದ ಕಂಪನಿಯನ್ನು ನಿಯಮಗಳ ನೆಪ ಒಡ್ಡಿ ತಿರಸ್ಕರಿಸಲಾಗಿತ್ತು. ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (KTPP) ಕಾಯ್ದೆಯ ಪ್ರಕಾರ L1 ಬಿಡ್‌ದಾರ ಅರ್ಹತೆ ಪಡೆಯದಿದ್ದರೆ ಮರು-ಟೆಂಡರ್ (Re-tender) ಕರೆಯುವುದು ಕಡ್ಡಾಯ. ಆದರೆ, ಆಡಳಿತ ಯಂತ್ರವು ಮರು-ಟೆಂಡರ್ ಕರೆಯುವ ಸಾಹಸಕ್ಕೆ ಹೋಗದೆ, ಎರಡನೇ ಸ್ಥಾನದಲ್ಲಿದ್ದ (L2) BVEPL ಕಂಪನಿಗೆ ಕಾಮಗಾರಿ ವಹಿಸಲು ಮುಂದಾಗಿತ್ತು.

  • ಆರ್ಥಿಕ ಇಲಾಖೆಯ ಕಠಿಣ ಆಕ್ಷೇಪವನ್ನು ಬದಿಗೊತ್ತಿದ ಇಲಾಖೆ:

‘The File’ ಪೋರ್ಟಲ್ ಪ್ರಕಟಿಸಿದ ಮತ್ತೊಂದು ವರದಿಯಂತೆ, ಆರ್ಥಿಕ ಇಲಾಖೆಯು ಈ ಪ್ರಕ್ರಿಯೆಗೆ ಸ್ಪಷ್ಟವಾದ ನಕಾರಾತ್ಮಕ ಟಿಪ್ಪಣಿ ಬರೆದಿತ್ತು. “ಮರು-ಟೆಂಡರ್ ಕರೆಯದೆ L2 ಕಂಪನಿಯನ್ನು ಪರಿಗಣಿಸುವುದು ಸರ್ಕಾರದ ಖಜಾನೆಗೆ ಆರ್ಥಿಕ ನಷ್ಟ ತರುತ್ತದೆ ಮತ್ತು ರಾಜ್ಯದ ಇತರೆ ಇಲಾಖೆಗಳ ಟೆಂಡರ್ ಪ್ರಕ್ರಿಯೆಗಳ ಮೇಲೆಯೂ ಕೆಟ್ಟ ಪ್ರಭಾವ ಬೀರಲಿದೆ” ಎಂದು ಎಚ್ಚರಿಸಿತ್ತು. ಆದರೆ ಈ ಆಕ್ಷೇಪಗಳನ್ನು ಬದಿಗೊತ್ತಿ ಸಂಪುಟ ಮಂಜೂರಾತಿ ಮೂಲಕ ಟೆಂಡರ್ ಅಂಗೀಕರಿಸಲಾಗಿತ್ತು.

ಇದನ್ನೂ ಓದಿ: ಸಿಕ್ಕಿಬಿದ್ರಾ ಸತ್ಯಪ್ಪ ಸಾಹುಕಾರ್? ಸತೀಶ್ ಹೇಳಿದ್ದೊಂದು ED ಹೇಳತಿರೋದು ಮತ್ತೊಂದು! ಜಾರಕಿಹೊಳಿಗೆ ಸಂಕಷ್ಟ ಫಿಕ್ಸ್?

ED ಶೋಧ ಕಾರ್ಯಾಚರಣೆ: ‘The File’ ವರದಿಗೆ ಸಿಕ್ಕಿತೇ ನೈಜ ಸಾಕ್ಷಿ?

ಸೆಪ್ಟೆಂಬರ್ 9 ಮತ್ತು 10, 2026 ರಂದು ಜಾರಿ ನಿರ್ದೇಶನಾಲಯದ (ED) ಬೆಂಗಳೂರು ವಲಯ ಕಚೇರಿಯು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಉಲ್ಲಂಘನೆ ಅಡಿಯಲ್ಲಿ ಬೆಂಗಳೂರು, ಬೆಳಗಾವಿ, ಗೋಕಾಕ್ ಹಾಗೂ ಕೋಲ್ಕತ್ತಾದ 21 ಸ್ಥಳಗಳಲ್ಲಿ ಮೆಗಾ ಶೋಧ ಕಾರ್ಯಾಚರಣೆ ನಡೆಸಿತು. ಈ ಕಾರ್ಯಾಚರಣೆಯ ನಂತರ ಇಡಿ ಬಿಡುಗಡೆ ಮಾಡಿದ ಅಧಿಕೃತ ಪ್ರೆಸ್‌ನೋಟ್ ಪ್ರಮುಖ ಸಾಕ್ಷ್ಯಗಳನ್ನು ಬಹಿರಂಗಪಡಿಸಿದೆ:

  1. PWD ಟೆಂಡರ್ ಲಂಚ ಮತ್ತು ವಿದೇಶಿ ಆಸ್ತಿ ಹೂಡಿಕೆ:

BVEPL ಕಂಪನಿಗೆ 2,477.90 ಕೋಟಿ ರೂಪಾಯಿ ಮೊತ್ತದ PWD ಟೆಂಡರ್ ನೀಡಿದ್ದಕ್ಕೆ ಪ್ರತಿಯಾಗಿ ಭಾರೀ ಪ್ರಮಾಣದ ಲಂಚದ ಹಣ ಹರಿದುಬಂದಿದೆ. ಈ ಅಕ್ರಮ ಕಮಿಷನ್ ಹಣವನ್ನು ನಿಯಮಬಾಹಿರವಾಗಿ ವಿದೇಶಗಳಿಗೆ ರವಾನಿಸಿ ವಿದೇಶಿ ಆಸ್ತಿಗಳು (Foreign Assets) ಹಾಗೂ ಗಣಿ ಉದ್ದಿಮೆಗಳಲ್ಲಿ ಹೂಡಿಕೆ ಮಾಡಲಾಗಿದೆ ಎಂದು ಇಡಿ ಶಂಕಿಸಿದೆ.

2. ಆಫ್ರಿಕಾದ ಗಣಿ ಉದ್ಯಮದಲ್ಲಿ ಕುಟುಂಬದ ಶೇರುಗಳು:

ಸಚಿವರ ಪುತ್ರಿ ಹಾಗೂ ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ, ಪುತ್ರ ರಾಹುಲ್ ಜಾರಕಿಹೊಳಿ ಮತ್ತು ಸಚಿವರ ಸಹೋದರಿ ಮಹಾದೇವಿ ಮಂಜುನಾಥ್ ಅವರು ಆಫ್ರಿಕಾದ ಕಾಂಗೋ ಹಾಗೂ ಝಾಂಬಿಯಾ ದೇಶಗಳಲ್ಲಿನ ಗಣಿ ಕಂಪನಿಗಳಲ್ಲಿ (‘M/s Eldorado Mining Resources, Congo’ ಮತ್ತು ‘M/s Nava Aurum Mining Ltd, Zambia’) ಶೇರುಗಳನ್ನು ಹೊಂದಿರುವುದು ಇಡಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

3. ಚಿನ್ನದ ಗಣಿ ಕಂಪನಿಯಲ್ಲಿ ಸಚಿವರ 40% ಪಾಲು:

ಇಡಿ ಪ್ರೆಸ್‌ನೋಟ್ ನೀಡಿದ ಪ್ರಮುಖ ಮಾಹಿತಿಯೆಂದರೆ, ಸಚಿವ ಸತೀಶ್ ಜಾರಕಿಹೊಳಿ ಅವರು ಕಾಂಗೋ ದೇಶದ ಚಿನ್ನದ ಗಣಿ ಉದ್ಯಮವಾದ ‘M/s Magnitude Star SARL’ ಕಂಪನಿಯಲ್ಲಿ ಸ್ವತಃ ಶೇ 40 ರಷ್ಟು ಶೇರು ಪಾಲುದಾರಿಕೆ ಹೊಂದಿದ್ದಾರೆ.

4. ನಗದು ಮತ್ತು ವಿದೇಶಿ ಕರೆನ್ಸಿ ಜಪ್ತಿ:

ಶೋಧದ ವೇಳೆ ಯಾವುದೇ ಅಧಿಕೃತ ಆಧಾರವಿಲ್ಲದ 3.3 ಕೋಟಿ ರೂಪಾಯಿ ನಗದು ಹಣ ಹಾಗೂ ಅಂದಾಜು 15 ಲಕ್ಷ ರೂಪಾಯಿ ಮೌಲ್ಯದ ವಿದೇಶಿ ಕರೆನ್ಸಿಗಳನ್ನು (ಯುಎಸ್ ಡಾಲರ್, ಯೂರೋ) ಇಡಿ ವಶಪಡಿಸಿಕೊಂಡಿದೆ. ಅಲ್ಲದೆ ಕಾಂಗೋಗೆ ಅಕ್ರಮವಾಗಿ ನಗದು ರವಾನಿಸಿರುವ ಡಿಜಿಟಲ್ ಹಾಗೂ ಸಾಕ್ಷ್ಯಾಧಾರಿತ ದಾಖಲೆಗಳು ಲಭ್ಯವಾಗಿವೆ.

ಆಪ್ತರ ಜಾಲ ಮತ್ತು ಮಂಜುನಾಥ್ ಪ್ರಕರಣದ ಹಿನ್ನೆಲೆ

ಇಡಿ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಸಚಿವರ ಬೆನ್ನಲುಬಾಗಿರುವ ಆಪ್ತ ಕಾರ್ಯದರ್ಶಿಗಳು ಹಾಗೂ ಸಂಬಂಧಿಕರ ಹೆಸರುಗಳು ಸೇರಿವೆ:

  • ವೈ.ಡಿ. ಮಂಜುನಾಥ್ ಖಾತೆಗಳ ಬಳಕೆ: ಸಚಿವರ ಭಾವಮೈದ ವೈ.ಡಿ. ಮಂಜುನಾಥ್ ನಿಯಂತ್ರಣದಲ್ಲಿರುವ ಸಂಸ್ಥೆಗಳು ಮತ್ತು ಖಾತೆಗಳ ಮೂಲಕ PWD ಗುತ್ತಿಗೆದಾರರಿಂದ ಪಡೆದ ಲಂಚದ ಹಣ ವರ್ಗಾವಣೆಯಾಗಿರುವುದು ತನಿಖೆಯಲ್ಲಿ ಕಂಡುಬಂದಿದೆ. ಇವರ ವಿರುದ್ಧ ಹಿಂದೆ ಲೋಕಾಯುಕ್ತದಲ್ಲಿ ಇದ್ದ ಆಸ್ತಿ ಗಳಿಕೆ ಪ್ರಕರಣದಲ್ಲಿ ದೋಷಾರೋಪಣೆ ಪಟ್ಟಿ ಸಲ್ಲಿಸಲು ಸರ್ಕಾರ ಅನುಮತಿ ನೀಡಿರಲಿಲ್ಲ ಎಂಬ ಮಾಧ್ಯಮ ವರದಿಗಳ ನಡುವೆಯೇ ಈಗ ಇಡಿ ತನಿಖೆ ಎದುರಾಗಿದೆ.
  • ಆಪ್ತ ಸಿಬ್ಬಂದಿ ಮೇಲೂ ಕಣ್ಣು: ಸಚಿವರ ಆಪ್ತ ಸಿಬ್ಬಂದಿಗಳಾದ ಮಲಗೌಡ ಪಾಟೀಲ್, ರಾಜು ದರಗಶೆಟ್ಟಿ, ವಿಠ್ಠಲ್ ಪ್ರಸನ್ನವರ್ ಹಾಗೂ ಡಾ. ಗಿರೀಶ್ ಸೋನವಾಲ್ಕರ್ ಅವರ ನಿವಾಸಗಳ ಮೇಲೆಯೂ ಶೋಧ ನಡೆಸಿ ಇಡಿ ಡಿಜಿಟಲ್ ಉಪಕರಣಗಳನ್ನು ವಶಕ್ಕೆ ಪಡೆದಿದೆ.

ಇದನ್ನೂ ಓದಿ: ಉತ್ತರವಿಲ್ಲದ ಪ್ರಶ್ನೆಗಳು, ಲೆಕ್ಕ ಸಿಗದ ಕೋಟಿಗಳು! ಸಾಹುಕಾರನ ‘ನಿಗೂಢ’ ಮಾತುಗಳ ಅಸಲಿ ಅರ್ಥವೇನು?

ತತ್ವ ಬೋಧನೆ ಮತ್ತು ಆಡಳಿತಾತ್ಮಕ ವಾಸ್ತವತೆ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಯಕರು ಸಾರ್ವಜನಿಕವಾಗಿ ವ್ಯಕ್ತಪಡಿಸುವ ವಿಚಾರಧಾರೆಗೂ, ಅವರ ಆಡಳಿತಾವಧಿಯಲ್ಲಿ ನಡೆಯುವ ನಿರ್ಧಾರಗಳಿಗೂ ನಡುವೆ ಸಮತೋಲನವಿರಬೇಕು. ಸತೀಶ್ ಜಾರಕಿಹೊಳಿ ಅವರು ವೈಚಾರಿಕ ತತ್ವಗಳ ಮೂಲಕ ಜನರಿಗೆ ಹತ್ತಿರವಾದವರು. ಆದರೆ, ಅವರ ಸಾರಥ್ಯದ ಲೋಕೋಪಯೋಗಿ ಇಲಾಖೆಯಲ್ಲಿ ನಡೆದಿದೆ ಎನ್ನಲಾದ 2,477 ಕೋಟಿ ರೂಪಾಯಿ ಮೊತ್ತದ ಬಿಗ್ ಡೀಲ್, ಆರ್ಥಿಕ ಇಲಾಖೆಯ ಆಕ್ಷೇಪಗಳ ನಿರ್ಲಕ್ಷ್ಯ, ಸಿಬಿಐ ಕಪ್ಪುಪಟ್ಟಿಗೆ ಸೇರಬಹುದಾದ ಕಂಪನಿಗೆ ಮಣೆ ಹಾಕಿರುವುದು ಮತ್ತು ಅದರಿಂದ ವಿದೇಶಿ ಗಣಿಗಳಲ್ಲಿ ಹೂಡಿಕೆಯಾಗಿರುವ ಇಡಿ ಆರೋಪಗಳು ಪ್ರಸ್ತುತ ಸಾರ್ವಜನಿಕರ ಮನಸ್ಸಿನಲ್ಲಿ ತೀವ್ರ ಸಂಶಯಗಳನ್ನು ಹುಟ್ಟುಹಾಕಿವೆ.

‘The File’ ಪೋರ್ಟಲ್ ದಾಖಲೆಗಳ ಆಧಾರದ ಮೇಲೆ ಎತ್ತಿದ್ದ ಪ್ರಶ್ನೆಗಳು ಹಾಗೂ ಇಡಿ ಪ್ರಸ್ತುತ ಬಹಿರಂಗಪಡಿಸಿರುವ ತನಿಖಾ ಮಾಹಿತಿಗಳು ಒಂದಕ್ಕೊಂದು ಕೊಂಡಿ ಬೆಸೆಯುತ್ತಿರುವುದರಿಂದ, ಈ ಪ್ರಕರಣದ ಪಾರದರ್ಶಕ ತನಿಖೆ ನಡೆಯುವುದು ಅನಿವಾರ್ಯವಾಗಿದೆ. ತಮ್ಮ ಮೇಲಿನ ಆರೋಪಗಳಿಗೆ ಸಚಿವ ಸತೀಶ್ ಜಾರಕಿಹೊಳಿ ಅವರು ಕಾನೂನಾತ್ಮಕವಾಗಿ ಹಾಗೂ ಸಾರ್ವಜನಿಕವಾಗಿ ನಿಖರ ಸ್ಪಷ್ಟನೆ ನೀಡುವ ಮೂಲಕ ಆಡಳಿತಾತ್ಮಕ ಪಾರದರ್ಶಕತೆಯನ್ನು ಕಾಯ್ದುಕೊಳ್ಳಬೇಕಿದೆ.

ಸ್ವತಂತ್ರ ಮಾಧ್ಯಮ ಬೆಂಬಲಿಸಿ

ಯಾರ ಹಂಗೂ ಇಲ್ಲದ, ಯಾರಿಗೂ ಬಗ್ಗದ ಸ್ವತಂತ್ರ ಮಾಧ್ಯಮಕ್ಕೆ ನಿಮ್ಮ ಬೆಂಬಲದ ಅವಶ್ಯಕತೆ ಇದೆ...