Encounter: ಇಡೀ ದೇಶ 80ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ಮುಳುಗಿದ್ದಾಗ (15 ಆಗಸ್ಟ್ 2026), ಚಾಮರಾಜನಗರದ (Chamarajanagar) ಹನೂರು ತಾಲೂಕಿನ ಕಾವೇರಿ ವನ್ಯಧಾಮದ ದಟ್ಟ ಕಾಡಿನಲ್ಲಿ ಕೇಳಿಸಿದ ಗುಂಡಿನ ಸದ್ದು ಇಡೀ ರಾಜ್ಯದ ಮಾನವೀಯತೆಯನ್ನೇ ಬೆಚ್ಚಿಬೀಳಿಸಿದೆ. ಶಾಗ್ಯ ವ್ಯಾಪ್ತಿಯ ಡೋಳೆಮುರ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ನಡೆಸಿದ ಕ್ರೂರ ಶೂಟೌಟ್‌ಗೆ ತೋಮರಪಾಳ್ಯ ಗ್ರಾಮದ ಕುಮಾರ್, ಅಂತೋಣಿ ಸ್ವಾಮಿ ಮತ್ತು ರೋಜ್ ಪೇಟರ್ ಎಂಬ ಮೂವರು ಬಡ ರೈತರು ಹೆಣವಾಗಿ ಬಿದ್ದಿದ್ದಾರೆ. ಅರಣ್ಯ ಸಂರಕ್ಷಣೆಯ ಹೊದಿಕೆಯನ್ನು ಹೊದ್ದು, ಬಡ ಕಾಡಂಚಿನ ಜನರ ಎದೆಗೆ ನೇರವಾಗಿ ಗುಂಡಿಟ್ಟು ಕೊಂದ ಈ ಭೀಕರ ಘಟನೆಯು ಸರ್ಕಾರಿ ವ್ಯವಸ್ಥೆಯ ನೈಜ ರಕ್ತಪಿಪಾಸು ಮುಖವನ್ನು ಮತ್ತು ಅಧಿಕಾರ ದುರ್ಬಳಕೆಯ ಮುಖವನ್ನು ಜಗಜ್ಜಾಹೀರುಗೊಳಿಸಿದೆ.
ಅರಣ್ಯ ಇಲಾಖೆಯ ಹೆಣೆದ ‘ಆತ್ಮರಕ್ಷಣೆ’ಯ ಕಾಗಕ್ಕ-ಗುಬ್ಬಕ್ಕ ಕಥೆ
ಅರಣ್ಯ ಇಲಾಖೆಯು ಈ ಭೀಕರ ಹತ್ಯಾಕಾಂಡವನ್ನು (Encounter) ಮುಚ್ಚಿಹಾಕಲು ಅತ್ಯಂತ ಸರಳವಾದ ಕಥೆಯನ್ನು ಸಿದ್ಧಪಡಿಸಿ ಮಾಧ್ಯಮಗಳ ಮುಂದಿಟ್ಟಿದೆ. ಇಲಾಖೆಯ ಪ್ರಕಾರ, ಆಗಸ್ಟ್ 15ರ ಮುಂಜಾನೆ 5:20ರ ವೇಳೆಗೆ ನಾಲ್ವರ ತಂಡವೊಂದು ಕಾಡಿನಲ್ಲಿ ಅಕ್ರಮವಾಗಿ ಹೊಕ್ಕು ಜಿಂಕೆಯನ್ನು ಬೇಟೆಯಾಡಿ ಮಾಂಸ ಬೇರ್ಪಡಿಸುತ್ತಿತ್ತಂತೆ! ಗಸ್ತಿನಲ್ಲಿದ್ದ ಏಳು ಜನರ ಸಿಬ್ಬಂದಿ ಪಡೆ ಶರಣಾಗಲು ಹೇಳಿದಾಗ, ಈ ಬಡ ರೈತರು ಇಲಾಖೆಯ ಬಂದೂಕುಧಾರಿ ಸಿಬ್ಬಂದಿಯ ಮೇಲೆಯೇ ಗುಂಡು ಹಾರಿಸಲು ಯತ್ನಿಸಿದರಂತೆ! ತಮ್ಮ ಪ್ರಾಣ ಉಳಿಸಿಕೊಳ್ಳಲು ಅರಣ್ಯ ಸಿಬ್ಬಂದಿ ‘ಆತ್ಮರಕ್ಷಣೆ’ಗಾಗಿ ಮರುದಾಳಿ ನಡೆಸಿದ್ದರಿಂದ ಮೂವರು ಸ್ಥಳದಲ್ಲೇ ಮೃತಪಟ್ಟು, ಒಬ್ಬ ಓಡಿಹೋದನೆಂದು ಇಲಾಖೆ ಸಮರ್ಥಿಸಿಕೊಳ್ಳುತ್ತಿದೆ.
ಆದರೆ ಈ ಸ್ವಯಂರಕ್ಷಣೆಯ ನಾಟಕದಲ್ಲಿ ಎದ್ದು ಕಾಣುವ ತಾರ್ಕಿಕ ರಂಧ್ರಗಳು ಅರಣ್ಯ ಇಲಾಖೆಯ ಅಸಲಿ ಬಣ್ಣವನ್ನು ಬಯಲು ಮಾಡುತ್ತವೆ. ಏಳು ಜನರಿದ್ದ ಸಶಸ್ತ್ರ ಅರಣ್ಯ ಸಿಬ್ಬಂದಿ ಪಡೆಯ ಮೇಲೆಯೇ ಎದುರಾಳಿಗಳು ದಾಳಿ ನಡೆಸಿದರು ಎನ್ನುವುದಾದರೆ, ಸಿಬ್ಬಂದಿಯಲ್ಲಿದ್ದ ಒಬ್ಬನೇ ಒಬ್ಬ ಅಧಿಕಾರಿಗಾಗಲಿ ಅಥವಾ ಸಿಬ್ಬಂದಿಗಾಗಲಿ ಸಣ್ಣ ಕೆರೆಚಲಿನ ಗಾಯವೂ ಆಗದಿರುವುದು ಹೇಗೆ ಸಾಧ್ಯ? ಬಂದೂಕುಧಾರಿಗಳ ವಿರುದ್ಧ ಹೋರಾಡಿದ ಸಿಬ್ಬಂದಿ ಸಂಪೂರ್ಣವಾಗಿ ಸುರಕ್ಷಿತವಾಗಿದ್ದು, ಎದುರಲ್ಲಿದ್ದ ಮೂವರೂ ನೇರವಾಗಿ ಹೆಣವಾಗಿದ್ದು ಕೇವಲ ಕಾಕತಾಳೀಯವೇ?
ಇದನ್ನೂ ಓದಿ: ಗುಟ್ಕಾ ಬ್ಯಾನ್ ಮಾಡಿದ್ದು ಯಾರು? ಸಿಎಂಗೆ ಗೊತ್ತೇ ಇರ್ಲಿಲ್ವಂತೆ! ಕೈ ಶಾಸಕರ ‘ಖಡಕ್’ ವಾರ್ನಿಂಗ್‌ಗೆ ಯು-ಟರ್ನ್!
ಶವಗಳ ಮೇಲಿದ್ದ ರಕ್ತಸಿಕ್ತ ಸಾಕ್ಷಿ ಮತ್ತು ನಕಲಿ ಎನ್ಕೌಂಟರ್ ಅನುಮಾನಗಳು
ಮೃತರ ಕುಟುಂಬಸ್ಥರು ಮತ್ತು ತೋಮರಪಾಳ್ಯ ಗ್ರಾಮಸ್ಥರು ಎತ್ತುತ್ತಿರುವ ಕೋಪೋದ್ರಿಕ್ತ ಪ್ರಶ್ನೆಗಳು ಇಡೀ ಇಲಾಖೆಯನ್ನು ನಡುಗಿಸುವಂತಿವೆ. ಕಾನೂನು ಮತ್ತು ಪೊಲೀಸ್ ಕೈಪಿಡಿಯ ಪ್ರಕಾರ ಆತ್ಮರಕ್ಷಣೆಗಾಗಿ ಗುಂಡು ಹಾರಿಸುವುದಿದ್ದರೆ (Encounter) ಮೊಣಕಾಲಿನ ಕೆಳಭಾಗಕ್ಕೆ ಹಾರಿಸಬೇಕು. ಆದರೆ ಬಲಿಯಾದ ಮೂವರ ದೇಹದಲ್ಲೂ ಗುಂಡುಗಳು ತೂರಿಹೋಗಿರುವುದು ನೇರವಾಗಿ ಎದೆ, ಕತ್ತು ಮತ್ತು ತಲೆಯ ಭಾಗಕ್ಕೆ! ಅದೂ ತೀರಾ ಸಮೀಪದಿಂದ (Close range) ಹಾರಿಸಲಾದ ಗುಂಡುಗಳು! ಇದು ಕೊಲ್ಲುವ ಸ್ಪಷ್ಟ ಉದ್ದೇಶವಲ್ಲದೆ ಇನ್ನೇನು?
ಅಷ್ಟೇ ಅಲ್ಲ, ಘಟನೆ ನಡೆದ ತಕ್ಷಣ ಸ್ಥಳೀಯ ಪೊಲೀಸರಿಗಾಗಲಿ ಅಥವಾ ಮ್ಯಾಜಿಸ್ಟ್ರೇಟ್‌ಗಾಗಲಿ ಮಾಹಿತಿ ನೀಡಿ ಸ್ಥಳ ಮಹಜರು ನಡೆಸುವ ಕನಿಷ್ಠ ಕಾಯ್ದೆಯನ್ನು ಇಲಾಖೆ ಗಾಳಿಗೆ ತೂರಿದೆ. ಮ್ಯಾಜಿಸ್ಟ್ರೇಟ್ ಬರುವ ಮುನ್ನವೇ ಕಳಬರಹಗಳನ್ನು ಅರಣ್ಯ ಸಿಬ್ಬಂದಿಯೇ ಸ್ವತಃ ಎತ್ತಿಕೊಂಡು ಹೋಗಿದ್ದು ಸಾಕ್ಷಿನಾಶದ ಸ್ಪಷ್ಟ ಯತ್ನವಲ್ಲವೇ? ಇಬ್ಬರು ಜೀವಂತವಾಗಿದ್ದರು ಎಂಬ ಕಟ್ಟುಕಥೆ ಕಟ್ಟಿ, ಹತ್ತಿರದ ಕೊಳ್ಳೇಗಾಲ ಆಸ್ಪತ್ರೆಗೆ ಕರೆದೊಯ್ಯುವ ಬದಲು ಮೈಸೂರಿಗೆ ಕರೆದೊಯ್ಯುವ ನೆಪದಲ್ಲಿ ಗಂಟೆಗಟ್ಟಲೆ ಸಮಯ ವ್ಯರ್ಥ ಮಾಡಿದ್ದು ಶವಗಳನ್ನು ಇಲ್ಲದಂತೆ ಮಾಡುವ ಚಾಲಾಕಿತನವೇ ಎಂಬ ಸಂಶಯ ಗ್ರಾಮಸ್ಥರದ್ದಾಗಿದೆ. ಮೃತಪಟ್ಟ ಮೂವರೂ ಕಾಡಂಚಿನಲ್ಲಿ ಕಳೆದುಹೋಗಿದ್ದ ತಮ್ಮ ದನ-ಎಮ್ಮೆಗಳನ್ನು ಹುಡುಕಿಕೊಂಡು ಅಥವಾ ಮೇವಿಗೆಂದು ಹೋದ ಕೃಷಿಕರು. ಅವರ ಬಳಿ ಇದ್ದದ್ದು ಸ್ವ-ರಕ್ಷಣೆಯ ಬಂದೂಕಿರಬಹುದು, ಆದರೆ ಅವರನ್ನು ಕಳ್ಳಬೇಟೆಗಾರರೆಂಬ ಹಣೆಪಟ್ಟಿ ಹಚ್ಚಿ ಬಲಿ ನೀಡಲಾಗಿದೆ ಎಂಬುದು ಸ್ಥಳೀಯರ ಆಕ್ರೋಶಕ್ಕೆ ಮುಖ್ಯ ಕಾರಣವಾಗಿದೆ.
ಉಸ್ತುವಾರಿ ಸಚಿವರ ಹೊಣೆಗೇಡಿತನ ಮತ್ತು ಸರ್ಕಾರದ ಗೊಂದಲದ ನಾಟಕ
ಘಟನೆ ನಡೆದ ನಂತರದ ಆಡಳಿತಾತ್ಮಕ ಬೆಳವಣಿಗೆಗಳು ಸರ್ಕಾರಿ ಯಂತ್ರದ ಸಂಪೂರ್ಣ ವೈಫಲ್ಯವನ್ನು ಬೆತ್ತಲೆಗೊಳಿಸಿವೆ. ಘಟನೆ ನಡೆದು 6-7 ಗಂಟೆಗಳು ಕಳೆದರೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಸಿ. ಪುಟ್ಟರಂಗಶೆಟ್ಟಿ ಅವರಿಗೆ ಜಿಲ್ಲಾಡಳಿತದಿಂದಾಗಲಿ ಅಥವಾ ಅರಣ್ಯ ಇಲಾಖೆಯಿಂದಾಗಲಿ ನಿಖರವಾದ ಮಾಹಿತಿಯೇ ತಲುಪಿರಲಿಲ್ಲ! ಮಾಧ್ಯಮಗಳ ಮುಂದೆ ನಿಂತು, “ಫಾರೆಸ್ಟ್ ಅಧಿಕಾರಿಗಳದ್ದೇ ತಪ್ಪು ಅಂತ ಅನಿಸುತ್ತಿದೆ, ಕಾಲಿಗೆ ಹೊಡೆಯುವ ಬದಲು ಕತ್ತು-ಎದೆಗೆ ಯಾಕೆ ಹೊಡೆದರು, ಬಾಡಿ ಎತ್ತಿಕೊಂಡು ಬಂದಿದ್ದೇ ದೊಡ್ಡ ತಪ್ಪು” ಎಂದು ಸಚಿವರೇ ಮುಕ್ತವಾಗಿ ಒಪ್ಪಿಕೊಂಡಿದ್ದು, ಈ ಇಲಾಖೆಯ ಮೇಲೆ ಸರ್ಕಾರಕ್ಕೆ ಯಾವುದೇ ನಿಯಂತ್ರಣವಿಲ್ಲ ಎಂಬುದನ್ನು ನಿರೂಪಿಸಿದೆ.
ಒಂದೆಡೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮ್ಯಾಜಿಸ್ಟ್ರೇಟ್ ತನಿಖೆಯ ಭರವಸೆ ನೀಡುತ್ತಿದ್ದರೆ, ಇನ್ನೊಂದೆಡೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತನಿಖೆಗೂ ಮುನ್ನವೇ ಇದು ‘ಕಳ್ಳಬೇಟೆಗಾರರ ವಿರುದ್ಧದ ಕಾರ್ಯಾಚರಣೆ’ ಎಂದು ಇಲಾಖೆಗೆ ಸರ್ಟಿಫಿಕೇಟ್ ನೀಡಲು ಯತ್ನಿಸಿದ್ದು ಸರ್ಕಾರದ ಆಂತರಿಕ ಗೊಂದಲ ಹಾಗೂ ಬೇಜವಾಬ್ದಾರಿತನಕ್ಕೆ ಹಿಡಿದ ಕನ್ನಡಿಯಾಗಿದೆ.
ಕಾಡಂಚಿನ ಜನರ ಜೀವಕ್ಕೆ ಬೆಲೆಯೇ ಇಲ್ಲವೇ? ತ್ರಿಕೋನ ಸಂಘರ್ಷದ ಭೀಕರತೆ
ಈ ತ್ರಿವಳಿ ಕೊಲೆಯನ್ನು ಕೇವಲ ಒಂದು ದಿನದ ಎನ್ಕೌಂಟರ್ ಎಂದು ಬಣ್ಣಿಸಿದರೆ ಅದು ಈ ನೆಲದ ನೈಜ ಸಮಸ್ಯೆಗೆ ಎಸಗುವ ದ್ರೋಹವಾಗುತ್ತದೆ. ಕಾವೇರಿ ಮತ್ತು ಮಲೆ ಮಹದೇಶ್ವರ ಅಭಯಾರಣ್ಯದ ಸುತ್ತಮುತ್ತಲಿನ ಕಾಡಂಚಿನ ಪ್ರದೇಶಗಳಲ್ಲಿ ದಶಕಗಳಿಂದಲೂ ‘ತ್ರಿಕೋನ ಸಂಘರ್ಷ’ ನಡೆಯುತ್ತಲೇ ಇದೆ.
ಮೊದಲನೆಯದಾಗಿ, ಶತಶತಮಾನಗಳಿಂದ ಕಾಡನ್ನೇ ನಂಬಿ ಬದುಕುತ್ತಿರುವ ಬಡ ರೈತರು ಮತ್ತು ಅರಣ್ಯ ಕಾಯ್ದೆಯ ಹೆಸರಿನಲ್ಲಿ ದೌರ್ಜನ್ಯ ಎಸಗುವ ಅಧಿಕಾರಿಗಳ ನಡುವಿನ ನಿರಂತರ ಸಂಘರ್ಷ. ಎರಡನೆಯದಾಗಿ, ಕಾಡುಹಂದಿ, ಆನೆ, ಚಿರತೆಗಳ ದಾಳಿಯಿಂದ ನಿರಂತರವಾಗಿ ಬೆಳೆ ಕಳೆದುಕೊಂಡು ಕಂಗಾಲಾಗುವ ರೈತರು ತಮ್ಮ ಜಮೀನು ಮತ್ತು ಜಾನುವಾರು ರಕ್ಷಣೆಗಾಗಿ ಬಂದೂಕು ಹಿಡಿಯುವ ಅಸಹಾಯಕರ ಸ್ಥಿತಿ. ಮೂರನೆಯದಾಗಿ, ಕಡು ಬಡತನದಲ್ಲಿರುವ ಈ ಕುಟುಂಬಗಳ ಮನೆಯ ಯಜಮಾನರನ್ನೇ ಸರ್ಕಾರಿ ಗುಂಡುಗಳು ಬಲಿ ಪಡೆದಾಗ ಆ ಕುಟುಂಬಗಳು ಬೀದಿಗೆ ಬೀಳುವ ದಾರುಣ ಆರ್ಥಿಕ ಸ್ಥಿತಿ.
ಇದನ್ನೂ ಓದಿ: Prajwal Revanna: ಜೈಲಲ್ಲೂ ಮೆರೆಯುತ್ತಿದೆ ಕಾಮಪಿಶಾಚಿಯ ವಿಕೃತಿ! ರೇಪಿಸ್ಟ್‌ಗೆ ‘ಪರಪ್ಪನ ಅಗ್ರಹಾರ’ ಉಚಿತ ರೆಸಾರ್ಟಾ?
ಸಂರಕ್ಷಣೆಯ ಹೆಸರಿನಲ್ಲಿ ನರಮೇಧ ಸಲ್ಲದು: ನ್ಯಾಯ ಸಿಗಲೇಬೇಕು!
ವನ್ಯಜೀವಿ ಸಂರಕ್ಷಣೆ ಮತ್ತು ಕಳ್ಳಬೇಟೆ ತಡೆ ಖಂಡಿತವಾಗಿಯೂ ಅಗತ್ಯ ಹಾಗೂ ದೇಶದ ಆದ್ಯತೆಯಾಗಬೇಕು. ಆದರೆ, ಸಂರಕ್ಷಣೆಯ ಹೆಸರಿನಲ್ಲಿ ಅರಣ್ಯ ಸಿಬ್ಬಂದಿ ತಾವೇ ನ್ಯಾಯಾಧೀಶರಾಗಿ, ರಕ್ಷಕರಾಗಿ ನಿಂತು ಬಡ ನಾಗರಿಕರ ಎದೆಗೆ ಗುಂಡಿಟ್ಟು ಕೊಲ್ಲಲು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಂದಿಗೂ ಅವಕಾಶವಿಲ್ಲ.
ಕೂಡಲೇ ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಅಥವಾ ಸ್ವತಂತ್ರ ತನಿಖಾ ಸಂಸ್ಥೆಯಿಂದ (CID/CBI) ನಿಷ್ಪಕ್ಷಪಾತ ತನಿಖೆಯಾಗಬೇಕು. ಶೂಟೌಟ್ ನಡೆದ ಸ್ಥಳದ ವಿಧಿವಿಜ್ಞಾನ (FSL) ಮತ್ತು ಬ್ಯಾಲಿಸ್ಟಿಕ್ ವರದಿಗಳನ್ನು ತಕ್ಷಣವೇ ಬಹಿರಂಗಪಡಿಸಬೇಕು. ಇದು ಅಧಿಕಾರ ಮೀರಿ ನಡೆಸಿದ ನಕಲಿ ಎನ್ಕೌಂಟರ್ ಎಂದು ಸಾಬೀತಾದರೆ, ಆ ಸಶಸ್ತ್ರ ಸಿಬ್ಬಂದಿಯ ಮೇಲೆ ತಕ್ಷಣವೇ ಕೊಲೆ (Section 302) ಮೊಕದ್ದಮೆ ದಾಖಲಿಸಿ ಜೈಲಿಗಟ್ಟಬೇಕು. ಅನಾಥವಾಗಿರುವ ಆ ಬಡ ಕುಟುಂಬಗಳಿಗೆ ತಕ್ಷಣವೇ ಸರ್ಕಾರ ಸೂಕ್ತ ಆರ್ಥಿಕ ಹಾಗೂ ಮಾನವೀಯ ಪರಿಹಾರ ಘೋಷಿಸಬೇಕು.
ಕಾಡಿನ ಕಾನೂನು ಕೇವಲ ಮರ ಮತ್ತು ಮೃಗಗಳಿಗೆ ಮಾತ್ರವಲ್ಲ, ಅಲ್ಲಿ ಬದುಕುವ ಮನುಷ್ಯರಿಗೂ ಅನ್ವಯಿಸುತ್ತದೆ. ನ್ಯಾಯವು ಕೇವಲ ಕಾಗದದ ಮೇಲಿದ್ದರೆ ಸಾಲದು, ಅದು ಸಂತ್ರಸ್ತ ಬಡ ಕುಟುಂಬಗಳಿಗೆ ದೊರೆತಿದೆ ಎಂಬ ಭರವಸೆ ಮೂಡುವಂತೆ ಜಾರಿಯಾಗಬೇಕಿದೆ.
ಯಾರ ಹಂಗೂ ಇಲ್ಲದ, ಯಾರಿಗೂ ಬಗ್ಗದ ಸ್ವತಂತ್ರ ಮಾಧ್ಯಮಕ್ಕೆ ನಿಮ್ಮ ಬೆಂಬಲದ ಅವಶ್ಯಕತೆ ಇದೆ...






