ರಾಜಕೀಯ ಅಧಿಕಾರ ಮತ್ತು ಧಾರ್ಮಿಕ ಪೀಠದ ನಡುವಿನ ಕಿಚ್ಚು
ಉತ್ತರ ಕರ್ನಾಟಕದ ಸಾಂಸ್ಕೃತಿಕ ಹಾಗೂ ರಾಜಕೀಯ ಧ್ರುವೀಕರಣದ ಕೇಂದ್ರಬಿಂದುವಾಗಿರುವ ಬಾಗಲಕೋಟೆ (Bagalkot) ಜಿಲ್ಲೆ ಇದೀಗ ಮತ್ತೊಮ್ಮೆ ಭಾರಿ ಸದ್ಧು ಮಾಡುತ್ತಿದೆ. ರಾಜ್ಯ ರಾಜಕಾರಣದ ಪ್ರಭಾವಿ ನಾಯಕ, ಹಾಲಿ ಸಚಿವ ವಿಜಯಾನಂದ ಕಾಶಪ್ಪನವರ್ ಹಾಗೂ ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಜಯ ಮೃತ್ಯುಂಜಯ ಸ್ವಾಮೀಜಿ ನಡುವಿನ ಬಹಿರಂಗ ವಾಗ್ದಾಳಿಗಳು ಈಗ ‘ಖಾದಿ VS ಖಾವಿ’ ಸಮರವಾಗಿ ಸೋಷಿಯಲ್ ಮೀಡಿಯಾದಲ್ಲಿ ಹೊಸ ಸಂಚಲನ ಸೃಷ್ಟಿಸಿವೆ.
ಆದರೆ, ಈ ಇಬ್ಬರು ಪ್ರಭಾವಿ ವ್ಯಕ್ತಿಗಳ ನಡುವೆ ಹೊತ್ತಿ ಉರಿಯುತ್ತಿರುವ ವೈಯಕ್ತಿಕ ಹಾಗೂ ರಾಜಕೀಯ ಪ್ರತಿಷ್ಠೆಯ ಬೆಂಕಿಯಲ್ಲಿ ಪಂಚಮಸಾಲಿ ಸಮುದಾಯದ ದಶಕಗಳ ಕನಸಾದ 2A ಮೀಸಲಾತಿ ಹೋರಾಟ ಬಲಿಯಾಗುತ್ತಿದೆಯೇ ಎನ್ನುವ ತೀವ್ರ ಆತಂಕ ಲಕ್ಷಾಂತರ ಸಮುದಾಯದ ಬಂಧುಗಳನ್ನು ಕಾಡತೊಡಗಿದೆ.
ಸಚಿವಸ್ಥಾನದ ಜಟಾಪಟಿ ಮತ್ತು ಸೋಷಿಯಲ್ ಮೀಡಿಯಾ ಕೌಂಟರ್
ಬಾಗಲಕೋಟೆ (Bagalkot) ಜಿಲ್ಲೆಯ ಹುನಗುಂದ ಕ್ಷೇತ್ರದ ಬಹಿರಂಗ ವೇದಿಕೆಯಲ್ಲಿ ಸಚಿವ ವಿಜಯಾನಂದ ಕಾಶಪ್ಪನವರ್ ಅವರು ಜಯ ಮೃತ್ಯುಂಜಯ ಸ್ವಾಮೀಜಿ ವಿರುದ್ಧ ಹರಿಹಾಯುವ ಮೂಲಕ ಈ ಹೊಸ ಜಟಾಪಟಿಗೆ ನಾಂದಿ ಹಾಡಿದ್ದರು.
- ಸಚಿವರ ನೇರ ವಾಗ್ದಾಳಿ: “ನನಗೆ ಸಚಿವಸ್ಥಾನ ಸಿಗದಂತೆ ತಡೆಯಲು ಜಯ ಮೃತ್ಯುಂಜಯ ಸ್ವಾಮೀಜಿಯವರು ರಾಜ್ಯದ ಉನ್ನತ ನಾಯಕರ ಬಳಿ ಹೋಗಿ ಮನವಿ ಮಾಡಿದ್ದರು. ‘ಅವನಿಗೆ ಮಂತ್ರಿಗಿರಿ ಕೊಡಬೇಡಿ’ ಎಂದು ಸ್ವಾಮೀಜಿ ಒತ್ತಡ ಹೇರಿದ್ದರೂ, ಹೈಕಮಾಂಡ್ ಹಾಗೂ ಸಿಎಂ-ಡಿಸಿಎಂ ನನ್ನ ಅರ್ಹತೆ ಗುರುತಿಸಿ ಸಚಿವ ಸ್ಥಾನ ನೀಡಿದ್ದಾರೆ. ಈಗ ಏನು ಮಾಡುತ್ತೀರಾ ಸ್ವಾಮೀಜಿ?” ಎಂದು ಕಾಶಪ್ಪನವರ್ ಅತ್ಯಂತ ವ್ಯಂಗ್ಯವಾಗಿ ಸವಾಲು ಎಸೆದಿದ್ದರು. ಅಷ್ಟೇ ಅಲ್ಲದೆ, “ಕಾವಿ ಧರಿಸಿದವರು ಆ ವಸ್ತ್ರದ ಪವಿತ್ರತೆಗೆ ತಕ್ಕಂತೆ ನಡೆಯಬೇಕು, ಸಮಾಜ ಕೊಟ್ಟ ಸ್ಥಾನದಲ್ಲಿದ್ದು ರಾಜಕೀಯ ಮಾಡಬಾರದು” ಎಂದು ಕಿಡಿಕಾರಿದ್ದರು.
- ಸ್ವಾಮೀಜಿಯವರ ಕಾವ್ಯಾತ್ಮಕ ತಿರುಗೇಟು:
ಕಾಶಪ್ಪನವರ ಈ ನೇರ ದಾಳಿಗೆ ಕೇವಲ ಭಾಷಣದ ಮೂಲಕ ಉತ್ತರಿಸದ ಶ್ರೀಗಳು, ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ಅತ್ಯಂತ ಮಾರ್ಮಿಕ ಹಾಗೂ ಖಾರವಾದ ತಿರುಗೇಟು ನೀಡಿದರು:
“ಅಧಿಕಾರವಿದ್ದಾಗ ಮದದಿಂದ ನಿಗರಲು, ಅಧಿಕಾರ ಕಳೆದಾಗ ಮದಕ್ಕೆಲ್ಲಿ ಸ್ಥಳವೂ? ಒದಗಿ ಬಂದ ಪದವಿ ಸ್ಥಿರವಲ್ಲ ತಿಳಿ ಮೊದಲು, ಸದುಪಯೋಗಿಸಿ ಬದುಕು ಮಂಕುಮನವೇ…”
ಈ ಪೋಸ್ಟ್ ಮೂಲಕ ಸ್ವಾಮೀಜಿ, ರಾಜಕೀಯ ಅಧಿಕಾರ ಎಂಬುದು ಶಾಶ್ವತವಲ್ಲ, ಸಿಕ್ಕ ಸಚಿವ ಸ್ಥಾನವನ್ನು ಸಮುದಾಯದ ಒಳಿತಿಗಾಗಿ ಬಳಸುವುದು ಬಿಟ್ಟು ಪೀಠದ ವಿರುದ್ಧ ತಿರುಗಿಬೀಳುವುದು ನಾಯಕತ್ವದ ಲಕ್ಷಣವಲ್ಲ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದರು.
ಇದನ್ನೂ ಓದಿ: ದ್ವೇಷದ ಅಂಗಳದಲ್ಲಿ ಪ್ರಬುದ್ಧತೆಯ ದಾಳ; ವೈರಿಗಳ ಕುತಂತ್ರಕ್ಕೂ ಮಣಿಯದ ವಿಜಯಾನಂದ ಕಾಶಪ್ಪನವರ್ ಬದಲಾದ ‘ನಡೆ-ನುಡಿ’!
ಹಿನ್ನೆಲೆಗೆ ತಳ್ಳಲ್ಪಟ್ಟಿದೆಯೇ ಪಂಚಮಸಾಲಿ 2A ಮೀಸಲಾತಿ?
ಖಾದಿ-ಖಾವಿಗಳ ನಡುವಿನ ಈ ವೈಯಕ್ತಿಕ ಕೆಸರೆರಚಾಟದ ಮಧ್ಯೆ ಸಮುದಾಯವನ್ನು ಅತ್ಯಂತ ತೀವ್ರವಾಗಿ ಕಾಡುತ್ತಿರುವ ಮುಖ್ಯ ಪ್ರಶ್ನೆ – “ಪಂಚಮಸಾಲಿ ಮೀಸಲಾತಿಯ ಭವಿಷ್ಯವೇನು?”
ಬೆಳಗಾವಿಯ ಸುವರ್ಣಸೌಧ ಮುತ್ತಿಗೆ, ಬೆಂಗಳೂರಿನ ಫ್ರೀಡಂ ಪಾರ್ಕ್ ಅಹೋರಾತ್ರಿ ಧರಣಿ ಹಾಗೂ ಸಾವಿರಾರು ಕಿಲೋಮೀಟರ್ ಪಾದಯಾತ್ರೆಗಳ ಮೂಲಕ ರಾಜ್ಯಾದ್ಯಂತ ಕ್ರಾಂತಿ ಸೃಷ್ಟಿಸಿದ್ದ ಪಂಚಮಸಾಲಿ 2A ಮೀಸಲಾತಿ ಹೋರಾಟವು ಇಂದು ಇಬ್ಬರು ನಾಯಕರ ‘ಅಹಂ’ನ ಕಾದಾಟದಲ್ಲಿ ದಾರಿ ತಪ್ಪುತ್ತಿದೆಯೇ ಎಂಬ ಅನುಮಾನ ಮೂಡಿದೆ.
ಸಚಿವ ಕಾಶಪ್ಪನವರ್ ಅವರ ಮೌನವೇ ಸಮ್ಮತಿಯೇ?
ಹೋರಾಟದ ಆರಂಭಿಕ ದಿನಗಳಲ್ಲಿ ಪಂಚಮಸಾಲಿ ರಾಷ್ಟ್ರೀಯ ಅಧ್ಯಕ್ಷರಾಗಿ ಶ್ರೀಗಳ ಹೆಗಲಿಗೆ ಹೆಗಲು ಕೊಟ್ಟು ಬೀದಿಗಿಳಿದಿದ್ದ ವಿಜಯಾನಂದ ಕಾಶಪ್ಪನವರ್, ಇವತ್ತು ಸರ್ಕಾರದ ಭಾಗವಾಗಿದ್ದಾರೆ. ಹಿಂದೆ ಪ್ರತಿಪಕ್ಷದಲ್ಲಿದ್ದಾಗ ಮೀಸಲಾತಿಗಾಗಿ ‘ಆಮರಣಾಂತ ಉಪವಾಸ’ ನಡೆಸುವ ಎಚ್ಚರಿಕೆ ನೀಡುತ್ತಿದ್ದ ಕಾಶಪ್ಪನವರ್, ಇದೀಗ ಅಧಿಕಾರದ ಚುಕ್ಕಾಣಿ ಹಿಡಿದ ಮೇಲೆ ಈ ವಿಚಾರವಾಗಿ ಮಾತನಾಡಲು ಹಿಂಜರಿಯುತ್ತಿರುವುದು ಏಕೆ ಎನ್ನುವುದು ಸಮುದಾಯದ ಮುಖಂಡರ ಪ್ರಮುಖ ಪ್ರಶ್ನೆಯಾಗಿದೆ. ಸಚಿವರಾಗಿ ಸರ್ಕಾರದ ಮೇಲೆ ಒತ್ತಡ ಹೇರಿ ಮೀಸಲಾತಿ ಕೊಡಿಸುತ್ತಾರೋ ಅಥವಾ ತಮ್ಮ ಮಂತ್ರಿಗಿರಿ ಉಳಿಸಿಕೊಳ್ಳಲು ಈ ವಿಷಯವನ್ನು ತಣ್ಣಗಾಗಿಸುತ್ತಾರೋ ಎಂಬ ಅನುಮಾನ ತೀವ್ರಗೊಂಡಿದೆ.
ಸಮುದಾಯದ ಯುವಜನತೆಯ ಆಕ್ರೋಶ:
ಗ್ರಾಮೀಣ ಭಾಗದ ಬಡ ಪಂಚಮಸಾಲಿ ಯುವಕರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ 2A ಮೀಸಲಾತಿ ಅತ್ಯಗತ್ಯವಾಗಿದೆ. ಆದರೆ ನಾಯಕರ ನಡುವಿನ ಈ ‘ಪೀಠ ಮತ್ತು ಅಧಿಕಾರದ ಜಟಾಪಟಿ’ಯಿಂದಾಗಿ ಸರ್ಕಾರದ ಮಟ್ಟದಲ್ಲಿ ಮೀಸಲಾತಿ ಕಡತಗಳು ಧೂಳು ಹಿಡಿಯುತ್ತಿದ್ದು, ಸಾಮಾನ್ಯ ಜನರಲ್ಲಿ ನಾಯಕರ ನಿಲುವಿನ ಬಗ್ಗೆ ತೀವ್ರ ಅಸಮಾಧಾನ ಹೊಗೆಯಾಡುತ್ತಿದೆ.
ಸ್ವಾಮೀಜಿ-ಬಿಜೆಪಿ ಮೈತ್ರಿ: ಮತ್ತೊಂದು ಭೀಕರ ಹೋರಾಟದ ಮುನ್ಸೂಚನೆ!
ಸಚಿವ ಕಾಶಪ್ಪನವರ್ ಹಾಗೂ ಕಾಂಗ್ರೆಸ್ ಸರ್ಕಾರದ ಮೌನಕ್ಕೆ ಕೌಂಟರ್ ನೀಡಲು ಜಯ ಮೃತ್ಯುಂಜಯ ಸ್ವಾಮೀಜಿ ಅವರು ಇದೀಗ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ತಂತ್ರ ಹೆಣೆಯುತ್ತಿದ್ದಾರೆ.
- ಬಿಜೆಪಿ ಪಂಚಮಸಾಲಿ ನಾಯಕರ ಬೆಂಬಲ:
ಕಾಂಗ್ರೆಸ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿಯ ಪಂಚಮಸಾಲಿ ನಾಯಕರು (ಸಿ.ಸಿ. ಪಾಟೀಲ್, ಮುರುಗೇಶ್ ನಿರಾಣಿ, ಅರವಿಂದ ಬೆಲ್ಲದ್, ಬಿಜೆಪಿ ಉಚ್ಛಾಟಿತ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಮುಂತಾದವರು) ಕಾಯುತ್ತಿದ್ದಾರೆ. ಸಚಿವ ಕಾಶಪ್ಪನವರ್ ಅವರನ್ನು ಒಂಟಿ ಮಾಡಲು ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಮುದಾಯವನ್ನು ಎತ್ತಿಕಟ್ಟಲು ಜಯ ಮೃತ್ಯುಂಜಯ ಸ್ವಾಮೀಜಿ ಅವರ ಜೊತೆ ಬಿಜೆಪಿ ನಾಯಕರು ಕೈಜೋಡಿಸುತ್ತಿದ್ದಾರೆ.
- ಸಂಘರ್ಷದ ಎರಡನೇ ಹಂತ:
ಸರ್ಕಾರದ ನೀಡಿದ ಭರವಸೆಗಳು ಕೇವಲ ಕಾಗದಕ್ಕಷ್ಟೇ ಸೀಮಿತವಾಗಿರುವುದರಿಂದ, ಮುಂಬರುವ ದಿನಗಳಲ್ಲಿ ರಾಜ್ಯಾದ್ಯಂತ ಬೃಹತ್ ಟ್ರ್ಯಾಕ್ಟರ್ ರ್ಯಾಲಿ ಹಾಗೂ ಅಧಿವೇಶನ ಮುತ್ತಿಗೆಯಂತಹ ಉಗ್ರ ಹೋರಾಟಕ್ಕೆ ಸ್ವಾಮೀಜಿ ಮತ್ತು ಬಿಜೆಪಿ ನಾಯಕರು ಚರ್ಚೆ ನಡೆಸುತ್ತಿದ್ದಾರೆ. “ನಮಗೆ ರಾಜಕೀಯ ನಾಯಕರ ಹಿತಾಸಕ್ತಿಗಿಂತ ಸಮುದಾಯದ ಹಕ್ಕು ಮುಖ್ಯ” ಎಂದು ನಿರೂಪಿಸಲು ಶ್ರೀಗಳು ಸಜ್ಜಾಗಿದ್ದಾರೆ.
ಸಮುದಾಯಕ್ಕೆ ಕಾದಿದೆಯಾ ದೊಡ್ಡ ಕಂಟಕ?
1. ರಾಜಕೀಯವಾಗಿ ಇಬ್ಬಾಗವಾಗುತ್ತಿರುವ ಸಮುದಾಯ:
ಪಂಚಮಸಾಲಿ ಸಮುದಾಯವು ಕಾಂಗ್ರೆಸ್ ಮತ್ತು ಬಿಜೆಪಿ ರಾಜಕೀಯದ ಮಧ್ಯೆ ಇಬ್ಬಾಗವಾಗುತ್ತಿದೆ. ಕಾಶಪ್ಪನವರ್ ಅವರು ಸರ್ಕಾರವನ್ನು ಸಮರ್ಥಿಸಿಕೊಳ್ಳುವ ಅನಿವಾರ್ಯತೆಯಲ್ಲಿದ್ದರೆ, ಸ್ವಾಮೀಜಿಯವರು ಸರ್ಕಾರದ ವಿರುದ್ಧ ಬೀದಿಗಿಳಿಯುವ ಹಾದಿಯಲ್ಲಿದ್ದಾರೆ. ಈ ನಾಯಕರ ಕಾದಾಟವು ಉತ್ತರ ಕರ್ನಾಟಕದ ಲಿಂಗಾಯತ ರಾಜಕಾರಣದಲ್ಲಿ ಕಾಂಗ್ರೆಸ್‌ಗೆ ಹಿನ್ನಡೆ ತರುವ ಲಕ್ಷಣಗಳು ಕಾಣಿಸುತ್ತಿವೆ.
2. ಧರ್ಮ ಮತ್ತು ರಾಜಕಾರಣದ ಗಡಿರೇಖೆ:
ಧಾರ್ಮಿಕ ಪೀಠಗಳು ರಾಜಕೀಯದಲ್ಲಿ ನೇರವಾಗಿ ಹಸ್ತಕ್ಷೇಪ ಮಾಡಬಾರದು ಎಂಬುದು ಕಾಶಪ್ಪನವರ ವಾದವಾದರೆ, ಸಮಾಜಕ್ಕೆ ನ್ಯಾಯ ಕೊಡಿಸಲು ಪೀಠವೇ ಧ್ವನಿಯಾಗಬೇಕು ಎಂಬುದು ಸ್ವಾಮೀಜಿ ಬೆಂಬಲಿತರ ನಿಲುವು. ಈ ವೈಚಾರಿಕ ಘರ್ಷಣೆ ಈಗ ವೈಯಕ್ತಿಕ ದ್ವೇಷವಾಗಿ ರೂಪಾಂತರಗೊಂಡಿರುವುದು ದುರಂತ.
ಬೇಕಿರುವುದು ಮೀಸಲಾತಿಯೇ ಹೊರತು ನಾಯಕರ ‘ಮದ’ದ ಜಟಾಪಟಿಯಲ್ಲ!
ಬಾಗಲಕೋಟೆಯ ನೆಲದಿಂದ ಆರಂಭವಾಗಿರುವ ಈ ‘ಖಾದಿ VS ಖಾವಿ’ ಸಮರವು ಕೇವಲ ಇಬ್ಬರು ವ್ಯಕ್ತಿಗಳ ನಡುವಿನ ಸಣ್ಣ ಕಿತ್ತಾಟವಾಗಿ ಉಳಿದಿಲ್ಲ. ಇದು ಇಡೀ ಪಂಚಮಸಾಲಿ ಸಮುದಾಯದ ಭವಿಷ್ಯ ಮತ್ತು ಮೀಸಲಾತಿ ಹೋರಾಟದ ದಿಕ್ಕನ್ನೇ ತಪ್ಪಿಸುವ ಮಟ್ಟಕ್ಕೆ ಬೆಳೆದಿದೆ.
ಸಚಿವರಾಗಿರುವ ವಿಜಯಾನಂದ ಕಾಶಪ್ಪನವರ್ ಅವರು ಅಧಿಕಾರದ ಗರ್ವದಲ್ಲಾಗಲಿ ಅಥವಾ ಜಯ ಮೃತ್ಯುಂಜಯ ಸ್ವಾಮೀಜಿಯವರು ವೈಯಕ್ತಿಕ ಪ್ರತಿಷ್ಠೆಯಲ್ಲಾಗಲಿ ಸಮುದಾಯದ ಮೂಲ ಗುರಿಯನ್ನು ಮರೆಯಬಾರದು. ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿ ಟಾಂಗ್ ಕೊಡುವುದು, ವೇದಿಕೆಯಲ್ಲಿ ನಿಂತು ವ್ಯಂಗ್ಯವಾಡುವುದನ್ನು ಬಿಟ್ಟು, ಇಬ್ಬರೂ ಒಂದಾಗಿ ಕುಳಿತು ಸರ್ಕಾರದ ಮೇಲೆ ಒತ್ತಡ ಹೇರಿ 2A ಮೀಸಲಾತಿ ಜಾರಿಗೆ ತರಬೇಕಿದೆ. ಇಲ್ಲವಾದರೆ, ಈ ನಾಯಕರ ‘ಪಂಚಮವೇದ’ದ ಜಟಾಪಟಿಯಲ್ಲಿ ಬಲಿಯಾಗುವುದು ಲಕ್ಷಾಂತರ ಬಡ ಪಂಚಮಸಾಲಿ ಯುವಕರ ಭವಿಷ್ಯ ಎಂಬುದು ಕಹಿ ಸತ್ಯ ಎನ್ನುವುದು ಸಮುದಾಯದ ಹಿರಿಯರ ಮಾತು.
ಯಾರ ಹಂಗೂ ಇಲ್ಲದ, ಯಾರಿಗೂ ಬಗ್ಗದ ಸ್ವತಂತ್ರ ಮಾಧ್ಯಮಕ್ಕೆ ನಿಮ್ಮ ಬೆಂಬಲದ ಅವಶ್ಯಕತೆ ಇದೆ...






