Homeರಾಜ್ಯBagalkot: ಕಾಂಗ್ರೆಸ್ ಸಾರಥ್ಯಕ್ಕೆ 23 ನಾಯಕರ ಕಸರತ್ತು! "ಕೊಟ್ರೆ ಒಲ್ಲೆ ಎನ್ನಲ್ಲ, ಬೇಕೇಬೇಕು ಅಂತ ಕೇಳೋದೂ...

Bagalkot: ಕಾಂಗ್ರೆಸ್ ಸಾರಥ್ಯಕ್ಕೆ 23 ನಾಯಕರ ಕಸರತ್ತು! “ಕೊಟ್ರೆ ಒಲ್ಲೆ ಎನ್ನಲ್ಲ, ಬೇಕೇಬೇಕು ಅಂತ ಕೇಳೋದೂ ಇಲ್ಲ”- ಹಳೆ ಹುಲಿ ಗುಡುಗು!

ಬಾಗಲಕೋಟೆ (Bagalkot): 2028ರ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್‌ನಲ್ಲಿ ಸಂಘಟನೆಯ ಮರುಸಂಘಟನೆಯ ಪರ್ವ ಆರಂಭವಾಗಿದೆ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನೂತನ ‘ಸಾರಥಿ’ಯ ಆಯ್ಕೆ ಪ್ರಕ್ರಿಯೆಯ ಕಾವು ಏರಿದೆ. ಆರಂಭದಲ್ಲಿ ಕೇವಲ ಆರೇಳು ಜನರಷ್ಟೇ ಆಕಾಂಕ್ಷಿಗಳು ಇರಬಹುದು ಎಂಬ ಅಂದಾಜಿತ್ತು. ಆದರೆ, ವೀಕ್ಷಕರ ಆಗಮನದ ಬೆನ್ನಲ್ಲೇ ಈ ಲೆಕ್ಕಾಚಾರ ಸಂಪೂರ್ಣ ತಲೆಕೆಳಗಾಗಿದ್ದು, ಬರೋಬ್ಬರಿ 23 ಜನ ಆಕಾಂಕ್ಷಿಗಳು ಅರ್ಜಿ ಸಲ್ಲಿಸುವ ಮೂಲಕ ಸಾರಥ್ಯಕ್ಕಾಗಿ ತೀವ್ರ ಪೈಪೋಟಿ ಏರ್ಪಟ್ಟಿದೆ. ಈ ಬಗ್ಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್‌ಜಿ ನಂಜಯ್ಯನಮಠ ಅವರು ನೀಡಿದ ಹೇಳಿಕೆ ಈಗ ಜಿಲ್ಲಾ ರಾಜಕಾರಣದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

“ಕೊಟ್ರೆ ಒಲ್ಲೆ ಎನ್ನಲ್ಲ, ಬೇಕೇಬೇಕು ಅಂತ ಕೇಳೋದೂ ಇಲ್ಲ”

‘ಅಸಲಿ ಸುದ್ದಿ ಸಂಸ್ಥೆ’ಯೊಂದಿಗೆ ಮಾತನಾಡಿದ ಬಾಗಲಕೋಟೆ (Bagalkot) ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ನಂಜಯ್ಯನಮಠ ಅವರು, ತಮ್ಮ ಸ್ಪಷ್ಟ ಹಾಗೂ ಅನುಭವಿ ನಿಲುವನ್ನು ತೆರೆದಿಟ್ಟಿದ್ದಾರೆ. “ನಾನು ಹೊಸದಾಗಿ ಅಧ್ಯಕ್ಷ ಸ್ಥಾನಕ್ಕಾಗಿ ಮತ್ತೆ ಯಾವುದೇ ಅರ್ಜಿಯನ್ನೂ ಸಲ್ಲಿಸಿಲ್ಲ. ಆದರೆ, ಮುಂಬರುವ ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಗಳನ್ನು ಎದುರಿಸಲು ನಾಯಕತ್ವದ ಸ್ಥಿರತೆ ಅಗತ್ಯ ಎಂದು ಹಿರಿಯರು ಭಾವಿಸಿದ್ದಾರೆ. ಕಳೆದ 8-8.5 ವರ್ಷಗಳಿಂದ ನಾನು ಈ ಜವಾಬ್ದಾರಿಯನ್ನು ಹೊತ್ತು, ಸ್ವಂತ ಕಚೇರಿಯನ್ನು ನಿರ್ಮಿಸಿ ಲೋಕಾರ್ಪಣೆಗೊಳಿಸಿದ್ದೇನೆ. ಈ ಹಂತದಲ್ಲಿ ನನಗೇನೂ ಹುದ್ದೆಯ ಹಸಿವಿಲ್ಲ. ನಾನಾಗಿಯೇ ‘ಬೇಕು’ ಎಂದೂ ಕೇಳುವುದಿಲ್ಲ, ವರಿಷ್ಠರು ನೀವೇ ಮುಂದುವರೆಯಿರಿ ಎಂದರೆ ‘ಒಲ್ಲೆ’ ಎಂದೂ ಹೇಳುವುದಿಲ್ಲ” ಎಂದು ನಂಜಯ್ಯನಮಠ ಸ್ಪಷ್ಟಪಡಿಸಿದ್ದಾರೆ.

ಹೊಸಬರಿಗೆ ತಕ್ಷಣಕ್ಕೆ ಪಕ್ಷದ ಆಡಳಿತವನ್ನು ಹಳಿಗೆ ತರುವುದು ಮತ್ತು ಸಣ್ಣಪುಟ್ಟ ಚುನಾವಣೆಗಳನ್ನು ನಿಭಾಯಿಸುವುದು ‘ಪಿಕ್‌ಅಪ್’ ಪಡೆಯಲು ಕಷ್ಟವಾಗಬಹುದು ಎಂಬ ಹಿನ್ನೆಲೆಯಲ್ಲಿ, ತಮ್ಮ ಮುಂದುವರೆಯುವಿಕೆ ಬಗ್ಗೆ ವಲಯಗಳಲ್ಲಿ ಚರ್ಚೆಯಾಗುತ್ತಿರುವುದನ್ನು ಅವರು ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: 15 ವರ್ಷಗಳಿಂದ ಜಿಲ್ಲಾಡಳಿತದಲ್ಲೇ ಅಡ್ಡಾ ಹಾಕಿದ ‘ಅಖಂಡ ಭ್ರಷ್ಟರು’! ಲೋಕಾಯುಕ್ತರ ಭೇಟಿ ಬರಿ ಐವಾಶ್, ‘ದೊಡ್ಡ ಮಿಕ’ಗಳಿಗೆ ಮೇಜರ್ ಸರ್ಜರಿ ಯಾವಾಗ?

ಅರ್ಜಿ ಸಲ್ಲಿಸಿದ 23 ನಾಯಕರ ಪ್ರಮುಖ ಪಟ್ಟಿ:

ಎಐಸಿಸಿ ವೀಕ್ಷಕರಾದ ಡಾ. ಬೆಳ್ಳಯ್ಯ ನಾಯಕ್ ಅವರು ಜುಲೈ 25 ರಂದು ಬಾಗಲಕೋಟೆ (Bagalkot)ಗೆ ಆಗಮಿಸಿ ಅಭಿಪ್ರಾಯ ಸಂಗ್ರಹಣೆಗೆ ಚಾಲನೆ ನೀಡಿದಾಗ, ಕೇವಲ 6 ರಿಂದ 8 ಆಕಾಂಕ್ಷಿಗಳು ಬರಬಹುದು ಎಂಬ ಭಾವನೆ ಪಕ್ಷದ ನಾಯಕರಲ್ಲಿತ್ತು. ಆದರೆ, ಪ್ರತಿ ಬ್ಲಾಕ್ ಕಾಂಗ್ರೆಸ್ ಮಟ್ಟದಿಂದ ವಿವಿಧ ಸಮುದಾಯಗಳ ನಾಯಕರು ಅರ್ಜಿ ಸಲ್ಲಿಸಿದ್ದು, ಸಲ್ಲಿಕೆಯಾಗಿರುವ ಒಟ್ಟು 23 ಆಕಾಂಕ್ಷಿಗಳ ಪಟ್ಟಿ ಈ ಕೆಳಗಿನಂತಿದೆ:

  • ಸಾಮಾನ್ಯ ವರ್ಗ: ನಾಗರಾಜ ಷ ಹದ್ಲಿ (ಲಿಂಗಾಯತ), ಮಂಜುನಾಥ ವಾಸನದ (ರೆಡ್ಡಿ), ಶಿವಾನಂದ ಉದಪುಡಿ (ಲಿಂಗಾಯತ), ವಿಜುಗೌಡ ಪಾಟೀಲ (ರೆಡ್ಡಿ), ಸಂತೋಷ ಬಗಲಿದೇಸಾಯಿ (ರೆಡ್ಡಿ) ಹಾಗೂ ರಮೇಶ ಬದ್ನೂರ (ರೆಡ್ಡಿ).
  • ಅಲ್ಪಸಂಖ್ಯಾತ ವರ್ಗ: ಹಾಜಿಸಾಬ ದಂಡಿನ, ಇಬ್ರಾಹಿಂ ಕಲಾದಗಿ, ಅಬ್ದುಲಹಮಿದ ಮಲಬಾರಿ ಹಾಗೂ ಅಯುಬಖಾನ ಬಾಗೇವಾಡಿ.
  • ಹಿಂದುಳಿದ ವರ್ಗ (OBC): ರವೀಂದ್ರ ಕಲ್ಬುರ್ಗಿ, ಶ್ರೀಶೈಲ ದಳವಾಯಿ, ಮಹಾಂತೇಶ ಹಟ್ಟಿ ಹಾಗೂ ವೆಂಕಟಾಚಲಪತಿ ಬಳ್ಳಾರಿ.
  • ಪರಿಶಿಷ್ಟ ಜಾತಿ (SC): ರಾಜು ಮನ್ನಿಕೇರಿ, ಎನ್. ಬಿ. ಗಸ್ತಿ, ಪೀರಪ್ಪ ಮ್ಯಾಗೇರಿ, ಪರಶುರಾಮ ಮಹಾರಾಜನವರ, ವೈ. ಸಿ. ಕಾಂಬಳೆ ಹಾಗೂ ಚಂದ್ರಶೇಖರ ರಾಠೋಡ.
  • ಪರಿಶಿಷ್ಟ ಪಂಗಡ (ST): ಹನಮಂತ ಡೋಣಿ ಹಾಗೂ ಬಾಲರಾಜ ಚವ್ಹಾಣ.
  • ಮಹಿಳಾ ವಿಭಾಗ: ಮಹಾದೇವಿ ರಾ. ಯರಗಲ್ಲ (ಮೇಟಿ.)

ಜಾತಿ ಲೆಕ್ಕಾಚಾರ, ಮಹಿಳಾ ಮೀಸಲಾತಿ ಹಾಗೂ ‘ವಯಸ್ಸಿನ ಮಿತಿ’ಯ ಗೊಂದಲ:

ವಿವಿಧ ಸಮುದಾಯಗಳಿಂದ ಬಂದಿರುವ ಅರ್ಜಿಗಳಲ್ಲಿ ಸುಮಾರು 10 ರಿಂದ 12 ನಾಯಕರು ಅರ್ಹತೆ ಹೊಂದಿದವರಾಗಿದ್ದಾರೆ. ನಂಜಯ್ಯನಮಠ ಅವರ ಪ್ರಕಾರ, ನಾಗರಾಜ ಹದ್ಲಿ , ಶ್ರೀಶೈಲ ದಳವಾಯಿ, ರಾಜು ಮನ್ನಿಕೇರಿ, ಚಂದ್ರಶೇಖರ ರಾಠೋಡ, ಶಿವಾನಂದ ಉದಪುಡಿ ಹಾಗೂ ಪರಶುರಾಮ ಮಹಾರಾಜನವರ ಸೇರಿದಂತೆ ಇನ್ನೂ ಅನೇಕರು ಸ್ಪರ್ಧೆಯಲ್ಲಿದ್ದಾರೆ.

ಜಿಲ್ಲಾ ಮಟ್ಟದಲ್ಲಿ ಯುವಕರಿಗೆ ಅವಕಾಶ ನೀಡಲು 50 ವರ್ಷದ ವಯೋಮಿತಿಯ ಮಾತುಗಳು ಕೇಳಿಬಂದಿದ್ದರೂ, ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಹಿರಿತನ ಮತ್ತು ಸರ್ವಸಮ್ಮತ ನಾಯಕತ್ವವೇ ಮುಖ್ಯವಾಗುತ್ತದೆ. ಇನ್ನು ಮಹಿಳಾ ಕೋಟಾದಡಿ ಮಹಾದೇವಿ ಮೇಟಿ ಅವರು ಅರ್ಜಿ ಸಲ್ಲಿಸಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ನಂಜಯ್ಯನಮಠ, “ಒಂದೇ ಜಿಲ್ಲೆಗೆ ಪ್ರತ್ಯೇಕವಾಗಿ ಮಹಿಳಾ ಕೋಟಾ ನೀಡಲಾಗುವುದಿಲ್ಲ. ರಾಜ್ಯದ ಜಿಲ್ಲಾ/ವಿಭಾಗೀಯ ಘಟಕಗಳ ಪೈಕಿ ಹೈಕಮಾಂಡ್ ನಿರ್ದಿಷ್ಟ ಪ್ರಮಾಣದಲ್ಲಿ ಮಹಿಳೆಯರು, ಎಸ್‌ಸಿ/ಎಸ್‌ಟಿ ಹಾಗೂ ಸಾಮಾನ್ಯ ವರ್ಗದವರಿಗೆ ಜವಾಬ್ದಾರಿ ಹಂಚಿಕೆ ಮಾಡುತ್ತದೆ” ಎಂದು ವಿವರಣೆ ನೀಡಿದ್ದಾರೆ.

ಬಾಗಲಕೋಟೆ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ನೆಲೆಯನ್ನು ಮತ್ತಷ್ಟು ಗಟ್ಟಿ ಮಾಡಲು ಚಾಣಾಕ್ಷ ನಾಯಕನ ಅಗತ್ಯವಿದೆ. ಹೀಗಾಗಿ, ಅರ್ಜಿ ಸಲ್ಲಿಸಿರುವವರಲ್ಲಿ ಹಾಲಿ ಶಾಸಕರ ಸಂಬಂಧಿಕರು, ಅತ್ಯಾಪ್ತರು ಹಾಗೂ ಹಿರಿಯ ಬೆಂಬಲಿಗರೇ ಹೆಚ್ಚಾಗಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಜಿಲ್ಲಾಧ್ಯಕ್ಷರ ಪಾತ್ರ ನಿರ್ಣಾಯಕವಾಗಿರುವುದರಿಂದ, ತಮ್ಮ ತಮ್ಮ ಬೆಂಬಲಿಗರಿಗೇ ಈ ‘ಕುರ್ಚಿ’ ಸಿಗಬೇಕೆಂದು ಶಾಸಕರು ಮತ್ತು ಸಚಿವರ ಮಟ್ಟದಲ್ಲಿ ತೆರೆಮರೆಯ ಒತ್ತಡ ತಂತ್ರಗಳು ಬಿರುಸಿನಿಂದ ನಡೆದಿವೆ.

ವೀಕ್ಷಕರ ಮ್ಯಾರಾಥಾನ್ ಸಭೆ: ಮುಂದಿನ ತಿಂಗಳು ಶಾರ್ಟ್‌ಲಿಸ್ಟ್!

ಕಳೆದ ನಾಲ್ಕು ದಿನಗಳಿಂದ ಬಾಗಲಕೋಟೆಯಲ್ಲೇ ವಾಸ್ತವ್ಯ ಹೂಡಿದ್ದ ವೀಕ್ಷಕ ಬೆಳ್ಳಯ್ಯ ನಾಯಕ್ ಅವರು ಗ್ರಾಮ ಪಂಚಾಯತಿ ಮಟ್ಟದ ಕಾರ್ಯಕರ್ತರಿಂದ ಹಿಡಿದು ಪ್ರಮುಖ ನಾಯಕರವರೆಗೆ ಮ್ಯಾರಾಥಾನ್ ಸಭೆಗಳನ್ನು ನಡೆಸಿ ಅಭಿಪ್ರಾಯ ಸಂಗ್ರಹ ಮಾಡಿದ್ದಾರೆ.

ಜುಲೈ 28 ರ ಸಂಜೆಗೆ ತಮ್ಮ ಪ್ರಥಮ ಹಂತದ ಪ್ರವಾಸ ಮುಗಿಸಿರುವ ವೀಕ್ಷಕರು, ಮುಂದಿನ ತಿಂಗಳ ಮೊದಲ ವಾರದಲ್ಲಿ ಮತ್ತೊಮ್ಮೆ ಜಿಲ್ಲೆಗೆ ಆಗಮಿಸಲಿದ್ದಾರೆ. ಸಲ್ಲಿಕೆಯಾಗಿರುವ 23 ಅರ್ಜಿಗಳನ್ನು ಕೂಲಂಕುಷವಾಗಿ ಪರಿಶೀಲಿಸಿ, ಅಂತಿಮವಾಗಿ 6 ಜನರ ಶಾರ್ಟ್‌ಲಿಸ್ಟ್ ತಯಾರಿಸಿ ಎಐಸಿಸಿಗೆ ಸಲ್ಲಿಸಲಿದ್ದಾರೆ.

ಇದನ್ನೂ ಓದಿ: BUDA ಬುಡಮೇಲು: ಕಮೀಷನರ್ ವಾಸಣ್ಣ ಸುತ್ತ ಅಕ್ರಮದ ವಾಸನೆ? ಠರಾವು, MLA ಪತ್ರಕ್ಕೂ ಬಗ್ಗದ ಭ್ರಷ್ಟ ಯಂತ್ರ – ಲೋಕಾಯುಕ್ತ ಕುರುಡಾಯಿತೇ?

ಯಾರಿಗೆ ಒಲಿಯಲಿದೆ ಅದೃಷ್ಟದ ಪಟ್ಟ?

ಒಂದೆಡೆ 8 ವರ್ಷಗಳ ಅನುಭವದ ಬಲದೊಂದಿಗೆ “ವರಿಷ್ಠರು ಹೆಗಲಿಗೆ ಹಾಕಿದರೆ ಬೇಡ ಎನ್ನಲ್ಲ, ಹೊಸಬರು ಬಂದರೆ ಪೂರ್ಣ ಮಾರ್ಗದರ್ಶನ ನೀಡಿ ಅಧಿಕಾರ ಹಸ್ತಾಂತರಿಸುತ್ತೇನೆ” ಎನ್ನುವ ಹಾಲಿ ಅಧ್ಯಕ್ಷ ನಂಜಯ್ಯನಮಠ. ಇನ್ನೊಂದೆಡೆ ಶಾಸಕರ ಅಭಯದೊಂದಿಗೆ ಕಣಕ್ಕಿಳಿದಿರುವ 23 ಜನ ಆಕಾಂಕ್ಷಿಗಳು!

ವರಿಷ್ಠರು ಅನುಭವಕ್ಕೆ ಮಣೆ ಹಾಕಲಿದ್ದಾರೆಯೇ ಅಥವಾ ಯುವ/ಹೊಸ ಮುಖಕ್ಕೆ ಸಾರಥ್ಯ ನೀಡಲಿದ್ದಾರೆಯೇ ಎಂಬುದು ಎಐಸಿಸಿ ಅಂತಿಮ ಪಟ್ಟಿ ಬಿಡುಗಡೆ ಮಾಡಿದ ಮೇಲಷ್ಟೇ ಸ್ಪಷ್ಟವಾಗಬೇಕಿದೆ. ಆದರೆ, ಸದ್ಯಕ್ಕಂತೂ ಬಾಗಲಕೋಟೆ ಕಾಂಗ್ರೆಸ್ ಕಚೇರಿಯಲ್ಲಿ ಅಧ್ಯಕ್ಷ ಪದವಿಯ ತೀವ್ರ ಪೈಪೋಟಿ ರಾಜಕೀಯ ಬಿಸಿಯನ್ನು ಏರಿಸಿದೆ.

Praveen Yalligutti
Praveen Yalliguttihttp://asalisuddi.com
ಕನ್ನಡದ ವಿವಿಧ ಸುದ್ದಿ ಮಾಧ್ಯಮ ಸಂಸ್ಥೆಗಳಲ್ಲಿ ಸುಮಾರು 8 ವರ್ಷಗಳ ಕಾಲ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ ನನಗಿದೆ. ಸುದ್ದಿಗಳ ಅಸಲಿಯತ್ತನ್ನು ಮತ್ತು ನಿಖರವಾದ ಮಾಹಿತಿಯನ್ನು ಜನರಿಗೆ ತಲುಪಿಸಬೇಕು ಎನ್ನುವ ಉದ್ದೇಶದಿಂದ ಈಗ 'ಅಸಲಿ ಸುದ್ದಿ' (Asali Suddi) ಎನ್ನುವ ಸುದ್ದಿ ಸಂಸ್ಥೆಯನ್ನು ಆರಂಭಿಸಿದ್ದೇನೆ. ಸತ್ಯಕ್ಕೆ ಹತ್ತಿರವಾದ ಮತ್ತು ಜನೋಪಕಾರಿ ವರದಿಗಳನ್ನು ನೀಡುವುದೇ ನನ್ನ ಮೊದಲ ಆದ್ಯತೆ.
RELATED ARTICLES

Most Popular

Recent Comments