ಬಾಗಲಕೋಟೆ (Bagalkot) ಜಿಲ್ಲಾಡಳಿತದ ರಕ್ತನಾಳಗಳಲ್ಲೇ ಭ್ರಷ್ಟಾಚಾರ ಮತ್ತು ಸರ್ವಾಧಿಕಾರಿ ಧೋರಣೆ ಆಳವಾಗಿ ಬೇರೂರಿದೆ. ಉಪ ಲೋಕಾಯುಕ್ತ ವೀರಪ್ಪ ಅವರು ಎರಡು ದಿನಗಳ ಕಾಲ ನಡೆಸಿದ ದಿಢೀರ್ ಪರಿಶೀಲನೆ, ಬಾಗಲಕೋಟೆಯ ಆಡಳಿತ ಯಂತ್ರ ಎಷ್ಟರಮಟ್ಟಿಗೆ ಜಡ ಹಿಡಿದಿದೆ ಎಂಬುದಕ್ಕೆ ಕನ್ನಡಿ ಹಿಡಿದಿದೆ. ಎಸಿ ಕಚೇರಿ, ಸಬ್‌ರಜಿಸ್ಟ್ರಾರ್ ಕಚೇರಿಯ ಸಿಬ್ಬಂದಿ ಮೊಬೈಲ್‌ಗಳಲ್ಲಿ ಫೋನ್-ಪೇ (PhonePe) ಮೂಲಕ ಕಮಿಷನ್ ದಂಧೆ ನಡೆಸಿರುವುದು, ಎಪಿಎಂಸಿ ಮಾರುಕಟ್ಟೆಯ ಲಂಚಾವತಾರ, ಕಲುಷಿತ ನೀರು ನದಿಗೆ ಸೇರುತ್ತಿರುವುದು ಹಾಗೂ ಬಿಟಿಡಿಎ (BTDA) ಆವರಣದಲ್ಲಿ 15 ವರ್ಷದೊಳಗಿನ 80 ಮಂದಿ ಅಪ್ರಾಪ್ತರಿಗೆ ಅಕ್ರಮವಾಗಿ ನಿವೇಶನ ಹಂಚಿರುವುದು ಕಣ್ಣಿಗೆ ಬಿದ್ದಿದೆ.
ಆದರೆ, ಇಲ್ಲಿ ಮೂಡುವ ಅತಿ ದೊಡ್ಡ ಪ್ರಶ್ನೆಯೆಂದರೆ—ಲೋಕಾಯುಕ್ತರು ಹಿಡಿದದ್ದು ಕೇವಲ ಮೇಲ್ಮೈಯಲ್ಲಿ ತಲಾಂತಲಾಡುವ ಸಣ್ಣಪುಟ್ಟ ಚುಮುಚುಮು ಮೀನುಗಳನ್ನಷ್ಟೇ! ನಿಜವಾದ ವಿಷಯವೆಂದರೆ, ದಶಕಗಳಿಂದ ಜಿಲ್ಲೆಯ ಆಡಳಿತ ಸೌಧದಲ್ಲೇ ಮುಖಾಂ ಹೂಡಿ, ಕೋಟ್ಯಂತರ ರೂಪಾಯಿಗಳ ಕಪ್ಪು ಸಾಮ್ರಾಜ್ಯ ಕಟ್ಟಿಕೊಂಡಿರುವ ‘ಬೃಹತ್ ಮಿಕಗಳು’ ಮಾತ್ರ ಲೋಕಾಯುಕ್ತರ ಕಣ್ಣಿಗೆ ಬೀಳದೇ ಪಾರಾಗಿದ್ದೇಗೆ?
BTDA ಹಗರಣ: ಸಂತ್ರಸ್ತರ ಹೆಸರಲ್ಲಿ ರಾಜಕಾರಣಿಗಳು-ಅಧಿಕಾರಿಗಳ ಹುಲ್ಲುಗಾವಲು!
ಆಲಮಟ್ಟಿ ಜಲಾಶಯದ ಹಿನ್ನೀರು ಸಂತ್ರಸ್ತರ ಪುನರ್ವಸತಿಗಾಗಿ ರೂಪುಗೊಂಡ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ (BTDA) ಇಂದು ಭ್ರಷ್ಟ ಅಧಿಕಾರಿಗಳು ಮತ್ತು ರಾಜಕಾರಣಿಗಳ ಪಾಲಿನ ಶಾಶ್ವತ ‘ಮೇವು ಕೇಂದ್ರ’ವಾಗಿದೆ.
ತಮ್ಮ ಆಸ್ತಿ-ಪಾಸ್ತಿ ಕಳೆದುಕೊಂಡ ಬಡ ಸಂತ್ರಸ್ತರು ನಿವೇಶನಕ್ಕಾಗಿ ಇನ್ನೂ ಅಲೆಯುತ್ತಿದ್ದಾರೆ. ಆದರೆ, ಪ್ರಾಧಿಕಾರ ಮಾತ್ರ ನಿಯಮಾವಳಿ ಗಾಳಿಗೆ ತೂರಿ 80 ಅಪ್ರಾಪ್ತರಿಗೆ ನಿವೇಶನ ಕೊಟ್ಟಿರುವುದು, ಪಿಡಿಒ (PDO) ಒಬ್ಬ ತನ್ನ ಇಬ್ಬರು ಪತ್ನಿಯರ ಹೆಸರಿಗೆ ಪ್ಲಾಟ್ ಬರೆಸಿಕೊಂಡಿರುವುದು ಪ್ರಾಧಿಕಾರದಲ್ಲಿ ನಡೆದ ಅಕ್ರಮಗಳ ಸಣ್ಣ ತುಣುಕಷ್ಟೇ. ಬಹಿರಂಗ ಹರಾಜಿನ ಮೂಲಕ ಬಂದ ನೂರಾರು ಕೋಟಿ ಕಾರ್ಪಸ್ ಫಂಡ್ ಸರ್ಕಾರದ ಪಾಲಾಗಿ ನವನಗರ ಮೂಲಸೌಕರ್ಯವಿಲ್ಲದೆ ನರಳುತ್ತಿದೆ. ಈ ಬೃಹತ್ ದಂಧೆಯ ಹಿಂದಿರುವ ‘ದೊಡ್ಡ ಕೈಗಳ’ ತನಿಖೆಯಾಗದೆ ಕೇವಲ ಕೆಳಹಂತದ ಸಿಬ್ಬಂದಿ ಮೇಲೆ ಕ್ರಮ ಕೈಗೊಂಡರೆ ಸಂತ್ರಸ್ತರಿಗೆ ನ್ಯಾಯ ಸಿಗಲು ಸಾಧ್ಯವೇ?
10-20 ವರ್ಷಗಳಿಂದ ಒಂದೇ ಕಡೆ ಅಡ್ಡಾ ಹಾಕಿರುವ ‘ಖಾಯಂ’ ನೌಕರರ ರಾಜಕೀಯ ಆಶ್ರಯ!
ಬಾಗಲಕೋಟೆ (Bagalkot) ಜಿಲ್ಲಾಡಳಿತಕ್ಕೆ ಹಿಡಿದಿರುವ ನೈಜ ರೋಗವೆಂದರೆ, ಬಾಗಲಕೋಟೆಯ ಪ್ರಮುಖ ಇಲಾಖೆಗಳಲ್ಲಿ ಕೆಲವು ಅಧಿಕಾರಿಗಳು ಮತ್ತು ನೌಕರರು ಕಳೆದ 10, 15, ಹಾಗೂ 20 ವರ್ಷಗಳಿಂದ ವರ್ಗಾವಣೆಯೇ ಆಗದೆ ಒಂದೇ ಕಡೆ ಬೀಡುಬಿಟ್ಟಿರುವುದು.
ಸರ್ಕಾರಿ ಸೇವಾ ನಿಯಮಗಳ ಪ್ರಕಾರ ಪ್ರತಿ ಮೂರು ವರ್ಷಕ್ಕೊಮ್ಮೆ ವರ್ಗಾವಣೆಯಾಗಬೇಕು. ಆದರೆ ಈ ಮಹಾಶಯರು ಇಲಾಖೆಗೆ ಅನಿವಾರ್ಯ ಎಂಬ ಕಾರಣಕ್ಕೆ ಇಲ್ಲೇ ಉಳಿದುಕೊಂಡಿಲ್ಲ. ಬದಲಿಗೆ ರಾಜಕಾರಣಿಗಳ ಚರಣಸೇವೆ ಮಾಡಿ, ಕೋಟಿ ಕೋಟಿ ಹಣ ಚೆಲ್ಲಿ, ತಮ್ಮ ಅನುಕೂಲಕ್ಕಾಗಿ ಬಾಗಲಕೋಟೆಯನ್ನೇ ‘ಶಾಶ್ವತ ಕಾರ್ಯಕ್ಷೇತ್ರ’ ಮಾಡಿಕೊಂಡಿದ್ದಾರೆ. ಇಂತಹ ಅಧಿಕಾರಿಗಳ ಜಾಲವನ್ನು ಲೋಕಾಯುಕ್ತರು ಏಕಾಗ್ರತೆಯಿಂದ ಭೇದಿಸಬೇಕಿತ್ತು.
ಬಾಗಲಕೋಟೆಯಲ್ಲಿ ‘ಬೇರು ಬಿಟ್ಟ’ ಡಿಆರ್ ಶಂಕರಗೌಡ ನ್ಯಾಮಗೌಡರ!
ಈ ಬೃಹತ್ ಆಡಳಿತ ದುರಂತಕ್ಕೆ ಅತ್ಯಂತ ಸ್ಪಷ್ಟ ಮತ್ತು ಜ್ವಲಂತ ಉದಾಹರಣೆ ಎಂದರೆ ಜಿಲ್ಲಾ ನೊಂದಣಾಧಿಕಾರಿ (DR) ಶಂಕರಗೌಡ ನ್ಯಾಮಗೌಡರ. ಒಬ್ಬ ಸರ್ಕಾರಿ ಅಧಿಕಾರಿ 2012ರಿಂದ ಅಂದರೆ ಸತತ 14 ವರ್ಷಗಳಿಂದ ಒಂದೇ ಜಿಲ್ಲೆಯಲ್ಲಿ ವಿವಿಧ ಹುದ್ದೆಗಳಲ್ಲಿ ಮುಂದುವರಿಯುತ್ತಿರುವುದು ಕಾಕತಾಳೀಯವೇ? ಅಥವಾ ಇದರ ಹಿಂದೆ ಕಾಣದ ರಾಜಕೀಯ ಹಿತಾಸಕ್ತಿಯ ಆಶೀರ್ವಾದವಿದೆಯೇ? ಬಾಗಲಕೋಟೆ ಜನತೆ ಇಂದು ನೇರವಾಗಿಯೇ ಈ ಪ್ರಶ್ನೆ ಕೇಳುತ್ತಿದ್ದಾರೆ.
ಮಾಜಿ ಸಚಿವರೊಬ್ಬರ ಆಪ್ತ ಕಾರ್ಯದರ್ಶಿಯಾಗಿ ಕೆಲಸ ಮಾಡಿದ ರಾಜಕೀಯ ನೆರಳನ್ನು ಬಳಸಿಕೊಂಡು, ಇವರು ಜಿಲ್ಲೆಯ ಪ್ರಮುಖ ಅಧಿಕಾರಿಗಳ ವರ್ಗಾವಣೆ ದಂಧೆಯನ್ನೇ ನಿಯಂತ್ರಿಸುವ ಮಟ್ಟಿಗೆ ಪ್ರಭಾವ ಬೆಳೆಸಿಕೊಂಡಿದ್ದಾರೆ ಎಂಬ ಗಂಭೀರ ಆರೋಪಗಳಿವೆ. ಯಾರು ಬರಬೇಕು, ಯಾರು ವರ್ಗಾವಣೆಯಾಗಬೇಕು ಎಂಬುದನ್ನು ತೀರ್ಮಾನಿಸುವ ಶಕ್ತಿ ಒಬ್ಬ ಅಧಿಕಾರಿಗೆ ಬಂದಿದ್ದರೆ, ಅದು ಪ್ರಜಾಪ್ರಭುತ್ವದ ಆಡಳಿತಕ್ಕೆ ಮಾರಕವಲ್ಲವೇ?
‘ಅಸಲಿ ಸುದ್ದಿ’ ನಡೆಸಿದ ತನಿಖೆಯಲ್ಲಿ ಬೆಳಕಿಗೆ ಬಂದ ಪ್ರಮುಖ ಅಂಶಗಳು:
- ಸಹಕಾರ ಸಂಸ್ಥೆಯ ಮೇಲಿನ ಹಿಡಿತ: ತಮ್ಮ ಸ್ವಂತ ಸಹೋದರನನ್ನು ಬಾಪೂಜಿ ಸಹಕಾರ ಸಂಸ್ಥೆಯ ನಿರ್ದೇಶಕನನ್ನಾಗಿ ಕೂರಿಸಿ, ಪರೋಕ್ಷವಾಗಿ ತಾವೇ ಸಾಲ ಮತ್ತು ಹಣಕಾಸು ಆಡಳಿತ ನಡೆಸುವ ಮೂಲಕ ‘ಹಿತಾಸಕ್ತಿ ಸಂಘರ್ಷ’ (Conflict of Interest) ಎಸಗುತ್ತಿದ್ದಾರೆ.
- ಸರ್ಕಾರಿ ವಾಹನ ದುರ್ಬಳಕೆ: ಸಾರ್ವಜನಿಕರ ಸೇವೆಗೆ ಇರುವ ಸರ್ಕಾರದ ವಾಹನ ಮತ್ತು ಇಂಧನವನ್ನು ಖಾಸಗಿ ಕೆಲಸಗಳಿಗೆ ನಿರಂತರವಾಗಿ ಬಳಸಿಕೊಳ್ಳುತ್ತಿರುವ ಆರೋಪವಿದೆ.
- ‘ಮಿನಿ ವಿಧಾನಸೌಧ’ ಮಾದರಿಯ ಬಂಗಲೆ: ನವನಗರದಲ್ಲಿ ನಿರ್ಮಾಣವಾಗುತ್ತಿರುವ ಇವರ ಭವ್ಯ ಬಂಗಲೆಯನ್ನು ನೋಡಿದರೆ “ಇದು ಸರ್ಕಾರಿ ಅಧಿಕಾರಿಯ ಮನೆಯೋ ಅಥವಾ ‘ಮಿನಿ ವಿಧಾನಸೌಧವೋ’?” ಎಂದು ಜನ ಮೂಗಿನ ಮೇಲೆ ಬೆರಳಿಡುತ್ತಿದ್ದಾರೆ. ಒಬ್ಬ ಅಧಿಕಾರಿಯ ವೇತನಕ್ಕೂ, ಈ ಭವ್ಯ ಬಂಗಲೆ ಹಾಗೂ ಅವರ ಹೆಸರಲ್ಲಿ ಕೇಳಿಬರುತ್ತಿರುವ ಕೋಟ್ಯಂತರ ರೂಪಾಯಿ ಬೇನಾಮಿ ಆಸ್ತಿಗಳಿಗೂ ಎಲ್ಲಾದರೂ ಹೊಂದಾಣಿಕೆ ಇದೆಯೇ?
‘ಅಸಲಿ ಸುದ್ದಿ’ಯಲ್ಲಿ ಬರಲಿದೆ ಕರಾಳ ಮುಖದ ಅಸಲಿ ದಾಖಲೆಗಳು!
ಅಷ್ಟಕ್ಕೂ, ಈ ಅಧಿಕಾರಿ 14 ವರ್ಷಗಳಿಂದ ವರ್ಗಾವಣೆಯಾಗದೆ ಬಾಗಲಕೋಟೆಯಲ್ಲೇ ಅಡ್ಡಾ ಹಾಕಿ ಕುಳಿತುಕೊಳ್ಳಲು ಕೇವಲ ಹಣ ಮತ್ತು ರಾಜಕೀಯ ಅಧಿಕಾರ ಮಾತ್ರ ಕಾರಣವೇ? ಖಂಡಿತ ಅಲ್ಲ. ಇವರ ಅಧಿಕಾರದ ಹಿಂದೆ ಅಡಗಿರುವ ಖಾಸಗಿ ಸಂಬಂಧಗಳು, ಖಾಸಗಿತನದಲ್ಲಿ ನಡೆದಿರುವ ಅಕ್ರಮಗಳು ಹಾಗೂ ಇಲಾಖೆಯನ್ನೇ ದುರ್ಬಳಕೆ ಮಾಡಿಕೊಂಡು ಕಟ್ಟಿಕೊಂಡಿರುವ ಕಪ್ಪು ಸಾಮ್ರಾಜ್ಯದ ಸ್ಫೋಟಕ ಅಧಿಕೃತ ದಾಖಲೆಗಳು ಈಗ ‘ಅಸಲಿ ಸುದ್ದಿ’ ತಂಡದ ಕೈಸೇರಿವೆ.
ಶಂಕರಗೌಡ ನ್ಯಾಮಗೌಡರ ಸೇರಿದಂತೆ ಬಾಗಲಕೋಟೆಯಲ್ಲಿ ದಶಕಗಳಿಂದ ಗಟ್ಟಿಯಾಗಿ ಬೇರೂರಿರುವ ಇನ್ನು ಹಲವು ಅಧಿಕಾರಿಗಳ ನಿಜವಾದ ಅಸಲಿ ಮುಖ ಹಾಗೂ ಅವರ ಖಾಸಗಿ ಅಕ್ರಮಗಳ ಸಮಗ್ರ ಮಾಹಿತಿಯನ್ನು ನಮ್ಮ ‘ಅಸಲಿ ಸುದ್ದಿ’ ಮುಂಬರುವ ವಿಶೇಷ ತನಿಖಾ ವರದಿಯಲ್ಲಿ ದಾಖಲೆಗಳ ಸಮೇತ ಬಹಿರಂಗಪಡಿಸಲಿದೆ.
ಇದನ್ನೂ ಓದಿ: Bagalkot: ಸಾಹಿತ್ಯದ ಸೋಗಿನಲ್ಲಿ ಕನ್ನ ಹಾಕಿದ ಕಳ್ಳರು! ಕಸಾಪ ಕರಾಳ ದಂಧೆ ಬಟಾಬಯಲು!
ಆಡಳಿತಕ್ಕೆ ಬೇಕಿದೆ ಕ್ಷಿಪ್ರ ಮೇಜರ್ ಸರ್ಜರಿ!
ಲೋಕಾಯುಕ್ತರ ಭೇಟಿಯಿಂದ ಕೆಳಹಂತದ ಸಿಬ್ಬಂದಿಗೆ ಸಣ್ಣ ಮಟ್ಟದ ಭಯ ಹುಟ್ಟಿರಬಹುದು. ಆದರೆ, ಬಾಗಲಕೋಟೆ ಜಿಲ್ಲಾಡಳಿತದ ಭ್ರಷ್ಟಾಚಾರದ ಬೇರುಗಳನ್ನು ಕಿತ್ತೊಗೆಯಬೇಕಾದರೆ 10-15 ವರ್ಷಗಳಿಂದ ರಾಜಕೀಯ ಆಶ್ರಯ ಪಡೆದು ಅಡ್ಡಾ ಹಾಕಿ ಕುಳಿತಿರುವ ‘ಶಂಕರಗೌಡ ನ್ಯಾಮಗೌಡರಂತಹ ಬೃಹತ್ ಮಿಕಗಳ’ ಮೇಲೆ ಲೋಕಾಯುಕ್ತರು ನೇರ ದಾಳಿ ನಡೆಸಬೇಕು. ಇವರ ಆಸ್ತಿ ವಿವರ, ಬೇನಾಮಿ ಆಸ್ತಿ ಹಾಗೂ ಸುದೀರ್ಘ ಸೇವಾ ಅವಧಿಯ ಕುರಿತು ಸರ್ಕಾರ ಸಮಗ್ರ ತನಿಖೆಗೆ ಆದೇಶಿಸಿ, ಬಾಗಲಕೋಟೆ ಆಡಳಿತ ಯಂತ್ರಕ್ಕೆ ‘ಮೇಜರ್ ಸರ್ಜರಿ’ ಮಾಡಬೇಕಿದೆ.

