Homeವಿಶ್ಲೇಷಣೆBJP: ಕಮಲದ ಗರ್ಭದಲ್ಲಿ ವಿಷಬೀಜ! ಪ್ರಬಲ ಸಮುದಾಯದ 'ಮನೆಕಳ್ಳ'ರನ್ನು ಹುಡುಕಲು ವಿಜಯೇಂದ್ರ ಹರಸಾಹಸ; ಧರ್ಮಸ್ಥಳದಲ್ಲಿ ನಡೆಯುವುದೇ...

BJP: ಕಮಲದ ಗರ್ಭದಲ್ಲಿ ವಿಷಬೀಜ! ಪ್ರಬಲ ಸಮುದಾಯದ ‘ಮನೆಕಳ್ಳ’ರನ್ನು ಹುಡುಕಲು ವಿಜಯೇಂದ್ರ ಹರಸಾಹಸ; ಧರ್ಮಸ್ಥಳದಲ್ಲಿ ನಡೆಯುವುದೇ ಸತ್ಯಶೋಧನೆ?

BJP: ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಇತ್ತೀಚಿನ ವಿಧಾನ ಪರಿಷತ್ ಚುನಾವಣೆಯು (Council elections) ಕೇವಲ ಒಂದು ಮತದಾನದ ಪ್ರಕ್ರಿಯೆಯಾಗಿ ಉಳಿಯಲಿಲ್ಲ; ಅದು ರಾಜ್ಯ ಬಿಜೆಪಿಯ ಅಸ್ತಿತ್ವಕ್ಕೆ ಬಿದ್ದಿರುವ ದೊಡ್ಡ ಕನ್ನ ಮತ್ತು ಪಕ್ಷದ ಒಳಗಿರುವ ‘ಮನೆಮುರುಕು’ ನಾಯಕರ ಬಣ್ಣವನ್ನು ಬಯಲು ಮಾಡಿದೆ. ಸ್ವತಃ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (B.Y. Vijayendra) ಅವರೇ, ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದಿದೆ ಎನ್ನಲಾದ ಅಡ್ಡ ಮತದಾನದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇದರ ವಿರುದ್ಧ ಧರ್ಮಸ್ಥಳದಲ್ಲಿ ಶಾಸಕಾಂಗ ಪಕ್ಷದ ಸಭೆ ಕರೆದು ‘ಆಣೆ-ಪ್ರಮಾಣ’ ಮಾಡಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಈ ಬೆಳವಣಿಗೆಯು ಬಿಜೆಪಿ ನಾಯಕತ್ವದ ಅಸಹಾಯಕತೆಯನ್ನು ಜಗಜ್ಜಾಹೀರು ಮಾಡಿದೆ.

ಧರ್ಮಸ್ಥಳದ ಮೊರೆ: ನಾಯಕತ್ವದ ದಯನೀಯ ಸ್ಥಿತಿ!

ಬಿಜೆಪಿಯಂತಹ (BJP) ಬೃಹತ್ ರಾಷ್ಟ್ರೀಯ ಪಕ್ಷವೊಂದು, ತನ್ನದೇ ಶಾಸಕರನ್ನು ನಂಬಲಾಗದೆ ಧರ್ಮಸ್ಥಳದ ದೇವರ ಮೊರೆ ಹೋಗುವ ಮಟ್ಟಿಗೆ ತಲುಪಿದೆ ಎಂದರೆ, ಅಲ್ಲಿ ನಾಯಕತ್ವದ ನಿಯಂತ್ರಣ ಸಂಪೂರ್ಣವಾಗಿ ಕುಸಿದಿದೆ ಎಂದರ್ಥ. ವಿಜಯೇಂದ್ರ ಅವರು, “ನಾವೆಲ್ಲರೂ ದೇವರನ್ನು ನಂಬುವವರು, ಧರ್ಮಸ್ಥಳದಲ್ಲಿ ಸಭೆ ಕರೆದು ತಾಯಿಗೆ ದ್ರೋಹ ಮಾಡಿದ ಶಾಸಕರು ಮತ್ತು ಸತ್ಯದ ಬಗ್ಗೆ ಗೊತ್ತಾಗಬೇಕು” ಎಂದು ಹೇಳುವ ಮೂಲಕ, ತಮ್ಮದೇ ಪಕ್ಷದ ಶಾಸಕರ ಮೇಲೆ ತಮಗಿರುವ ಅಪನಂಬಿಕೆಯನ್ನು ಬಹಿರಂಗಪಡಿಸಿದ್ದಾರೆ.

ಸುಮಾರು 63 ಶಾಸಕರನ್ನು ಒಟ್ಟಿಗೆ ಸೇರಿಸಿ, ಧರ್ಮಸ್ಥಳದಂತಹ ಪವಿತ್ರ ಸ್ಥಳದಲ್ಲಿ ಸತ್ಯಶೋಧನೆ ನಡೆಸಲು ಮುಂದಾಗಿರುವುದು, ಪಕ್ಷದಲ್ಲಿ ಶಿಸ್ತು ಎನ್ನುವುದು ಕೇವಲ ಕಾಗದದ ಮೇಲಿನ ಅಕ್ಷರಗಳಾಗಿವೆ ಎಂಬುದನ್ನು ಸಾಬೀತುಪಡಿಸುತ್ತದೆ. ನಿಜವಾದ ನಾಯಕನಾದವನು ಶಾಸಕರನ್ನು ತನ್ನ ವರ್ಚಸ್ಸು, ಕಟ್ಟುನಿಟ್ಟಾದ ಶಿಸ್ತು ಮತ್ತು ರಾಜಕೀಯ ತಂತ್ರಗಾರಿಕೆಯಿಂದ ಹಿಡಿತದಲ್ಲಿ ಇಟ್ಟುಕೊಳ್ಳಬೇಕು. ಆದರೆ, ಇಲ್ಲಿ ವಿಜಯೇಂದ್ರ ಅವರು ಶಾಸಕರನ್ನು ದೇವರ ಮುಂದೆ ನಿಲ್ಲಿಸಿ ಆಣೆ-ಪ್ರಮಾಣ ಮಾಡಿಸುವ ದಯನೀಯ ಸ್ಥಿತಿಯಲ್ಲಿದ್ದಾರೆ. ಇದು ಅವರ ನಾಯಕತ್ವದ ಮೇಲೆ ಪ್ರಶ್ನೆಗಳನ್ನು ಎತ್ತುತ್ತಿದೆ.

ಇದನ್ನೂ ಓದಿ: JDS: ಕ್ರಾಸ್ ವೋಟಿಂಗ್ ‘ಖಯಾಲಿ’- ಕಮಲ ಮೈತ್ರಿಯ ಮುಳ್ಳು! ಪರಿಷತ್ ಪೆಟ್ಟು ಜೆಡಿಎಸ್ ಅಸ್ತಿತ್ವಕ್ಕೆ ಬಿದ್ದ ಮರಣಶಾಸನವೇ?

ಪ್ರಬಲ ಸಮುದಾಯದ ಶಾಸಕರ ‘ಹೊಲಸು’ ರಾಜಕಾರಣ

ಬಿಜೆಪಿ (BJP) ಪಕ್ಷದ ಆಂತರಿಕ ವಲಯದಲ್ಲಿ ಹರಿದಾಡುತ್ತಿರುವ ಮಾಹಿತಿಯಂತೆ, ವಿಧಾನ ಪರಿಷತ್ ಚುನಾವಣೆಯ ಅಡ್ಡ ಮತದಾನದ ಹಿಂದೆ ಪ್ರಬಲ ಸಮುದಾಯದ ಶಾಸಕರ ಕೈವಾಡವಿರುವುದು ಬಹುತೇಕ ಖಚಿತವಾಗಿದೆ. ವರ್ಷಗಳ ಕಾಲ ಹಿಂದೂತ್ವ, ಮೋದಿ ಮತ್ತು ಪಕ್ಷ ಸಂಘಟನೆಗಾಗಿ ಹಗಲಿರುಳು ದುಡಿದ ದಲಿತ ಮತ್ತು ಹಿಂದುಳಿದ ವರ್ಗದ ಕಾರ್ಯಕರ್ತರ ಬೆವರಿನ ಫಲವನ್ನು, ಈ ಪ್ರಬಲ ಶಾಸಕರು ತಮ್ಮ ಸ್ವಾರ್ಥ ಲಾಭಕ್ಕಾಗಿ ಕಾಂಗ್ರೆಸ್‌ನಂತಹ ವಿರೋಧಿ ಪಕ್ಷದ ಮುಂದೆ ಅಡವಿಟ್ಟಿದ್ದಾರೆ.

ಅಧಿಕಾರ, ಹುದ್ದೆ ಮತ್ತು ವೈಯಕ್ತಿಕ ಸ್ವಾರ್ಥಕ್ಕಾಗಿ ಪಕ್ಷವನ್ನೇ ದಾಳವಾಗಿ ಬಳಸುತ್ತಿರುವ ಈ ಶಾಸಕರು, ತಾವು ಗೆದ್ದಿರುವ ಪಕ್ಷದ ಆದರ್ಶಗಳಿಗೆ ದ್ರೋಹ ಬಗೆಯುತ್ತಿದ್ದಾರೆ. ಇವರ ಇಂತಹ ‘ಪಕ್ಷದ್ರೋಹ’ ಚಟುವಟಿಕೆಗಳ ಬಗ್ಗೆ ಹೈಕಮಾಂಡ್‌ಗೆ ಈಗಾಗಲೇ ವರದಿ ನೀಡಲಾಗಿದೆ ಎನ್ನಲಾಗಿದೆ. ಕ್ರಮ ಕೈಗೊಳ್ಳದಿದ್ದರೇ, ಮುಂದಿನ ದಿನಗಳಲ್ಲಿ ಹಿಂದುಳಿದ ವರ್ಗದ ಕಾರ್ಯಕರ್ತರು ಪಕ್ಷದಿಂದ ಸಂಪೂರ್ಣವಾಗಿ ದೂರವಾಗುವ ಅಪಾಯವಿದೆ.

ವಿಜಯೇಂದ್ರ vs ಡಿಕೆಶಿ: ಅರಿಯದ ತಂತ್ರಗಳು

ಒಂದೆಡೆ ಡಿ.ಕೆ. ಶಿವಕುಮಾರ್ ಎಂಬ ರಾಜಕೀಯ ಚಾಣಕ್ಯನ ಅಪ್ರತಿಮ ತಂತ್ರಗಾರಿಕೆ, ಮತ್ತೊಂದೆಡೆ ತಂದೆಯ ನೆರಳಿನಿಂದ ಹೊರಬರಲು ಪರದಾಡುತ್ತಿರುವ ವಿಜಯೇಂದ್ರ ಅವರ ಅಪ್ರಬುದ್ಧ ರಾಜಕೀಯ ನಡೆ. ವಿಧಾನ ಪರಿಷತ್ ಚುನಾವಣೆಯ ಸೋಲು ವಿಜಯೇಂದ್ರ ಅವರ ನಾಯಕತ್ವಕ್ಕೆ ದೊಡ್ಡ ಮುಖಭಂಗ ತಂದಿದೆ. ಡಿಕೆಶಿ ಅವರ ಹತ್ತು ದಶಕದ ರಾಜಕೀಯ ಅನುಭವ ಮತ್ತು ತಂತ್ರಗಳ ಮುಂದೆ ವಿಜಯೇಂದ್ರ ಅವರ ರಾಜಕೀಯ ಅರಿವು ತೀರಾ ಸಾಲದು ಎಂಬುದು ಸಾಬೀತಾಗಿದೆ. ವಿಜಯೇಂದ್ರ ಅವರು ಹೈಕಮಾಂಡ್‌ಗೆ ವರದಿ ನೀಡುವುದಕ್ಕಷ್ಟೇ ಸೀಮಿತವಾಗುವ ‘ಪೋಸ್ಟ್ ಮ್ಯಾನ್’ ಕೆಲಸ ಮಾಡುತ್ತಿದ್ದಾರೆಯೇ ಎಂಬ ಅನುಮಾನ ಕಾರ್ಯಕರ್ತರಲ್ಲಿದೆ.

ಅಶೋಕ್-ಡಿಕೆಶಿ ಒಳ ಒಪ್ಪಂದ: ನಂಬಿದವರಿಗೆ ಅನ್ಯಾಯ!

ಬೆಂಗಳೂರು ರಾಜಕೀಯ ವಲಯದಲ್ಲಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮತ್ತು ಡಿ.ಕೆ. ಶಿವಕುಮಾರ್ ನಡುವಿನ ಗುಸುಗುಸು ಒಳ ಒಪ್ಪಂದದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಪ್ರತಿಪಕ್ಷದ ನಾಯಕನಾಗಿ ಸರ್ಕಾರದ ವೈಫಲ್ಯಗಳನ್ನು ತರಾಟೆಗೆ ತೆಗೆದುಕೊಳ್ಳುವ ಬದಲು, ಮೃದು ಧೋರಣೆ ತೋರುತ್ತಿರುವುದು ಏಕೆ? ಎಂಬ ಪ್ರಶ್ನೆ ಕಾರ್ಯಕರ್ತರನ್ನು ಕಾಡುತ್ತಿದೆ. ಪ್ರಬಲ ಸಮುದಾಯದ ನಾಯಕರು ತಮ್ಮ ತಮ್ಮ ಕ್ಷೇತ್ರಗಳ ಹಿತಾಸಕ್ತಿಗಾಗಿ ರಾಜಕೀಯವಾಗಿ ಹೊಂದಾಣಿಕೆ ಮಾಡಿಕೊಂಡಿರುವುದು, ಪಕ್ಷವನ್ನೇ ನಂಬಿದ ಸಾಮಾನ್ಯ ಕಾರ್ಯಕರ್ತರಿಗೆ ಮಾಡಿದ ದ್ರೋಹವಲ್ಲವೇ?

ಬಲಿಪಶುಗಳಾಗುತ್ತಿರುವ ದಲಿತ-ಹಿಂದುಳಿದ ಕಾರ್ಯಕರ್ತರು

ಪಕ್ಷದ ವರಿಷ್ಠರು ಮತ್ತು ಪ್ರಬಲ ಶಾಸಕರ ಈ ರಾಜಕೀಯ ಜೂಜಾಟದಲ್ಲಿ ಅಸಲಿ ಬಲಿಪಶುಗಳಾಗುತ್ತಿರುವುದು ತಳಮಟ್ಟದ ದಲಿತ ಮತ್ತು ಹಿಂದುಳಿದ ವರ್ಗದ ಕಾರ್ಯಕರ್ತರು. “ಹಿಂದೂತ್ವ, ಮೋದಿ” ಎಂಬ ಘೋಷಣೆಯೊಂದಿಗೆ ದುಡಿಯುವ ಇವರ ಶ್ರಮವನ್ನು, ಮೇಲ್ವರ್ಗದ ನಾಯಕರು ತಮ್ಮ ಸ್ವಾರ್ಥದ ಆಟಗಳಿಗೆ ಬಳಸಿಕೊಂಡು ಬಿಸಾಡುತ್ತಿದ್ದಾರೆ. ಪ್ರಬಲ ಸಮುದಾಯದ ಶಾಸಕರೇ ಈ ರೀತಿ ಪಕ್ಷದ ವಿರುದ್ಧ ಅಡ್ಡ ಮತದಾನ ಮಾಡುವುದು ಎಂದರೆ, ಅದು ಬಿಜೆಪಿಯ ಸಿದ್ಧಾಂತಕ್ಕೆ ಬಿದ್ದಿರುವ ಕೊಡಲಿ ಪೆಟ್ಟು.

ಇದನ್ನೂ ಓದಿ: BTDA ನೌಕರರ ಮೇಲಿನ ಪ್ರೀತಿ, ಸಂತ್ರಸ್ತರ ಮೇಲೇಕಿಲ್ಲ ಅಧ್ಯಕ್ಷರೇ? ಲಂಚಕೋರರಿಗೆ ರೆಡ್ ಕಾರ್ಪೆಟ್, ನೊಂದವರಿಗೆ ಕಣ್ಣೀರು-ಚಪ್ಪಲಿ ಸವೆತವೇ ಗತಿ!

ಸತ್ಯಶೋಧನೆಯೇ ಅಥವಾ ಸೋಗಲಾಡಿತನವೇ?

ಧರ್ಮಸ್ಥಳದಲ್ಲಿ ನಡೆಯುವ ಸಭೆ ಕೇವಲ ಒಂದು ನಾಟಕವಾಗಿ ಉಳಿಯಬಾರದು. ವಿಜಯೇಂದ್ರ ಅವರು ನಿಜವಾಗಿಯೂ ಗಟ್ಟಿತನ ಪ್ರದರ್ಶಿಸಬೇಕಾದರೆ, ಸಭೆಯ ನಂತರ ದ್ರೋಹಿಗಳ ಮುಖವಾಡ ಕಳಚಲೇಬೇಕು. ಕೇವಲ ಆಣೆ-ಪ್ರಮಾಣ ಮಾಡಿಸಿ, ತಪ್ಪಿತಸ್ಥರಿಗೆ ಬೆಂಬಲ ನೀಡಿ ಕೈ ತೊಳೆದುಕೊಂಡರೆ, ಬಿಜೆಪಿ ಮುಂದಿನ ದಿನಗಳಲ್ಲಿ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳಲಿದೆ.

ಬಿಜೆಪಿಯ ಹೈಕಮಾಂಡ್ ಈ ಮನೆಕಳ್ಳರನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳುತ್ತದೆಯೇ? ಅಥವಾ ಪ್ರಬಲ ಸಮುದಾಯದ ಓಲೈಕೆಗಾಗಿ ಮೌನಕ್ಕೆ ಶರಣಾಗುತ್ತದೆಯೇ? ಎಂದು ರಾಜ್ಯದ ಜನರು ಮತ್ತು ಪಕ್ಷದ ಕಾರ್ಯಕರ್ತರು ಕಾದು ನೋಡುತ್ತಿದ್ದಾರೆ. ರಾಜಕೀಯದಲ್ಲಿ ಅಧಿಕಾರ ಬರುತ್ತದೆ, ಹೋಗುತ್ತದೆ, ಆದರೆ ನಂಬಿಕೆಯನ್ನು ಕಳೆದುಕೊಂಡ ಪಕ್ಷವನ್ನು ಯಾವ ದೇವರು ಕೂಡ ಕಾಪಾಡಲು ಸಾಧ್ಯವಿಲ್ಲ. ಈಗ ವಿಜಯೇಂದ್ರ ಅವರು ನಿರ್ಧಾರ ತೆಗೆದುಕೊಳ್ಳಲೇಬೇಕು; ಇಲ್ಲವಾದರೆ, ಬರುವ ಚುನಾವಣೆಯಲ್ಲಿ ಕಮಲವು ತನ್ನ ಸೊಬಗನ್ನು ಸಂಪೂರ್ಣವಾಗಿ ಕಳೆದುಕೊಳ್ಳುವುದು ಖಚಿತ.

Praveen Yalligutti
Praveen Yalliguttihttp://asalisuddi.com
ಕನ್ನಡದ ವಿವಿಧ ಸುದ್ದಿ ಮಾಧ್ಯಮ ಸಂಸ್ಥೆಗಳಲ್ಲಿ ಸುಮಾರು 8 ವರ್ಷಗಳ ಕಾಲ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ ನನಗಿದೆ. ಸುದ್ದಿಗಳ ಅಸಲಿಯತ್ತನ್ನು ಮತ್ತು ನಿಖರವಾದ ಮಾಹಿತಿಯನ್ನು ಜನರಿಗೆ ತಲುಪಿಸಬೇಕು ಎನ್ನುವ ಉದ್ದೇಶದಿಂದ ಈಗ 'ಅಸಲಿ ಸುದ್ದಿ' (Asali Suddi) ಎನ್ನುವ ಸುದ್ದಿ ಸಂಸ್ಥೆಯನ್ನು ಆರಂಭಿಸಿದ್ದೇನೆ. ಸತ್ಯಕ್ಕೆ ಹತ್ತಿರವಾದ ಮತ್ತು ಜನೋಪಕಾರಿ ವರದಿಗಳನ್ನು ನೀಡುವುದೇ ನನ್ನ ಮೊದಲ ಆದ್ಯತೆ.
RELATED ARTICLES

Most Popular

Recent Comments