Homeರಾಜ್ಯBagalkot ಮರಳು ದರೋಡೆ: ಹೆಗ್ಗಣಗಳನ್ನು ಬಿಟ್ಟು ಬಿಲ ಮುಚ್ಚಿದ ಲೋಕಾಯುಕ್ತ! ಅಸಲಿ ಕಳ್ಳರು ಸೇಫ್?

Bagalkot ಮರಳು ದರೋಡೆ: ಹೆಗ್ಗಣಗಳನ್ನು ಬಿಟ್ಟು ಬಿಲ ಮುಚ್ಚಿದ ಲೋಕಾಯುಕ್ತ! ಅಸಲಿ ಕಳ್ಳರು ಸೇಫ್?

ಬಾಗಲಕೋಟೆ (Bagalkot) ಜಿಲ್ಲೆಯಾದ್ಯಂತ ಇತ್ತೀಚೆಗೆ ನಡೆದ ಲೋಕಾಯುಕ್ತ ಮತ್ತು ಜಿಲ್ಲಾಡಳಿತದ ಜಂಟಿ ಮರಳು ವಿರೋಧಿ ದಾಳಿಯ ಅಧಿಕೃತ ಅಂಕಿ-ಅಂಶಗಳ ದೊಡ್ಡ ಪಟ್ಟಿಯೇ ಸಾರ್ವಜನಿಕರ ಮುಂದಿದೆ. ತನಿಖಾ ದಂಡು ನದಿ ತೀರಗಳ ಮೇಲೆ ಮುಗಿಬಿದ್ದಿದೆ, ಜೆಸಿಬಿಗಳನ್ನು ಜಪ್ತಿ ಮಾಡಿದೆ, ನೂರಾರು ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿದ್ದರು ಎಂಬ ಹೂರಣದ ಪ್ರಕಟಣೆಗಳನ್ನು ಬಿಡುಗಡೆ ಮಾಡಲಾಗಿದೆ. ಆದರೆ, ಈ ಇಡೀ ಹಂಗಾಮಿ ಪ್ರಹಸನವನ್ನು ಸೂಕ್ಷ್ಮವಾಗಿ ಗಮನಿಸಿದರೆ ಜಿಲ್ಲೆಯ ಜನಸಾಮಾನ್ಯನಿಗೆ ಮೂಡುವ ಏಕೈಕ ಪ್ರಶ್ನೆ: “ಇದು ನಿಜವಾದ ತನಿಖೆಯೋ ಅಥವಾ ವ್ಯವಸ್ಥಿತ ಕಣ್ಣೊರೆಸುವ ತಂತ್ರವೋ?”

ಏಕೆಂದರೆ, ಪ್ರತಿ ಬಾರಿಯೂ ಅಧಿಕಾರಿಗಳ ಬಲೆಗೆ ಬೀಳುವುದು ಕೇವಲ ನದಿ ದಂಡೆಯಲ್ಲಿ ದಿನಗೂಲಿಗೆ ದುಡಿಯುವ ಬಡ ಕಾರ್ಮಿಕರು, ಟ್ರ್ಯಾಕ್ಟರ್ ಚಾಲಕರು ಅಥವಾ ಸಣ್ಣಪುಟ್ಟ ಮಧ್ಯವರ್ತಿಗಳು ಮಾತ್ರ. ಆದರೆ, ಹವಾನಿಯಂತ್ರಿತ ಕೊಠಡಿಗಳಲ್ಲಿ ಕುಳಿತು ಇಡೀ ಕರಾಳ ಸಾಮ್ರಾಜ್ಯವನ್ನು ನಿಯಂತ್ರಿಸುವ, ಪ್ರಕೃತಿಯನ್ನು ಸಾರಾಸಗಟಾಗಿ ಮಾರಾಟಕ್ಕಿಟ್ಟಿರುವ ಅಸಲಿ “ರಾಜಕೀಯ ತಿಮಿಂಗಿಲಗಳು” ಮಾತ್ರ ಕಾನೂನಿನ ಕೈಗೆ ಸಿಗದಂತೆ ಅತ್ಯಂತ ಸುರಕ್ಷಿತವಾಗಿವೆ. ಇದು ಕಳ್ಳನನ್ನು ಬಿಟ್ಟು ಕಳ್ಳನ ಹೆಗಲ ಮೇಲಿದ್ದ ಖಾಲಿ ಚೀಲವನ್ನು ಮಾತ್ರ ಹಿಡಿದು ಸಂಭ್ರಮಿಸುವ ಹಾಸ್ಯಾಸ್ಪದ ಮತ್ತು ನಾಟಕೀಯ ನಡೆ ಎನ್ನದೆ ಬೇರೇನೂ ಅಲ್ಲ?

Bagalkot ಮರಳು ದರೋಡೆ: ಹೆಗ್ಗಣಗಳನ್ನು ಬಿಟ್ಟು ಬಿಲ ಮುಚ್ಚಿದ ಲೋಕಾಯುಕ್ತ! ಅಸಲಿ ಕಳ್ಳರು ಸೇಫ್?
ಪತ್ರಿಕಾ ಪ್ರಕಟಣೆ

ಬಿಲ ಮುಚ್ಚುವ ನಾಟಕ ಮತ್ತು ಹೆಗ್ಗಣಗಳ ಮರುಜನ್ಮ

ಅಧಿಕಾರಿಗಳು ನಡೆಸುವ ಈ ಕಾರ್ಯಾಚರಣೆಗಳ ಒಟ್ಟಾರೆ ಸ್ವರೂಪ ಹೇಗಿದೆಯೆಂದರೆ, ಹೆಗ್ಗಣದ ಬಿಲದ ಮುಖಕ್ಕೆ ಮೇಲ್ನೋಟಕ್ಕೆ ಮಣ್ಣು ಮುಚ್ಚಿದ ಹಾಗೆ! ಆ ಮಣ್ಣು ಒಣಗುವ ಮುನ್ನವೇ ಒಳಗಿರುವ ಹೆಗ್ಗಣ ಹೇಗೆ ಮತ್ತೆ ದಾರಿ ಮಾಡಿಕೊಂಡು ರಾಜಾರೋಷವಾಗಿ ಹೊರಬರುತ್ತದೋ, ಹಾಗೆಯೇ ಅಧಿಕಾರಿಗಳ ಕಾರ್ಯಾಚರಣೆ ಮುಗಿದು ವಾರ ಕಳೆಯುವುದರೊಳಗೆ ನದಿ ದಂಡೆಗಳಲ್ಲಿ ಮರಳು ಮಾಫಿಯಾದ ನರರಾಕ್ಷಸರು ಮತ್ತೆ ಪ್ರತ್ಯಕ್ಷವಾಗುತ್ತಾರೆ. ಕೇವಲ ಗಾಳಿಯಲ್ಲಿ ಸದ್ದು ಮಾಡುವ ಇಂತಹ ದಾಳಿಗಳಿಂದ ದಂಧೆಗೆ ತಾತ್ಕಾಲಿಕ ವಿರಾಮ ಸಿಗಬಹುದೇ ವಿನಃ ಶಾಶ್ವತ ಕಡಿವಾಣ ಸಾಧ್ಯವಿಲ್ಲ ಎಂಬುದು ಈಗಾಗಲೇ ಸಾಬೀತಾಗಿದೆ.

ಜಿಲ್ಲೆಯ ಕೃಷ್ಣಾ, ಘಟಪ್ರಭಾ ಮತ್ತು ಮಲಪ್ರಭಾ ನದಿಗಳ ಒಡಲನ್ನು ಹಗಲು-ರಾತ್ರಿ ಎನ್ನದೆ ಹಿಟಾಚಿ ಮತ್ತು ಜೆಸಿಬಿ ಯಂತ್ರಗಳ ಮೂಲಕ ಬಗೆದು ಲೂಟಿ ಮಾಡಲಾಗುತ್ತಿದೆ. ನದಿಗಳ ನೈಸರ್ಗಿಕ ಹರಿವಿನ ದಿಕ್ಕೇ ಬದಲಾಗುತ್ತಿದೆ, ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿಯುತ್ತಿದೆ ಮತ್ತು ಮಳೆಲ್ಲಿ ಕೃತಕ ಪ್ರವಾಹಗಳು ಸೃಷ್ಟಿಯಾಗಿ ರೈತರ ಬದುಕು ಬೀದಿಗೆ ಬೀಳುತ್ತಿದೆ. ಇಷ್ಟೆಲ್ಲಾ ಭೀಕರ ನಷ್ಟಗಳಾಗುತ್ತಿದ್ದರೂ, ವ್ಯವಸ್ಥೆಯು ಕೇವಲ “ನಮಗೇಕೆ ಬೇಕು ಉಸಾಬರಿ” ಎಂಬ ದಿವ್ಯ ಮೌನವನ್ನು ಆಚರಿಸುತ್ತಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ: Bagalkotಯ ‘ಮರಳು’ ಮಾಫಿಯಾ: ನದಿಗಳ ರಕ್ತ ಹೀರುತ್ತಿರುವ ‘ರಾಜಕೀಯ’ ನರಭಕ್ಷಕರು! ದಂಧೆಯ ಅಸಲಿ ಕಿಂಗ್‌ಪಿನ್‌ಗಳು ಯಾರು ಗೊತ್ತಾ?

ಅಧಿಕಾರ ಶಾಹಿ ಮತ್ತು ಕಪ್ಪು ಹಣದ ‘ಮೌನ ಮೈತ್ರಿ’

ಯಾರದೇ ಬೆಂಬಲವಿಲ್ಲದೆ, ಬಾಗಲಕೋಟೆ (Bagalkot) ಜಿಲ್ಲಾಡಳಿತದ ಕಣ್ಣೆದುರೇ ನೂರಾರು ಲಾರಿಗಳು ಮರಳನ್ನು ಸಾಗಿಸಲು ಹೇಗೆ ಸಾಧ್ಯ? ಈ ಸರಳ ಪ್ರಶ್ನೆಯಲ್ಲೇ ಇಡೀ ದಂಧೆಯ ಅಸಲಿ ಮುಖವಾಡ ಕಳಚಿಬೀಳುತ್ತದೆ. ಜಿಲ್ಲೆಯ ಪ್ರಭಾವಿ ರಾಜಕಾರಣಿಗಳು, ಅವರ ಆಪ್ತ ವಲಯ ಹಾಗೂ ಭ್ರಷ್ಟ ಅಧಿಕಾರಿಗಳ ತ್ರಿವೇಣಿ ಸಂಗಮವಿಲ್ಲದೆ ಇಂತಹ ಬೃಹತ್ ಹಗಲು ದರೋಡೆ ಎಂದಿಗೂ ಸಾಧ್ಯವಿಲ್ಲ. ಮಾಧ್ಯಮಗಳಲ್ಲಿ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರ ಆಕ್ರೋಶದ ಕಟ್ಟೆ ಒಡೆದಾಗ ಮಾತ್ರ ನಿದ್ದೆಯಿಂದ ಎಚ್ಚರಗೊಳ್ಳುವ ಸರ್ಕಾರಿ ಯಾಂತ್ರಿಕತೆ, ಕೇವಲ ಸಾರ್ವಜನಿಕರ ಕೋಪವನ್ನು ತಣ್ಣಗಾಗಿಸಲು ಮತ್ತು ತಮ್ಮ ಚರ್ಮ ಉಳಿಸಿಕೊಳ್ಳಲು ಇಂತಹ ನಾಟಕೀಯ ದಾಳಿಗಳನ್ನು ಆಯೋಜಿಸುತ್ತದೆ.

ಈ ದಂಧೆಯಿಂದ ಹರಿದುಬರುವ ಅಗಾಧ ಪ್ರಮಾಣದ ಕಪ್ಪು ಹಣದ ‘ಹಫ್ತಾ’ ಯಾರ ಯಾರ ಬ್ಯಾಂಕ್ ಖಾತೆಗಳನ್ನು, ಯಾರ ರಾಜಕೀಯ ನಿಧಿಗಳನ್ನು ತುಂಬಿಸುತ್ತಿದೆ ಎಂಬುದು ಜಿಲ್ಲೆಯ ಪ್ರತಿಯೊಬ್ಬ ನಾಗರಿಕನಿಗೂ ಗೊತ್ತು. ರಕ್ಷಣೆಯ ಭರವಸೆ ನೀಡಿ ಮಾಫಿಯಾದಿಂದ ನಿಯಮಿತವಾಗಿ ಕಪ್ಪಕಾಣಿಕೆ ಸ್ವೀಕರಿಸುವ ಗಣ್ಯರ ಪಟ್ಟಿಯನ್ನು ಮುಟ್ಟುವ ಧೈರ್ಯ ಮಾತ್ರ ಯಾವುದೇ ತನಿಖಾ ಸಂಸ್ಥೆಗಳಿಗೂ ಇಲ್ಲವಾಗಿದೆ. ಅಕ್ರಮದ ಬೇರುಗಳನ್ನು ಸವರುವ ಬದಲು, ಕೇವಲ ಎಲೆಗಳನ್ನು ಕತ್ತರಿಸಿ “ನಾವು ದೊಡ್ಡ ಬೇಟೆ ಆಡಿದ್ದೇವೆ” ಎಂದು ಪೋಸ್ ಕೊಡುವುದು ಅಧಿಕಾರಿಗಳ ಚಾಳಿಯಾಗಿದೆ.

Bagalkot ಮರಳು ದರೋಡೆ: ಹೆಗ್ಗಣಗಳನ್ನು ಬಿಟ್ಟು ಬಿಲ ಮುಚ್ಚಿದ ಲೋಕಾಯುಕ್ತ! ಅಸಲಿ ಕಳ್ಳರು ಸೇಫ್?

ಕೋಟ್ಯಂತರ ರೂಪಾಯಿ ರಾಜಸ್ವ ಧನಕ್ಕೆ ಬಿದ್ದ ಕೊಕ್ಕೆ

ಅಕ್ರಮ ಮರಳು ದಂಧೆಯಿಂದ ಕೇವಲ ಪರಿಸರ ಅಷ್ಟೇ ಅಲ್ಲ, ಸರ್ಕಾರದ ಖಜಾನೆಗೂ ಭಾರಿ ನಷ್ಟ ಉಂಟಾಗುತ್ತಿದೆ. ನಿಯಮಾನುಸಾರ ನಡೆಯಬೇಕಾದ ಮರಳು ವಿಲೇವಾರಿ ಪ್ರಕ್ರಿಯೆಯನ್ನು ಹಳ್ಳ ಹಿಡಿಸಿರುವ ಈ ಮಾಫಿಯಾ, ಸರ್ಕಾರಕ್ಕೆ ಸಂದಾಯವಾಗಬೇಕಾದ ಕೋಟ್ಯಂತರ ರೂಪಾಯಿಗಳ ರಾಜಸ್ವ ಧನಕ್ಕೆ (ರಾಯಲ್ಟಿ) ದೊಡ್ಡ ಕೊಕ್ಕೆ ಹಾಕಿದೆ. ಈ ತೆರಿಗೆ ಹಣ ಸಾರ್ವಜನಿಕ ಅಭಿವೃದ್ಧಿ ಕೆಲಸಗಳಿಗೆ ಬಳಕೆಯಾಗಬೇಕಿತ್ತು. ಆದರೆ ಭ್ರಷ್ಟರ ಮೈತ್ರಿಯಿಂದಾಗಿ ಇದು ನೇರವಾಗಿ ಖಾಸಗಿ ವ್ಯಕ್ತಿಗಳ ಇಳಿಜಾರು ಜೇಬುಗಳನ್ನು ತುಂಬಿಸುತ್ತಿದೆ.

ದಾಳಿ ನಡೆದಾಗ “ಅಕ್ರಮ ತಡೆದಿದ್ದೇವೆ” ಎಂದು ಬೀಗುವ ಅಧಿಕಾರಿಗಳು, ಈ ದಂಧೆಯ ಹಿಂದಿರುವ ಹೂಡಿಕೆದಾರರು ಯಾರು? ವಶಪಡಿಸಿಕೊಂಡ ವಾಹನಗಳ ಅಸಲಿ ಮಾಲೀಕರು ಯಾರು? ಎಂಬ ಮೂಲಭೂತ ತನಿಖೆಗೆ ಇಳಿಯುವುದೇ ಇಲ್ಲ. ವಾಹನ ಸಂಖ್ಯೆಗಳನ್ನು ಆಧರಿಸಿ ನಿಜವಾದ ದಂಧೆಕೋರರ ಮೇಲೆ ಕಾನೂನು ಸಮರ ಸಾರುವ ಬದಲು, ಸ್ಥಳದಲ್ಲಿದ್ದ ಬಡ ಕೂಲಿ ಆಳುಗಳನ್ನು ಜೈಲಿಗಟ್ಟಿ ಕೈತೊಳೆದುಕೊಳ್ಳುವ ಪ್ರವೃತ್ತಿ ನಿರಂತರವಾಗಿ ಸಾಗಿದೆ.

Bagalkot ಮರಳು ದರೋಡೆ: ಹೆಗ್ಗಣಗಳನ್ನು ಬಿಟ್ಟು ಬಿಲ ಮುಚ್ಚಿದ ಲೋಕಾಯುಕ್ತ! ಅಸಲಿ ಕಳ್ಳರು ಸೇಫ್?

ಜಾರಿಕೊಳ್ಳುವ ರಾಜಕೀಯ ಅಸ್ತ್ರಗಳು ಮತ್ತು ಭವಿಷ್ಯದ ಆತಂಕ

ಈ ಮಹಾ ದರೋಡೆಯ ಕುರಿತು ಅಧಿಕಾರದಲ್ಲಿರುವ ನಾಯಕರನ್ನು ಅಥವಾ ಸ್ಥಳೀಯ ಜನಪ್ರತಿನಿಧಿಗಳನ್ನು ಪ್ರಶ್ನಿಸಿದರೆ, “ಕಾನೂನು ತನ್ನ ಕೆಲಸ ತಾನೇ ಮಾಡುತ್ತದೆ, ತಪ್ಪಿತಸ್ಥರನ್ನು ಜೈಲಿಗಟ್ಟುತ್ತೇವೆ, ಭ್ರಷ್ಟಾಚಾರಕ್ಕೆ ನಮ್ಮ ಸರ್ಕಾರದಲ್ಲಿ ಅವಕಾಶವಿಲ್ಲ” ಎಂಬ ಅತ್ಯಂತ ನಯವಂಚಕ ಸಿದ್ದ ಸೂತ್ರದ ಉತ್ತರಗಳು ಸಿದ್ಧವಿರುತ್ತವೆ. ಆದರೆ ಅಸಲಿ ಕಳ್ಳರೇ ನ್ಯಾಯಾಧೀಶರ ಸ್ಥಾನದಲ್ಲಿ ಕುಳಿತಾಗ ಅಥವಾ ಅವರದೇ ಬೆಂಬಲಿಗರು ದಂಧೆಯ ಮುಂಚೂಣಿಯಲ್ಲಿದ್ದಾಗ ನ್ಯಾಯ ಸಿಗುವುದಾದರೂ ಹೇಗೆ? ರಕ್ಷಕನೇ ಭಕ್ಷಕನಾದ ಮೇಲೆ ಈ ಸಿದ್ದ ಸೂತ್ರದ ಹೇಳಿಕೆಗಳಿಗೆ ಯಾವ ಬೆಲೆಯೂ ಇರುವುದಿಲ್ಲ.

ಬಾಗಲಕೋಟೆ ಜಿಲ್ಲೆಯ ನೈಸರ್ಗಿಕ ಸಂಪತ್ತನ್ನು ಈ ರೀತಿ ನಿರ್ದಯವಾಗಿ ಲೂಟಿ ಮಾಡಲು ಬಿಟ್ಟರೆ, ಮುಂದಿನ ಕೆಲವು ವರ್ಷಗಳಲ್ಲಿ ಇಡೀ ಜಿಲ್ಲೆ ಮರಭೂಮಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ರೈತರಿಗೆ ಕೃಷಿ ಮಾಡಲು ನೀರಿಲ್ಲದ, ಕುಡಿಯಲು ನೀರಿಲ್ಲದ ಭೀಕರ ಪರಿಸ್ಥಿತಿ ಎದುರಾಗಲಿದೆ. ಪರಿಸರದ ಸಮತೋಲನ ಸಂಪೂರ್ಣವಾಗಿ ನಾಶವಾಗುವ ಮುನ್ನವೇ ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯತೆ ಇದೆ.

ಬೇಕಿರುವುದು ಕಾಟಾಚಾರದ ದಾಳಿಯಲ್ಲ, ಕಠಿಣ ಇಚ್ಛಾಶಕ್ತಿ!

ಎಲ್ಲಿಯವರೆಗೆ ಈ ಅಕ್ರಮ ಮರಳು ಸಾಮ್ರಾಜ್ಯದ ಆಧಾರ ಸ್ತಂಭಗಳಾಗಿರುವ ರಾಜಕೀಯ ಧುರೀಣರನ್ನು, ಅವರ ಹಿಂಬಾಲಕರನ್ನು ಕಾಲರ್ ಹಿಡಿದು ಜೈಲಿನ ಕಂಬಿಗಳ ಹಿಂದೆ ತಳ್ಳುವ ನೈಜ ಇಚ್ಛಾಶಕ್ತಿಯನ್ನು ಕಾನೂನು ಮತ್ತು ಲೋಕಾಯುಕ್ತ ಸಂಸ್ಥೆ ಪ್ರದರ್ಶಿಸುವುದಿಲ್ಲವೋ, ಅಲ್ಲಿಯವರೆಗೆ ಇಂತಹ ಸಾವಿರ ದಾಳಿಗಳು ನಡೆದರೂ ಪ್ರಯೋಜನ ಶೂನ್ಯ. ಸಾರ್ವಜನಿಕ ಕಣ್ಣಿಗೆ ಧೂಳು ಎರಚುವ ಇಂತಹ “ನೆಪ ಮಾತ್ರದ ನಾಟಕಗಳು” ಇನ್ನು ಮುಂದೆ ನಡೆಯುವುದಿಲ್ಲ.

ಚಿಲ್ಲರೆ ಕಳ್ಳರನ್ನು ಹಿಡಿದು ಪ್ರಕರಣ ದಾಖಲಿಸುವುದನ್ನು ನಿಲ್ಲಿಸಿ, ದಂಧೆಯ ಮೂಲ ಬೇರನ್ನೇ ಸದೆಬಡಿಯುವ ಪ್ರಾಮಾಣಿಕ ಅಸ್ತ್ರ ಪ್ರಯೋಗವಾಗಬೇಕಿದೆ. ಜಿಲ್ಲಾಡಳಿತ ಮತ್ತು ತನಿಖಾ ಸಂಸ್ಥೆಗಳು ಕೇವಲ ಬಿಲ ಮುಚ್ಚುವ ಕೆಲಸ ಬಿಟ್ಟು, ಒಳಗಿರುವ ಅಸಲಿ ಹೆಗ್ಗಣಗಳನ್ನು ಹೊರಗೆಳೆದು ಶಿಕ್ಷಿಸಲಿ. ಇಲ್ಲದಿದ್ದರೆ, ಸಾರ್ವಜನಿಕರೇ ವ್ಯವಸ್ಥೆಯ ವಿರುದ್ಧ ಬೀದಿಗಿಳಿದು ಹೋರಾಡುವುದು ಅನಿವಾರ್ಯವಾಗುತ್ತದೆ.

Praveen Yalligutti
Praveen Yalliguttihttp://asalisuddi.com
ಕನ್ನಡದ ವಿವಿಧ ಸುದ್ದಿ ಮಾಧ್ಯಮ ಸಂಸ್ಥೆಗಳಲ್ಲಿ ಸುಮಾರು 8 ವರ್ಷಗಳ ಕಾಲ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ ನನಗಿದೆ. ಸುದ್ದಿಗಳ ಅಸಲಿಯತ್ತನ್ನು ಮತ್ತು ನಿಖರವಾದ ಮಾಹಿತಿಯನ್ನು ಜನರಿಗೆ ತಲುಪಿಸಬೇಕು ಎನ್ನುವ ಉದ್ದೇಶದಿಂದ ಈಗ 'ಅಸಲಿ ಸುದ್ದಿ' (Asali Suddi) ಎನ್ನುವ ಸುದ್ದಿ ಸಂಸ್ಥೆಯನ್ನು ಆರಂಭಿಸಿದ್ದೇನೆ. ಸತ್ಯಕ್ಕೆ ಹತ್ತಿರವಾದ ಮತ್ತು ಜನೋಪಕಾರಿ ವರದಿಗಳನ್ನು ನೀಡುವುದೇ ನನ್ನ ಮೊದಲ ಆದ್ಯತೆ.
RELATED ARTICLES

Most Popular

Recent Comments