Homeರಾಜ್ಯVinay Vs Joshi: 'ಸೇಡಿನ' ರಾಜಕಾರಣದ ಅನಾವರಣ; ಕುಲಕರ್ಣಿ ಮುಗಿಸಲು ನಡೆದ 'ಸಿಸ್ಟಮ್ಯಾಟಿಕ್' ಗೇಮ್ ಪ್ಲಾನ್?

Vinay Vs Joshi: ‘ಸೇಡಿನ’ ರಾಜಕಾರಣದ ಅನಾವರಣ; ಕುಲಕರ್ಣಿ ಮುಗಿಸಲು ನಡೆದ ‘ಸಿಸ್ಟಮ್ಯಾಟಿಕ್’ ಗೇಮ್ ಪ್ಲಾನ್?

Vinay Vs Joshi: ಧಾರವಾಡ ಜಿಲ್ಲೆಯ ರಾಜಕಾರಣವೆಂದರೆ ಅದು ಒಂದು ಕಾಲಕ್ಕೆ ಸಾಂಸ್ಕೃತಿಕ ಘನತೆಯ ಕೇಂದ್ರವಾಗಿತ್ತು. ಆದರೆ ಕಳೆದ ದಶಕದಲ್ಲಿ ಅದು ದ್ವೇಷ, ಸೇಡು ಮತ್ತು ವ್ಯವಸ್ಥಿತ ರಾಜಕೀಯ ತಂತ್ರಗಾರಿಕೆಯ ಅಖಾಡವಾಗಿ ಬದಲಾಗಿದೆ. ಈ ಬದಲಾವಣೆಯ ಕೇಂದ್ರಬಿಂದುಗಳೇ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮತ್ತು ಕಾಂಗ್ರೆಸ್ ನಾಯಕ ವಿನಯ್ ಕುಲಕರ್ಣಿ. ಜಿಲ್ಲೆಯ ರಾಜಕೀಯದ ಮೇಲೆ ಸರ್ವಾಧಿಕಾರಿಯಂತೆ ಹಿಡಿತ ಸಾಧಿಸಿದ್ದ ಜೋಶಿಯವರಿಗೆ, ವಿನಯ್ ಕುಲಕರ್ಣಿಯವರ ಬೆಳೆಯುತ್ತಿದ್ದ ವರ್ಚಸ್ಸು ಮತ್ತು ಅವರ ಹುಂಬ ಧೋರಣೆ ನುಂಗಲಾರದ ತುತ್ತಾಗಿತ್ತು.

ಕಲಾಭವನದ ಕಿಡಿ: ಅಹಂಕಾರ ಮತ್ತು ಪ್ರತಿಷ್ಠೆಯ ಸಂಘರ್ಷ

ಈ ಮಹಾ ಸಂಘರ್ಷಕ್ಕೆ ಮುನ್ನುಡಿ ಬರೆದದ್ದು ಧಾರವಾಡದ ಕಲಾಭವನದ ಆ ಒಂದು ಘಟನೆ. 2013-18 ರವರೆಗೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿತ್ತು. ಆಗ ವಿನಯ್ ಕುಲಕರ್ಣಿ ಧಾರವಾಡ ಜಿಲ್ಲಾ ಉಸ್ತುವಾರಿ ಮಂತ್ರಿ ಆಗಿದ್ದರು. ಆಗ ಧಾರವಾಡದ ಕಲಾಭವನದ ಎದುರು ಒಂದು ಸರ್ಕಾರಿ ಕಾರ್ಯಕ್ರಮ ನಡೆಯುತ್ತದೆ. ಆ ಕಾರ್ಯಕ್ರಮಕ್ಕೆ ಕೇಂದ್ರ ಸಚಿವರಾಗಿದ್ದ ಧರ್ಮೇಂದ್ರ ಪ್ರಧಾನ್ ಅವರು ಬಂದಿರುತ್ತಾರೆ. ಈ ವೇಳೆ ಪ್ರಲ್ಹಾದ್ ಜೋಶಿ, ಜಗದೀಶ್ ಶೆಟ್ಟರ್, ಅರವಿಂದ್ ಬೆಲ್ಲದ್ ಸೇರಿದಂತೆ ಅನೇಕ ಬಿಜೆಪಿ ನಾಯಕರಿಂದಲೇ ವೇದಿಕೆ ತುಂಬಿರುತ್ತದೆ. ಇದು ಸರ್ಕಾರಿ ಕಾರ್ಯಕ್ರಮವಾಗಿದ್ದರೂ, ಪಕ್ಷದ ಕಾರ್ಯಕ್ರಮವೇನೋ ಎನ್ನುವಂತೆ ರೂಪಿತವಾಗಿರುತ್ತದೆ.

ಈ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿದ್ದ ವಿನಯ್ ಕುಲಕರ್ಣಿ ಅವರು ಬರಬೇಕಿರುತ್ತದೆ, ಆದರೆ ಅವರ ಹೆಸರು ಆಹ್ವಾನ ಪತ್ರಿಕೆಗೆ ಮಾತ್ರ ಸೀಮಿತವಾಗಿರುತ್ತದೆ. ಅವರಿಗೆ ವೈಯಕ್ತಿಕವಾಗಿ ಹೋಗಿ ಆಹ್ವಾನ ನೀಡಿರುವುದಿಲ್ಲ. ಕೊನೆಗೆ ಕಾರ್ಯಕ್ರಮ ಆರಂಭವಾಗುವ ಸಮಯಕ್ಕೆ ವಿನಯ್ ಕುಲಕರ್ಣಿ ಅವರಿಗೆ ಕಾಲ್ ಮಾಡಿ ಆಹ್ವಾನಿಸಲಾಗುತ್ತದೆ. ಆಗ ವಿನಯ್ ಅಲ್ಲಿಗೆ ಹೋಗುತ್ತಾರೆ. ಆ ಇಡೀ ವೇದಿಕೆ ನೋಡಿದಾಗ ಬಿಜೆಪಿಗರಿಂದಲೇ ತುಂಬಿತುಳುಕುತ್ತಿರುತ್ತದೆ. ಮತ್ತೆ ಅಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಿಗಬೇಕಿದ್ದ ಪ್ರೋಟೋಕಾಲ್ ಕೂಡ ಸಿಗುವುದಿಲ್ಲ.

ಕೇಂದ್ರ ಸಚಿವರ ಸಮ್ಮುಖದಲ್ಲೇ ತನ್ನ ಅಸ್ತಿತ್ವಕ್ಕೆ ಧಕ್ಕೆ ಬಂದಾಗ ಸೀಡಿಮಿಡಿಗೊಂಡ ವಿನಯ್, ಅಂದು ಪ್ರಲ್ಹಾದ್ ಜೋಶಿಯವರ ಎದುರೇ ಏರುಧ್ವನಿಯಲ್ಲಿ ಕಿಡಿಕಾರಿದ್ದರು. ಜಿಲ್ಲೆಯಲ್ಲಿ ಯಾರೂ ತನ್ನನ್ನು ಪ್ರಶ್ನಿಸಬಾರದು ಎಂಬ ಅಲಿಖಿತ ನಿಯಮ ಪಾಲಿಸುತ್ತಿದ್ದ ಜೋಶಿಯವರಿಗೆ, ಸಾರ್ವಜನಿಕವಾಗಿ ಎದುರಾದ ಈ ಅವಮಾನವು ವೈಯಕ್ತಿಕ ಪ್ರತಿಷ್ಠೆಯ ಪ್ರಶ್ನೆಯಾಯಿತು. ಅಂದಿನ ಆ ಕಿಡಿಯೇ ಮುಂದೆ ಜಿಲ್ಲೆಯ ರಾಜಕಾರಣವನ್ನೇ ದಹಿಸುವ ಕಾಡ್ಗಿಚ್ಚಾಗಿ ಬದಲಾಯಿತು.

ಪಂಚಮಸಾಲಿ ಕಾರ್ಡ್: ಸದ್ದುಗದ್ದಲವಿಲ್ಲದ ಸೈಲೆಂಟ್ ಆಪರೇಷನ್

Vinay Vs Joshi: ವಿನಯ್ ಕುಲಕರ್ಣಿ ಅವರು ಪಂಚಮಸಾಲಿ ಲಿಂಗಾಯತ ಸಮುದಾಯದ ಸಮರ್ಥ ನಾಯಕನಾಗಿ ಹೊರಹೊಮ್ಮುತ್ತಿದ್ದುದು ಜೋಶಿಯವರ ನಿದ್ದೆಗೆಡಿಸಿತ್ತು. ಲಿಂಗಾಯತ ಮತ ಬ್ಯಾಂಕ್ ಮೇಲೆ ಹಿಡಿತ ಸಾಧಿಸದೆ ಧಾರವಾಡದಲ್ಲಿ ಸುದೀರ್ಘ ಕಾಲ ಉಳಿಯುವುದು ಅಸಾಧ್ಯ ಎಂಬುದು ಜೋಶಿಯವರಿಗೆ ತಿಳಿದಿತ್ತು. ಹೀಗಾಗಿಯೇ, ವಿನಯ್ ಅವರ ಶಕ್ತಿಯನ್ನು ಕುಂದಿಸಲು “ಲಿಂಗಾಯತ ವರ್ಸಸ್ ಲಿಂಗಾಯತ” ಎಂಬ ತಂತ್ರಗಾರಿಕೆಯನ್ನು ರೂಪಿಸಲಾಯಿತು ಎನ್ನುತ್ತಾರೆ ರಾಜಕೀಯ ಪಂಡಿತರು. ಈ ರಾಜಕೀಯ ಗೇಮ್ ಪ್ಲಾನ್‌ನ ಭಾಗವಾಗಿಯೇ ಯೋಗೇಶ್ ಗೌಡನಂತಹ ಸ್ಥಳೀಯ ನಾಯಕರನ್ನು ವಿನಯ್ ವಿರುದ್ಧ ಎತ್ತಿಕಟ್ಟುವ ಕೆಲಸ ಸದ್ದಿಲ್ಲದೆ ನಡೆಯಿತು.

ಇದನ್ನೂ ಓದಿ: Vinay Kulkarni: ಜನವರಿಯಲ್ಲೇ ರೆಡಿಯಾಗಿತ್ತಾ ಜನಿ’ವಾರ್’ ಕುಣಿಕೆ? ಅವರ ಮುಂದಿನ ಪ್ಲ್ಯಾನ್ ಏನು?

ಯೋಗೇಶ್ ಗೌಡ ಹತ್ಯೆ: ರೌಡಿಶೀಟರ್‌ನನ್ನು ‘ಹುತಾತ್ಮ’ನನ್ನಾಗಿಸಿದ ಬಿಜೆಪಿ!

2018ರ ವಿಧಾನಸಭಾ ಚುನಾವಣೆಯ ಹೊತ್ತಿಗೆ ಯೋಗೇಶ್ ಗೌಡ ಹತ್ಯೆ ಪ್ರಕರಣವು ಜಿಲ್ಲೆಯ ರಾಜಕೀಯದ ಗತಿಯನ್ನೇ ಬದಲಿಸಿತು. ಕ್ರಿಮಿನಲ್ ಹಿನ್ನೆಲೆಯಿದ್ದ ಒಬ್ಬ ರೌಡಿಶೀಟರ್ ಹತ್ಯೆಯನ್ನು ಬಿಜೆಪಿ ತನ್ನ ಅತ್ಯುನ್ನತ ರಾಜಕೀಯ ಅಸ್ತ್ರವನ್ನಾಗಿ ಮಾಡಿಕೊಂಡಿತು. ಹೆಬ್ಬಳ್ಳಿಗೆ ಕೇಂದ್ರ ಸಚಿವ ಅಮಿತ್ ಶಾ ಬಂದಿದ್ದಾಗ ನಡೆದ ಘಟನೆಯಂತೂ ಇತಿಹಾಸದಲ್ಲೇ ಅಚ್ಚರಿಯದ್ದು. ರಾಷ್ಟ್ರೀಯ ನಾಯಕರ ಫೋಟೋಗಳ ಪಕ್ಕದಲ್ಲಿ ಯೋಗೇಶ್ ಗೌಡನ ಫೋಟೋ ಇಟ್ಟು ಗೌರವಿಸಿದ್ದು, ಬಿಜೆಪಿಯು ವಿನಯ್ ಕುಲಕರ್ಣಿ ಅವರನ್ನು ರಾಜಕೀಯವಾಗಿ ಹೂತು ಹಾಕಲು ಎಂತಹ ತಂತ್ರಕ್ಕೂ ಸಿದ್ಧವಾಗಿತ್ತು ಎಂಬುದನ್ನು ಸಾಬೀತುಪಡಿಸಿತು. ಚುನಾವಣೆ ಗೆಲ್ಲಲು ಒಬ್ಬ ರೌಡಿಶೀಟರ್‌ನನ್ನು ಸಮುದಾಯದ ಬಲಿದಾನಿ ಎಂಬಂತೆ ಬಿಂಬಿಸಿದ್ದು ಬಿಜೆಪಿಯ ಚಾಣಾಕ್ಷ ನಡೆ ಎಂದು ಕರೆಸಿಕೊಂಡರೂ, ಅದು ನೈತಿಕ ರಾಜಕಾರಣದ ಪತನಕ್ಕೆ ಸಾಕ್ಷಿಯಾಯಿತು.

ಕೇಂದ್ರದ ಅಬ್ಬರ ಮತ್ತು ‘ಹೈಕಮಾಂಡ್’ ಸ್ಕ್ರಿಪ್ಟ್

ಅಮಿತ್ ಶಾ ಅವರು ವೇದಿಕೆಯಲ್ಲಿ ನಿಂತು “ವಿನಯ್ ಕುಲಕರ್ಣಿ ನೀನು ಪಾತಾಳದಲ್ಲಿದ್ದರೂ ಹಿಡಿದು ತರುತ್ತೇವೆ” ಎಂದು ಅಬ್ಬರಿಸಿದ್ದು ಕೇವಲ ಚುನಾವಣಾ ಭಾಷಣವಾಗಿರಲಿಲ್ಲ. ಅದು ಇಡೀ ಸರ್ಕಾರಿ ಯಂತ್ರಕ್ಕೆ ನೀಡಿದ ಸೂಚನೆಯಂತೆ ಇತ್ತು. ಒಬ್ಬ ಕೇಂದ್ರ ಗೃಹ ಸಚಿವರು ರಾಜ್ಯದ ಒಬ್ಬ ಶಾಸಕನ ವಿರುದ್ಧ ಇಂತಹ ಪದಬಳಕೆ ಮಾಡಿದ್ದು, ಅದರ ಹಿಂದೆ ಸ್ಥಳೀಯವಾಗಿ ಬರೆದುಕೊಟ್ಟ ಸ್ಕ್ರಿಪ್ಟ್ ಇತ್ತು ಎಂಬ ಮಾತುಗಳು ಇಂದಿಗೂ ಸಜೀವವಾಗಿವೆ. ಇತ್ತ ಬಿ.ಎಸ್. ಯಡಿಯೂರಪ್ಪ ಅವರು ಕೂಡ ಲಿಂಗಾಯತ ಮತಗಳನ್ನು ಒಡೆಯುವ ಭೀತಿಯಿಂದಾಗಿ, ಜೋಶಿ ಬಣದ ಒತ್ತಡಕ್ಕೆ ಮಣಿದು “24 ಗಂಟೆಯಲ್ಲಿ ಸಿಬಿಐಗೆ ನೀಡುತ್ತೇವೆ” ಎಂಬ ಭರವಸೆ ನೀಡಬೇಕಾಯಿತು. ಇದು ಒಬ್ಬ ಲಿಂಗಾಯತ ನಾಯಕನ ವಿರುದ್ಧ ಮತ್ತೊಬ್ಬ ಲಿಂಗಾಯತ ನಾಯಕನನ್ನು ಗುರಾಣಿಯನ್ನಾಗಿ ಬಳಸಿಕೊಂಡ ಹಂತವಾಗಿತ್ತು ಎನ್ನುವುದು ಯಡಿಯೂರಪ್ಪ ಅಭಿಮಾನಿಗಳ ಮಾತಾಗಿದೆ…

ಸಿಬಿಐ ತನಿಖೆ: ಅದು ಕಾನೂನು ಹೋರಾಟವೋ ಅಥವಾ ಬಿಜೆಪಿಯ ಸ್ಕ್ರಿಪ್ಟೋ?

2019ರಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ, ಹಳೆಯ ಭರವಸೆಯಂತೆ ಯೋಗೇಶ್ ಗೌಡ ಪ್ರಕರಣವು ಸಿಬಿಐ ಪಾಲಾಯಿತು. 2020 ಸೆಪ್ಟೆಂಬರ್‌ನಲ್ಲಿ ವಿನಯ್ ಕುಲಕರ್ಣಿ ಅವರನ್ನು ವಶಕ್ಕೆ ಪಡೆದ ನಂತರ ನಡೆದ ಬೆಳವಣಿಗೆಗಳು ಅತ್ಯಂತ ಆತಂಕಕಾರಿಯಾಗಿದ್ದವು. ತನಿಖೆಯ ನೆಪದಲ್ಲಿ ವಿನಯ್ ಅವರ ಸುತ್ತಮುತ್ತ ಇದ್ದ ಬೆಂಬಲಿಗರನ್ನು ವಿಚಾರಣೆಗೆ ಕರೆಸಿ ದೈಹಿಕವಾಗಿ ಜರ್ಜರಿತಗೊಳಿಸಲಾಯಿತು. ವಿನಯ್ ಅವರು ಒಂದು ವೇಳೆ ಕಾನೂನು ಹೋರಾಟದಲ್ಲಿ ಗೆದ್ದು ಹೊರಬಂದರೂ, ಅವರ ಸುತ್ತ ರಾಜಕೀಯವಾಗಿ ಯಾರೂ ಇರಬಾರದು ಎಂಬಂತೆ ಅವರನ್ನು ಅನಾಥಗೊಳಿಸುವ ಹುನ್ನಾರ ಈ ದಾಳಿಯ ಹಿಂದೆ ಎದ್ದು ಕಾಣುತ್ತಿತ್ತು. ಅತ್ಯಂತ ಆಶ್ಚರ್ಯದ ಸಂಗತಿಯೆಂದರೆ, ಸಿಬಿಐಗೆ ಸಾಕ್ಷಿಗಳ ಪಟ್ಟಿ ಮತ್ತು ಮಾಹಿತಿಯನ್ನು ಪೂರೈಸುತ್ತಿದ್ದುದು ಪೊಲೀಸ್ ಇಲಾಖೆಯಲ್ಲ, ಬದಲಾಗಿ ಬಿಜೆಪಿಯ ಆಪ್ತ ವಲಯದ ಖಾಸಗಿ ವ್ಯಕ್ತಿಗಳು ಎನ್ನುವುದು ಇಡೀ ವ್ಯವಸ್ಥೆಯ ಪಾರದರ್ಶಕತೆಯನ್ನು ಪ್ರಶ್ನಿಸುವಂತೆ ಮಾಡಿತು. ಹಿರಿಯ ವಕೀಲ ಬಾಲನ್ ಅವರು ಈ ಚಾರ್ಜ್‌ಶೀಟ್ ಅನ್ನು “ಬಿಜೆಪಿ ಕಚೇರಿಯಲ್ಲಿ ಸಿದ್ಧವಾದ ಸ್ಕ್ರಿಪ್ಟ್‌ನಂತಿದೆ” ಎಂದು ಅನುಮಾನ ವ್ಯಕ್ತಪಡಿಸಿದ್ದು ಜಿಲ್ಲೆಯ ರಾಜಕಾರಣದಲ್ಲಿ ದೊಡ್ಡ ಸಂಚಲನವನ್ನೇ ಮೂಡಿಸಿತ್ತು.

ಇದನ್ನೂ ಓದಿ: Dharwad Politics: ಕುಲಕರ್ಣಿ ಕಂಡ್ರೆ ಜೋಶಿಗ್ಯಾಕೆ ಜಿದ್ದು? ಅಸಲಿ ಕಾರಣ ಇಲ್ಲಿದೆ ನೋಡಿ…

ವ್ಯವಸ್ಥಿತ ಷಡ್ಯಂತ್ರ ಮತ್ತು ವಿನಯ್ ಪತನದ ಸ್ವರೂಪ

ವಿನಯ್ ಕುಲಕರ್ಣಿ ಎಷ್ಟೇ ಹಟವಾದಿ ನಾಯಕನಾಗಿದ್ದರೂ, ಎದುರಾಳಿಯ ಅತ್ಯಂತ ವ್ಯವಸ್ಥಿತವಾದ ಚಾಣಾಕ್ಷ ತಂತ್ರಗಳನ್ನು ಎದುರಿಸುವಲ್ಲಿ ಅವರ ತಂಡ ಸಂಪೂರ್ಣವಾಗಿ ವಿಫಲವಾಯಿತು. ಕ್ಷೇತ್ರದಲ್ಲಿ ವಿನಯ್ ವಿರುದ್ಧ ಒಂದು ಬಲಿಷ್ಠ ವಿರೋಧಿ ಅಲೆ ಸೃಷ್ಟಿಸುವಲ್ಲಿ ಜೋಶಿ ಟೀಮ್ ಯಶಸ್ವಿಯಾಗಿತ್ತು. ಅಭಿವೃದ್ಧಿಯ ವಿಷಯಗಳನ್ನು ಸಂಪೂರ್ಣವಾಗಿ ಹೂತುಹಾಕಿ, ಕೇವಲ “ಹತ್ಯೆ” ಮತ್ತು “ಸೇಡು” ಎನ್ನುವ ಭಾವನಾತ್ಮಕ ಅಸ್ತ್ರಗಳನ್ನೇ ಮತದಾರರ ಮುಂದೆ ಇಡಲಾಯಿತು. ಒಬ್ಬ ಬೆಳೆಯುತ್ತಿರುವ ಲಿಂಗಾಯತ ನಾಯಕನನ್ನು ರಾಜಕೀಯವಾಗಿ ನಿರ್ನಾಮ ಮಾಡಲು ಅಧಿಕಾರ, ವ್ಯವಸ್ಥೆ ಮತ್ತು ತನಿಖಾ ಸಂಸ್ಥೆಗಳನ್ನು ಒಂದು “ಅಸ್ತ್ರ”ವಾಗಿ ಹೇಗೆ ಬಳಸಿಕೊಳ್ಳಬಹುದು ಎಂಬುದಕ್ಕೆ ಧಾರವಾಡದ ಈ ರಾಜಕೀಯ ಪ್ರಹಸನಕ್ಕಿಂತ ಭೀಕರ ಉದಾಹರಣೆ ಮತ್ತೊಂದಿಲ್ಲ. ಇದು ಕೇವಲ ಒಬ್ಬ ವ್ಯಕ್ತಿಯ ಸೋಲಲ್ಲ, ಬದಲಾಗಿ ರಾಜಕೀಯ ಪ್ರಭಾವದ ಮುಂದೆ ನ್ಯಾಯದ ಹಾದಿ ಹೇಗೆ ದಿಕ್ಕು ತಪ್ಪಬಲ್ಲದು ಎಂಬುದಕ್ಕೆ ಸಾಕ್ಷಿಯಾಯಿತು.

Praveen Yalligutti
Praveen Yalliguttihttp://asalisuddi.com
ಕನ್ನಡದ ವಿವಿಧ ಸುದ್ದಿ ಮಾಧ್ಯಮ ಸಂಸ್ಥೆಗಳಲ್ಲಿ ಸುಮಾರು 8 ವರ್ಷಗಳ ಕಾಲ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ ನನಗಿದೆ. ಸುದ್ದಿಗಳ ಅಸಲಿಯತ್ತನ್ನು ಮತ್ತು ನಿಖರವಾದ ಮಾಹಿತಿಯನ್ನು ಜನರಿಗೆ ತಲುಪಿಸಬೇಕು ಎನ್ನುವ ಉದ್ದೇಶದಿಂದ ಈಗ 'ಅಸಲಿ ಸುದ್ದಿ' (Asali Suddi) ಎನ್ನುವ ಸುದ್ದಿ ಸಂಸ್ಥೆಯನ್ನು ಆರಂಭಿಸಿದ್ದೇನೆ. ಸತ್ಯಕ್ಕೆ ಹತ್ತಿರವಾದ ಮತ್ತು ಜನೋಪಕಾರಿ ವರದಿಗಳನ್ನು ನೀಡುವುದೇ ನನ್ನ ಮೊದಲ ಆದ್ಯತೆ.
RELATED ARTICLES

Most Popular

Recent Comments