ಬೆಂಗಳೂರು: ಕರ್ನಾಟಕ ರಾಜಕಾರಣದ ಚದುರಂಗದಾಟದಲ್ಲಿ ತಮ್ಮನ್ನು ತಾವು ಅಜೇಯ ‘ಟ್ರಬಲ್ ಶೂಟರ್’ ಎಂದು ಬಿಂಬಿಸಿಕೊಳ್ಳುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (D.K. Shivakumar) ಅವರಿಂದಲೇ ಪಕ್ಷದಲ್ಲಿ ಟ್ರಬಲ್‌ಗಳು ತಲೆಎತ್ತಿವೆ. ಕೇವಲ ಮುಖ್ಯಮಂತ್ರಿ ಪಟ್ಟದ ಕನಸಿನಲ್ಲಿ ತೇಲುತ್ತಿರುವ ಡಿಕೆಶಿ, ಪಕ್ಷದ ಆಂತರಿಕ ವಿಚಾರಗಳಲ್ಲಿ ಮತ್ತು ಅಲ್ಪಸಂಖ್ಯಾತ ನಾಯಕರ ನಿರ್ವಹಣೆಯಲ್ಲಿ ಸರಣಿ ಎಡವಟ್ಟುಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಅವರ ಈ ಹಠಮಾರಿ ಧೋರಣೆ ಈಗ ಹಿರಿಯ ನಾಯಕರಾದ ಸತೀಶ್ ಜಾರಕಿಹೊಳಿ (Satish Jarkiholi) ಮತ್ತು ಬಿ.ಕೆ. ಹರಿಪ್ರಸಾದ್ (B.K. Hariprasad) ಅವರ ಕೆಂಗಣ್ಣಿಗೆ ಗುರಿಯಾಗಿದೆ.
ಅಲ್ಪಸಂಖ್ಯಾತ ನಾಯಕರ ಮೇಲೆ ಸವಾರಿ: ಇದು ಡಿಕೆಶಿ ದ್ವೇಷ ರಾಜಕಾರಣವೇ?
ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ, ಡಿ.ಕೆ. ಶಿವಕುಮಾರ್ (D.K. Shivakumar) ಅವರು ಅಲ್ಪಸಂಖ್ಯಾತ ನಾಯಕರನ್ನು ಗುರಿಯಾಗಿಸಿಕೊಂಡು ರಾಜಕೀಯ ದಾಳ ಉರುಳಿಸುತ್ತಿದ್ದಾರೆಯೇ ಎಂಬ ಅನುಮಾನ ದಟ್ಟವಾಗಿ ಕಾಡುತ್ತಿದೆ. ದಾವಣಗೆರೆ ಉಪಚುನಾವಣೆಯ ಫಲಿತಾಂಶ ಇನ್ನೂ ಹೊರಬಿದ್ದಿಲ್ಲ, ಅಷ್ಟರಲ್ಲೇ ಕಾಂಗ್ರೆಸ್ ಸೋಲುತ್ತದೆ ಎನ್ನುವ ಭೀತಿಯೋ ಅಥವಾ ಯಾರನ್ನೋ ಬಲಿಪಶು ಮಾಡುವ ತಂತ್ರವೋ ಎಂಬಂತೆ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾಗಿದ್ದ ಅಬ್ದುಲ್ ಜಬ್ಬಾರ್ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗಿದೆ. ಈ ಕ್ರಮವೇ ಈಗ ಪಕ್ಷದೊಳಗೆ ಬೂದಿ ಮುಚ್ಚಿದ ಕೆಂಡದಂತಿದ್ದ ಅಸಮಾಧಾನ ಸ್ಫೋಟಗೊಳ್ಳಲು ಕಾರಣವಾಗಿದೆ.
ಈ ವಿಷಯದಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅವರು ನೇರವಾಗಿ ಡಿಕೆಶಿ ವಿರುದ್ಧವೇ ಯುದ್ಧ ಸಾರಿದ್ದಾರೆ. ಸಾಮಾನ್ಯವಾಗಿ ಸೌಮ್ಯ ಸ್ವಭಾವದ ಸತೀಶ್, ಈ ಬಾರಿ ಡಿಕೆಶಿ ಅವರಿಗೆ ಮುಖಾಮುಖಿಯಾಗಿ ಬುದ್ದಿವಾದ ಹೇಳಿದ್ದಾರೆ. “ಚುನಾವಣೆಯ ಫಲಿತಾಂಶ ಬರುವ ಮುನ್ನವೇ ಇಷ್ಟು ಅವಸರವಾಗಿ ಕ್ರಮ ಕೈಗೊಳ್ಳುವ ಅಗತ್ಯವೇನಿತ್ತು? ಪಕ್ಷ ಸೋತರೆ ನಂತರ ಆತ್ಮಾವಲೋಕನ ನಡೆಸಿ ಕ್ರಮ ಕೈಗೊಳ್ಳಬಹುದಿತ್ತು. ಆದರೆ ಏಕಾಏಕಿ ಅಬ್ದುಲ್ ಜಬ್ಬಾರ್ ಅವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಿದ್ದು ಸರಿಯಲ್ಲ” ಎಂದು ಸತೀಶ್ ಖಾರವಾಗಿ ಪ್ರತಿನಿಧಿಸಿದ್ದಾರೆ. ಅಷ್ಟೇ ಅಲ್ಲದೆ, ಅವರ ಅಮಾನತು ಆದೇಶವನ್ನು ಕೂಡಲೇ ವಾಪಸ್ ಪಡೆಯುವಂತೆ ಆಗ್ರಹಿಸುವ ಮೂಲಕ ಡಿಕೆಶಿ ಅವರ ಏಕಪಕ್ಷೀಯ ನಿರ್ಧಾರಕ್ಕೆ ಬ್ರೇಕ್ ಹಾಕಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲೇ ಹೆಣೆದಿದ್ದಾರಾ ‘ಆಪರೇಷನ್ ಅಲ್ಪಸಂಖ್ಯಾತ’?
ಕಾಂಗ್ರೆಸ್ ಪಕ್ಷದ ಇತಿಹಾಸದಲ್ಲೇ ಕೆಪಿಸಿಸಿ ಕಚೇರಿಯನ್ನು ಇಷ್ಟು ಕೆಟ್ಟದಾಗಿ ಬಳಸಿಕೊಂಡ ಉದಾಹರಣೆ ಕಡಿಮೆ. ಸ್ವಪಕ್ಷದ ನಾಯಕರ ವಿರುದ್ಧವೇ ಆರೋಪ ಮಾಡಲು ಪಕ್ಷದ ಕಚೇರಿಯಲ್ಲೇ ಪತ್ರಿಕಾಗೋಷ್ಠಿ ನಡೆಸುವ ಪರಿಸ್ಥಿತಿ ಬಂದಿದೆ ಎಂದರೆ ಅದರ ಹಿಂದೆ ಯಾರ ಕುಮ್ಮಕ್ಕಿದೆ ಎಂಬುದು ಗುಟ್ಟಾಗಿ ಉಳಿದಿಲ್ಲ. ಸಲೀಂ ಅಹ್ಮದ್ ಅವರ ಮೂಲಕ ದಾವಣಗೆರೆಯಲ್ಲಿ ಸ್ವಪಕ್ಷದ ನಾಯಕರೇ ಷಡ್ಯಂತ್ರ ನಡೆಸಿದ್ದಾರೆ ಎಂದು ಹೇಳಿಸಿದ್ದು ಡಿಕೆಶಿಯವರ (D.K. Shivakumar) ಪ್ಲಾನ್ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷದ ಒಗ್ಗಟ್ಟನ್ನು ಕಾಪಾಡಬೇಕಾದ ಶಿವಕುಮಾರ್, ತಾವೇ ಮುಂದೆ ನಿಂತು ಗುಂಪುಗಾರಿಕೆಗೆ ವೇದಿಕೆ ಸಿದ್ಧಪಡಿಸಿಕೊಟ್ಟಿದ್ದು ಅವರ ವಿವೇಚನೆಯನ್ನು ಪ್ರಶ್ನಿಸುವಂತೆ ಮಾಡಿದೆ.
ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರು ಕೂಡ ಇದೇ ವಿಷಯವಾಗಿ ಗರ್ಜಿಸಿದ್ದಾರೆ. “ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರ ವಿಷಯದಲ್ಲಿ ಇಷ್ಟೊಂದು ಬೇಜವಾಬ್ದಾರಿತನದಿಂದ ವರ್ತಿಸಬಾರದು, ಇದು ಪಕ್ಷಕ್ಕೆ ಒಳ್ಳೆಯದಲ್ಲ” ಎಂದು ಅವರು ಬಹಿರಂಗವಾಗಿ ಹೇಳಿಕೆ ನೀಡುವ ಮೂಲಕ ಡಿಕೆಶಿ ಅವರ ಅತಿರೇಕದ ವರ್ತನೆಗೆ ಎಚ್ಚರಿಕೆ ನೀಡಿದ್ದಾರೆ. ಮುಸ್ಲಿಂ ಸಮುದಾಯದ ನಾಯಕರಾದ ನಸೀರ್ ಅಹ್ಮದ್ ಅವರ ರಾಜೀನಾಮೆ ಪಡೆಯುವ ಹಂತಕ್ಕೆ ಪರಿಸ್ಥಿತಿ ತಂದಿದ್ದು ಮತ್ತು ಸಚಿವ ಜಮೀರ್ ಅಹ್ಮದ್ ಖಾನ್ ಅವರನ್ನು ಸಂಪುಟದಿಂದ ಕೈಬಿಡುವ ಬಗ್ಗೆ ವದಂತಿ ಹಬ್ಬುತ್ತಿರುವುದು, ಇವೆಲ್ಲವೂ ಒಬ್ಬ ಅಲ್ಪಸಂಖ್ಯಾತ ನಾಯಕನ ಏಳಿಗೆಯನ್ನು ಸಹಿಸದ ಮನಸ್ಥಿತಿಯ ಪ್ರತಿಬಿಂಬದಂತಿದೆ.
ಜಾತ್ಯತೀತ ಮುಖವಾಡ ಕಳಚುತ್ತಿದೆಯೇ?
ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಶೈಲಿಯ ಬಗ್ಗೆ ಮೊದಲಿನಿಂದಲೂ ಒಂದು ಮಾತು ಕೇಳಿಬರುತ್ತಿದೆ. ಅವರು ಕಾಂಗ್ರೆಸ್‌ನಲ್ಲಿದ್ದರೂ ಅವರ ವಿಚಾರಧಾರೆಗಳು ಆರ್‌ಎಸ್‌ಎಸ್‌ನತ್ತ (RSS) ಮೃದು ಧೋರಣೆ ಹೊಂದಿವೆಯೇ ಎಂಬ ಸಂಶಯ ಹಲವರಲ್ಲಿದೆ. ಸದನದಲ್ಲಿಯೇ ‘ಸದಾವಸ್ಥಲೆ’ ಎಂದು ಆರ್‌ಎಸ್‌ಎಸ್ ಗೀತೆ ಹೇಳಿದ್ದು, ಮತ್ತು ತಮ್ಮನ್ನು ಕೇವಲ ಒಂದು ಜಾತಿಗೆ ಸೀಮಿತಗೊಳಿಸಿ ಬಿಂಬಿಸಿಕೊಳ್ಳುವ ಪ್ರಯತ್ನ ಮಾಡುವುದು ಅವರು ಎಂದಿಗೂ ‘ಜಾತ್ಯತೀತ ನಾಯಕ’ನಾಗಿ ಬೆಳೆಯಲು ಇಷ್ಟಪಟ್ಟಿಲ್ಲ ಎಂಬುದನ್ನು ತೋರಿಸುತ್ತದೆ. ಮುಸ್ಲಿಂ ಸಮುದಾಯದೊಂದಿಗೆ ಅಂತರ ಕಾಯ್ದುಕೊಳ್ಳುವುದು ಮತ್ತು ಆ ಸಮುದಾಯದ ಪ್ರಭಾವಿ ನಾಯಕರ ರೆಕ್ಕೆ ಕತ್ತರಿಸುವ ಕೆಲಸ ಮಾಡುತ್ತಿರುವುದು ಈಗ ಅವರಿಗೆ ‘ಬೂಮರಾಂಗ್’ ಆಗಿ ಪರಿಣಮಿಸುತ್ತಿದೆ.
ಇದನ್ನೂ ಓದಿ: Vinay Kulkarni ಕೊಲೆಗಾರನಲ್ಲ, ಪಿತೂರಿದಾರ? ಮಾಫಿ ಸಾಕ್ಷಿಯ ಮಾಸ್ಟರ್ ಸ್ಟ್ರೋಕ್ ಗೆ ಕೇಸ್ ಜಾತಕವೇ ಬದಲಾಯಿತೇ?
ತಿರುಗುಬಾಣವಾಗುತ್ತಿರುವ ತಂತ್ರಗಳು:
ಡಿಕೆಶಿ ಅವರು ಹಿರಿಯ ವರಿಷ್ಠ ಸುರ್ಜೆವಾಲಾ ಅವರನ್ನು ತಮ್ಮ ಅನುಕೂಲಕ್ಕೆ ಬಳಸಿಕೊಂಡು ಈ ಎಲ್ಲಾ ದಾಳಗಳನ್ನು ಉರುಳಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ಈಗ ಸತೀಶ್ ಜಾರ್ಕಿಹೊಳಿ ಮತ್ತು ಬಿ.ಕೆ. ಹರಿಪ್ರಸಾದ್ ಅವರಂತಹ ನಾಯಕರು ಎದ್ದು ನಿಂತಿರುವುದು ಡಿಕೆಶಿ ಅವರ ಆಟ ಇನ್ನು ಮುಂದೆ ನಡೆಯುವುದಿಲ್ಲ ಎಂಬುದರ ಸೂಚನೆಯಾಗಿದೆ. ಅಬ್ದುಲ್ ಜಬ್ಬಾರ್ ಅವರ ಅಮಾನತು ಮತ್ತು ಅಲ್ಪಸಂಖ್ಯಾತ ಘಟಕದ ವಿಸರ್ಜನೆಯಂತಹ ಕ್ರಮಗಳು ಪಕ್ಷಕ್ಕೆ ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದ ಮುಜುಗರ ತಂದಿವೆ.
ಪಕ್ಷದ ಅಧ್ಯಕ್ಷರಾಗಿ ಡಿಕೆಶಿ ಅವರು ಎಲ್ಲರನ್ನೂ ಒಟ್ಟಾಗಿ ಕೊಂಡೊಯ್ಯುವ ಬದಲು, ಶಿಸ್ತಿನ ಹೆಸರಿನಲ್ಲಿ ದ್ವೇಷ ಸಾಧನೆಗೆ ಇಳಿದರೆ ಅದು ಪಕ್ಷದ ಅಧೋಗತಿಗೆ ನಾಂದಿ ಹಾಡಲಿದೆ. ಅಲ್ಪಸಂಖ್ಯಾತ ಸಮುದಾಯ ಕಾಂಗ್ರೆಸ್‌ನ ಭದ್ರ ಬುನಾದಿ. ಅದೇ ಬುನಾದಿಯನ್ನು ಅಲ್ಲಾಡಿಸಲು ಹೋದರೆ ಇಡೀ ಗೋಪುರವೇ ಕುಸಿಯಲಿದೆ ಎಂಬ ಸತ್ಯವನ್ನು ಹಿರಿಯ ನಾಯಕರು ಮನವರಿಕೆ ಮಾಡಿಕೊಟ್ಟಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ಡಿ.ಕೆ. ಶಿವಕುಮಾರ್ ಅವರ ಅತಿಯಾದ ಆತ್ಮವಿಶ್ವಾಸ ಮತ್ತು ಅಲ್ಪಸಂಖ್ಯಾತ ನಾಯಕರ ವಿರುದ್ಧದ ಸರಣಿ ಎಡವಟ್ಟುಗಳು ಈಗ ಕಾಂಗ್ರೆಸ್ ಕೋಟೆಯಲ್ಲೇ ಬಿರುಕು ಮೂಡಿಸಿವೆ. ಸತೀಶ್ ಜಾರಕಿಹೊಳಿ ಮತ್ತು ಬಿಕೆ ಹರಿಪ್ರಸಾದ್ ಅವರ ಈ ‘ಬುದ್ದಿವಾದ’ದ ನಂತರವಾದರೂ ಡಿಕೆಶಿ ತಮ್ಮ ಶೈಲಿಯನ್ನು ಬದಲಿಸಿಕೊಳ್ಳುತ್ತಾರಾ? ಅಥವಾ ಇದೇ ಹಾದಿಯಲ್ಲಿ ಸಾಗಿ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಾರಾ? ಎಂಬುದನ್ನು ಕಾಲವೇ ನಿರ್ಧರಿಸಬೇಕು. ಸದ್ಯಕ್ಕಂತೂ ಕೆಪಿಸಿಸಿ ಅಧ್ಯಕ್ಷರ ದ್ವೇಷದ ರಾಜಕಾರಣ ಅವರಿಗೆನೇ ಮುಳುವಾಗುತ್ತಿರುವುದು ಅಕ್ಷರಶಃ ಸತ್ಯ.

