ಬಾಗಲಕೋಟೆ ಉಪಚುನಾವಣೆಯ (Bagalkot By-Election) ಕಣ ಈಗ ಕೇವಲ ಅಭಿವೃದ್ಧಿ ಅಥವಾ ಪಕ್ಷಗಳ ನಡುವಿನ ಜಿದ್ದಾಜಿದ್ದಿಯಾಗಿ ಉಳಿದಿಲ್ಲ. ಇದು ವ್ಯಕ್ತಿತ್ವ, ಅಸ್ಮಿತೆ ಮತ್ತು ರಾಜಕೀಯ ತಂತ್ರಗಾರಿಕೆಗಳ ನಡುವಿನ ಸಂಕೀರ್ಣ ಸಮರವಾಗಿ ಮಾರ್ಪಟ್ಟಿದೆ. ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರು ಈ ಬಾರಿ ಗೆಲುವಿನ ದೋಣಿ ಹತ್ತಲು ಆರಿಸಿಕೊಂಡ ಹಾದಿ ಈಗ ಅವರಿಗೇ ಕಂಟಕವಾಗುವ ಮುನ್ಸೂಚನೆಗಳು ಲಭ್ಯವಾಗುತ್ತಿವೆ. ಸ್ವಪಕ್ಷದ ಅಧಿಕೃತ ನಾಯಕತ್ವದ ಬೆಂಬಲಕ್ಕಿಂತಲೂ ಹೆಚ್ಚಾಗಿ, ಹಿಂದುತ್ವದ ‘ಫೈರ್ ಬ್ರ್ಯಾಂಡ್’ ನಾಯಕರೆಂದೇ ಬಿಂಬಿತರಾದ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಪ್ರತಾಪ್ ಸಿಂಹ ಅವರ ಮೇಲೆ ಚರಂತಿಮಠ ಇಟ್ಟ ಅತಿಯಾದ ಭರವಸೆ ಈಗ “ಭಸ್ಮಾಸುರ”ನ ಹಸ್ತದಂತೆ ಅವರತ್ತಲೇ ತಿರುಗುತ್ತಿದೆ.
ಸ್ವಪಕ್ಷೀಯರ ಅಲಕ್ಷ್ಯ, ಬಂಡಾಯದ ನಾಯಕನ ಆಲಿಂಗನ: ತಂತ್ರವೋ ಅಥವಾ ಕುತಂತ್ರವೋ?
ಸಾಮಾನ್ಯವಾಗಿ ಉಪಚುನಾವಣೆಗಳಲ್ಲಿ ಆಡಳಿತ ಅಥವಾ ವಿರೋಧ ಪಕ್ಷಗಳು ಸಂಘಟಿತವಾಗಿ ಹೋರಾಡುತ್ತವೆ. ಆದರೆ ಚರಂತಿಮಠ ಅವರು ರಾಜ್ಯ ಬಿಜೆಪಿಯ ಅಧಿಕೃತ ನಾಯಕತ್ವವನ್ನು ಬದಗಿಟ್ಟು, ಪಕ್ಷದೊಳಗೆ ಬಂಡಾಯದ ಬಾವುಟ ಹಾರಿಸಿ ಉಚ್ಚಾಟನೆಗೊಂಡಿರುವ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನೇ ತಮ್ಮ ಪ್ರಚಾರದ “ಸ್ಟಾರ್ ಅಟ್ರಾಕ್ಷನ್” ಮಾಡಿಕೊಂಡರು. ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಅನಿವಾರ್ಯ ಒಪ್ಪಿಗೆಯೊಂದಿಗೆ ಯತ್ನಾಳ್ ಕಣಕ್ಕಿಳಿದರೂ, ಈ ನಡೆ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರಲ್ಲಿ ದೊಡ್ಡ ಬಿರುಕು ಮೂಡಿಸಿದೆ. ಪಕ್ಷದ ಶಿಸ್ತಿಗಿಂತ ವೈಯಕ್ತಿಕ ಬಣ ರಾಜಕಾರಣಕ್ಕೆ ಚರಂತಿಮಠ ಆದ್ಯತೆ ನೀಡಿದ್ದು, ತಳಮಟ್ಟದ ಸಂಘಟನೆಯ ಉತ್ಸಾಹಕ್ಕೆ ತಣ್ಣೀರು ಸುರಿದಂತಾಗಿದೆ.
ಯತ್ನಾಳ್ ವ್ಯಂಗ್ಯ: ಸ್ವಂತ ಅಭ್ಯರ್ಥಿಯ ನೂನ್ಯತೆಯೇ ಹಾಸ್ಯದ ವಸ್ತು!
ಪ್ರಚಾರದ ವೇಳೆ ಮೈಕ್ ಹಿಡಿದ ಯತ್ನಾಳ್, ಚರಂತಿಮಠ ಅವರ ಮುಖಕ್ಕೆ ಕನ್ನಡಿ ಹಿಡಿದ ರೀತಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ. “ನೋಡ್ರೀ ಚರಂತಿಮಠ ಅವರೇ, ನೀವು ಕೆಲಸ ಮಾಡ್ತಿದೀರಿ ಹೌದು.. ಆದ್ರೆ ನಿಮ್ಮ ಮುಖ ಯಾಕೋ ಯಾವಾಗಲೂ ಸಿಡುಕಾಗಿ ಇರುತ್ತೆ. ನಗೋದನ್ನೇ ಮರೆತುಬಿಟ್ಟಿದ್ದೀರಾ. ನಾನು ಮೊದಲೇ ಹೇಳಿದ್ದೀನಿ, ಸ್ವಲ್ಪ ಹಲ್ಲು ಕಿಸದು (ನಗುಮುಖದಿಂದ) ಜನರ ಜೊತೆ ಮಾತಾಡೋದನ್ನ ಕಲಿ ಮುತ್ಯಾ. ಬಂದವರಿಗೆ ಒಂದು ಚಹ-ಕಾಫಿ ಕೇಳಿ ಪ್ರೀತಿಯಿಂದ ಮಾತಾಡಿಸು,” ಎಂದು ಯತ್ನಾಳ್ ತಮ್ಮದೇ ಜವಾರಿ ಶೈಲಿಯಲ್ಲಿ ಕಿವಿಮಾತು ಹೇಳಿದ್ದಾರೆ.
ಯತ್ನಾಳ್ ಅವರ ಈ ಮಾತುಗಳು ಕೇವಲ ಹಾಸ್ಯಕ್ಕೆ ಸೀಮಿತವಾಗಿಲ್ಲ; ಇದು ಬಾಗಲಕೋಟೆಯ ಮತದಾರರ ಮನದ ಆಳದಲ್ಲಿದ್ದ ಆಕ್ರೋಶಕ್ಕೆ ಸಿಕ್ಕ ಸಾಕ್ಷಿಯಾಗಿದೆ. ಒಬ್ಬ ಜನಪ್ರತಿನಿಧಿ ಜನರಿಂದ ದೂರವಾದಾಗ ಏನಾಗುತ್ತದೆ ಎನ್ನುವುದಕ್ಕೆ ಚರಂತಿಮಠ ಅವರ ಇಂದಿನ ಸ್ಥಿತಿಯೇ ಉದಾಹರಣೆ. ಕ್ಷೇತ್ರದ ಕಟ್ಟಕಡೆಯ ಹಳ್ಳಿಯ ಜನರಲ್ಲಿ ಈಗಾಗಲೇ ಚರಂತಿಮಠರ “ಅಹಂಕಾರ” ಮತ್ತು “ದೂರದ ನಾಯಕ” ಎಂಬ ಭಾವನೆ ಬೇರೂರಿದೆ. ಕಳೆದ ಚುನಾವಣೆಯಲ್ಲಿ ಅವರ ಸೋಲಿಗೆ ಇದೇ “ಸಿಡುಕುತನ” ಕಾರಣವಾಗಿತ್ತು ಎಂಬುದು ಗುಟ್ಟಾಗಿ ಉಳಿದಿಲ್ಲ. ಈಗ ಯತ್ನಾಳ್ ಅವರ ಮಾತುಗಳು ಆ ಹಳೆಯ ಗಾಯವನ್ನು ಕೆದಕಿದ್ದು, “ನಮಗೆ ಬೇಕಿರುವುದು ಸೌಮ್ಯ ಸ್ವಭಾವದ ನಾಯಕನೇ ಹೊರತು ಅಹಂಕಾರದ ವ್ಯಕ್ತಿಯಲ್ಲ” ಎಂಬ ಕೂಗು ಹಳ್ಳಿಗಳಿಂದ ಕೇಳಿಬರುತ್ತಿದೆ.
ಅಹಿಂದ ಮತಗಳ ಧ್ರುವೀಕರಣ: ಪ್ರತಾಪ್ ಸಿಂಹ ಎಸೆದ ಕೆಂಡ!
ಬಾಗಲಕೋಟೆ ಜಿಲ್ಲೆಯಲ್ಲಿ ಅಹಿಂದ (ಅಲ್ಪಸಂಖ್ಯಾತ, ಹಿಂದುಳಿದ ವರ್ಗ ಮತ್ತು ದಲಿತ) ಮತದಾರರು ನಿರ್ಣಾಯಕ ಪಾತ್ರ ವಹಿಸುತ್ತಾರೆ. ಈ ಮತಗಳನ್ನು ಸೆಳೆಯಲು ಬಿಜೆಪಿ ತೆರೆಮರೆಯ ಕಸರತ್ತು ನಡೆಸುತ್ತಿರುವಾಗಲೇ, ಮಾಜಿ ಸಂಸದ ಪ್ರತಾಪ್ ಸಿಂಹ ಅವರು ನೀಡಿದ ಹೇಳಿಕೆ ಇಡೀ ವಾತಾವರಣವನ್ನು ಸ್ಫೋಟಕವಾಗಿಸಿದೆ.
ಅಹಿಂದ ವರ್ಗದ ಆಹಾರ ಪದ್ಧತಿಯನ್ನು (ಮಾಂಸಾಹಾರ) ಹೀನಾಯವಾಗಿ ಟೀಕಿಸಿದ್ದಲ್ಲದೆ, ಅಹಿಂದ ನಾಯಕ ಸಿದ್ದರಾಮಯ್ಯ ಅವರ ಬಗ್ಗೆ “ಮುಂದಿನದ್ದು ಕಟ್ ಮಾಡಿಸಿಕೊಳ್ಳಲಿ” ಎಂಬಂತಹ ಕೆಳಮಟ್ಟದ ಪದಬಳಕೆ ಮಾಡಿರುವುದು ಅಹಿಂದ ಸಮುದಾಯದ ಸ್ವಾಭಿಮಾನಕ್ಕೆ ಬಡಿದ ಪೆಟ್ಟಾಗಿದೆ. ಅಹಿಂದ ವರ್ಗದ ಜನರು ತಮ್ಮ ಆತ್ಮಗೌರವಕ್ಕಾಗಿ ಯಾವುದೇ ತ್ಯಾಗಕ್ಕೂ ಸಿದ್ಧರಿರುವವರು ಎಂಬುದು ಈ ಹಿಂದಿನ ಚುನಾವಣೆಗಳಲ್ಲಿ ಸಾಬೀತಾಗಿದೆ. ಪ್ರತಾಪ್ ಸಿಂಹ ಅವರ ಈ “ನಾಲಿಗೆ ಹರಿಬಿಡುವ” ಪ್ರವೃತ್ತಿ ಈಗ ‘ಜಂಗಮನ ಜೋಳಿಗೆ’ಗೆ ಬೀಳಬೇಕಿದ್ದ ಅಹಿಂದ ಮತಗಳನ್ನು ಕಾಂಗ್ರೆಸ್ ಪಾಲಾಗುವಂತೆ ಮಾಡಿದೆ.
ಹಿಂದುತ್ವ ವರ್ಸಸ್ ವಾಸ್ತವ: ಎಲ್ಲಿ ಎಡವಿದರು ಚರಂತಿಮಠ?
ಚರಂತಿಮಠ ಅವರು ಕೇವಲ ಹಿಂದುತ್ವದ ಆಧಾರದ ಮೇಲೆ ಗೆಲ್ಲಬಹುದು ಎಂಬ ಭ್ರಮೆಯಲ್ಲಿದ್ದಂತಿದೆ. ಆದರೆ ಬಾಗಲಕೋಟೆಯ ಮತದಾರ ಕೇವಲ ಭಾವನೆಗಳಿಗೆ ಮಾರುಹೋಗುವವನಲ್ಲ. ಇಲ್ಲಿನ ಜನತೆ ಅಭಿವೃದ್ಧಿಯ ಜೊತೆಗೆ ಅಭ್ಯರ್ಥಿಯ ‘ನಡವಳಿಕೆ’ಯನ್ನು ಅಳೆಯುತ್ತಿದ್ದಾರೆ. ಹಿಂದುತ್ವದ ಕಿಡಿ ಹೊತ್ತಿಸಲು ಬಂದ ಯತ್ನಾಳ್ ಮತ್ತು ಸಿಂಹ ಅವರು ಅಭಿವೃದ್ಧಿಯ ಬಗ್ಗೆ ಮಾತನಾಡುವ ಬದಲು, ದ್ವೇಷದ ಭಾಷಣ ಮತ್ತು ವ್ಯಕ್ತಿಗತ ನಿಂದನೆಗೆ ಇಳಿದಿದ್ದು ತಟಸ್ಥ ಮತದಾರರನ್ನು ಬಿಜೆಪಿಯಿಂದ ದೂರ ಮಾಡಿದೆ.
ರಾಜಕೀಯ ವಿಶ್ಲೇಷಕರು ಹೇಳುವಂತೆ, “ಅಭ್ಯರ್ಥಿಯ ಲೂಸ್ ಟಾಕ್ ಮತ್ತು ಅವರಿಗೆ ಬೆಂಬಲವಾಗಿ ಬಂದವರ ಅತಿರೇಕದ ಮಾತುಗಳು ಚರಂತಿಮಠ ಅವರ ಗೆಲುವಿನ ಹಾದಿಗೆ ಮುಳ್ಳಾಗಿವೆ.” ಮಠದ ಮೇಲಿನ ಭಕ್ತಿಯಿಂದ ಸಿಗಬೇಕಿದ್ದ ಗೌರವಯುತ ಮತಗಳು ಸಹ ಇಂತಹ ಅಸಂಸ್ಕೃತ ಹೇಳಿಕೆಗಳಿಂದಾಗಿ ಕೈತಪ್ಪುತ್ತಿವೆ.
ಇದನ್ನೂ ಓದಿ: ಡಬಲ್ ವೋಟರ್ಸ್‌ಗೆ ಢವಢವ! ಆ ವಿದ್ಯಾರ್ಥಿಗಳಿಗೆ ಜೈಲು ಫಿಕ್ಸ್? ಕೈ-ಪಡೆಯ ಮಾಸ್ಟರ್ ಪ್ಲಾನ್; ಬಿಜೆಪಿಯಿಂದ ಓಪನ್ ಚಾಲೆಂಜ್!
ರಾಜಕೀಯ ಪರಿಣಾಮ: ಬಿಜೆಪಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚು
ಒಟ್ಟಾರೆಯಾಗಿ ಹೇಳುವುದಾದರೆ, ಬಾಗಲಕೋಟೆ ಕಣದಲ್ಲಿ ಬಿಜೆಪಿ ಅಭ್ಯರ್ಥಿ ತಾವೇ ತೋಡಿದ ಹಳ್ಳಕ್ಕೆ ತಾವೇ ಬೀಳುವ ಸಾಧ್ಯತೆ ಹೆಚ್ಚಾಗಿದೆ.
- ಅಹಿಂದ ವಿರೋಧಿ ಇಮೇಜ್: ಪ್ರತಾಪ್ ಸಿಂಹ ಅವರ ಹೇಳಿಕೆಯಿಂದ ಬಿಜೆಪಿ “ಅಹಿಂದ ವಿರೋಧಿ” ಎಂಬ ಮುದ್ರೆ ಮತ್ತಷ್ಟು ಗಾಢವಾಗಿದೆ.
- ಶಿಸ್ತಿನ ಕೊರತೆ: ಅಧಿಕೃತ ನಾಯಕರನ್ನು ಬಿಟ್ಟು ಬಂಡಾಯಗಾರರ ಮೊರೆ ಹೋದದ್ದು ಪಕ್ಷದ ಒಳಗಿನ ಒಗ್ಗಟ್ಟನ್ನು ಹಾಳುಮಾಡಿದೆ.
- ವ್ಯಕ್ತಿತ್ವದ ಬಿಕ್ಕಟ್ಟು: ಯತ್ನಾಳ್ ಅವರ ಹಾಸ್ಯ ಚರಂತಿಮಠರ ಘನತೆಯನ್ನು ಕುಗ್ಗಿಸಿದೆ.
ಬಾಗಲಕೋಟೆಯ ಮತದಾರ ಸದ್ಯಕ್ಕೆ “ಸೌಮ್ಯತೆ” ಮತ್ತು “ಅಭಿವೃದ್ಧಿ”ಯನ್ನು ಹುಡುಕುತ್ತಿದ್ದಾನೆ. ಅಬ್ಬರದ ಭಾಷಣಗಳು, ಕೆಳಮಟ್ಟದ ಟೀಕೆಗಳು ಕೇವಲ ಚಪ್ಪಾಳೆ ಗಿಟ್ಟಿಸಬಹುದೇ ಹೊರತು ಮತಗಳಾಗಿ ಪರಿವರ್ತನೆಯಾಗುವುದು ಕಷ್ಟ. ಜಂಗಮನ ಜೋಳಿಗೆ ತುಂಬಬೇಕಿದ್ದರೆ ಅಲ್ಲಿ ಭಕ್ತಿ ಮತ್ತು ವಿನಯ ಇರಬೇಕು, ಆದರೆ ಇಲ್ಲಿ ಕಾಣುತ್ತಿರುವುದು ಅಹಂಕಾರ ಮತ್ತು ದ್ವೇಷದ ಮಾತುಗಳು. ಈ ಕಾರಣಕ್ಕಾಗಿಯೇ, ರಾಜಕೀಯ ಪಂಡಿತರ ಪ್ರಕಾರ, ಈ ಇಬ್ಬರು ನಾಯಕರ ಪ್ರಚಾರದಿಂದ ಬಿಜೆಪಿಗೆ ದೊಡ್ಡ ಮಟ್ಟದ ಹಿನ್ನಡೆಯಾಗುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ..

