Homeರಾಜ್ಯBy-Election: ಏ. 9ಕ್ಕೆ ಮತದಾನ, ಮೇ 4ಕ್ಕೆ ಫಲಿತಾಂಶ; ಬಾಗಲಕೋಟೆ-ದಾವಣಗೆರೆಯಲ್ಲಿ ಯಾರಿಗೆ ಟಿಕೆಟ್?

By-Election: ಏ. 9ಕ್ಕೆ ಮತದಾನ, ಮೇ 4ಕ್ಕೆ ಫಲಿತಾಂಶ; ಬಾಗಲಕೋಟೆ-ದಾವಣಗೆರೆಯಲ್ಲಿ ಯಾರಿಗೆ ಟಿಕೆಟ್?

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ (By-Election) ಕೇಂದ್ರ ಚುನಾವಣಾ ಆಯೋಗವು ದಿನಾಂಕ ಘೋಷಣೆ ಮಾಡಿದೆ. ಹಿರಿಯ ನಾಯಕರಾದ ಎಚ್.ವೈ. ಮೇಟಿ ಹಾಗೂ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾಗಿದ್ದ ಈ ಕ್ಷೇತ್ರಗಳಿಗೆ ಇದೀಗ ‘ಮಿನಿ ಸಮರ’ದ ಕಳೆ ಬಂದಿದೆ.

ಚುನಾವಣಾ ವೇಳಾಪಟ್ಟಿ:

  • ಮತದಾನದ ದಿನಾಂಕ: ಏಪ್ರಿಲ್ 9, 2026
  • ಫಲಿತಾಂಶ ಪ್ರಕಟಣೆ: ಮೇ 4, 2026

ಬಾಗಲಕೋಟೆ ಅಖಾಡ: ಮೇಟಿ ಕುಟುಂಬದಲ್ಲಿ ಟಿಕೆಟ್ ಫೈಟ್!

ಬಾಗಲಕೋಟೆಯಲ್ಲಿ ಈ ಬಾರಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಆದರೆ ಎರಡೂ ಪಕ್ಷಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಕಸರತ್ತು ತಲೆನೋವಾಗಿ ಪರಿಣಮಿಸಿದೆ.

  • ಕಾಂಗ್ರೆಸ್ ವಲಯ: ದಿವಂಗತ ಹುಲ್ಲಪ್ಪ ವೈ. ಮೇಟಿ ಅವರ ಅನುಕಂಪದ ಅಲೆಯ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್, ಅವರ ಕುಟುಂಬದವರಿಗೇ ಟಿಕೆಟ್ ನೀಡಲು ಮುಂದಾಗಿದೆ. ಆದರೆ ಇಲ್ಲಿ ‘ಮನೆಯೊಳಗಿನ ಜಗಳ’ ಬೀದಿಗೆ ಬಂದಿದೆ. ಹಿರಿಯ ಪುತ್ರ ಮಲ್ಲಿಕಾರ್ಜುನ್ ಮೇಟಿ, ಕಿರಿಯ ಪುತ್ರ ಉಮೇಶ್ ಮೇಟಿ ಹಾಗೂ ಬಾಯಕ್ಕ ಮೇಟಿ ಅವರ ಹೆಸರು ಕೇಳಿಬರುತ್ತಿದೆ. ಸದ್ಯದ ಮಾಹಿತಿ ಪ್ರಕಾರ ಮಲ್ಲಿಕಾರ್ಜುನ್ ಮೇಟಿ ಅವರಿಗೆ ಟಿಕೆಟ್ ಬಹುತೇಕ ಖಚಿತ ಎನ್ನಲಾಗುತ್ತಿದೆ.
  • ಬಿಜೆಪಿ ವಲಯ: ಮಾಜಿ ಶಾಸಕ ವೀರಣ್ಣ ಚರಂತಿಮಠ ಹಾಗೂ ಪಿ.ಎಚ್. ಪೂಜಾರ ನಡುವೆ ಪೈಪೋಟಿ ಇದೆ. ಆದರೆ ಕ್ಷೇತ್ರದ ಪಟ್ಟು ಹೊಂದಿರುವ ಚರಂತಿಮಠ ಅವರ ಹೆಸರೇ ಹೈಕಮಾಂಡ್ ಮಟ್ಟದಲ್ಲಿ ಫೈನಲ್ ಆಗುವ ಸಾಧ್ಯತೆ ಹೆಚ್ಚಿದೆ.

ಇದನ್ನೂ ಓದಿ: Bagalkot By-Election: ಮೇಟಿ ಆಪ್ತರಿಗೋ, ಕುಟುಂಬಕ್ಕೋ ಟಿಕೆಟ್? ಸಿದ್ದರಾಮಯ್ಯ ಹೇಳಿದ್ದೇನು?

ದಾವಣಗೆರೆ ದಕ್ಷಿಣ: ‘ಕೈ’ ಪಡೆಯಲ್ಲಿ ಭಿನ್ನಮತ, ಬಿಜೆಪಿಯಲ್ಲಿ ಆಕಾಂಕ್ಷಿಗಳ ದಂಡು!

ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ರಾಜಕೀಯ ಲೆಕ್ಕಾಚಾರಗಳು ಕ್ಷಣಕ್ಷಣಕ್ಕೂ ಬದಲಾಗುತ್ತಿವೆ. ಇಲ್ಲಿ ಜಾತಿ ಮತ್ತು ಕುಟುಂಬ ರಾಜಕಾರಣದ ನಡುವೆ ದೊಡ್ಡ ಫೈಟ್ ನಡೆಯುತ್ತಿದೆ.

  • ಕಾಂಗ್ರೆಸ್‌ನಲ್ಲಿ ಬಿರುಕು: ಶಾಮನೂರು ಶಿವಶಂಕರಪ್ಪ ಅವರ ನಿಧನದ ನಂತರ ಈ ಕ್ಷೇತ್ರದಲ್ಲಿ 80-90 ಸಾವಿರದಷ್ಟಿರುವ ಮುಸ್ಲಿಂ ಮತದಾರರನ್ನು ಸೆಳೆಯಲು ಸಚಿವ ಜಮೀರ್ ಅಹ್ಮದ್ ಪಟ್ಟು ಹಿಡಿದಿದ್ದಾರೆ. ಅಲ್ಪಸಂಖ್ಯಾತ ಅಭ್ಯರ್ಥಿಗೆ ಟಿಕೆಟ್ ನೀಡಬೇಕೆಂಬುದು ಅವರ ವಾದ. ಆದರೆ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ತಮ್ಮ ಪುತ್ರನಿಗೆ ಟಿಕೆಟ್ ಕೊಡಿಸಲು ತೆರೆಮರೆಯ ಕಸರತ್ತು ನಡೆಸುತ್ತಿರುವುದು ಪಕ್ಷದೊಳಗೆ ಇಬ್ಬಂದಿ ಸೃಷ್ಟಿಸಿದೆ.
  • ಬಿಜೆಪಿಯಲ್ಲಿ ‘ಮನೆಯೊಂದು ಮೂರು ಬಾಗಿಲು’: ಬಿಜೆಪಿಯಲ್ಲಿ ಟಿಕೆಟ್‌ಗಾಗಿ ಐವರು ಪ್ರಬಲ ಆಕಾಂಕ್ಷಿಗಳಿದ್ದಾರೆ. ಯಶವಂತ್ ರಾವ್ ಜಾದವ್, ಬಿ.ಜಿ. ಅಜಯ್ ಕುಮಾರ್, ಶ್ರೀನಿವಾಸ್ ದಾಸ್ ಕರಿಯಪ್ಪ, ದೇವಮುನಿ ಮತ್ತು ರಾಜನಹಳ್ಳಿ ಶಿವಕುಮಾರ್ ರೇಸ್‌ನಲ್ಲಿದ್ದಾರೆ. ಇದಲ್ಲದೆ, ಕಾಂಗ್ರೆಸ್‌ನ ಯುವ ನಾಯಕ ವಿನಯ್ ಕುಮಾರ್ ಅವರನ್ನು ಸೆಳೆಯಲು ಬಿಜೆಪಿ ಗಾಳ ಹಾಕುತ್ತಿರುವುದು ಕುತೂಹಲ ಮೂಡಿಸಿದೆ. ಜಿ.ಎಸ್. ಸಿದ್ದೇಶ್ವರ ಮತ್ತು ರೇಣುಕಾಚಾರ್ಯ ಬಣಗಳ ನಡುವಿನ ಭಿನ್ನಮತ ಶಮನಕ್ಕೆ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ಅಗರವಾಲ್ ಈಗಾಗಲೇ ಒಂದು ಸುತ್ತಿನ ಸಂಧಾನ ನಡೆಸಿದ್ದಾರೆ.

ಇದನ್ನೂ ಓದಿ: Bagalkot Medical college: ಬೂಟ್ ಪಾಲಿಶ್ ಚಳವಳಿಯಿಂದ ಶಂಕುಸ್ಥಾಪನೆಯವರೆಗೆ; ಜಿಲ್ಲಾ ನಾಯಕರ ಪಿತೂರಿ ಬಯಲು ಮಾಡಿದ ಬದ್ನೂರ್!

ಒಂದು ನೋಟದಲ್ಲಿ ಇಂದಿನ ಸ್ಥಿತಿ

ಬಾಗಲಕೋಟೆ:-

  • ಕಾಂಗ್ರೆಸ್‌ನಲ್ಲಿ ಕುಟುಂಬದ ಸದಸ್ಯರ ನಡುವೆ ಪೈಪೋಟಿ,
  • ಬಿಜೆಪಿಯಲ್ಲಿ ಚರಂತಿಮಠ ವರ್ಸಸ್ ಪೂಜಾರ

ದಾವಣಗೆರೆ ದಕ್ಷಿಣ:-

  • ಕಾಂಗ್ರೆಸ್‌ನಲ್ಲಿ ಮುಸ್ಲಿಂ ಕೋಟಾ Vs ಶಾಮನೂರು ಕುಟುಂಬ ಬಣ ರಾಜಕೀಯ
  • ಬಿಜೆಪಿಯಲ್ಲಿ ಐವರು ಆಕಾಂಕ್ಷಿಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.

ಚುನಾವಣಾ ಆಯೋಗ ದಿನಾಂಕ ಘೋಷಿಸುತ್ತಿದ್ದಂತೆಯೇ ಎರಡೂ ಜಿಲ್ಲೆಗಳಲ್ಲಿ ನೀತಿಸಂಹಿತೆ ಜಾರಿಯಾಗಿದ್ದು, ರಾಜಕೀಯ ಚಟುವಟಿಕೆಗಳು ರಂಗೇರಿವೆ. ಏಪ್ರಿಲ್ 9ರಂದು ಮತದಾರ ಪ್ರಭು ಯಾರ ಕೈ ಹಿಡಿಯಲಿದ್ದಾನೆ ಎಂಬುದು ಮೇ 4ರಂದು ತಿಳಿಯಲಿದೆ.

Praveen Yalligutti
Praveen Yalliguttihttp://asalisuddi.com
ಕನ್ನಡದ ವಿವಿಧ ಸುದ್ದಿ ಮಾಧ್ಯಮ ಸಂಸ್ಥೆಗಳಲ್ಲಿ ಸುಮಾರು 8 ವರ್ಷಗಳ ಕಾಲ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ ನನಗಿದೆ. ಸುದ್ದಿಗಳ ಅಸಲಿಯತ್ತನ್ನು ಮತ್ತು ನಿಖರವಾದ ಮಾಹಿತಿಯನ್ನು ಜನರಿಗೆ ತಲುಪಿಸಬೇಕು ಎನ್ನುವ ಉದ್ದೇಶದಿಂದ ಈಗ 'ಅಸಲಿ ಸುದ್ದಿ' (Asali Suddi) ಎನ್ನುವ ಸುದ್ದಿ ಸಂಸ್ಥೆಯನ್ನು ಆರಂಭಿಸಿದ್ದೇನೆ. ಸತ್ಯಕ್ಕೆ ಹತ್ತಿರವಾದ ಮತ್ತು ಜನೋಪಕಾರಿ ವರದಿಗಳನ್ನು ನೀಡುವುದೇ ನನ್ನ ಮೊದಲ ಆದ್ಯತೆ.
RELATED ARTICLES

Most Popular

Recent Comments