Homeರಾಜ್ಯBagalkot By-Election: ಮೇಟಿ ಆಪ್ತರಿಗೋ, ಕುಟುಂಬಕ್ಕೋ ಟಿಕೆಟ್? ಸಿದ್ದರಾಮಯ್ಯ ಹೇಳಿದ್ದೇನು?

Bagalkot By-Election: ಮೇಟಿ ಆಪ್ತರಿಗೋ, ಕುಟುಂಬಕ್ಕೋ ಟಿಕೆಟ್? ಸಿದ್ದರಾಮಯ್ಯ ಹೇಳಿದ್ದೇನು?

ಬಾಗಲಕೋಟೆ: ದಿವಂಗತ ಹೆಚ್.ವೈ. ಮೇಟಿಯವರ ನಿಧನದಿಂದ ತೆರವಾಗಿರುವ ಬಾಗಲಕೋಟೆ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆಯ (Bagalkot By-Election) ಕಾವು ಏರುತ್ತಿದೆ. ಸಿಎಂ ಸಿದ್ದರಾಮಯ್ಯ ಅವರು ಇಂದು ಬಾಗಲಕೋಟೆಗೆ ಭೇಟಿ ನೀಡಿ ವೈದ್ಯಕೀಯ ಕಾಲೇಜಿಗೆ ಅಡಿಗಲ್ಲು ಹಾಕುತ್ತಿದ್ದಂತೆಯೇ, ಜಿಲ್ಲಾ ರಾಜಕಾರಣದಲ್ಲಿ ‘ಟಿಕೆಟ್ ಯಾರಿಗೆ?’ ಎನ್ನುವ ಚರ್ಚೆ ಗರಿಗೆದರಿದೆ.

ಮೇಟಿ ಕುಟುಂಬದಲ್ಲಿ ನಾಲ್ವರು ಆಕಾಂಕ್ಷಿಗಳು!

ಹೆಚ್.ವೈ. ಮೇಟಿಯವರ ಉತ್ತರಾಧಿಕಾರಿ ಯಾರು ಎನ್ನುವ ಪ್ರಶ್ನೆಗೆ ಈಗ ಅವರ ಕುಟುಂಬದೊಳಗೇ ನಾಲ್ಕು ಹೆಸರುಗಳು ಕೇಳಿಬರುತ್ತಿವೆ.

  • ಮಲ್ಲಿಕಾರ್ಜುನ್ ಮೇಟಿ: ಹಿರಿಯ ಪುತ್ರನಾಗಿ ಕ್ಷೇತ್ರದಲ್ಲಿ ಈಗಾಗಲೇ ಗುರುತಿಸಿಕೊಂಡಿದ್ದಾರೆ.
  • ಉಮೇಶ್ ಮೇಟಿ: ಕಿರಿಯ ಪುತ್ರನೂ ಸಹ ಪ್ರಬಲ ಆಕಾಂಕ್ಷಿಯಾಗಿದ್ದಾರೆ.
  • ಬಾಯಕ್ಕ ಮೇಟಿ: ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆಯಾಗಿ ಅನುಭವ ಹೊಂದಿರುವ ಪುತ್ರಿ.
  • ಮಹಾದೇವಿ: ಮೇಟಿಯವರ ಮತ್ತೋರ್ವ ಪುತ್ರಿ ಕೂಡ ರೇಸ್‌ನಲ್ಲಿದ್ದಾರೆ.

ಸದ್ಯದ ಮಾಹಿತಿ ಪ್ರಕಾರ, ಇಬ್ಬರು ಪುತ್ರರ ನಡುವೆಯೇ ತೀವ್ರ ಪೈಪೋಟಿ ಇದ್ದು, ಪಕ್ಷದ ಒಳಗಿನ ಪಿಸುಮಾತುಗಳ ಪ್ರಕಾರ ಮಲ್ಲಿಕಾರ್ಜುನ್ ಮೇಟಿ ಅವರಿಗೆ ಟಿಕೆಟ್ ಫೈನಲ್ ಆಗುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ.

ಕುಟುಂಬ ವರ್ಸಸ್ ಹೊರಗಿನವರು: ಬಂಡಾಯದ ಭೀತಿ?

ಮೇಟಿ ಕುಟುಂಬದ ಹೊರತಾಗಿ ಕಾಂಗ್ರೆಸ್ ಪಾಳಯದಲ್ಲಿ ರಕ್ಷಿತಾ ಈಟಿ, ವೀಣಾ ಕಾಶಪ್ಪನವರ, ಸಂತೋಷ್ ಹೊಕ್ರಾಣಿ ಹಾಗೂ ಅಜಯಕುಮಾರ್ ಸರ್ ನಾಯಕ ಅವರ ಹೆಸರುಗಳು ಮುಂಚೂಣಿಯಲ್ಲಿವೆ.

ವಿಶೇಷವೆಂದರೆ, ಪ್ರಬಲ ನಾಯಕಿ ವೀಣಾ ಕಾಶಪ್ಪನವರ ಅವರು “ಮೇಟಿ ಕುಟುಂಬದಲ್ಲಿ ಯಾರಿಗೇ ಟಿಕೆಟ್ ಕೊಟ್ಟರೂ ನಮ್ಮ ಅಭ್ಯಂತರವಿಲ್ಲ” ಎಂದು ಹೇಳುವ ಮೂಲಕ ದೊಡ್ಡತನ ತೋರಿದ್ದಾರೆ. ಇದರಿಂದ ಮೇಟಿ ಕುಟುಂಬಕ್ಕೆ ಟಿಕೆಟ್ ನೀಡಿದರೆ ಕಾಂಗ್ರೆಸ್‌ನಲ್ಲಿ ಭಿನ್ನಮತ ಕಾಣಿಸಿಕೊಳ್ಳುವ ಸಾಧ್ಯತೆ ಕಡಿಮೆ. ಆದರೆ, ಒಂದು ವೇಳೆ ಕುಟುಂಬವನ್ನು ಬಿಟ್ಟು ಬೇರೆಯವರಿಗೆ ಮಣೆ ಹಾಕಿದರೆ ಬಾಗಲಕೋಟೆ ಕಾಂಗ್ರೆಸ್‌ನಲ್ಲಿ ‘ಬಂಡಾಯ ಸ್ಫೋಟ’ ಗ್ಯಾರಂಟಿ ಎನ್ನುವ ಮಾತುಗಳು ಕಾರ್ಯಕರ್ತರ ವಲಯದಲ್ಲಿ ಕೇಳಿಬರುತ್ತಿವೆ.

ಇದನ್ನೂ ಓದಿ: Bagalkot Medical college: ಬೂಟ್ ಪಾಲಿಶ್ ಚಳವಳಿಯಿಂದ ಶಂಕುಸ್ಥಾಪನೆಯವರೆಗೆ; ಜಿಲ್ಲಾ ನಾಯಕರ ಪಿತೂರಿ ಬಯಲು ಮಾಡಿದ ಬದ್ನೂರ್!

ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?

ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಟಿಕೆಟ್ ಹಂಚಿಕೆಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ:

“ಬಾಗಲಕೋಟೆ ಮತ್ತು ದಾವಣಗೆರೆ ಉಪಚುನಾವಣೆ ಅಭ್ಯರ್ಥಿಗಳ ಆಯ್ಕೆಯನ್ನು ಹೈಕಮಾಂಡ್ ತೀರ್ಮಾನಿಸುತ್ತದೆ. ಮೇಟಿ ಕುಟುಂಬದವರೂ ಆಕಾಂಕ್ಷಿಗಳಾಗಿದ್ದಾರೆ. ಒಂದೇ ಕುಟುಂಬದಿಂದ ಎಷ್ಟು ಜನ ಕೇಳಿದರೂ, ಅಂತಿಮವಾಗಿ ಹೈಕಮಾಂಡ್ ಒಬ್ಬರಿಗೇ ಟಿಕೆಟ್ ನೀಡಲಿದೆ. ಮುಂದಿನ ಒಂದು ವಾರದೊಳಗೆ ಉಪಚುನಾವಣೆ ಘೋಷಣೆಯಾಗುವ ಸಾಧ್ಯತೆಯಿದೆ,” ಎಂದು ಸಿಎಂ ತಿಳಿಸಿದರು.

ಈ ಮೂಲಕ ಸಿಎಂ ಸಿದ್ದರಾಮಯ್ಯ ಅವರು, ಮೇಟಿ ಅವರ ಕುಟುಂಬದಲ್ಲೇ ಒಬ್ಬರಿಗೆ ಟಿಕೆಟ್‌ ಸಿಗಲಿದೆ ಎನ್ನುವ ಮುನ್ಸೂಚನೆ ನೀಡಿದ್ದಾರೆ. ಒಂದುವೇಳೆ ಕುಟುಂಬದವರಾಗಲಿ ಹೊರಗಿನವರಾಗಲಿ ಯಾರಿಗಾದರೂ ಒಬ್ಬರಿಗೆ ಟಿಕೆಟ್‌ ಸಿಗಲಿದೆ ಎಂದು ಹೇಳಿದ್ದರೆ ಇನ್ನುಳಿದ ಆಕಾಂಕ್ಷಿಗಳಿಗೆ ಒಂದು ಅವಕಾಶ ಇದೆ ಎಂದು ಹೇಳಬಹುದಿತ್ತು. ಇದೀಗ ಬಾಗಲಕೋಟೆ ಉಪಚುನಾವಣೆಯ ಟಿಕೆಟ್ ಮೇಟಿ ಕುಟುಂಬದ‌ ಸದಸ್ಯರಿಗೇ ಸಿಗಲಿದೆ ಎಂದು ತಿಳಿದುಬಂದಿದೆ.

ಅಭಿವೃದ್ಧಿ ಮತ್ತು ಆಡಳಿತಾತ್ಮಕ ವಿಷಯಗಳ ಕುರಿತು ಸಿಎಂ ಮಾತು:

ಕೃಷ್ಣಾ ಮೇಲ್ದಂಡೆ ಯೋಜನೆ ಮತ್ತು ಸಂತ್ರಸ್ತರಿಗೆ ಪರಿಹಾರ:

ಕೃಷ್ಣಾ ಮೇಲ್ದಂಡೆ ಯೋಜನೆಗೆ ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟಿಲ್ಲ ಎಂಬ ವಿರೋಧ ಪಕ್ಷಗಳ ಟೀಕೆಗೆ ಉತ್ತರಿಸಿದ ಮುಖ್ಯಮಂತ್ರಿಗಳು, ಸಂತ್ರಸ್ತರಿಗೆ ಪರಿಹಾರ ವಿತರಿಸುವ ಕಾರ್ಯಕ್ಕೆ ಇಂದಿನಿಂದಲೇ ಚಾಲನೆ ನೀಡಲಾಗಿದೆ ಎಂದರು. ಮುಂದಿನ ಮೂರ್ನಾಲ್ಕು ವರ್ಷಗಳ ಅವಧಿಯಲ್ಲಿ ಎಲ್ಲಾ ಸಂತ್ರಸ್ತರಿಗೂ ಹಂತ ಹಂತವಾಗಿ ಚೆಕ್ ವಿತರಣೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಇ-ಸ್ವತ್ತು ಸಮಸ್ಯೆ ನಿವಾರಣೆ:

ರಾಜ್ಯಾದ್ಯಂತ ಆಸ್ತಿ ನೋಂದಣಿಗೆ ಸಂಬಂಧಿಸಿದಂತೆ ಜನಸಾಮಾನ್ಯರಿಗೆ ತೀವ್ರ ತೊಂದರೆಯಾಗಿರುವ ‘ಇ-ಸ್ವತ್ತು’ ತಂತ್ರಾಂಶದ ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ತಾಂತ್ರಿಕ ಅಡಚಣೆಯನ್ನು ಕೂಡಲೇ ಸರಿಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಶೀಘ್ರವೇ ಸಮಸ್ಯೆ ಬಗೆಹರಿಯಲಿದೆ ಎಂದು ಸಿಎಂ ತಿಳಿಸಿದರು.

ಇದನ್ನೂ ಓದಿ: Bagalkot By-Election: ವೀರಣ್ಣ ಚರಂತಿಮಠ ಸಹೋದರನ ಮನೆಗೆ ಸಿಎಂ ಎಂಟ್ರಿ! ಬಿಜೆಪಿಯ ಎಲ್ಲಾ ಪ್ಲ್ಯಾನ್‌ ಉಡೀಸ್‌?

ಬಿಜೆಪಿ ಟೀಕೆಗೆ ತಿರುಗೇಟು:

ಚುನಾವಣಾ ಸಂದರ್ಭದಲ್ಲಿ ವೈದ್ಯಕೀಯ ಕಾಲೇಜಿಗೆ ಅಡಿಗಲ್ಲು ಹಾಕುತ್ತಿರುವುದು ‘ಗಿಮಿಕ್’ ಎಂಬ ಬಿಜೆಪಿಯ ಆರೋಪಕ್ಕೆ ಸಿಎಂ ವಾಗ್ದಾಳಿ ನಡೆಸಿದರು. “ಬಿಜೆಪಿಯವರು ನಾಲ್ಕು ವರ್ಷ ಅಧಿಕಾರದಲ್ಲಿದ್ದಾಗ ಮೆಡಿಕಲ್ ಕಾಲೇಜು ಸ್ಥಾಪನೆ ಏಕೆ ಮಾಡಲಿಲ್ಲ? ನಾವು ಈಗಾಗಲೇ ಟೆಂಡರ್ ಕರೆದು ಏಜೆನ್ಸಿ ನಿಗದಿಪಡಿಸಿದ್ದೇವೆ. ಕೆಲಸ ಆರಂಭವಾಗಬೇಕಿರುವುದರಿಂದ ಅಡಿಗಲ್ಲು ಹಾಕುತ್ತಿದ್ದೇವೆ, ಇದರಲ್ಲಿ ಗಿಮಿಕ್ ಏನಿದೆ?” ಎಂದು ಪ್ರಶ್ನಿಸಿದರು.

ಸಿಲಿಂಡರ್ ಸರಬರಾಜು ಮತ್ತು ಒಳಮೀಸಲಾತಿ:

ರಾಜ್ಯದಲ್ಲಿ ಅಡುಗೆ ಅನಿಲ ಅಭಾವದ ಕುರಿತು ಪ್ರತಿಕ್ರಿಯಿಸಿದ ಅವರು, ಸಿಲಿಂಡರ್ ಸರಬರಾಜು ಮಾಡುವುದು ಕೇಂದ್ರ ಸರ್ಕಾರದ ಜವಾಬ್ದಾರಿ. ಕೇಂದ್ರ ಕೊಟ್ಟರೆ ಮಾತ್ರ ನಾವು ವಿತರಿಸಲು ಸಾಧ್ಯ. ಈಗಾಗಲೇ ಆಹಾರ ಸಚಿವರು ಈ ಕುರಿತು ಸಭೆ ನಡೆಸಿದ್ದು, ಕೇಂದ್ರಕ್ಕೆ ಪತ್ರ ಬರೆಯಲಾಗಿದೆ ಎಂದರು. ಇದೇ ವೇಳೆ, ಅತ್ಯಂತ ಕುತೂಹಲ ಮೂಡಿಸಿರುವ ‘ಒಳಮೀಸಲಾತಿ’ ಕುರಿತು ಚರ್ಚಿಸಲು ಮಾರ್ಚ್ 27 ರಂದು ಮಹತ್ವದ ಸಭೆ ಕರೆಯಲಾಗಿದ್ದು, ಅಂದು ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

Praveen Yalligutti
Praveen Yalliguttihttp://asalisuddi.com
ಕನ್ನಡದ ವಿವಿಧ ಸುದ್ದಿ ಮಾಧ್ಯಮ ಸಂಸ್ಥೆಗಳಲ್ಲಿ ಸುಮಾರು 8 ವರ್ಷಗಳ ಕಾಲ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ ನನಗಿದೆ. ಸುದ್ದಿಗಳ ಅಸಲಿಯತ್ತನ್ನು ಮತ್ತು ನಿಖರವಾದ ಮಾಹಿತಿಯನ್ನು ಜನರಿಗೆ ತಲುಪಿಸಬೇಕು ಎನ್ನುವ ಉದ್ದೇಶದಿಂದ ಈಗ 'ಅಸಲಿ ಸುದ್ದಿ' (Asali Suddi) ಎನ್ನುವ ಸುದ್ದಿ ಸಂಸ್ಥೆಯನ್ನು ಆರಂಭಿಸಿದ್ದೇನೆ. ಸತ್ಯಕ್ಕೆ ಹತ್ತಿರವಾದ ಮತ್ತು ಜನೋಪಕಾರಿ ವರದಿಗಳನ್ನು ನೀಡುವುದೇ ನನ್ನ ಮೊದಲ ಆದ್ಯತೆ.
RELATED ARTICLES

Most Popular

Recent Comments