State Politics: ಕರ್ನಾಟಕ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಯ ಪರ್ವ ಮುಗಿದಿದೆ. ಮೂರು ವರ್ಷಗಳ ಕಾಲ ಯಶಸ್ವಿಯಾಗಿ ಆಡಳಿತ ನಡೆಸಿದ ಸಿದ್ದರಾಮಯ್ಯನವರು (Siddaramaiah) ಹೈಕಮಾಂಡ್ ಸೂಚನೆಯಂತೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಕೆಪಿಸಿಸಿ ಸಾರಥಿ ಡಿ.ಕೆ. ಶಿವಕುಮಾರ್ (D.K. Shivakumar) ಅವರು ಜೂನ್ 3ರಂದು ನೂತನ ಮುಖ್ಯಮಂತ್ರಿಯಾಗಿ ಪಟ್ಟಾಭಿಷೇಕ ಮಾಡಿಸಿಕೊಂಡಿದ್ದಾರೆ. ಅಧಿಕಾರ ಹಸ್ತಾಂತರದ ಪ್ರಕ್ರಿಯೆ ಮೇಲ್ನೋಟಕ್ಕೆ ಅತ್ಯಂತ ಸುಸೂತ್ರವಾಗಿ ಮುಗಿದಂತೆ ಕಂಡರೂ, ಹೊಸದಾಗಿ ರಚನೆಯಾಗಿರುವ 13 ಸಚಿವರ ಮೊದಲ ಸಂಪುಟ ಪಟ್ಟಿ ಹೊರಬೀಳುತ್ತಿದ್ದಂತೆಯೇ ತಳಮಳಗಳು ಶುರುವಾಗಿವೆ. ಇದು ಕೇವಲ ಸಚಿವ ಸ್ಥಾನ ಸಿಗದ ನಾಯಕರ ವೈಯಕ್ತಿಕ ಅಳಲಲ್ಲ; ಬದಲಿಗೆ ಮುಂಬರುವ 2028ರ ಸಾರ್ವತ್ರಿಕ ಚುನಾವಣೆಯ ಒಳ-ರಾಜಕಾರಣದ ದೊಡ್ಡ ಲೆಕ್ಕಾಚಾರಗಳು ಇಲ್ಲಿಂದಲೇ ಆರಂಭವಾದಂತಿವೆ.
ಈ ಇಡೀ ರಾಜಕೀಯ ಧ್ರುವೀಕರಣದ ಕೇಂದ್ರಬಿಂದುವಾಗಿ ಕಾಣುತ್ತಿರುವುದು ಬೆಳಗಾವಿಯ ಸಾಹುಕಾರ್ ಸತೀಶ್ ಜಾರಕಿಹೊಳಿ ಹಾಗೂ ಅಲ್ಪಸಂಖ್ಯಾತ ಸಮುದಾಯದ ಪ್ರಭಾವಿ ನಾಯಕ ಜಮೀರ್ ಅಹಮದ್ ಖಾನ್ ಅವರ ನಡೆಗಳು. ಈ ಸಂದರ್ಭದಲ್ಲಿ ಸಿನಿಮಾದ ಡೈಲಾಗ್ ಒಂದು ಸರಿಹೊಂದುತ್ತೆ ಅಂತ ಅನಿಸುತ್ತೆ- “ಗಾಯಗೊಂಡಿರೋ ಸಿಂಹದ ಉಸಿರು ಅದರ ಘರ್ಜನೆ ಗಿಂತ ಭಯಾನಕವಾಗಿರುತ್ತೆ!” ಈಗ ಕಾಂಗ್ರೆಸ್ ಪಾಳಯದಲ್ಲಿ ಅಧಿಕಾರದಿಂದ ವಂಚಿತರಾಗಿ ಗಾಯಗೊಂಡಿರುವ ಈ ಇಬ್ಬರು ನಾಯಕರ ಒಳಉಸಿರು ಹೊಸ ಜುಗಲ್ಬಂದಿಯಾಗಿ ಬದಲಾಗಿದ್ದು, ಇದು ಕೇವಲ ಸಚಿವ ಸ್ಥಾನದ ಹಂಚಿಕೆಯ ಅಸಮಾಧಾನವಲ್ಲ, ಇದು ಹೊಸ ಸಿಎಂ ಕೋಟೆಯ ಬುಡಕ್ಕೇ ಇಡಲಾಗಿರುವ ಸುಪ್ತ ರಾಜಕೀಯ ಡೈನಮೈಟ್!
ಸಿದ್ದರಾಮಯ್ಯ ಬಣ ಬಿಟ್ಟು ಡಿಕೆಶಿ ಕೈಹಿಡಿದಿದ್ದ ಸಾಹುಕಾರನಿಗೆ ಕಾದಿತ್ತು ಶಾಕ್!
ರಾಜಕೀಯದಲ್ಲಿ ಸಮಯಸಾಧಕತನ ಮತ್ತು ದೂರದೃಷ್ಟಿ ಎರಡೂ ಒಟ್ಟೊಟ್ಟಿಗೇ ಸಾಗುತ್ತವೆ. ಸಿದ್ದರಾಮಯ್ಯನವರು ಸಿಎಂ ಕುರ್ಚಿಯಿಂದ ಕೆಳಗಿಳಿಯುವ ನಿರ್ಣಾಯಕ ಕ್ಷಣ ಹತ್ತಿರವಾಗುತ್ತಿದ್ದಂತೆ, ಸತೀಶ್ ಜಾರಕಿಹೊಳಿ ಅವರು ತಮ್ಮ ರಾಜಕೀಯ ಗಾಡ್‌ಫಾದರ್ ಸಿದ್ದರಾಮಯ್ಯ ಅವರಿಂದ ದೂರ ಸರಿದು, ಡಿ.ಕೆ. ಶಿವಕುಮಾರ್ ಅವರ ಪಾಳಯದ ಜೊತೆ ಅತಿಯಾದ ಆಪ್ತತೆ ಪ್ರದರ್ಶಿಸಲು ಶುರುಮಾಡಿದ್ದರು. ಆ ದಿನಗಳಲ್ಲಿ ಅವರಿಬ್ಬರ ರಹಸ್ಯ ಸಭೆಗಳು, ಆಪ್ತ ಒಡನಾಟದ ಫೋಟೋಗಳು ಮತ್ತು ವೀಡಿಯೋಗಳು ಮಾಧ್ಯಮಗಳಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದವು. ರಾಜಕೀಯ ವಿಶ್ಲೇಷಕರೆಲ್ಲರೂ “ತಮ್ಮ ರಾಜಕೀಯ ಭವಿಷ್ಯದ ಮುಂದಿನ ಬೆಳವಣಿಗೆಗಾಗಿ ಸಾಹುಕಾರ್ ಸಿದ್ದರಾಮಯ್ಯ ಬಣವನ್ನೇ ಕೈಬಿಟ್ಟು ಡಿಕೆಶಿ ಜೊತೆ ಕೈಜೋಡಿಸಿದರು” ಎಂದು ಬಹಿರಂಗವಾಗಿಯೇ ವಿಶ್ಲೇಷಿಸಿದ್ದರು.
ಆದರೆ, ಬೆಳಗಾವಿ ಸಾಹುಕಾರ್ ಮನಸ್ಸಿನಲ್ಲಿದ್ದ ಅಸಲಿ ಗೇಮ್ ಪ್ಲಾನ್ ಬೇರೆಯದೇ ಇತ್ತು! ಡಿಕೆಶಿ ಮುಖ್ಯಮಂತ್ರಿಯಾಗುತ್ತಿದ್ದಂತೆಯೇ ತೆರವಾಗುವ ಕೆಪಿಸಿಸಿ ಅಧ್ಯಕ್ಷ ಸ್ಥಾನ ತಮಗೆ ಸಿಗುತ್ತದೆ ಎಂಬ ಗಾಢವಾದ ನಂಬಿಕೆಯಲ್ಲಿ ಜಾರಕಿಹೊಳಿ ಇದ್ದರು. ಒಮ್ಮೆ ಆ ಪ್ರಭಾವಿ ಸಂಘಟನಾತ್ಮಕ ಹುದ್ದೆ ಕೈಗೆ ಸಿಕ್ಕರೆ, ರಾಜ್ಯಾದ್ಯಂತ ಇರುವ ‘ಅಹಿಂದ’ ಮತಬ್ಯಾಂಕ್ ಅನ್ನು ತಮ್ಮ ಹಿಡಿತಕ್ಕೆ ತರಬಹುದು, ತನ್ಮೂಲಕ 2028ರ ಚುನಾವಣೆಯ ಹೊತ್ತಿಗೆ ‘ಪರಿಶಿಷ್ಟ ಪಂಗಡದ (ST) ಮೊದಲ ಸಿಎಂ’ ಎಂಬ ಅಸ್ತ್ರ ಬಳಸಿ ಹೈಕಮಾಂಡ್ ಮಟ್ಟದಲ್ಲಿ ಒತ್ತಡ ಹೇರಬಹುದು ಎಂಬುದು ಸಾಹುಕಾರನ ಮಾಸ್ಟರ್ ಪ್ಲಾನ್ ಆಗಿತ್ತು.
ಆದರೆ, ಇಲ್ಲಿ ರಾಜಕೀಯದ ಲೆಕ್ಕಾಚಾರಗಳು ಉಲ್ಟಾ ಹೊಡೆದಿವೆ. ಹೈಕಮಾಂಡ್ ಸದ್ದಿಲ್ಲದೆ ಬಿ.ಕೆ. ಹರಿಪ್ರಸಾದ್ ಅವರಿಗೆ ಕೆಪಿಸಿಸಿ ಸಾರಥ್ಯ ವಹಿಸುವ ಮೂಲಕ ಸತೀಶ್ ಜಾರಕಿಹೊಳಿ ಅವರ ದೀರ್ಘಕಾಲದ ಕನಸಿಗೆ ತಣ್ಣೀರು ಎರಚಿದೆ. ಇತ್ತ, ತಮಗೆ ಸಿಎಂ ಪಟ್ಟ ಸಿಗುವವರೆಗೂ ಸಾಹುಕಾರನನ್ನು ಅತ್ಯಂತ ಚಾಣಾಕ್ಷತನದಿಂದ ಬಳಸಿಕೊಂಡ ಡಿ.ಕೆ. ಶಿವಕುಮಾರ್, ಅಧಿಕಾರ ಸಿಗುತ್ತಿದ್ದಂತೆಯೇ ‘ಕೆಲಸ ಮುಗಿಯಿತು’ ಎಂಬಂತೆ ಅವರನ್ನು ಸೈಡ್‌ಲೈನ್ ಮಾಡಿದರಾ ಎಂಬ ಸಂಶಯಗಳು ಈಗ ದಟ್ಟವಾಗಿವೆ. ತಮಗೆ ಕೇವಲ ಸಚಿವ ಸ್ಥಾನ ನೀಡಿ, ಸಂಘಟನಾತ್ಮಕ ಶಕ್ತಿಯಿಂದ ದೂರವಿಟ್ಟಿದ್ದಕ್ಕೆ ಸತೀಶ್ ಜಾರಕಿಹೊಳಿ ಒಳಗೊಳಗೇ ತೀವ್ರವಾಗಿ ಮುನಿಸಿಕೊಂಡಿದ್ದಾರೆ.
ಇದನ್ನೂ ಓದಿ: Satish Jarkiholi: ಡಿಕೆಶಿ ಮೈತ್ರಿ ಉಲ್ಟಾ, ಸಿದ್ದುಗೆ ಶರಣು? ಮತ್ತೆ ಅಹಿಂದ ನಾಯಕನ ಪಾಳಯ ಸೇರಿದ ಸತೀಶ್!
‘ಆಡಿಯೋ ಬಾಂಬ್’ ಪ್ರಹಸನ ಮತ್ತು ಜಮೀರ್ ರೆಕ್ಕೆ ಕತ್ತರಿಸಿದ ತಂತ್ರ!
ಮತ್ತೊಂದೆಡೆ, ಹಳೆ ಮೈಸೂರು ಭಾಗ ಸೇರಿದಂತೆ ರಾಜ್ಯದ ಮುಸ್ಲಿಂ ಸಮುದಾಯದಲ್ಲಿ ತೀವ್ರ ಹಿಡಿತ ಹೊಂದಿರುವ ಜಮೀರ್ ಅಹಮದ್ ಖಾನ್ ಅವರನ್ನು ಹೊಸ ಸಂಪುಟದಿಂದ ವ್ಯವಸ್ಥಿತವಾಗಿ ಹೊರಗಿಡಲಾಗಿದೆ. ಅಲ್ಪಸಂಖ್ಯಾತ ಕೋಟಾದಡಿ ಯು.ಟಿ. ಖಾದರ್ ಅವರಿಗೆ ಸಚಿವ ಸ್ಥಾನ ನೀಡಿ ಹೈಕಮಾಂಡ್ ಕೇವಲ ಪ್ರಾದೇಶಿಕ ಸಮತೋಲನದ ನೆಪಗಳನ್ನು ನೀಡುತ್ತಿದೆ. ಆದರೆ ಜಮೀರ್ ಅವರ ಮಂತ್ರಿಭಾಗ್ಯಕ್ಕೆ ಕತ್ತರಿ ಹಾಕಲು ನಡೆದ ಒಳಸಂಚು ಅತ್ಯಂತ ವ್ಯವಸ್ಥಿತವಾಗಿತ್ತು.
ಮೊದಲನೆಯದಾಗಿ, ದಾವಣಗೆರೆ ಉಪಚುನಾವಣೆಯ ಸಂದರ್ಭದ ಹಳೇ ಪಕ್ಷವಿರೋಧಿ ಚಟುವಟಿಕೆಗಳ ರಿಪೋರ್ಟ್ ಅನ್ನು ಸರಿಯಾಗಿ ಸಂಪುಟ ರಚನೆಯ ಹೊತ್ತಿಗೆ ಹೈಕಮಾಂಡ್ ಮುಂದೆ ತರಲಾಯಿತು. ಅದಕ್ಕಿಂತಲೂ ಮಿಗಿಲಾಗಿ, ಹೊಸ ಸಿಎಂ ಪಟ್ಟಾಭಿಷೇಕವಾಗುವ ಕೆಲವೇ ಗಂಟೆಗಳ ಮುನ್ನ ಜಮೀರ್ ಅವರದ್ದೆನ್ನಲಾದ ವಿವಾದಾತ್ಮಕ ಆಡಿಯೋ ಒಂದನ್ನು ವ್ಯವಸ್ಥಿತವಾಗಿ ಲೀಕ್ ಮಾಡಲಾಯಿತು. ಅದು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಳಸಿ ವಿರೋಧಿಗಳು ಸೃಷ್ಟಿಸಿದ ನಕಲಿ ಧ್ವನಿ ಎಂದು ಜಮೀರ್ ಕಿಡಿಕಾರಿದ್ದರೂ, ಹೈಕಮಾಂಡ್ ಮತ್ತು ಹೊಸ ಸಿಎಂ ಬಣ ಆ ಆಡಿಯೋವನ್ನೇ ಅಸ್ತ್ರವಾಗಿ ಬಳಸಿ ಜಮೀರ್ ಅವರನ್ನು ಸಂಪುಟದಿಂದ ದೂರ ಇಡುವಲ್ಲಿ ಯಶಸ್ವಿಯಾಗಿದೆ.
ಕಷ್ಟಕಾಲದ ದೋಸ್ತಿ: ಸಾಹುಕಾರ್ ಕೊಟ್ಟ ವಾರ್ನಿಂಗ್!
ಬೆಳಗಾವಿ ಸಾಹುಕಾರರ ರಾಜಕೀಯ ದಾಳಗಳು ಎಷ್ಟು ನಿಗೂಢ ಮತ್ತು ತೀಕ್ಷ್ಣ ಎಂಬುದು ಇಡೀ ರಾಜ್ಯಕ್ಕೆ ಗೊತ್ತು. ಕೆಪಿಸಿಸಿ ಅಧ್ಯಕ್ಷ ಪಟ್ಟ ಸಿಗದ ಕೋಪವನ್ನು ಸತೀಶ್ ಎಲ್ಲೂ ಬಹಿರಂಗವಾಗಿ ತೋರ್ಪಡಿಸಿಕೊಳ್ಳುತ್ತಿಲ್ಲ. ಆದರೆ, ಮಂತ್ರಿ ಸ್ಥಾನ ಸಿಗದೆ ಮೂಲೆಗುಂಪಾಗಿರುವ ಜಮೀರ್ ಅಹಮದ್ ಖಾನ್ ಬೆನ್ನಿಗೆ ನಿಲ್ಲಲು ಸಾಹುಕಾರ್ ಧಾವಿಸಿ ಬಂದಿರುವುದರ ಹಿಂದೆ ದೊಡ್ಡದೊಂದು ರಾಜತಾಂತ್ರಿಕ ನಡೆ ಅಡಗಿದೆ.
ಸತೀಶ್ ಜಾರಕಿಹೊಳಿ ಮಾಧ್ಯಮಗಳ ಮುಂದೆ ಹೇಳಿರುವ ಮಾತುಗಳು ನೂತನ ಸಿಎಂ ಬಣಕ್ಕೆ ನೇರ ಎಚ್ಚರಿಕೆಯಂತಿದೆ:
“ಜಮೀರ್ ಶಕ್ತಿ ನಮಗೂ ಗೊತ್ತು, ಪಕ್ಷಕ್ಕೂ ಗೊತ್ತು. ಅವರ ಸೇವೆ ಸಮುದಾಯಕ್ಕೆ ಹಾಗೂ ನಮಗೂ ಬೇಕಿದೆ. ಇನ್ನೇನು ಮಾಡೋರು ಬಿಟ್ಟರೆ, ಇನ್ನ ಮಂತ್ರಿ ಹೋದಮೇಗೆ ಏನ್ ಮಾಡೋರು ಅಂತ? ಈಗ ಅವರ ಉದ್ದೇಶ ಸಫಲ ಆಯ್ತು…”
ಸಾಹುಕಾರನ ಈ ಹೇಳಿಕೆ ಕೇವಲ ಜಮೀರ್ ಪರವಾದ ಬ್ಯಾಟಿಂಗ್ ಅಲ್ಲ; ಬದಲಿಗೆ ತಮಗೆ ಹಾಗೂ ಜಮೀರ್ ಇಬ್ಬರಿಗೂ ದ್ರೋಹ ಬಗೆದವರಿಗೆ ನೀಡಿದ ನೇರ ರಾಜಕೀಯ ಸಂದೇಶ!
ಯಾರನ್ನು ನಂಬಿ ಸಿದ್ದರಾಮಯ್ಯ ಬಣವನ್ನು ತಾತ್ಕಾಲಿಕವಾಗಿ ಬಿಟ್ಟು ಹೋಗಿದ್ದರೋ, ಅಲ್ಲಿ ತಮಗೆ ಸಿಕ್ಕಿದ್ದು ಕೇವಲ ಸ್ಥಾನವೇ ಹೊರತು ಅಧಿಕಾರವಲ್ಲ ಎಂಬ ಸತ್ಯ ಸತೀಶ್ ಜಾರಕಿಹೊಳಿ ಅವರಿಗೆ ಈಗ ಮನವರಿಕೆಯಾಗಿದೆ. ಹೀಗಾಗಿ, ತಮಗಾದ ಮುಖಭಂಗ ಮತ್ತು ಜಮೀರ್‌ಗೆ ಆದ ಅನ್ಯಾಯ ಎರಡನ್ನೂ ಒಟ್ಟಾಗಿ ಇಟ್ಟುಕೊಂಡು ಸಾಹುಕಾರ್ ಈಗ ‘ಅಹಿಂದ’ ಸಂಘಟನೆಯನ್ನು ಮತ್ತೆ ಮುನ್ನೆಲೆಗೆ ತರಲು ಹೊರಟಿದ್ದಾರೆ. ಜಮೀರ್ ಅವರಿಗೆ ಸಾಥ್ ನೀಡುವ ಮೂಲಕ ಹೊಸ ಸಿಎಂ ವಿರುದ್ಧ ಆಂತರಿಕ ಬಂಡಾಯದ ತಂತ್ರಗಾರಿಕೆಗೆ ಸಾಹುಕಾರ್ ಮುನ್ನುಡಿ ಬರೆದಿದ್ದಾರೆ.
ಡಿಕೆಶಿ ಕೋಟೆಗೆ ಗಂಡಾಂತರ ಫಿಕ್ಸ್!?
ಡಿ.ಕೆ. ಶಿವಕುಮಾರ್ ಅವರು ಸಿಎಂ ಕುರ್ಚಿಗೇರಿದ ಆರಂಭಿಕ ದಿನಗಳಲ್ಲೇ ಈ ಇಬ್ಬರು ಪ್ರಭಾವಿ ನಾಯಕರು ಒಂದಾಗಿರುವುದು ಸರ್ಕಾರದ ಸ್ಥಿರತೆಗೆ ಖಂಡಿತಾ ಒಳ್ಳೆಯ ಬೆಳವಣಿಗೆಯಲ್ಲ. ಸಿದ್ದರಾಮಯ್ಯನವರು ಅಧಿಕಾರದಿಂದ ಕೆಳಗಿಳಿದಿರಬಹುದು, ಆದರೆ ಅವರ ಆಪ್ತ ವಲಯದ ಅಹಿಂದ ನಾಯಕರಾದ ಜಾರಕಿಹೊಳಿ ಮತ್ತು ಜಮೀರ್ ಒಟ್ಟಾಗಿ ಇಟ್ಟಿರುವ ಈ ಹೆಜ್ಜೆ ಹೊಸ ಸರ್ಕಾರದ ಆಡಳಿತದ ಹಾದಿಯನ್ನು ದುಸ್ತರಗೊಳಿಸಲಿದೆ.
ಉತ್ತರ ಕರ್ನಾಟಕದ ವಾಲ್ಮೀಕಿ ಸಮುದಾಯ ಮತ್ತು ಶೋಷಿತ ವರ್ಗಗಳ ಮೇಲೆ ಹಿಡಿತ ಹೊಂದಿರುವ ಜಾರಕಿಹೊಳಿ ಹಾಗೂ ರಾಜ್ಯಾದ್ಯಂತ ಮುಸ್ಲಿಂ ಮತಬ್ಯಾಂಕ್‌ನ ಪ್ರಭಾವಿ ನಾಯಕರಾಗಿರುವ ಜಮೀರ್ ಒಂದಾದರೆ, ಅದು ಶಾಸಕರ ಸಂಖ್ಯಾಬಲದ ಮೇಲೆ ನೇರ ಪರಿಣಾಮ ಬೀರಬಲ್ಲದು. ಮುಂಬರುವ ದಿನಗಳಲ್ಲಿ ಬಾಕಿ ಉಳಿದಿರುವ ಸಚಿವ ಸ್ಥಾನಗಳ ವಿಸ್ತರಣೆಯ ಸಂದರ್ಭದಲ್ಲಿ ಅಥವಾ ನಿಗಮ ಮಂಡಳಿಗಳ ಹಂಚಿಕೆಯ ವೇಳೆಗೆ ಈ ಗಾಯಗೊಂಡ ಸಿಂಹಗಳ ಒಳಉಸಿರು ದೊಡ್ಡ ಮಟ್ಟದ ಸ್ಫೋಟಕ್ಕೆ ಸಾಕ್ಷಿಯಾಗಬಹುದು.
ಅಧಿಕಾರದ ಉತ್ತುಂಗದಲ್ಲಿರುವ ಡಿ.ಕೆ. ಶಿವಕುಮಾರ್ ಅವರಿಗೆ, ತಮ್ಮದೇ ಕೋಟೆಯ ಒಳಗೇ ಹೊಗೆಯಾಡುತ್ತಿರುವ ಈ ಭಿನ್ನಮತದ ಜ್ವಾಲೆಯನ್ನು ಹದ್ದುಬಸ್ತಿನಲ್ಲಿಡುವುದು ಅಷ್ಟು ಸುಲಭವಲ್ಲ. ಸಾಹುಕಾರನ ಮುಂದಿನ ನಿಗೂಢ ನಡೆ ಮತ್ತು ಜಮೀರ್ ಅವರ ಮುಂದಿನ ಹೆಜ್ಜೆಗಳು ಇಡೀ ಕಾಂಗ್ರೆಸ್ ಸಾಮ್ರಾಜ್ಯವನ್ನು ಹೇಗೆ ಕಂಗೆಡಿಸುತ್ತವೆ ಎಂಬುದನ್ನು ಮುಂಬರುವ ದಿನಗಳಲ್ಲಿ ಕಾದು ನೋಡಬೇಕಿದೆ.

