ಬೆಂಗಳೂರು: ಮಂಗಳೂರು ಮೂಲದ ಮುಂಬೈ ಬೆಡಗಿ ರಕ್ಷಿತಾ ಶೆಟ್ಟಿ (Rakshita Shetty) ಅವರ ‘ಕನ್ನಡ ಪ್ರೇಮ’ ಈಗ ಸೋಷಿಯಲ್ ಮೀಡಿಯಾದಲ್ಲಿ ಹೊಸ ಸಂಚಲನ ಸೃಷ್ಟಿಸುತ್ತಿದೆ. ಬಿಗ್ ಬಾಸ್ ಮನೆಯಲ್ಲಿ ತಮ್ಮ ಮುಗ್ಧತೆಯಿಂದಲೇ ಮನ ಗೆದ್ದಿದ್ದ ರಕ್ಷಿತಾ, ಈಗ ಸಹ-ಸ್ಪರ್ಧಿಗಳ ಹೆಸರುಗಳನ್ನು “ರೀ-ಬ್ರ್ಯಾಂಡ್” ಮಾಡುವ ಮೂಲಕವೇ ಸುದ್ದಿಯಾಗುತ್ತಿದ್ದಾರೆ. ಕರಿಬಸಯ್ಯ ಅವರ ಹೆಸರನ್ನು ‘ಕರಿಬಸೊಪ್ಪು’ ಮಾಡಿದ್ದ ರಕ್ಷಿತಾ, ಈಗ ವರ್ತೂರು ಸಂತೋಷ್ ಅವರಿಗೂ ಒಂದು ವಿಭಿನ್ನ ಹೆಸರಿಟ್ಟಿದ್ದಾರೆ!
‘ವಂತೂರು ಸಂತೂರು’ ಆದ್ರು ವರ್ತೂರು!
ಮೂಲತಃ ಮುಂಬೈನಲ್ಲಿ ಬೆಳೆದ ರಕ್ಷಿತಾ ಶೆಟ್ಟಿ (Rakshita Shetty) ಅವರಿಗೆ ಕನ್ನಡದ ಉಚ್ಚಾರಣೆ ಸ್ವಲ್ಪ ಕಷ್ಟ. ಅವರು ಎಗ್ಸೈಟ್ ಆದರೆ ಸಾಕು, ಪದಗಳೆಲ್ಲ ಉಲ್ಟಾಪಲ್ಟಾ ಆಗುತ್ತವೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಅವರು ವರ್ತೂರು ಸಂತೋಷ್ ಅವರ ಹೆಸರನ್ನು ಹೇಳಲು ಹೋಗಿ, “ವಂತೂರು ಸಂತೂರು” ಎಂದು ಕರೆದಿದ್ದಾರೆ.
ಹಳ್ಳಿಕಾರ್ ತಳಿಯ ರಕ್ಷಣೆಗಾಗಿ ‘ಹಳ್ಳಿಕಾರ್ ಒಡೆಯ’ ಎಂದೇ ಖ್ಯಾತಿ ಪಡೆದ ವರ್ತೂರು ಸಂತೋಷ್ ಅವರ ಹೆಸರನ್ನು ರಕ್ಷಿತಾ ಹೇಳಿದ ಶೈಲಿ ನೋಡಿ ಅಭಿಮಾನಿಗಳು, “ಅಣ್ಣ ಈಗ ಸೋಪ್ ಬ್ರ್ಯಾಂಡ್ ಆಂಬಾಸಿಡರ್ ಆಗಿಬಿಟ್ಟರಲ್ಲಪ್ಪಾ” ಎಂದು ಕಾಲೆಳೆಯುತ್ತಿದ್ದಾರೆ.
ಮಲ್ಲಿಗೆಗಿಂತ ‘ಹನುಮಂತ’ ನೀನು!
ರಕ್ಷಿತಾ ಶೆಟ್ಟಿ (Rakshita Shetty) ಅವರ ಎಡವಟ್ಟು ಇಲ್ಲಿಗೆ ನಿಂತಿಲ್ಲ. ಇತ್ತೀಚೆಗೆ ವೇದಿಕೆಯೊಂದರ ಮೇಲೆ ‘ಸೇವಂತಿಯೇ ಸೇವಂತಿಯೇ’ ಹಾಡಿಗೆ ಹೆಜ್ಜೆ ಹಾಕುತ್ತಿದ್ದ ಅವರು, ಹಾಡಿನ ಸಾಲನ್ನು ಹೇಳುವಾಗ ಮಾಡಿರುವ ಎಡವಟ್ಟು ಅಂತಿಂಥದ್ದಲ್ಲ. “ಮಲ್ಲಿಗೆಗಿಂತ ಬಲು ಅಂದ ನೀನು” ಎಂದು ಹೇಳುವ ಬದಲು, ಗಂಭೀರವಾಗಿಯೇ “ಮಲ್ಲಿಗೆಗಿಂತ ಹನುಮಂತ ನೀನು” ಎಂದು ಹಾಡಿ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿದ್ದಾರೆ.
ಸೌಂದರ್ಯಕ್ಕೆ ಹೋಲಿಸುವ ಪದವನ್ನು ಹೋಗಿ ಸಾಕ್ಷಾತ್ ಹನುಮಂತನಿಗೆ ಹೋಲಿಸಿದ ರಕ್ಷಿತಾ ಅವರ ಈ ವಿಡಿಯೋ ಈಗ ಟ್ರೋಲ್ ಪೇಜ್‌ಗಳಿಗೆ ಫುಲ್ ಮೀಲ್ಸ್ ಆಗಿದೆ.
ಇದನ್ನೂ ಓದಿ: ಪಾಪ ಕೂಪದ ಕ್ವೀನ್; ಎಫ್‌ಸ್ಟೀನ್ ಸಾಮ್ರಾಜ್ಯದ ಅಸಲಿ ಸೂತ್ರಧಾರಿ ಈಕೆಯೇ!
ಕರಿಬಸೊಪ್ಪು ಈಗ ಇತಿಹಾಸ!
ಈ ಹಿಂದೆ ಕರಿಬಸಯ್ಯ ಅವರನ್ನು ‘ಕರಿಬಸೊಪ್ಪು’ ಎಂದು ಕರೆದಾಗಲೂ ಇಂತಹುದೇ ದೊಡ್ಡ ಮಟ್ಟದ ಟ್ರೋಲ್ ಆಗಿತ್ತು. ಆದರೆ ಅದನ್ನೇ ಸಕಾರಾತ್ಮಕವಾಗಿ ತೆಗೆದುಕೊಂಡಿದ್ದ ಕರಿಬಸಯ್ಯ, “ನೀನು ಕರಿಬಸೊಪ್ಪು ಎಂದ ಮೇಲೆಯೇ ನನಗೆ ಇಷ್ಟು ಜನಪ್ರಿಯತೆ ಸಿಕ್ಕಿದ್ದು” ಎಂದು ರಕ್ಷಿತಾ ಅವರ ಮುಗ್ಧತೆಯನ್ನು ಮೆಚ್ಚಿಕೊಂಡಿದ್ದರು.
ದೊಡ್ಮನೆ ಹಬ್ಬದಲ್ಲಿ ಭಾವುಕ ಕ್ಷಣ
ಬರಿ ತಮಾಷೆ ಮಾತ್ರವಲ್ಲ, ‘ದೊಡ್ಮನೆ ಹಬ್ಬ’ ಕಾರ್ಯಕ್ರಮದಲ್ಲಿ ರಕ್ಷಿತಾ ಶೆಟ್ಟಿ ಬಿಗ್ ಬಾಸ್ ದಿನಗಳನ್ನು ನೆನೆದು ಕಣ್ಣೀರು ಹಾಕಿದ್ದಾರೆ. ಪದಗಳನ್ನು ತಪ್ಪಾಗಿ ಹೇಳಿದರೂ ಅವರ ಮನಸ್ಸು ಶುದ್ಧವಾಗಿದೆ ಎಂದು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಒಟ್ಟಿನಲ್ಲಿ, ರಕ್ಷಿತಾ ಶೆಟ್ಟಿ ಯಾರಿಗೆ ಯಾವ ಹೆಸರಿಟ್ಟರೂ ಅಥವಾ ಯಾವ ಹಾಡನ್ನು ಹೇಗೆ ಹಾಡಿದರೂ ಅದು ಸೋಷಿಯಲ್ ಮೀಡಿಯಾದಲ್ಲಿ ‘ಸೂಪರ್ ಹಿಟ್’ ಆಗುವುದಂತೂ ಗ್ಯಾರಂಟಿ!

