Mudhol Farmers: ಕರ್ನಾಟಕದ ಕಬ್ಬು ಬೆಳೆಗಾರರ ಕಣಜ ಎಂದೇ ಕರೆಯಲ್ಪಡುವ ಬಾಗಲಕೋಟೆ ಜಿಲ್ಲೆಯ ಮುಧೋಳ ಭೂಮಿಯಲ್ಲಿ, ದಿ. ಅಪ್ರತಿಮ ರೈತ ಹೋರಾಟಗಾರ ರಮೇಶ್ ಗಡದನ್ನವರ ಅವರ ಆದರ್ಶ ಮತ್ತು ಸ್ಫೂರ್ತಿಯೊಂದಿಗೆ ಕಬ್ಬು ಬೆಳೆಗಾರರು ನಡೆಸಿದ ಹೋರಾಟವು ಕೊನೆಗೂ ಐತಿಹಾಸಿಕ ಯಶಸ್ಸನ್ನು ಕಂಡಿದೆ. ರಾಜ್ಯದ ಕೃಷಿ ಹಾಗೂ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿರುವ ಈ ಬೆಳವಣಿಗೆಯು, ಕೇವಲ ಮುಧೋಳ ತಾಲೂಕಿಗೆ ಮಾತ್ರವಲ್ಲದೆ ಇಡೀ ಕಲ್ಯಾಣ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ರೈತ ಸಮುದಾಯಕ್ಕೆ ಒಂದು ದೊಡ್ಡ ಸ್ಪೂರ್ತಿಯಾಗಿದೆ. ಪ್ರತೀ ಟನ್ ಕಬ್ಬಿಗೆ ಮೊದಲ ಕಂತಿನ ಹಣವಾಗಿ ರೂ. 3,800 ಘೋಷಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿರುವ ಮುಧೋಳ ರೈತರ ಈ ದಿಟ್ಟ ಹೆಜ್ಜೆಯು ಕಾರ್ಖಾನೆಗಳ ಆಡಳಿತ ಮಂಡಳಿಗಳು ಮತ್ತು ರಾಜಕಾರಣಿಗಳಿಗೆ ತಕ್ಕ ಪಾಠ ಕಲಿಸಿದೆ. ಈ ಸಂಪೂರ್ಣ ಹೋರಾಟದ ಹಿನ್ನೆಲೆ, ಸಂಘಟನಾ ಶಕ್ತಿ ಮತ್ತು ಇದರ ಆಳವಾದ ವಿಶ್ಲೇಷಣೆ ಇಲ್ಲಿದೆ.
ರಾಜಕೀಯ ನಿರ್ಧಾರಗಳ ವಿರುದ್ಧ ಮುಧೋಳದ ಮುನಿಸು: ಹೋರಾಟಕ್ಕೆ ಸ್ಪಷ್ಟನೆ
ಕೆಲ ದಿನಗಳ ಹಿಂದೆ ಬೆಳಗಾವಿ ಜಿಲ್ಲೆಯಲ್ಲಿ ನಡೆದ ಕಬ್ಬು ಬೆಳೆಗಾರರ ಹೋರಾಟದ ಸಂದರ್ಭದಲ್ಲಿ ಪ್ರತೀ ಟನ್ಗೆ ರೂ. 3,600 ನಿಗದಿಪಡಿಸಿ, ಕೆಲ ಮುಖಂಡರು ಗುಲಾಲ್ ಹಾರಿಸಿ ಸಂಭ್ರಮಿಸಿದ್ದರು. ಆದರೆ, ಈ ಒಪ್ಪಂದವನ್ನು ಮುಧೋಳದ ರೈತರು (Mudhol Farmers) ಆರಂಭದಿಂದಲೂ ತೀವ್ರವಾಗಿ ವಿರೋಧಿಸಿದರು.
“ಬೆಳಗಾವಿ ಉಸ್ತುವಾರಿ ಸಚಿವರು ಅಥವಾ ರಾಜಕೀಯ ನಾಯಕರು ನಿರ್ಧರಿಸಿದ ಮಾತ್ರಕ್ಕೆ ಅದೇ ಅಂತಿಮವೇ? ಸಚಿವ ಸತೀಶ್ ಜಾರಕಿಹೊಳಿ ಅವರು ರಾಜ್ಯದ ಮುಖ್ಯಮಂತ್ರಿಯೇ? ನಮ್ಮ ‘ಕಾಸ್ಟ್ ಆಫ್ ಕಲ್ಟಿವೇಷನ್’ (ಉತ್ಪಾದನಾ ವೆಚ್ಚ) ಮತ್ತು ಬೆವರಿನ ಬೆಲೆ ರಾಜಕಾರಣಿಗಳ ಕೃಪಾಪೋಷಿತ ನಿರ್ಧಾರಕ್ಕೆ ಬಲಿಯಾಗಲು ಸಾಧ್ಯವಿಲ್ಲ” ಎಂಬ ಕ್ರಾಂತಿಕಾರಿ ಪ್ರಶ್ನೆಗಳನ್ನು ಹೂಡುವ ಮೂಲಕ ಮುಧೋಳದ ರೈತರು ಒಂದು ಹೊಸ ರಾಜಕೀಯೇತರ ಹೋರಾಟದ ಧಾಟಿಯನ್ನು ಹುಟ್ಟುಹಾಕಿದರು. ಬೆಳಗಾವಿ ರೈತರಿಗಿಂತ ನಮಗೆ ಕನಿಷ್ಠ 200 ರೂಪಾಯಿ ಅಧಿಕ ಬೆಲೆ ಸಿಗಲೇಬೇಕೆಂದು ಪಟ್ಟುಹಿಡಿದು ನಿಂತ ಪರಿಣಾಮ, ಇಂದು ಮುಧೋಳದ ರೈತರು ರೂ. 3,800 ರ ಬಂಪರ್ ಬೆಲೆಯನ್ನು ಸಾಧಿಸಿ ತೋರಿಸಿದ್ದಾರೆ.
ಇದನ್ನೂ ಓದಿ: ಸಿದ್ದಸಿರಿ ಸೊಸೈಟಿ ಹಣಕಾಸು ವ್ಯವಹಾರ: ಕೇಂದ್ರದ ಪ್ರಶ್ನೆಗಳು ಮತ್ತು ಆಡಳಿತ ಮಂಡಳಿಯ ಸ್ಪಷ್ಟನೆ ಏನು?
ಮಂಡಿಬಾಗಿದ ಕಾರ್ಖಾನೆಗಳು: ಆಡಳಿತ ಮಂಡಳಿಗಳ ದಿಢೀರ್ ಶರಣಾಗತಿ
ಮುಧೋಳದ (Mudhol Farmers) ಸಂಗೊಳ್ಳಿ ರಾಯಣ್ಣ ವೃತ್ತ ಹಾಗೂ ಇತರೆಡೆ ತೀವ್ರಗೊಂಡ ಪ್ರತಿಭಟನೆಯು ದಿನದಿಂದ ದಿನಕ್ಕೆ ಸ್ಫೋಟಕ ರೂಪ ತಾಳಿದಾಗ, ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿಗಳು ಅನಿವಾರ್ಯವಾಗಿ ಮಣಿಯಬೇಕಾಯಿತು. ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್.ಪಿ) ಸಿದ್ದಾರ್ಥ್ ಗೋಯೆಲ್ ಅವರ ಮಧ್ಯಸ್ಥಿಕೆಯಲ್ಲಿ ನಡೆದ ಸಭೆ ಹಾಗೂ ಹೋರಾಟದ ಸ್ಥಳಕ್ಕೆ ಬಂದ ಅಧಿಕಾರಿಗಳ ಮೇಲೆ ರೈತರ ಒಗ್ಗಟ್ಟಿನ ಒತ್ತಡವೇ ಇಂದು ಯಶಸ್ವಿಯಾಗಿದೆ.
- ನಿರಾಣಿ ಶುಗರ್ಸ್: ಮಾಜಿ ಸಚಿವ ಮುರುಗೇಶ್ ನಿರಾಣಿ ಅವರ ಒಡೆತನದ ನಿರಾಣಿ ಶುಗರ್ಸ್ ಮೊದಲು ಎಚ್ಚೆತ್ತುಕೊಂಡು ರೂ. 3,800 ಘೋಷಣೆ ಮಾಡಿತು.
- ಗೋದಾವರಿ ಶುಗರ್ಸ್: ಮುಖ್ಯಾಧಿಕಾರಿ ಕಣಬೂರು ಅವರು ವೇದಿಕೆಗೆ ಆಗಮಿಸಿ ಅಧಿಕೃತ ಘೋಷಣೆ ಮಾಡುವುದರೊಂದಿಗೆ, ಬೆಳಗಾವಿಯ ಉಗಾರ್ ಶುಗರ್ಸ್ ಮಾದರಿಯಲ್ಲೇ ಎರಡನೇ ಕಂತಿನ ಹಣವನ್ನು ನೀಡುವುದಾಗಿ ಭರವಸೆ ನೀಡಿದರು.
- ಐಸಿಪಿಎಲ್ ಹಾಗೂ ಪ್ರಭುಲಿಂಗೇಶ್ವರ ಕಾರ್ಖಾನೆಗಳು: ಅಧಿಕಾರಿಗಳಾದ ಪ್ರಭುಗೌಡ ಸೇರಿದಂತೆ ಪ್ರಮುಖರು ರೈತರ ಬೇಡಿಕೆಗೆ ತಲೆಬಾಗಿ ಅಂತಿಮವಾಗಿ 3,800 ರೂ. ದರವನ್ನು ಅಧಿಕೃತವಡಿಸಿದರು.
ಸದ್ಯ ನಾಲ್ಕು ಪ್ರಮುಖ ಕಾರ್ಖಾನೆಗಳು ಅಧಿಕೃತವಾಗಿ ಈ ದರವನ್ನು ಒಪ್ಪಿಕೊಂಡಿದ್ದು, ಮುಂಬರುವ ದಿನಗಳಲ್ಲಿ ಜಿಲ್ಲೆಯ ಉಳಿದ 13 ಕಾರ್ಖಾನೆಗಳು ಕೂಡ ಇದೇ ಹಾದಿ ತುಳಿಯುವುದು ಅನಿವಾರ್ಯವಾಗಿದೆ. ಒಂದು ವೇಳೆ ಜಗ್ಗದಿದ್ದರೆ ಮುಧೋಳದ ಶೈಲಿಯಲ್ಲಿ ಕಾರ್ಖಾನೆಗಳಿಗೆ ಮುತ್ತಿಗೆ ಹಾಕುವ ಎಚ್ಚರಿಕೆಯನ್ನು ರೈತರು ಸ್ಪಷ್ಟಪಡಿಸಿದ್ದಾರೆ.
ದಿ. ರಮೇಶ್ ಗಡದನ್ನವರ ಹಾದಿ: ನೈಜ ಬಂಡಾಯದ ಶೈಲಿ
ಇಂದಿನ ಡಿಜಿಟಲ್ ಯುಗದಲ್ಲಿ ಲಕ್ಷಾಂತರ ಜನರ ಗುಂಪು ಸೇರಿಸುತ್ತೇವೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಹುಸಿ ಬೆದರಿಕೆ ಹಾಕಿ, ಕೊನೆಗೆ ರಾಜಕೀಯ ನಾಯಕರೊಂದಿಗೆ ರಾಜಿ ಮಾಡಿಕೊಳ್ಳುವ “ಮಧ್ಯವರ್ತಿ ಹೋರಾಟಗಾರರ” ಸಾಲಿಗೆ ಮುಧೋಳದ ರೈತರು ಸೇರುವುದಿಲ್ಲ.
ಇಲ್ಲಿಯ ಹೋರಾಟಕ್ಕೆ ದಶಕಗಳ ಇತಿಹಾಸವಿದೆ. ಅಪ್ರತಿಮ ರೈತ ಹೋರಾಟಗಾರ ದಿವಂಗತ ರಮೇಶ್ ಗಡದನ್ನವರ ಅವರು ಬಿತ್ತಿದ ದಿಟ್ಟತನದ ಬೀಜ ಇಂದು ಹೆಮ್ಮರವಾಗಿ ಬೆಳೆದಿದೆ. ಅವರು ಇಲ್ಲದಿದ್ದರೂ ಅವರ ಸಂಘಟನಾ ಶೈಲಿ, ರಾಜಕಾರಣಿಗಳಿಗೆ ಮತ್ತು ಅಧಿಕಾರಿಗಳಿಗೆ ಬೆವರಿಳಿಸುವ ಖಡಕ್ ಸ್ವಭಾವ ಮುಧೋಳದ ರೈತರ ರಕ್ತದಲ್ಲೇ ಹರಿಯುತ್ತಿದೆ. ತಾವು ರಸ್ತೆಗಿಳಿದರೆ ಅಧಿಕಾರಿಗಳೇ ತಮ್ಮ ಬಳಿಗೆ ಬರಬೇಕು ಎಂಬ ತಾಕತ್ತು ಇವರದ್ದು. 5,500 ರೂ. ಕೊಡಿಸುತ್ತೇವೆ ಎಂದು ದೊಡ್ಡ ಮಾತುಗಳನ್ನಾಡಿ ಕೊನೆಗೆ ಸರ್ಕಾರದ ಕನಿಷ್ಠ ಮೊತ್ತಕ್ಕೆ ತಲೆಬಾಗುವ ಅವಕಾಶವಾದಿ ರಾಜಕಾರಣವನ್ನು ಮುಧೋಳದ ರೈತರು ಎಂದಿಗೂ ಸಹಿಸುವುದಿಲ್ಲ.
ಇದನ್ನೂ ಓದಿ: ಗ್ರಾಮೀಣ ಜನರ ಆತ್ಮಗೌರವ ಕೆಣಕಿದ್ರಾ ಗೃಹ ಸಚಿವ ಪ್ರಿಯಾಂಕ್ ಖರ್ಗೆ? ಕಾಂಗ್ರೆಸ್ಗೆ ಸುಳಿಯದ ಸಂಕಟ, ಜೆಡಿಎಸ್ಗೆ ಬ್ರಹ್ಮಾಸ್ತ್ರ!
ಮುಂದಿನ ಸವಾಲುಗಳು
ಈ ಐತಿಹಾಸಿಕ ವಿಜಯವು ಕೇವಲ ಹಣಕಾಸಿನ ಬೇಡಿಕೆಯ ಈಡೇರಿಕೆಯಷ್ಟೇ ಅಲ್ಲ; ಇದು ಉತ್ತರ ಕರ್ನಾಟಕದ ರೈತ ಸಮುದಾಯದ ಸ್ವಾಭಿಮಾನದ ಪ್ರಶ್ನೆಯಾಗಿತ್ತು. ಕಾರ್ಪೊರೇಟ್ ಸಕ್ಕರೆ ಕಾರ್ಖಾನೆಗಳು ಮತ್ತು ರಾಜಕೀಯ ನಾಯಕರ ಒಡೆತನದ ಹಿತಾಸಕ್ತಿಗಳಿಗೆ ರೈತರು ಬಲಿಯಾಗಬಾರದು ಎಂಬುದನ್ನು ಮುಧೋಳದ ಈ ಬಂಡಾಯ ಮತ್ತೊಮ್ಮೆ ಸಾಬೀತುಪಡಿಸಿದೆ.
ರೈತರ ಏಕತೆ ಮತ್ತು ದೃಢಸಂಕಲ್ಪವಿದ್ದರೆ ಯಾವನೇ ದೊಡ್ಡ ಅಧಿಕಾರಿಯಾಗಲಿ ಅಥವಾ ಕಾರ್ಖಾನೆ ಮಾಲೀಕರಾಗಲಿ ಮಣಿಯಲೇಬೇಕು ಎಂಬುದಕ್ಕೆ ಈ ಹೋರಾಟ ಒಂದು ದಿಕ್ಸೂಚಿ. ಮುಧೋಳದ ಕಬ್ಬು ಬೆಳೆಗಾರರು ತೋರಿಸಿಕೊಟ್ಟಿರುವ ಈ ದಿಟ್ಟ ದಾರಿ,ರಾಜ್ಯದ ಇತರೆಡೆಗಳ ರೈತರಿಗೂ ಅಧಿಕಾರಶಾಹಿಯ ವಿರುದ್ಧ ಹೋರಾಡಲು ಹೊಸ ಶಕ್ತಿ ಹಾಗೂ ಚೈತನ್ಯವನ್ನು ತುಂಬಿದೆ.
ಯಾರ ಹಂಗೂ ಇಲ್ಲದ, ಯಾರಿಗೂ ಬಗ್ಗದ ಸ್ವತಂತ್ರ ಮಾಧ್ಯಮಕ್ಕೆ ನಿಮ್ಮ ಬೆಂಬಲದ ಅವಶ್ಯಕತೆ ಇದೆ...






