Wednesday, November 25, 2026
Home ವಿಶ್ಲೇಷಣೆ Farmers Protest: ಸಕ್ಕರೆ ಸಾಮ್ರಾಜ್ಯದ ರೌದ್ರನರ್ತನ! ಕಣ್ಣೀರಿಟ್ಟ ರೈತರು, ಶಾಪ ಹಾಕಿದ ಅರ್ಧನಾರೀಶ್ವರರು – ಸರ್ಕಾರಕ್ಕೆ...

Farmers Protest: ಸಕ್ಕರೆ ಸಾಮ್ರಾಜ್ಯದ ರೌದ್ರನರ್ತನ! ಕಣ್ಣೀರಿಟ್ಟ ರೈತರು, ಶಾಪ ಹಾಕಿದ ಅರ್ಧನಾರೀಶ್ವರರು – ಸರ್ಕಾರಕ್ಕೆ ವಿನಾಶದ ಎಚ್ಚರಿಕೆ!

Farmers Protest: ಸಕ್ಕರೆ ಸಾಮ್ರಾಜ್ಯದ ರೌದ್ರನರ್ತನ! ಕಣ್ಣೀರಿಟ್ಟ ರೈತರು, ಶಾಪ ಹಾಕಿದ ಅರ್ಧನಾರೀಶ್ವರರು – ಸರ್ಕಾರಕ್ಕೆ ವಿನಾಶದ ಎಚ್ಚರಿಕೆ!

Farmers Protest: ಬೆಳಗಾವಿ ಜಿಲ್ಲೆಯಲ್ಲಿ ಪ್ರತಿ ಕಬ್ಬು ನುರಿಸುವ ಋತುವಿನಲ್ಲಿ ಪುನರಾವರ್ತನೆಯಾಗುವ ಸರ್ಕಾರಿ ದೌರ್ಜನ್ಯ, ಖಾಕಿ ಪಡೆಗಳ ಅತಿಯಾದ ಉತ್ಸಾಹ ಮತ್ತು ಅನ್ನದಾತರ ಆರ್ತನಾದಕ್ಕೆ ಈ ಬಾರಿಯೂ ಕೊನೆ ಸಿಕ್ಕಿಲ್ಲ. “ಪ್ರತಿ ಟನ್ ಕಬ್ಬಿಗೆ 1,000 ರೂಪಾಯಿ ಹೆಚ್ಚುವರಿ ಪ್ರೋತ್ಸಾಹಧನ ನೀಡಲೇಬೇಕು” ಎಂದು ಆಗ್ರಹಿಸಿ ಮುಕ್ತಿಮಠದಿಂದ ಬೆಳಗಾವಿ ನಗರದ ಕಡೆಗೆ ಹಮ್ಮಿಕೊಂಡಿದ್ದ ಐತಿಹಾಸಿಕ ಪಾದಯಾತ್ರೆಯನ್ನು ಹತ್ತಿಕ್ಕಲು ಮುಂದಾಗಿರುವ ಆಡಳಿತ ವ್ಯವಸ್ಥೆ, ರೈತರ ಧ್ವನಿಯನ್ನು ಹತ್ತಿಕ್ಕುವ ಯತ್ನಕ್ಕೆ ಕೈಹಾಕಿದೆ. ಕಾರ್ಖಾನೆಗಳ ಮಾಲೀಕರ ಹಿತಾಸಕ್ತಿ ಕಾಯಲು ಮುಂದಾಗಿರುವ ಈ ವ್ಯವಸ್ಥೆ, ಬೆವರು ಹರಿಸಿ ಅನ್ನ ಬೆಳೆಯುವ ರೈತನ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಪಾದಯಾತ್ರೆಗೂ ಮುನ್ನವೇ ಖಾಕಿ ಪಡೆಗಳ ದಬ್ಬಾಳಿಕೆ ಪ್ರಹಸನ!

ಬೆಳಗಾವಿಯ ಕ್ರಾಂತಿವೀರ ಚನ್ನಮ್ಮ ವೃತ್ತದಲ್ಲಿ ಲಕ್ಷಾಂತರ ರೈತರನ್ನು ಒಟ್ಟುಗೂಡಿಸಿ ಬೃಹತ್ ಪ್ರತಿಭಟನಾ ಯಾತ್ರೆಯನ್ನು (Farmers Protest) ನಡೆಸಲು ರೈತ ಮುಖಂಡರು ಸಿದ್ಧತೆ ನಡೆಸಿದ್ದರು. ಆದರೆ, ಆಡಳಿತ ಯಂತ್ರ ಹಾಗೂ ಪೊಲೀಸ್ ಕಮಿಷನರೇಟ್, ನಗರದಲ್ಲಿ 144ನೇ ಕಾಯ್ದೆಯ ನಿಷೇಧಾಜ್ಞೆ ಅಸ್ತ್ರ ಪ್ರಯೋಗಿಸಿ ಐದಕ್ಕಿಂತ ಹೆಚ್ಚು ಜನರು ಒಂದೆಡೆ ಸೇರದಂತೆ ಕಟ್ಟುನಿಟ್ಟಿನ ಹುಕುಂ ಹೊರಡಿಸಿತು.

ಹೋರಾಟ ಆರಂಭಕ್ಕೂ ಮುನ್ನವೇ ಮುಕ್ತಿಮಠದ ಆವರಣಕ್ಕೆ ನುಗ್ಗಿದ ಪೊಲೀಸರು, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ ಸೇರಿದಂತೆ ನೂರಾರು ಹೋರಾಟಗಾರರನ್ನು ಬಲವಂತವಾಗಿ ಎಳೆದಾಡಿ ವಾಹನಗಳಲ್ಲಿ ತುರುಕಿದರು. “ನಾವು ಜೈಲಿಗೆ ಹೋದರೂ ಚಿಂತೆ ಇಲ್ಲ, ನಮ್ಮ ಈ ನ್ಯಾಯಯುತ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ” ಎಂದು ಚೂನಪ್ಪ ಪೂಜಾರಿ ಅವರು ಪೊಲೀಸರ ಕಣ್ಣೆದುರೇ ಗರ್ಜಿಸಿದರು.

ರೈತರ ಆರೋಗ್ಯದ ಜೊತೆ ಚೆಲ್ಲಾಟ: ನಿರ್ಜನ ಪ್ರದೇಶದಲ್ಲಿ ಹಾರ್ಟ್ ಪೇಷೆಂಟ್ ಅಸ್ವಸ್ಥ!

Farmers Protest: ಖಾಕಿ ಪಡೆಯ ಈ ದಬ್ಬಾಳಿಕೆಯ ಅತಿರೇಕವು ಮುಗ್ಧ ರೈತರ ಜೀವದ ಜೊತೆ ಚೆಲ್ಲಾಟವಾಡುವ ಮಟ್ಟಕ್ಕೆ ತಲುಪಿದೆ. ವಶಕ್ಕೆ ಪಡೆದ ರೈತರನ್ನು ಮಾರ್ಗಮಧ್ಯೆ ಪೊಲೀಸರು ಕರೆದೊಯ್ಯುತ್ತಿದ್ದಾಗ ಹುಕ್ಕೇರಿ ತಾಲೂಕಿನ ಬಸ್ಸಾಪುರ ಗ್ರಾಮದ ಬಳಿ ಹಿರಿಯ ರೈತನೊಬ್ಬರು ತೀವ್ರ ಅಸ್ವಸ್ಥಗೊಂಡಿದ್ದಾರೆ.

“ನನಗೆ ಈಗಾಗಲೇ ಹಾರ್ಟ್ ಸರ್ಜರಿಯಾಗಿದೆ, ದಯವಿಟ್ಟು ಆಸ್ಪತ್ರೆಗೆ ಕರೆದುಕೊಂಡು ಹೋಗಿ” ಎಂದು ಗೋಗರೆದರೂ ಕರುಣೆ ತೋರದ ಪೊಲೀಸರು, ಆತನನ್ನು ನಿರ್ಜನ ಪ್ರದೇಶದಲ್ಲಿ ಬಿಟ್ಟು ಹೋದರು ಎಂದು ಸ್ಥಳದಲ್ಲಿದ್ದ ರೈತರು ಆರೋಪಿಸಿದ್ದಾರೆ. ಬಳಿಕ ಸ್ಥಳದಲ್ಲಿದ್ದ ಇತರೆ ರೈತರೇ ಆ ಅಸ್ವಸ್ಥ ರೈತನನ್ನು ಹೊತ್ತುಕೊಂಡು ಹೋಗಿ ಬಸ್ಸಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಬೇಕಾಯಿತು. ಆಸ್ಪತ್ರೆಗೆ ಸೇರಿಸದೆ ನಡುದಾರಿಯಲ್ಲೇ ಬಿಟ್ಟು ಹೋದ ಪೋಲಿಸರ ಅಮಾನವೀಯ ವರ್ತನೆಗೆ ರೈತ ಸಮುದಾಯ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

“ನಿಮ್ಮ ಸರ್ಕಾರ ಸರ್ವನಾಶವಾಗಿ ಹೋಗುತ್ತದೆ!”: ಮಂಗಳಮುಖಿಯರ ಶಾಪ!

ಈ ಐತಿಹಾಸಿಕ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಾಥ್ ನೀಡಲು ಧುಮುಕಿದ ಮಂಗಳಮುಖಿಯರನ್ನು ಸಹ ಬಿಡದ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ವಶಕ್ಕೆ ಪಡೆಯುವ ವೇಳೆ ಪೊಲೀಸ್ ವಾಹನದ ಒಳಗೆ ಹಾಗೂ ಹೊರಗೆ ಆಕ್ರೋಶ ವ್ಯಕ್ತಪಡಿಸಿದ ಮಂಗಳಮುಖಿಯರು ಸರ್ಕಾರಕ್ಕೆ ನೇರವಾಗಿ ಶಾಪ ಹಾಕಿದ್ದಾರೆ:

“ನಮ್ಮನ್ನು, ಚೂನಪ್ಪ ಪೂಜಾರಿ ಅವರನ್ನು ಹಾಗೂ ಶಶಿಕಾಂತ್ ಗುರೂಜಿ ಅವರನ್ನು ಜೈಲಿಗೆ ಹಾಕಿದ್ದೀರಾ… ಅನ್ನದಾತ ದೇವರು ಹಾಗೂ ಅರ್ಧನಾರೀಶ್ವರ ಸ್ವರೂಪವಾದ ನಮ್ಮ ಶಾಪ ಖಂಡಿತ ನಿಮಗೆ ತಟ್ಟುತ್ತದೆ! ನಿಮ್ಮ ಸರ್ಕಾರ ಸರ್ವನಾಶವಾಗಿ ಹೋಗುತ್ತದೆ!” ಎಂದು ಶಾಪ ಹಾಕಿದ್ದಾರೆ.

ಇದೇ ವೇಳೆ, ಮೂಡಲಗಿ ತಾಲೂಕಿನಲ್ಲಿ ರೈತ ಸಂಘದ ಗೌರವಾಧ್ಯಕ್ಷ ಶಶಿಕಾಂತ ಗುರೂಜಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಶಕ್ಕೆ ಒಳಗಾಗುವ ಮುನ್ನ ವಿಡಿಯೋ ಬಿಡುಗಡೆ ಮಾಡಿಸಿದ್ದಾರೆ.

“ಸರ್ಕಾರವೇ ನಮಗೆ ಪರೋಕ್ಷವಾಗಿ ಜೈಲ್ ಬರೋಗೆ ಬೆಂಬಲ ನೀಡಿದೆ!”: ಚುಕ್ಕಿ ನಂಜುಂಡಸ್ವಾಮಿ ವ್ಯಂಗ್ಯ

ಕ್ರಾಂತಿಕಾರಿ ರೈತಹೋರಾಟಗಾರ ದಿ. ಪ್ರೊಫೆಸರ್ ನಂಜುಂಡಸ್ವಾಮಿ ಅವರ ಪುತ್ರಿ ಹಾಗೂ ಹಿರಿಯ ರೈತ ಮುಖಂಡೆ ಚುಕ್ಕಿ ನಂಜುಂಡಸ್ವಾಮಿ ಅವರು ಈ ಸರ್ಕಾರದ ನೀತಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಅವರು ಬಿಡುಗಡೆ ಮಾಡಿದ ವಿಡಿಯೋದಲ್ಲಿ:

“ಕೇಂದ್ರ ಸರ್ಕಾರದ ವರದಿ ಪ್ರಕಾರ ರೈತ ಆತ್ಮಹತ್ಯೆಯಲ್ಲಿ ನಂಬರ್ ಎರಡನೇ ಸ್ಥಾನದಲ್ಲಿ ಇರುವಂತಹ ಜಿಲ್ಲೆ ಬೆಳಗಾವಿ! ಇಲ್ಲಿ ಮುಕ್ತಿಮಠದಲ್ಲಿ ತಂಗಿದ್ದ ರೈತರನ್ನು ಮುಂಜಾನೆಯೇ ಬಲವಂತವಾಗಿ ಬಂಧಿಸಿ ಬೇರೆ ಬೇರೆ ದಿಕ್ಕುಗಳಿಗೆ ಅಟ್ಟಲಾಗಿದೆ. ನಾವು ಕೇಳುತ್ತಿರುವ ವೈಜ್ಞಾನಿಕ ಬೆಲೆಯನ್ನು ಕೊಡಲಾಗದೆ ಕಂಗೆಟ್ಟಿರುವ ಈ ಸರ್ಕಾರ, ಪರೋಕ್ಷವಾಗಿ ನಮಗೆ ‘ಜೈಲ್ ಬರೋ’ ಚಳವಳಿಗೆ ತಾನೇ ಅವಕಾಶ ಮಾಡಿಕೊಟ್ಟಿದೆ! ಮಾನ್ಯ ಮುಖ್ಯಮಂತ್ರಿಗಳು ಬರೀ ಬಾಯಲ್ಲಿ ರೈತ ಪರ ಎನ್ನುತ್ತಾರೆ ಆದರೆ ಕ್ರಿಯೆಯಲ್ಲಿ ಮಾತ್ರ ಬಂಡವಾಳಶಾಹಿಗಳಿಗೆ ರತ್ನಗಂಬಳಿ ಹಾಸುತ್ತಾರೆʼʼ ಎಂದು ತೀವ್ರವಾಗಿ ವ್ಯಂಗ್ಯವಾಡಿದ್ದಾರೆ.

ಸಚಿವರ ‘ರೂ. 3,600’ ನಾಟಕೀಯ ರಾಜಿ ಸೂತ್ರ ಮತ್ತು ಕಾರ್ಖಾನೆ ಮಾಲೀಕರ ಲಾಬಿ

ಇನ್ನೊಂದೆಡೆ, ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ರಾತ್ರಿರಾತ್ರಿಯೇ ಸಭೆ ನಡೆಸಿ, “ಕಾರ್ಖಾನೆ ಮಾಲೀಕರು ಟನ್ ಕಬ್ಬಿಗೆ 3,600 ರೂಪಾಯಿ ನೀಡಲು ಒಪ್ಪಿದ್ದಾರೆ, ರೈತರು ಇದನ್ನು ಒಪ್ಪಿಕೊಳ್ಳಿ” ಎಂದು ಪ್ರಕಟಿಸಿದ್ದಾರೆ.

ಆದರೆ, ಕಬ್ಬು ಬೆಳೆಗಾರರ ತೀವ್ರಗಾಮಿ ಬಣ ಈ ‘ರಾಜಿ ಸೂತ್ರ’ವನ್ನು ಸಂಪೂರ್ಣವಾಗಿ ತಿರಸ್ಕರಿಸಿದೆ. ಕಳೆದ ಒಂದು ತಿಂಗಳಿನಿಂದ ಕಾರ್ಖಾನೆಗಳು ಹೇಳುತ್ತಿದ್ದ ಅದೇ ಹಳೇ ಮೊತ್ತವನ್ನು ಹೊಸದಾಗಿ ತಂದುಕೊಟ್ಟು ನಮಗೆ ಸಮಾಧಾನ ಮಾಡಲು ನೋಡುತ್ತಿದ್ದೀರಾ ಎಂದು ರೈತ ಮುಖಂಡರು ಕಿಡಿಕಾರಿದ್ದಾರೆ.

ಸರ್ಕಾರ ಮತ್ತು ಕಾರ್ಖಾನೆಗಳ ವಂಚನೆಯ ಕರಾಳ ಮುಖವಾಡ

ಸಕ್ಕರೆ ಕಾರ್ಖಾನೆಗಳು ಮತ್ತು ಸರ್ಕಾರದ ನಡುವಿನ ಒಳಒಪ್ಪಂದಗಳು ಹೇಗೆ ಅನ್ನದಾತರನ್ನು ವಂಚಿಸುತ್ತಿವೆ ಎಂಬುದಕ್ಕೆ ಸ್ಪಷ್ಟ ಉದಾಹರಣೆ ಇಲ್ಲಿದೆ. ಕಾರ್ಖಾನೆಗಳು ಮತ್ತು ಸರ್ಕಾರ ಸೇರಿ ನಿಗದಿಪಡಿಸಲು ಮುಂದಾಗಿರುವ ಪ್ರತಿ ಟನ್ ಕಬ್ಬಿನ ಬೆಲೆ ಕೇವಲ 3,600 ರೂಪಾಯಿ ಮಾತ್ರ. ಆದರೆ ಇಂದಿನ ದುಬಾರಿ ಕಾಲದಲ್ಲಿ ರಸಗೊಬ್ಬರ, ಕೀಟನಾಶಕ, ಕಳೆನಾಶಕ, ಕಬ್ಬು ಕಟಾವು ಕೂಲಿ ಹಾಗೂ ಸಾಗಾಣಿಕೆ ವೆಚ್ಚವು ವಿಪರೀತವಾಗಿ ಹೆಚ್ಚಳವಾಗಿದ್ದು, ರೈತನ ಉತ್ಪಾದನಾ ಖರ್ಚು ಶೇಕಡಾ 30ರಷ್ಟು ಏರಿಕೆಯಾಗಿದೆ.

ಮತ್ತೊಂದೆಡೆ, ಸಕ್ಕರೆ ಕಾರ್ಖಾನೆಗಳು ಕೇವಲ ಬಿಳಿ ಸಕ್ಕರೆಯನ್ನು ಮಾತ್ರ ಉತ್ಪಾದಿಸುವುದಿಲ್ಲ; ಎಥನಾಲ್ ಉತ್ಪಾದನೆ, ವಿದ್ಯುತ್ ಉತ್ಪಾದನೆ ಮತ್ತು ಪ್ರೆಸ್ ಮುಡ್ ಮಾರಾಟದಂತಹ ಉಪಉತ್ಪನ್ನಗಳಿಂದ ಕೋಟ್ಯಂತರ ರೂಪಾಯಿ ಹೆಚ್ಚುವರಿ ಲಾಭವನ್ನು ಬಾಚಿಕೊಳ್ಳುತ್ತಿವೆ. ಇಷ್ಟೆಲ್ಲಾ ದೊಡ್ಡಮಟ್ಟದ ಆದಾಯ ಬರುತ್ತಿದ್ದರೂ, ಕಾರ್ಖಾನೆಗಳು ಆ ಲಾಭದ ಪಾಲನ್ನು ರೈತರಿಗೆ ನೀಡುತ್ತಿಲ್ಲ. ಅದರಲ್ಲೂ ಬೆಳಗಾವಿ ಭಾಗದಲ್ಲಿ ಕಬ್ಬಿನ ಇಳುವರಿ ಅಥವಾ ರಿಕವರಿ ರೇಟ್ ಶೇಕಡಾ 12ಕ್ಕಿಂತ ಹೆಚ್ಚಿದ್ದು, ಅತ್ಯುತ್ತಮ ಸಕ್ಕರೆ ಅಂಶವಿರುವ ಕಬ್ಬನ್ನು ಬೆಳೆದರೂ ರೈತನಿಗೆ ಮಾತ್ರ ನ್ಯಾಯಯುತ ಪಾಲು ಸಿಗದೆ ಕಣ್ಣೀರೆರೆಯುವಂತಾಗಿದೆ. ಸರಕಾರವು ಕಡ್ಡಾಯವಾಗಿ 1,000 ರೂಪಾಯಿ ಪ್ರೋತ್ಸಾಹಧನ ನೀಡುವ ಮೂಲಕ ಈ ಶೋಷಣೆಯನ್ನು ತಡೆಯಬೇಕಿದೆ.

ಸರ್ಕಾರಕ್ಕೆ ನೇರ ಎಚ್ಚರಿಕೆ: ಬಂಡವಾಳಶಾಹಿಗಳ ಆಟ ಹೆಚ್ಚು ದಿನ ನಡೆಯದು!

ವರ್ಷಕ್ಕೊಮ್ಮೆ ಬೆಳಗಾವಿಯ ಸುವರ್ಣಸೌಧದಲ್ಲಿ ಅಧಿವೇಶನ ಬಂದಾಗ “ನಾವು ರೈತರ ಪರ” ಎಂದು ಹೇಳುವ ಜನಪ್ರತಿನಿಧಿಗಳು, ನಿಜವಾದ ಕಬ್ಬು ಕಟಾವು ಕಾಲದಲ್ಲಿ ಅನ್ನದಾತರ ಬೆಲೆ ಏರಿಕೆಯ ಕೂಗನ್ನು ಹತ್ತಿಕ್ಕಲು ಪೋಲಿಸ್ ಪಡೆಯನ್ನು ಬಿಡುವುದು ಪ್ರಜಾಪ್ರಭುತ್ವ ವಿರೋಧಿ ಕೃತ್ಯ.

ಇದನ್ನೂ ಓದಿ: ಕಾಂಗ್ರೆಸ್‌ಗೆ ಸಿದ್ದು ಗುಡ್‌ಬೈ? ಹೈಕಮಾಂಡ್‌ಗೆ ಎಚ್ಚರಿಕೆ ಕೊಟ್ಟು ಆಪ್ತರ ಜೊತೆ ರಹಸ್ಯ ಸಭೆ ನಡೆಸಿದ್ದೇಕೆ ಅಹಿಂದ ನಾಯಕ?

ಮುಖ್ಯಮಂತ್ರಿಗಳು ಕೂಡಲೇ ಎಚ್ಚೆತ್ತುಕೊಂಡು:

  1. ವಶಕ್ಕೆ ಪಡೆದಿರುವ ಚೂನಪ್ಪ ಪೂಜಾರಿ, ಶಶಿಕಾಂತ್ ಗುರೂಜಿ ರಿದಂತೆ ಸಮಸ್ತ ರೈತ ಮುಖಂಡರನ್ನು ಕೂಡಲೇ ಬೇಷರತ್ತಾಗಿ ಬಿಡುಗಡೆ ಮಾಡಬೇಕು.
  2. ಅಸ್ವಸ್ಥ ರೈತನನ್ನು ನಿರ್ಜನ ಪ್ರದೇಶದಲ್ಲಿ ಬಿಟ್ಟು ಹೋದ ಪೋಲಿಸ್ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು.
  3. ರೈತರ ಬೇಡಿಕೆಯಂತೆ ಟನ್ ಕಬ್ಬಿಗೆ 1,000 ರೂ. ಪ್ರೋತ್ಸಾಹಧನವನ್ನು ಘೋಷಿಸಿ ಅಧಿಕೃತ ಆದೇಶ ಹೊರಡಿಸಬೇಕು.

ಇಲ್ಲದಿದ್ದರೆ, ಮಂಗಳಮುಖಿಯರ ಶಾಪ ಹಾಗೂ ಅನ್ನದಾತರ ರಕ್ತದ ಕಣ್ಣೀರು ಈ ಸರಕಾರಕ್ಕೆ ಮುನ್ಸೂಚನೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ!

ಸ್ವತಂತ್ರ ಮಾಧ್ಯಮ ಬೆಂಬಲಿಸಿ

ಯಾರ ಹಂಗೂ ಇಲ್ಲದ, ಯಾರಿಗೂ ಬಗ್ಗದ ಸ್ವತಂತ್ರ ಮಾಧ್ಯಮಕ್ಕೆ ನಿಮ್ಮ ಬೆಂಬಲದ ಅವಶ್ಯಕತೆ ಇದೆ...