ಧಾರವಾಡದ ಪ್ರತ್ಯೇಕ ಮಹಾನಗರ ಪಾಲಿಕೆ (Dharwad Separate Palike) ಹೋರಾಟ ಇಂದು ನಿನ್ನೆಯದಲ್ಲ. ಅದು ಧಾರವಾಡದ ಸಾಮಾನ್ಯ ಜನರ ದಶಕಗಳ ಕನಸು ಮತ್ತು ನ್ಯಾಯಸಮ್ಮತ ಬೇಡಿಕೆ. ಆದರೆ ಇಂದು ಅದೇ ಧಾರವಾಡದ ಬೀದಿಗಳು ಧಗಧಗಿಸುತ್ತಿವೆ. ಕಳೆದ 10-11 ದಿನಗಳಿಂದ ವಿವಿಧ ಪ್ರಗತಿಪರ ಸಂಘಟನೆಗಳು, ಪಕ್ಷಾತೀತವಾಗಿ ಬೀದಿಗಿಳಿದು ಹೋರಾಟ ನಡೆಸುತ್ತಿವೆ. ಕಳೆದ ಐದು ದಿನಗಳಿಂದ ಹೋರಾಟಗಾರರು ಉಪವಾಸ ಸತ್ಯಾಗ್ರಹವನ್ನೂ ಕೈಗೊಂಡಿದ್ದಾರೆ. ಮುಂದೆ 30ನೇ ತಾರೀಖಿನಂದು ‘ಧಾರವಾಡ ಬಂದ್’ಗೂ ಕರೆ ನೀಡಲಾಗಿದೆ. ಪರಿಸ್ಥಿತಿ ಇಷ್ಟೊಂದು ಗಂಭೀರವಾಗಿದ್ದರೂ, ಸ್ಥಳೀಯರೇ ಆಗಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಹಾಗೂ ಶಾಸಕ ಅರವಿಂದ ಬೆಲ್ಲದ್ (Aravind Bellad) ಇತ್ತ ತಲೆಹಾಕಿಯೂ ಮಲಗಿಲ್ಲದಿರುವುದು ಧಾರವಾಡದ ಜನತೆಯ ಪಾಲಿನ ದೊಡ್ಡ ವಿಪರ್ಯಾಸ!
ಈ ಇಬ್ಬರು ನಾಯಕರು ಯಾವಾಗ ಏನು ಯೋಚನೆ ಮಾಡುತ್ತಾರೆ ಎಂಬುದೇ ಧಾರವಾಡದ ಜನತೆಗೆ ತಿಳಿಯದಂತಾಗಿದೆ. ಏಕೆಂದರೆ, ಇತ್ತೀಚೆಗೆ ಧಾರವಾಡ ನಗರದಾದ್ಯಂತ “ಪ್ರತ್ಯೇಕ ಧಾರವಾಡ ಮಹಾನಗರ ಪಾಲಿಕೆ ತಂದಿದ್ದೇ ನಾವೇ” ಎನ್ನುವಂತೆ ಬ್ಯಾನರ್ ಗಳನ್ನು ಹಾಕಿಸಿ ಬೀಗಿದ್ದರು. ಆದರೆ ಇತಿಹಾಸ ಮತ್ತು ವಾಸ್ತವ ಬೇರೆಯೇ ಕಥೆ ಹೇಳುತ್ತದೆ.
ವಿನಯ್ ಕುಲಕರ್ಣಿ ಶ್ರಮಕ್ಕೆ ಕತ್ತರಿ ಹಾಕಲು ಜೋಶಿ ಕುತಂತ್ರ?
ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ (Dharwad Separate Palike) ಪ್ರಸ್ತಾವನೆಗೆ ಸರ್ಕಾರದ ಮಟ್ಟದಲ್ಲಿ ಜೀವ ತುಂಬಿ, ಅದಕ್ಕಾಗಿ ಪ್ರಾಮಾಣಿಕವಾಗಿ ಶ್ರಮಿಸಿದ್ದು ಶಾಸಕ ವಿನಯ್ ಕುಲಕರ್ಣಿ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಮೊದಲು ಈ ಪ್ರಸ್ತಾಪ ಬಂದಾಗ ಸರ್ವಾನುಮತದಿಂದ ಪಾಸ್ ಆಗಿತ್ತು. ತದನಂತರ ಹೋರಾಟಗಾರರು ವಿನಯ್ ಕುಲಕರ್ಣಿ ಅವರ ಸಂಪೂರ್ಣ ಸಹಾಯ, ಸಹಕಾರ ಪಡೆದು ಸರ್ಕಾರದ ಮಟ್ಟದಲ್ಲಿ ಕೆಲಸ ಚುರುಕುಗೊಳಿಸಿದರು. ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರ ಮೂಲಕ ಕ್ಯಾಬಿನೆಟ್‌ನಲ್ಲಿ ಮಂಜೂರಾತಿ ಕೊಡಿಸಿ, ಎಲ್ಲಾ ಕಾನೂನಾತ್ಮಕ ಪ್ರಕ್ರಿಯೆಗಳನ್ನು ಮುಗಿಸಿ, ಫೈಲ್ ಅನ್ನು ರಾಜ್ಯಪಾಲರ ಟೇಬಲ್‌ಗೆ ತಲುಪಿಸುವಲ್ಲಿ ವಿನಯ್ ಕುಲಕರ್ಣಿ ಯಶಸ್ವಿಯಾಗಿದ್ದರು.
ಯಾವಾಗ ಈ ಪ್ರಸ್ತಾವನೆ ರಾಜ್ಯಪಾಲರ ಅಂತಿಮ ಅನುಮೋದನೆಗೆ ಹೋಯಿತೋ, ಅಲ್ಲಿಂದ ಶುರುವಾಗಿದ್ದೇ ಜೋಶಿ ಅವರ “ಕ್ರೆಡಿಟ್ ವಾರ್” ರಾಜಕಾರಣ! ಇದರ ಸಂಪೂರ್ಣ ಕೀರ್ತಿ ವಿನಯ್ ಕುಲಕರ್ಣಿಗೆ ಹೋಗುತ್ತದೆ ಎಂದು ಸಹಿಸದ ಜೋಶಿ, ತಮ್ಮ ರಾಜಕೀಯ ಪ್ರಭಾವ ಬಳಸಿ ರಾಜ್ಯಪಾಲರ ಮೇಲೆ ಒತ್ತಡ ಹೇರಿ ಫೈಲ್ ತಡೆಹಿಡಿದರು ಎಂಬ ಆರೋಪ ಕೇಳಿಬಂದಿದೆ. ಕಳೆದ 11-12 ತಿಂಗಳುಗಳಿಂದ ಈ ಮಹತ್ವದ ಫೈಲ್ ರಾಜಭವನದಲ್ಲಿ ಧೂಳು ತಿನ್ನುತ್ತಿದೆ.
ಅಸಲಿ ಸುದ್ದಿಯೊಂದಿಗೆ ಮಾತನಾಡುತ್ತಾ ಕಾಂಗ್ರೆಸ್ ಮುಖಂಡ ಅರವಿಂದ್ ಯೋಗನಗೌಡರ್ ತೀವ್ರ ಆಕ್ರೋಶ ಹೊರಹಾಕಿದ್ದಾರೆ: “ಧಾರವಾಡ ಪ್ರತ್ಯೇಕ ಪಾಲಿಕೆಯಾಗಲು ಶ್ರಮಿಸಿದ್ದು ವಿನಯ್ ಕುಲಕರ್ಣಿ. ಇದರ ಕ್ರೆಡಿಟ್ ಅವರಿಗೆ ಸಿಗಬಾರದು ಎನ್ನುವುದೇ ಜೋಶಿ ಅವರ ಕುತಂತ್ರ. ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರಿಂದ ಕ್ಯಾಬಿನೆಟ್ ನಲ್ಲಿ ಪಾಸ್ ಮಾಡಿಸಿ ಸರ್ಕಾರದ ಮಟ್ಟದಲ್ಲಿ ಎಲ್ಲಾ ಪ್ರಾಸಿಜರ್ ಮುಗಿಸುವಲ್ಲಿ ವಿನಯ್ ಕುಲಕರ್ಣಿ ಅವರು ಮುತುವರ್ಜಿವಹಿಸಿದ್ದಾರೆ. ಯಾವಾಗ ರಾಜ್ಯಪಾಲರ ಬಳಿ ಅನುಮೋದನೆಗೆ ಹೋಯ್ತೋ ಆಗ ಕ್ರೆಡಿಟ್ ವಾರ್ ಗೆ ಬಿದ್ದ ಜೋಶಿ ರಾಜ್ಯಪಾಲರಿಂದ ತಡೆಹಿಡಿಸಿದರು” ಎಂದು ಗಂಭೀರ ಆರೋಪ ಮಾಡಿದರು.

ಸಾಮಾನ್ಯವಾಗಿ ರಾಜ್ಯಪಾಲರು ಇಂತಹ ಪ್ರಸ್ತಾವನೆಗಳನ್ನು ಒಂದೋ ಅನುಮೋದಿಸಬೇಕು ಇಲ್ಲವೇ ತಿರಸ್ಕರಿಸಬೇಕು. ಅದನ್ನು ಬಿಟ್ಟು ವರ್ಷಗಟ್ಟಲೆ ನೆನೆಗುದಿಗೆ ಇಡಲು ಅವಕಾಶವಿಲ್ಲ. ಆದರೆ, ರಾಜಕೀಯ ಪ್ರೇರಿತರಾದ ರಾಜ್ಯಪಾಲರು ಇಲ್ಲಿ ಜೋಶಿ ಮಾತು ಕೇಳಿಕೊಂಡು ಗೇಮ್ ಆಡುತ್ತಿದ್ದಾರೆ ಎನ್ನುವುದು ಹೋರಾಟಗಾರರ ಆರೋಪ. ಇತ್ತೀಚೆಗೆ ಹೋರಾಟಗಾರರ ನಿಯೋಗ ರಾಜ್ಯಪಾಲರನ್ನು ಭೇಟಿಯಾದಾಗ, ಅವರು “ಜೋಶಿ ಅವರನ್ನ ಭೇಟಿಯಾಗಿ, ಅವರು ಏನು ಹೇಳ್ತಾರೋ ಅದರ ಮೇಲೆ ಇದು ಡಿಪೆಂಡ್ ಆಗಿರುತ್ತೆ” ಎಂದು ಹೇಳಿ ಕೈತೊಳೆದುಕೊಂಡಾಗ ನಿಯೋಗವೇ ಶಾಕ್ ಆಗಿತ್ತು! ವಿಧಿಯಿಲ್ಲದೆ “ನಮಗೆ ಪಾಲಿಕೆ ಸಿಕ್ಕರೆ ಸಾಕು” ಎಂದು ನಿಯೋಗ ಜೋಶಿಯವರನ್ನು ಭೇಟಿಯಾದಾಗ, ಅವರು “ಪ್ರತ್ಯೇಕ ಪಾಲಿಕೆ ಬೇಡ, ಬೃಹತ್ ಮಹಾನಗರ ಪಾಲಿಕೆ ಮಾಡೋಣ, ಅದರಿಂದ ಅನುದಾನ ಹೆಚ್ಚು ಬರುತ್ತದೆ” ಎಂದು ಸಬೂಬು ನೀಡಿ ಸಮಾಧಾನಿಸಲು ಯತ್ನಿಸಿದ್ದರು.
ಬೆಲ್ಲದ್ ಹೆಗಲ ಮೇಲೆ ಬಂದೂಕಿಟ್ಟು ಜೋಶಿ ಗೇಮ್!
ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ತಮ್ಮ ರಾಜಕೀಯ ಜೀವನದಲ್ಲಿ ಇಂತಹ ‘ಕ್ರೆಡಿಟ್ ರಾಜಕಾರಣ’ ಮಾಡಿ ಸಿಕ್ಕಿಬಿದ್ದವರಲ್ಲ. ಆದರೆ ಈಗ ಇನ್ನೊಬ್ಬರ ಮಾತು ಕೇಳಿ ಅವರೂ ಕೆಟ್ಟ ಹೆಸರು ತಂದುಕೊಂಡಿದ್ದಾರೆ. ಪ್ರತ್ಯೇಕ ಪಾಲಿಕೆಯನ್ನು (Dharwad Separate Palike) ವಿರೋಧಿಸಿ ರಾಜ್ಯಪಾಲರಿಗೆ ಅಧಿಕೃತ ಪತ್ರ ಬರೆಯುವ ಮೂಲಕ ಬೆಲ್ಲದ್ ಸ್ವತಃ ವಿವಾದದ ಸುಳಿಗೆ ಸಿಲುಕಿದ್ದು, ಧಾರವಾಡದ ಹಿತಕ್ಕೆ ಕಂಟಕರಾಗಿದ್ದಾರೆ ಎಂಬುದು ಈಗ ಸಾಕ್ಷಿ ಸಮೇತ ಸಾಬೀತಾಗಿದೆ.
ರಾಜ್ಯಪಾಲರಿಗೆ ಬೆಲ್ಲದ್ ಬರೆದ ಪತ್ರದಲ್ಲೇನಿದೆ?
ಶಾಸಕ ಅರವಿಂದ ಬೆಲ್ಲದ್ ಅವರು ಮಾನ್ಯ ರಾಜ್ಯಪಾಲರಿಗೆ ಬರೆದಿರುವ ಪತ್ರದ ಪ್ರತಿಗಳು ಲಭ್ಯವಾಗಿದ್ದು, ಅದರಲ್ಲಿ ಧಾರವಾಡದ ಜನತೆಯ ಆಶಯಕ್ಕೆ ಸಂಪೂರ್ಣ ತಣ್ಣೀರು ಎರಚಲಾಗಿದೆ. ಪತ್ರದಲ್ಲಿ ಬೆಲ್ಲದ್ ಅವರು, “ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳು ಭೌಗೋಳಿಕವಾಗಿ ಹಾಗೂ ಆಡಳಿತಾತ್ಮಕವಾಗಿ ಒಂದಕ್ಕೊಂದು ಪೂರಕವಾಗಿ ಬೆಳೆದಿವೆ. ಪ್ರತ್ಯೇಕ ಪಾಲಿಕೆ ಮಾಡುವುದರಿಂದ ಅಭಿವೃದ್ಧಿ ಕುಂಠಿತಗೊಳ್ಳುತ್ತದೆ ಮತ್ತು ಆಡಳಿತಾತ್ಮಕ ಗೊಂದಲಗಳು ಸೃಷ್ಟಿಯಾಗುತ್ತವೆ. ಆದ್ದರಿಂದ ಸದ್ಯಕ್ಕೆ ಈ ಪ್ರಸ್ತಾವನೆಗೆ ಅನುಮೋದನೆ ನೀಡಬಾರದು” ಎಂದು ಸ್ಪಷ್ಟವಾಗಿ ವಿನಂತಿಸಿಕೊಂಡಿದ್ದಾರೆ. ಈ ಮೂಲಕ ತೆರೆಮರೆಯಲ್ಲಿ ಪ್ರತ್ಯೇಕ ಪಾಲಿಕೆ ತಡೆಯಲು ನಡೆದಿದ್ದ ಮಹಾ ಸಂಚು ಈಗ ಜಗಜ್ಜಾಹೀರಾಗಿದೆ.

ಇನ್ನೊಂದೆಡೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ರಾಜಕಾರಣದ ಶೈಲಿ ಉತ್ತರ ಕರ್ನಾಟಕದ ಜನತೆಗೆ ಹೊಸದೇನಲ್ಲ. ಅವರು ಯಾವತ್ತೂ ನೇರಾನೇರ ರಾಜಕಾರಣ ಮಾಡುವವರಲ್ಲ, ಇನ್ನೊಬ್ಬರ ಹೆಗಲ ಮೇಲೆ ಬಂದೂಕು ಇಟ್ಟು ರಾಜಕಾರಣ ಮಾಡುವುದು ಹು-ಧಾ ಜನರಿಗೂ ಗೊತ್ತಿರುವ ವಿಚಾರ. ಈಗ ಅವರು ಬೆಲ್ಲದ್ ಹೆಗಲ ಮೇಲೆ ಬಂದೂಕಿಟ್ಟಿದ್ದಾರೆ. ಇದರ ಪರಿಣಾಮವಾಗಿ, ಎಲ್ಲೂ ಇಲ್ಲದ ಬೆಲ್ಲದ್ ಇಂದು ಧಾರವಾಡದ ಜನತೆಗೆ ‘ವಿಲನ್’ ಆಗಿ ನಿಂತಿದ್ದಾರೆ.
ಬ್ಯಾನರ್ ರಾಜಕಾರಣ ಮತ್ತು ಬಿಜೆಪಿಯ ತಿರುಗುಬಾಣ
ಯಾವಾಗ ಸರ್ಕಾರ ಪಾಸ್ ಮಾಡಿ ನೋಟಿಫಿಕೇಷನ್ ಹೊರಡಿಸುವ ಮುನ್ಸೂಚನೆ ನೀಡಿತೋ, ಅಂದು ಅದಕ್ಕೆ ಅಡ್ಡಗಾಲು ಹಾಕಿದ್ದ ಜೋಶಿ-ಬೆಲ್ಲದ್ ಜೋಡಿ, ಪ್ರತ್ಯೇಕ ಮಹಾನಗರ ಪಾಲಿಕೆ ತಂದವರು ತಾವೇ ಎಂಬಂತೆ ಧಾರವಾಡದ ತುಂಬೆಲ್ಲಾ ಬ್ಯಾನರ್ ಗಳನ್ನು ಹಾಕಿಸಿಕೊಂಡರು. ಇದರಿಂದ ವಿನಯ್ ಕುಲಕರ್ಣಿ ಬೆಂಬಲಿಗರ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಪಿತ್ತ ನೆತ್ತಿಗೇರಿತು. “ಅಂದು ಪ್ರತ್ಯೇಕ ಪಾಲಿಕೆಯನ್ನು ವಿರೋಧಿಸಿದ ನಾಲಾಯಕರು ನೀವು, ಇಂದು ಬ್ಯಾನರ್ ಹಾಕಿಸಿಕೊಳ್ಳಲು ನಾಚಿಕೆಯಾಗುವುದಿಲ್ಲವೇ?” ಎಂದು ಜನ ಆಕ್ರೋಶ ವ್ಯಕ್ತಪಡಿಸಿದ ತಕ್ಷಣವೇ ಕಾಂಗ್ರೆಸ್ ಕಾರ್ಯಕರ್ತರು ವಿನಯ್ ಕುಲಕರ್ಣಿ ಪರವಾಗಿ ಧಾರವಾಡದಾದ್ಯಂತ ಬ್ಯಾನರ್ ಹಾಕಿದರು.

ಇದರಿಂದ ಕಂಗೆಟ್ಟ ಜೋಶಿ-ಬೆಲ್ಲದ್, ಈ ಕ್ರೆಡಿಟ್ ಸಂಪೂರ್ಣವಾಗಿ ಕಾಂಗ್ರೆಸ್ ಪಾಲಾಗುವುದನ್ನು ತಪ್ಪಿಸಲು ಮತ್ತೊಂದು ಪ್ಲ್ಯಾನ್ ಮಾಡಿದರು. ತಕ್ಷಣವೇ ಹುಬ್ಬಳ್ಳಿ-ಧಾರವಾಡ ಪಾಲಿಕೆಯಿಂದ “ಪ್ರತ್ಯೇಕ ಪಾಲಿಕೆ ಬೇಡ, ಹು-ಧಾ ಬೃಹತ್ ಮಹಾನಗರ ಪಾಲಿಕೆ ಮಾಡೋಣ” ಎಂದು 2ನೇ ಠರಾವು ಪಾಸ್ ಮಾಡಿಸಿದರು! ಈ ವೇಳೆ ಕಾಂಗ್ರೆಸ್ ಸದಸ್ಯರು ಸಭೆಯನ್ನು ಬಹಿಷ್ಕರಿಸಿ ಹೊರನಡೆದರು. ವಾಸ್ತವವಾಗಿ ಈ ೨ನೇ ಠರಾವು ಯಾವುದೇ ಕಾನೂನಾತ್ಮಕ ಮಹತ್ವ ಹೊಂದಿಲ್ಲದಿದ್ದರೂ, ಕೇವಲ ರಾಜಕೀಯ ಹಿತಾಸಕ್ತಿಗಾಗಿ ಇದನ್ನು ಮಾಡಲಾಯಿತು.
12 ಜನರ ಸಾಮೂಹಿಕ ರಾಜೀನಾಮೆ ಮತ್ತು ಕಾಂಗ್ರೆಸ್ ನಾಯಕರ ಆಕ್ರೋಶ
ಬಿಜೆಪಿ ನಾಯಕರ ಈ ಕೀಳುಮಟ್ಟದ ನಡೆಯಿಂದ ಆಕ್ರೋಶಗೊಂಡ ಕಾಂಗ್ರೆಸ್ ನ 12 ಪಾಲಿಕೆ ಸದಸ್ಯರು ಒಗ್ಗಟ್ಟಿನಿಂದ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಹೋರಾಟಕ್ಕೆ ಮತ್ತಷ್ಟು ಶಕ್ತಿ ತುಂಬಿದ್ದಾರೆ. ಈ ಕುರಿತು ಕಾಂಗ್ರೆಸ್ ನ ಪ್ರಮುಖ ಮುಖಂಡರು ಅಸಲಿ ಸುದ್ದಿಯೊಂದಿಗೆ ತಮ್ಮ ಆಕ್ರೋಶವನ್ನು ಹಂಚಿಕೊಂಡಿದ್ದಾರೆ.
ಅಸಲಿ ಸುದ್ದಿಯೊಂದಿಗೆ ಮಾತನಾಡುತ್ತಾ ಮಹಾನಗರ ಪಾಲಿಕೆ ಸದಸ್ಯ ರಾಜಶೇಖರ್ ಕಮತಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ: “ಪ್ರತ್ಯೇಕ ಮಹಾನಗರ ಪಾಲಿಕೆ ಹೋರಾಟದಲ್ಲಿ ನಾವು ನಿರಂತರವಾಗಿ ಭಾಗವಹಿಸಿದ್ದೇವೆ. ನಮಗೆ ಧಾರವಾಡ ಜನತೆಯ ಋಣವಿದೆ, ಅವರ ಆಶಯ ಈಡೇರಬೇಕು. ಆದರೆ ನಮ್ಮ ಭಾಗದ ಸಂಸದರು ಮತ್ತು ಶಾಸಕರು ‘ಇದು ಪಕ್ಷಾತೀತ ಹೋರಾಟ ಅಲ್ಲ, ಕೇವಲ ವೀದಿ ಹೋರಾಟಗಾರರು ಮಾತ್ರ ಇದ್ದಾರೆ, ಇವರೆಲ್ಲಾ ಕಾಂಗ್ರೆಸ್ ನವರು’ ಎಂದು ಬಿಂಬಿಸಲು ಯತ್ನಿಸುತ್ತಿದ್ದಾರೆ. ಅವರಿಗೆ ನಾವು ಹೇಳುವುದಿಷ್ಟೇ; ನಮಗೆ ರಾಜಕಾರಣ ಮುಖ್ಯವಲ್ಲ, ಅಧಿಕಾರದ ಆಸೆಯೂ ಇಲ್ಲ, ಧಾರವಾಡ ಜನತೆಯ ಹಿತ ಮತ್ತು ಅಭಿವೃದ್ಧಿ ಮಾತ್ರ ಮುಖ್ಯ. ಅದಕ್ಕಾಗಿಯೇ ಕಾಂಗ್ರೆಸ್ ನ 12 ಜನ ಪಾಲಿಕೆ ಸದಸ್ಯರು ಒಗ್ಗಟ್ಟಿನಿಂದ ನಮ್ಮ ರಾಜೀನಾಮೆ ಪತ್ರವನ್ನು ಪಕ್ಷದ ಹಿರಿಯರಿಗೆ ಮುಟ್ಟಿಸಿದ್ದೇವೆ. ನಮಗೆ ಅಧಿಕಾರಕ್ಕಿಂತ ಧಾರವಾಡ ಜನರ ಆಶಯ ಮುಖ್ಯ” ಎಂದು ಹೇಳಿದರು.
ಅದೇ ರೀತಿ ಅಸಲಿ ಸುದ್ದಿಯೊಂದಿಗೆ ಮಾತನಾಡಿದ ಅರವಿಂದ್ ಯೋಗನಗೌಡರ್ ಅವರು ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ್ದಾರೆ: “ಬಿಜೆಪಿ ನಾಯಕರು ಪ್ರತ್ಯೇಕ ಪಾಲಿಕೆ ಹೋರಾಟವನ್ನು ಹತ್ತಿಕ್ಕಲು ಬ್ರಿಟಿಷರ ತರಹ ‘ಒಡೆದು ಆಳುವ ನೀತಿ’ (Divide and Rule Policy) ಮಾಡುತ್ತಿದ್ದಾರೆ, ಇದನ್ನು ಮೊದಲು ಕೈಬಿಡಬೇಕು. ಇದು ಕೇವಲ ಕಾಂಗ್ರೆಸ್ ಕಾರ್ಯಕರ್ತರ ಹೋರಾಟವಲ್ಲ, ಇದು ನಿಜವಾದ ಧಾರವಾಡದ ಜನರ ಹೋರಾಟ. ನಮ್ಮ ಮಹಾನಗರ ಪಾಲಿಕೆ ಸದಸ್ಯರು ಜನರ ಭಾವನೆಗಳಿಗೆ ಸ್ಪಂದಿಸಿ, ಹೋರಾಟಗಾರರಿಗೆ ನೋವಾಗಬಾರದು ಎನ್ನುವ ಕಾರಣಕ್ಕಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಬೀದಿಗಿಳಿದ್ದಾರೆ. ನಮ್ಮ ಕ್ಷೇತ್ರದಲ್ಲಿ 5 ಜನ ಹಾಗೂ ಧಾರವಾಡ 74ನೇ ಕ್ಷೇತ್ರದಲ್ಲಿ 7 ಜನ ಸೇರಿ ಒಟ್ಟು 12 ಜನ ಪಾಲಿಕೆ ಸದಸ್ಯರು ರಾಜೀನಾಮೆ ನೀಡಿದ್ದಾರೆ.”
ಮತ್ತೊರ್ವ ಪ್ರಭಾವಿ ಕಾಂಗ್ರೆಸ್ ಮುಖಂಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನಾಗರಾಜ್ ಗೌರಿ ಅವರು ಅಸಲಿ ಸುದ್ದಿಯೊಂದಿಗೆ ಮಾತನಾಡುತ್ತಾ ಬಿಜೆಪಿಯ ದ್ವಂದ್ವ ನೀತಿಯನ್ನು ತೀವ್ರವಾಗಿ ಖಂಡಿಸಿದ್ದಾರೆ: “ಧಾರವಾಡದ ಜನತೆ ಕಳೆದ ಹಲವು ದಿನಗಳಿಂದ ಹಗಲಿರುಳು ಉಪವಾಸ ಸತ್ಯಾಗ್ರಹ ಮಾಡುತ್ತಿದ್ದರೂ ಸ್ಥಳೀಯ ಶಾಸಕ ಬೆಲ್ಲದ್ ಆಗಲಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆಗಲಿ ಇತ್ತ ಮುಖ ಮಾಡಿಲ್ಲ. ಕ್ರೆಡಿಟ್ ತಮಗೆ ಸಿಗುವುದಿಲ್ಲ ಎಂಬ ಒಂದೇ ಒಂದು ಕಾರಣಕ್ಕೆ ಇಡೀ ಧಾರವಾಡದ ಹಿತವನ್ನು ಬಲಿಗೊಡಲು ಹೊರಟಿದ್ದಾರೆ. ಪ್ರತ್ಯೇಕ ಪಾಲಿಕೆಯ ಪ್ರಸ್ತಾವನೆಯನ್ನು ಸರ್ಕಾರದ ಮಟ್ಟದಲ್ಲಿ ತಂದು ರಾಜ್ಯಪಾಲರ ಟೇಬಲ್ ವರೆಗೆ ತಲುಪಿಸಿದ್ದು ವಿನಯ್ ಕುಲಕರ್ಣಿ ಎಂಬುದು ಇಡೀ ಜಗತ್ತಿಗೆ ಗೊತ್ತು. ಆದರೆ ಜೋಶಿ ಮತ್ತು ಬೆಲ್ಲದ್ ಅವರು ಬೂಟಾಟಿಕೆಯ ಬ್ಯಾನರ್ ರಾಜಕಾರಣ ಮಾಡಿ ಸಿಕ್ಕಿಬಿದ್ದಿದ್ದಾರೆ. ಅಧಿಕಾರದ ಮದದಲ್ಲಿ ಇವರು ಆಡುತ್ತಿರುವ ನಾಟಕವನ್ನು ಧಾರವಾಡದ ಪ್ರಬುದ್ಧ ಜನತೆ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಕೇವಲ ರಾಜಕೀಯ ಸ್ವಾರ್ಥಕ್ಕಾಗಿ ಧಾರವಾಡಕ್ಕೆ ದ್ರೋಹ ಬಗೆಯುತ್ತಿರುವ ಇವರಿಗೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ” ಎಂದು ಕಿಡಿಕಾರಿದರು.
ಇದನ್ನೂ ಓದಿ: Vinay Vs Joshi: ‘ಸೇಡಿನ’ ರಾಜಕಾರಣದ ಅನಾವರಣ; ಕುಲಕರ್ಣಿ ಮುಗಿಸಲು ನಡೆದ ‘ಸಿಸ್ಟಮ್ಯಾಟಿಕ್’ ಗೇಮ್ ಪ್ಲಾನ್?
ಅನುದಾನದ ನೆಪ: ಜೋಶಿ ವಾದದ ಅಸಲಿಯತ್ತೇನು?
16ನೇ ಹಣಕಾಸು ಆಯೋಗದಲ್ಲಿ 10 ಲಕ್ಷಕ್ಕಿಂತ ಅಧಿಕ ಜನಸಂಖ್ಯೆ ಹೊಂದಿರುವ ಮಹಾನಗರ ಪಾಲಿಕೆಗೆ ಹೆಚ್ಚಿನ ಅನುದಾನ ಬರುತ್ತದೆ, ಸದ್ಯ ಹು-ಧಾ ಪಾಲಿಕೆಯಲ್ಲಿ 9,43,000 ಜನಸಂಖ್ಯೆ ಇರುವುದರಿಂದ ಜಂಟಿಯಾಗಿಯೇ ಇರಲಿ ಎಂಬುದು ಜೋಶಿ ವಾದ. ಆದರೆ ಕೇಂದ್ರ ಸರ್ಕಾರ ಈಗಾಗಲೇ ದೇಶದ 22 ಬೃಹತ್ ಮಹಾನಗರ ಪಾಲಿಕೆಗಳಿಗೆ ಕೊಡುತ್ತಿರುವ ವಿಶೇಷ ಅನುದಾನದ ಪಟ್ಟಿಯಲ್ಲಿ ಹುಬ್ಬಳ್ಳಿ-ಧಾರವಾಡದ ಹೆಸರೇ ಇಲ್ಲ! ಅದರಲ್ಲಿ ಮೈಸೂರು ಪಾಲಿಕೆಯ ಹೆಸರಿದೆ. “ಅದು ಕ್ಯಾನ್ಸಲ್ ಆಗಿ ನಮ್ಮ ಹು-ಧಾ ಕ್ಕೆ ಬರುತ್ತದೆ” ಎಂದು ಜೋಶಿ ನೀಡುವ ಸಮಜಾಯಿಷಿ ಕೇವಲ ಕಣ್ಣೊರೆಸುವ ತಂತ್ರ ಎನ್ನುವುದು ಸ್ಪಷ್ಟ.
ಕಾಗದದಲ್ಲಿ ಧಾರವಾಡ ಜಿಲ್ಲಾ ಕೇಂದ್ರ; ವಾಸ್ತವದಲ್ಲಿ ಕೇವಲ ತಾಲೂಕು ಕೇಂದ್ರ!
ಧಾರವಾಡದ ಜನತೆ ಪ್ರತ್ಯೇಕ ಪಾಲಿಕೆಗಾಗಿ ಇಷ್ಟೊಂದು ಹಠಕ್ಕೆ ಬಿದ್ದಿರುವುದರ ಹಿಂದೆ ದಶಕಗಳ ನೋವಿದೆ, ಕಡೆಗಣನೆಯ ಇತಿಹಾಸವಿದೆ. ಕಾಗದದ ಮೇಲೆ ಹುಬ್ಬಳ್ಳಿ ತಾಲೂಕು ಕೇಂದ್ರ, ಧಾರವಾಡ ಜಿಲ್ಲಾ ಕೇಂದ್ರ. ಆದರೆ ವಾಸ್ತವದಲ್ಲಿ ಹು-ಧಾ ಪಾಲಿಕೆಗೆ ಬರುವ ಅನುದಾನದಲ್ಲಿ ಶೇ. 90ರಷ್ಟು ಹಣ ಹುಬ್ಬಳ್ಳಿಗೇ ಬಳಕೆಯಾಗುತ್ತದೆ! ಧಾರವಾಡಕ್ಕೆ ಸಿಗುವುದು ಕೇವಲ ಅಲ್ಪಸ್ವಲ್ಪ ಹಣ.
ಅಷ್ಟೇ ಅಲ್ಲ, ಜಿಲ್ಲಾ ಕೇಂದ್ರದಲ್ಲಿ ಇರಬೇಕಾಗಿದ್ದ ಪ್ರಮುಖ ಸರ್ಕಾರಿ ಕಚೇರಿಗಳನ್ನು ಒಂದೊಂದಾಗಿ ಹುಬ್ಬಳ್ಳಿಗೆ ಶಿಫ್ಟ್ ಮಾಡಲಾಗಿದೆ:
- ಆರ್‌ಟಿಒ (RTO) ಕಚೇರಿ
- ಹುಡಾ (HUDA) ಕಚೇರಿ
- ಪೊಲೀಸ್ ಕಮಿಷನರ್ ಕಚೇರಿ
- ಕಾನೂನು ವಿಶ್ವವಿದ್ಯಾಲಯ
- ತೆರಿಗೆ ಇಲಾಖೆ ಕಚೇರಿ
ಹೀಗೆ ಪ್ರಮುಖ ಕಚೇರಿಗಳನ್ನೆಲ್ಲಾ ಹುಬ್ಬಳ್ಳಿ ತಾಲೂಕಿನಲ್ಲಿ ಮಾಡಿಕೊಂಡಿದ್ದಾರೆ. ಈಗ ಧಾರವಾಡದಲ್ಲಿ ಉಳಿದಿರುವುದು ಕೇವಲ ಡಿಸಿ (DC) ಆಫೀಸ್ ಒಂದೇ! ಕೊನೆಗೆ ಕೆಐಎಡಿಬಿ (KIADB) ಕಚೇರಿಯನ್ನೂ ಶಿಫ್ಟ್ ಮಾಡಲು ಪ್ಲ್ಯಾನ್ ಮಾಡಿದ್ದರು, ಆದರೆ ಜನರ ತೀವ್ರ ಹೋರಾಟಗಳಿಂದ ಅದು ಇಲ್ಲೇ ಉಳಿಯಿತು. ಇತ್ತ ಆಧಾರ್ ಕೇಂದ್ರವೂ ನೆನೆಗುದಿಗೆ ಬಿದ್ದಿದೆ. ಈ ವಾಸ್ತವಾಂಶಗಳನ್ನು ನೋಡಿದರೆ ಜಿಲ್ಲಾ ಕೇಂದ್ರವೇ ಹುಬ್ಬಳ್ಳಿಯಂತಾಗಿದೆ. ಧಾರವಾಡದ ಸ್ಥಿತಿ ಹೇಗಾಗಿದೆಯೆಂದರೆ, ಸರ್ಕಾರ ಹೊಸದಾಗಿ ಘೋಷಣೆ ಮಾಡಿದ ಯಾವುದೋ ಒಂದು ತಾಲೂಕು ಕೇಂದ್ರದಂತಾಗಿದೆ! ಯಾವುದೇ ಕಚೇರಿಗಳಿಲ್ಲದೆ ಧಾರವಾಡಕ್ಕೆ ಅನಾಥ ಸ್ಥಿತಿ ಬಂದೊದಗಿದೆ.
ಇಕ್ಕಟ್ಟಿನಲ್ಲಿ ಜೋಶಿ: ಮುಂದೇನು?
ಸದ್ಯ ಧಾರವಾಡದಲ್ಲಿ ಪಕ್ಷಾತೀತವಾಗಿ ಬೃಹತ್ ಹೋರಾಟ ನಡೆಯುತ್ತಿದ್ದು, ಈಗಾಗಲೇ ಪಾಲಿಕೆ ಸದಸ್ಯತ್ವಕ್ಕೆ ಕಾಂಗ್ರೆಸ್ ನ 12 ಜನರು ರಾಜೀನಾಮೆ ನೀಡಿದ್ದಾರೆ. ಉಪವಾಸ ಸತ್ಯಾಗ್ರಹ ತೀವ್ರಗೊಳ್ಳುತ್ತಿರುವುದರಿಂದ ಕೇಂದ್ರ ಸಚಿವ ಜೋಶಿ ಅವರು ತೀವ್ರ ಇಕ್ಕಟ್ಟಿಗೆ ಸಿಲುಕಿದ್ದಾರೆ. ಇದರ ಪರಿಣಾಮವಾಗಿ ನಿನ್ನೆ ಕೊನೆಗೂ ಹೋರಾಟಗಾರರ ನಿಯೋಗವನ್ನು ತಾವೇ ಕರೆದುಕೊಂಡು ಹೋಗಿ ರಾಜ್ಯಪಾಲರನ್ನು ಭೇಟಿ ಮಾಡಿಸಿ ಬಂದಿದ್ದಾರೆ.
ಸದ್ಯಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆಗೆ ರಾಜ್ಯಪಾಲರು ಅನುಮೋದನೆ ನೀಡುವ ಆಶಾದಾಯಕ ಬೆಳವಣಿಗೆಯಂತೂ ಕಾಣಿಸುತ್ತಿದೆ. ಆದರೆ, ರಾಜಕೀಯ ಮೇಲಾಟಗಳ ಚದುರಂಗದಾಟದಲ್ಲಿ ನಿಸ್ಸೀಮರಾಗಿರುವ ಈ ನಾಯಕರು ತೆರೆಮರೆಯಿಂದ ಮತ್ತಿನ್ನಾವ ರಾಜಕೀಯ ಹುನ್ನಾರ ನಡೆಸುತ್ತಾರೋ ಎಂದು ಜನರು ಸಂಶಯ ವ್ಯಕ್ತಪಡಿಸುತ್ತಿದ್ದಾರೆ. ಧಾರವಾಡದ ಜನತೆ ಈಗ ಜಾಗೃತರಾಗಿದ್ದಾರೆ; ತಮ್ಮ ಹಕ್ಕನ್ನು ಕಿತ್ತುಕೊಳ್ಳುವ ರಾಜಕಾರಣಿಗಳಿಗೆ ತಕ್ಕ ಪಾಠ ಕಲಿಸಲು ಸಜ್ಜಾಗಿದ್ದಾರೆ. ಇನ್ನಾದರೂ ಜೋಶಿ-ಬೆಲ್ಲದ್ ಜೋಡಿ ಕ್ರೆಡಿಟ್ ರಾಜಕಾರಣ ಬಿಟ್ಟು ಧಾರವಾಡದ ಆತ್ಮಾಭಿಮಾನಕ್ಕೆ ಬೆಲೆ ಕೊಡುತ್ತಾರಾ? ನೋಡಬೇಕಿದೆ.

