ಬಾಗಲಕೋಟೆ ವಿಧಾನಸಭಾ ಉಪಚುನಾವಣೆಯ (Bagalkot By-Election) ಅಂತಿಮ ಹಂತದ ಪ್ರಚಾರ ಮುಗಿಯುವ ಹೊತ್ತಿಗೆ, ಇಡೀ ಕ್ಷೇತ್ರದ ರಾಜಕೀಯ ಚಿತ್ರಣವೇ ಬದಲಾದಂತೆ ಭಾಸವಾಗುತ್ತಿದೆ. ಚುನಾವಣಾ ಘೋಷಣೆಯಾದ ಆರಂಭದ ದಿನಗಳಲ್ಲಿ ಬಿಜೆಪಿಯ ಭದ್ರಕೋಟೆಯಂತೆ ಕಂಡಿದ್ದ ಈ ಕ್ಷೇತ್ರ, ಮತದಾನದ ದಿನ ಹತ್ತಿರವಾಗುತ್ತಿದ್ದಂತೆ ಕಾಂಗ್ರೆಸ್‌ನ ಪಾಲಿಗೆ ಆಶಾದಾಯಕವಾಗಿ ಪರಿಣಮಿಸಿದೆ. ಅಭ್ಯರ್ಥಿಗಳ ಆಯ್ಕೆ, ಜಾತಿ ಸಮೀಕರಣ, ನಾಯಕರ ವಿವಾದಾತ್ಮಕ ಹೇಳಿಕೆಗಳು ಮತ್ತು ವ್ಯಕ್ತಿತ್ವದ ಹೋಲಿಕೆಗಳು ಈ ಚುನಾವಣೆಯ ಫಲಿತಾಂಶವನ್ನು ನಿರ್ಧರಿಸುವ ಪ್ರಮುಖ ಅಂಶಗಳಾಗಿ ಹೊರಹೊಮ್ಮಿವೆ.
ಕಾಂಗ್ರೆಸ್‌ನಲ್ಲಿ ಒಗ್ಗಟ್ಟು – ಬಿಜೆಪಿಯಲ್ಲಿ ಅತಿಯಾದ ಆತ್ಮವಿಶ್ವಾಸ?
ಚುನಾವಣೆಯ ಆರಂಭದಲ್ಲಿ ಕಾಂಗ್ರೆಸ್ ಪಾಳೆಯದಲ್ಲಿ ಗೊಂದಲಗಳಿದ್ದವು. ಅದರಲ್ಲೂ ಪ್ರಭಾವಿ ಮೇಟಿ ಕುಟುಂಬದಲ್ಲಿ ಟಿಕೆಟ್ ಹಂಚಿಕೆ ವಿಚಾರವಾಗಿ ಉಂಟಾಗಿದ್ದ ಅಸಮಾಧಾನ ಬಿಜೆಪಿಗೆ ಪ್ಲಸ್ ಪಾಯಿಂಟ್ ಆಗಬಹುದು ಎಂದು ಲೆಕ್ಕಾಚಾರ ಹಾಕಲಾಗಿತ್ತು. ಆದರೆ, ಪಕ್ಷದ ಹಿರಿಯ ನಾಯಕರ ಮಧ್ಯಸ್ಥಿಕೆಯಿಂದಾಗಿ ಮೇಟಿ ಕುಟುಂಬದ ಎಲ್ಲಾ ಸದಸ್ಯರು ಒಟ್ಟಾಗಿ, ಅಭ್ಯರ್ಥಿ ಉಮೇಶ್ ಮೇಟಿ ಅವರ ಪರವಾಗಿ ಬಿರುಸಿನ ಪ್ರಚಾರ ಆರಂಭಿಸಿದ್ದು ಕಾಂಗ್ರೆಸ್‌ಗೆ ದೊಡ್ಡ ಬಲ ತಂದುಕೊಟ್ಟಿದೆ.
ಮತ್ತೊಂದೆಡೆ, ಬಿಜೆಪಿಯಲ್ಲಿ ಅಭ್ಯರ್ಥಿ ಆಯ್ಕೆಯ ವಿಚಾರದಲ್ಲಿ ಯಾವುದೇ ಗೊಂದಲವಿರಲಿಲ್ಲ. ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರು ಅನುಭವಿ ಮತ್ತು ಪ್ರಭಾವಿ ನಾಯಕರಾಗಿದ್ದರಿಂದ, ಆರಂಭದಲ್ಲಿ ಅವರ ಗೆಲುವು ಸುಲಭ ಎಂಬ ಮಾತು ಕೇಳಿಬಂದಿತ್ತು. ಮೊದಲ ಹಂತದಲ್ಲಿ ಬಿಜೆಪಿಯ ಗೆಲುವಿನ ಸಾಧ್ಯತೆ ಶೇ. 55-60 ರಷ್ಟಿತ್ತು. ಆದರೆ, ಪ್ರಚಾರದ ಅಂತಿಮ ಹಂತದಲ್ಲಿ ಬಿಜೆಪಿ ನಾಯಕರೇ ಮಾಡಿದ ಕೆಲವು ಎಡವಟ್ಟುಗಳು ಗೆಲುವಿನ ಓಟಕ್ಕೆ ತಡೆ ಒಡ್ಡಿದಂತೆ ಕಾಣುತ್ತಿದೆ. ಸದ್ಯದ ವರದಿಗಳ ಪ್ರಕಾರ, ಕಾಂಗ್ರೆಸ್‌ನ ಗೆಲುವಿನ ಸಾಧ್ಯತೆ ಶೇ. 60-65 ಕ್ಕೆ ಏರಿಕೆಯಾಗಿದ್ದು, ಇದು ರಾಜಕೀಯ ವಿಶ್ಲೇಷಕರ ಕುತೂಹಲಕ್ಕೆ ಕಾರಣವಾಗಿದೆ.
ವ್ಯಕ್ತಿತ್ವ ಮತ್ತು ವರ್ತನೆ: ಸಭ್ಯತೆ ವರ್ಸಸ್ ಸಿಡುಕುತನ
ಈ ಚುನಾವಣೆಯಲ್ಲಿ ಅಭ್ಯರ್ಥಿಗಳ ಗುಣಸ್ವಭಾವಗಳೂ ಕೂಡ ಮತದಾರರ ಮೇಲೆ ಗಂಭೀರ ಪರಿಣಾಮ ಬೀರಿವೆ. ವೀರಣ್ಣ ಚರಂತಿಮಠ ಅವರು ದಶಕಗಳಿಂದ ರಾಜಕಾರಣದಲ್ಲಿದ್ದರೂ, ಅವರು “ಜನಸ್ನೇಹಿ ನಾಯಕರಲ್ಲ” ಎನ್ನುವ ಅಪಸ್ವರ ಕ್ಷೇತ್ರದಲ್ಲಿದೆ. ಸಾರ್ವಜನಿಕರ ಜೊತೆಗಿನ ಅಸಭ್ಯ ವರ್ತನೆ, ಸಿಡುಕುತನ ಮತ್ತು ಸ್ವತಃ ತಮ್ಮದೇ ಕಾರ್ಯಕರ್ತರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುವ ಅವರ ಹಳೆಯ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಇದಕ್ಕೆ ವ್ಯತಿರೇಕವಾಗಿ, ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಅವರ ಸಭ್ಯ ನಡವಳಿಕೆ ಮತ್ತು ಎಲ್ಲರನ್ನೂ ಪ್ರೀತಿಯಿಂದ ಮಾತನಾಡಿಸುವ ಗುಣ ಜನರ ಮನಗೆದ್ದಿದೆ. “ಸಭ್ಯ ರಾಜಕಾರಣಿಗೆ ಈ ಬಾರಿ ಮತ” ಎನ್ನುವ ಅಭಿಯಾನ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಅನುಕೂಲಕರ ವಾತಾವರಣ ನಿರ್ಮಿಸಿದೆ. ಅದರಲ್ಲೂ ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸಾರ್ವಜನಿಕ ವೇದಿಕೆಯಲ್ಲೇ ಚರಂತಿಮಠ ಅವರ “ವೀಕ್ನೆಸ್” ಬಗ್ಗೆ ಹಾಸ್ಯ ಮಾಡಿದ್ದು, ಚರಂತಿಮಠ ಅವರಿಗೆ ಮುಜುಗರ ತಂದಿದ್ದಲ್ಲದೆ, ಮತದಾರರಲ್ಲಿ ಅವರ ವ್ಯಕ್ತಿತ್ವದ ಬಗ್ಗೆ ನಕಾರಾತ್ಮಕ ಭಾವನೆ ಮೂಡಲು ಕಾರಣವಾಯಿತು.
ಜಾತಿ ಲೆಕ್ಕಾಚಾರ ಮತ್ತು ನಾಯಕರ ಎಡವಟ್ಟು
ಬಾಗಲಕೋಟೆ ಲಿಂಗಾಯತ ಪ್ರಾಬಲ್ಯದ ಕ್ಷೇತ್ರವಾದರೂ, ಇಲ್ಲಿ ಇತರ ಹಿಂದುಳಿದ ವರ್ಗಗಳ (OBC) ಮತಗಳು ಅತ್ಯಂತ ನಿರ್ಣಾಯಕ. ಪಂಚಮಸಾಲಿ ಲಿಂಗಾಯತರ ಸಭೆಯಲ್ಲಿ ಮುರುಗೇಶ್ ನಿರಾಣಿ ಅವರು ಮಾಡಿದ “ಗ್ರಾಮ ಪಂಚಾಯತಿಯಿಂದ ಲೋಕಸಭೆಯವರೆಗೆ ಲಿಂಗಾಯತರೇ ಇರಬೇಕು, ಬೇರೆಯವರಿಗೆ ಅವಕಾಶ ನೀಡಬಾರದು” ಎಂಬ ಹೇಳಿಕೆ ತೀವ್ರ ವಿವಾದಕ್ಕೆ ನಾಂದಿ ಹಾಡಿದೆ. ಈ ಹೇಳಿಕೆಯು ಲಿಂಗಾಯತೇತರ ಸಮುದಾಯಗಳಲ್ಲಿ (ಕುರುಬ, ದಲಿತ, ಮುಸ್ಲಿಂ ಇತ್ಯಾದಿ) ಅಭದ್ರತೆಯ ಭಾವನೆ ಮೂಡಿಸಿದೆ. “ಬಿಜೆಪಿ ಕೇವಲ ಒಂದು ಸಮುದಾಯದ ಪಕ್ಷವೇ?” ಎಂಬ ಪ್ರಶ್ನೆ ಮತದಾರರಲ್ಲಿ ಮೂಡುವಂತೆ ಮಾಡಿದೆ.
ಅಂತೆಯೇ, ಸಿಸಿ ಪಾಟೀಲ್ ಅವರು ಮುಸ್ಲಿಂ ಸಮುದಾಯವನ್ನು “ಗಡ್ಡದವರು” ಎಂದು ಹಾಗೂ ಕುರುಬ ಸಮಾಜವನ್ನು “ಟೂರ್” ಎಂದು ಸಂಭೋದಿಸುವ ಮೂಲಕ ಕುರುಬ ಸಮುದಾಯವನ್ನು ಕೆಣಕಿದ್ದು ಚುನಾವಣಾ ಕಣದಲ್ಲಿ ಕಿಚ್ಚು ಹಚ್ಚಿದೆ. ಕುರುಬ ಸಮುದಾಯವು ಸಾಂಪ್ರದಾಯಿಕವಾಗಿ ಕಾಂಗ್ರೆಸ್‌ನ ಬೆನ್ನೆಲುಬಾಗಿದ್ದರೂ, ಈ ಬಾರಿ ಬಿಜೆಪಿಯ ಕೆಲವು ನಾಯಕರು ಆ ಸಮುದಾಯವನ್ನು ಸೆಳೆಯಲು ಪ್ರಯತ್ನಿಸಿದ್ದರು. ಉದಾಹರಣೆಗೆ ಇತ್ತೀಚೆಗೆ ಕ್ಷೇತ್ರದಲ್ಲಿ ಒಳ್ಳೆಯ ಹೆಸರು ಮಾಡಿರುವ ಡಾ. ದೇವರಾಜ್ ಪಾಟೀಲ್ ಅವರು ಬಿಜೆಪಿ ಸೇರ್ಪಡೆಯಾಗಿದ್ದರು. ಅವರು ಮೇಟಿಯವರ ಬಂಧುವಾದರೂ ಬಿಜೆಪಿ ಸೇರಿದ್ದರು. ಇದು ಬಿಜೆಪಿಗೆ ವರದಾನವಾಗಬಹುದು ಎಂದು ನಾಯಕರು ಭಾವಿಸಿದ್ದರು. ಆದರೆ, ಇಂತಹ ಅವಹೇಳನಕಾರಿ ಹೇಳಿಕೆಗಳಿಂದಾಗಿ ಇಡೀ ಕುರುಬ ಸಮುದಾಯ ಈಗ ಬಿಜೆಪಿಯ ವಿರುದ್ಧ ವ್ಯಾಘ್ರವಾಗಿದೆ. ಇದು ಕಾಂಗ್ರೆಸ್‌ಗೆ ಸಾಲಿಡ್ ವೋಟ್ ಬ್ಯಾಂಕ್ ಆಗಿ ಪರಿವರ್ತನೆಯಾಗುವ ಸಾಧ್ಯತೆ ದಟ್ಟವಾಗಿದೆ.
ಇದನ್ನೂ ಓದಿ: ಬಿಜೆಪಿಗೆ ಮುಸ್ಲಿಮರು ಬೇಡ, ಈಗ ಕುರುಬರ ಮತಗಳೂ ಬೇಡ್ವಾ? ನಾಯಕರ ಉದ್ಧಟತನಕ್ಕೆ ಮತದಾರರೇ ಕಲಿಸ್ತಾರಾ ಪಾಠ?
ಯಕ್ಷಪ್ರಶ್ನೆಯಾಗಿರುವ ಸ್ವಾಭಿಮಾನದ ಮತಗಳು
ಇತ್ತೀಚೆಗೆ ಕುರುಬ ಸಮುದಾಯದ ಕೆಲವರು ಬಿಜೆಪಿಗೆ ಸೇರ್ಪಡೆಯಾಗಿದ್ದರು. ಆದರೆ, ಬಿಜೆಪಿ ನಾಯಕರ ಸರಣಿ ಹೇಳಿಕೆಗಳು ಅವರ ಸಮುದಾಯದ ಅಸ್ಮಿತೆಗೆ ಪೆಟ್ಟು ನೀಡಿವೆ. ತಮ್ಮ ಜಾತಿಯ ಬಗ್ಗೆ ಅಸಭ್ಯವಾಗಿ ಮಾತನಾಡಿದ ಪಕ್ಷದಲ್ಲಿ ಈ ನಾಯಕರು ಹೇಗೆ ಸ್ವಾಭಿಮಾನದಿಂದ ಕೆಲಸ ಮಾಡುತ್ತಾರೆ ಎಂಬುದು ಜನರ ಪ್ರಶ್ನೆಯಾಗಿದೆ. ಈ “ಸ್ವಾಭಿಮಾನದ ಪ್ರಶ್ನೆ” ಮತಗಟ್ಟೆಯಲ್ಲಿ ಕಾಂಗ್ರೆಸ್‌ಗೆ ವರವಾಗಿ ಪರಿಣಮಿಸುವ ಲಕ್ಷಣಗಳು ಗೋಚರಿಸುತ್ತಿವೆ.
ಟಫ್ ಫೈಟ್ ಅಥವಾ ಕಾಂಗ್ರೆಸ್ ಮೇಲುಗೈ?
ಒಟ್ಟಾರೆಯಾಗಿ ಹೇಳುವುದಾದರೆ, ಬಾಗಲಕೋಟೆ ಉಪಚುನಾವಣೆಯು ಕೇವಲ ಪಕ್ಷಗಳ ನಡುವಿನ ಹೋರಾಟವಾಗಿ ಉಳಿದಿಲ್ಲ; ಇದು ಸಭ್ಯತೆ ವರ್ಸಸ್ ಅಹಂಕಾರ, ಮತ್ತು ಒಳಗೊಳ್ಳುವಿಕೆ ವರ್ಸಸ್ ಜಾತೀಯ ರಾಜಕಾರಣದ ನಡುವಿನ ಕದನವಾಗಿ ಮಾರ್ಪಟ್ಟಿದೆ. ಬಿಜೆಪಿಯು ತನ್ನ ಸಾಂಪ್ರದಾಯಿಕ ಲಿಂಗಾಯತ ಮತಗಳು ಚದುರದಂತೆ ನೋಡಿಕೊಂಡರೆ ಮಾತ್ರ ಕಾಂಗ್ರೆಸ್‌ಗೆ ಪ್ರಬಲ ಪೈಪೋಟಿ ನೀಡಲು ಸಾಧ್ಯ. ಇಲ್ಲದಿದ್ದರೆ, ಸದ್ಯದ ಅಲೆಯು ಕಾಂಗ್ರೆಸ್ ಪರವಾಗಿರುವುದರಿಂದ ಉಮೇಶ್ ಮೇಟಿ ಅವರಿಗೆ ಗೆಲುವಿನ ಮಾಲೆ ಬೀಳುವ ಸಾಧ್ಯತೆ ಹೆಚ್ಚಿದೆ. ಜಾತಿ ಸಮೀಕರಣದ ಜೊತೆಗೆ ಅನುಕಂಪ ಮತ್ತು ಅಭ್ಯರ್ಥಿಯ ಸೌಮ್ಯ ಸ್ವಭಾವ ಕಾಂಗ್ರೆಸ್‌ನ ಕೈ ಹಿಡಿಯುವ ಲಕ್ಷಣಗಳಿವೆ. ಅಂತಿಮವಾಗಿ ಮತದಾರ ಪ್ರಭು ಯಾರಿಗೆ ಆಶೀರ್ವದಿಸುತ್ತಾನೆ ಎಂಬುದು ಫಲಿತಾಂಶದ ದಿನ ತಿಳಿಯಲಿದೆ.

