ಬಾಗಲಕೋಟೆ (Bagalkot) ರಾಜಕಾರಣದಲ್ಲಿ ಈಗ ನಡೆಯುತ್ತಿರುವ ಮೇಲಾಟಗಳನ್ನು ಕೇವಲ ‘ಒಂದು ಕಡೆಯ ಸರಿ’ ಅಥವಾ ‘ಇನ್ನೊಂದು ಕಡೆಯ ತಪ್ಪು’ ಎಂದು ನೋಡಲಾಗುವುದಿಲ್ಲ. ಪ್ರಸ್ತುತ ಶಾಸಕ ಉಮೇಶ್ ಮೇಟಿ (Umesh Meti) ಅವರ ಇತ್ತೀಚಿನ ನಡೆಯಿಂದಾಗಿ ಕ್ಷೇತ್ರದಲ್ಲಿ ವ್ಯಾಪಕ ಅಸಮಾಧಾನ ಹೊಗೆಯಾಡುತ್ತಿರುವುದು ಬಹಿರಂಗ ಸತ್ಯ. ತಮ್ಮನ್ನು ಅಧಿಕಾರದ ಪೀಠಕ್ಕೇರಿಸಲು ಹಗಲಿರುಳು ಶ್ರಮಿಸಿದ ಸ್ಥಳೀಯ ನಾಯಕರನ್ನು, ನಿಷ್ಠಾವಂತ ಕಾರ್ಯಕರ್ತರನ್ನು ಪಕ್ಕಕ್ಕಿಟ್ಟು, ಮೂರನೇ ವ್ಯಕ್ತಿಯಾದ ಹೊಳೆಬಸು ಶೆಟ್ಟರ್ ಅವರಂತಹವರ ಕೈಗೊಂಬೆಯಂತೆ ಶಾಸಕರು ವ್ಯವಹರಿಸುತ್ತಿದ್ದಾರೆ ಎಂಬ ಆಕ್ರೋಶ ಕ್ಷೇತ್ರದ ಮೂಲ ನಾಯಕರಲ್ಲಿದೆ. ಗೆಲ್ಲಿಸಿದವರನ್ನೇ ಕಡೆಗಣಿಸಿ ರಾಜಕಾರಣ ಮಾಡುವ ಶಾಸಕರ ನಡವಳಿಕೆ ಖಂಡಿತವಾಗಿಯೂ ಬೆಂಬಲಿಸುವಂತದ್ದಲ್ಲ ಮತ್ತು ಸಮರ್ಥನೀಯವೂ ಅಲ್ಲ.
ಆದರೆ, ಶಾಸಕ ಉಮೇಶ್ ಮೇಟಿ ಅವರ ಈ ರಾಜಕೀಯ ವೈಫಲ್ಯ ಮತ್ತು ಆಡಳಿತಾತ್ಮಕ ಎಡವಟ್ಟುಗಳ ಮೇಲಿನ ಸಿಟ್ಟನ್ನು ತೀರಿಸಿಕೊಳ್ಳಲು ಅವರ ವಿರೋಧಿಗಳು ಆಯ್ದುಕೊಂಡ ಹಾದಿ ಮಾತ್ರ ಅತ್ಯಂತ ಕೀಳುಮಟ್ಟದ್ದಾಗಿದೆ. “ಕೋಪ ಬಂದಾಗ ಹೆಂಡತಿಯ ಮೇಲೆ, ಹುಚ್ಚು ಬಂದಾಗ ನಾಯಿಯ ಮೇಲೆ” ಎನ್ನುವಂತೆ, ಶಾಸಕರ ವಿರುದ್ಧ ನೇರ ರಾಜಕೀಯ ಹೋರಾಟ ಮಾಡುವ ಅಥವಾ ಶಾಸಕರ ನಡೆಯಿಂದ ಬೇಸರಗೊಂಡಿದ್ದನ್ನು ನೆಪ ಮಾಡಿಕೊಂಡು, ಅನಗತ್ಯವಾಗಿ ಅವರ ಸಹೋದರಿಯ ಕುಟುಂಬವನ್ನು ಈ ರಾಜಕೀಯ ಕೆಸರೆರಚಾಟಕ್ಕೆ ಎಳೆದು ತಂದಿರುವುದು ರಾಜಕೀಯ ಅಧಃಪತನದ ಪರಮಾವಧಿ!
ಇದನ್ನೂ ಓದಿ: ತಪ್ಪು ಮಾಡಿದ್ರಾ ತಪಶೆಟ್ಟಿ? ಶಾಸಕ ಉಮೇಶನದ್ದು ದುರಾಸೆಯೋ ಅಥವಾ ಸೂತಧಾರಿಯ ಕೈಗೊಂಬೆ ಆಟವೋ?
ದಿಕ್ಕು ತಪ್ಪಿಸುವ ಆರೋಪಗಳು ಹಾಗೂ ದಿನಾಂಕ ಸಮೇತ ಬಿಚ್ಚಿಬಿದ್ದ ವಾಸ್ತವ:
ವಿಷಯವನ್ನು ಗಮನಿಸಿದರೆ, ಇಲ್ಲಿ ಆಡಳಿತಾತ್ಮಕ ಅಕ್ರಮ ನಡೆದಿದೆ ಎಂದು ಮಾಧ್ಯಮಗಳ ಮೂಲಕ ಸುಳ್ಳು ಬಿಂಬಿಸಿದವರ ಹುನ್ನಾರ ಸ್ಪಷ್ಟವಾಗಿ ಬಯಲಾಗುತ್ತದೆ:
- ಅಂಕಿತಾ ನೇಮಕ: ಡಾ. ಅಂಕಿತಾ ಅವರು ‘ನಮ್ಮ ಕ್ಲಿನಿಕ್’ಗೆ ವೈದ್ಯಾಧಿಕಾರಿಯಾಗಿ ಸೇರಿದ್ದು 2025 ರ ಜುಲೈನಲ್ಲಿ. ಆ ಸಮಯದಲ್ಲಿ ಬಾಗಲಕೋಟೆ (Bagalkot)ಯ ಡಿಎಚ್‌ಒ (DHO) ಆಗಿ ಕಾರ್ಯನಿರ್ವಹಿಸುತ್ತಿದ್ದವರು ಡಾ. ಮಂಜುನಾಥ್ ಅವರೇ ಹೊರತು ಇವರ ತಂದೆಯಲ್ಲ.
- ಉನ್ನತ ಶಿಕ್ಷಣಕ್ಕೆ ಸೇರ್ಪಡೆ: ತದನಂತರ ಡಾ. ಅಂಕಿತಾ ಅವರು ಉನ್ನತ ವ್ಯಾಸಂಗಕ್ಕಾಗಿ ಎಂಡಿ (MD) ಪ್ರವೇಶ ಪಡೆದದ್ದು 2026 ರ ಏಪ್ರಿಲ್‌ನಲ್ಲಿ. ಎಂಡಿ ವ್ಯಾಸಂಗ ಪ್ರಾರಂಭಿಸಿದ ನಂತರ ಅವರು ಕರ್ತವ್ಯಕ್ಕೆ ಹಾಜರಾಗಿಲ್ಲ ಮತ್ತು ತಮ್ಮ ಸಂಪೂರ್ಣ ಗಮನವನ್ನು ವಿದ್ಯಾಭ್ಯಾಸದತ್ತ ಹರಿಸಿದ್ದಾರೆ.
- ವೇತನ ಪಾವತಿಯ ಸ್ಪಷ್ಟನೆ (DHO ಮಾಹಿತಿ): ಪ್ರಸ್ತುತ ಡಿಎಚ್‌ಒ ನೀಡಿರುವ ಸ್ಪಷ್ಟನೆಯ ಪ್ರಕಾರ, ಡಾ. ಮಂಜುನಾಥ್ DHO ಆಗಿದ್ದಾಗ ಆರಂಭದ ಕೆಲ ತಿಂಗಳು ಮಾತ್ರ ಸಂಬಳವಾಗಿತ್ತು. ಆದರೆ ಅವರ ಅವಧಿಯ ಕೊನೆಯ ಎರಡು ತಿಂಗಳು ಹಾಗೂ ತದನಂತರ ಆಕೆಯ ತಂದೆ DHO ಆಗಿ ಬಂದ ಬಳಿಕವೂ ಡಾ. ಅಂಕಿತಾ ಅವರಿಗೆ ಯಾವುದೇ ಸಂಬಳ ಬಿಡುಗಡೆಯಾಗಿರಲಿಲ್ಲ.
-
ತಂದೆಯ ಕರ್ತವ್ಯಪ್ರಜ್ಞೆ: ಡಾ. ರಾಜಕುಮಾರ ಯರಗಲ್ ಅವರು DHO ಆಗಿ ಬಂದ ತಕ್ಷಣ, ಮಗಳು ಪ್ರೇಮ ವಿವಾಹವಾಗಿ ಬೇರೆ ನಿವಾಸದಲ್ಲಿದ್ದರೂ ಮತ್ತು ಆಕೆಯೊಡನೆ ಮಾತಿಲ್ಲದಿದ್ದರೂ, ಆಕೆ ಕೆಲಸಕ್ಕೆ ಹಾಜರಾಗದಿರುವುದು ಗಮನಕ್ಕೆ ಬಂದ ಕೂಡಲೇ ಆಕೆಯನ್ನು ಹುದ್ದೆಯಿಂದ ತೆರವುಗೊಳಿಸಲು (ಟರ್ಮಿನೇಟ್) THO ಗೆ ಸೂಚನೆ ನೀಡಿದ್ದಾರೆ.
DHO ನೀಡಿದ ಮಾಹಿತಿಯ ಪ್ರಕಾರ- ಸಂಬಳವೇ ಬಿಡುಗಡೆಯಾಗದಿದ್ದರೂ, ತಂದೆ DHO ಆಗುವ ಮುಂಚಿನಿಂದಲೂ ಆಕೆಗೆ ಪಾವತಿಯೇ ಆಗದಿರುವಾಗ, ಶಾಸಕರ ತಂಗಿಯ ಗಂಡ DHO ಆಗಿ ಬಂದ ತಕ್ಷಣ ಮಗಳಿಗೆ ಅಕ್ರಮವಾಗಿ ಸಂಬಳ ಕೊಡಿಸಿದ್ದಾರೆ ಎಂದು ಬಿಂಬಿಸಿರುವುದು ಪಕ್ಕಾ ರಾಜಕೀಯ ಪ್ರೇರಿತ ದ್ವೇಷ ಪ್ರಹಾರವಲ್ಲದೆ ಮತ್ತೇನು?
ಅಸಲಿ ಸತ್ಯ ಬಿಚ್ಚಿಟ್ಟ ಅಂಕಿತಾ ತಾಯಿ ಮಹಾದೇವಿ ಮೇಟಿ
ಬಾಗಲಕೋಟೆ (Bagalkot) ರಾಜಕಾರಣದಲ್ಲಿ ನಡೆದ ಈ ಇಡೀ ಪ್ರಹಸನದಲ್ಲಿ ಅಂಕಿತಾ ಅವರ ತಾಯಿ ಮಹಾದೇವಿ ಮೇಟಿ ಅವರು ಮಾಧ್ಯಮಗಳ ಮುಂದೆ ಹಂಚಿಕೊಂಡಿರುವ ಸತ್ಯಗಳು ಈ ರಾಜಕೀಯ ದ್ವೇಷದ ಮುಖವಾಡವನ್ನು ಸಂಪೂರ್ಣವಾಗಿ ಕಳಚಿಹಾಕಿವೆ. ತಮ್ಮ ಮಗಳು ಪ್ರೀತಿಸಿ ಮದುವೆಯಾಗಿ ಗಂಡನ ಮನೆಯಲ್ಲಿದ್ದು, ಆಕೆಯ ವೈಯಕ್ತಿಕ ನಿರ್ಧಾರಗಳಲ್ಲಿ ತಂದೆಯ ಆಡಳಿತಾತ್ಮಕ ಪ್ರಭಾವವೇ ಇಲ್ಲದಿರುವಾಗಲೂ, ಆಕೆಯ ತಂದೆ ‘ನಮಗೂ ಅವಳಿಗೂ ಮಾತಿಲ್ಲ, ವಿಷಯ ಗೊತ್ತಾದ ತಕ್ಷಣವೇ ಆಕೆಯನ್ನು ಟರ್ಮಿನೇಟ್ ಮಾಡಲು THO ಗೆ ಸೂಚಿಸಿದ್ದೇನೆ’ ಎಂದು ಸತ್ಯ ಹೇಳಿದ್ದನ್ನೇ “ತಂದೆ ನುಣುಚಿಕೊಳ್ಳುತ್ತಿದ್ದಾರೆ” ಎಂದು ಬಿಂಬಿಸಲು ಯತ್ನಿಸಲಾಯಿತು. ಒಬ್ಬ ಅಧಿಕಾರಿಯಾಗಿ ಕಾನೂನುಬದ್ಧವಾಗಿ ಕ್ರಮ ಕೈಗೊಂಡಿದ್ದನ್ನೇ ತಪ್ಪು ಎಂದು ಬಿಂಬಿಸಲು ಹೊರಟರೆ, ಇದು ಕೇವಲ ಶಾಸಕರ ಮೇಲಿನ ದ್ವೇಷದ ಪ್ರಹಾರವಲ್ಲದೆ ಮತ್ತೇನು? ತಂದೆಯ ಹುದ್ದೆ ಮತ್ತು ಶಾಸಕರ ಸಂಬಂಧವನ್ನು ಇಟ್ಟುಕೊಂಡು ಪ್ರಚಾರ ಗಿಟ್ಟಿಸಲು ಹೊರಟ ಕಾಣದ ಕೈಗಳ ಅಸಲಿ ಉದ್ದೇಶವನ್ನು ಅಂಕಿತಾ ಅವರ ತಾಯಿ ಮಹಾದೇವಿ ಮೇಟಿಯವರ ಮಾತುಗಳು ಇಂಚಿಂಚಾಗಿ ಬಿಚ್ಚಿಟ್ಟಿವೆ.
ಇದನ್ನೂ ಓದಿ: ‘ದಾರಿ ತಪ್ಪಿದ ಮಗ’ ಆದ್ರಾ ಮೇಟಿ ಪುತ್ರ? ಗೆಲುವಿನ ಬೆನ್ನಲ್ಲೇ ಉಮೇಶ್ ನಡೆ ಬದಲು; ನಂಬಿ ಟಿಕೆಟ್ ಕೊಡಿಸಿದವರಿಗೇ ಭ್ರಮನಿರಸನ!
ಮೇಟಿ ಆಪ್ತರ ಖಡಕ್ ಎಚ್ಚರಿಕೆ: ಕಾಣದ ಕೈಗಳ ಅಕ್ರಮಗಳ ಸರಣಿ ಬಾಂಬ್?
ವಿರೋಧಿಗಳ ಈ ತರಚಲು ಗಾಯದಂತಹ ಆರೋಪಗಳಿಗೆ ಶಾಸಕ ಉಮೇಶ್ ಮೇಟಿ ಅವರ ಆಪ್ತ ಬಲ ಹಾಗೂ ಬೆಂಬಲಿಗರು ಈಗ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ನೇರ ಸವಾಲೆಸೆದಿದ್ದಾರೆ. “ಈ ಪಿತೂರಿಯ ಹಿಂದೆ ಕೆಲಸ ಮಾಡಿರುವ ‘ಕಾಣದ ಕೈಗಳ’ ಬೃಹತ್ ಅವ್ಯವಹಾರಗಳು ಮತ್ತು ಭೂ ಅಕ್ರಮಗಳ ಕಂಪ್ಲೀಟ್ ಜಾತಕವೇ ನಮ್ಮ ಬಳಿಯಿದೆ. ಇಲ್ಲಿಯವರೆಗೆ ನಾವು ರಾಜಕೀಯ ಘನತೆಗೆ ಬೆಲೆ ಕೊಟ್ಟು ಸುಮ್ಮನಿದ್ದೆವು. ಆದರೆ, ನಮ್ಮ ನಾಯಕರ ಮೇಲಿನ ವೈಯಕ್ತಿಕ ಸಿಟ್ಟಿಗೆ ಕುಟುಂಬದ ಹೆಣ್ಣುಮಕ್ಕಳನ್ನು ಬೀದಿಗೆ ಎಳೆಯುವ ಕೀಳು ರಾಜಕೀಯಕ್ಕೆ ಇಳಿದಿರುವುದು ಅಕ್ಷಮ್ಯ. ಇದೇ ರೀತಿ ಮುಂದುವರಿದರೆ, ಆ ಕಾಣದ ಕೈಗಳ ಕೋಟಿ ಕೋಟಿ ಅಕ್ರಮಗಳ ಸಾಕ್ಷ್ಯಾಧಾರ ಹಾಗೂ ಅವರ ಖಾಸಗಿ ಜೀವನದ ಕರಾಳ ಅಧ್ಯಾಯಗಳನ್ನು ಸಾರ್ವಜನಿಕವಾಗಿ ಹೊರಹಾಕಬೇಕಾಗುತ್ತದೆ. ನಾವು ಅವರ ವೈಯಕ್ತಿಕ ವಿಚಾರಗಳಿಗೆ ಕೈ ಹಾಕಿದರೆ ಅದು ಎಷ್ಟು ಘೋರವಾಗಿರುತ್ತದೆ ಎಂಬುದು ಆ ಕುತಂತ್ರಿಗಳಿಗೆ ಶೀಘ್ರದಲ್ಲೇ ಗೊತ್ತಾಗಲಿದೆ” ಎಂದು ಮೇಟಿ ಆಪ್ತ ವಲಯ ಅತ್ಯಂತ ಖಾರವಾಗಿ ಎಚ್ಚರಿಸಿದೆ.
ಶಾಸಕ ಉಮೇಶ್ ಮೇಟಿ ಅವರು ತಮ್ಮನ್ನು ಗೆಲ್ಲಿಸಿದ ಮುಖಂಡರನ್ನು ಕಡೆಗಣಿಸಿ ಎಡವಟ್ಟು ಮಾಡಿರಬಹುದು, ಅದಕ್ಕೆ ಕಾರ್ಯಕರ್ತರಲ್ಲಿ ಸದ್ಭಾವನೆಯ ಆಕ್ರೋಶವಿರಬಹುದು. ಆದರೆ, ಶಾಸಕರ ಮೇಲಿನ ಆ ರಾಜಕೀಯ ವೈಯಕ್ತಿಕ ಸಿಟ್ಟು ಮತ್ತು ಅಸಮಾಧಾನವನ್ನು ತೀರಿಸಿಕೊಳ್ಳಲು, ಅವರ ಸಹೋದರಿಯ ಕುಟುಂಬ ಹಾಗೂ ಹೆಣ್ಣುಮಗಳೊಬ್ಬಳ ಭವಿಷ್ಯವನ್ನು ಬಲಿಪಶು ಮಾಡಲು ಹೊರಟಿರುವುದು ಅಕ್ಷಮ್ಯ.
ರಾಜಕೀಯ ಹೋರಾಟಗಳನ್ನು ನೇರ ಎದುರಾಳಿಯ ವಿರುದ್ಧ, ಆತನ ನಾಯಕತ್ವ ಹಾಗೂ ನಿರ್ಧಾರಗಳ ವಿರುದ್ಧ ಮಾಡಬೇಕೇ ಹೊರತು, ಕುಟುಂಬದ ಹೆಣ್ಣುಮಕ್ಕಳನ್ನೋ ಅಥವಾ ಕಾನೂನುಬದ್ಧವಾಗಿ ಕೆಲಸ ಮಾಡಿದ ಅಧಿಕಾರಿಗಳನ್ನೋ ಟಾರ್ಗೆಟ್ ಮಾಡುವುದಲ್ಲ. ಶಾಸಕರ ನಡೆಯನ್ನು ವಿರೋಧಿಸುವ ನೆಪದಲ್ಲಿ ಈ ರೀತಿಯ ಅಗ್ಗದ ತೇಜೋವಧೆಗೆ ಇಳಿದಿರುವ ‘ಕಾಣದ ಕೈಗಳಿಗೆ’ ಬಾಗಲಕೋಟೆಯ ಜನತೆ ಖಂಡಿತ ಧಿಕ್ಕಾರ ಕೂಗಲಿದ್ದಾರೆ. ರಾಜಕೀಯ ದ್ವೇಷಕ್ಕೆ ಹದ್ದುಬಸ್ತಿರಲಿ; ಕುಟುಂಬಗಳನ್ನು ಬೀದಿಗೆ ಎಳೆಯುವ ಈ ನಾಚಿಕೆಗೇಡಿನ ಪ್ರವೃತ್ತಿ ತಕ್ಷಣವೇ ನಿಲ್ಲಲಿ.
ಯಾರ ಹಂಗೂ ಇಲ್ಲದ, ಯಾರಿಗೂ ಬಗ್ಗದ ಸ್ವತಂತ್ರ ಮಾಧ್ಯಮಕ್ಕೆ ನಿಮ್ಮ ಬೆಂಬಲದ ಅವಶ್ಯಕತೆ ಇದೆ...






