Friday, September 11, 2026
Home ವಿಶ್ಲೇಷಣೆ ​‘NICE’ ಹೆಸರಲ್ಲಿ ನೈಸ್ ದರೋಡೆ! ಕೋರ್ಟ್ ‘ಲೂಟಿ’ ಅಂದರೂ ಸರ್ಕಾರಕ್ಕೇಕೆ ಪ್ರೀತಿ? ಪ್ರತಿ ದಿನ 10...

​‘NICE’ ಹೆಸರಲ್ಲಿ ನೈಸ್ ದರೋಡೆ! ಕೋರ್ಟ್ ‘ಲೂಟಿ’ ಅಂದರೂ ಸರ್ಕಾರಕ್ಕೇಕೆ ಪ್ರೀತಿ? ಪ್ರತಿ ದಿನ 10 ಕೋಟಿ ಗುಳುಂ!

​‘NICE’ ಹೆಸರಲ್ಲಿ ನೈಸ್ ದರೋಡೆ! ಕೋರ್ಟ್ ‘ಲೂಟಿ’ ಅಂದರೂ ಸರ್ಕಾರಕ್ಕೇಕೆ ಪ್ರೀತಿ? ಪ್ರತಿ ದಿನ 10 ಕೋಟಿ ಗುಳುಂ!

“ಪ್ರತಿದಿನ ನೈಸ್ (NICE) ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರೇ… ಟೋಲ್ ಪ್ಲಾಜಾದಲ್ಲಿ ನೀವು ಜೇಬಿನಿಂದ ತೆಗೆದು ನೀಡುತ್ತಿರುವ ಕೋಟ್ಯಂತರ ರೂಪಾಯಿ ಹಣ ಅಭಿವೃದ್ಧಿಗಾಗಿ ನೀಡುತ್ತಿರುವ ಶುಲ್ಕವೇ? ಅಥವಾ ರಾಜ್ಯದ ಅತಿ ದೊಡ್ಡ ‘ಭೂ ಮಾಫಿಯಾ’ ಹಾಗೂ ‘ಅಕ್ರಮ ವಸೂಲಿ’ಗೆ ನಿಮ್ಮ ಕಣ್ಣೆದುರೇ ನೀಡುತ್ತಿರುವ ಕಪ್ಪವೇ?”

ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (H.D. Kumaraswamy) ಅವರು “ನೈಸ್ ರಸ್ತೆಯಲ್ಲಿ ಯಾರೂ ಟೋಲ್ ಪಾವತಿಸಬೇಡಿ, ಸರ್ಕಾರ ತಕ್ಷಣ ಈ ರಸ್ತೆಯನ್ನು ತನ್ನ ಸುಪರ್ದಿಗೆ ಪಡೆಯಬೇಕು” ಎಂದು ಕರೆ ನೀಡಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (D.K. Shivakumar) ಅವರಿಗೆ 7 ಪುಟಗಳ ಸುದೀರ್ಘ ಪತ್ರ ಬರೆದಿದ್ದಾರೆ. ಇನ್ನೊಂದೆಡೆ, ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ (Thawarchand Gehlot) ಅವರು ಬಳಕೆಯಾಗದೆ ಉಳಿದಿರುವ ನೈಸ್ ಭೂಮಿಯನ್ನು ಸರ್ಕಾರ ವಶಕ್ಕೆ ಪಡೆಯುವಂತೆ ಸೂಚಿಸಿ ವರದಿ ಕೇಳಿದ್ದಾರೆ. ಈ ನಡುವೆ ಕರ್ನಾಟಕ ಹೈಕೋರ್ಟ್ ನೀಡಿದ ಐತಿಹಾಸಿಕ ತೀರ್ಪು ಈ ಹಗರಣದ ಅಸಲಿ ಮುಖವಾಡವನ್ನು ಸಂಪೂರ್ಣವಾಗಿ ತೆರೆದಿಟ್ಟಿದೆ.

ಹೈಕೋರ್ಟ್ ಛೀಮಾರಿ: ‘ಇದು ಕರ್ನಾಟಕದ ಅತಿದೊಡ್ಡ ಹಗರಣ’!

ನೈಸ್ (NICE) ಯೋಜನೆಗೆ (BMICP) ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ ಪೀಠವು (ನ್ಯಾಯಮೂರ್ತಿ ಡಿ.ಕೆ. ಸಿಂಗ್ ಹಾಗೂ ನ್ಯಾಯಮೂರ್ತಿ ಟಿ.ಎಂ. ನಡಾಫ್ ಅವರ ಪೀಠ) ಸಲ್ಲಿಸಲಾಗಿದ್ದ ಮೇಲ್ಮನವಿಗಳನ್ನು ವಿಚಾರಣೆ ನಡೆಸಿ ಅತ್ಯಂತ ತೀಕ್ಷ್ಣವಾಗಿ ಖಂಡಿಸಿದೆ:

  • ‘NICE’‌ನಲ್ಲಿ ನೈಸ್ ಬಿಟ್ಟರೆ ಬೇರೇನೂ ಇಲ್ಲ: ನ್ಯಾಯಪೀಠವು ತನ್ನ ಪ್ರಮುಖ ಆದೇಶದಲ್ಲಿ “ಈ ಯೋಜನೆಯಲ್ಲಿ ‘ನೈಸ್’ ಎಂಬ ಹೆಸರು ಬಿಟ್ಟರೆ ಸಾರ್ವಜನಿಕರಿಗೆ ಒಳಿತಾಗುವಂತಹ ‘ನೈಸ್’ ವಿಷಯವೇನೂ ಇಲ್ಲ. ಇದು ರಾಜ್ಯದ ಅತಿ ದೊಡ್ಡ ಹಗರಣಗಳಲ್ಲಿ ಒಂದಾಗಿದೆ” ಎಂದು ಗುಡುಗಿದೆ.
  • 25 ವರ್ಷಗಳಲ್ಲಿ ಆದದ್ದು ಕೇವಲ 5 ಕಿ.ಮೀ ಎಕ್ಸ್‌ಪ್ರೆಸ್‌ವೇ!: ಫ್ರೇಮ್‌ವರ್ಕ್ ಅಗ್ರಿಮೆಂಟ್ (FWA) ಒಪ್ಪಂದದ ಪ್ರಕಾರ 111 ಕಿ.ಮೀ ಮೂಲ ಎಕ್ಸ್‌ಪ್ರೆಸ್‌ವೇ ನಿರ್ಮಿಸಬೇಕಿದ್ದ ಸಂಸ್ಥೆ, ಕಳೆದ 25 ವರ್ಷಗಳಲ್ಲಿ ನಿರ್ಮಿಸಿರುವುದು ಕೇವಲ 5 ಕಿ.ಮೀ ಕಾಂಕ್ರೀಟ್ ಎಕ್ಸ್‌ಪ್ರೆಸ್‌ವೇ ಮಾತ್ರ ಎಂದು ಪಿಡಬ್ಲ್ಯೂಡಿ ಇಲಾಖೆ ಅಫಿಡವಿಟ್ ಸಲ್ಲಿಸಿದೆ.
  • ಫೊರೆನ್ಸಿಕ್ ಆಡಿಟ್‌ಗೆ ಆದೇಶ: ಖಾಸಗಿ ಸಂಸ್ಥೆಯ ಲಾಭಕ್ಕಾಗಿ ಸರ್ಕಾರವೇ ಸಪೋರ್ಟ್ ಸಿಸ್ಟಮ್ ರೀತಿ ನಿಂತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಕೋರ್ಟ್, ತಜ್ಞರ ತಂಡದಿಂದ ಸ್ವತಂತ್ರ ತನಿಖೆ ಹಾಗೂ ಕಂಪನಿಯ ಖಾತೆಗಳ ಸಮಗ್ರ ಫೊರೆನ್ಸಿಕ್ ಆಡಿಟ್ (Forensic Audit) ಆಗಬೇಕು ಎಂದು ನಿರ್ದೇಶಿಸಿದೆ.
  • ಪರಿಸರ ಮಾರಣಹೋಮ: ನೈಸರ್ಗಿಕ ಕೆರೆಗಳು ಹಾಗೂ ಜಲಮೂಲಗಳನ್ನು ಒಣಗಿಸಿ ನೈಸ್ ಸಂಸ್ಥೆಗೆ ಹಸ್ತಾಂತರಿಸಲಾಗಿದ್ದು, ಬೆಂಗಳೂರಿನ ನೀರು ಸರಬರಾಜು ಹಾಗೂ ಜೀವವೈವಿಧ್ಯತೆಗೆ ಚೇತರಿಸಿಕೊಳ್ಳಲಾಗದ ದಕ್ಕೆ ತರಲಾಗಿದೆ ಎಂದು ನ್ಯಾಯಾಲಯ ಎಚ್ಚರಿಸಿದೆ.

ಮೂಲ ಒಪ್ಪಂದ (FWA) vs ನೈಸ್ ಮಾಡಿದ ‘ಮಹಾ ದ್ರೋಹ’:

1995ರಲ್ಲಿ ಅಂದಿನ ಹೆಚ್.ಡಿ. ದೇವೇಗೌಡರ ಸರ್ಕಾರ ಹಾಗೂ ಅಮೆರಿಕದಿಂದ ಬಂದಿದ್ದ ಅಶೋಕ್ ಕೇಣಿ ಅವರ ನಂದಿ ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸಸ್ (NICE) ನಡುವೆ ‘ಬೆಂಗಳೂರು-ಮೈಸೂರು ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಪ್ರಾಜೆಕ್ಟ್’ (BMICP) ಸಿದ್ಧವಾಯಿತು. 1997ರಲ್ಲಿ ಜೆ.ಹೆಚ್. ಪಟೇಲ್ ಅವರ ಸರ್ಕಾರದ ಅವಧಿಯಲ್ಲಿ ಫ್ರೇಮ್‌ವರ್ಕ್ ಅಗ್ರಿಮೆಂಟ್ (FWA) ಅಧಿಕೃತವಾಯಿತು.

ಇದನ್ನೂ ಓದಿ: ಹನೂರು ಕಾಡಿನಲ್ಲಿ ಹರಿದದ್ದು ‘ಬೇಟೆ’ಗಾರರ ರಕ್ತವೋ/ಅರಣ್ಯ ಇಲಾಖೆಯ ‘ನರಬೇಟೆ’ಯೋ? ‘ಹುಸಿ Encounter’ ಶಂಕೆಯ ಕಟು ಸತ್ಯಗಳು…‌

ಮೂಲ ಒಪ್ಪಂದದಲ್ಲಿದ್ದ ನಿಬಂಧನೆಗಳು ಮತ್ತು ವಾಸ್ತವದ ಮಹಾ ದ್ರೋಹ:

  • 100 ಕಿ.ಮೀ ಎಕ್ಸ್‌ಪ್ರೆಸ್‌ವೇ ವಿಫಲತೆ: ಬೆಂಗಳೂರಿನಿಂದ ಮೈಸೂರಿಗೆ ಕೇವಲ 90 ನಿಮಿಷಗಳಲ್ಲಿ ತಲುಪುವ 111 ಕಿ.ಮೀ ಅತ್ಯಾಧುನಿಕ ಎಕ್ಸ್‌ಪ್ರೆಸ್‌ವೇ ನಿರ್ಮಿಸುವುದು ಮೂಲ ಉದ್ದೇಶವಾಗಿತ್ತು. ಆದರೆ 25 ವರ್ಷಗಳು ಕಳೆದರೂ ನೈಸ್ ಸಂಸ್ಥೆ ಎಕ್ಸ್‌ಪ್ರೆಸ್‌ವೇ ನಿರ್ಮಿಸಲೇ ಇಲ್ಲ! ಕಾದು ಕಾದು ಬೇಸತ್ತ ಕೇಂದ್ರ ಸರ್ಕಾರವೇ ಕೊನೆಗೆ ಸಪರೇಟ್ ಆಗಿ ಭೂಸ್ವಾಧೀನ ಮಾಡಿ 10 ಪಥದ ಹೊಸ ಬೆಂಗಳೂರು-ಮೈಸೂರು ಹೈವೇ ನಿರ್ಮಿಸಬೇಕಾಯಿತು.
  • ತುಂಡು ರಸ್ತೆಯಲ್ಲಿ ಭಾರಿ ಕೊಳ್ಳೆ: ನೈಸ್ ಸಂಸ್ಥೆ ತನಗೆ ಲಾಭ ತಂದುಕೊಡುವ ಕೇವಲ 41 ಕಿ.ಮೀ ಪೆರಿಫೆರಲ್ ಹಾಗೂ 9.8 ಕಿ.ಮೀ ಲಿಂಕ್ ರಸ್ತೆಯನ್ನು ಮಾತ್ರ ನಿರ್ಮಿಸಿ, ಕಳೆದ 20 ವರ್ಷಗಳಿಂದ ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ಟೋಲ್ ಕಲೆಕ್ಟ್ ಮಾಡುತ್ತಿದೆ.
  • ಟೌನ್‌ಶಿಪ್ ಹೆಸರಲ್ಲಿ ರಿಯಲ್ ಎಸ್ಟೇಟ್: ಒಪ್ಪಂದದ ಪ್ರಕಾರ ರಸ್ತೆಯ ಇಕ್ಕೆಲಗಳಲ್ಲಿ 5 ವಿಶ್ವದರ್ಜೆಯ ಸ್ವಾವಲಂಬಿ ಟೌನ್‌ಶಿಪ್‌ಗಳನ್ನು ಅಭಿವೃದ್ಧಿಪಡಿಸಬೇಕಿತ್ತು. ಆದರೆ ಒಂದೇ ಒಂದು ಟೌನ್‌ಶಿಪ್ ಆಗಲಿಲ್ಲ! ಬದಲಿಗೆ ರೈತರಿಂದ ಅಗ್ಗದ ದರದಲ್ಲಿ ಪಡೆದ ಭೂಮಿಯನ್ನು ಕಮರ್ಷಿಯಲ್ ಕಾಂಪ್ಲೆಕ್ಸ್ ಹಾಗೂ ಅಪಾರ್ಟ್‌ಮೆಂಟ್‌ಗಳಿಗೆ ಪರಭಾರೆ ಮಾಡಲಾಗಿದೆ.
  • ರೈತರ ರಕ್ತಕಣ್ಣೀರು (ವಿಧಿ 300A ಉಲ್ಲಂಘನೆ): ಯೋಜನೆಗೆ ನೋಟಿಫೈ ಮಾಡಲಾದ ಸಾವಿರಾರು ಎಕರೆ ಜಮೀನಿಗೆ ಪರಿಹಾರವನ್ನೂ ನೀಡದೆ, ರೈತರು ತಮ್ಮ ಸ್ವಂತ ಜಮೀನಿನಲ್ಲಿ ಮನೆ ಅಥವಾ ಕೃಷಿ ಚಟುವಟಿಕೆ ನಡೆಸದಂತೆ ಪಹಣಿಯಲ್ಲಿ ‘KIADB/NICE’ ಹೆಸರು ಕುಳ್ಳಿರಿಸಿ ರೈತರನ್ನು ಬೀದಿಗೆ ತಳ್ಳಲಾಗಿದೆ.

ಜಯಚಂದ್ರ ಸಮಿತಿ ವರದಿ: 392 ಪುಟಗಳ ದಾಖಲಿತ ಅಕ್ರಮಗಳು!

2014ರಲ್ಲಿ ಸಿದ್ದರಾಮಯ್ಯನವರ ಸರ್ಕಾರದ ಅವಧಿಯಲ್ಲಿ ಅಂದಿನ ಕಾನೂನು ಸಚಿವ ಟಿ.ಬಿ. ಜಯಚಂದ್ರ ಅವರ ನೇತೃತ್ವದ 11 ಸದಸ್ಯರ ಸಮಿತಿ 2016ರ ಡಿಸೆಂಬರ್ 12 ರಂದು 392 ಪುಟಗಳ ಸುದೀರ್ಘ ತನಿಖಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು.

  • 24 ನಿಯಮಗಳ ಉಲ್ಲಂಘನೆ: ಮೂಲ ಫ್ರೇಮ್‌ವರ್ಕ್ ಒಪ್ಪಂದದ 30 ಪ್ರಮುಖ ಷರತ್ತುಗಳಲ್ಲಿ ನೈಸ್ ಸಂಸ್ಥೆ ಭರ್ತಿ 24 ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿದೆ.
  • ಅಕ್ರಮ ಭೂಸ್ವಾಧೀನ: ಒಪ್ಪಂದದ ಪ್ರಕಾರ ಇಡೀ ಯೋಜನೆಗೆ 20,193 ಎಕರೆ ಬೇಕಿತ್ತಾದರೂ, ನೈಸ್ ಹಾಗೂ KIADB ಸೇರಿ 28,000 ಎಕರೆಗೂ ಹೆಚ್ಚು ಭೂಮಿಯನ್ನು ಅಕ್ವೈರ್ ಮಾಡಲು ಮುಂದಾಗಿದ್ದವು.
  • 777 ಕೋಟಿ ರೂ. ಪ್ರೈಮ್ ಲ್ಯಾಂಡ್ ದುರುಪಯೋಗ: ಸ್ವಾಧೀನಪಡಿಸಿಕೊಂಡ ಭೂಮಿಯನ್ನು ಅನಧಿಕೃತ ರಿಯಲ್ ಎಸ್ಟೇಟ್‌ಗೆ ಬಳಸಿ 777 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಭೂಮಿಯನ್ನು ಡೈವರ್ಟ್ ಮಾಡಲಾಗಿದೆ.
  • ಕಾಂಕ್ರೀಟ್ ಬದಲು ಟಾರ್ ರಸ್ತೆ: ಒಪ್ಪಂದದ ನಿಯಮ ಮೀರಿ ಕಾಂಕ್ರೀಟ್ ಎಕ್ಸ್‌ಪ್ರೆಸ್‌ವೇ ಬದಲು ಅಗ್ಗದ ಟಾರ್ ರಸ್ತೆ ನಿರ್ಮಿಸಿ ಕೋಟ್ಯಂತರ ರೂಪಾಯಿ ಉಳಿಸಿಕೊಳ್ಳಲಾಗಿದೆ.
  • ಸಿಬಿಐ / ಇಡಿ ತನಿಖೆಗೆ ಶಿಫಾರಸು: ಯೋಜನೆಯನ್ನು ಸರ್ಕಾರವೇ ತನ್ನ ವಶಕ್ಕೆ (Takeover) ಪಡೆಯಬೇಕು, ಅಕ್ರಮ ಟೋಲ್ ನಿಲ್ಲಿಸಬೇಕು ಹಾಗೂ ಆರ್ಥಿಕ ಅಕ್ರಮಗಳ ತನಿಖೆಯನ್ನು ಸಿಬಿಐ ಅಥವಾ ಇಡಿಗೆ (ED) ವಹಿಸಬೇಕು ಎಂದು ಕಮಿಟಿ ಶಿಫಾರಸು ಮಾಡಿತ್ತು. ಆದರೆ, ಕಾಂಗ್ರೆಸ್ ಹಾಗೂ ತದನಂತರ ಬಂದ ಬಿಜೆಪಿ ಸರ್ಕಾರಗಳೂ (ವಿವಿಧ ಕ್ಯಾಬಿನೆಟ್ ಸಬ್ ಕಮಿಟಿಗಳನ್ನು ರಚಿಸಿ) ವರದಿಯನ್ನು ಮೂಲೆಗೆ ತಳ್ಳಿದವು.

ಟೋಲ್ ದರದ ಅಸಲಿ ಲೆಕ್ಕಾಚಾರ: NHAI ಗಿಂತ 3 ಪಟ್ಟು ಹೆಚ್ಚು ದರ!

ಮಾಜಿ ಸಚಿವ ಎಸ್.ಟಿ. ಸೋಮಶೇಖರ್ ಸೇರಿದಂತೆ ಹಲವರ ಲೆಕ್ಕಾಚಾರದ ಪ್ರಕಾರ ನೈಸ್ ಸಂಸ್ಥೆ ಪ್ರತಿದಿನ ಅಂದಾಜು 10 ಕೋಟಿ ರೂಪಾಯಿಗೂ ಅಧಿಕ ಟೋಲ್ ಸಂಗ್ರಹಿಸುತ್ತಿದೆ.

  • ಸಾಮಾನ್ಯ ಹೆದ್ದಾರಿ ದರ (NHAI):ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ನಿರ್ಮಿಸುವ 6-8 ಪಥಗಳ ಅತ್ಯಾಧುನಿಕ ರಸ್ತೆಗಳಲ್ಲಿ ಪ್ರತಿ ಕಿಲೋಮೀಟರ್‌ಗೆ ಸರಾಸರಿ 2.80 ರೂ. ಯಿಂದ 3.20 ರೂ. ಟೋಲ್ ದರ ಇರುತ್ತದೆ.
  • ನೈಸ್ ರಸ್ತೆಯ ದೋಚುವಿಕೆ: ಆದರೆ ನೈಸ್ ರಸ್ತೆಯಲ್ಲಿ ಪ್ರತಿ ಕಿಲೋಮೀಟರ್‌ಗೆ 8 ರೂ. ಯಿಂದ 9.50 ರೂ. (ಟ್ರಕ್‌ಗಳಿಗೆ ಪ್ರತಿ ಕಿ.ಮೀಗೆ 10 ರಿಂದ 15 ರೂಪಾಯಿ) ವಸೂಲಿ ಮಾಡಲಾಗುತ್ತಿದೆ! ಅಂದರೆ ರಾಷ್ಟ್ರೀಯ ಹೆದ್ದಾರಿಗಿಂತ 3 ಪಟ್ಟು ಹೆಚ್ಚು ದುಬಾರಿ!
  • ಸರ್ಕಾರದ ಪೂರ್ವಾಪರ ಅನುಮತಿ ಇಲ್ಲದೆ ಇತ್ತೀಚೆಗೆ ಮತ್ತೆ ಶೇ. 10 ರಷ್ಟು ಟೋಲ್ ದರ ಹೆಚ್ಚಿಸಲಾಗಿದೆ. (ಉದಾಹರಣೆಗೆ: ಹೊಸೂರು ರಸ್ತೆಯಿಂದ ಬನ್ನೇರುಘಟ್ಟದ 8.74 ಕಿ.ಮೀ ಗೆ ಕಾರ್‌ಗೆ 72 ರೂಪಾಯಿ, ಬಸ್ಸಿಗೆ 215 ರೂಪಾಯಿ ಟೋಲ್ ವಿಧಿಸಲಾಗುತ್ತಿದೆ).

ಇದನ್ನೂ ಓದಿ: Encounter:‌ ಅರಣ್ಯ ಕಾಯ್ದೆಯೋ, ಸರ್ಕಾರಿ ಪ್ರಾಯೋಜಿತ ಸರಣಿ ಕೊಲೆಯೋ? ಹನೂರು ಕಾಡಿನಲ್ಲಿ ಸಿಡಿದ ಗುಂಡುಗಳು ಎತ್ತಿದ ರಕ್ತಸಿಕ್ತ ಪ್ರಶ್ನೆಗಳು!

ವಾಹನ ಸವಾರರು ಟೋಲ್ ಪಾವತಿಸಬೇಕೇ, ಬೇಡವೇ?

ಹೈಕೋರ್ಟ್‌ನ ಸಿಂಗಲ್ ಬೆಂಚ್ ಹಾಗೂ ಡಿವಿಷನ್ ಬೆಂಚ್ ಎರಡೂ ‘ನೈಸ್ ಸಂಸ್ಥೆಯ ಟೋಲ್ ಸಂಗ್ರಹ ಸಂಪೂರ್ಣ ಅಕ್ರಮ’ ಎಂದು ಸ್ಪಷ್ಟಪಡಿಸಿವೆ. ಆದರೆ, ಕೋರ್ಟ್ ಆದೇಶವನ್ನು ಜಾರಿಗೆ ತರಬೇಕಾದದ್ದು ರಾಜ್ಯ ಕಾರ್ಯಾಂಗದ (ಸರ್ಕಾರದ) ಕರ್ತವ್ಯ.

ಸಾರ್ವಜನಿಕರು ಟೋಲ್ ಪ್ಲಾಜಾಗಳಲ್ಲಿ ಭೌತಿಕವಾಗಿ ಜಗಳಕ್ಕೆ ಇಳಿಯುವುದರಿಂದ ಕಾನೂನು ಸಮಸ್ಯೆ ಎದುರಾಗಬಹುದು. ಆದರೆ, ‘ಅಕ್ರಮ’ ಎಂದು ಸಾಬೀತಾಗಿರುವಾಗ ಸರ್ಕಾರ ತಕ್ಷಣವೇ ಟೋಲ್ ಪ್ಲಾಜಾಗಳಿಗೆ ಬೀಗ ಜಡಿದು, ಗೇಟ್‌ಗಳನ್ನು ತೆರವುಗೊಳಿಸಬೇಕಿತ್ತು. ಸರ್ಕಾರ ಮೌನವಾಗಿರುವುದರಿಂದ ವಾಹನ ಸವಾರರು ಪ್ರತಿದಿನ ಅಕ್ರಮವಾಗಿ ತಮ್ಮ ಜೇಬಿನ ಹಣವನ್ನು ಚೆಲ್ಲುವಂತಾಗಿದೆ.

ನ್ಯಾಯಾಲಯವೇ “ಇದು ರಾಜ್ಯದ ಅತಿ ದೊಡ್ಡ ಹಗರಣ, ಕೆರೆಗಳನ್ನು ಒಣಗಿಸಲಾಗಿದೆ, ಅಕ್ರಮ ಟೋಲ್ ವಸೂಲಿಯಾಗಿದೆ” ಎಂದು ಕಟುವಾಗಿ ಹೇಳಿದ ಮೇಲೆಯೂ, ರಾಜ್ಯಪಾಲರು ನೋಟೀಸ್ ನೀಡಿದ ಮೇಲೆಯೂ ಸರ್ಕಾರ ಕ್ರಮ ಕೈಗೊಳ್ಳದಿರುವುದು ಭಾರಿ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ!

  • ಅಕ್ರಮವಾಗಿ ಕಾರ್ಯಾಚರಿಸುತ್ತಿರುವ ಟೋಲ್ ಸಂಗ್ರಹವನ್ನು ತಕ್ಷಣ ತಡೆಹಿಡಿಯಬೇಕು.
  • ನೈಸ್ ರಸ್ತೆಯನ್ನು ಸರ್ಕಾರವೇ ಸಂಪೂರ್ಣವಾಗಿ ವಶಕ್ಕೆ (Takeover) ಪಡೆಯಬೇಕು.
  • ಬಳಕೆಯಾಗದ ಸಾವಿರಾರು ಎಕರೆ ಭೂಮಿಯನ್ನು ಮುಟ್ಟುಗೋಲು ಹಾಕಿಕೊಂಡು, ಸಂತ್ರಸ್ತ ರೈತರಿಗೆ ತಕ್ಷಣ ನ್ಯಾಯ ಒದಗಿಸಬೇಕು.

ಸಾರ್ವಜನಿಕರ ಜೇಬಿಗೆ ಬೀಳುತ್ತಿರುವ ಅನಧಿಕೃತ ಕನ್ನವನ್ನು ತಡೆಯಲು ರಾಜ್ಯ ಸರ್ಕಾರ ತಕ್ಷಣವೇ ನಿರ್ಣಾಯಕ ಮತ್ತು ಕಠಿಣ ಕ್ರಮ ಕೈಗೊಳ್ಳಲೇಬೇಕು!

ಸ್ವತಂತ್ರ ಮಾಧ್ಯಮ ಬೆಂಬಲಿಸಿ

ಯಾರ ಹಂಗೂ ಇಲ್ಲದ, ಯಾರಿಗೂ ಬಗ್ಗದ ಸ್ವತಂತ್ರ ಮಾಧ್ಯಮಕ್ಕೆ ನಿಮ್ಮ ಬೆಂಬಲದ ಅವಶ್ಯಕತೆ ಇದೆ...