ಕರ್ನಾಟಕದ ರಾಜಕೀಯ ಇತಿಹಾಸವನ್ನು ಒಮ್ಮೆ ಮೆಲಕು ಹಾಕಿದರೆ, ‘AHINDA’ (ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ದಲಿತರು) ಎಂಬ ಐದಕ್ಷರದ ಮಂತ್ರ ರಾಜ್ಯದ ರಾಜಕೀಯ ಸಮೀಕರಣಗಳನ್ನೇ ಹೇಗೆ ಬದಲಾಯಿಸಿದೆ ಎಂಬುದು ಸ್ಪಷ್ಟವಾಗುತ್ತದೆ. ದಶಕಗಳ ಕಾಲ ರಾಜಕೀಯವಾಗಿ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಿದ್ದ ಶೋಷಿತ ವರ್ಗಗಳನ್ನು ಒಂದೇ ಸೂರಿನಡಿ ತಂದು, ಅವರನ್ನು ‘ಪವರ್ ಬ್ಯಾಂಕ್’ ಆಗಿ ಪರಿವರ್ತಿಸಿದ ಸಿದ್ದರಾಮಯ್ಯ ಅವರ ರಾಜಕೀಯ ತಂತ್ರಗಾರಿಕೆ ಕೇವಲ ಕಾಂಗ್ರೆಸ್ ಮಾತ್ರವಲ್ಲ, ಇಡೀ ರಾಜ್ಯ ರಾಜಕಾರಣದಲ್ಲೇ ದೊಡ್ಡ ಸಂಚಲನ ಮೂಡಿಸಿತ್ತು. ಆದರೆ, ಇತ್ತೀಚಿನ ರಾಜಕೀಯ ಬೆಳವಣಿಗೆಗಳಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದ ತಕ್ಷಣ ಅಥವಾ ವಿಶ್ರಾಂತಿ ಪಡೆದುಕೊಳ್ಳುತ್ತಾರೆ ಎನ್ನುವ ಸೂಚನೆ ಸಿಗುತ್ತಿದ್ದಂತೆಯೇ, ರಾಜ್ಯ ರಾಜಕಾರಣದಲ್ಲಿ ಕೆಲವು ಸ್ವಯಂಘೋಷಿತ ‘ಅಹಿಂದ’ ನಾಯಕರು ಹಾಗೂ ಅವರ ಬೆಂಬಲಿಗರು ಸೃಷ್ಟಿಸಿದ ನಾಟಕೀಯ ವಾತಾವರಣ ಈಗ ಬಟಾಬಯಲಾಗಿದೆ. ಸಿದ್ದರಾಮಯ್ಯ ಅಖಾಡಕ್ಕೆ ಮರಳುತ್ತಿರುವ ಒಂದೇ ಒಂದು ಸೂಚನೆ ಈ ಎಲ್ಲಾ ಹಾರಾಟ-ಹೋರಾಟಗಳಿಗೆ ಹೇಗೆ ತಣ್ಣೀರು ಎರಚಿದೆ ಎಂಬುದರ ಪೂರ್ಣ ವಿಶ್ಲೇಷಣೆ ಇಲ್ಲಿದೆ.
‘ಚುನಾವಣಾ ನಿವೃತ್ತಿ’ ಹಾಗೂ ‘ರಾಜಕೀಯ ನಿವೃತ್ತಿ’ ನಡುವಿನ ವ್ಯತ್ಯಾಸ ತಿಳಿಯದ ಸ್ವಯಂಘೋಷಿತರು!
AHINDA ನಾಯಕ ಸಿದ್ದರಾಮಯ್ಯ ಅವರು ಹಲವು ಬಾರಿ ಅತ್ಯಂತ ಸ್ಪಷ್ಟವಾಗಿ ಘೋಷಿಸಿದ್ದಾರೆ—“ನಾನು ಮುಂದಿನ ದಿನಗಳಲ್ಲಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ, ಆದರೆ ರಾಜಕೀಯವಾಗಿ ನಿವೃತ್ತಿಯಾಗುವುದಿಲ್ಲ. ಸಕ್ರಿಯ ರಾಜಕಾರಣದಲ್ಲಿದ್ದು ಶೋಷಿತ ವರ್ಗದ ಧ್ವನಿಯಾಗಿ ಇರುತ್ತೇನೆ”. ಆದರೆ, ಅವರ ರಾಜಕೀಯ ವಿರೋಧಿಗಳು ಮತ್ತು ಸಕ್ಕರೆ ಕಸಬಿನಂತೆ ಅಹಿಂದ ನಾಯಕತ್ವಕ್ಕೆ ಟವಲ್ ಹಾಕಿ ಕುಳಿತಿದ್ದ ಕೆಲವು ಹತಾಶ ನಾಯಕರು ಈ ಮಾತನ್ನು ತಮಗೆ ಬೇಕಾದಂತೆ ವ್ಯಾಖ್ಯಾನಿಸಿಕೊಂಡರು. “ಸಿದ್ದರಾಮಯ್ಯ ಅವರ ಕಥೆ ಮುಗಿಯಿತು, ಅವರ ಕಾಲ ಮುಗಿಯಿತು, ಇನ್ಮುಂದೆ ಅವರಿಗೆ ಜನ ಸೇರುವುದಿಲ್ಲ” ಎಂದು ತಮ್ಮ ಬೆಂಬಲಿಗರ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ರಾಜಕೀಯ ವಲಯದಲ್ಲಿ ಗೊಣಗಾಟ ಆರಂಭಿಸಿದರು.
ಆದರೆ, ಕೇವಲ ಹೇಳಿಕೆಗಳಿಂದ ಅಥವಾ ಬೆಂಬಲಿಗರ ಹಾರಾಟದಿಂದ ನಾಯಕನಾಗಲು ಸಾಧ್ಯವಿಲ್ಲ ಎಂಬುದನ್ನು ಈ ಸ್ವಯಂಘೋಷಿತ ನಾಯಕರು ಮರೆತಿದ್ದರು. ಸಿದ್ದರಾಮಯ್ಯ ಎಂದರೆ ಕೇವಲ ಒಬ್ಬ ವ್ಯಕ್ತಿಯಲ್ಲ, ಅದೊಂದು ಬಹುದೊಡ್ಡ ರಾಜಕೀಯ ಮತ್ತು ಸಾಮಾಜಿಕ ಸಿದ್ಧಾಂತ. ಅವರು ಅಧಿಕಾರದಲ್ಲಿ ಇದ್ದಾಗಗಾಗಲಿ, ಇರದಿದ್ದಾಗಲೂ—ಸಾಮಾಜಿಕ ನ್ಯಾಯದ ವಿಚಾರ ಬಂದಾಗ ಅವರ ಧ್ವನಿಯೇ ಅಹಿಂದ ಸಮುದಾಯಗಳಿಗೆ ಬಂಡೆಯಂತಹ ಬೆಂಬಲ. ಸಿದ್ದರಾಮಯ್ಯ ಸೈಲೆಂಟ್ ಆಗಿದ್ದರೆ ತಮ್ಮ ದಾರಿ ಸುಗಮವಾಯಿತು ಎಂದು ಬೀಗುತ್ತಿದ್ದ ನಾಯಕರಿಗೆ, ಇದೀಗ ಅವರು ಮತ್ತೆ ಅಹಿಂದ ಯಾತ್ರೆ ಮತ್ತು ಸಮಾವೇಶಕ್ಕೆ ಸಜ್ಜಾಗುತ್ತಿರುವುದು ನುಂಗಲಾರದ ಬಿಸಿತುಪ್ಪವಾಗಿದೆ.
ಇದನ್ನೂ ಓದಿ: AHINDA: ಸಿದ್ದರಾಮಯ್ಯ ಸಾಮ್ರಾಜ್ಯಕ್ಕೆ ಕನ್ನ? ‘ಸುಡೋ-ಅಹಿಂದ’ ನಾಯಕರ ನಕಲಿ ಚಹರೆ ಬಯಲು!
ಅಹಿಂದ ಅಖಾಡಕ್ಕೆ ಸಿದ್ದು ಎಂಟ್ರಿ: ನಾಯಕರ ಮುಖ ಸಪ್ಪೆ, ಕಾರ್ಯಕರ್ತರ ಹುಮ್ಮಸ್ಸು ಇಮ್ಮಡಿ!
ಇತ್ತೀಚೆಗೆ ಸಂಗೊಳ್ಳಿ ರಾಯಣ್ಣ ಜಯಂತಿ ಸಂದರ್ಭದಲ್ಲಿ ಹಾಗೂ ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಹಿಂದುಳಿದ ಜಾತಿಗಳ ಒಕ್ಕೂಟದ ಸಮಾವೇಶದಲ್ಲಿ ಭಾಗವಹಿಸುವ ಮತ್ತು ಅಹಿಂದ (AHINDA) ಯಾತ್ರೆಯನ್ನು ಪುನರಾರಂಭಿಸುವ ಸಿದ್ದರಾಮಯ್ಯ ಅವರ ಸುಳಿವು ಹೊರಬೀಳುತ್ತಿದ್ದಂತೆಯೇ, ಕರ್ನಾಟಕ ರಾಜಕೀಯದ ಚಿತ್ರಣವೇ ಬದಲಾಗಿದೆ,. “ನಾವೇ ಮುಂದಿನ ಅಹಿಂದ ನಾಯಕರು” ಎಂದು ಎದೆ ತಟ್ಟಿಕೊಳ್ಳುತ್ತಿದ್ದವರ ಮುಖಗಳು ಈಗ ತೀವ್ರ ಸಪ್ಪೆಯಾಗಿವೆ.
ಇಷ್ಟು ದಿನ “ಸಿದ್ದರಾಮಯ್ಯ ಬಳಿ ಈಗ ಮೊದಲಿನ ಕ್ರೌಡ್ ಇಲ್ಲ, ಶಕ್ತಿ ಇಲ್ಲ” ಎಂದು ಮಾಧ್ಯಮಗಳಲ್ಲಿ ಮತ್ತು ಆಂತರಿಕ ಸಭೆಗಳಲ್ಲಿ ಗೊಣಗುತ್ತಿದ್ದವರ ಹತಾಶೆ ಈಗ ಸ್ಪಷ್ಟವಾಗಿ ಗೋಚರಿಸುತ್ತಿದೆ. ಆ ಗೊಣಗಾಟಗಳು ಬೇರೇನೂ ಅಲ್ಲ, ತಮ್ಮ ನಾಯಕನಿಗೆ ರಾಜ್ಯಮಟ್ಟದ ನಾಯಕತ್ವ ಸಿಗಲಿಲ್ಲವಲ್ಲ ಎಂಬ ವೈಯಕ್ತಿಕ ಸ್ವಾರ್ಥದ ಹತಾಶ ನುಡಿಗಳು ಅಷ್ಟೇ. ಸಿದ್ದರಾಮಯ್ಯ ಅವರ ಪ್ರಭಾವವನ್ನು ಕುಗ್ಗಿಸಲು ಯತ್ನಿಸಿದ ಪ್ರತಿಯೊಬ್ಬರಿಗೂ ಈಗ ಅರ್ಥವಾಗಿದೆ—ಶೋಷಿತ, ದಲಿತ, ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ನಿಜವಾದ ಬದ್ಧತೆ ಮತ್ತು ಪ್ರೀತಿ ಇಂದಿಗೂ ಸಿದ್ದರಾಮಯ್ಯ ಅವರ ಮೇಲೆಯೇ ಇದೆ. ಸಿದ್ದು ಮತ್ತೆ ಕಣಕ್ಕಿಳಿಯುತ್ತಾರೆ ಎಂಬ ಸುದ್ದಿ ಸಿಗುತ್ತಿದ್ದಂತೆಯೇ, ಗ್ರಾಮ ಮಟ್ಟದಲ್ಲಿದ್ದ ನಿಜವಾದ ಅಹಿಂದ ಕಾರ್ಯಕರ್ತರಲ್ಲಿ ಹೊಸ ಚೈತನ್ಯ ಮತ್ತು ಹುಮ್ಮಸ್ಸು ಇಮ್ಮಡಿಯಾಗಿದೆ.
ಹೈಕಮಾಂಡ್‌ನಲ್ಲೇಕೆ ಶುರುವಾಗಿದೆ ನಡುಕ ಮತ್ತು ತಲ್ಲಣ?
ಸಿದ್ದರಾಮಯ್ಯ ಅವರು ಅಹಿಂದ ಮಂತ್ರ ಜಪಿಸಿದಾಗಲೆಲ್ಲಾ ರಾಜಕೀಯವಾಗಿ ಕ್ರಾಂತಿ ಸಂಭವಿಸಿದೆ ಎಂಬುದು ಇತಿಹಾಸ. ಈ ಹಿಂದೆ ಜೆಡಿಎಸ್‌ನಲ್ಲಿದ್ದಾಗ, ಅಹಿಂದ ಚಳುವಳಿ ಆರಂಭಿಸಿ ದೇವೇಗೌಡರಂತಹ ಪ್ರಭಾವಿ ನಾಯಕರಿಗೇ ಸವಾಲೆಸೆದು, ಜೆಡಿಎಸ್ ತೊರೆದು ಸ್ವತಂತ್ರವಾಗಿ ತಮ್ಮ ಶಕ್ತಿ ಪ್ರದರ್ಶಿಸಿದರು. ಆನಂತರ ಕಾಂಗ್ರೆಸ್‌ಗೆ ಸೇರಿದಾಗ, ಅದೇ ಅಹಿಂದ ಶಕ್ತಿಯನ್ನು ಕಾಂಗ್ರೆಸ್‌ಗೆ ಧಾರೆ ಎರೆದು, 2013ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಮುಖ್ಯ ಕಾರಣರಾದರು. ಇಂದಿನ ಸನ್ನಿವೇಶ, ಸಿಎಂ ಸ್ಥಾನದಿಂದ ಕೆಳಗಿಳಿದ ಮೇಲೆಯೂ ಸಿದ್ದರಾಮಯ್ಯ ಅವರು ತಮ್ಮ ಹಿಡಿತವನ್ನು ಬಿಟ್ಟುಕೊಟ್ಟಿಲ್ಲ. ಇತ್ತೀಚೆಗೆ ಅವರು ಮತ್ತೆ ಅಹಿಂದ ಸಂಘಟನೆಗೆ ಧುಮುಕುತ್ತಿರುವುದು ಕಾಂಗ್ರೆಸ್ ಹೈಕಮಾಂಡ್‌ನಲ್ಲಿ ಆತಂಕವನ್ನು ಸೃಷ್ಟಿಸಿದೆ.
ಸಿದ್ದರಾಮಯ್ಯ ಅವರು ಅಹಿಂದ ಯಾತ್ರೆಯ ಮೂಲಕ ರಾಜ್ಯಾದ್ಯಂತ ಪ್ರವಾಸ ಬೆಳೆಸಿದರೆ, ಕಾಂಗ್ರೆಸ್ ಪಕ್ಷದ ಒಳಗಡೆ ಮತ್ತೊಂದು ‘ಪರ್ಯಾಯ ಶಕ್ತಿ’ (Alternate Power Center) ರೂಪುಗೊಳ್ಳುತ್ತದೆ ಎಂಬ ಭಯ ದೆಹಲಿ ನಾಯಕರಿಗೆ ಹಾಗೂ ರಾಜ್ಯ ಕಾಂಗ್ರೆಸ್‌ನ ಕೆಲವು ಬಣಗಳಿಗೆ ಕಾಡುತ್ತಿದೆ. ಸಿದ್ದರಾಮಯ್ಯ ಅವರ ಈ ನಡೆ ಬಣ ರಾಜಕೀಯಕ್ಕೆ ಹೊಸ ಮುನ್ನುಡಿ ಬರೆಯಬಹುದು ಮತ್ತು 2028ರ ಮುಂದಿನ ವಿಧಾನಸಭಾ ಚುನಾವಣೆಯ ಮೇಲೆಯೂ ನೇರ ಪರಿಣಾಮ ಬೀರಬಹುದು ಎಂಬ ಲೆಕ್ಕಾಚಾರದಿಂದಾಗಿ ಹೈಕಮಾಂಡ್ ಮಟ್ಟದಲ್ಲಿ ನಡುಕ ಶುರುವಾಗಿದೆ. ಹೈಕಮಾಂಡ್‌ನ ಕೆಲವು ನಾಯಕರು ಸಿದ್ದರಾಮಯ್ಯ ಅವರ ಈ ಅಹಿಂದ ಯಾತ್ರೆಯನ್ನು ತಡೆಯಲು ಅಥವಾ ನಿಯಂತ್ರಿಸಲು ತೆರೆಮರೆಯ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ ಎಂಬ ವರದಿಗಳೂ ಇವೆ.
ಇದನ್ನೂ ಓದಿ: Satish Jarkiholi: ಅಹಿಂದ ನಾಯಕನ ಬಗ್ಗೆಯೇ ಅಪಹಾಸ್ಯ? ಇದು ಅಪ್ರಬುದ್ಧತೆಯೇ ಅಥವಾ ಅಧಿಕಾರದ ಅಹಂಕಾರವೇ?
ಶೋಷಿತ ವರ್ಗಗಳ ನಂಬಿಕೆ ಮತ್ತು ಸಿದ್ಧಾಂತದ ರಾಜಕಾರಣ
ರಾಜಕಾರಣದಲ್ಲಿ ಹುದ್ದೆಗಳು ಅಥವಾ ಸ್ಥಾನಮಾನಗಳು ತಾತ್ಕಾಲಿಕ, ಆದರೆ ಸಿದ್ಧಾಂತ ಮತ್ತು ಜನಪ್ರಿಯತೆ ಶಾಶ್ವತ. ಸಿದ್ದರಾಮಯ್ಯ ಅವರು ಅಧಿಕಾರದಲ್ಲಿದ್ದಾಗ ತಂದ ‘ಅನ್ನಭಾಗ್ಯ’, ‘ಕ್ಷೀರಭಾಗ್ಯ’, ಜಾತಿಗಣತಿ ವರದಿ, ಹಾಗೂ ಶೋಷಿತ ವರ್ಗಗಳ ಉದ್ಧಾರಕ್ಕಾಗಿ ಜಾರಿಗೆ ತಂದ ಕಾರ್ಯಕ್ರಮಗಳು ಜನರ ಮನಸ್ಸಿನಲ್ಲಿ ಆಳವಾಗಿ ಉಳಿದಿವೆ. ಸ್ವಯಂಘೋಷಿತ ನಾಯಕರು ಅಧಿಕಾರ ಅಥವಾ ಪ್ರಭಾವಕ್ಕಾಗಿ ಅಹಿಂದ ಹೆಸರನ್ನು ಬಳಸಿಕೊಳ್ಳಲು ಯತ್ನಿಸಿದರೆ, ಸಿದ್ದರಾಮಯ್ಯ ಅವರಿಗೆ ಅಹಿಂದ ಎಂಬುದು ರಾಜಕೀಯ ಅಸ್ತ್ರ ಮಾತ್ರವಲ್ಲ, ಅವರ ದಶಕಗಳ ಕಾಲದ ಹೋರಾಟದ ಹಾದಿ.
ಅಧಿಕಾರ ಕಳೆದುಕೊಂಡ ತಕ್ಷಣ ಒಬ್ಬ ನಾಯಕ ‘ಫಿನಿಶ್’ ಆಗುತ್ತಾನೆ ಎಂದು ಭಾವಿಸುವುದು ರಾಜಕೀಯ ಮೂರ್ಖತನ. ಸಿದ್ದರಾಮಯ್ಯ ಅವರ ವಿಷಯದಲ್ಲಂತೂ ಇದು ಸಂಪೂರ್ಣ ಸುಳ್ಳು. ಸಿಎಂ ಕುರ್ಚಿಯಿಂದ ಇಳಿದ ಬಳಿಕ ಕೆಲ ಕಾಲ ಸೈಲೆಂಟ್ ಆಗಿದ್ದರೂ, ತಮ್ಮ ಅಹಿಂದ ಜಪದ ಮೂಲಕ ಮತ್ತೆ ಕಣಕ್ಕಿಳಿದು ತಮ್ಮ ಶಕ್ತಿ ಏನೆಂಬುದನ್ನು ಸಾಬೀತುಪಡಿಸುತ್ತಿದ್ದಾರೆ.
ಒಟ್ಟಿನಲ್ಲಿ, ಸಿದ್ದರಾಮಯ್ಯ ಅವರ ರಾಜಕೀಯ ಜೀವನದ ಕಥೆ ಮುಗಿಯಿತು ಎಂದು ಸಂಭ್ರಮಿಸುತ್ತಿದ್ದ ಸ್ವಯಂಘೋಷಿತ ನಾಯಕರಿಗೆ ಮತ್ತು ಅವರ ಆಪ್ತಬಳಗಕ್ಕೆ ಈಗ ವಾಸ್ತವದ ಅರಿವಾಗಿದೆ. ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದ ತಕ್ಷಣ ರಾಜಕೀಯ ರಂಗದಿಂದ ಕಾಲು ಕಳೆಯುತ್ತಾರೆ ಎಂದು ಭಾವಿಸಿದ್ದವರಿಗೆ ಸಿದ್ದರಾಮಯ್ಯ ತಮ್ಮ ‘ಅಹಿಂದ ಅಖಾಡ’ದ ಮೂಲಕ ತಕ್ಕ ಉತ್ತರವನ್ನೇ ನೀಡಿದ್ದಾರೆ.
ಅಹಿಂದ ವರ್ಗಗಳ ಪರವಾಗಿ ಪ್ರಾಮಾಣಿಕವಾಗಿ ನಿಲ್ಲುವ ನಿಜವಾದ ಕಾರ್ಯಕರ್ತರು ಮತ್ತು ಸಾರ್ವಜನಿಕರು ಇಂದಿಗೂ, ಎಂದೆಂದಿಗೂ ಸಿದ್ದರಾಮಯ್ಯ ಅವರ ಬೆನ್ನಲುಬಾಗಿ ನಿಲ್ಲಲಿದ್ದಾರೆ,. ಸಿದ್ದರಾಮಯ್ಯ ಅವರ ಈ ಹೊಸ ‘ಅಹಿಂದ ಯಾತ್ರೆ’ ಹಾಗೂ ಚಳುವಳಿ ಮುಂದಿನ ದಿನಗಳಲ್ಲಿ ಕರ್ನಾಟಕ ರಾಜಕಾರಣದಲ್ಲಿ ಎಂತಹ ದೊಡ್ಡ ಬಿರುಗಾಳಿ ಎಬ್ಬಿಸಲಿದೆ ಮತ್ತು ಕಾಂಗ್ರೆಸ್ ಹೈಕಮಾಂಡ್ ಇದನ್ನು ಹೇಗೆ ನಿಭಾಯಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ!
ಯಾರ ಹಂಗೂ ಇಲ್ಲದ, ಯಾರಿಗೂ ಬಗ್ಗದ ಸ್ವತಂತ್ರ ಮಾಧ್ಯಮಕ್ಕೆ ನಿಮ್ಮ ಬೆಂಬಲದ ಅವಶ್ಯಕತೆ ಇದೆ...






