Satish Jarkiholi: ಕರ್ನಾಟಕದ ರಾಜಕಾರಣದ ಇತಿಹಾಸದಲ್ಲಿ ನಾಯಕರು ಬರುವುದು, ಹೋಗುವುದು ಸಹಜ. ಆದರೆ ಸಿದ್ದರಾಮಯ್ಯ (Siddaramaiah) ಎನ್ನುವ ಹೆಸರು ಕೇವಲ ಒಬ್ಬ ವ್ಯಕ್ತಿಯಲ್ಲ; ಅದು ಒಂದು ದಶಕಗಳ ಕಾಲದ ರಾಜಕೀಯ ಸಂಸ್ಕೃತಿ ಮತ್ತು ಸಾಮಾಜಿಕ ನ್ಯಾಯದ ಸಂಕೇತ. ಅಹಿಂದ ವರ್ಗದ ನಾಯಕನಾಗಿ, ತಳಸಮುದಾಯದ ಧ್ವನಿಯಾಗಿ ಸಿದ್ದರಾಮಯ್ಯ ಈ ನಾಡಿನ ರಾಜಕಾರಣದ ದಿಕ್ಕನ್ನೇ ಬದಲಿಸಿದರು. ಅಂತಹ ಧೀಮಂತ ನಾಯಕನ ಬಗ್ಗೆ, ಇತ್ತೀಚೆಗೆ ಸಚಿವ ಸತೀಶ್ ಜಾರಕಿಹೊಳಿ ಅವರು ನೀಡಿರುವ ಹೇಳಿಕೆಗಳು ರಾಜ್ಯ ರಾಜಕೀಯ ಅಂಗಳದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿವೆ. “ಓಡದಿದ್ದರೆ ಟ್ರೈನ್ ಮಿಸ್ ಆಗುತ್ತದೆ, ಮನೆಯಲ್ಲಿ ಕುಳಿತರೆ ಯಾರೂ ಬಂದು ಮಾತನಾಡಿಸುವುದಿಲ್ಲ” ಎಂದು ಸಿದ್ದರಾಮಯ್ಯನವರನ್ನು ಉದ್ದೇಶಿಸಿ ಅವರು ನೀಡಿರುವ ಹೇಳಿಕೆ, ಕೇವಲ ಒಂದು ರಾಜಕೀಯ ರೂಪಕವಲ್ಲ; ಅದು ನಾಯಕತ್ವದ ಘನತೆಯನ್ನು ಪ್ರಶ್ನಿಸುವ ಅಪ್ರಬುದ್ಧ ಪ್ರಯತ್ನ.
ರಾಜಕೀಯ ‘ವೇಗ’ದ ಹುಚ್ಚು ಮತ್ತು ವಾಸ್ತವದ ಅರಿವು
ಸತೀಶ್ ಜಾರಕಿಹೊಳಿ (Satish Jarkiholi) ಅವರ ಈ ಹೇಳಿಕೆ ರಾಜಕಾರಣವನ್ನು ಕೇವಲ ಒಂದು ವೇಗದ ಓಟದ ಸ್ಪರ್ಧೆಯೆಂದು ಲಘುವಾಗಿ ಬಿಂಬಿಸುತ್ತದೆ. ರಾಜಕಾರಣ ಅಂದರೆ ಕೇವಲ ಓಡುವುದು ಅಥವಾ ಗಾಡಿ ಹತ್ತುವುದು ಮಾತ್ರವಲ್ಲ; ಅದೊಂದು ಸಿದ್ಧಾಂತ, ಬದ್ಧತೆ ಮತ್ತು ಜನಮನವನ್ನು ಗೆಲ್ಲುವ ಕಲೆ. ನಾಲ್ಕು ದಶಕಗಳ ರಾಜಕೀಯ ಅನುಭವ ಇರುವ ನಾಯಕನಿಗೆ, “ಓಡಬೇಕು” ಎಂದು ಪಾಠ ಮಾಡುವ ಹಂತಕ್ಕೆ ಇಂದಿನ ನಾಯಕರು ಬಂದಿರುವುದು ರಾಜಕೀಯ ಪ್ರಬುದ್ಧತೆಯ ಕೊರತೆಯನ್ನು ಎತ್ತಿ ತೋರಿಸುತ್ತದೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಅವರ ವೇಗ ಏನು, ಅವರ ಆಡಳಿತದ ಶೈಲಿ ಏನು ಎಂಬುದು ಈ ನಾಡಿನ ಜನತೆಗೆ ಗೊತ್ತಿದೆ. ಅಂತಹ ನಾಯಕನಿಗೆ, “ಮನೆಯಲ್ಲಿ ಕುಳಿತರೆ ಯಾರೂ ಮಾತಾಡಿಸಲ್ಲ” ಎಂದು ವ್ಯಂಗ್ಯವಾಡುವುದು ಅವರ ನಾಯಕತ್ವಕ್ಕೆ ಮಾಡಿದ ಅಪಮಾನವೇ ಸರಿ. ಮಾದಧ್ಯಮಗಳ ಎದುರು ಕುಂತಾಗ ಆಡುವ ಮಾತುಗಳಿಗೆ ಒಂದು ಘನತೆ ಇರಬೇಕು. ಆದರೆ, ಇತ್ತೀಚಿನ ದಿನಗಳಲ್ಲಿ ಇಂತಹ ಹೇಳಿಕೆಗಳು ಕೇವಲ ಸುದ್ದಿಗಾಗಿ ಅಥವಾ ತಮ್ಮ ರಾಜಕೀಯ ಪ್ರಾಬಲ್ಯವನ್ನು ಮೆರೆಯಲು ಬಳಸುವ ಅಸ್ತ್ರಗಳಾಗಿ ಮಾರ್ಪಟ್ಟಿರುವುದು ದುರದೃಷ್ಟಕರ.
ಹಳೆಯ ಗಾಯಗಳು ಮತ್ತು ಮತ್ತೆ ಹರಡುತ್ತಿರುವ ಅಪಸ್ವರ
ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನದಿಂದ ನಿರ್ಗಮಿಸಿದ ಆ ಘಳಿಗೆಯನ್ನು ರಾಜ್ಯದ ಜನತೆ ಮರೆತಿಲ್ಲ. ಅಂದು ಅವರು ಅಧಿಕಾರದಿಂದ ದೂರವಾಗುತ್ತಿದ್ದಂತೆ, ಅವರ ಆಪ್ತ ವಲಯ ಎಂದು ಕರೆಸಿಕೊಂಡವರೇ ಅವರ ವಿರುದ್ಧವೇ ಕುತಂತ್ರ ನಡೆಸಿದ್ದರು ಎನ್ನುವ ಗಂಭೀರ ಆರೋಪಗಳು ಕೇಳಿಬಂದಿದ್ದವು. ಆ ಸಂದರ್ಭದಲ್ಲಿ ಸತೀಶ್ ಜಾರಕಿಹೊಳಿ (Satish Jarkiholi) ಅವರ ಹೆಸರಿನೊಂದಿಗೆ ಆ ಆರೋಪ ತಳುಕು ಹಾಕಿಕೊಂಡಿತ್ತು, ಸಿದ್ದರಾಮಯ್ಯನವರ ಬೆನ್ನಿಗೆ ಚೂರಿ ಹಾಕಲಾಯಿತು ಎಂಬ ಸಾಮಾಜಿಕ ಮಾಧ್ಯಮಗಳ ಆಕ್ರೋಶದ ಪೋಸ್ಟ್ಗಳು ಇಡೀ ರಾಜ್ಯವನ್ನೇ ಕಳವಳಕ್ಕೀಡುಮಾಡಿದ್ದವು. ಆ ಘಟನೆಗಳಿಗೆ ಸಂಬಂಧಿಸಿದಂತೆ ಸತೀಶ್ ಜಾರಕಿಹೊಳಿ ಅವರು ಅಂದು ಕಾನೂನು ಕ್ರಮ ಕೈಗೊಂಡು, ಆ ಚರ್ಚೆಗಳಿಗೆ ತೆರೆ ಎಳೆದಿದ್ದರೂ, ಆ ಸಮಯದ ಕಹಿನೆನಪುಗಳು ಇಂದಿಗೂ ಮಾಸಿಲ್ಲ.
“ಮಳೆ ನಿಂತರೂ ಮಳೆ ಹನಿ ನಿಲ್ಲಲ್ಲ” ಎಂಬ ಗಾದೆ ಮಾತಿನಂತೆ, ಸಿದ್ದರಾಮಯ್ಯ ಮತ್ತು ಸತೀಶ್ ನಡುವಿನ ಆ ಬಿರುಕು ಇಂದಿಗೂ ಮಾಗದ ಗಾಯವಾಗಿದೆ. ಇದೀಗ ಮತ್ತೆ ಅಂತಹದ್ದೇ ಧಾಟಿಯಲ್ಲಿ ಹೇಳಿಕೆ ನೀಡುವುದು, ಹಳೆಯ ಗಾಯಗಳನ್ನು ಕೆದಕುವ ಕೆಲಸವಾಗಿದೆ. ರಾಜಕೀಯವಾಗಿ ಭಿನ್ನಾಭಿಪ್ರಾಯಗಳು ಇರುವುದು ಸಹಜ, ಆದರೆ ಅದನ್ನು ಸಾರ್ವಜನಿಕವಾಗಿ, ಅಪ್ರಬುದ್ಧವಾಗಿ ಹೊರಹಾಕುವುದು ಪಕ್ಷದ ಐಕ್ಯತೆಗೆ ಧಕ್ಕೆ ತರುತ್ತದೆ. ಇಂತಹ ಹೇಳಿಕೆಗಳ ಹಿಂದೆ ತಮ್ಮ ವರ್ಚಸ್ಸನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನವಿದೆಯೇ ಅಥವಾ ಹಳೆಯ ದ್ವೇಷದ ಮುಂದುವರಿಕೆಯೇ ಎಂಬ ಅನುಮಾನಗಳು ಕಾರ್ಯಕರ್ತರ ವಲಯದಲ್ಲಿ ಬಲವಾಗಿ ಕೇಳಿಬರುತ್ತಿವೆ.
ಇದನ್ನೂ ಓದಿ: Siddaramaiah: ಮೂಲೆಗುಂಪು ಮಾಡಿದ್ರೆ ಮುಳುವಾದೀತು; ಕಾಂಗ್ರೆಸ್ ಅಂಗಳದಲ್ಲಿ ಸಿದ್ದಣ್ಣನ ‘ಬಾಡೂಟದ ರಾಜಕೀಯ’!
ಅಧಿಕಾರದ ದರ್ಪ ಮತ್ತು ನಾಯಕತ್ವದ ದರ್ಜೆ
ಸತೀಶ್ ಜಾರಕಿಹೊಳಿ ಅವರು ತಮ್ಮದೇ ಆದ ಪ್ರಭಾವವನ್ನು ಹೊಂದಿರುವ ನಾಯಕರು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಅಧಿಕಾರದಲ್ಲಿರುವವರು ಬಳಸುವ ಭಾಷೆ ಅವರ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಸಿದ್ದರಾಮಯ್ಯನವರನ್ನು ‘ಸೈಲೆಂಟ್’ ನಾಯಕ ಎಂದು ಹೀಯಾಳಿಸುವುದು, ಅವರ ನಾಯಕತ್ವವನ್ನು ಪ್ರಶ್ನಿಸುವುದು—ಇದೆಲ್ಲವೂ ರಾಜಕೀಯದ ‘ಅಧಿಕಾರದ ಅಹಂಕಾರ’ದ ಲಕ್ಷಣಗಳಲ್ಲವೇ? ಸಿದ್ದರಾಮಯ್ಯನವರು ಸೈಲೆಂಟ್ ಆಗಿರುವುದು ಅವರ ದೌರ್ಬಲ್ಯವಲ್ಲ, ಅದು ಅವರ ಗಾಂಭೀರ್ಯ. ರಾಜಕೀಯದ ಎತ್ತರದ ಸ್ಥಾನದಲ್ಲಿರುವವರಿಗೆ ಎದುರಾಗುವ ಸವಾಲುಗಳನ್ನು ಅರಿಯುವ ತಾಳ್ಮೆ ಇರಬೇಕು. ಆದರೆ, ಕೇವಲ ಸಣ್ಣ ಸಣ್ಣ ತಂತ್ರಗಾರಿಕೆಗಳಿಂದ ನಾಯಕತ್ವವನ್ನು ಅಲುಗಾಡಿಸಬಹುದು ಎಂದು ಭಾವಿಸುವುದು ಅಪ್ರಬುದ್ಧತೆ.
ಇತಿಹಾಸವನ್ನು ತಿರುವಿ ಹಾಕಿದರೆ, ಅಹಂಕಾರದಿಂದ ವರ್ತಿಸಿದ ನಾಯಕರು ದೀರ್ಘಕಾಲ ರಾಜಕೀಯದಲ್ಲಿ ಉಳಿದಿಲ್ಲ. ಸತೀಶ್ ಜಾರಕಿಹೊಳಿ ಅವರು ಈ ನಿಟ್ಟಿನಲ್ಲಿ ಆಲೋಚಿಸಬೇಕಾದ ಅಗತ್ಯವಿದೆ. ತಾವು ಆಡುವ ಪ್ರತಿಯೊಂದು ಪದವೂ ಜನಸಾಮಾನ್ಯರಿಗೆ ತಲುಪುತ್ತದೆ ಮತ್ತು ಅದರ ಪರಿಣಾಮ ನೇರವಾಗಿ ಪಕ್ಷದ ಮೇಲೆ ಹಾಗೂ ತಮ್ಮ ವಯಕ್ತಿಕ ರಾಜಕೀಯ ಜೀವನದ ಮೇಲೆ ಬೀಳುತ್ತದೆ ಎಂಬುದನ್ನು ಮರೆಯಬಾರದು. ಸಿದ್ದರಾಮಯ್ಯನವರನ್ನು ಕೆಣಕುವ ಮೂಲಕ ಅಥವಾ ಅವರನ್ನು ಟೀಕಿಸುವ ಮೂಲಕ ಯಾರೂ ದೊಡ್ಡವರಾಗುವುದಿಲ್ಲ. ನಿಜವಾದ ನಾಯಕನಿಗೆ ತನ್ನದೇ ಆದ ವ್ಯಕ್ತಿತ್ವವಿರಬೇಕು, ಬೇರೆಯವರ ವ್ಯಕ್ತಿತ್ವವನ್ನು ತುಳಿಯುವ ಗುಣ ಇರಬಾರದು.
ರಾಜಕೀಯ ಸಂಸ್ಕೃತಿಯ ಅಧಃಪತನವೇ?
ಇಂದಿನ ರಾಜಕೀಯ ಪರಿಸ್ಥಿತಿಯನ್ನು ನೋಡಿದರೆ, ಆರೋಗ್ಯಕರ ಚರ್ಚೆಗಳಿಗಿಂತ ವೈಯಕ್ತಿಕ ಟೀಕೆಗಳೇ ಹೆಚ್ಚಾಗಿವೆ. ಸತೀಶ್ ಜಾರಕಿಹೊಳಿ ಅವರ ಹೇಳಿಕೆ ಇದಕ್ಕೆ ಸಾಕ್ಷಿ. ವಿರೋಧ ಪಕ್ಷದವರ ವಿರುದ್ಧ ಹೋರಾಡಬೇಕಾದ ನಾಯಕರು, ತಮ್ಮದೇ ಪಕ್ಷದ ಹಿರಿಯ ನಾಯಕರ ವಿರುದ್ಧ ಇಂತಹ ಹೇಳಿಕೆಗಳನ್ನು ನೀಡುತ್ತಿರುವುದು ರಾಜಕೀಯ ಸಂಸ್ಕೃತಿಯ ಅಧಃಪತನವನ್ನು ತೋರಿಸುತ್ತದೆ. ಒಬ್ಬ ನಾಯಕನನ್ನು ಬೆಳೆಸಲು ಸಮಾಜದ ಒಂದು ದೊಡ್ಡ ವರ್ಗ ಶ್ರಮಿಸುತ್ತದೆ. ಆದರೆ, ಆ ನಾಯಕನನ್ನೇ ಅಪಹಾಸ್ಯ ಮಾಡುವುದು ಸಮಾಜಕ್ಕೆ ಮಾಡುವ ಅವಮಾನ. ಸಿದ್ದರಾಮಯ್ಯನವರು ಅಹಿಂದ ವರ್ಗದ ಕಣ್ಮಣಿ. ಅವರನ್ನು ಅಪಹಾಸ್ಯ ಮಾಡಿದಾಗ, ಆ ವರ್ಗದ ಕೋಟ್ಯಂತರ ಜನರ ಭಾವನೆಗಳಿಗೆ ಪೆಟ್ಟು ಬೀಳುತ್ತದೆ ಎಂಬ ಸಾಮಾನ್ಯ ಜ್ಞಾನವೂ ಇಲ್ಲದಿದ್ದರೆ ಅದನ್ನು ಏನನ್ನಬೇಕು?
ಇದನ್ನೂ ಓದಿ: ಸಿದ್ದು ‘ಸೈಲೆನ್ಸ್’ ಅಂದರೆ ಸುನಾಮಿಯ ಮುನ್ಸೂಚನೆಯಾ? ಕೇರಳದ ಥೆರಪಿ ಹಿಂದೆ ಅಡಗಿದೆಯಾ ದೊಡ್ಡ ಚದುರಂಗದಾಟ?
ಪ್ರಬುದ್ಧತೆಯೇ ರಾಜಕಾರಣದ ಅಡಿಪಾಯ
ರಾಜಕಾರಣ ಎಂದರೆ ಜಗಳವಲ್ಲ, ಅದು ಜನರ ವಿಶ್ವಾಸ ಗಳಿಸುವ ಕಲೆ. ಸತೀಶ್ ಜಾರಕಿಹೊಳಿ ಅವರು ಸಿದ್ದರಾಮಯ್ಯನವರ ಬಗ್ಗೆ ಅಪಸ್ವರ ಎತ್ತುವ ಮೂಲಕ ತಮ್ಮ ರಾಜಕೀಯ ಭವಿಷ್ಯವನ್ನು ತಾವೇ ಇಕ್ಕಟ್ಟಿಗೆ ಸಿಲುಕಿಸಿಕೊಳ್ಳುತ್ತಿದ್ದಾರೆ. ಅಪ್ರಬುದ್ಧತೆಯಿಂದ ಕೂಡಿದ ಇಂತಹ ಹೇಳಿಕೆಗಳು ಕೆಲಕಾಲ ಸದ್ದು ಮಾಡಬಹುದು, ಆದರೆ ದೀರ್ಘಕಾಲಿಕವಾಗಿ ನಾಯಕನ ಗಂಭೀರತೆಯನ್ನು ಮಾತ್ರ ಹಾಳುಮಾಡುತ್ತವೆ.
ಅಧಿಕಾರದ ಅಮಲಿನಲ್ಲಿ ಆಡುವ ಮಾತುಗಳು ಎಂದಿಗೂ ಗೆಲ್ಲುವುದಿಲ್ಲ. ಸತೀಶ್ ಜಾರಕಿಹೊಳಿ ಅವರು ಒಬ್ಬ ಜವಾಬ್ದಾರಿಯುತ ಸಚಿವರಾಗಿ, ಸಿದ್ದರಾಮಯ್ಯನವರಂತಹ ದೈತ್ಯ ನಾಯಕನ ಬಗ್ಗೆ ಮಾತನಾಡುವಾಗ ಬಳಸುವ ಭಾಷೆಯಲ್ಲಿ ಘನತೆ ಮತ್ತು ಮಿತಿ ಇರಲಿ. ರಾಜಕೀಯದ ರೇಸ್ನಲ್ಲಿ ಓಡುವ ವೇಗಕ್ಕಿಂತ, ಬದ್ಧತೆಯ ಹಾದಿಯಲ್ಲಿ ನಿಲ್ಲುವ ತಾಕತ್ತು ಮುಖ್ಯ ಎಂಬುದನ್ನು ಮರೆಯದಿರಿ. ಸಿದ್ದರಾಮಯ್ಯನವರನ್ನು ಕೆಣಕುವ ಇಂತಹ ಪ್ರಯತ್ನಗಳು, ಕಾಲದ ಕನ್ನಡಿಯ ಮುಂದೆ ನಿಂತಾಗ ಅಪ್ರಬುದ್ಧತೆಯ ಅಟ್ಟಹಾಸದಂತೆ ಮಾತ್ರ ಕಾಣುತ್ತವೆ. ಅಧಿಕಾರ ಶಾಶ್ವತವಲ್ಲ, ಆದರೆ ನೀವು ಉಳಿಸುವ ಘನತೆ ಶಾಶ್ವತ. ಇದನ್ನು ಅರ್ಥಮಾಡಿಕೊಂಡಾಗ ಮಾತ್ರ ಒಬ್ಬ ನಾಯಕನಿಗೆ ನಿಜವಾದ ಬೆಲೆ ಸಿಗುತ್ತದೆ.

