ಬಾಗಲಕೋಟೆ: ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಮಾಡಿಕೊಡದೆ ವರ್ಷಾನುಗಟ್ಟಲೆ ಅಲೆದಾಡಿಸಿ, ರೋಸಿಹೋದ ರೈತನೊಬ್ಬ ಇತ್ತೀಚೆಗೆ ಬಾಗಲಕೋಟೆ ನಗರಾಭಿವೃದ್ಧಿ ಪ್ರಾಧಿಕಾರ (BTDA) ಕಚೇರಿಯ ಸಿಬ್ಬಂದಿಗೆ ಚಪ್ಪಲಿಯಿಂದ ಹೊಡೆದ ಘಟನೆ ಇಡೀ ರಾಜ್ಯದಲ್ಲಿ ಭಾರಿ ಸಂಚಲನ ಸೃಷ್ಟಿಸಿತ್ತು. ಈ ಘಟನೆಯ ಬೆನ್ನಲ್ಲೇ ಬಿಟಿಡಿಎ ಅಧಿಕಾರಿಗಳ ಭ್ರಷ್ಟಾಚಾರ, ಹಣದ ಹಪಾಹಪಿ ಮತ್ತು ಉದ್ಧಟತನದ ಮತ್ತೊಂದು ಕರಾಳ ಮುಖ ಸಂಪೂರ್ಣವಾಗಿ ಅನಾವರಣಗೊಂಡಿದೆ.
ರೈತನ ದಾಳಿಯ ಬಳಿಕ ಬಿಟಿಡಿಎ ಅಧ್ಯಕ್ಷರು ಹಾಗೂ ಅಧಿಕಾರಿಗಳು ಪೊಲೀಸ್ ಠಾಣೆಗೆ ದೂರು ನೀಡಲು ಹೋದ ಸಂದರ್ಭದಲ್ಲಿ, ಮಾಧ್ಯಮದವರ ತೀಕ್ಷ್ಣ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಬಿಟಿಡಿಎ ವಿಶೇಷ ಭೂಸ್ವಾಧೀನಾಧಿಕಾರಿ (R.O) ಪ್ರಶಾಂತ್ ಬಾರಿಗಿಡದ ಎಂಬ ಅಧಿಕಾರಿ ಪತ್ರಕರ್ತರ ಮೇಲೆಯೇ ದರ್ಪ ತೋರಿ, ಏಕವಚನದಲ್ಲಿ ನಿಂದಿಸಿ ಗೂಂಡಾವರ್ತನೆ ಪ್ರದರ್ಶಿಸಿದ್ದಾನೆ. ಕಚೇರಿಯ ಒಳಗೆ ಕಡತಗಳನ್ನು ತಿರುಚುವ ಇಲಾಖೆಯ ಅಸಲಿ ಮುಖ ಹಾಗೂ ಹೊರಗೆ ತೋರುವ ಗೂಂಡಾಗಿರಿಯ ಸಂಪೂರ್ಣ ವಿಶ್ಲೇಷಣೆ ಇಲ್ಲಿದೆ.
ಅಧ್ಯಕ್ಷರ ಮುಂದೆಯೇ ಪತ್ರಕರ್ತನಿಗೆ ‘ಹೋಗಲೇ’ ಎಂದ ಅಧಿಕಾರಿ!
ರಾಜ್ಯದ ಪ್ರಮುಖ ಸುದ್ದಿವಾಹಿನಿಯೊಂದರ ಜಿಲ್ಲಾ ವರದಿಗಾರರು, ಬಿಟಿಡಿಎ (BTDA) ಅಧ್ಯಕ್ಷ ಪ್ರಕಾಶ ತಪಶೆಟ್ಟಿ (Prakash Tapashetti) ಅವರಿಗೆ ಪ್ರಾಧಿಕಾರದಲ್ಲಿ ನಡೆದಿರುವ ಅಕ್ರಮಗಳ ದಟ್ಟ ದಾಖಲೆಗಳನ್ನು ನೀಡಿ, ಕ್ರಮ ಕೈಗೊಳ್ಳುವಂತೆ ಆಗ್ರಹಿಸುತ್ತಿದ್ದರು. ಈ ವೇಳೆ ಪಕ್ಕದಲ್ಲೇ ಇದ್ದ ಅಧಿಕಾರಿ ಪ್ರಶಾಂತ್ ಬಾರಿಗಿಡದ (Prashant Barigida), ಮೈಮೇಲೆ ದೆವ್ವ ಬಂದವನಂತೆ ಜಿಗಿದು ಬಂದು ಪತ್ರಕರ್ತರ ವಿರುದ್ಧ ತೀವ್ರ ಅಸಭ್ಯವಾಗಿ ವರ್ತಿಸಿದ್ದಾನೆ.
ಅಧಿಕಾರಿಯ ಉದ್ಧಟತನ: ಮಾಧ್ಯಮ ಪ್ರತಿನಿಧಿಗೆ ಏಕವಚನದಲ್ಲಿ ಮಾತನಾಡಿದ್ದಲ್ಲದೆ, “ಹೋಗಲೇ…” ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ದೌರ್ಜನ್ಯ ಎಸಗಲು ಮುಂದಾಗಿದ್ದಾನೆ. ಈ ದರ್ಪದ ವರ್ತನೆಯು, ಅಧಿಕಾರಿಯ ಅಹಂಕಾರಕ್ಕೆ ಕನ್ನಡಿ ಹಿಡಿದಿದೆ.
ಸಾರ್ವಜನಿಕವಾಗಿ, ಅದೂ ಪ್ರಾಧಿಕಾರದ ಅಧ್ಯಕ್ಷರ ಎದುರಲ್ಲೇ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಮಾಧ್ಯಮದವರ ಮೇಲೆ ಈ ಮಟ್ಟಿಗೆ ದರ್ಪ ತೋರುವ ಈ ಅಧಿಕಾರಿ, ದಿನನಿತ್ಯ ತನ್ನ ಕಚೇರಿಯ ಸಿಬ್ಬಂದಿ ಹಾಗೂ ಸಾಮಾನ್ಯ ಜನರ ಮೇಲೆ ಇನ್ನೆಷ್ಟು ಟಾರ್ಚರ್ ನೀಡುತ್ತಿರಬಹುದು? ಹೆಸರೇಳಲು ಇಚ್ಛಿಸದ ಕಚೇರಿ ಸಿಬ್ಬಂದಿಯೇ, “ಇವನ ಕಾಟ ತಾಳಲು ಸಾಧ್ಯವಿಲ್ಲ, ಇವನು ಇಲ್ಲಿಂದ ತೊಲಗಿದರೆ ಸಾಕು ಎಂದು ದೇವರಿಗೆ ಹರಕೆ ಹೊತ್ತಿದ್ದೇವೆ” ಎಂದು ಅಳಲು ತೋಡಿಕೊಂಡಿದ್ದಾರೆ. ಬಿಟಿಡಿಎ ಕಚೇರಿಗೆ ಬರುವವರೆಲ್ಲ ಭೂಮಿ ಕಳೆದುಕೊಂಡ ಬಡ ನಿರಾಶ್ರಿತರು. ಅವರನ್ನೂ ಈತ ಇದೇ ರೀತಿ ಸತಾಯಿಸಿ ಬೇಸತ್ತು ಹೋಗುವಂತೆ ಮಾಡಿದ್ದಾನೆ.
ಇದನ್ನೂ ಓದಿ: ಚಹಾ ಕೊಡ್ತಿದ್ದವನು ಚೇರ್ಮನ್ ರೇಂಜ್ಗೆ ಬೆಳೆದಿದ್ದು ಹೇಗೆ? ಅಕ್ರಮಗಳ ಕಿಂಗ್ಪಿನ್ನ ಅಸಲಿ ಮುಖವಾಡ ಬಯಲು!
ಅರ್ಜಿ ಹಾಕುವ ಮುಂಚೆಯೇ ಸಿದ್ಧವಾಗಿತ್ತು ಫೈಲ್! ಕಡತ ಜಾಲದ ದಿಗಿಲು ಹುಟ್ಟಿಸುವ ಕರಾಳ ಸತ್ಯ!
ಬಿಟಿಡಿಎ (BTDA) ವಿಶೇಷ ಭೂಸ್ವಾಧೀನಾಧಿಕಾರಿ (R.O) ಪ್ರಶಾಂತ್ ಬಾರಿಗಿಡದ ಸುತ್ತ ಕೇಳಿಬರುತ್ತಿರುವ ಭ್ರಷ್ಟಾಚಾರದ ದಟ್ಟ ಹೆಜ್ಜೆಗುರುತುಗಳು ಮತ್ತು ಕಚೇರಿಯಲ್ಲಿ ಕಡತಗಳನ್ನು ಮ್ಯಾನಿಪುಲೇಟ್ ಮಾಡಿರುವ ರೀತಿ ತನಿಖಾ ಸಂಸ್ಥೆಗಳೇ ಬೆಚ್ಚಿಬೀಳುವಂತಿದೆ. ಕಚೇರಿಯಲ್ಲಿ ಯಾವುದೇ ಒಂದು ಮಹತ್ವದ ಫೈಲ್ಗೆ ಸಹಿ ಹಾಕಲು ಅಥವಾ ಅಕ್ರಮ ಸೈಟುಗಳನ್ನು ಮಂಜೂರು ಮಾಡಲು ಈತ 20 ಲಕ್ಷ ರೂಪಾಯಿಗಳವರೆಗೆ ವಸೂಲಿ ಮಾಡುತ್ತಾನೆ ಎನ್ನುವ ಗಂಭೀರ ಆರೋಪ ಸಾರ್ವಜನಿಕ ವಲಯದಲ್ಲಿದೆ. ಅದಕ್ಕೆ ಪೂರಕವೆಂಬಂತೆ ಲಭ್ಯವಾಗಿರುವ ಆಂತರಿಕ ಕಡತ ನಿರ್ವಹಣೆಯ ಮಾಹಿತಿ ಇಲ್ಲಿದೆ:
- ಅರ್ಜಿಗೂ ಮುನ್ನವೇ ಫೈಲ್ ಪ್ರತ್ಯಕ್ಷ!: ಈ ಇಡೀ ಹಗರಣದ ಅತಿ ದೊಡ್ಡ ಅಸಂಬದ್ಧತೆ ಮತ್ತು ಕಾನೂನು ಬಾಹಿರ ಆಟ ಇಲ್ಲಿದೆ. ಸಂತ್ರಸ್ತ ಎನ್ನಲಾದ ಪ್ರಕಾಶ್ ದಾಯಿಪುಲೆ ಪ್ರಾಧಿಕಾರಕ್ಕೆ ಅಧಿಕೃತವಾಗಿ ಅಪ್ಲಿಕೇಶನ್ ಕೊಟ್ಟಿದ್ದು 14/05/2024 ರಂದು. ಆದರೆ, ಬಿಟಿಡಿಎ ಅಧಿಕಾರಿಗಳು ಈ ಪ್ರಭಾವಿ ವ್ಯಕ್ತಿಗಾಗಿ ಭಕ್ತಿ ಪ್ರದರ್ಶಿಸಿ ಬರೋಬ್ಬರಿ ಐದು ತಿಂಗಳ ಮುಂಚೆಯೇ, ಅಂದರೆ 04/01/2024 ರಂದೇ ಫೈಲ್ ಪುಟಪ್ಪ್ (File Put-up) ಮಾಡಿ ಸಿದ್ಧವಾಗಿಟ್ಟುಕೊಂಡಿದ್ದರು! ಅರ್ಜಿ ಹಾಕುವ ಮುಂಚೆಯೇ ಇಲಾಖೆಗೆ ಸ್ವಪ್ನ ಬಿದ್ದಿತ್ತೇ? ಅಥವಾ ಒಳಗೊಳಗೆ ಡೀಲ್ ಕುದುರಿತ್ತೇ?
- ಕೈಬರಹದಲ್ಲಿ ತೂರಿಕೊಂಡ ಹೆಸರು!: ಭೂಸ್ವಾಧೀನದ ಪ್ರಮುಖ ಪ್ರಕ್ರಿಯೆಗಳಾದ 4(1) ರ ನೋಟಿಫಿಕೇಶನ್ನಲ್ಲಿ ಪ್ರಕಾಶ್ ದಾಯಿಪುಲೆ ಹೆಸರಿಲ್ಲ! ಕಾಯ್ದೆ 6(1) ರ ಅಂತಿಮ ಡಿಕ್ಲರೇಶನ್ನಲ್ಲೂ ಈತನ ಹೆಸರಿಲ್ಲ! ಆದರೆ, ತಮಗೆ ಬೇಕಾದವರಿಗೆ ಆಸ್ತಿ ಬರೆದುಕೊಡಲು ಕಚೇರಿಯ ಒಳಗೆ ನಡೆದ ಮಾಫಿಯಾ ಎಷ್ಟು ಬಲವಾಗಿತ್ತೆಂದರೆ, 9(1) ರ ಕೈಬರಹದ (Handwritten) ದಾಖಲೆಯಲ್ಲಿ ಮಾತ್ರ ಕಳ್ಳಮಾರ್ಗದಿಂದ ಈತನ ಹೆಸರನ್ನು ತಂದು ಕೂರಿಸಲಾಗುತ್ತದೆ!
- ಜಂಟಿ ಹಕ್ಕುದಾರರ ಸಾರಾಸಗಟು ವಂಚನೆ: ಸಿಟಿಎಸ್ ನಂಬರ್ 400 ರ ವ್ಯಾಪ್ತಿಯಲ್ಲಿ ಬರುವ ಎಚ್.1 ರಲ್ಲಿ 8 ಜನ, ಎಚ್.2 ರಲ್ಲಿ ಒಬ್ಬರು ಹಾಗೂ ಎಚ್.3 ರಲ್ಲಿ 8 ಜನ ಮೂಲ ವಾರಸುದಾರರಿದ್ದಾರೆ. ಇವರೆಲ್ಲರೂ ಅದೇ ಸಿಟಿಎಸ್ ನಂಬರ್ 400 ರಲ್ಲೇ ಬರುತ್ತಾರೆ. ದಿನಾಂಕ 04/01/2024 ರಂದು ಸ್ವತ್ ಮುಖ್ಯಾ ಇಂಜಿನಿಯರ್ ಅವರೇ ಈ ಆಸ್ತಿಯು ಜಂಟಿಯಾಗಿದೆ ಎಂದು ಪತ್ರದ ಮೂಲಕ ಎಚ್ಚರಿಸಿದ್ದರು. ಆದರೆ ಹಕ್ಕು ಪತ್ರ ಹಾಗೂ ತಿಳುವಳಿಕೆ ಪತ್ರ ನೀಡುವಾಗ ಇಲಾಖೆಯ ಅಧಿಕಾರಿಗಳು ಉಳಿದೆಲ್ಲಾ ಮೂಲ ಹಕ್ಕುದಾರರ ಹೆಸರನ್ನು ಕತ್ತರಿಸಿ, ಕೇವಲ ಪ್ರಕಾಶ್ ದಾಯಿಪುಲೆ ಹೆಸರನ್ನು ಮಾತ್ರ ತಂದು ಇಡೀ ಆಸ್ತಿಯನ್ನು ಒಬ್ಬನಿಗೇ ದಾರೆ ಎರೆದಿದ್ದಾರೆ!
ಇದನ್ನೂ ಓದಿ: ಅಬಕಾರಿ ಸಚಿವರ ತವರಲ್ಲೇ ಎಗ್ಗಿಲ್ಲದ ಮದ್ಯದ ದರ್ಬಾರ್! ಮಾಧ್ಯಮ ರಂಗಕ್ಕೂ ಅಂಟಿದ ‘ಸರಾಯಿ’ ಕಳಂಕ (Part 2)
2ನೇ ಯೂನಿಟ್ ಬಿಟ್ಟು 1ನೇ ಯೂನಿಟ್ಗೆ ಲಗ್ಗೆ: ಕಳೆದುಕೊಂಡಿದ್ದು ಅಲ್ಪ, ಪಡಕೊಂಡಿದ್ದು ಕೋಟಿ ಕೋಟಿ!
ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಸಂತ್ರಸ್ತರು ಕಳೆದುಕೊಂಡ ಒಟ್ಟು ಕ್ಷೇತ್ರದ ಜಾಗ ಕೇವಲ 140.47 ಸ್ಕ್ವೇರ್ ಮೀಟರ್. ಆದರೆ, ಇಲಾಖೆಯ ಅಧಿಕಾರಿಗಳು ಅವರಿಗೆ ಹಂಚಿಕೆ ಮಾಡಿರುವುದು ಮಾತ್ರ ಬರೋಬ್ಬರಿ 432 ಚದರ ಮೀಟರ್ ವಿಸ್ತೀರ್ಣದ ಬೃಹತ್ ಭೂಮಿಯನ್ನು!
- ಕಾನೂನು ಬಾಹಿರ ಹಂಚಿಕೆಯ ಮಾಸ್ಟರ್ ಪ್ಲಾನ್: ನಿಯಮಗಳ ಪ್ರಕಾರ 521 ರಿಂದ 523 ಮೀಟರ್ ಎತ್ತರದ ಭೂಸ್ವಾಧೀನಕ್ಕೆ ಒಳಪಟ್ಟು ಜಾಗ ಕಳೆದುಕೊಳ್ಳುವವರಿಗೆ ಎರಡನೇ ಯೂನಿಟ್ನಲ್ಲಿ ನಿವೇಶನ ಹಂಚಿಕೆ ಮಾಡಬೇಕಿತ್ತು. ಆದರೆ, ಪ್ರಶಾಂತ್ ಬಾರಿಗಿಡದ ಸೇರಿದಂತೆ ಬಿಟಿಡಿಎ ಅಧಿಕಾರಿಗಳು ಸಕಲ ನಿಯಮಗಳನ್ನು ಗಾಳಿಗೆ ತೂರಿ, ಕಾನೂನು ಬಾಹಿರವಾಗಿ ಕೋಟ್ಯಂತರ ರೂಪಾಯಿ ಮಾರುಕಟ್ಟೆ ಮೌಲ್ಯವಿರುವ ಯೂನಿಟ್ 1 ರ ಸೆಕ್ಟರ್ 5 ರಲ್ಲಿ ಸಿ ಮಾದರಿಯ 67 ಮತ್ತು 68 ನೇ ನಂಬರಿನ ಎರಡು ಬೃಹತ್ ಕಾರ್ನರ್ ಪ್ಲಾಟ್ಗಳನ್ನು (Corner Plots) ಅಕ್ರಮವಾಗಿ ಹಂಚಿಕೆ ಮಾಡಿದ್ದಾರೆ.
- ಬುಲೆಟ್ ವೇಗದ ಕಡತ ಚಲನೆ: 25/02/2026 ರಂದು ಈ ಅಕ್ರಮದ ಕಡತವನ್ನು ಮರಳಿ ಅತ್ಯಂತ ವೇಗವಾಗಿ ಪುಟ್ಟಪ್ ಮಾಡಲಾಗುತ್ತದೆ ಮತ್ತು ಕೇವಲ ಕೆಲವೇ ದಿನಗಳಲ್ಲಿ, ಅಂದರೆ 16 ಏಪ್ರಿಲ್ 2026 ರಂದು ಅಧಿಕೃತವಾಗಿ ಹಕ್ಕುಪತ್ರವನ್ನೂ ಕೈಗಿಡಲಾಗುತ್ತದೆ. ಬಡವರ ಫೈಲುಗಳು ವರ್ಷಗಟ್ಟಲೆ ಕಚೇರಿ ಧೂಳಿನಲ್ಲಿ ಕೊಳೆಯುವಾಗ, ಈ ಅಕ್ರಮದ ಫೈಲ್ ಮಾತ್ರ ಸೂಪರ್ ಫಾಸ್ಟ್ ಆಗಿ ಮೂವ್ ಆಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಮೂಲತಃ ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕನಾಗಿರುವ ಬಾರಿಗಿಡದ, ತನ್ನ ಸ್ವಂತ ಇಲಾಖೆಯ ಕೆಲಸಗಳನ್ನು ಬಾಕಿ ಉಳಿಸಿಕೊಂಡು ಬಿಟಿಡಿಎ ಆರ್ಒ ಆಗಿ ಹೆಚ್ಚುವರಿ ಪ್ರಭಾರ ಹೊತ್ತುಕೊಂಡು 3ನೇ ಬಾರಿಗೆ ಇಲ್ಲಿಗೆ ಎಂಟ್ರಿ ಕೊಟ್ಟಿರುವುದೇ ಇಂತಹ ಕೋಟಿ ಕೋಟಿ ಲೂಟಿಯ ಬೇಳೆ ಬೇಯಿಸಿಕೊಳ್ಳಲು ಎನ್ನುವುದು ಈಗ ಸಾಕ್ಷ್ಯ ಸಮೇತ ನಿರೂಪಿತವಾಗಿದೆ. ಹಿಂದೆ ಸುನೀಲ್ ದೊಡ್ಡಮನಿ, ಸೋಮಲಿಂಗ ನೋಟಗಾರ, ನವೀನ್ ಪ್ರಸಾದ್ ಕಟ್ಟಿಮನಿ ಅವರಂತಹ ದಲಿತ ಹಾಗೂ ಜನಪರ ಅಧಿಕಾರಿಗಳು ಇದ್ದಾಗ ಇಂತಹ ಯಾವುದೇ ಅಕ್ರಮಗಳಿರಲಿಲ್ಲ.
ಇದನ್ನೂ ಓದಿ: KPCC ಗೆ ಅಬಕಾರಿ ಮಿನಿಸ್ಟರ್ ದೋಖಾ? ಆಪ್ತ ಪತ್ರಕರ್ತ ಶಾಮೀಲು!
ಬಾಗಲಕೋಟೆಯ ಪತ್ರಕರ್ತರ ಸಂಘ ಮಲಗಿದೆಯೇ?
ಮಾಧ್ಯಮದವರ ಮೇಲೆಯೇ ಭ್ರಷ್ಟ ಅಧಿಕಾರಿಯೊಬ್ಬ ಇಷ್ಟೊಂದು ದರ್ಪ ತೋರಿದರೂ ಜಿಲ್ಲಾ ಪತ್ರಕರ್ತರ ಸಂಘ ಹಾಗೂ ಹಿರಿಯ ಪತ್ರಕರ್ತರು ಮೌನಕ್ಕೆ ಶರಣಾಗಿರುವುದು ಅತ್ಯಂತ ವಿಚಿತ್ರ ಹಾಗೂ ಶೋಚನೀಯ ಸಂಗತಿಯಾಗಿದೆ. ಉದ್ಧಟತನದ ಮಾತುಗಳು ಮತ್ತು ಅಸಭ್ಯ ವರ್ತನೆಗಳ ಬಗ್ಗೆ ತಿಳಿದಿದ್ದರೂ, ಸಂಘಟನೆಗಳು ಯಾವುದೇ ಕಠಿಣ ಪ್ರತಿಭಟನೆಗೆ ಮುಂದಾಗದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಪ್ರಶ್ನಿಸಬೇಕಾದ ಅನಿವಾರ್ಯತೆ: ಇಂದು ಒಬ್ಬ ಪತ್ರಕರ್ತನಿಗೆ ಏಕವಚನದಲ್ಲಿ “ಹೋಗಲೇ” ಎಂದು ನಿಂದಿಸಿದ ಅಧಿಕಾರಿ, ನಾಳೆ ಹಲ್ಲೆ ನಡೆಸಿದರೂ ಸಂಘಟನೆಗಳು ಹೀಗೆಯೇ ಕೈಕಟ್ಟಿ ಕುಳಿತುಕೊಳ್ಳುತ್ತವೆಯೇ? ಇದು ಕೇವಲ ಒಬ್ಬ ವ್ಯಕ್ತಿಗೆ ಅಥವಾ ಒಬ್ಬ ಪತ್ರಕರ್ತನಿಗೆ ಆದ ಅಪಮಾನವಲ್ಲ, ಇಡೀ ಪತ್ರಿಕಾ ರಂಗಕ್ಕೆ ನಡೆದ ಅವಮಾನ.
ಇನ್ನಾದರೂ ಪತ್ರಕರ್ತರ ಸಂಘಟನೆಗಳು ಮತ್ತು ಜಿಲ್ಲಾಡಳಿತ ಎಚ್ಚೆತ್ತುಕೊಂಡು, ಅರ್ಜಿ ಹಾಕುವ ಮುಂಚೆಯೇ ಫೈಲ್ ಸಿದ್ಧಪಡಿಸಿ, ಕೈಬರಹದಲ್ಲಿ ಹೆಸರು ತೂರಿಸಿ, ಜಂಟಿ ವಾರಸುದಾರರನ್ನು ವಂಚಿಸಿ ಕೋಟ್ಯಂತರ ರೂಪಾಯಿ ಬೆಲೆಯ ಕಾರ್ನರ್ ಪ್ಲಾಟ್ಗಳನ್ನು ಅಕ್ರಮವಾಗಿ ಲೂಟಿ ಮಾಡಿರುವ ಈ ಇಡೀ ಜಾಲದ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿದ ಅಧಿಕಾರಿ ಪ್ರಶಾಂತ್ ಬಾರಿಗಿಡದ ಮತ್ತು ಫಲಾನುಭವಿಗಳ ವಿರುದ್ಧ ತಕ್ಷಣವೇ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಹಂಚಿಕೆಯನ್ನು ರದ್ದುಪಡಿಸಬೇಕೆಂಬುದು ಸ್ಥಳೀಯರ ಮತ್ತು ಮುಳುಗಡೆ ಸಂತ್ರಸ್ತರ ತೀವ್ರ ಆಗ್ರಹವಾಗಿದೆ. ಭ್ರಷ್ಟರ ಈ ದರ್ಪಕ್ಕೆ ತಾರ್ಕಿಕ ಅಂತ್ಯ ಹಾಡದಿದ್ದರೆ ಸಾರ್ವಜನಿಕರೇ ಉಗ್ರ ಹೋರಾಟಕ್ಕೆ ಇಳಿಯುವುದು ಖಂಡಿತ.

