D.K. Shivakumar Cabinet: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಯಶಸ್ವಿಯಾಗಿ ಮೂರು ವರ್ಷಗಳನ್ನು ಪೂರೈಸಿದೆ. ಈ ಮೂರು ವರ್ಷಗಳಲ್ಲಿ ಐದು ಗ್ಯಾರಂಟಿಗಳ ಜಪ ಮಾಡುತ್ತಾ, ಸಿದ್ದರಾಮಯ್ಯನವರ (Siddaramaiah) ನೇತೃತ್ವದಲ್ಲಿ ಆಡಳಿತದ ಬಂಡಿ ಸಾಗಿತ್ತು. ಆದರೆ, “ಎರಡು ವರ್ಷಕ್ಕೆ ನನಗೆ ಸಿಎಂ ಸ್ಥಾನ ನೀಡಬೇಕು” ಎಂದು ಹೈಕಮಾಂಡ್ ಎದುರು ಪಟ್ಟುಹಿಡಿದು, ಸುದೀರ್ಘ ಹಗ್ಗಜಗ್ಗಾಟದ ನಡೆಸಿ ಕೊನೆಗೂ ಸಿದ್ದರಾಮಯ್ಯನವರಿಂದ ಅಧಿಕಾರ ಕಿತ್ತುಕೊಂಡ ಡಿ.ಕೆ.ಶಿವಕುಮಾರ್ (D.K. Shivakumar) ಅವರು ಮುಖ್ಯಮಂತ್ರಿಯಾಗಿ ಗದ್ದುಗೆ ಏರಿದ್ದಾರೆ. ಎರಡು ದಿನದ ಹಿಂದೆಯಷ್ಟೇ (ಜೂನ್ 3) ಲೋಕಭವನದಲ್ಲಿ ಡಿ.ಕೆ.ಶಿವಕುಮಾರ್ ಹಾಗೂ 13 ಸಚಿವರು ಅದ್ಧೂರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಆದರೆ, ಹೊಸ ಸಿಎಂ ಆಗಿ ಬಂದ ಎರಡೇ ದಿನಕ್ಕೆ, ನಿನ್ನೆ ಸಂಜೆ ನಡೆದ ಖಾತೆ ಹಂಚಿಕೆ ಪ್ರಕ್ರಿಯೆ ಇಡೀ ಕೈ ಪಾಳಯದಲ್ಲಿ ಜ್ವಾಲಾಮುಖಿ ಸೃಷ್ಟಿಸಿದೆ. ಮೂರು ವರ್ಷಗಳ ಕಾಲ ಸುಸ್ಥಿರವಾಗಿ ಸಾಗಿತ್ತು, ಈಗ ಡಿಕೆ ಸರ್ಕಾರದ ಹೊಸ ಸಂಪುಟದಲ್ಲಿ ಖಾತೆಗಳ ಹಂಚಿಕೆಯ ಬೆನ್ನಲ್ಲೇ ‘ಹೈಡ್ರಾಮಾ’ ರೂಪದಲ್ಲಿ ರಸ್ತೆಗಿಳಿದಿದೆ. ಇದು ಡಿಕೆ ಸರ್ಕಾರದ ಪತನದ ಆರಂಭವೇ ಅಥವಾ ಕೇವಲ ಅಧಿಕಾರದ ಶಕ್ತಿ ಪ್ರದರ್ಶನವೇ ಎಂಬ ಯಕ್ಷಪ್ರಶ್ನೆ ಈಗ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ರಾಮಲಿಂಗಾರೆಡ್ಡಿ ರಾಜೀನಾಮೆ: ಸಿಡಿದ ಮೊದಲ ಅಸಮಾಧಾನದ ಬಾಂಬ್
ಮೂರು ವರ್ಷಗಳ ಕಾಲ ಸಿದ್ದರಾಮಯ್ಯ ಸಂಪುಟದಲ್ಲಿ ಸಾರಿಗೆ ಮತ್ತು ಮುಜರಾಯಿ ಸಚಿವರಾಗಿ ಯಾವುದೇ ವಿವಾದವಿಲ್ಲದೆ ಕೆಲಸ ಮಾಡಿದ್ದ, ಸದಾ ಸೌಮ್ಯ ಸ್ವಭಾವದ ಹಿರಿಯ ನಾಯಕ ರಾಮಲಿಂಗಾ ರೆಡ್ಡಿ (Ramalinga Reddy) ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಹೊಸ ಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಬಿದ್ದ ಮೊದಲ ಭಾರಿ ಪೆಟ್ಟು. ಬೆಂಗಳೂರು ನಗರಾಭಿವೃದ್ಧಿ ಖಾತೆಯ ಭರವಸೆ ನೀಡಿ, ಕೊನೆ ಗಳಿಗೆಯಲ್ಲಿ ಜಲಸಂಪನ್ಮೂಲ ಖಾತೆಯನ್ನು ಕೈಗಿಟ್ಟಿರುವುದು ರಾಮಲಿಂಗಾರೆಡ್ಡಿ ಅವರ ಕೆರಳಿಸಿದೆ. ರಾಜಕೀಯದಲ್ಲಿ ಭರವಸೆಗಳು ನೀರಿನ ಮೇಲಿನ ಗುಳ್ಳೆಗಳಿದ್ದಂತೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಮಲಿಂಗಾರೆಡ್ಡಿ ಅವರ ಆಕ್ರೋಶ ಮತ್ತು ಕಣ್ಣಿನಲ್ಲಿದ್ದ ನೋವು, ಅಧಿಕಾರದ ಆಸೆಯದ್ದಲ್ಲ; ಬದಲಿಗೆ ತಮಗೆ ಆದ ‘ಅವಮಾನ’ದ್ದು ಎಂಬುದು ಸ್ಪಷ್ಟವಾಗಿ ಕಾಣುತ್ತಿತ್ತು.
“ನಾನು ಮುಖ್ಯಮಂತ್ರಿಗಳ ಹತ್ತಿರವಾಗಲಿ, ಹೈಕಮಾಂಡ್ ಬಳಿಯಾಗಲಿ ಮಂತ್ರಿ ಸ್ಥಾನ ಕೊಡಿ ಎಂದು ಭಿಕ್ಷೆ ಬೇಡಲು ಹೋಗಿರಲಿಲ್ಲ. ಡಿ.ಕೆ.ಶಿವಕುಮಾರ್ ಅವರೇ ಸ್ವತಃ ಬೆಂಗಳೂರು ಅಭಿವೃದ್ಧಿ ಖಾತೆಯನ್ನು ನೀಡುವುದಾಗಿ ಮಾತು ಕೊಟ್ಟಿದ್ದರು. ಮೂರು ವರ್ಷಗಳ ಹಿಂದೆಯೂ ಸಿದ್ದರಾಮಯ್ಯನವರ ಕಾಲದಲ್ಲಿ ಭೈರತಿ ಸುರೇಶ್ ಅವರನ್ನ ಕರೆದು ಬೆಂಗಳೂರು ಕೊಡ್ತೀವಿ ಅಂದರು, ಆಗಲೂ ಕೊಡಲಿಲ್ಲ. ಈಗ ಡಿಕೆ ಸುರೇಶ್ ಮತ್ತು ಡಿಕೆ ಶಿವಕುಮಾರ್ ಇಬ್ಬರೂ ಮಾತು ಕೊಟ್ಟಿದ್ದರು. ಈಗ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. ನನ್ನ ಆತ್ಮಸಾಕ್ಷಿಗೆ ವಿರುದ್ಧವಾಗಿ ನನಗೆ ಇಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ,” ಎಂದು ಹೇಳಿರುವುದು ಹೊಸ ಸರ್ಕಾರದ ಒಳಹೊರಗಿನ ಸಮನ್ವಯದ ಕೊರತೆಯನ್ನು ಎತ್ತಿ ತೋರಿಸುತ್ತದೆ.
ಕೆಪಿಸಿಸಿ ಅಧ್ಯಕ್ಷರ ಪರವಾಗಿ ಸಂಧಾನಕ್ಕೆ ಬಂದ ಮುಖಂಡರನ್ನು “ನನಗೆ ಸಿಟ್ಟು ಬರಿಸಬೇಡ, ಇಲ್ಲಿಂದ ಹೊರಟು ಹೋಗು” ಎಂದು ರಾಮಲಿಂಗಾರೆಡ್ಡಿ ಗದರಿಸಿದ ರೀತಿ, ಅವರಲ್ಲಿದ್ದ ಮುನಿಸು ಎಷ್ಟು ತೀವ್ರವಾಗಿತ್ತು ಎಂಬುದನ್ನು ಬಿಂಬಿಸುತ್ತದೆ. ಮಾತುಕತೆಯ ಬಾಗಿಲುಗಳು ಸಂಪೂರ್ಣ ಮುಚ್ಚಿವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನ ನಾಲ್ಕು ದಶಕಗಳ ರಾಜಕೀಯ ಇತಿಹಾಸವಿರುವ, ಕಾರ್ಪೊರೇಟರ್ ಮಟ್ಟದಿಂದ ಬೆಳೆದು ಬಂದಿರುವ ರಾಮಲಿಂಗಾರೆಡ್ಡಿಗೆ ಬೆಂಗಳೂರಿನ ಮೂಲೆ ಮೂಲೆಗಳ ಪರಿಚಯವಿದೆ. ಸಿದ್ದರಾಮಯ್ಯನವರ ಹಿಂದಿನ ಅವಧಿಯಲ್ಲಿ ‘ಬೆಂಗಳೂರಿನ ಪಿತಾಮಹ’ ಎಂದೇ ಕರೆಯಿಸಿಕೊಂಡಿದ್ದ ಇವರನ್ನು ಕಡೆಗಣಿಸಿ, ಬೆಂಗಳೂರು ಖಾತೆಯನ್ನು ಸಿಎಂ ತಮ್ಮ ಬಳಿಯೇ ಉಳಿಸಿಕೊಂಡಿರುವುದು ಮುಂಬರುವ ಜಿಬಿಎ ಚುನಾವಣೆಯ ಮೇಲೆ ಗಂಭೀರ ಪರಿಣಾಮ ಬೀರುವುದರಲ್ಲಿ ಯಾವುದೇ ಸಂಶಯವಿಲ್ಲ. ಅವರ ಬೆಂಬಲಿಗರು ಸಾಮೂಹಿಕ ರಾಜೀನಾಮೆಯ ಎಚ್ಚರಿಕೆ ನೀಡಿರುವುದು ಮತ್ತು “ಬೆಂಗಳೂರಿನಲ್ಲಿ ದಂಗೆಯೇಳುತ್ತದೆ, ಹೈಕಮಾಂಡ್ ಹುಷಾರಾಗಿರಲಿ” ಎಂಬ ಖಾರವಾದ ಹೇಳಿಕೆಗಳನ್ನು ನೀಡಿರುವುದು ಹೊಸ ಡಿಕೆ ಸರ್ಕಾರದ ಬುಡ ಅಲ್ಲಾಡಲು ಶುರುವಾಗಿರುವುದರ ಮುನ್ಸೂಚನೆಯಾಗಿದೆ.
ಇದನ್ನೂ ಓದಿ: Ramalinga Reddy: ಖಾತೆ ಕ್ಯಾತೆ! ಡಿಕೆ ಸಂಪುಟದ ಮೊದಲ ವಿಕೆಟ್ ಔಟ್? ರಾಜೀನಾಮೆಯ ಬಾಂಬ್ ಸಿಡಿಸಿದ ರೆಡ್ಡಿ!
ಮುನಿಯಪ್ಪ ಸರದಿ: ವಿಕೆಟ್ ಪತನದ ಸರಣಿ ಆರಂಭವೇ?
ರಾಮಲಿಂಗಾರೆಡ್ಡಿ ಅವರ ರಾಜೀನಾಮೆಯ ಬೆಂಕಿಯ ಹೊಗೆ ಆರುವ ಮುನ್ನವೇ, ಕೋಲಾರ ಭಾಗದ ಮತ್ತೊಬ್ಬ ದಲಿತ ಹಿರಿಯ ನಾಯಕ, ಆಹಾರ ಸಚಿವ ಕೆ.ಎಚ್. ಮುನಿಯಪ್ಪ (K.H. Muniyappa) ಅವರು ಅಸಮಾಧಾನದ ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ತಮಗೆ ನೀಡಿರುವ ಆಹಾರ ಖಾತೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಮುನಿಯಪ್ಪ, ತಕ್ಷಣವೇ ಖಾತೆ ಬದಲಾವಣೆ ಮಾಡುವಂತೆ ಹೈಕಮಾಂಡ್‌ಗೆ ಪಟ್ಟು ಹಿಡಿದಿದ್ದಾರೆ. ಮುನಿಯಪ್ಪ ಅವರ ಈ ನಡೆ ಡಿಕೆ ಸರ್ಕಾರದ ಎರಡನೇ ವಿಕೆಟ್ ಪತನವಾಗುತ್ತಾ? ಎನ್ನುವ ಆತಂಕ ಮೂಡಿಸಿದೆ.
“ನಾನು ಪಕ್ಷದಲ್ಲಿ ಅತ್ಯಂತ ಸೀನಿಯರ್ ಇದ್ದೇನೆ. ಏಳು ಬಾರಿ ಸಂಸದನಾಗಿ ದೇಶದ ರಾಜಕಾರಣ ನೋಡಿದವನು. ನನ್ನ ಪಕ್ಷನಿಷ್ಠೆ ಹೈಕಮಾಂಡ್‌ಗೆ ಗೊತ್ತಿದೆ. ಮುಂಬರುವ 2028ರ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾಂಗ್ರೆಸ್ ಪಕ್ಷ ಮುಂದೆ ಸಾಗಬೇಕು. ಈ ವಿಚಾರವನ್ನು ನಾನು ಹೈಕಮಾಂಡ್ ಮುಂದೆ ಇಟ್ಟಿದ್ದೇನೆ,” ಎಂದು ದೇವನಹಳ್ಳಿಯಲ್ಲಿ ಮುನಿಯಪ್ಪ ಹೇಳಿರುವುದು ಕೇವಲ ವಿನಂತಿಯಲ್ಲ, ಅದೊಂದು ಪರೋಕ್ಷ ಎಚ್ಚರಿಕೆ. ಅಷ್ಟೇ ಅಲ್ಲದೆ, ಮುನಿಯಪ್ಪ ಬೆಂಬಲಿಗರು ಅವರಿಗೆ ಉಪಮುಖ್ಯಮಂತ್ರಿ (ಡಿಸಿಎಂ) ಸ್ಥಾನ ನೀಡಬೇಕು ಎಂದು ಒತ್ತಾಯಿಸುತ್ತಿರುವುದು ಸಚಿವ ಸಂಪುಟದೊಳಗಿನ ಆಂತರಿಕ ಕಲಹಕ್ಕೆ ತುಪ್ಪ ಸುರಿದಂತಾಗಿದೆ. ಮೂರು ವರ್ಷಗಳ ಕಾಲ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಸುಮ್ಮನಿದ್ದ ಹಿರಿಯ ನಾಯಕರು, ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆ ಒಬ್ಬರ ಹಿಂದೆ ಮತ್ತೊಬ್ಬರಂತೆ ಬಂಡಾಯದ ಬಾವುಟ ಹಾರಿಸುತ್ತಿರುವುದು ನೋಡಿದರೆ, ಹೊಸ ಸಚಿವ ಸಂಪುಟದಲ್ಲಿ ತೀವ್ರ ತಳಮಳ ಸೃಷ್ಟಿಯಾಗಿರುವುದು ಗ್ಯಾರಂಟಿ.
ಖಾತೆ ಹಂಚಿಕೆ: ಹಗ್ಗಜಗ್ಗಾಟದ ಅಸಲಿ ಆಟ
ಕಾಂಗ್ರೆಸ್ ಪಕ್ಷಕ್ಕೆ ಮೂರು ವರ್ಷಗಳ ಬಳಿಕ ಸಿಕ್ಕ ಅಧಿಕಾರ ಹಸ್ತಾಂತರದ ಸುಖ, ಈಗ ಮಧುರವಾದ ವಿಷದಂತಾಗಿದೆ. ಸಿದ್ದರಾಮಯ್ಯನವರಿಂದ ಅಧಿಕಾರ ಕಿತ್ತುಕೊಳ್ಳುವಾಗ ಇದ್ದ ಉತ್ಸಾಹ, ಈಗ ಸ್ವಪಕ್ಷೀಯ ಹಿರಿಯ ನಾಯಕರನ್ನು ಸಂಭಾಳಿಸುವಲ್ಲಿ ಕಾಣಿಸುತ್ತಿಲ್ಲ. ಬೆಂಗಳೂರು ನಗರಾಭಿವೃದ್ಧಿಯಂತಹ ಅತ್ಯಂತ ಆಯಕಟ್ಟಿನ, ಸಂಪನ್ಮೂಲದ ಖಾತೆಯನ್ನು ತಾವೇ ಇಟ್ಟುಕೊಳ್ಳಬೇಕೆಂಬ ಸಿಎಂ ಡಿ.ಕೆ.ಶಿವಕುಮಾರ್ ಅವರ ಹಠ, ಹಿರಿಯ ನಾಯಕರ ಬಲಿ ಪಡೆಯುತ್ತಿದೆಯೇ? ಎಂಬ ಪ್ರಶ್ನೆ ಮೂಡುತ್ತದೆ.
ದೆಹಲಿಯಲ್ಲಿ ಲಾಬಿ ಮಾಡದೇ, ಕೇವಲ ಜನಬಲ ಮತ್ತು ಪಕ್ಷನಿಷ್ಠೆಯನ್ನೇ ನಂಬಿಕೊಂಡಿದ್ದ ರಾಮಲಿಂಗಾರೆಡ್ಡಿ ಮತ್ತು ಕೆ.ಎಚ್. ಮುನಿಯಪ್ಪ ಅವರಂತಹ ಧೀಮಂತ ನಾಯಕರಿಗೆ ಆರಂಭದಲ್ಲೇ ಇಂತಹ ಶಾಕ್ ನೀಡಿರುವುದು ಸರ್ಕಾರದ ಸ್ಥಿರತೆಗೆ ಖಂಡಿತಾ ಒಳ್ಳೆಯ ಲಕ್ಷಣವಲ್ಲ. ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು “ಇವೆಲ್ಲ ರಾಜಕಾರಣದಲ್ಲಿ ನಡೆಯುತ್ತಿರುತ್ತವೆ, ಹಿರಿಯರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸುತ್ತೇವೆ” ಎಂದು ಹಗುರವಾಗಿ ಹೇಳಿರಬಹುದು. ಸಿಎಂ ಶಿವಕುಮಾರ್ ಅವರು “ರಾಮಲಿಂಗಾರೆಡ್ಡಿ ನನ್ನ ಅತ್ಯಂತ ಆಪ್ತ ಗೆಳೆಯ, ಎಲ್ಲವನ್ನೂ ಸರಿಪಡಿಸುತ್ತೇನೆ, ನಥಿಂಗ್ ಟು ವರಿ” ಎಂದು ಮಾಧ್ಯಮಗಳ ಮುಂದೆ ಮುಗುಳ್ನಕ್ಕಿರಬಹುದು. ಆದರೆ, ಒಳಗೊಳಗೆ ಸುಡುತ್ತಿರುವ ಅಸಮಾಧಾನದ ಒಲೆ ಅಷ್ಟು ಬೇಗ ಆರಲು ಸಾಧ್ಯವಿಲ್ಲ.
ಇದನ್ನೂ ಓದಿ: State Politics: ಗಾಯಗೊಂಡ ಹುಲಿಗಳ ನಿಗೂಢ ಜುಗಲ್ಬಂದಿ- ಜಮೀರ್ ಬೆನ್ನಿಗೆ ನಿಂತ ಸಾಹುಕಾರ್! ಡಿಕೆ ಕೋಟೆಗೆ ಗಂಡಾಂತರ ಫಿಕ್ಸ್!?
ಶುಭಗಳಿಗೆಯೋ, ಅಶುಭಗಳಿಗೆಯೋ?
ಹೊಸ ಸಿಎಂ ಆಯ್ಕೆಯಾಗಿ ಸಂಪುಟ ರಚನೆಯ ಸಂದರ್ಭದಲ್ಲೇ ಕರ್ನಾಟಕ ಕಾಂಗ್ರೆಸ್‌ನಲ್ಲಿ ಇಂತಹ ಹೈಡ್ರಾಮಾ ನಡೆಯುತ್ತಿರುವುದು ಇಡೀ ದೇಶದ ಮಟ್ಟದಲ್ಲಿ ಪಕ್ಷಕ್ಕೆ ಭಾರಿ ಮುಜುಗರ ಉಂಟುಮಾಡಿದೆ. ಮೂರು ವರ್ಷಗಳ ಕಾಲ ಸುಸೂತ್ರವಾಗಿ ನಡೆದ ಸರ್ಕಾರದಲ್ಲಿ, ಸಿಎಂ ಬದಲಾದ ಎರಡೇ ದಿನಕ್ಕೆ ಇಂತಹ ಬಿಕ್ಕಟ್ಟು ಎದುರಾಗಿರುವುದು ಡಿಕೆ ಶಿವಕುಮಾರ್ ಅವರ ನಾಯಕತ್ವದ ಸಾಮರ್ಥ್ಯಕ್ಕೆ ಸವಾಲೊಡ್ಡಿದೆ.
ರಾಜಕೀಯ ವಿಶ್ಲೇಷಕರ ಪ್ರಕಾರ, ಈ ಬೆಳವಣಿಗೆಗಳು ಡಿಕೆ ಸರ್ಕಾರಕ್ಕೆ ಖಂಡಿತವಾಗಿಯೂ ಅಶುಭಗಳಿಗೆಯ ಮುನ್ಸೂಚನೆ. ಸಿದ್ದರಾಮಯ್ಯನವರನ್ನು ಕೆಳಗಿಳಿಸಿ ಅಧಿಕಾರ ಹಿಡಿದ ತಕ್ಷಣ ಎಲ್ಲವೂ ಮುಗಿಯಲಿಲ್ಲ, ಅಸಲಿ ಸವಾಲು ಈಗ ಶುರುವಾಗಿದೆ. ಮುಂಬರುವ 2028ರ ಚುನಾವಣೆಗೆ ಇನ್ನು ಕೇವಲ ಎರಡು ವರ್ಷ ಬಾಕಿ ಇರುವಾಗ, ಹಿರಿಯರನ್ನು ಕಡೆಗಣಿಸಿದರೆ ಪಕ್ಷಕ್ಕೆ ಭಾರಿ ನಷ್ಟ ಕಾಯ್ದಿರಿಸಿದಂತಾಗುತ್ತದೆ.
ಶಿವ ಶಿವ… ಅಧಿಕಾರ ವಹಿಸಿಕೊಂಡು ಎರಡೇ ದಿನಕ್ಕೆ ಸಚಿವರೊಬ್ಬರು ರಾಜೀನಾಮೆ ಪತ್ರ ಹಿಡಿದು ಕೂತರೆ, ಮತ್ತೊಬ್ಬರು ಬಂಡಾಯವೆದ್ದರೆ, ಈ ಹೊಸ ಸರ್ಕಾರ ಇನ್ನುಳಿದ ಎರಡು ವರ್ಷಗಳ ಕಾಲ ಜನರ ಕಲ್ಯಾಣವನ್ನು ಹೇಗೆ ತಾನೇ ಮಾಡಲು ಸಾಧ್ಯ? ಡಿ.ಕೆ.ಶಿವಕುಮಾರ್ ಅವರು ಈ ಆಂತರಿಕ ಕಸರತ್ತನ್ನು ಹೇಗೆ ನಿಭಾಯಿಸುತ್ತಾರೆ ಮತ್ತು ವಿಕೆಟ್ ಪತನದ ಸರಣಿಯನ್ನು ಹೇಗೆ ತಡೆಯುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಒಟ್ಟಿನಲ್ಲಿ, ಸಿದ್ದರಾಮಯ್ಯನವರ ನಿರ್ಗಮನದ ನಂತರದ ಈ ರಾಜಕೀಯ ಬದಲಾವಣೆ ಕರ್ನಾಟಕದ ಪಾಲಿಗೆ ಶುಭ ಸೂಚನೆಯಂತೂ ಅಲ್ಲ!

