Homeರಾಜ್ಯKarnataka Politics: ಡಿಕೆಶಿಗೆ ಟೆನ್ಷನ್, ಜಾರಕಿಹೊಳಿ ಮುಖದಲ್ಲಿ ನಿಗೂಢ ನಗು! ಹಸ್ತದ ಅಂಗಳದಲ್ಲಿ ಶುರುವಾಯ್ತಾ 'ಕೈ'...

Karnataka Politics: ಡಿಕೆಶಿಗೆ ಟೆನ್ಷನ್, ಜಾರಕಿಹೊಳಿ ಮುಖದಲ್ಲಿ ನಿಗೂಢ ನಗು! ಹಸ್ತದ ಅಂಗಳದಲ್ಲಿ ಶುರುವಾಯ್ತಾ ‘ಕೈ’ ಬದಲಾವಣೆ ಪರ್ವ!?

ಕರ್ನಾಟಕ ರಾಜಕಾರಣದ (Karnataka Politics) ಹೈಕಮಾಂಡ್ ಅಂಗಳವಾದ ದೆಹಲಿಯಲ್ಲಿ ಈಗ ಭಾರಿ ಬಿರುಗಾಳಿ ಎದ್ದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರಿಗೆ ದಿಢೀರ್ ಬುಲಾವ್ ಬಂದ ಬೆನ್ನಲ್ಲೇ, ರಾಜ್ಯ ರಾಜಕೀಯದ ಪ್ರಮುಖ ದಾಳಗಳು ದೆಹಲಿ ತಲುಪಿವೆ. ಕೇವಲ ಮುಖ್ಯಮಂತ್ರಿಯಷ್ಟೇ ಅಲ್ಲ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DCM D.K. Shivakumar) ಹಾಗೂ ರಾಜ್ಯ ಸರ್ಕಾರದ ಪ್ರಭಾವಿ ಸಚಿವರುಗಳೂ ಈಗ ಹಸ್ತದ ನಾಯಕರ ದರ್ಬಾರ್‌ನಲ್ಲಿ ಬೀಡುಬಿಟ್ಟಿದ್ದಾರೆ. ಇವೆಲ್ಲದರ ನಡುವೆ ಇಡೀ ಮಾಧ್ಯಮ ಲೋಕ ಹಾಗೂ ರಾಜಕೀಯ ವಿಶ್ಲೇಷಕರ ಕಣ್ಣು ನೆಟ್ಟಿರುವುದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಅವರ ಮೇಲೆ. ದೆಹಲಿ ವಿಮಾನ ನಿಲ್ದಾಣದಲ್ಲಿ ಜಾರಕಿಹೊಳಿ ಮುಖದಲ್ಲಿದ್ದ ಆ ನಿಗೂಢ ನಗು ಮತ್ತು ಮಾಧ್ಯಮಗಳ ಎದುರು ಅವರು ಆಡಿದ ಚಾಣಾಕ್ಷ ಮಾತುಗಳು ರಾಜ್ಯ ಕಾಂಗ್ರೆಸ್‌ನಲ್ಲಿ ದೊಡ್ಡದೊಂದು ನಾಯಕತ್ವ ಬದಲಾವಣೆಯ ಮುನ್ನುಡಿಯೇ ಎನ್ನುವ ಸಂಶಯವನ್ನು ದಟ್ಟವಾಗಿಸಿದೆ.

ಇಂದು ಬೆಳಗ್ಗೆ 11 ಗಂಟೆಗೆ ನಿಗದಿಯಾಗಿರುವ ಹೈಕಮಾಂಡ್ ಸಭೆಯು ಕೇವಲ ಒಂದು ಸಾಧಾರಣ ಸಭೆಯಲ್ಲ. ಇದರ ಹಿಂದೆ ಸಿಎಂ ಬದಲಾವಣೆ, ರಾಜ್ಯಸಭಾ ಸದಸ್ಯರ ಆಯ್ಕೆ, ಬಿಡಿಎ ಚುನಾವಣೆ, ಸಚಿವ ಸಂಪುಟ ವಿಸ್ತರಣೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಹಾಗೂ SIR (ವಿಶೇಷ ಮತದಾರರ ಪರಿಶೀಲನೆ) ಕುರಿತಾದ ಗಂಭೀರ ಆಂತರಿಕ ವಿಷಯಗಳ ಮಹಾಪೂರವೇ ಇದೆ. ಆದರೆ, ಈ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒಬ್ಬರೇ ಭಾಗವಹಿಸುತ್ತಾರೋ ಅಥವಾ ಡಿಸಿಎಂ ಕೂಡ ಜೊತೆಯಾಗುತ್ತಾರೋ ಎನ್ನುವ ಗೊಂದಲದ ನಡುವೆಯೇ, ಸತೀಶ್ ಜಾರಕಿಹೊಳಿ ನಡೆ ಮಾತ್ರ ಹೊಸ ರಾಜಕೀಯ ಲೆಕ್ಕಾಚಾರಗಳಿಗೆ ದಾರಿ ಮಾಡಿಕೊಟ್ಟಿದೆ.

ಜಾರಕಿಹೊಳಿ ನಿಗೂಢ ನಗುವಿನ ಹಿಂದಿನ ‘ಆತ್ಮವಿಶ್ವಾಸ’

ದೆಹಲಿಯಲ್ಲಿ ಮಾಧ್ಯಮಗಳ ಮುಂದೆ ಬಂದ ಸತೀಶ್ ಜಾರಕಿಹೊಳಿ ಅವರ ಬಾಡಿ ಲ್ಯಾಂಗ್ವೇಜ್ ಮತ್ತು ಮುಗುಳ್ನಗು ಕೇವಲ ಸೌಜನ್ಯದ್ದಾಗಿರಲಿಲ್ಲ; ಅದು ಗೆಲುವಿನ ಆತ್ಮವಿಶ್ವಾಸದ ನಗೆಯಂತೆ ಕಾಣಿಸುತ್ತಿತ್ತು. “ನಾನು ಈ ತಿಂಗಳು ಮುಗಿಯುವುದರೊಳಗೆ ಇಬ್ಬರು ನಾಯಕರನ್ನು ಕರೆದು ಮಾತನಾಡುತ್ತಾರೆ ಎಂದು ಹೇಳಿದ್ದೆ, ಈಗ ಒಬ್ಬರನ್ನು ಕರೆದಿದ್ದಾರೆ. ಈಗ ಪ್ರಾಸೆಸ್ ಶುರುವಾಗಿದೆ, ನಾಳೆಯಿಂದ ಎಲ್ಲಾ ಸ್ಟಾರ್ಟ್ ಆಗುತ್ತೆ,” ಎಂದು ಜಾರಕಿಹೊಳಿ ಅತ್ಯಂತ ಖುಷಿಯಿಂದಲೇ ಹೇಳಿದ್ದಾರೆ. ಪಕ್ಷದ ಒಳಗಿನ ಗೊಂದಲ ಬಗೆಹರಿಸಲು ತಾವೂ ಸೇರಿದಂತೆ ಹಲವು ನಾಯಕರು ಹೈಕಮಾಂಡ್‌ಗೆ ರಿಕ್ವೆಸ್ಟ್ ಮಾಡಿದ್ದಾಗಿ ಅವರು ಒಪ್ಪಿಕೊಂಡಿದ್ದಾರೆ.

“ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಕರೆಯಲಾಗಿದೆಯೇ?” ಎಂದು ಮಾಧ್ಯಮದವರು ನೇರವಾಗಿ ಕೆಣಕಿದಾಗ, ಸತೀಶ್ ಜಾರಕಿಹೊಳಿ ನಗುತ್ತಲೇ “ನನಗೆ ಗೊತ್ತಿಲ್ಲ” ಎಂದರು. ಸಿಎಂ ಬದಲಾವಣೆ ಕುರಿತು ಕೇಳಿದಾಗಲೂ, “ಅದು ಬಹಳ ದಿನದ ಗೊಂದಲವಿದೆ, ಅದು ಇತ್ಯಾರ್ಥ ಆಗಬಹುದು. ಇವತ್ತಿನ ಸಭೆಯಲ್ಲಿ ಏನಾಗುತ್ತೋ ನೋಡೋಣ” ಎಂದು ಮಾರ್ಮಿಕವಾಗಿ ಉತ್ತರಿಸಿದರು. ಜಾರಕಿಹೊಳಿ ಅವರ ಈ ನಡೆ ಮತ್ತು ಮಾತಿನ ವೈಖರಿ ನೋಡಿದರೆ, ಹೈಕಮಾಂಡ್ ಮಟ್ಟದಲ್ಲಿ ದೊಡ್ಡದೊಂದು ಬದಲಾವಣೆಯ ಸ್ಕೆಚ್ ಸಿದ್ಧವಾಗಿದೆ ಮತ್ತು ಅದರಲ್ಲಿ ಜಾರಕಿಹೊಳಿ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ.

ಇದನ್ನೂ ಓದಿ: Congress: ದಿಲ್ಲಿ ಅಂಗಳದಲ್ಲಿ ಸಿದ್ದರಾಮಯ್ಯ-ಡಿಕೆಶಿ: ಕುರ್ಚಿ ಬದಲಾವಣೆಯೋ ಅಥವಾ ಸಂಪುಟ ಪುನರಚನೆಯೋ?

ಸಿದ್ದರಾಮಯ್ಯ ನಂತರದ ‘ಅಹಿಂದ’ ನಾಯಕ ನಾನೇ!

ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಸತೀಶ್ ಜಾರಕಿಹೊಳಿ ಕಣ್ಣಿಟ್ಟಿರುವುದು ಈಗೇನೂ ಗುಟ್ಟಾಗಿ ಉಳಿದಿಲ್ಲ. ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಅವರು ತಾವೊಬ್ಬ ಪ್ರಬಲ ನಾಯಕ ಎಂಬುದನ್ನು ಹೈಕಮಾಂಡ್ ಎದುರು ಸಾಬೀತುಪಡಿಸಿದ್ದಾರೆ. ಇತ್ತೀಚೆಗೆ ನಡೆದ ಅನೇಕ ಉಪಚುನಾವಣೆಗಳಲ್ಲಿ (ಬೈ ಎಲೆಕ್ಷನ್‌) ಜಾರಕಿಹೊಳಿ ತಮ್ಮ ಚಾಣಾಕ್ಷ ತಂತ್ರಗಾರಿಕೆಯಿಂದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವಲ್ಲಿ ಯಶಸ್ವಿಯಾಗಿದ್ದಾರೆ. ಕೇವಲ ಉತ್ತರ ಕರ್ನಾಟಕ ಅಷ್ಟೇ ಅಲ್ಲದೆ, ಇಡೀ ರಾಜ್ಯ ಕಾಂಗ್ರೆಸ್‌ನಲ್ಲಿ ತಮ್ಮದೇ ಆದ ಹಿಡಿತ ಸಾಧಿಸಲು ಮುಂದಾಗಿದ್ದಾರೆ.

ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಬೃಹತ್ ‘ಅಹಿಂದ’ ಸಮಾವೇಶ ನಡೆಸಿ ಸಂಘಟನಾ ಪ್ರಕ್ರಿಯೆಗೆ ಚಾಲನೆ ನೀಡಿದ ಸತೀಶ್ ಜಾರಕಿಹೊಳಿ, ತಾವೇ ಸಿದ್ದರಾಮಯ್ಯ ಅವರ ನಂತರದ ಅಹಿಂದ ನಾಯಕ ಎನ್ನುವುದನ್ನು ಪರೋಕ್ಷವಾಗಿ ಸಾರಿದ್ದಾರೆ. ಕಾಂಗ್ರೆಸ್ ಪಕ್ಷದ ಮೂಲ ಅಸ್ತಿತ್ವವೇ ಅಹಿಂದ (ಅಲ್ಪಸಂಖ್ಯಾತ, ಹಿಂದುಳಿದ, ದಲಿತ) ಮತಬ್ಯಾಂಕ್ ಮೇಲಿದೆ. ಸಿಎಂ ಸಿದ್ದರಾಮಯ್ಯ ನಂತರ ಈ ಸಮುದಾಯಗಳನ್ನು ಮುನ್ನಡೆಸಬಲ್ಲ ಸಮರ್ಥ ನಾಯಕ ಯಾರು ಎನ್ನುವ ಪ್ರಶ್ನೆಗೆ ಸತೀಶ್ ಜಾರಕಿಹೊಳಿ ಈಗ ಉತ್ತರವಾಗಿ ನಿಲ್ಲುತ್ತಿದ್ದಾರೆ. ವ್ಯಕ್ತಿಗತವಾಗಿ ಮತ್ತು ಸಾಮುದಾಯಿಕವಾಗಿ ಪ್ರಬಲರಾಗಿ ಹೊರಹೊಮ್ಮಿರುವ ಜಾರಕಿಹೊಳಿ, ಕೆಪಿಸಿಸಿ ಸಾರಥ್ಯ ವಹಿಸಲು ತಮಗಿಂತ ಸಮರ್ಥರು ಯಾರೂ ಇಲ್ಲ ಎಂಬುದನ್ನು ಹೈಕಮಾಂಡ್‌ಗೆ ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಬಹುದು.

ಡಿಕೆಶಿ ಬಣಕ್ಕೆ ಸತೀಶ್ ಜಾರಕಿಹೊಳಿ ನೇರ ಸವಾಲು!

ರಾಜ್ಯ ಕಾಂಗ್ರೆಸ್‌ನಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಸತೀಶ್ ಜಾರಕಿಹೊಳಿ ನಡುವಿನ ಶೀತಲ ಸಮರ ಹೊಸದೇನಲ್ಲ. ಇತ್ತೀಚೆಗೆ ಡಿ.ಕೆ. ಶಿವಕುಮಾರ್ ಹಾಗೂ ಅವರ ಬಣದ ನಾಯಕರು ಸೇರಿಕೊಂಡು ಅಲ್ಪಸಂಖ್ಯಾತ ನಾಯಕರ ರಾಜೀನಾಮೆ ಪಡೆಯುವುದು, ಸಸ್ಪೆಂಡ್ ಮಾಡುವುದು ಸೇರಿದಂತೆ ಅನೇಕ ಆಂತರಿಕ ಗೊಂದಲಗಳನ್ನು ಸೃಷ್ಟಿಸಿದ್ದರು. ಇದು ಪಕ್ಷದ ಒಳಗೆ ಭಾರಿ ಅಸಮಾಧಾನಕ್ಕೆ ಕಾರಣವಾಗಿತ್ತು. ಈ ವೇಳೆ ಬೇರೆ ಯಾವ ನಾಯಕರೂ ಮಾತನಾಡದಿದ್ದಾಗ, ಧೀಮಂತ ನಾಯಕನಂತೆ ಮುಂದಾಳತ್ವ ವಹಿಸಿದ್ದು ಇದೇ ಸತೀಶ್ ಜಾರಕಿಹೊಳಿ.

ಡಿ.ಕೆ. ಶಿವಕುಮಾರ್ ಅವರ ನಡೆಗೆ ನೇರವಾಗಿ ಆಕ್ಷೇಪ ವ್ಯಕ್ತಪಡಿಸಿದ ಜಾರಕಿಹೊಳಿ, “ಇದು ಸರಿಯಾದ ಕ್ರಮ ಅಲ್ಲ” ಎಂದು ಮುಖಾಮುಖಿಯಾಗಿಯೇ ಹೇಳುವ ಧೈರ್ಯ ತೋರಿಸಿದ್ದರು. ಡಿಕೆಶಿ ಅವರ ಏಕಪಕ್ಷೀಯ ನಿರ್ಧಾರಗಳಿಗೆ ಬ್ರೇಕ್ ಹಾಕುವ ಮೂಲಕ ತಾವು ಸಿದ್ದರಾಮಯ್ಯ ಬಣದ ಬಲವಾದ ಪಿಲ್ಲರ್ ಎಂಬುದನ್ನು ನಿರೂಪಿಸಿದ್ದರು. ಡಿಕೆಶಿ ಬಣದ ನಾಯಕರು ಪಕ್ಷದಲ್ಲಿ ಗೊಂದಲ ಮೂಡಿಸುತ್ತಿದ್ದಾರೆ ಎಂದು ಹೈಕಮಾಂಡ್ ಮಟ್ಟದಲ್ಲಿ ರಿಕ್ವೆಸ್ಟ್ ಕಳುಹಿಸಿದ್ದೂ ಕೂಡ ಇದೇ ಜಾರಕಿಹೊಳಿ ತಂಡ. ಈಗ ಹೈಕಮಾಂಡ್ ಸಿದ್ದರಾಮಯ್ಯ ಅವರ ಬೆನ್ನಲ್ಲೇ ಎಲ್ಲರನ್ನೂ ದೆಹಲಿಗೆ ಕರೆಸಿಕೊಂಡಿರುವುದು ಜಾರಕಿಹೊಳಿ ಅವರ ದೂರಿಗೆ ಸಿಕ್ಕ ಜಯ ಎಂದೇ ವಿಶ್ಲೇಷಿಸಲಾಗುತ್ತಿದೆ.

ಇದನ್ನೂ ಓದಿ: Township: ಕೋಟಿ ಕೊಡ್ತೀನಿ, ಇಲ್ದಿದ್ರೆ ಕೋರ್ಟ್ ಮೂಲಕ ಕಿತ್ಕೊಳ್ತೀನಿ- ಡಿಸಿಎಂ ದರ್ಪದ ವಾರ್ನಿಂಗ್! ಹಸಿರು ಭೂಮಿ ಬಂಜರು ಎನ್ನುವ ಡಿಕೆಶಿ ಕಣ್ಣತೆರೆದು ನೋಡಲಿ…

ದೆಹಲಿ ಸುಲ್ತಾನರ ಅಂತಿಮ ತೀರ್ಪು ಏನು?

ಕೆಪಿಸಿಸಿ ಅಧ್ಯಕ್ಷ ಸ್ಥಾನ ಮತ್ತು ಸಿಎಂ ಬದಲಾವಣೆಯ ಗೊಂದಲಕ್ಕೆ ಈ ಸಭೆಯಲ್ಲಿ ತಾರ್ಕಿಕ ಅಂತ್ಯ ಸಿಗಲಿದೆಯೇ? ಸತೀಶ್ ಜಾರಕಿಹೊಳಿ ಅವರ ಆತ್ಮವಿಶ್ವಾಸದ ನಗು ಮತ್ತು “ನಾಳೆಯಿಂದ ಎಲ್ಲಾ ಸ್ಟಾರ್ಟ್ ಆಗುತ್ತೆ” ಎನ್ನುವ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಹೊಸ ಭೂಕಂಪದ ಸೂಚನೆ ನೀಡುತ್ತಿದೆ. ಒಂದು ವೇಳೆ ಹೈಕಮಾಂಡ್ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಸತೀಶ್ ಜಾರಕಿಹೊಳಿ ಅವರಿಗೆ ವಹಿಸಿದರೆ, ರಾಜ್ಯ ಕಾಂಗ್ರೆಸ್‌ನಲ್ಲಿ ಡಿ.ಕೆ. ಶಿವಕುಮಾರ್ ಅವರ ಏಕಸ್ವಾಮ್ಯಕ್ಕೆ ದೊಡ್ಡ ಪೆಟ್ಟು ಬೀಳುವುದರಲ್ಲಿ ಸಂಶಯವಿಲ್ಲ. ಜೊತೆಗೆ, ಸಿದ್ದರಾಮಯ್ಯ ಅವರ ಕೈ ಮತ್ತಷ್ಟು ಬಲವಾಗಲಿದೆ.

ಒಟ್ಟಿನಲ್ಲಿ, ದೆಹಲಿಯ ಅಂಗಳದಲ್ಲಿ ಕರ್ನಾಟಕ ಕಾಂಗ್ರೆಸ್‌ನ ಭವಿಷ್ಯದ ಜಾತಕ ಬರೆಯಲಾಗುತ್ತಿದೆ. ಸತೀಶ್ ಜಾರಕಿಹೊಳಿ ಅವರ ನಿಗೂಢ ನಗು ನಿಜವಾಗಿಯೂ ಅಧ್ಯಕ್ಷ ಸ್ಥಾನದ ಪಟ್ಟಾಭಿಷೇಕದ ಮುನ್ಸೂಚನೆಯೋ ಅಥವಾ ಹೈಕಮಾಂಡ್ ಮತ್ತೊಂದು ಹೊಸ ಟ್ವಿಸ್ಟ್ ನೀಡಲಿದೆಯೋ ಎಂಬುದಕ್ಕೆ ಮುಂದಿನ ಕೆಲವು ಗಂಟೆಗಳಲ್ಲಿ ಅಧಿಕೃತ ಮುದ್ರೆ ಬೀಳಲಿದೆ. ಅಲ್ಲಿಯವರೆಗೆ ಕರ್ನಾಟಕದ ರಾಜಕೀಯ ರಂಗದಲ್ಲಿ ಹೈವೋಲ್ಟೇಜ್ ಡ್ರಾಮಾ ಮುಂದುವರಿಯುವುದು ಗ್ಯಾರಂಟಿ.

Praveen Yalligutti
Praveen Yalliguttihttp://asalisuddi.com
ಕನ್ನಡದ ವಿವಿಧ ಸುದ್ದಿ ಮಾಧ್ಯಮ ಸಂಸ್ಥೆಗಳಲ್ಲಿ ಸುಮಾರು 8 ವರ್ಷಗಳ ಕಾಲ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ ನನಗಿದೆ. ಸುದ್ದಿಗಳ ಅಸಲಿಯತ್ತನ್ನು ಮತ್ತು ನಿಖರವಾದ ಮಾಹಿತಿಯನ್ನು ಜನರಿಗೆ ತಲುಪಿಸಬೇಕು ಎನ್ನುವ ಉದ್ದೇಶದಿಂದ ಈಗ 'ಅಸಲಿ ಸುದ್ದಿ' (Asali Suddi) ಎನ್ನುವ ಸುದ್ದಿ ಸಂಸ್ಥೆಯನ್ನು ಆರಂಭಿಸಿದ್ದೇನೆ. ಸತ್ಯಕ್ಕೆ ಹತ್ತಿರವಾದ ಮತ್ತು ಜನೋಪಕಾರಿ ವರದಿಗಳನ್ನು ನೀಡುವುದೇ ನನ್ನ ಮೊದಲ ಆದ್ಯತೆ.
RELATED ARTICLES

Most Popular

Recent Comments