SIR: ಭಾರತೀಯ ಪ್ರಜಾಪ್ರಭುತ್ವದ ಅತ್ಯಂತ ಪವಿತ್ರವಾದ ಸಾಂವಿಧಾನಿಕ ಸಂಸ್ಥೆ ‘ಕೇಂದ್ರ ಚುನಾವಣಾ ಆಯೋಗ’ (Central Election Commission) ಇಂದು ದೆಹಲಿಯ ದೊರೆಗಳ ಕೈಗೊಂಬೆಯಾಗಿ ಹಲ್ಲಿಲ್ಲದ ಹಾವಿನಂತೆ ಮಲಗಿದೆಯೇ? ಇಂತಹದೊಂದು ಆತಂಕಕಾರಿ ಮತ್ತು ಕಠೋರವಾದ ಪ್ರಶ್ನೆ ಇಡೀ ದೇಶದ ನಾಗರಿಕ ಸಮಾಜವನ್ನು ಕಾಡಲಾರಂಭಿಸಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಅಮಿತ್ ಶಾ (Amit Shah) ಜೋಡಿಯ ಆಡಳಿತಾವಧಿಯಲ್ಲಿ ವಿರೋಧ ಪಕ್ಷಗಳನ್ನು ಮಟ್ಟಹಾಕಲು ಐಟಿ, ಇಡಿ, ಸಿಬಿಐಗಳನ್ನು ಅಸ್ತ್ರಗಳನ್ನಾಗಿ ಬಳಸುವುದು ಹಳೆಯ ಕಥೆಯಾಯಿತು. ಆದರೆ, ಈಗ ಇಡೀ ಚುನಾವಣಾ ವ್ಯವಸ್ಥೆಯನ್ನೇ ಹೈಜಾಕ್ ಮಾಡಲು, ತಮಗೆ ವೋಟ್ ಹಾಕದ ಕೋಟ್ಯಾಂತರ ಜನರನ್ನು ಇತಿಹಾಸದ ಪುಟಗಳಿಂದಲೇ ಅಳಿಸಿಹಾಕಲು ಆಯೋಗದ ಮೂಲಕ ಒಂದು ರಹಸ್ಯ ಅಸ್ತ್ರವನ್ನು ಪ್ರಯೋಗಿಸಲಾಗುತ್ತಿದೆ. ಅದರ ಹೆಸರೇ ಎಸ್‌ಐಆರ್ (Special Intensive Revision – ವಿಶೇಷ ತೀವ್ರ ಪರಿಷ್ಕರಣೆ).
ಈಗಾಗಲೇ ದೇಶದ 13 ರಾಜ್ಯಗಳಲ್ಲಿ ಕೋಟ್ಯಾಂತರ ಬಡವರು, ದಲಿತರು ಮತ್ತು ಅಲ್ಪಸಂಖ್ಯಾತರ ಮತಾಧಿಕಾರವನ್ನು ‘ರಕ್ತರಹಿತ ನರಮೇಧ’ದ ಮೂಲಕ ಮುಗಿಸಿರುವ ಈ ಎಸ್‌ಐಆರ್ ಪೆಡಂಭೂತ, ಇದೀಗ ಶಾಂತಿಯ ತೋಟವಾದ ನಮ್ಮ ಕರ್ನಾಟಕಕ್ಕೂ ಕಾಲಿಟ್ಟಿದೆ. ಜೂನ್ 30ರಿಂದ ನಿಮ್ಮ ಮನೆ ಬಾಗಿಲಿಗೆ ಬರಲಿರುವ ಈ ಕರಾಳ ಪ್ರಕ್ರಿಯೆಯ ಹಿಂದೆ ಅಡಗಿರುವ ಆಘಾತಕಾರಿ ರಾಜಕೀಯ ಪಿತೂರಿಗಳ ಬೆತ್ತಲೆ ಚಿತ್ರಣ ಇಲ್ಲಿದೆ.
ಏನಿದು ಎಸ್‌ಐಆರ್ ಜಾಲ? ಪ್ರಜಾಪ್ರಭುತ್ವದ ಮೇಲಿನ ವ್ಯವಸ್ಥಿತ ದಾಳಿ!
ಸಾಮಾನ್ಯವಾಗಿ ಮತದಾರರ ಪಟ್ಟಿ ಪರಿಷ್ಕರಣೆ ಎಂದರೆ ಪ್ರಜಾಪ್ರಭುತ್ವದ ಬಲವರ್ಧನೆಗೆ ಹೊಸಬರ ಹೆಸರು ಸೇರಿಸುವುದು ಎಂದರ್ಥ. ಆದರೆ, ಹಾಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ನೇತೃತ್ವದ ಆಯೋಗ ಜಾರಿಗೆ ತಂದಿರುವ ಎಸ್‌ಐಆರ್ (SIR) ಉದ್ದೇಶವೇ ಬೇರೆ ಇದೆ. ಇದು ಬಿಜೆಪಿಗೆ ಗೆಲುವಿನ ಹಾದಿಯನ್ನು ಸುಗಮಗೊಳಿಸಲು ಸಿದ್ಧಪಡಿಸಲಾದ ಒಂದು ರಾಜಕೀಯ ಬ್ಲೂಪ್ರಿಂಟ್.
ದೇಶದ 13 ರಾಜ್ಯಗಳಲ್ಲಿ ಒಟ್ಟು 60 ಕೋಟಿ ಮತದಾರರ ಪಟ್ಟಿಯನ್ನು ಪರಿಶೀಲನೆ ನೆಪದಲ್ಲಿ ಜಾಲಾಡಿರುವ ಆಯೋಗ, ಬರೋಬ್ಬರಿ 5.66 ಕೋಟಿ ಮತದಾರರನ್ನು ಮತಪಟ್ಟಿಯಿಂದಲೇ ಶಾಶ್ವತವಾಗಿ ಹೊರದೂಡಿದೆ! ಇಷ್ಟೊಂದು ಬೃಹತ್ ಸಂಖ್ಯೆಯ ನಾಗರಿಕರ ಸಾಂವಿಧಾನಿಕ ಹಕ್ಕನ್ನು ಕಸಿದುಕೊಳ್ಳುತ್ತಿದ್ದರೂ, ದೇಶದ ಅತ್ಯುನ್ನತ ನ್ಯಾಯಾಲಯವಾದ ಸುಪ್ರೀಂ ಕೋರ್ಟ್ ಮಾತ್ರ ‘ಜಾಣ ಕುರುಡು’ ಪ್ರದರ್ಶಿಸುತ್ತಾ, ತನಗೆ ಏನೂ ತಿಳಿಯದಂತೆ ಮೌನವಾಗಿ ಕುಳಿತಿರುವುದು ಪ್ರಜಾಪ್ರಭುತ್ವದ ಅತಿ ದೊಡ್ಡ ದುರಂತ.
ಇದನ್ನೂ ಓದಿ: West Bengal: ಬಿಜೆಪಿಯ ‘SIR ಕುತಂತ್ರ’ ಮತ್ತು ‘ಚುನಾವಣಾ ಆಯೋಗದ ಪಕ್ಷಪಾತ’ಕ್ಕೆ ಬಲಿಯಾದ ಮಮತಾ ಬ್ಯಾನರ್ಜಿ?
ಬಿಹಾರದ ಕಹಿ ಸತ್ಯ: 65 ಲಕ್ಷ ಜನರ ಹಕ್ಕು ಮಾತ್ರವಲ್ಲ, ಪೌರತ್ವಕ್ಕೇ ಕಂಟಕ!
ಎಸ್‌ಐಆರ್ (SIR) ಎಂಬ ಕರಾಳ ಸೂತ್ರಕ್ಕೆ ಮೊದಲ ಪ್ರಯೋಗಾಲಯವಾಗಿದ್ದು ಬಿಹಾರ. ಅಲ್ಲಿ ಮತಪಟ್ಟಿ ಶುದ್ಧೀಕರಣದ ಹೆಸರಿನಲ್ಲಿ ಬರೋಬ್ಬರಿ 65 ಲಕ್ಷ ಮತದಾರರನ್ನು ಪಟ್ಟಿಯಿಂದ ಕಿತ್ತೆಸೆಯಲಾಯಿತು. ಇದರ ನೇರ ಪರಿಣಾಮದಿಂದಾಗಿ ದಶಕಗಳ ಕಾಲ ಬಿಹಾರ ಆಳಿದ ಪ್ರಾದೇಶಿಕ ಪಕ್ಷಗಳಾದ ಜೆಡಿಯು ಮತ್ತು ಆರ್‌ಜೆಡಿ ನೆಲಕಚ್ಚಿ, ಬಿಜೆಪಿ ಮೊದಲ ಬಾರಿಗೆ ಅಧಿಕಾರದ ಗದ್ದುಗೆ ಹಿಡಿಯಿತು.
ಇದು ಕೇವಲ ಚುನಾವಣಾ ತಂತ್ರವಲ್ಲ, ಬದಲಾಗಿ ನಿರ್ದಿಷ್ಟ ಸಮುದಾಯಗಳನ್ನು ದೇಶದಿಂದಲೇ ಅಪ್ರಸ್ತುತಗೊಳಿಸುವ ಸಂಚು ಎಂಬುದಕ್ಕೆ ಬಿಹಾರದ ಮೊದಲ ಬಿಜೆಪಿ ಉಪಮುಖ್ಯಮಂತ್ರಿ ಸಾಮ್ರಾಟ್ ಚೌದರಿ ಅವರ ಹೇಳಿಕೆಯೇ ಸಾಕ್ಷಿ. “ಎಸ್‌ಐಆರ್ ಪ್ರಕ್ರಿಯೆಯಲ್ಲಿ ಮತಪಟ್ಟಿಯಿಂದ ಹೊರಗುಳಿದವರಿಗೆ ಸರ್ಕಾರದ ರೇಷನ್, ನಗದು ಸಹಾಯ, ಪಿಂಚಣಿ ಸಿಗುವುದಿಲ್ಲ; ಅವರ ಬ್ಯಾಂಕ್ ಪಾಸ್ ಬುಕ್ ಕೂಡ ರದ್ದಾಗಲಿದೆ” ಎಂದು ಅವರು ಬೆದರಿಕೆ ಹಾಕಿದ್ದಾರೆ. ಅಂದರೆ, ಮತಪಟ್ಟಿಯಲ್ಲಿ ಹೆಸರಿಲ್ಲದಿದ್ದರೆ ನೀವು ಈ ದೇಶದ ಪ್ರಜೆಯೇ ಅಲ್ಲ! ಈ ಹೇಳಿಕೆ ಇಡೀ ದೇಶದಾದ್ಯಂತ ಇರುವ ಎಸ್‌ಸಿ, ಎಸ್‌ಟಿ, ಒಬಿಸಿ ಹಾಗೂ ಮುಸ್ಲಿಂ ಸಮುದಾಯಗಳಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.
ಬಂಗಾಳದಲ್ಲಿ ಆಯೋಗದ ನಗ್ನ ನರ್ತನ: 91 ಲಕ್ಷ ಮತದಾರರು ಬಲಿ!
ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಆಯೋಗ ವರ್ತಿಸಿದ ರೀತಿ ಇಡೀ ಸಾಂವಿಧಾನಿಕ ವ್ಯವಸ್ಥೆಗೆ ಹಿಡಿದ ಕೈಗನ್ನಡಿ. ಮೊದಲ ಕರಡು ಪಟ್ಟಿಯಲ್ಲಿ ಬಿಜೆಪಿಯ ಸಾಂಪ್ರದಾಯಿಕ ಮತದಾರರಾದ ಹಿಂದೂಗಳ ಹೆಸರುಗಳೇ ಹೆಚ್ಚಾಗಿ ಹೊರಗುಳಿದಿದ್ದರಿಂದ ಕಂಗಾಲಾದ ಆಯೋಗ, ರಾತ್ರೋರಾತ್ರಿ ತನ್ನ ನಿಯಮಗಳನ್ನೇ ಬದಲಾಯಿಸಿತು! ಮುಸ್ಲಿಂ ಮತ್ತು ದಲಿತ ಸಮುದಾಯಗಳನ್ನು ಗುರಿಯಾಗಿಸಿಕೊಂಡು, ದಾಖಲೆಗಳಲ್ಲಿ ಸಣ್ಣ ಪುಟ್ಟ ವ್ಯಾಕರಣ ದೋಷಗಳು, ವಯಸ್ಸು ಅಥವಾ ಹೆಸರಿನಲ್ಲಿ ಅತಿ ಸಣ್ಣ ವ್ಯತ್ಯಾಸಗಳಿದ್ದರೂ ಅದನ್ನು ‘ಲಾಜಿಕಲ್ ಡಿಸ್ಕ್ರಿಪೆನ್ಸಿ’ (ಗಂಭೀರ ದೋಷ) ಎಂದು ಕರೆದು ಬರೋಬ್ಬರಿ 91 ಲಕ್ಷ ಮತದಾರರನ್ನು ಪಟ್ಟಿಯಿಂದ ಹೊರಹಾಕಲಾಯಿತು. ಮಮತಾ ಬ್ಯಾನರ್ಜಿ ಅವರ ತೀವ್ರ ಪ್ರತಿರೋಧದ ನಡುವೆಯೂ ಈ ವಂಚನೆ ಯಶಸ್ವಿಯಾಯಿತು. 27 ಲಕ್ಷ ಜನ ಕೋರ್ಟ್ ಮೆಟ್ಟಿಲೇರಿದರೂ ಕಳೆದ ಚುನಾವಣೆಯಲ್ಲಿ ಅವರಿಗೆ ಮತದಾನ ಮಾಡಲು ಆಯೋಗ ಬಿಡಲೇ ಇಲ್ಲ.
ಕರ್ನಾಟಕಕ್ಕೆ ಕಾದಿದೆ ಕಂಟಕ: 86 ಲಕ್ಷ ಕನ್ನಡಿಗರು ಹೊರಗುಳಿಯುವ ಭೀತಿ!
ಇದೇ ಜೂನ್ 30 ರಿಂದ ಕರ್ನಾಟಕದಲ್ಲಿ ಎಸ್‌ಐಆರ್ (SIR) ಕಾರ್ಯಾಚರಣೆಯ ೩ನೇ ಹಂತ ಆರಂಭವಾಗುತ್ತಿದೆ. ರಾಜಕೀಯ ಪರಿಣಿತರು ಮತ್ತು ಸಾಮಾಜಿಕ ಸಂಘಟನೆಗಳ ಕರಾರುವಾಕ್ ಅಂದಾಜಿನ ಪ್ರಕಾರ, ಈ ಪ್ರಕ್ರಿಯೆಯಿಂದಾಗಿ ಕರ್ನಾಟಕದ ಒಟ್ಟು 5.55 ಕೋಟಿ ಮತದಾರರಲ್ಲಿ ಸುಮಾರು 86 ಲಕ್ಷ ಮತದಾರರು (ಅಂದರೆ ಶೇ. 15ರಷ್ಟು ಜನ) ತಮ್ಮ ಮತಾಧಿಕಾರವನ್ನು ಕಳೆದುಕೊಳ್ಳಲಿದ್ದಾರೆ!
ಗ್ರಾಮೀಣ ಭಾಗದ ಬಡವರು, ದಲಿತರು, ಆದಿವಾಸಿಗಳು, ಮಹಿಳೆಯರು ಮತ್ತು ಕೂಲಿ ಅರಸಿ ಹೋಗುವ ವಲಸೆ ಕಾರ್ಮಿಕರ ಬಳಿ ವಾಸಸ್ಥಳದ ನಿಖರ ದಾಖಲೆಗಳು ಇರುವುದಿಲ್ಲ. ಇದನ್ನೇ ಬಂಡವಾಳ ಮಾಡಿಕೊಳ್ಳುವ ಆಯೋಗದ ಎಸ್‌ಐಆರ್ (SIR) ತಂಡಗಳು ಕಟ್ಟುನಿಟ್ಟಿನ ತಾಂತ್ರಿಕ ನಿಯಮಗಳನ್ನು ಹೇರಿ ಈ ಮುಗ್ಧ ಕನ್ನಡಿಗರ ಹೆಸರುಗಳನ್ನು ಕೈಬಿಡಲು ತಂತ್ರ ಹೂಡಿವೆ. ಕರ್ನಾಟಕದಲ್ಲಿ ಬಿಜೆಪಿಯ ಗೆಲುವಿನ ಹಾದಿಯನ್ನು ಸುಗಮಗೊಳಿಸಲು ಚುನಾವಣಾ ಆಯೋಗವೇ ಖುದ್ದಾಗಿ ಈ ಕಸರತ್ತು ನಡೆಸುತ್ತಿದೆ ಎಂದು ಸಾಮಾಜಿಕ ಹೋರಾಟಗಾರರು ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: SIR: ಪಶ್ಚಿಮ ಬಂಗಾಳದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ? 91 ಲಕ್ಷ ಮತದಾರರ ಹೆಸರು ಡಿಲೀಟ್!
ಸದನದಲ್ಲಿ ಚರ್ಚೆಯಾಗದ ಕರಾಳ ನಿಯಮಾವಳಿ: ಇದೊಂದು ವ್ಯವಸ್ಥಿತ ಸಂಚು
ಅತ್ಯಂತ ಆಘಾತಕಾರಿ ವಿಷಯವೆಂದರೆ, ದೇಶದ ಪ್ರಜೆಗಳ ಬದುಕನ್ನೇ ಬುಡಮೇಲು ಮಾಡಬಲ್ಲ ಈ ಎಸ್‌ಐಆರ್ ಪ್ರಕ್ರಿಯೆಯ ಕುರಿತು ದೇಶದ ಯಾವುದೇ ರಾಜ್ಯದ ಸದನದಲ್ಲಾಗಲಿ ಅಥವಾ ಸಂಸತ್ತಿನಲ್ಲಾಗಲಿ ಯಾವುದೇ ಮಸೂದೆಯನ್ನು ಮಂಡಿಸಿಲ್ಲ, ಸುದೀರ್ಘ ಚರ್ಚೆಯನ್ನೂ ನಡೆಸಿಲ್ಲ ಮತ್ತು ಪ್ರಜಾಪ್ರಭುತ್ವದ ನಿಯಮಗಳ ಪ್ರಕಾರ ಅನುಮೋದನೆಯನ್ನೂ ಪಡೆದಿಲ್ಲ!
ಚುನಾವಣಾ ಆಯೋಗವು ಯಾವುದೇ ಪಾರದರ್ಶಕತೆ ಇಲ್ಲದೆ, ಸಂಪೂರ್ಣ ಏಕಪಕ್ಷೀಯವಾಗಿ ಮತ್ತು ಸರ್ವಾಧಿಕಾರಿ ಧೋರಣೆಯಿಂದ ಈ ಕರಾಳ ನೀತಿಯನ್ನು ಜಾರಿಗೆ ತಂದಿದೆ. ಇದು ಅಕ್ಷರಶಃ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದ್ದು, ದಲಿತರು, ಬಡವರು, ಹಿಂದುಳಿದವರು ಹಾಗೂ ಮಹಿಳೆಯರ ಮತಾಧಿಕಾರವನ್ನೇ ಇಲ್ಲದಂತೆ ಮಾಡುವ ಬೃಹತ್ ಆಡಳಿತಾತ್ಮಕ ಸಂಚಾಗಿದೆ. ದೇಶಾದ್ಯಂತ ವಿರೋಧ ಪಕ್ಷಗಳನ್ನು ನಿರ್ನಾಮ ಮಾಡಿ, ಆಡಳಿತ ಪಕ್ಷದ ಏಕಸ್ವಾಮ್ಯವನ್ನು ಸ್ಥಾಪಿಸಲು ರೂಪಿಸಲಾಗಿರುವ ಈ ತಂತ್ರವನ್ನು ಪ್ರತಿಯೊಬ್ಬ ನಾಗರಿಕನೂ ವಿರೋಧಿಸಲೇಬೇಕಿದೆ.
ಕರ್ನಾಟಕದಲ್ಲಿ ಆಯೋಗದ ಎಸ್‌ಐಆರ್ ವೇಳಾಪಟ್ಟಿ ಹೀಗಿದೆ:
- ಜೂನ್ 20 ರಿಂದ 29: ಬಿಎಲ್‌ಒ (ಮತಗಟ್ಟೆ ಅಧಿಕಾರಿಗಳು) ಮತ್ತು ಸಿಬ್ಬಂದಿಗೆ ತರಬೇತಿ ಹಾಗೂ ಸಿದ್ಧತೆ.
- ಜೂನ್ 30 ರಿಂದ ಆಗಸ್ಟ್ 29: ಬಿಎಲ್‌ಒಗಳಿಂದ ಕಡ್ಡಾಯ ಮನೆ ಮನೆ ಭೇಟಿ ಮತ್ತು ಪರಿಶೀಲನೆ.
- ಆಗಸ್ಟ್ 29 ರೊಳಗೆ: ಮತಗಟ್ಟೆಗಳ ವೈಜ್ಞಾನಿಕ ಪುನರ್ ವಿಂಗಡಣೆ.
- ಸೆಪ್ಟೆಂಬರ್ 5: ಕರಡು ಮತದಾರರ ಪಟ್ಟಿ ಪ್ರಕಟಣೆ.
- ಆಗಸ್ಟ್ 5 ರಿಂದ ಸೆಪ್ಟೆಂಬರ್ 4: ಹೆಸರು ಬಿಟ್ಟು ಹೋಗಿದ್ದರೆ ಆಕ್ಷೇಪಣೆ ಸಲ್ಲಿಸಲು ಅವಕಾಶ.
- ಆಗಸ್ಟ್ 5 ರಿಂದ ಅಕ್ಟೋಬರ್ 3: ಹಕ್ಕು ಮತ್ತು ಆಕ್ಷೇಪಣೆಗಳ ವಿಲೇವಾರಿ.
- ಅಕ್ಟೋಬರ್ 7: ಅಂತಿಮ ಮತದಾರರ ಪಟ್ಟಿ ಪ್ರಕಟಣೆ.
ಅಸಲಿ ಸುದ್ದಿ ಕಳಕಳಿ: ಕನ್ನಡಿಗರೇ, ಈಗಲೇ ಎಚ್ಚೆತ್ತುಕೊಳ್ಳಿ!
ದೇಶದ ಇತರ ರಾಜ್ಯಗಳಲ್ಲಿ ಜನರು ಆಯೋಗದ ಈ ದಬ್ಬಾಳಿಕೆಯ ಮುಂದೆ ಅಸಹಾಯಕರಾಗಿದ್ದರು. ಆದರೆ, ಸ್ವಾಭಿಮಾನಿ ಕನ್ನಡಿಗರು ಇದನ್ನು ಸಹಿಸುವರೇ? ಅರ್ಧ ಕೋಟಿಗಿಂತಲೂ ಹೆಚ್ಚು ಮಂದಿಯ ಮತಾಧಿಕಾರವನ್ನು ಕಸಿದುಕೊಳ್ಳಲು ಸಂಚು ನಡೆಯುತ್ತಿದ್ದರೂ ನಾವು ಕೈಕಟ್ಟಿ ಕೂರಬೇಕೇ? ರಾಜಕೀಯ ಪಕ್ಷಗಳು ಕೇವಲ ಅಧಿಕಾರದ ಲಾಲಸೆಯಲ್ಲಿ ಮುಳುಗಿದ್ದರೆ ಸಾಲದು, ತಳಮಟ್ಟದಲ್ಲಿ ತಮ್ಮ ಮತದಾರರ ರಕ್ಷಣೆಗೆ ನಿಲ್ಲಬೇಕಿದೆ.
ಇದು ಕೇವಲ ರಾಜಕೀಯ ಪಕ್ಷಗಳ ಜವಾಬ್ದಾರಿಯಲ್ಲ, ಪ್ರತಿಯೊಬ್ಬ ನಾಗರಿಕನೂ ಎಚ್ಚೆತ್ತುಕೊಳ್ಳಬೇಕಾದ ತುರ್ತು ಸಮಯ. ಜೂನ್ 30 ರಿಂದ ನಿಮ್ಮ ಮನೆಗೆ ಬರುವ ಬಿಎಲ್‌ಒಗಳ ನಡೆಗಳನ್ನು ಸೂಕ್ಷ್ಮವಾಗಿ ಗಮನಿಸಿ. ನಿಮ್ಮ ಮತ್ತು ನಿಮ್ಮ ಕುಟುಂಬದ ಹೆಸರು ಮತಪಟ್ಟಿಯಲ್ಲಿ ಭದ್ರವಾಗಿದೆಯೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಸಣ್ಣ ಪುಟ್ಟ ತಪ್ಪುಗಳ ನೆಪ ಹೇಳಿ ನಿಮ್ಮ ಹೆಸರನ್ನು ಕೈಬಿಡಲು ಬಂದರೆ ತಕ್ಷಣ ಪ್ರಶ್ನಿಸಿ. ಇಲ್ಲದಿದ್ದರೆ, ಪ್ರಜಾಪ್ರಭುತ್ವದ ಅತಿ ದೊಡ್ಡ ಆಯುಧವಾದ ‘ವೋಟ್’ ನಮ್ಮ ಕೈಯಿಂದ ಕೈತಪ್ಪಿ, ನಾವೇ ನಮ್ಮ ದೇಶದಲ್ಲಿ ‘ದ್ವಿತೀಯ ದರ್ಜೆಯ ಪ್ರಜೆಗಳಾಗಿ’ ಬದುಕಬೇಕಾದ ಕರಾಳ ದಿನಗಳು ದೂರವಿಲ್ಲ!
(ನಿಮ್ಮ ಹಕ್ಕಿನ ರಕ್ಷಣೆಗಾಗಿ ಈ ಲೇಖನವನ್ನು ಗರಿಷ್ಠ ಸಂಖ್ಯೆಯಲ್ಲಿ ಹಂಚಿಕೊಳ್ಳಿ – ಅಸಲಿ ಸುದ್ದಿ)

