Homeರಾಜ್ಯCongress: ಲಂಗುಲಗಾಮಿಲ್ಲದ ಮಹಾದೇವಿ ಪೋಸ್ಟ್; ಶಾಸಕ ಉಮೇಶ್‌ಗೆ ಮುಜುಗರ, ಬಿಜೆಪಿಗೆ ಹಬ್ಬದೂಟ!

Congress: ಲಂಗುಲಗಾಮಿಲ್ಲದ ಮಹಾದೇವಿ ಪೋಸ್ಟ್; ಶಾಸಕ ಉಮೇಶ್‌ಗೆ ಮುಜುಗರ, ಬಿಜೆಪಿಗೆ ಹಬ್ಬದೂಟ!

ಬಾಗಲಕೋಟೆ: ಕಾಂಗ್ರೆಸ್‌ (Congress) ಅಂಗಳದಲ್ಲಿ ಗೆಲುವಿನ ಸಂಭ್ರಮ ಆಚರಿಸಬೇಕಾದ ಹೊತ್ತಲ್ಲೇ, ಬಾಗಲಕೋಟೆ ಕಾಂಗ್ರೆಸ್‌ನಲ್ಲಿ ಕುಟುಂಬ ರಾಜಕಾರಣದ ಕಿತ್ತಾಟ ಬೀದಿಗೆ ಬಂದು ಬಿದ್ದಿದೆ. ನೂತನ ಶಾಸಕ ಉಮೇಶ್ ಮೇಟಿ (Umesh Meti) ಅವರ ಸಹೋದರಿ ಮಹಾದೇವಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ನಡೆಸುತ್ತಿರುವ ‘ಪೋಸ್ಟ್ ವಾರ್’ ಈಗ ಜಿಲ್ಲಾ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಇದು ಶಾಸಕರಿಗೆ ತೀವ್ರ ಮುಜುಗರ ಉಂಟುಮಾಡುತ್ತಿದೆ. ಮಹಾದೇವಿ (Mahadevi Meti) ಅವರ ಈ ಅತೀರೇಕದ ವರ್ತನೆಯು ಪ್ರತಿಪಕ್ಷ ಬಿಜೆಪಿಗೆ ಟೀಕೆ ಮಾಡಲು ಬಲವಾದ ಅಸ್ತ್ರವನ್ನು ತಟ್ಟೆಯಲ್ಲಿಟ್ಟು ಬಡಿಸಿದಂತಾಗಿದೆ ಎಂಬ ಟೀಕೆಗಳು ವ್ಯಕ್ತವಾಗುತ್ತಿವೆ.

ಸಹೋದರನ ವರ್ಚಸ್ಸಿಗೆ ಧಕ್ಕೆ ತರುತ್ತಿದೆಯೇ ಮಹಾದೇವಿ ನಡೆ?

ಉಪಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿ ರಾಜ್ಯ ನಾಯಕರನ್ನು ಭೇಟಿ ಮಾಡುತ್ತಿರುವ ಉಮೇಶ್ ಮೇಟಿ ಅವರಿಗೆ, ಸ್ವತಃ ತಮ್ಮ ಸಹೋದರಿಯ ನಡವಳಿಕೆಯೇ ನುಂಗಲಾರದ ತುತ್ತಾಗಿ ಪರಿಣಮಿಸಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಶಾಸಕ ಉಮೇಶ್ ಮೇಟಿ ಅವರ ಜೊತೆಗಿರುವ ಆಪ್ತ ಹೊಳೆಬಸು ಶೆಟ್ಟರ್ (Helebasu Shettar) ಅವರ ಫೋಟೋ ಮೇಲೆ ಕ್ರಾಸ್ ಮಾರ್ಕ್ (X) ಹಾಕಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವುದು ಅತೀರೇಕದ ಪರಮಾವಧಿ ಎಂದು ವಿಶ್ಲೇಷಿಸಲಾಗುತ್ತಿದೆ. ಒಬ್ಬ ಜವಾಬ್ದಾರಿಯುತ ಕುಟುಂಬದ ಸದಸ್ಯೆಯಾಗಿ ಇಂತಹ ಪೋಸ್ಟ್ ಹಾಕುವುದು ಶಾಸಕರ ಘನತೆಗೆ ಕುಂದು ತರುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.

ಶೆಟ್ಟರ್ ವಿರುದ್ಧದ ‘ವೈಯಕ್ತಿಕ’ ಸಿಟ್ಟು ಪಕ್ಷಕ್ಕೆ ಡ್ಯಾಮೇಜ್?

ಹೊಳೆಬಸು ಶೆಟ್ಟರ್ ಅವರು ದಿ. ಹೆಚ್.ವೈ. ಮೇಟಿ ಅವರ ಕಾಲದಿಂದಲೂ ಕುಟುಂಬದ ಜೊತೆಗಿದ್ದವರು ಮತ್ತು ಸಿಎಂ ಸಿದ್ದರಾಮಯ್ಯ ಅವರಿಗೆ ಆಪ್ತರು ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ, ಈಗ ಅವರನ್ನು ಗುರಿಯಾಗಿಸಿಕೊಂಡು ಮಹಾದೇವಿ ಅವರು ನಡೆಸುತ್ತಿರುವ ದಾಳಿಯ ಹಿಂದೆ ವೈಯಕ್ತಿಕ ದ್ವೇಷ ಅಡಗಿದೆ ಎಂಬ ಗುಸುಗುಸು ಕೇಳಿಬರುತ್ತಿದೆ. ಟಿಕೆಟ್ ಹಂಚಿಕೆ ಸಂದರ್ಭದಲ್ಲೂ ತಮಗೇ ಟಿಕೆಟ್ ಬೇಕೆಂದು ಪಟ್ಟು ಹಿಡಿದಿದ್ದ ಮಹಾದೇವಿ, ಅಂತಿಮವಾಗಿ ಅದು ಸಾಧ್ಯವಾಗದಿದ್ದಾಗ ಈಗ ‘ಶ್ಯಾಡೋ ಶಾಸಕಿ’ಯಂತೆ ವರ್ತಿಸಲು ಯತ್ನಿಸುತ್ತಿದ್ದಾರೆ ಎಂಬ ಗಂಭೀರ ಆರೋಪಗಳು ಕಾಂಗ್ರೆಸ್ ವಲಯದಿಂದಲೇ ಕೇಳಿಬರುತ್ತಿವೆ.

ಹೊಳೆಬಸು ಶೆಟ್ಟರ್ ಅವರ ಹಸ್ತಕ್ಷೇಪವನ್ನೇ ಮುಂದಿಟ್ಟುಕೊಂಡು ಮಹಾದೇವಿ ಅವರು ಪೋಸ್ಟ್ ಹಾಕುತ್ತಿರುವುದು, ವಾಸ್ತವದಲ್ಲಿ ಶಾಸಕ ಉಮೇಶ್ ಮೇಟಿ ಅವರ ಆಡಳಿತಾತ್ಮಕ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನ ಎನ್ನಲಾಗುತ್ತಿದೆ. ಇದು ಕೇವಲ ಶೆಟ್ಟರ್ ವಿರುದ್ಧದ ಸಿಟ್ಟಲ್ಲ, ಬದಲಾಗಿ ಉಮೇಶ್ ಮೇಟಿ ಅವರ ಸುತ್ತಲ ಆಪ್ತವಲಯವನ್ನು ಚದುರಿಸುವ ತಂತ್ರ ಎಂಬ ಅನುಮಾನಗಳು ವ್ಯಕ್ತವಾಗಿವೆ.

ಇದನ್ನೂ ಓದಿ: Bagalkot: 74 ವರ್ಷಗಳ ರೆಕಾರ್ಡ್ ಬ್ರೇಕ್! ಮೇಟಿ ಪುತ್ರನ ಅಬ್ಬರಕ್ಕೆ ಚರಂತಿಮಠರ ರಾಜಕೀಯ ಭವಿಷ್ಯವೇ ಅಂತ್ಯ?

ಬಿಜೆಪಿಗೆ ಆಹಾರವಾದ ಕಾಂಗ್ರೆಸ್‌ನ ಒಳಜಗಳ

ಮಹಾದೇವಿ ಅವರ ಈ ಅತೀರೇಕದ ವರ್ತನೆಯನ್ನು ಬಿಜೆಪಿ ಸರಿಯಾಗಿಯೇ ಬಳಸಿಕೊಳ್ಳುತ್ತಿದೆ. “ಗೆದ್ದ ಕೆಲವು ದಿನಗಳಲ್ಲೇ ಶಾಸಕರ ಮನೆಯಲ್ಲಿ ಬೀದಿರಂಪ ಶುರುವಾಗಿದೆ, ಇನ್ನು ಇವರಿಂದ ಅಭಿವೃದ್ಧಿ ಸಾಧ್ಯವೇ?” ಎಂದು ಬಿಜೆಪಿ ಮುಖಂಡರು ಲೇವಡಿ ಮಾಡಲು ಶುರುಮಾಡಿದ್ದಾರೆ. ಈ ಪೋಸ್ಟ್‌ಗಳು ಬಿಜೆಪಿಗೆ ಕೇವಲ ಟೀಕೆ ಮಾಡಲು ಮಾತ್ರವಲ್ಲ, ಜಿಲ್ಲಾ ಕಾಂಗ್ರೆಸ್‌ನಲ್ಲಿ ಒಗ್ಗಟ್ಟಿಲ್ಲ ಎನ್ನುವುದನ್ನು ಸಾಬೀತುಪಡಿಸಲು ದೊಡ್ಡ ಪುರಾವೆಯಾಗಿ ಸಿಕ್ಕಂತಾಗಿದೆ. ಮಹಾದೇವಿ ಅವರ ಅನರ್ಥದ ಪೋಸ್ಟ್‌ಗಳು ಕಾಂಗ್ರೆಸ್ ಪಕ್ಷದ ಶಿಸ್ತನ್ನು ಹರಾಜು ಹಾಕುತ್ತಿವೆ ಎಂಬ ಆಕ್ರೋಶ ಸಾಮಾನ್ಯ ಕಾರ್ಯಕರ್ತರಲ್ಲಿ ಮನೆಮಾಡಿದೆ.

ಕಾಣದ ಕೈಗಳ ಪ್ರೇರಣೆ ಇದೆಯೇ?

ಮಹಾದೇವಿ ಅವರು ಇಷ್ಟೊಂದು ಬಹಿರಂಗವಾಗಿ ಕೆಂಡ ಕಾರುತ್ತಿರುವುದರ ಹಿಂದೆ ಜಿಲ್ಲೆಯ ಕೆಲವು ಪ್ರಭಾವಿ ಕಾಂಗ್ರೆಸ್ ನಾಯಕರ ಪ್ರಚೋದನೆ ಇರಬಹುದು ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ. ಶೆಟ್ಟರ್ ಅವರನ್ನು ರಾಜಕೀಯವಾಗಿ ಸೈಡ್‌ಲೈನ್ ಮಾಡಲು ಮಹಾದೇವಿ ಅವರನ್ನು ಮುಂಚೂಣಿಗೆ ಬಿಡಲಾಗುತ್ತಿದೆ ಎಂಬ ಮಾತುಗಳು ಜಿಲ್ಲಾ ರಾಜಕಾರಣದಲ್ಲಿ ಹರಿದಾಡುತ್ತಿವೆ. ಶಾಸಕ ಉಮೇಶ್ ಮೇಟಿ ಅವರಿಗೆ ಮುಜುಗರವಾಗುತ್ತದೆ ಎಂದು ತಿಳಿದಿದ್ದರೂ, ಮಹಾದೇವಿ ಅವರು ಅತೀರೇಕವಾಗಿ ವರ್ತಿಸುತ್ತಿರುವುದು ಯಾವುದೋ ದೊಡ್ಡ ಸಂಚಿನ ಭಾಗ ಇರಬಹುದು ಎಂದು ಶಂಕಿಸಲಾಗಿದೆ.

ಇದನ್ನೂ ಓದಿ: Veeranna Charantimath: ಚುನಾವಣೆ ಹೊತ್ತಲ್ಲೇ ಸೋಲನ್ನು ಆಹ್ವಾನಿಸಿದ್ದ ಚರಂತಿಮಠ; ಇರಲಾರದೆ ಇರುವೆ ಬಿಟ್ಟುಕೊಂಡ ಸ್ವಾಮಿಯ ಕಥೆ!

ಈಗಲೇ ಕಡಿವಾಣ ಹಾಕದಿದ್ದರೆ ಕಾಂಗ್ರೆಸ್‌ಗೆ ಅಪಾಯ

ಬಾಗಲಕೋಟೆ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಈ ಬೆಳವಣಿಗೆಯನ್ನು ಹೈಕಮಾಂಡ್ ಈಗಲೇ ಗಂಭೀರವಾಗಿ ಪರಿಗಣಿಸದಿದ್ದರೆ ಮುಂದಿನ ದಿನಗಳಲ್ಲಿ ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂಬ ಎಚ್ಚರಿಕೆಗಳು ಕೇಳಿಬರುತ್ತಿವೆ. ಗೆಲುವಿನ ಬೆನ್ನಲ್ಲೇ ಈ ರೀತಿಯ ಅತೀರೇಕದ ವರ್ತನೆಗಳು ಸಾರ್ವಜನಿಕರಲ್ಲಿ ಪಕ್ಷದ ಬಗ್ಗೆ ತಪ್ಪು ಸಂದೇಶ ರವಾನಿಸುತ್ತಿವೆ.

ಶಾಸಕ ಉಮೇಶ್ ಮೇಟಿ ಅವರು ತಮ್ಮ ಸಹೋದರಿಯ ಈ ನಡವಳಿಕೆಗೆ ತಕ್ಷಣವೇ ಬ್ರೇಕ್ ಹಾಕಬೇಕಿದೆ. ಇಲ್ಲದಿದ್ದರೆ, ಕುಟುಂಬದ ಸದಸ್ಯರ ಅತೀರೇಕದ ಹಾದಿಯೇ ಶಾಸಕರ ರಾಜಕೀಯ ಅವನತಿಗೆ ಕಾರಣವಾಗಬಹುದು ಎಂಬ ಆತಂಕ ತೀವ್ರವಾಗಿದೆ. ಒಟ್ಟಾರೆಯಾಗಿ, ಬಾಗಲಕೋಟೆಯಲ್ಲಿ ಮಹಾದೇವಿ ಮೇಟಿ ಅವರು ಆರಂಭಿಸಿರುವ ಈ ಪೋಸ್ಟ್ ಸಮರ ಕಾಂಗ್ರೆಸ್ ಪಕ್ಷಕ್ಕೆ ಮುಳ್ಳಾಗಿದ್ದು, ಬಿಜೆಪಿಗೆ ಮಾತ್ರ ಹಬ್ಬದೂಟ ಬಡಿಸಿದಂತಾಗಿದೆ ಎನ್ನುವುದು ಸದ್ಯದ ಕಟು ಸತ್ಯ.

Praveen Yalligutti
Praveen Yalliguttihttp://asalisuddi.com
ಕನ್ನಡದ ವಿವಿಧ ಸುದ್ದಿ ಮಾಧ್ಯಮ ಸಂಸ್ಥೆಗಳಲ್ಲಿ ಸುಮಾರು 8 ವರ್ಷಗಳ ಕಾಲ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ ನನಗಿದೆ. ಸುದ್ದಿಗಳ ಅಸಲಿಯತ್ತನ್ನು ಮತ್ತು ನಿಖರವಾದ ಮಾಹಿತಿಯನ್ನು ಜನರಿಗೆ ತಲುಪಿಸಬೇಕು ಎನ್ನುವ ಉದ್ದೇಶದಿಂದ ಈಗ 'ಅಸಲಿ ಸುದ್ದಿ' (Asali Suddi) ಎನ್ನುವ ಸುದ್ದಿ ಸಂಸ್ಥೆಯನ್ನು ಆರಂಭಿಸಿದ್ದೇನೆ. ಸತ್ಯಕ್ಕೆ ಹತ್ತಿರವಾದ ಮತ್ತು ಜನೋಪಕಾರಿ ವರದಿಗಳನ್ನು ನೀಡುವುದೇ ನನ್ನ ಮೊದಲ ಆದ್ಯತೆ.
RELATED ARTICLES

Most Popular

Recent Comments