Homeರಾಜ್ಯಬಾಗಲಕೋಟೆRB Timmapur: ಅಬಕಾರಿ ಸಚಿವರ ತವರಲ್ಲೇ ಎಗ್ಗಿಲ್ಲದ ಮದ್ಯದ ದರ್ಬಾರ್! ಮಾಧ್ಯಮ ರಂಗಕ್ಕೂ ಅಂಟಿದ 'ಸರಾಯಿ'...

RB Timmapur: ಅಬಕಾರಿ ಸಚಿವರ ತವರಲ್ಲೇ ಎಗ್ಗಿಲ್ಲದ ಮದ್ಯದ ದರ್ಬಾರ್! ಮಾಧ್ಯಮ ರಂಗಕ್ಕೂ ಅಂಟಿದ ‘ಸರಾಯಿ’ ಕಳಂಕ (Part 2)

ಬಾಗಲಕೋಟೆ: ರಾಜ್ಯದಲ್ಲಿ ಅಬಕಾರಿ ಹಗರಣ (Excise scam) ಸದ್ಯಕ್ಕೆ ದೊಡ್ಡ ಪ್ರಮಾಣದ ಕಂಪನ ಸೃಷ್ಟಿಸಿದೆ. ಅಬಕಾರಿ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವ ನಾಟಕವಾಡುವ ಸರ್ಕಾರ, ಇದರ ಹಿಂದೆ ಅಟ್ಟಹಾಸ ಮೆರೆಯುತ್ತಿರುವ ಮಾಫಿಯಾದ ಎದುರು ಅಕ್ಷರಶಃ ಮಂಡಿಯೂರಿ ಕುಳಿತಿದೆ. ಒಂದು ಕಡೆ ‘ವ್ಯಸನ ಮುಕ್ತ’ ಸಮಾಜದ ಸಂಕಲ್ಪದ ಜಪ ಮಾಡುವ ಸರ್ಕಾರವೇ, ದಿನದ 24 ಗಂಟೆಯೂ ಮದ್ಯದ ಅಂಗಡಿಗಳನ್ನು ತೆರೆಯಲು ಪರೋಕ್ಷವಾಗಿ ಕುಮ್ಮಕ್ಕು ನೀಡಿ ‘ಜಾಣ ಕುರುಡುತನ’ ಪ್ರದರ್ಶಿಸುತ್ತಿದೆ. ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ (RB Timmapur) ಅವರ ತವರು ಹಾಗೂ ಉಸ್ತುವಾರಿ ಜಿಲ್ಲೆಯಲ್ಲೇ ಬೆಳ್ಳಂಬೆಳಿಗ್ಗೆ 6 ಗಂಟೆಗೆ ಮದ್ಯದ ಮಳೆ ಸುರಿಯುತ್ತಿರುವುದು ಆಘಾತಕಾರಿ ಸಂಗತಿಯಾಗಿದೆ.

ಸಚಿವರ ಬೆಂಬಲಿಗರಿಗೆ ರಾಜಾತಿಥ್ಯ: ಪ್ರಾಮಾಣಿಕ ಸಣ್ಣದುದಾರರಿಗೆ ‘ಹಪ್ತಾ’ ಕಾಟ!

ಬಾಗಲಕೋಟೆ ಜಿಲ್ಲೆಯಲ್ಲಿ ಸಚಿವರು ತಮ್ಮ ಬೆಂಬಲಿಗ ಬಾರ್ ಮಾಲೀಕರಿಗೆ ಮದ್ಯದ ಅಮಲು ಹಂಚಲು ‘ಖುಲ್ಲಂಖುಲ್ಲಾ’ ಪರವಾನಗಿ ನೀಡಿದಂತಿದೆ. ಆದರೆ, ದಶಕಗಳಿಂದ ಇದೇ ಉದ್ಯಮ ನಂಬಿಕೊಂಡು ಬಂದಿರುವ ಸಣ್ಣದುದಾರರಿಗೆ ಮಾತ್ರ ಕಠಿಣ ನಿಯಮಗಳ ಅಸ್ತ್ರ ಪ್ರಯೋಗಿಸಲಾಗುತ್ತಿದೆ. ಅವರಿಗೆ ದಂಡ ವಿಧಿಸಿ, ಬೆದರಿಸಿ, ‘ಹಪ್ತಾ’ ವಸೂಲಿ ಮಾಡುವ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ.

ಅಯ್ಯಯ್ಯೋ ಕರ್ಮಕಾಂಡ: ಅಬಕಾರಿ ಇಲಾಖೆಯ ಲೂಟಿ ಅಡ್ಡ!

ಅಬಕಾರಿ ಇಲಾಖೆಯಡಿ ಸಣ್ಣದುದಾರರಿಗೆ CL-2, CL-4, CL-7, CL-9, CL-11C, CL-5, CL-18 ಅಂತೆಲ್ಲಾ ವಿಂಗಡಿಸಿ ಲೈಸೆನ್ಸ್ ನೀಡಲಾಗಿರುತ್ತದೆ. ಪ್ರತಿಯೊಂದಕ್ಕೂ ಅದರದ್ದೇ ಆದ ಕಟ್ಟುನಿಟ್ಟಿನ ನಿಯಮಗಳಿವೆ. ಆದರೆ ಅಚ್ಚುಕಟ್ಟಾಗಿ ನಡೆಸುವ ಉದ್ಯೋಗಸ್ಥರು ಅಬಕಾರಿ ಭ್ರಷ್ಟಾಚಾರಕ್ಕೆ ಅಕ್ಷರಶಃ ನಲುಗಿಹೋಗಿದ್ದಾರೆ. ಪ್ರತಿ ತಿಂಗಳು, ಪ್ರತಿ ಬಾರ್ ಮಾಲೀಕರು 18-20 ಸಾವಿರ ರೂಪಾಯಿ ಹಪ್ತಾ ನೋಡಲೇಬೇಕು! ಇಲ್ಲದಿದ್ದರೆ ನೋಟೀಸ್ ಮತ್ತು ದಂಡದ ಹೆಸರಿನಲ್ಲಿ ಕಿರುಕುಳಕ್ಕೆ ತುತ್ತಾಗುವುದು ಅನಿವಾರ್ಯ.

ಇನ್ನು ನಿಯಮಾವಳಿಗಳನ್ನು ಗಾಳಿಗೆ ತೂರಿ ಅಕ್ರಮವಾಗಿ ಮದ್ಯ ಮಾರಾಟ ಮಾಡುವವರಿಗೆ ಇಲ್ಲಿ ರತ್ನಗಂಬಳಿ ಹಾಸಲಾಗಿದೆ. ಬೆಳ್ಳಂಬೆಳಿಗ್ಗೆ 6 ಗಂಟೆಯಿಂದ ಮದ್ಯ ಮಾರಾಟ ಆರಂಭಿಸುವ ಮಂತ್ರಿ ಬೆಂಬಲಿಗರು, ರಾತ್ರಿ 12 ಗಂಟೆವರೆಗೂ ಯಾವುದೇ ಆತಂಕವಿಲ್ಲದೇ ರಾಜಾರೋಷವಾಗಿ ಮದ್ಯ ಹಂಚುತ್ತಾರೆ. ಇವರನ್ನು ಪ್ರಶ್ನಿಸಲು ಹೋದರೆ ಸಾಕ್ಷಾತ್ ಅಬಕಾರಿ ಅಧಿಕಾರಿಗಳಿಗೇ ಬೆದರಿಕೆ ಹಾಕುವಷ್ಟು ಮದವೇರಿದೆ ಈ ಮಂತ್ರಿ ಪಡೆಗೆ!

ಇದನ್ನೂ ಓದಿ: Media Masala: KPCC ಗೆ ಅಬಕಾರಿ ಮಿನಿಸ್ಟರ್ ದೋಖಾ? ಆಪ್ತ ಪತ್ರಕರ್ತ ಶಾಮೀಲು!

ಅಸಲಿ ಕಥೆ ಬೆನ್ನೇರಿ ಹೋದಾಗ ಬಯಲಾಯ್ತು ಮಂತ್ರಿಯ ಕಿಸೆ ಪುರಾಣ!

ಅಸಲಿ ಸುದ್ದಿ ಓದುಗರು ಅಬಕಾರಿ ಇಲಾಖೆಯ ಈ ಕರ್ಮಕಾಂಡವನ್ನು ಗಮನಕ್ಕೆ ತಂದ ಬಳಿಕ, ನಮ್ಮ ಸಂಸ್ಥೆಯ ಸಿಬ್ಬಂದಿ ವರ್ಗ ಖುದ್ದು ಫೀಲ್ಡ್‌ಗೆ ಇಳಿದು ‘ರಿಯಾಲಿಟಿ ಚೆಕ್’ ನಡೆಸಿತು. ಈ ವೇಳೆ ಅಬಕಾರಿ ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತ ಅನೇಕ ಉದ್ಯೋಗಸ್ಥ ಬಾರ್ ಮಾಲೀಕರು ಕಣ್ಣೀರಿಟ್ಟರು. “ಈ ನರಕದಿಂದ ನಮಗೆ ಯಾವಾಗ ಮುಕ್ತಿ ಸಿಗುತ್ತೆ?” ಎಂದು ತಮ್ಮ ನೋವು ತೋಡಿಕೊಂಡರು.

ಜಿಲ್ಲೆಯ 10ಕ್ಕೂ ಹೆಚ್ಚು ಬಾರ್ & ರೆಸ್ಟೋರೆಂಟ್ ಹಾಗೂ ಕ್ಲಬ್‌ಗಳಿಗೆ ಭೇಟಿ ನೀಡಿದಾಗ ಸಿಕ್ಕ ಮಾಹಿತಿ ಬೆಚ್ಚಿಬೀಳಿಸುವಂತಿದೆ. ಪ್ರತಿ ತಿಂಗಳು ಅಬಕಾರಿ ಸಣ್ಣದುದಾರರಿಂದ ಲಕ್ಷಾಂತರ ರೂಪಾಯಿ ಹಣ ಅನಾಮತ್ತಾಗಿ ಅಬಕಾರಿ ಮಂತ್ರಿಯ ಕಿಸೆಗೆ ಬೀಳುತ್ತದೆ ಎಂಬ ಮಾತುಗಳು ಎಲ್ಲೆಡೆ ಕೇಳಿಬಂದವು. ಅಬಕಾರಿ ಸಚಿವರ ಬೆಂಬಲಿಗರೇ ಇಲ್ಲಿ ಪ್ರಮುಖ ವಸೂಲಿಗಾರರು ಎಂಬುದು ಕಹಿ ಸತ್ಯ.

ಬಾಗಲಕೋಟೆಯಂತಹ ಜಿಲ್ಲಾ ಕೇಂದ್ರದಲ್ಲಿಯೇ ಇಂತಹ ಅರಾಜಕತೆ ತಲೆ ಎತ್ತಿದ್ದರೂ ಪ್ರತಿಪಕ್ಷವಾದ ಬಿಜೆಪಿ ಮಾತ್ರ ಕಣ್ಣುಮುಚ್ಚಿ ಕೂತಿರುವುದು ಅಚ್ಚರಿಯ ಸಂಗತಿ. ಈ ರೀತಿ ಬೆಂಗಳೂರಿನಲ್ಲಿ ನಿಯಮ ಮೀರಿ ಬೆಳ್ಳಂಬೆಳಿಗ್ಗೆ ಬಾರ್‌ ಓಪನ್‌ ಆದ ಮಳಿಗೆಗಳ ಮೇಲೆ ಇತ್ತೀಚೆಗೆ ಬಿಜೆಪಿಯ ಹಿರಿಯ ನಾಯಕ ಸುರೇಶ್‌ ಕುಮಾರ್‌ ಅವರು ದಾಳಿ ನಡೆಸಿದ್ದರು. ಆದರೂ ಎಚ್ಚೆತ್ತುಕೊಳ್ಳದ ಅಬಕಾರಿ ಇಲಾಖೆಯು ಕಣ್ಮುಚ್ಚಿ ಕುಳಿತಿದೆ. ಅದರಲ್ಲೂ ಅಬಕಾರಿ ಸಚಿವರ ತವರು ಜಿಲ್ಲೆಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿದೆ. ಈಗಲಾದರೂ ಪ್ರತಿಪಕ್ಷಗಳು ಈ ಬಗ್ಗೆ ಧ್ವನಿ ಎತ್ತುವ ಮೂಲಕ ಈ ಅರಾಜಕತೆಗೆ ಬ್ರೇಕ್‌ ಹಾಕಬೇಕಿದೆ…

ನೈಜತೆಯ ಅನಾವರಣ: ಮಾಧ್ಯಮ ರಂಗಕ್ಕೂ ಅಂಟಿದ ‘ಸರಾಯಿ’ ಕಳಂಕ!

ಬಾಗಲಕೋಟೆ ಹೊರವಲಯದ ಬಾದಾಮಿ ರಸ್ತೆಯಲ್ಲಿರುವ ‘ಮೋನಾಲಿಸಾ ಕ್ಲಬ್‌, ಬಾರ್ & ರೆಸ್ಟೋರೆಂಟ್’ ಒಳಹೊಕ್ಕು ನೋಡಿದರೆ ಯಾರಾದರೂ ಕಕ್ಕಾಬಿಕ್ಕಿ ಆಗುವುದು ಗ್ಯಾರಂಟಿ. ಇಲ್ಲಿ ಬೆಳ್ಳಂಬೆಳಿಗ್ಗೆ 6 ಗಂಟೆಯಿಂದಲೇ ಮದ್ಯ ಸುಲಲಿತವಾಗಿ ದೊರೆಯುತ್ತದೆ. CL-4 ಲೈಸೆನ್ಸ್ ಹೊಂದಿರುವ ಈ ಬಾರ್‌ನ ನಿಯಮದ ಪ್ರಕಾರ, ಚೆಸ್, ಕ್ಯಾರಂನಂತಹ ಒಳಾಂಗಣ ಕ್ರೀಡಾ ಸೌಲಭ್ಯ ಹೊಂದಿರಬೇಕು ಮತ್ತು ಕ್ಲಬ್ ಸದಸ್ಯರಿಗೆ ಮಾತ್ರ ಮದ್ಯ ಮಾರಾಟ ಮಾಡಬೇಕು. ಆದರೆ ಇಲ್ಲಿ ಅಂತಹ ಯಾವ ರೂಲ್ಸ್‌ಗಳಿಗೂ ಕವಡೆ ಕಾಸಿನ ಕಿಮ್ಮತ್ತಿಲ್ಲ!

ಇದಕ್ಕೆ ಅಸಲಿ ಕಾರಣವೇ ಬೇರೆ ಇದೆ. ಅಬಕಾರಿ ಸಚಿವರ ಆಪ್ತ ಹಾಗೂ ಪ್ರತಿಷ್ಠಿತ ಪತ್ರಿಕೆಯೊಂದರ (ಕನ್ನಡದ ಪ್ರಭೆಯಂತೆ ಕಂಗೊಳಿಸುವ ಪತ್ರಿಕೆ) ಜಿಲ್ಲಾ ವರದಿಗಾರನೇ ಈ ಬಾರ್‌ನ ಮಾಲೀಕ! ಹಾಗಾಗಿಯೇ ಅಬಕಾರಿ ಡಿಸಿ ಕೂಡ ಈತನ ಬಾರ್ ಕಡೆ ಕಿಂಚಿತ್ತೂ ಕಣ್ಣಾಡಿಸುವುದಿಲ್ಲ. ಅಷ್ಟರಮಟ್ಟಿಗೆ ಸಚಿವರ ಪ್ರಭಾವವನ್ನು ಅಧಿಕಾರಿಗಳ ಮೇಲೆ ಬೀರಲಾಗುತ್ತಿದೆ. “ಮಂತ್ರಿ ನಾನು ಹೇಳಿದಂತೆ ಕೇಳುತ್ತಾರೆ” ಎಂಬ ಧಾಟಿಯಲ್ಲಿ ಈ ಪತ್ರಕರ್ತ ಕಂ ಬಾರ್ ಮಾಲೀಕ ಅಧಿಕಾರಿಗಳಿಗೆ ಧಮ್ಕಿ ಹಾಕುತ್ತಾನೆ.

ಮೋನಾಲಿಸಾ ಬಾರ್‌ ಹಿಂಬದಿಯಿಂದ ಮದ್ಯ ಮಾರಾಟ
ಬೆಳ್ಳಂಬೆಳಿಗ್ಗೆ ಬಾರ್‌ ಎದುರು ಮದ್ಯ ಸೇವಿಸುತ್ತಿರುವ ಮದ್ಯವ್ಯಸನಿಗಳು

ಹಿರಿಯರಿಂದಲೇ ಹಾದಿ ತಪ್ಪಿದ ಪತ್ರಿಕೋದ್ಯಮ: ಆದರ್ಶಕ್ಕೆ ಎಳ್ಳುನೀರು!

ಈ ಅಬಕಾರಿ ಕಳಂಕ ಬಾಗಲಕೋಟೆಯ ಮಾಧ್ಯಮ ರಂಗಕ್ಕೂ ಅಂಟಿಕೊಂಡಿರುವುದರಿಂದ, ಇಲ್ಲಿನ ಪ್ರಾಮಾಣಿಕ ಪತ್ರಕರ್ತರು ತಾವು ‘ಮಾಧ್ಯಮದವರು’ ಎಂದು ಹೇಳಿಕೊಳ್ಳಲು ಹೇಸಿಗೆಪಡುವ ಸ್ಥಿತಿ ನಿರ್ಮಾಣವಾಗಿದೆ. ಈತನ ಬೆಂಬಲಕ್ಕೆ ಇಬ್ಬರು ಹಿರಿಯ ಪತ್ರಕರ್ತರು ನಿಂತಿರುವುದರಿಂದ ಅಕ್ರಮಗಳನ್ನು ಪ್ರಶ್ನಿಸಲಾಗದಂತಹ ಕಲುಷಿತ ವಾತಾವರಣ ಸೃಷ್ಟಿಯಾಗಿದೆ. ಆ ಹಿರಿಯ ಪತ್ರಕರ್ತರು ಈತನ ಅಣತಿಯಂತೆ ಕುಣಿಯುತ್ತಿದ್ದಾರೆ ಎಂದು ಇತರ ಪತ್ರಕರ್ತರು ಹಲಬುತ್ತಿದ್ದಾರೆ. ಆದರ್ಶಪ್ರಾಯವಾಗಬೇಕಿದ್ದ ಮಾಧ್ಯಮ ರಂಗ, ಹಿರಿಯ ಪತ್ರಕರ್ತರಿಂದಲೇ ದಾರಿ ತಪ್ಪಿದ ಮಗನಂತಾಗಿರುವುದು ಅತ್ಯಂತ ಶೋಚನೀಯ ಸಂಗತಿ.

ಈ ಹಗರಣ ಅಗೆದಷ್ಟು ಆಳವಾಗಿದ್ದು, ಕಾಲಕಾಲಕ್ಕೆ ನಮ್ಮ ‘ಅಸಲಿ ಸುದ್ದಿ’ ಸಂಸ್ಥೆಯು ಪ್ರತಿಯೊಂದು ಕರಾಳ ಸತ್ಯವನ್ನು ಬಯಲಿಗೆ ಎಳೆಯಲಿದೆ.

ಪ್ರಮುಖ ಲೈಸನ್ಸ್‌ ವಿಧಗಳು

  • CL-2 (Retail Off-Shop): ಇದು ಮದ್ಯದ ಅಂಗಡಿಗಳಿಗೆ ನೀಡುವ ಲೈಸೆನ್ಸ್. ಇಲ್ಲಿ ಬಾಟಲಿಗಳಲ್ಲಿ ಮದ್ಯ ಮಾರಾಟ ಮಾಡಬಹುದು, ಆದರೆ ಅಲ್ಲಿಯೇ ಕುಡಿಯಲು ಅವಕಾಶವಿಲ್ಲ. ಕನಿಷ್ಠ 180 ಮಿ.ಲೀ ಗಿಂತ ಕಡಿಮೆ ಪ್ರಮಾಣದ ಬಾಟಲಿ ಮಾರಾಟ ಮಾಡುವಂತಿಲ್ಲ.
  • CL-7 (Hotel & Boarding): ಕನಿಷ್ಠ ಸಂಖ್ಯೆಯ ರೂಮ್‌ಗಳನ್ನು ಹೊಂದಿರುವ ಹೋಟೆಲ್‌ ಅಥವಾ ಲಾಡ್ಜ್‌ಗಳಿಗೆ ನೀಡಲಾಗುತ್ತದೆ (ನಗರ ಪ್ರದೇಶಗಳಲ್ಲಿ ಕನಿಷ್ಠ 30 ರೂಮ್‌ಗಳು, ಇತರ ಪ್ರದೇಶಗಳಲ್ಲಿ 20 ರೂಮ್‌ಗಳು).
  • CL-9 (Bar and Restaurant): ಬಾರ್ ಮತ್ತು ರೆಸ್ಟೋರೆಂಟ್‌ಗಳಿಗೆ ನೀಡುವ ಪರವಾನಗಿ. ಇಲ್ಲಿ ಆಹಾರದ ಜೊತೆಗೆ ಮದ್ಯ ಪೂರೈಸಲು ಅವಕಾಶವಿರುತ್ತದೆ.
  • CL-11C (MSIL): ಸರ್ಕಾರಿ ಸ್ವಾಮ್ಯದ MSIL ಮಳಿಗೆಗಳಿಗೆ ನೀಡುವ ಚಿಲ್ಲರೆ ಮಾರಾಟದ ಪರವಾನಗಿ.
  • CL-4 (Clubs): ನೋಂದಾಯಿತ ಕ್ಲಬ್‌ಗಳಿಗೆ ನೀಡಲಾಗುತ್ತದೆ, ಇಲ್ಲಿ ಕೇವಲ ಸದಸ್ಯರಿಗೆ ಮಾತ್ರ ಮದ್ಯ ಪೂರೈಸಬಹುದು.
  • CL-5 (Occasion License): ಮದುವೆ, ಜಾತ್ರೆ ಅಥವಾ ಸಾರ್ವಜನಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ ಮದ್ಯ ಪೂರೈಸಲು ನೀಡುವ ತಾತ್ಕಾಲಿಕ ಪರವಾನಗಿ.
  • CL-18 (Micro-brewery): ಸ್ಥಳೀಯವಾಗಿ ಬೀರ್ ತಯಾರಿಸಿ ಅಲ್ಲಿಯೇ ಗ್ರಾಹಕರಿಗೆ ನೀಡಲು ಇರುವ ಪರವಾನಗಿ.
Praveen Yalligutti
Praveen Yalliguttihttp://asalisuddi.com
ಕನ್ನಡದ ವಿವಿಧ ಸುದ್ದಿ ಮಾಧ್ಯಮ ಸಂಸ್ಥೆಗಳಲ್ಲಿ ಸುಮಾರು 8 ವರ್ಷಗಳ ಕಾಲ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ ನನಗಿದೆ. ಸುದ್ದಿಗಳ ಅಸಲಿಯತ್ತನ್ನು ಮತ್ತು ನಿಖರವಾದ ಮಾಹಿತಿಯನ್ನು ಜನರಿಗೆ ತಲುಪಿಸಬೇಕು ಎನ್ನುವ ಉದ್ದೇಶದಿಂದ ಈಗ 'ಅಸಲಿ ಸುದ್ದಿ' (Asali Suddi) ಎನ್ನುವ ಸುದ್ದಿ ಸಂಸ್ಥೆಯನ್ನು ಆರಂಭಿಸಿದ್ದೇನೆ. ಸತ್ಯಕ್ಕೆ ಹತ್ತಿರವಾದ ಮತ್ತು ಜನೋಪಕಾರಿ ವರದಿಗಳನ್ನು ನೀಡುವುದೇ ನನ್ನ ಮೊದಲ ಆದ್ಯತೆ.
RELATED ARTICLES

Most Popular

Recent Comments