ಸಮಾಜದ ಆಸ್ತಿಯೋ ಅಥವಾ ಟ್ರಸ್ಟಿಗಳ ‘ಪ್ರೈವೇಟ್ ಲಿಮಿಟೆಡ್’ ಕಂಪನಿಯೋ?
ಹರಿಹರ ಪೀಠ: ಯಾವುದೇ ಒಂದು ಸಮಾಜದ ಮಠವೆಂದರೆ ಅದು ಕೇವಲ ಕಲ್ಲು-ಸಿಮೆಂಟಿನ ಕಟ್ಟಡವಲ್ಲ; ಅದು ಆ ಸಮುದಾಯದ ಅಸ್ಮಿತೆ, ಭರವಸೆ ಮತ್ತು ಸಂಸ್ಕಾರದ ತಾಯಿಬೇರು. ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠವೂ ಸಹ ಇಂತಹದ್ದೇ ಒಂದು ಪವಿತ್ರ ಆಶಯದೊಂದಿಗೆ ಸ್ಥಾಪಿತವಾದ ಕೇಂದ್ರ. ಆದರೆ, ಕಳೆದ ಕೆಲವು ದಿನಗಳಿಂದ ಮಠದ ಆವರಣದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಇಡೀ ನಾಡಿನ ಭಕ್ತ ಸಮೂಹ ತಲೆತಗ್ಗಿಸುವಂತೆ ಮಾಡಿದೆ. ಮಠದ ಟ್ರಸ್ಟಿಗಳು ಮತ್ತು ಪೀಠಾಧ್ಯಕ್ಷರಾದ ವಚನಾನಂದ ಶ್ರೀಗಳ ನಡುವಿನ ಈ ಸಂಘರ್ಷ ಈಗ ಬೀದಿಗೆ ಬಂದಿದೆ. “ಮಠಕ್ಕೆಂದು ಭಕ್ತರು ನೀಡಿದ ತನು-ಮನ-ಧನದ ಕಾಣಿಕೆ ಇಂದು ಕೆಲವೇ ಕೆಲವು ಸ್ವಾರ್ಥಿ ಟ್ರಸ್ಟಿಗಳ ಐಷಾರಾಮಿ ಜೀವನಕ್ಕೆ ಬಳಕೆಯಾಗುತ್ತಿದೆ” ಎಂಬುದು ಭಕ್ತ ಸಮೂಹದ ಪ್ರಮುಖ ಆರೋಪ. ‘ಲೆಕ್ಕ ಕೊಡಿ ಮನೆಗೆ ನಡಿ’ ಎಂಬ ಘೋಷಣೆ ಇಂದು ಕೇವಲ ಚಳುವಳಿಯ ಪದವಾಗಿ ಉಳಿದಿಲ್ಲ; ಅದು ದಶಕಗಳಿಂದ ಶೋಷಣೆಗೆ ಒಳಗಾದ, ನಂಬಿ ಮೋಸಹೋದ ಸಾಮಾನ್ಯ ಭಕ್ತರ ಆಕ್ರೋಶದ ಜ್ವಾಲೆಯಾಗಿ ಮಾರ್ಪಟ್ಟಿದೆ.
ಹಗರಣಗಳ ಸುನಾಮಿ: ಕೋಟಿ ಕೋಟಿ ಹಣಕ್ಕೆ ಸಿಗದ ಲೆಕ್ಕ!
ಈ ಇಡೀ ವಿವಾದದ ಕೇಂದ್ರಬಿಂದು ಮಠದ ಹಣಕಾಸಿನ ವ್ಯವಹಾರ. ವಚನಾನಂದ ಶ್ರೀಗಳು ಸಾರ್ವಜನಿಕವಾಗಿ ಬಿಚ್ಚಿಟ್ಟಿರುವ ಸತ್ಯಗಳು ಅಕ್ಷರಶಃ ಬೆಚ್ಚಿಬೀಳಿಸುವಂತಿವೆ. “ಪೀಠದ ಆರಂಭದ ದಿನಗಳಲ್ಲಿ ಹರಿದುಬಂದ 8 ಕೋಟಿ ರೂಪಾಯಿಗಳ ಪೈಕಿ 5 ಕೋಟಿ ರೂಪಾಯಿಗಳಿಗೆ ಯಾವುದೇ ದಾಖಲೆಗಳಿಲ್ಲ” ಎಂದು ಶ್ರೀಗಳು ನೇರ ಆರೋಪ ಮಾಡಿದ್ದಾರೆ. ಇನ್ನು ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಮತ್ತು ಹೋರಾಟಗಾರ ಎಂ.ಜಿ. ಪರಮೇಶ್ವರಗೌಡ ಅವರ ಪ್ರಕಾರ, ಸರ್ಕಾರ ಸಮಾಜದ ಅಭಿವೃದ್ಧಿಗಾಗಿ ನೀಡಿದ 10 ಕೋಟಿ ರೂಪಾಯಿಗಳ ಅನುದಾನವನ್ನು ಪಡೆಯಲು ಟ್ರಸ್ಟಿಗಳು ಆಡಳಿತಾಧಿಕಾರಿಗಳ ಸಹಿಯನ್ನೇ ಫೋರ್ಜರಿ ಮಾಡಿದ್ದಾರೆ! ಇದು ಕೇವಲ ಆಡಳಿತಾತ್ಮಕ ಲೋಪವಲ್ಲ, ಇದು ಕ್ರಿಮಿನಲ್ ಸ್ವರೂಪದ ವಂಚನೆ ಎಂಬುದು ಭಕ್ತರ ವಾದ.
“ಭಕ್ತರು ಬೆವರಿನ ಹನಿಯಂತೆ ದುಡಿದು ತಂದ ದವಸ-ಧಾನ್ಯಗಳಿಗೆ ಲೆಕ್ಕವಿಲ್ಲ, ಹುಂಡಿಗೆ ಬಿದ್ದ ಹಣಕ್ಕೆ ದಾಖಲೆಯಿಲ್ಲ. ಈ ಟ್ರಸ್ಟಿಗಳ ಪಾಲಿಗೆ ಮಠವೆಂದರೆ ಅದು ಲಾಭ ತರುವ ಒಂದು ಉದ್ದಿಮೆ” ಎಂದು ಹೋರಾಟಗಾರರು ಕಿಡಿಕಾರಿದ್ದಾರೆ. ಮಾಸಿಕ 4 ಲಕ್ಷ ರೂಪಾಯಿ ಖರ್ಚು ತೋರಿಸುತ್ತಿದ್ದ ಮಠದ ಆಡಳಿತ, ಪಾರದರ್ಶಕತೆ ಜಾರಿಯಾದ ತಕ್ಷಣ ಕೇವಲ ಒಂದೂವರೆ ಲಕ್ಷಕ್ಕೆ ಇಳಿದಿದೆ ಎಂದರೆ, ಪ್ರತಿ ತಿಂಗಳು ಭಕ್ತರ ಎರಡೂವರೆ ಲಕ್ಷ ರೂಪಾಯಿ ಯಾರ ಹೊಟ್ಟೆ ಸೇರುತ್ತಿತ್ತು? ಎಂಬ ಪ್ರಶ್ನೆ ಈಗ ಸಾರ್ವಜನಿಕ ವಲಯದಲ್ಲಿ ಬಲವಾಗಿ ಕೇಳಿಬರುತ್ತಿದೆ.
ಇದನ್ನೂ ಓದಿ: Bagalkot By-Election: 50:50 ಇದ್ದ ಫೈಟ್ ಈಗ 57:43! ಬಾಗಲಕೋಟೆ ‘ಬೇವರಿನ’ ಫಲಿತಾಂಶ- ಯಾರಿಗೆ ಜಯ? ಯಾರಿಗೆ ರಾಜಕೀಯ ವನವಾಸ?
ವಂಶಪಾರಂಪರ್ಯ ದರ್ಬಾರ್ ಮತ್ತು ರಹಸ್ಯ ಸಂಚು
ಮಠವೆಂದರೆ ಅದು ಸಾರ್ವಜನಿಕ ಆಸ್ತಿ. ಆದರೆ ಇಲ್ಲಿ ಟ್ರಸ್ಟಿಗಳು ತಮ್ಮ ಮಾವ, ಅಳಿಯ ಮತ್ತು ಸಂಬಂಧಿಕರನ್ನೇ ತುಂಬಿಸಿಕೊಂಡು ಮಠವನ್ನು ‘ಫ್ಯಾಮಿಲಿ ಪ್ರಾಪರ್ಟಿ’ ಮಾಡಿಕೊಂಡಿದ್ದಾರೆ ಎಂಬುದು ಸಮಾಜದ ಪ್ರಮುಖರ ದೂರು. “2008 ರಿಂದ ಅಧಿಕಾರಕ್ಕೆ ಅಂಟಿಕೊಂಡಿರುವ ಈ 12 ಜನ ಟ್ರಸ್ಟಿಗಳು ಪೀಠದ ಹಿತಕ್ಕಿಂತ ತಮ್ಮ ವೈಯಕ್ತಿಕ ಆಸ್ತಿ ವೃದ್ಧಿಸಿಕೊಳ್ಳುವುದರಲ್ಲೇ ಮಗ್ನರಾಗಿದ್ದಾರೆ” ಎಂಬ ಆರೋಪಕ್ಕೆ ಪುಷ್ಟಿ ನೀಡುವಂತೆ ಮಠದ ಆವರಣದಲ್ಲಿ ರಹಸ್ಯ ಸಭೆಗಳು ನಡೆಯುತ್ತಿವೆ. ಮಠದ ಜಾಗದಲ್ಲಿ ಪ್ರತ್ಯೇಕ ಟ್ರಸ್ಟ್ ರಚಿಸಿ, ಶಿಕ್ಷಣ ಸಂಸ್ಥೆಗಳನ್ನು ಮಠದಿಂದ ಬೇರ್ಪಡಿಸಿ ಸ್ವಂತಕ್ಕೆ ಮಾಡಿಕೊಳ್ಳುವ ಇವರ ‘ರಿಯಲ್ ಎಸ್ಟೇಟ್ ಬಿಸಿನೆಸ್ ಮೈಂಡ್’ ಸಮಾಜದ ಕೆಂಗಣ್ಣಿಗೆ ಗುರಿಯಾಗಿದೆ.
ತಮ್ಮ ಅಕ್ರಮಗಳಿಗೆ ಅಡ್ಡಿಯಾಗುವ ಸ್ವಾಮೀಜಿಗಳನ್ನು ಹೊರಹಾಕುವುದು ಇವರ ಹಳೇ ಚಾಳಿ ಎಂಬುದು ಭಕ್ತರ ಆರೋಪ. “ಹಿಂದೆ ಸಿದ್ದಲಿಂಗ ಸ್ವಾಮೀಜಿಯವರನ್ನು ಹೇಗೆ ರಾತ್ರೋರಾತ್ರಿ ಹೊರಹಾಕಿದ್ದರೋ, ಈಗ ವಚನಾನಂದ ಶ್ರೀಗಳ ಮೇಲೆ ಅದೇ ತಂತ್ರ ಹೂಡಿದ್ದಾರೆ” ಎಂದು ಭಕ್ತರು ಆಕ್ರೋಶ ಹೊರಹಾಕುತ್ತಿದ್ದಾರೆ. ಸ್ವಾಮೀಜಿಗಳು ಟ್ರಸ್ಟಿಗಳ ತಾಳಕ್ಕೆ ತಕ್ಕಂತೆ ಕುಣಿಯದಿದ್ದರೆ ಅಥವಾ ಲೆಕ್ಕ ಕೇಳಿದರೆ ಸಾಕು, ಅವರ ಮೇಲೆ ಚಾರಿತ್ರ್ಯಹರಣ ಮಾಡಿ ಪದಚ್ಯುತಗೊಳಿಸುವ ಸಂಚು ರೂಪಿಸಲಾಗುತ್ತಿದೆ ಎಂದು ವಚನಾನಂದ ಶ್ರೀಗಳು ಸಾರ್ವಜನಿಕವಾಗಿಯೇ ದೂರಿದ್ದಾರೆ.
ವಚನಾನಂದ ಶ್ರೀಗಳ ವೀರಾವೇಶ: “ನಾನು ಪೀಠ ಬಿಡುವುದಿಲ್ಲ”
ಸಾಮಾನ್ಯವಾಗಿ ಸನ್ಯಾಸಿಗಳು ವಿವಾದಗಳಿಂದ ದೂರವಿರುತ್ತಾರೆ. ಆದರೆ ವಚನಾನಂದ ಶ್ರೀಗಳು ಇಂದು ಸಮಾಜದ ಆಸ್ತಿಯ ರಕ್ಷಣೆಗಾಗಿ ರಣಚಂಡಿಯಾಗಿದ್ದಾರೆ. “ನನ್ನ ವಿರುದ್ಧ ಆರ್ಥಿಕ ಆಪಾದನೆ ಮಾಡಲು ಸಾಧ್ಯವಿಲ್ಲದ ಈ ಟ್ರಸ್ಟಿಗಳು, ಯೋಗ ಪೀಠದ ನೆಪವೊಡ್ಡಿ ನನ್ನನ್ನು ಪದಚ್ಯುತಗೊಳಿಸಲು ಹೊರಟಿದ್ದಾರೆ. ಸಿಸಿ ಕ್ಯಾಮೆರಾಗಳನ್ನು ಕದ್ದು, ದಾಖಲೆಗಳನ್ನು ನಾಶ ಮಾಡಿ ನನ್ನನ್ನು ಹೆದರಿಸಬಹುದು ಎಂದುಕೊಂಡಿದ್ದಾರೆ. ಆದರೆ ನಾನು ಈ ಪೀಠ ಬಿಟ್ಟು ಕದಲುವುದಿಲ್ಲ” ಎಂದು ಶ್ರೀಗಳು ನೀಡಿದ ಎಚ್ಚರಿಕೆ ಟ್ರಸ್ಟಿಗಳ ಎದೆಯಲ್ಲಿ ನಡುಕ ಹುಟ್ಟಿಸಿದೆ.
ಶ್ರೀಗಳ ಈ ಮಾತುಗಳು ಭಕ್ತರಲ್ಲಿ ಹೊಸ ಸಂಚಲನ ಮೂಡಿಸಿವೆ. “ಮಠಕ್ಕೆ ದ್ರೋಹ ಬಗೆದ ಟ್ರಸ್ಟಿಗಳೇ ಎಕ್ಸಿಟ್ ಆಗಬೇಕೇ ಹೊರತು, ಸಮಾಜ ಕಟ್ಟಿದ ಸ್ವಾಮೀಜಿಗಳಲ್ಲ” ಎಂಬ ಸಂದೇಶ ಈಗ ಹಳ್ಳಿ ಹಳ್ಳಿಗಳಿಗೆ ತಲುಪಿದೆ. ಪೊಲೀಸರ ರಕ್ಷಣೆ ಪಡೆದು, ಭಕ್ತರನ್ನು ಮಠದ ಗೇಟಿನ ಹೊರಗೆ ಬಿಸಿಲಿನಲ್ಲಿ ನಿಲ್ಲಿಸಿ ಮಠದೊಳಗೆ ಮೋಜು ಮಾಡುವ ಟ್ರಸ್ಟಿಗಳ ಅಸಹಾಯಕತೆ ಇವತ್ತು ಜಗಜ್ಜಾಹೀರಾಗಿದೆ.
ಆ್ಯಂಟಿ-ಲಿಂಗಾಯತ ಮತ್ತು ಆ್ಯಂಟಿ-ಹಿಂದೂ ಮನಸ್ಥಿತಿ?
ಶ್ರೀಗಳ ಆರೋಪದ ಪಟ್ಟಿಯಲ್ಲಿ ಮತ್ತೊಂದು ಸ್ಫೋಟಕ ವಿಷಯವೆಂದರೆ ಮಠದೊಳಗಿನ ವಿಚಾರಧಾರೆ. “ಮಠದೊಳಗೆ ಜಗಜ್ಯೋತಿ ಬಸವಣ್ಣನವರ ಫೋಟೋ ಹಾಕಲು ಬಿಡದ ಟ್ರಸ್ಟಿಗಳು ಆ್ಯಂಟಿ-ಲಿಂಗಾಯತ ಮತ್ತು ಆ್ಯಂಟಿ-ಹಿಂದೂ ಮನಸ್ಥಿತಿ ಹೊಂದಿದ್ದಾರೆ” ಎಂದು ಶ್ರೀಗಳು ನೇರವಾಗಿಯೇ ಸಭೆಯಲ್ಲಿ ವಾಗ್ದಾಳಿ ನಡೆಸಿದ್ದಾರೆ. ಲಿಂಗಾಯತ ಸಂಸ್ಕೃತಿಯನ್ನು ವಿರೋಧಿಸುವ ಇವರು ಕೇವಲ ಹಣಕ್ಕಾಗಿ ಧರ್ಮದ ಮುಖವಾಡ ಧರಿಸಿದ ಬೂಟಾಟಿಕೆಕೋರರು ಎಂಬುದು ಭಕ್ತರ ಬಲವಾದ ಆರೋಪ. ಸಮಾಜದ ಬಡ ಮಕ್ಕಳ ಶಿಕ್ಷಣಕ್ಕೆ ಒಂದು ರೂಪಾಯಿ ಖರ್ಚು ಮಾಡದ ಇವರು, ಐಷಾರಾಮಿ ಕಟ್ಟಡಗಳ ಹೆಸರಿನಲ್ಲಿ ಕಮಿಷನ್ ದಂಧೆ ನಡೆಸುತ್ತಿದ್ದಾರೆ ಎಂಬುದು ಹೋರಾಟಗಾರರ ವಾದ.
ಸಮಾಜಕ್ಕೆ ಎಚ್ಚರಿಕೆ: ಈಗ ಜಾಗೃತವಾಗದಿದ್ದರೆ ಮುಂದೆ ದಾರಿಯಿಲ್ಲ!
ಹರಿಹರ ಪೀಠದ ಈ ಹೋರಾಟ ಕೇವಲ ವಚನಾನಂದ ಶ್ರೀಗಳ ವೈಯಕ್ತಿಕ ಹೋರಾಟವಲ್ಲ. ಇದು ಪ್ರತಿಯೊಬ್ಬ ಪಂಚಮಸಾಲಿ ಭಕ್ತನ ಸ್ವಾಭಿಮಾನದ ಹೋರಾಟ. “ಮಠದ ಆಸ್ತಿಯನ್ನು ಲೂಟಿ ಮಾಡುತ್ತಿರುವ ಈ ಪರಾವಲಂಬಿ ಜೀವಿಗಳನ್ನು ಒದ್ದು ಓಡಿಸದಿದ್ದರೆ, ಮುಂದಿನ ಪೀಳಿಗೆಗೆ ಈ ಮಠ ಉಳಿಯುವುದಿಲ್ಲ” ಎಂದು ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಎಚ್ಚರಿಸಿದ್ದಾರೆ. ಭಕ್ತರ ಬೆವರಿನ ಹಣಕ್ಕೆ ಕನ್ನ ಹಾಕುವವರನ್ನು ಸಮಾಜ ಎಂದೂ ಕ್ಷಮಿಸುವುದಿಲ್ಲ.
‘ಲೆಕ್ಕ ಕೊಡಿ ಮನೆಗೆ ನಡಿ’ ಎಂಬುದು ಈಗ ಕೇವಲ ಘೋಷಣೆಯಲ್ಲ, ಅದೊಂದು ಕ್ರಾಂತಿಯ ಕಿಚ್ಚು. ಟ್ರಸ್ಟಿಗಳು ಸಾರ್ವಜನಿಕವಾಗಿ ಪ್ರತಿಯೊಂದು ರೂಪಾಯಿಗೂ ಲೆಕ್ಕ ಕೊಡಲೇಬೇಕು. ಹಣದ ವ್ಯವಹಾರದಲ್ಲಿ ಪಾರದರ್ಶಕತೆ ಇಲ್ಲದಿದ್ದರೆ ಅವರು ಅಧಿಕಾರದಲ್ಲಿರುವ ನೈತಿಕ ಹಕ್ಕನ್ನು ಕಳೆದುಕೊಳ್ಳುತ್ತಾರೆ. ಮಠದ ಗೇಟಿನ ಮುಂದೆ ಶುರುವಾದ ಈ ಆಕ್ರೋಶ, ಭ್ರಷ್ಟ ಟ್ರಸ್ಟಿಗಳ ಸಾಮ್ರಾಜ್ಯವನ್ನು ಸುಟ್ಟು ಹಾಕುವವರೆಗೂ ತಣ್ಣಗಾಗಬಾರದು ಎನ್ನುವುದು ಸಮಾಜದ ಆಶಯವಾಗಿದೆ.
ತೀರ್ಪು ಭಕ್ತರ ಕೈಯಲ್ಲಿದೆ
ಪೊಲೀಸ್ ಬಂದೋಬಸ್ತ್ ನಡುವೆ, 144 ಜಾರಿಗೊಳಿಸಿ ಮಠದೊಳಗೆ ಅಡಗಿರುವ ಟ್ರಸ್ಟಿಗಳಿಗೆ ಭಕ್ತರ ಶಕ್ತಿ ಏನು ಎಂಬುದು ಶೀಘ್ರವೇ ತಿಳಿಯಲಿದೆ. ವಚನಾನಂದ ಶ್ರೀಗಳು ಹೇಳಿದಂತೆ, “ಭಕ್ತರೇ ಭೂಮಿ ಮೇಲಿನ ಭಗವಂತ”. ಆ ಭಗವಂತ ಈಗ ಕಣ್ಣು ಬಿಟ್ಟಿದ್ದಾನೆ. ಲೂಟಿಕೋರರ ಅಧಿಪತ್ಯಕ್ಕೆ ಅಂತ್ಯಕಾಲ ಹತ್ತಿರವಾಗಿದೆ. ಇದು ಕೇವಲ ಆಡಳಿತಾತ್ಮಕ ಕಲಹವಲ್ಲ; ಇದು ಸತ್ಯ ಮತ್ತು ಅಧರ್ಮದ ನಡುವಿನ ಧರ್ಮಯುದ್ಧ.
ಹರಿಹರದ ಈ ಪವಿತ್ರ ಕ್ಷೇತ್ರದಲ್ಲಿ ಸತ್ಯಕ್ಕೆ ಜಯ ಸಿಗಲಿ, ಭಕ್ತರ ಹಣ ಸಮಾಜದ ಕಟ್ಟಕಡೆಯ ಮನುಷ್ಯನ ಸೇವೆಗೆ ಬಳಕೆಯಾಗಲಿ. ಅಲ್ಲಿಯವರೆಗೆ ಭಕ್ತರ ಚಳುವಳಿ ನಿಲ್ಲದು, ಈ ಲೇಖನವನ್ನೋದುವ ಪ್ರತಿಯೊಬ್ಬ ಸಮಾಜ ಬಾಂಧವರ ಆಕ್ರೋಶವೂ ಆರುವುದಿಲ್ಲ. ಲೂಟಿಕೋರರೇ ಎಚ್ಚರ, ಭಕ್ತರ ತಾಳ್ಮೆಗೂ ಮಿತಿಯಿದೆ!

