Homeರಾಜ್ಯBagalkot: ಬಿಜೆಪಿ ಅಭ್ಯರ್ಥಿ ಚರಂತಿಮಠ ಪುತ್ರ & ಗ್ಯಾಂಗ್‌ನಿಂದ NSUI ಕಾರ್ಯಕರ್ತರ ಮೇಲೆ ಹಲ್ಲೆ ಆರೋಪ!...

Bagalkot: ಬಿಜೆಪಿ ಅಭ್ಯರ್ಥಿ ಚರಂತಿಮಠ ಪುತ್ರ & ಗ್ಯಾಂಗ್‌ನಿಂದ NSUI ಕಾರ್ಯಕರ್ತರ ಮೇಲೆ ಹಲ್ಲೆ ಆರೋಪ! ಶಿಕ್ಷಣ ಸಂಸ್ಥೆಗಳಲ್ಲಿ ವೋಟಿಗಾಗಿ ದಬ್ಬಾಳಿಕೆ?

ಬಾಗಲಕೋಟೆ (Bagalkot): ಉಪ ಚುನಾವಣೆಯ ರಣಕಣವು ಮತದಾನದ ದಿನ ಹತ್ತಿರವಾಗುತ್ತಿದ್ದಂತೆ ಕೇವಲ ಮಾತಿನ ಸಮರಕ್ಕೆ ಸೀಮಿತವಾಗದೆ ಇದೀಗ ದೈಹಿಕ ಸಂಘರ್ಷದ ಹಂತಕ್ಕೆ ತಲುಪಿದೆ. ವಿದ್ಯಾರ್ಥಿಗಳಿಗೆ ಸಂವಿಧಾನಬದ್ಧ ಮತದಾನದ ಹಕ್ಕಿನ ಬಗ್ಗೆ ಜಾಗೃತಿ ಮೂಡಿಸಲು ಮುಂದಾದ NSUI (ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ) ಕಾರ್ಯಕರ್ತರ ಮೇಲೆ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರ ಪುತ್ರ ನವೀನ್ ಚರಂತಿಮಠ ಮತ್ತು ಅವರ ಬೆಂಬಲಿಗರ ಗುಂಪು ಹಲ್ಲೆ ನಡೆಸಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಇದು ಜಿಲ್ಲೆಯಾದ್ಯಂತ ತೀವ್ರ ರಾಜಕೀಯ ಸಂಚಲನ ಮೂಡಿಸಿದೆ.

ಘಟನೆಯ ಹಿನ್ನೆಲೆ: ಶೈಕ್ಷಣಿಕ ಒತ್ತಡ ಮತ್ತು ಜಾಗೃತಿ ಕರಪತ್ರ

ಈ ವಿವಾದದ ಮೂಲವಿರುವುದು ಬಾಗಲಕೋಟೆಯ ಪ್ರತಿಷ್ಠಿತ ಬಸವೇಶ್ವರ ವಿದ್ಯಾವರ್ಧಕ ಸಂಘದ (BVV) ಕುಮಾರೇಶ್ವರ ಮೆಡಿಕಲ್‌ ಕಾಲೇಜು ಕ್ಯಾಂಪಸ್‌ನಲ್ಲಿ. ‘ಅಸಲಿ ಸುದ್ದಿ’ ನ್ಯೂಸ್ ವೆಬ್‌ಸೈಟ್‌ನ ತನಿಖಾ ವರದಿಯ ಪ್ರಕಾರ, ಈ ಸಂಸ್ಥೆಯ ಅಡಿಯಲಿರುವ ಕೆಲವು ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಮೇಲೆ ಬಿಜೆಪಿ ಪರ ಮತ ಹಾಕುವಂತೆ ವ್ಯವಸ್ಥಿತ ಒತ್ತಡ ಹೇರಲಾಗುತ್ತಿದೆ ಎಂಬ ದೂರುಗಳು ಕೇಳಿಬಂದಿದ್ದವು. ಪ್ರಾಂಶುಪಾಲರು ಮತ್ತು ಕೆಲವು ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಕರೆದು, “ಬಿಜೆಪಿಗೆ ಮತ ಹಾಕದಿದ್ದರೆ ಆಂತರಿಕ ಅಂಕಗಳಲ್ಲಿ (Internal Marks) ತೊಂದರೆ ಕೊಡುವುದಾಗಿ ಮತ್ತು ಪರೀಕ್ಷೆಯಲ್ಲಿ ನಪಾಸ್ ಮಾಡುವುದಾಗಿ” ಬೆದರಿಕೆ ಹಾಕುತ್ತಿದ್ದಾರೆ ಎನ್ನಲಾಗಿತ್ತು.

ಈ ಬೆದರಿಕೆಯಿಂದ ಕಂಗೆಟ್ಟಿದ್ದ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಲು NSUI ಸಂಘಟನೆ ಮುಂದಾಗಿತ್ತು. “ನಿಮ್ಮ ಮತ ನಿಮ್ಮ ಹಕ್ಕು, ಯಾವುದೇ ಒತ್ತಡಕ್ಕೆ ಮಣಿಯಬೇಡಿ” ಎಂಬ ಸಂದೇಶವಿರುವ ಕರಪತ್ರಗಳನ್ನು ಹಿಡಿದು ಕಾರ್ಯಕರ್ತರು ಬಸವೇಶ್ವರ ಮೆಡಿಕಲ್ ಕಾಲೇಜು ಕ್ಯಾಂಪಸ್‌ಗೆ ತೆರಳಿದ್ದರು. ಅಷ್ಟೇ ಅಲ್ಲದೆ, “ಅಕ್ರಮವಾಗಿ ಎರಡು ಕಡೆ ಮತದಾನ (Double Voting) ಮಾಡುವುದು ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧ, ಇದಕ್ಕೆ ಪ್ರಚೋದಿಸುವವರ ಮಾತು ಕೇಳಿ ನಿಮ್ಮ ಭವಿಷ್ಯ ಹಾಳು ಮಾಡಿಕೊಂಡು ಜೈಲು ಪಾಲಾಗಬೇಡಿ” ಎಂಬ ಕಾನೂನು ಅರಿವನ್ನು ಆ ಕರಪತ್ರದ ಮೂಲಕ ಮೂಡಿಸಲಾಗುತ್ತಿತ್ತು.

ಚರಂತಿಮಠ ಪುತ್ರ ಮತ್ತು ಗ್ಯಾಂಗ್‌ನಿಂದ ದೌರ್ಜನ್ಯದ ಆರೋಪ?

NSUI ಕಾರ್ಯಕರ್ತರು ಕರಪತ್ರ ಹಂಚುತ್ತಿರುವ ವಿಷಯ ತಿಳಿಯುತ್ತಿದ್ದಂತೆ, ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರ ಪುತ್ರ ನವೀನ್ ಚರಂತಿಮಠ ಅವರು ತಮ್ಮ ನೂರಾರು ಜನರ ದೊಡ್ಡ ಪಡೆಯೊಂದಿಗೆ ಸ್ಥಳಕ್ಕೆ ಧಾವಿಸಿದ್ದಾರಂತೆ! ಸಂತ್ರಸ್ತ ಕಾರ್ಯಕರ್ತರು ಪೊಲೀಸರ ಸಮ್ಮುಖದಲ್ಲೇ ಮಾಧ್ಯಮಗಳ ಮುಂದೆ ನೀಡಿರುವ ಹೇಳಿಕೆ ಮೈ ನಡುಗಿಸುವಂತಿದೆ.

“ನಾವು ಕೇವಲ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುತ್ತಿದ್ದೆವು. ಆದರೆ ನವೀನ್ ಚರಂತಿಮಠ ಮತ್ತು ಅವರ ಗ್ಯಾಂಗ್ ನಮ್ಮನ್ನು ಸುತ್ತುವರಿದು ಅಮಾನವೀಯವಾಗಿ ಎಳೆದಾಡಿದರು. ನಮ್ಮ ಮೊಬೈಲ್ ಫೋನ್‌ಗಳನ್ನು ಕಿತ್ತುಕೊಂಡು ಸಾಕ್ಷ್ಯ ನಾಶಪಡಿಸಲು ಯತ್ನಿಸಿದರು. ನಮ್ಮಲ್ಲಿ ಇಬ್ಬರು-ಮೂವರನ್ನು ಬಲವಂತವಾಗಿ ಕಾರಿನಲ್ಲಿ ಎತ್ತಾಕಿಕೊಂಡು ಹೋಗುವ ಪ್ರಯತ್ನ ಮಾಡಿದರು. ಅದೃಷ್ಟವಶಾತ್ ಪೊಲೀಸರು ಅಲ್ಲಿಗೆ ಬಂದಿದ್ದರಿಂದ ನಾವು ಬಚಾವ್ ಆದೆವು. ಇಲ್ಲದಿದ್ದರೆ ನಮ್ಮ ಪ್ರಾಣಕ್ಕೆ ಅಪಾಯವಿತ್ತು” ಎಂದು ಕಾರ್ಯಕರ್ತರು ಭಯದಿಂದ ವಿವರಿಸಿದ್ದಾರೆ.

ನಾಗರಾಜ್ ಹದ್ಲಿ ಅವರ ಖಡಕ್ ಎಚ್ಚರಿಕೆ ಮತ್ತು ಪೊಲೀಸರ ನಡೆಯ ಬಗ್ಗೆ ಆಕ್ಷೇಪ

ಇನ್ನು ಬಿಜೆಪಿ ನಾಯಕರು ಈ NSUI ಕಾರ್ಯಕರ್ತರ ಮೇಲೆಯೇ ಆರೋಪ ಮಾಡಿದ್ದಾರೆ ಎಂದು ಅವರನ್ನು ಠಾಣೆಯಲ್ಲಿ ಇರಿಸಿದ್ದಾರೆ. ಹಾಗಾಗಿ ಅಲ್ಲಿಗೆ ಕಾಂಗ್ರೆಸ್ ಮುಖಂಡ ನಾಗರಾಜ್ ಹದ್ಲಿ ಹಾಗೂ ಇತರ ಮುಖಂಡರು, ಕಾರ್ಯಕರ್ತರು ಆಗಮಿಸುತ್ತಿದ್ದಂತೆ ಪರಿಸ್ಥಿತಿ ಮತ್ತಷ್ಟು ಗಂಭೀರವಾಯಿತು. ಪೊಲೀಸರ ಜೀಪ್ ಎದುರಿಗೇ ಕಾರ್ಯಕರ್ತರ ಮೇಲೆ ಕೈ ಮಾಡಲಾಗಿದೆ ಎಂಬ ವಿಷಯ ಹದ್ಲಿ ಅವರನ್ನು ಕೆರಳಿಸಿತು.

ಪೊಲೀಸರ ಸಮ್ಮುಖದಲ್ಲೇ ಅಬ್ಬರಿಸಿದ ಅವರು, “ಪೊಲೀಸ್ ಅಧಿಕಾರಿಗಳು ಸ್ಥಳದಲ್ಲೇ ಇದ್ದಾಗಲೂ ಬಿಜೆಪಿ ಕಾರ್ಯಕರ್ತರು ನಮ್ಮ ಹುಡುಗರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದರೆ ಇದು ಯಾವ ರೀತಿಯ ಪ್ರಜಾಪ್ರಭುತ್ವ? ಬಿಜೆಪಿಯವರ ಈ ಗೂಂಡಾಗಿರಿಯನ್ನು ನಾವು ಸಹಿಸುವುದಿಲ್ಲ. ಹಲ್ಲೆ ಮಾಡಿದವರನ್ನು ಕೂಡಲೇ ಬಂಧಿಸಬೇಕು” ಎಂದು ಆಗ್ರಹಿಸಿದರು.

“ಏನಾದರೂ ಸಮಸ್ಯೆಯಿದ್ದರೆ ಕಾನೂನುಬದ್ಧವಾಗಿ ದೂರು ನೀಡಬಹುದಿತ್ತು. ಅದನ್ನು ಬಿಟ್ಟು ಕಾರ್ಯಕರ್ತರ ಮೇಲೆ ದೈಹಿಕ ದೌರ್ಜನ್ಯ ನಡೆಸಿರುವುದು ಬಿಜೆಪಿಯ ಸಂಸ್ಕೃತಿಯನ್ನು ತೋರಿಸುತ್ತದೆ” ಎಂದು ಹದ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಡಬಲ್ ವೋಟರ್ಸ್‌ಗೆ ಢವಢವ! ಆ ವಿದ್ಯಾರ್ಥಿಗಳಿಗೆ ಜೈಲು ಫಿಕ್ಸ್? ಕೈ-ಪಡೆಯ ಮಾಸ್ಟರ್ ಪ್ಲಾನ್; ಬಿಜೆಪಿಯಿಂದ ಓಪನ್ ಚಾಲೆಂಜ್!

ಬಿಜೆಪಿಗರ ವಾದ ಮತ್ತು ನಾಟಕೀಯ ತಿರುವು

ಮತ್ತೊಂದೆಡೆ ಬಿಜೆಪಿ ನಾಯಕ ಅರುಣ ಷಹಾಪುರ ಮತ್ತು ಕಾರ್ಯಕರ್ತರು ಇದೊಂದು ‘ಅಪಪ್ರಚಾರದ ಸಂಚು’ ಎಂದು ಬಣ್ಣಿಸಿದ್ದಾರೆ. ಸರ್ಕಾರಿ ವಾಹನದಲ್ಲಿ ಇಂತಹ ಕರಪತ್ರಗಳು ಪತ್ತೆಯಾಗಿರುವುದು ಮತ್ತು ಬಿಜೆಪಿ ಅಭ್ಯರ್ಥಿಯ ಭಾವಚಿತ್ರಕ್ಕೆ ‘ಕ್ರಾಸ್’ ಮಾರ್ಕ್ ಹಾಕಿರುವುದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಎಂದು ಅವರು ದೂರಿದ್ದಾರೆ. ಆದರೆ, ಈ ಕರಪತ್ರಗಳಲ್ಲಿರುವುದು ಕೇವಲ ಕಾನೂನು ಅರಿವಿನ ಮಾತುಗಳು, ಯಾರನ್ನೂ ವೈಯಕ್ತಿಕವಾಗಿ ಟೀಕಿಸಿಲ್ಲ ಎಂಬುದು ಕಾಂಗ್ರೆಸ್ ಪಕ್ಷದ ಸಮರ್ಥನೆ.

ಬಿಜೆಪಿ ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ನವನಗರ ಸಿಪಿಐ ಕಚೇರಿ ಎದುರು ಜಮಾಯಿಸಿ ಪ್ರತಿಭಟನೆ ನಡೆಸಿದರು. ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು 7 ಜನರನ್ನು ವಶಕ್ಕೆ ಪಡೆದಿದ್ದಾರೆ, ಆದರೆ ಕಾಂಗ್ರೆಸ್‌ ನಾಯಕರು ಹಾಗೂ ಕಾರ್ಯಕರ್ತರು ಮಾತ್ರ ನೈಜ ಹಲ್ಲೆಕೋರರ ಬಂಧನಕ್ಕೆ ಪಟ್ಟು ಹಿಡಿದಿದ್ದಾರೆ.

ಶಿಕ್ಷಣ ಸಂಸ್ಥೆಗಳು ರಾಜಕೀಯದ ಆಡುಂಬೋಲವಾಗುತ್ತಿವೆಯೇ?

ಈ ಇಡೀ ಪ್ರಕರಣದಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರ ಅತ್ಯಂತ ವಿವಾದಾತ್ಮಕವಾಗಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯವನ್ನು ಇಟ್ಟುಕೊಂಡು ಅವರಿಗೆ ರಾಜಕೀಯ ಒತ್ತಡ ಹೇರುವುದು ಅತ್ಯಂತ ಕೀಳು ಮಟ್ಟದ ರಾಜಕೀಯ ಎಂದು ವಿಶ್ಲೇಷಿಸಲಾಗುತ್ತಿದೆ. ಬಸವೇಶ್ವರ ಸಂಸ್ಥೆಯ ಆಡಳಿತ ಮಂಡಳಿಯು ಈ ಬಗ್ಗೆ ಮೌನ ತಾಳಿರುವುದು ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ. ವಿದ್ಯಾರ್ಥಿಗಳಲ್ಲಿ ಮೂಡಿರುವ ಭೀತಿಯನ್ನು ಹೋಗಲಾಡಿಸಲು ಚುನಾವಣಾ ಆಯೋಗವು ಈ ಪ್ರಕರಣದಲ್ಲಿ ನೇರವಾಗಿ ಮಧ್ಯಪ್ರವೇಶಿಸಬೇಕಿದೆ.

ಬಾಗಲಕೋಟೆಯ ಈ ಘಟನೆಯು ಕೇವಲ ಒಂದು ಸ್ಥಳೀಯ ಸಂಘರ್ಷವಲ್ಲ; ಇದು ಅಧಿಕಾರ ಬಲ ಮತ್ತು ಸಾಮಾನ್ಯ ವಿದ್ಯಾರ್ಥಿ ಸಂಘಟನೆಯ ನಡುವಿನ ಹೋರಾಟವಾಗಿ ಮಾರ್ಪಟ್ಟಿದೆ. ಬಿಜೆಪಿ ಅಭ್ಯರ್ಥಿಯ ಪುತ್ರನ ಮೇಲೆ ಕೇಳಿಬಂದಿರುವ ಹಲ್ಲೆಯ ಆರೋಪವು ಬಿಜೆಪಿಗೆ ಚುನಾವಣಾ ಸಮಯದಲ್ಲಿ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ನಿಷ್ಪಕ್ಷಪಾತವಾಗಿ ಪರಿಶೀಲಿಸಿ, ಹಲ್ಲೆಕೋರರು ಯಾರೇ ಆಗಿದ್ದರೂ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕಿದೆ. ಶೈಕ್ಷಣಿಕ ಆವರಣದಲ್ಲಿ ನಡೆಯುತ್ತಿರುವ ಈ ಮತದಾನದ ದಬ್ಬಾಳಿಕೆಗೆ ಮತದಾರರು ಯಾವ ರೀತಿ ಉತ್ತರ ನೀಡುತ್ತಾರೆ ಎಂಬುದನ್ನು ಕಾಯ್ದು ನೋಡಬೇಕಿದೆ.

Praveen Yalligutti
Praveen Yalliguttihttp://asalisuddi.com
ಕನ್ನಡದ ವಿವಿಧ ಸುದ್ದಿ ಮಾಧ್ಯಮ ಸಂಸ್ಥೆಗಳಲ್ಲಿ ಸುಮಾರು 8 ವರ್ಷಗಳ ಕಾಲ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ ನನಗಿದೆ. ಸುದ್ದಿಗಳ ಅಸಲಿಯತ್ತನ್ನು ಮತ್ತು ನಿಖರವಾದ ಮಾಹಿತಿಯನ್ನು ಜನರಿಗೆ ತಲುಪಿಸಬೇಕು ಎನ್ನುವ ಉದ್ದೇಶದಿಂದ ಈಗ 'ಅಸಲಿ ಸುದ್ದಿ' (Asali Suddi) ಎನ್ನುವ ಸುದ್ದಿ ಸಂಸ್ಥೆಯನ್ನು ಆರಂಭಿಸಿದ್ದೇನೆ. ಸತ್ಯಕ್ಕೆ ಹತ್ತಿರವಾದ ಮತ್ತು ಜನೋಪಕಾರಿ ವರದಿಗಳನ್ನು ನೀಡುವುದೇ ನನ್ನ ಮೊದಲ ಆದ್ಯತೆ.
RELATED ARTICLES

Most Popular

Recent Comments