ಬಾಗಲಕೋಟೆ ಉಪಚುನಾವಣೆ (Bagalkot By-Election): ಉಪಚುನಾವಣೆಯ ಕಾವು ಏರುತ್ತಿದ್ದಂತೆ ಬಾಗಲಕೋಟೆಯ ರಾಜಕೀಯ ಸಮರ ಈಗ ಮನೆಯ ಹೊಸ್ತಿಲಿಗೆ ಬಂದು ನಿಂತಿದೆ. ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರ ಸ್ವಂತ ಸಹೋದರ ಮಲ್ಲಿಕಾರ್ಜುನ ಚರಂತಿಮಠ ಅವರು ಕಾಂಗ್ರೆಸ್ ಪಾಳಯದಲ್ಲಿ ಗಟ್ಟಿಯಾಗಿ ನಿಂತಿರುವುದು ಬಿಜೆಪಿಯ ನಿದ್ದೆಗೆಡಿಸಿದೆ. ಈ ನಡುವೆ, ಮಲ್ಲಿಕಾರ್ಜುನ ಚರಂತಿಮಠ ಅವರು ಮಾಧ್ಯಮಗಳ ಎದುರು ಸ್ಫೋಟಕ ಮಾಹಿತಿ ಹಂಚಿಕೊಂಡಿದ್ದು, ಜಿಲ್ಲಾ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದೆ.
ಕಾರಜೋಳ ಅವರ ಫೋನ್ ಕರೆ; ಸಂಧಾನಕ್ಕೆ ಕಾದು ಕುಳಿತ ಮಲ್ಲಿಕಾರ್ಜುನ!
ಕಳೆದ ಮೂರ್ನಾಲ್ಕು ದಿನಗಳಿಂದ ಬಾಗಲಕೋಟೆ ಉಪಚುನಾವಣೆಯ ಉಸ್ತುವಾರಿ ಹೊತ್ತಿರುವ ಸಂಸದ ಗೋವಿಂದ್ ಕಾರಜೋಳ ಅವರು ಮಲ್ಲಿಕಾರ್ಜುನ ಚರಂತಿಮಠ ಅವರಿಗೆ ನಿರಂತರವಾಗಿ ಫೋನ್ ಕರೆಗಳನ್ನು ಮಾಡುತ್ತಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಸುಳಿವು ನೀಡಿರುವ ಮಲ್ಲಿಕಾರ್ಜುನ ಅವರು, “ಅವರು ಫೋನ್ ಮಾಡಿ ಮನೆಗೆ ಬರುವುದಾಗಿ ಹೇಳುತ್ತಿದ್ದಾರೆ. ನಾನು ಅವರ ದಾರಿಯನ್ನೇ ಕಾಯುತ್ತಿದ್ದೇನೆ” ಎಂದು ನೇರವಾಗಿಯೇ ಸವಾಲು ಹಾಕಿದ್ದಾರೆ. “ಒಂದು ವೇಳೆ ಅವರು ಮನೆಗೆ ಬಂದರೆ ನಾನು ಏನೇನು ಮಾತನಾಡಬೇಕು, ಯಾವ ರೀತಿ ಪ್ರಶ್ನೆ ಮಾಡಬೇಕು ಎಂದು ತಯಾರಾಗಿಯೇ ಇದ್ದೆ. ಆದರೆ ನೇರವಾಗಿ ನನ್ನನ್ನು ಸಂಪರ್ಕಿಸಲು ಅವರಿಗೆ ಈಗ ಸಾಧ್ಯವಾಗುತ್ತಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ನಾನು ಬಿಜೆಪಿ ಬಿಟ್ಟಿಲ್ಲ, ನನ್ನನ್ನು ಹೊರಹಾಕಲಾಗಿದೆ”: ನೋವು ಬಿಚ್ಚಿಟ್ಟ ಮಲ್ಲಿಕಾರ್ಜುನ
ತಮ್ಮ ರಾಜಕೀಯ ನಿಲುವಿನ ಬಗ್ಗೆ ಸ್ಪಷ್ಟನೆ ನೀಡಿರುವ ಅವರು, “ನಾನು ಬಿಜೆಪಿ ಪಕ್ಷವನ್ನು ಸ್ವತಃ ಬಿಟ್ಟು ಬಂದವನಲ್ಲ, ನನ್ನನ್ನು ವ್ಯವಸ್ಥಿತವಾಗಿ ಹೊರಹಾಕಲಾಗಿದೆ. ಇಷ್ಟು ದಿನ ಒಂದು ಕರೆಯನ್ನೂ ಮಾಡದ ನಾಯಕರು, ಅಂದು ಮಾಜಿ ಶಾಸಕರು (ವೀರಣ್ಣ ಚರಂತಿಮಠ) ನನ್ನನ್ನು ಬಿಜೆಪಿಯ ಮನೆಯಿಂದ ಹೊರಗಟ್ಟಿದಾಗ ಇವರ್ಯಾರೂ ಧ್ವನಿ ಎತ್ತಲಿಲ್ಲ. ಈಗ ಚುನಾವಣೆ ಬಂದಿದೆ ಎಂದು ಯಾವ ಮುಖ ಹೊತ್ತು ನನ್ನ ಬಳಿ ಬರುತ್ತಿದ್ದಾರೆ?” ಎಂದು ಪ್ರಶ್ನಿಸಿದ್ದಾರೆ. ಬಿಜೆಪಿಯ ಈ ಅವಕಾಶವಾದಿ ರಾಜಕಾರಣದ ಬಗ್ಗೆ ಮಲ್ಲಿಕಾರ್ಜುನ ಚರಂತಿಮಠ ಅವರು ತೀವ್ರ ಅಸಮಾಧಾನಗೊಂಡಿರುವುದು ಎದ್ದು ಕಾಣುತ್ತಿದೆ.
ಇದನ್ನೂ ಓದಿ: Inside Story: ನಾಮಕಾವಸ್ಥೆ MLA ಪ್ಲ್ಯಾನ್ ಉಲ್ಟಾ! ಆಪ್ತನ ಆಟಾಟೋಪಕ್ಕೆ ಹೈಕಮಾಂಡ್ ಬ್ರೇಕ್; ಉಮೇಶ್ ಮೇಟಿ ‘ಕೈ’ ಹಿಡಿದ ಅದೃಷ್ಟ
ಆಫ್ ದಿ ರೆಕಾರ್ಡ್ ಬೆಳವಣಿಗೆ: ಕಾರಜೋಳ ಪ್ಲ್ಯಾನ್‌ಗೆ ತಣ್ಣೀರೆರಚಿದ ವೀರಣ್ಣ ಚರಂತಿಮಠ?
ಬಲ್ಲ ಮೂಲಗಳ ಮಾಹಿತಿಯ ಪ್ರಕಾರ, ಸಂಸದ ಗೋವಿಂದ್ ಕಾರಜೋಳ ಅವರು ಹೇಗಾದರೂ ಮಾಡಿ ಪಕ್ಷ ಬಿಟ್ಟವರನ್ನು ಮರಳಿ ಕರೆತರಲು ಮಾಸ್ಟರ್ ಪ್ಲ್ಯಾನ್ ರೂಪಿಸಿದ್ದರು. ಇದರ ಭಾಗವಾಗಿಯೇ ಯುವನಾಯಕ ಸಂತೋಷ್ ಹೊಕ್ರಾಣಿ ಹಾಗೂ ಮಲ್ಲಿಕಾರ್ಜುನ ಚರಂತಿಮಠ ಅವರನ್ನು ಬಿಜೆಪಿಗೆ ಸೆಳೆಯಲು ಪ್ರಯತ್ನಿಸಿದ್ದರು. ಆದರೆ ನಿನ್ನೆ ಸಂತೋಷ್ ಹೊಕ್ರಾಣಿ ಅವರು “ನಾನು ಯಾವುದೇ ಕಾರಣಕ್ಕೂ ಬಿಜೆಪಿಗೆ ಹೋಗಲ್ಲ, ಕಾಂಗ್ರೆಸ್‌ನಲ್ಲೇ ಉಳಿಯುತ್ತೇನೆ” ಎಂದು ಬಹಿರಂಗವಾಗಿ ಘೋಷಿಸಿ ಕಾರಜೋಳ ಅವರ ಪ್ಲ್ಯಾನ್‌ಗೆ ಹೊಡೆತ ನೀಡಿದ್ದರು.
ಇದಾದ ಬಳಿಕ, ಇಂದು ಬೆಳಿಗ್ಗೆ ಮಲ್ಲಿಕಾರ್ಜುನ ಚರಂತಿಮಠ ಅವರ ಮನೆಗೆ ಭೇಟಿ ನೀಡಲು ಕಾರಜೋಳ ಅವರು ಸಿದ್ಧತೆ ನಡೆಸಿದ್ದರು. ಆದರೆ ಇಲ್ಲಿ ಅನಿರೀಕ್ಷಿತ ತಿರುವು ಎಂಬಂತೆ, ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರು “ಅವರನ್ನು (ಮಲ್ಲಿಕಾರ್ಜುನ) ಪಕ್ಷಕ್ಕೆ ತರುವುದು ಬೇಡ” ಎಂದು ಕಾರಜೋಳ ಅವರ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಆಂತರಿಕ ಗದ್ದಲದಿಂದಾಗಿಯೇ ಇಂದು ಮಲ್ಲಿಕಾರ್ಜುನ ಚರಂತಿಮಠ ಅವರ ಮನೆಗೆ ಹೋಗುವ ಕಾರ್ಯಕ್ರಮವನ್ನು ಕಾರಜೋಳ ಅವರು ರದ್ದುಗೊಳಿಸಿದ್ದಾರೆ ಎಂಬುದನ್ನು ನಂಬಲರ್ಹವಾದ ಮೂಲಗಳು ತಿಳಿಸಿವೆ.
ಇದನ್ನೂ ಓದಿ: Bagalkote By-election: ಕಾರಜೋಳರಿಂದ ‘ಸಂಧಾನ’.. ಚರಂತಿಮಠರಿಂದ ‘ನಿರ್ಲಕ್ಷ್ಯ’; ಬಿಜೆಪಿ ಸೇರಿದವರಲ್ಲಿ ಮರುಕ ಶುರು!
“ಬಿಜೆಪಿಯಲ್ಲಿದೆ ಡರ್ಟಿ ಟ್ರಿಕ್ಸ್ ಡಿಪಾರ್ಟ್‌ಮೆಂಟ್!”
ಬಿಜೆಪಿಯ ಚುನಾವಣಾ ತಂತ್ರಗಾರಿಕೆಯನ್ನು ಲೇವಡಿ ಮಾಡಿರುವ ಮಲ್ಲಿಕಾರ್ಜುನ ಅವರು, ಬಿಜೆಪಿಯಲ್ಲಿ ಒಂದು ‘ಡರ್ಟಿ ಟ್ರಿಕ್ಸ್ ಡಿಪಾರ್ಟ್‌ಮೆಂಟ್’ ಇದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. “ಬೆಳಿಗ್ಗೆಯಿಂದ ಸಂಜೆಯವರೆಗೆ ಕೇವಲ ಕೆಟ್ಟದ್ದನ್ನೇ ಯೋಚಿಸುವ ಕೆಲಸ ಈ ಡಿಪಾರ್ಟ್‌ಮೆಂಟ್ ಮಾಡುತ್ತದೆ. ನಮ್ಮ ಜೊತೆಗಿರುವವರನ್ನು ಸಂಪರ್ಕಿಸಿ ನಮ್ಮ ತಂಡವನ್ನು ಒಡೆಯಲು ಅವರು ಪ್ರಯತ್ನಿಸುತ್ತಿದ್ದಾರೆ ಆದರೆ ಅದು ಅವರಿಂದ ಸಾಧ್ಯವಿಲ್ಲ. ಬಾಗಲಕೋಟೆ ಮತದಾರರು ಈಗ ಜಾಗೃತರಾಗಿದ್ದಾರೆ. ಕಳೆದ ಬಾರಿ ನನಗೆ ಯಾರು ಮತ ಹಾಕಿದ್ದರೋ, ಅವರು ಈ ಬಾರಿ ಕಾಂಗ್ರೆಸ್‌ಗೆ ಮತ ಹಾಕಲಿದ್ದಾರೆ. ಅಲ್ಲದೆ ಹಿಂದೂಗಳ ಮತ ನಮ್ಮದೇ ಎನ್ನುವ ಬಿಜೆಪಿ ಭ್ರಮೆಯಲ್ಲಿದೆ, ನಾವೆಲ್ಲರೂ ಹಿಂದೂಗಳೇ ಅಲ್ವಾ?” ಎಂದು ಅವರು ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ನಿಷ್ಠೆಗೆ ಬದ್ಧ; ಬಿಜೆಪಿಗೆ ಮುಖಭಂಗ
ಒಟ್ಟಾರೆಯಾಗಿ, ಚರಂತಿಮಠ ಕುಟುಂಬದ ಒಳಗಿನ ಭಿನ್ನಮತ ಈಗ ಬಾಗಲಕೋಟೆ ಉಪಚುನಾವಣೆಯ ಕೇಂದ್ರಬಿಂದುವಾಗಿದೆ. ಬಿಜೆಪಿ ನಾಯಕರು ಸಂಧಾನಕ್ಕೆ ಪ್ರಯತ್ನಿಸುತ್ತಿದ್ದರೂ, ಮಲ್ಲಿಕಾರ್ಜುನ ಚರಂತಿಮಠ ಅವರು ಮಾತ್ರ ತಮ್ಮ ನಿಲುವಿನಿಂದ ಹಿಂದೆ ಸರಿಯುವ ಲಕ್ಷಣಗಳಿಲ್ಲ. ಬಿಜೆಪಿಯ ಆಂತರಿಕ ಕಲಹ ಹಾಗೂ ಕಾರಜೋಳ-ಚರಂತಿಮಠ ನಡುವಿನ ಅಭಿಪ್ರಾಯ ಭೇದವು ಕಾಂಗ್ರೆಸ್ ಪಾಳಯಕ್ಕೆ ವರದಾನವಾಗುವ ಸಾಧ್ಯತೆ ಇದೆ.
ಸಹೋದರನ ವಿರುದ್ಧವೇ ಅಖಾಡಕ್ಕಿಳಿದಿರುವ ಮಲ್ಲಿಕಾರ್ಜುನ ಚರಂತಿಮಠ ಅವರ ಈ ‘ಖಡಕ್’ ನಿಲುವು ಚುನಾವಣಾ ಫಲಿತಾಂಶದ ಮೇಲೆ ಯಾವ ರೀತಿ ಪ್ರಭಾವ ಬೀರಲಿದೆ ಎಂಬುದು ಈಗ ಕುತೂಹಲದ ಸಂಗತಿಯಾಗಿದೆ.

