Homeರಾಜ್ಯBagalkot BJP: ಚರಂತಿಮಠಗೆ 'ಮರುಮನ್ನಣೆ'; ಸವಾಲುಗಳ ಸುರಿಮಳೆ ಮಧ್ಯೆ ಗೆದ್ದುಬರುತ್ತಾ ಹಳೆ ಹುಲಿ?

Bagalkot BJP: ಚರಂತಿಮಠಗೆ ‘ಮರುಮನ್ನಣೆ’; ಸವಾಲುಗಳ ಸುರಿಮಳೆ ಮಧ್ಯೆ ಗೆದ್ದುಬರುತ್ತಾ ಹಳೆ ಹುಲಿ?

ಬಾಗಲಕೋಟೆ: ಕರ್ನಾಟಕ ರಾಜಕೀಯದ ದೃಷ್ಟಿಯಿಂದ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಈಗ ಕೇವಲ ಒಂದು ಮತದಾನದ ಪ್ರಕ್ರಿಯೆಯಾಗಿ ಉಳಿದಿಲ್ಲ. ಇದು ಬಿಜೆಪಿಯ (Bagalkot BJP) ಹಿರಿಯ ನಾಯಕ, ಮಾಜಿ ಶಾಸಕ ವೀರಣ್ಣ ಚರಂತಿಮಠ್ ಅವರ ರಾಜಕೀಯ ಅಸ್ತಿತ್ವದ ಅಗ್ನಿಪರೀಕ್ಷೆಯಾಗಿದೆ. ಹೈಕಮಾಂಡ್ ಚರಂತಿಮಠ್ ಅವರನ್ನೇ ಅಂತಿಮಗೊಳಿಸಿ ಪಟ್ಟಿ ಬಿಡುಗಡೆ ಮಾಡಿದ್ದರೂ, ಕ್ಷೇತ್ರದ ಒಳಗಿನ ರಾಜಕೀಯ ಮೇಲಾಟಗಳು ಮತ್ತು ಆಂತರಿಕ ಅಸಮಾಧಾನದ ಕಿಡಿಗಳು ಈ ಬಾರಿ ಕಮಲ ಪಾಳಯಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿವೆ. ಮೇಲ್ನೋಟಕ್ಕೆ ಎಲ್ಲವೂ ಸರಿ ಇದೆ ಎಂದೆನಿಸಿದರೂ, ಒಳಗೊಳಗೆ ನಡೆಯುತ್ತಿರುವ ‘ಮುಸುಕಿನ ಗುದ್ದಾಟ’ ಚರಂತಿಮಠ ಅವರ ಗೆಲುವಿನ ಹಾದಿಗೆ ಕಲ್ಲು ಮುಳ್ಳುಗಳನ್ನು ಹಾಸಿದೆ. ಮತ್ತೊಂದೆಡೆ ವಿರೋಧಿಪಾಳಯದ ಹಳೆಯ ಗೆಳತನಗಳು ಚರಂತಿಮಠರ ಕೈಹಿಡಿಯಲಿವೆ ಎನ್ನುವ ಲೆಕ್ಕಾಚರಗಳೂ ಇವೆ. ಚುನಾವಣಾ ಹೊಸ್ತಿಲಲ್ಲಿ ನೂರಾರು ಜನ ಬಿಜೆಪಿಗೆ ಸೇರ್ಪಡೆಯಾಗುತ್ತಿರುವುದು ಚರಂತಿಮಠಗೆ ಹೊಸ ಹುಮ್ಮಸ್ಸು ತಂದುಕೊಟ್ಟಿದೆ.

ಏಕಚಕ್ರಾಧಿಪತ್ಯದ ಧೋರಣೆ ಮತ್ತು ಯುವ ನಾಯಕತ್ವದ ಹರಣ

ಬಾಗಲಕೋಟೆ ಬಿಜೆಪಿಯಲ್ಲಿ ದಶಕಗಳಿಂದಲೂ ವೀರಣ್ಣ ಚರಂತಿಮಠ ಅವರದ್ದೇ ಅಂತಿಮ ತೀರ್ಮಾನ ಎನ್ನುವಂತಾಗಿದೆ. ಈ ಬಾರಿಯ ಟಿಕೆಟ್ ಘೋಷಣೆಯು ಜಿಲ್ಲಾ ಬಿಜೆಪಿಯಲ್ಲಿ ಎರಡನೇ ಹಂತದ ನಾಯಕತ್ವವನ್ನು ಬೆಳೆಸುವಲ್ಲಿ ಪಕ್ಷ ಸಂಪೂರ್ಣ ವಿಫಲವಾಗಿದೆ ಎಂಬುದನ್ನು ಸಾಬೀತುಪಡಿಸಿದೆ. ಚರಂತಿಮಠ್ ಅವರ ‘ಏಕಚಕ್ರಾಧಿಪತ್ಯ’ದ ಧೋರಣೆಗೆ ಬೇಸತ್ತು ಈಗಾಗಲೇ ಅನೇಕ ಪ್ರಭಾವಿ ಯುವ ಮುಖಂಡರು ಪಕ್ಷ ತೊರೆದಿದ್ದಾರೆ. “ನಾನೇ ಎಲ್ಲ, ನನ್ನಿಂದಲೇ ಎಲ್ಲ” ಎಂಬ ನಿಲುವು ಸಂಘಟನೆಯ ಬೇರುಗಳನ್ನು ಸಡಿಲಗೊಳಿಸಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಹೊಸಬರಿಗೆ ಅವಕಾಶ ನೀಡದೆ ಹಳಬರನ್ನೇ ನೆಚ್ಚಿಕೊಂಡಿರುವುದು ಯುವ ಮತದಾರರಲ್ಲಿ ಅಸಮಾಧಾನ ಮೂಡಿಸಿದೆ. ಇದು ಚುನಾವಣೆಯ ಸಂದರ್ಭದಲ್ಲಿ ಕಾರ್ಯಕರ್ತರ ಉತ್ಸಾಹವನ್ನು ಕುಂದಿಸುವ ಸಾಧ್ಯತೆ ದಟ್ಟವಾಗಿದೆ.

ವೈರಿಗಳ ಸಮ್ಮಿಲನ: ಬಸವರಾಜ್ ಕಟಗೇರಿ ಮರಳಿ ಮನೆಗೆ!

ಕ್ಷೇತ್ರದ ರಾಜಕಾರಣದಲ್ಲಿ ನಿನ್ನೆಯಷ್ಟೇ ನಡೆದ ಒಂದು ಬೆಳವಣಿಗೆ ಭಾರೀ ಕುತೂಹಲ ಮೂಡಿಸಿದೆ. ಚರಂತಿಮಠ್ ಅವರೊಂದಿಗೆ ತೀವ್ರ ಸಂಘರ್ಷ ನಡೆಸಿ ಪಕ್ಷ ತೊರೆದಿದ್ದ ಬಸವರಾಜ್ ಕಟಗೇರಿ ಮತ್ತೆ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಈ ಹಿಂದೆ ಚರಂತಿಮಠ್ ಮತ್ತು ಕಟಗೇರಿ ನಡುವಿನ ಫೋನ್ ಸಂಭಾಷಣೆ ಆಡಿಯೋ ರಾಜ್ಯಾದ್ಯಂತ ವೈರಲ್ ಆಗಿದ್ದನ್ನು ಜನ ಇನ್ನೂ ಮರೆತಿಲ್ಲ. ಪರಸ್ಪರ ಅತ್ಯಂತ ಕೆಟ್ಟ ಪದಗಳಿಂದ ಬೈದಾಡಿಕೊಂಡಿದ್ದ ಈ ಇಬ್ಬರು ನಾಯಕರು, “ಜೀವನಪರ್ಯಂತ ಮುಖ ನೋಡಬಾರದು” ಎಂಬ ಹಂತಕ್ಕೆ ತಲುಪಿದ್ದರು. ಕಟಗೇರಿ ಈ ಬಾರಿ ಪಕ್ಷೇತರರಾಗಿ ಸ್ಪರ್ಧಿಸಿ ಚರಂತಿಮಠ್ ಅವರ ಗೆಲುವಿಗೆ ಅಡ್ಡಗಾಲಾಗುತ್ತಾರೆ ಎಂಬ ಭೀತಿ ಇತ್ತು.

ಆದರೆ, ಇಲ್ಲಿ ಒಂದು ದೊಡ್ಡ ಟ್ವಿಸ್ಟ್ ಇದೆ. ಕಟಗೇರಿ ಅವರನ್ನ ಮರಳಿ ಪಕ್ಷಕ್ಕೆ ಕರೆತರುವಲ್ಲಿ ಚಿತ್ರದುರ್ಗ ಸಂಸದ ಗೋವಿಂದ್ ಕಾರಜೋಳ ಯಶಸ್ವಿಯಾಗಿದ್ದಾರೆ. ನಿನ್ನೆ ಕಾರಜೋಳರ ಸಮ್ಮುಖದಲ್ಲೇ ಕಟಗೇರಿ ಬಿಜೆಪಿ ಸೇರ್ಪಡೆಯಾದರೂ, ಆ ಸಂದರ್ಭದಲ್ಲಿ ಅಭ್ಯರ್ಥಿ ಚರಂತಿಮಠ್ ಗೈರಾಗಿದ್ದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಹಾವು-ಮುಂಗೂಸಿಯಂತಿರುವ ಇಬ್ಬರು ನಾಯಕರನ್ನು ಒಂದೇ ವೇದಿಕೆಗೆ ತರುವ ಕಾರಜೋಳರ ಈ ಪ್ರಯತ್ನ ಚರಂತಿಮಠ್ ಅವರಿಗೆ ನಿಜವಾಗಿಯೂ ಬಲ ತುಂಬಲಿದೆಯೇ ಅಥವಾ ಒಳಗಿನಿಂದಲೇ ಮೈನಸ್ ಆಗಲಿದೆಯೇ ಎಂಬುದು ಕಾದು ನೋಡಬೇಕಿದೆ.

ಇದನ್ನೂ ಓದಿ: Bagalkot Medical college: ಬೂಟ್ ಪಾಲಿಶ್ ಚಳವಳಿಯಿಂದ ಶಂಕುಸ್ಥಾಪನೆಯವರೆಗೆ; ಜಿಲ್ಲಾ ನಾಯಕರ ಪಿತೂರಿ ಬಯಲು ಮಾಡಿದ ಬದ್ನೂರ್!

ಪಿ.ಎಚ್. ಪೂಜಾರ್ ಅವರ ಅಭಿಮಾನಿಗಳ ಮುನಿಸು

ಬಾಗಲಕೋಟೆಯಲ್ಲಿ ಬಿಜೆಪಿ ಕಟ್ಟಲು ಶ್ರಮಿಸಿದ ಶ್ರಮಯೋಗಿ ಪಿ.ಎಚ್. ಪೂಜಾರ್ ಅವರಿಗೆ ಆಗಿರುವ ಅನ್ಯಾಯವನ್ನು ಅವರ ಅಭಿಮಾನಿಗಳು ಇಂದಿಗೂ ಮರೆತಿಲ್ಲ. ದಶಕಗಳ ಕಾಲ ಪಕ್ಷಕ್ಕಾಗಿ ಬೆವರು ಹರಿಸಿದ ಪೂಜಾರ್ ಅವರನ್ನು ವ್ಯವಸ್ಥಿತವಾಗಿ ಮೂಲೆಗುಂಪು ಮಾಡಲಾಗಿದೆ ಎಂಬ ಆರೋಪ ಚರಂತಿಮಠ್ ಅವರ ಮೇಲಿದೆ. ಪೂಜಾರ್ ಮತ್ತು ಚರಂತಿಮಠ್ ನಡುವಿನ ಬಹಿರಂಗ ಜಗಳಗಳು ಈ ಹಿಂದೆಯೇ ಚರ್ಚೆಯಾಗಿದ್ದವು. ಈಗಲೂ ಆ ಮುನಿಸು ಶಮನವಾಗಿಲ್ಲ, ಕೇವಲ ಮುಸುಕಿನ ಗುದ್ದಾಟವಾಗಿ ಮುಂದುವರಿದಿದೆ. ಪೂಜಾರ್ ಅವರ ಬೆಂಬಲಿಗರು ಸಕ್ರಿಯವಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಳ್ಳದಿದ್ದರೆ ಚರಂತಿಮಠ್ ಅವರಿಗೆ ಸಂಕಷ್ಟ ಎದುರಾಗುವುದರಲ್ಲಿ ಸಂಶಯವಿಲ್ಲ.

ನಿರಾಣಿ ಎಂಟ್ರಿ: ಸ್ನೇಹವೋ ಅಥವಾ ಆತಂಕವೋ?

ಪಕ್ಕದ ಕ್ಷೇತ್ರ ಬೀಳಗಿಯ ಮಾಜಿ ಸಚಿವ ಮುರಗೇಶ್ ನಿರಾಣಿ ಅವರು ಈ ಚುನಾವಣೆಯಲ್ಲಿ ಸಕ್ರಿಯರಾಗಿರುವುದು ಚರಂತಿಮಠ್ ಪಾಳಯದಲ್ಲಿ ಅತಂಕ ಮೂಡಿಸಿದೆ. ಚರಂತಿಮಠ ಮತ್ತು ನಿರಾಣಿ ನಡುವಿನ ಸಂಬಂಧ ‘ಹಾವು-ಏಣಿ’ಯ ಆಟದಂತಿದೆ ಎಂಬುದು ಜಗಜ್ಜಾಹೀರು. 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಇಬ್ಬರೂ ನಾಯಕರು ಸೋಲಲು ಪರಸ್ಪರರ ಕಾಲೆಳೆದಿದ್ದೇ ಕಾರಣ ಎಂಬ ಚರ್ಚೆ ಈಗಲೂ ಕಟ್ಟೆ ಪುರಾಣಗಳಲ್ಲಿ ಜೀವಂತವಾಗಿದೆ. ಹೀಗಿರುವಾಗ, ನಿರಾಣಿ ಅವರ ಆಗಮನವು ಚರಂತಿಮಠ್ ಅವರ ಬೆಂಬಲಿಗರಲ್ಲಿ ಆತಂಕ ಮೂಡಿಸಿದೆ. ಇಬ್ಬರು ಧ್ರುವಗಳ ನಡುವಿನ ಶೀತಲ ಸಮರ ಈ ಉಪಚುನಾವಣೆಯ ಫಲಿತಾಂಶದ ಮೇಲೆ ನೇರ ಪರಿಣಾಮ ಬೀರಲಿದೆ.

ಅಭಿವೃದ್ಧಿಯ ಹೆಸರಲ್ಲಿ ಕೇವಲ ‘ರಸ್ತೆ-ಗಟಾರು’ ರಾಜಕಾರಣ?

ವೀರಣ್ಣ ಚರಂತಿಮಠ್ ಅವರು ಮೂರು ಬಾರಿ ಶಾಸಕರಾಗಿ ಆಯ್ಕೆಯಾದರೂ, ಬಾಗಲಕೋಟೆ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆ ಏನು ಎಂಬ ಪ್ರಶ್ನೆಯನ್ನು ವಿರೋಧ ಪಕ್ಷಗಳು ಮತ್ತು ಪ್ರಜ್ಞಾವಂತ ಮತದಾರರು ಕೇಳುತ್ತಿದ್ದಾರೆ. ರಸ್ತೆ ಮತ್ತು ಗಟಾರು ನಿರ್ಮಾಣ ಮಾಡುವುದೇ ಅಭಿವೃದ್ಧಿ ಎಂಬ ಭ್ರಮೆಯಲ್ಲಿ ಶಾಸಕರಿದ್ದಾರೆಯೇ? ಎಂಬ ಟೀಕೆ ಜೋರಾಗಿದೆ.

  • ನಿರುದ್ಯೋಗ: ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆ ಅಥವಾ ಯುವಕರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಯಾವುದೇ ಗಟ್ಟಿ ನಿರ್ಧಾರ ಕೈಗೊಂಡಿಲ್ಲ.
  • ಪುನರ್ವಸತಿ ಸಮಸ್ಯೆ: ಬಾಗಲಕೋಟೆ ಹಳೆ ನಗರದ ನಿವಾಸಿಗಳ ಪುನರ್ವಸತಿ ಮತ್ತು ಮೂಲಸೌಕರ್ಯದ ಸಮಸ್ಯೆಗಳು ದಶಕಗಳಿಂದ ನೆನೆಗುದಿಗೆ ಬಿದ್ದಿವೆ.
  • ಶಿಕ್ಷಣದ ವ್ಯಾಪಾರೀಕರಣ: ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ನೀಡುವ ಆದ್ಯತೆಯನ್ನು ಸಾಮಾನ್ಯ ಜನರ ಬದುಕಿನ ಸುಧಾರಣೆಗೆ ನೀಡುತ್ತಿಲ್ಲ ಎಂಬುದು ಸಾರ್ವಜನಿಕರ ಪ್ರಮುಖ ದೂರು.

ಇದನ್ನೂ ಓದಿ: Bagalkot: ಮಾಜಿ ಶಾಸಕನ ಅಬ್ಬರಕ್ಕೆ ಸೈಲೆಂಟ್ ಆದರೇ ಎಸ್‌ಪಿ? ‘ಧಮ್ಮು ತಾಕತ್‌’ ಮಾತಿಗೆ ಪೊಲೀಸರು ಕಕ್ಕಾಬಿಕ್ಕಿ!

ಮತದಾರರ ತೀರ್ಪು ಯಾರ ಪರ?

ಕಳೆದ ಚುನಾವಣೆಯಲ್ಲಿ ಕೇವಲ 5,800 ಮತಗಳ ಅಂತರದಿಂದ ಸೋತಿದ್ದ ಚರಂತಿಮಠ್ ಅವರಿಗೆ ಈ ಬಾರಿ ಅನುಕಂಪದ ಅಲೆಗಿಂತ ಹೆಚ್ಚಾಗಿ ವಿರೋಧಿ ಅಲೆ (Anti-incumbency) ಎದುರಾಗುವ ಲಕ್ಷಣಗಳಿವೆ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಮತ್ತು ಎಚ್.ವೈ. ಮೇಟಿ ಅವರ ಕುಟುಂಬದ ಮೇಲಿರುವ ಸಾಫ್ಟ್ ಕಾರ್ನರ್ ನಡುವೆ ಬಿಜೆಪಿ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕಿದೆ. ಅದಕ್ಕಾಗಿ ಚರಂತಿಮಠ ವಿರೋಧಿ ಪಕ್ಷದಲ್ಲಿ ಬಲೆ ಹೆಣೆದಿದ್ದಾರೆ ಎನ್ನಲಾಗಿದೆ. ಇದು ಅವರ ಗೆಲುವಿಗೆ ಸಹಾಯ ಮಾಡಬಹುದು.

ವೀರಣ್ಣ ಚರಂತಿಮಠ್ ಅವರಿಗೆ ಟಿಕೆಟ್ ಸಿಕ್ಕಿರುವುದು ಒಂದು ಹಂತದ ಜಯವಾದರೆ, ಮತದಾರರ ಮನ ಗೆಲ್ಲುವುದು ಅಂತಿಮ ಜಯ. ಆಂತರಿಕ ಕಚ್ಚಾಟ, ಹಿರಿಯ ನಾಯಕರ ಅಲಕ್ಷ್ಯ ಮತ್ತು ಅಭಿವೃದ್ಧಿಯ ಕೊರತೆಯ ಆರೋಪಗಳನ್ನು ಮೀರಿ ಅವರು ಈ ಬಾರಿ ಹೇಗೆ ಗೆಲುವಿನ ದಡ ಸೇರುತ್ತಾರೆ ಎಂಬುದು ಕಾದು ನೋಡಬೇಕಿದೆ. ಬಾಗಲಕೋಟೆಯ ಜನತೆ ಈ ಬಾರಿ “ಅಭಿವೃದ್ಧಿ”ಗೆ ಮನ್ನಣೆ ನೀಡುತ್ತಾರೋ ಅಥವಾ “ಬದಲಾವಣೆ”ಗೆ ನಾಂದಿ ಹಾಡುತ್ತಾರೋ? ಉತ್ತರ ಸದ್ಯದಲ್ಲೇ ಸಿಗಲಿದೆ.

Praveen Yalligutti
Praveen Yalliguttihttp://asalisuddi.com
ಕನ್ನಡದ ವಿವಿಧ ಸುದ್ದಿ ಮಾಧ್ಯಮ ಸಂಸ್ಥೆಗಳಲ್ಲಿ ಸುಮಾರು 8 ವರ್ಷಗಳ ಕಾಲ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ ನನಗಿದೆ. ಸುದ್ದಿಗಳ ಅಸಲಿಯತ್ತನ್ನು ಮತ್ತು ನಿಖರವಾದ ಮಾಹಿತಿಯನ್ನು ಜನರಿಗೆ ತಲುಪಿಸಬೇಕು ಎನ್ನುವ ಉದ್ದೇಶದಿಂದ ಈಗ 'ಅಸಲಿ ಸುದ್ದಿ' (Asali Suddi) ಎನ್ನುವ ಸುದ್ದಿ ಸಂಸ್ಥೆಯನ್ನು ಆರಂಭಿಸಿದ್ದೇನೆ. ಸತ್ಯಕ್ಕೆ ಹತ್ತಿರವಾದ ಮತ್ತು ಜನೋಪಕಾರಿ ವರದಿಗಳನ್ನು ನೀಡುವುದೇ ನನ್ನ ಮೊದಲ ಆದ್ಯತೆ.
RELATED ARTICLES

Most Popular

Recent Comments