Saturday, September 12, 2026
Home ರಾಜ್ಯ Haj Committee: ಸರ್ಕಾರಿ ಆದೇಶಕ್ಕೆ ಡೋಂಟ್ ಕೇರ್! ಅವಧಿ ಮುಗಿದರೂ ಕುರ್ಚಿ ಬಿಡದ ಸಿದ್ದಿಕ್ ಪಾಷಾ!

Haj Committee: ಸರ್ಕಾರಿ ಆದೇಶಕ್ಕೆ ಡೋಂಟ್ ಕೇರ್! ಅವಧಿ ಮುಗಿದರೂ ಕುರ್ಚಿ ಬಿಡದ ಸಿದ್ದಿಕ್ ಪಾಷಾ!

Haj Committee: ಸರ್ಕಾರಿ ಆದೇಶಕ್ಕೆ ಡೋಂಟ್ ಕೇರ್! ಅವಧಿ ಮುಗಿದರೂ ಕುರ್ಚಿ ಬಿಡದ ಸಿದ್ದಿಕ್ ಪಾಷಾ!

ಬೆಂಗಳೂರು: ಸರ್ಕಾರದ ಸ್ಪಷ್ಟ ಆದೇಶವಿದ್ದರೂ ಅದನ್ನು ಕಸದ ಬುಟ್ಟಿಗೆ ಎಸೆದು, ಕಾನೂನು ಬಾಹಿರವಾಗಿ ನಿವೃತ್ತ ಅಧಿಕಾರಿಯೊಬ್ಬರನ್ನು ಮಡಿಲಲ್ಲಿ ಇಟ್ಟುಕೊಂಡಿರುವ ಗಂಭೀರ ಪ್ರಕರಣ ಕರ್ನಾಟಕ ರಾಜ್ಯ ಹಜ್ ಸಮಿತಿಯಲ್ಲಿ (Haj Committee) ಬೆಳಕಿಗೆ ಬಂದಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ (DPAR) ನಿಯಮಗಳನ್ನು ಗಾಳಿಗೆ ತೂರಿರುವ ಹಜ್ ಸಮಿತಿ, ಸರ್ಕಾರದ ಆದೇಶವನ್ನು ಬಹಿರಂಗವಾಗಿಯೇ ಉಲ್ಲಂಘಿಸುತ್ತಿರುವುದು ಈಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಏನಿದು ಪ್ರಕರಣ?

ಸರ್ಕಾರದ ನಿವೃತ್ತ ಜಂಟಿ ಕಾರ್ಯದರ್ಶಿ ಸಿದ್ದಿಕ್ ಪಾಷಾ ಅವರನ್ನು 20/12/2023 ರಂದು ಹಜ್ ಸಮಿತಿಯ ವಿಶೇಷ ಅಧಿಕಾರಿಯಾಗಿ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲಾಗಿತ್ತು. ಅವರ ಸೇವಾವಧಿ ಮುಗಿದ ನಂತರ, ಸಮಿತಿಯು ನಿಯಮಬಾಹಿರವಾಗಿ 31/07/2025 ರಂದು ಮತ್ತೆ ಎರಡು ವರ್ಷಗಳ ಕಾಲ ಅವರ ಅವಧಿಯನ್ನು ವಿಸ್ತರಿಸಿ ಆದೇಶ ಹೊರಡಿಸಿತ್ತು. ಆದರೆ, ಈ ಮರುನೇಮಕವು ಸರ್ಕಾರದ ಆಡಳಿತ ಸುಧಾರಣಾ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಸರ್ಕಾರವೇ ಈಗ ಚಾಟಿ ಬೀಸಿದೆ.

ಎರಡು ವರ್ಷಗಳ ಕಾಲ ಅವಧಿಯನ್ನು ವಿಸ್ತರಿಸಿ ಆದೇಶ

ಸರ್ಕಾರದ ಆದೇಶದಲ್ಲೇನಿದೆ?

ಕಳೆದ ಜನವರಿ 22, 2026 ರಂದು ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯ ಉಪ ಕಾರ್ಯದರ್ಶಿಗಳು ಅಧಿಕೃತ ಪತ್ರ (ಸಂಖ್ಯೆ: MWD-WHJ/4/2026) ಹೊರಡಿಸಿದ್ದು, ಅದರಲ್ಲಿ ಅತ್ಯಂತ ಸ್ಪಷ್ಟವಾಗಿ ಹೀಗೆ ಉಲ್ಲೇಖಿಸಲಾಗಿದೆ.:

 “ಸಿದ್ದಿಕ್ ಪಾಷಾ ಅವರ ನೇಮಕಾತಿಯು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಆದೇಶಕ್ಕೆ ವಿರುದ್ಧವಾಗಿದೆ. ಆದ್ದರಿಂದ ಅವರನ್ನು ಕೂಡಲೇ ವಿಶೇಷ ಅಧಿಕಾರಿ ಹುದ್ದೆಯ ಕರ್ತವ್ಯದಿಂದ ಬಿಡುಗಡೆಗೊಳಿಸಿ, ಆ ಬಗ್ಗೆ ಸರ್ಕಾರಕ್ಕೆ ವರದಿ ನೀಡಬೇಕು.”

ಆದರೆ, ಈ ಆದೇಶ ಹೊರಬಿದ್ದು ಮೂರು ತಿಂಗಳು ಕಳೆದರೂ ಸಿದ್ದಿಕ್ ಪಾಷಾ ಅವರನ್ನು ಬಿಡುಗಡೆಗೊಳಿಸದೆ ಹಜ್ ಸಮಿತಿ ರಕ್ಷಿಸುತ್ತಿದೆ.

ಹುದ್ದೆಯಿಂದ ಬಿಡುಗಡೆಗೊಳಿಸುವಂತೆ ಸರ್ಕಾರದ ಆದೇಶ ಪ್ರತಿ

ಅಧ್ಯಕ್ಷರ ಪ್ರಭಾವ, ಸಚಿವರ ಮೌನ!

ಹಜ್ ಸಮಿತಿಯ ಅಧ್ಯಕ್ಷರಾದ ಝುಲ್ಫಿಖರ್ ಅಹ್ಮದ್ ಖಾನ್ ಟಿಪ್ಪು ಅವರ ಅತಿಯಾದ ಪ್ರಭಾವದಿಂದಾಗಿಯೇ ಸಿದ್ದಿಕ್ ಪಾಷಾ ಅವರು ಇನ್ನೂ ಕುರ್ಚಿಗೆ ಅಂಟಿಕೊಂಡಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಸರ್ಕಾರದ ಆದೇಶಕ್ಕಿಂತ ಅಧ್ಯಕ್ಷರ ಮರ್ಜಿಯೇ ಇಲ್ಲಿ ದೊಡ್ಡದಾಗಿದೆ ಎಂಬುದು ಸಾಬೀತಾಗುತ್ತಿದೆ. ಅಚ್ಚರಿಯ ವಿಷಯವೆಂದರೆ, ಸರ್ಕಾರಿ ಆದೇಶ ಉಲ್ಲಂಘನೆಯಾಗುತ್ತಿದ್ದರೂ ಹಜ್ ಸಚಿವ ರಹೀಮ್ ಖಾನ್ ಅವರು ಈ ಬಗ್ಗೆ ಮೌನ ವಹಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಜನವರಿ ನಂತರವೂ ಸಂಬಳದ ಲೂಟಿ?

ಸರ್ಕಾರವು “ಕೂಡಲೇ ಬಿಡುಗಡೆಗೊಳಿಸಿ” ಎಂದು ಆದೇಶ ನೀಡಿದ್ದರೂ, ಕಳೆದ ಮೂರು ತಿಂಗಳಿಂದ ಸಿದ್ದಿಕ್ ಪಾಷಾ ಅವರು ಅಕ್ರಮವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಮಾತ್ರವಲ್ಲದೆ, ಸರ್ಕಾರಿ ಖಜಾನೆಯಿಂದ ಸಂಬಳವನ್ನೂ ಪಡೆಯುತ್ತಿದ್ದಾರೆ. ಇದು ನೇರವಾದ ಆರ್ಥಿಕ ಅಕ್ರಮ ಮತ್ತು ಸರ್ಕಾರಕ್ಕೆ ಮಾಡುತ್ತಿರುವ ವಂಚನೆಯಾಗಿದೆ. ಸಿದ್ದಿಕ್ ಪಾಷಾ ಅವರು ಇಂದಿಗೂ ಕರ್ತವ್ಯಕ್ಕೆ ಹಾಜರಾಗುತ್ತಿದ್ದು, ಇತ್ತೀಚೆಗೆ ಬೌರಿಂಗ್ ಆಸ್ಪತ್ರೆಯಲ್ಲಿ ನಡೆದ ಹಜ್ ಯಾತ್ರಿಕರ ವೈದ್ಯಕೀಯ ಪರೀಕ್ಷೆಯ ವೇಳೆಯೂ ಅಧ್ಯಕ್ಷರ ಜೊತೆ ರಾಜಾರೋಷವಾಗಿ ಕಾಣಿಸಿಕೊಂಡಿದ್ದಾರೆ.

ಬೌರಿಂಗ್ ಆಸ್ಪತ್ರೆಯಲ್ಲಿ ಹಜ್ ಸಮಿತಿಯ ಅಧ್ಯಕ್ಷರ ಝುಲ್ಫಿಖರ್ ಪಕ್ಕ ಪಾಷಾ

ಅಸಲಿ ಸುದ್ದಿಯ ಪ್ರಶ್ನೆಗಳು:

  • ಸರ್ಕಾರದ ಆದೇಶಕ್ಕೆ ಬೆಲೆ ಇಲ್ಲದಿದ್ದರೆ ಹಜ್ ಸಮಿತಿ ಸ್ವತಂತ್ರ ರಾಜ್ಯವೇ?
  • ನಿಯಮಬಾಹಿರ ನೇಮಕಾತಿ ರದ್ದುಗೊಳಿಸಲು ಅಧ್ಯಕ್ಷರಿಗೆ ಇರುವ ಅಡ್ಡಿಯಾದರೂ ಏನು?
  • ಅಕ್ರಮವಾಗಿ ಪಡೆದ ಕಳೆದ ಮೂರು ತಿಂಗಳ ಸಂಬಳವನ್ನು ಸಿದ್ದಿಕ್ ಪಾಷಾ ಅವರಿಂದ ವಸೂಲಿ ಮಾಡಲಾಗುತ್ತದೆಯೇ?
  • ಸಚಿವ ರಹೀಮ್ ಖಾನ್ ಅವರು ಈ ಅಕ್ರಮಕ್ಕೆ ಸಾಥ್ ನೀಡುತ್ತಿದ್ದಾರೆಯೇ ಅಥವಾ ಅಸಹಾಯಕರಾಗಿದ್ದಾರೆಯೇ?

ಸರ್ಕಾರದ ಪಾರದರ್ಶಕ ಆಡಳಿತಕ್ಕೆ ಸವಾಲು ಹಾಕುತ್ತಿರುವ ಹಜ್ ಸಮಿತಿಯ ಈ ನಡೆಯ ವಿರುದ್ಧ ಮುಖ್ಯಮಂತ್ರಿಗಳು ಮತ್ತು ಸಂಬಂಧಪಟ್ಟ ಇಲಾಖಾ ಉನ್ನತ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕಿದೆ. ಇಲ್ಲವಾದಲ್ಲಿ, ಈ ‘ಗುತ್ತಿಗೆ’ ರಾಜಕಾರಣ ಸರ್ಕಾರಿ ವ್ಯವಸ್ಥೆಯನ್ನೇ ಅಣಕಿಸಿದಂತಾಗುತ್ತದೆ.

ಇದನ್ನೂ ಓದಿ: Hajj Horror: ಹಜ್ ಅಧ್ಯಕ್ಷನಿಗೆ ರೀಲ್ಸ್ ಹುಚ್ಚು; ಇಸಿಜಿ ಹೆಸರಲ್ಲಿ ಮಹಿಳೆಯರ ಮರ್ಯಾದೆ ಹರಾಜು! ಕಣ್ಣೀರಿಟ್ಟ ಯಾತ್ರಿಕರು

ಸ್ವತಂತ್ರ ಮಾಧ್ಯಮ ಬೆಂಬಲಿಸಿ

ಯಾರ ಹಂಗೂ ಇಲ್ಲದ, ಯಾರಿಗೂ ಬಗ್ಗದ ಸ್ವತಂತ್ರ ಮಾಧ್ಯಮಕ್ಕೆ ನಿಮ್ಮ ಬೆಂಬಲದ ಅವಶ್ಯಕತೆ ಇದೆ...