Friday, September 11, 2026
Home ರಾಜ್ಯ LPG Crisis: ಬೆಂಗಳೂರಿಗರೇ ಎಚ್ಚರ.. ಇನ್ಮುಂದೆ ಸಿಗಲ್ಲ ಬಿಸಿ ಬಿಸಿ ವಡೆ, ಬಜ್ಜಿ, ಪಕೋಡ; ಸ್ನ್ಯಾಕ್ಸ್...

LPG Crisis: ಬೆಂಗಳೂರಿಗರೇ ಎಚ್ಚರ.. ಇನ್ಮುಂದೆ ಸಿಗಲ್ಲ ಬಿಸಿ ಬಿಸಿ ವಡೆ, ಬಜ್ಜಿ, ಪಕೋಡ; ಸ್ನ್ಯಾಕ್ಸ್ ಮೆನುವಿಗೂ ‘ಕೋಕ್’!

LPG Crisis: ಬೆಂಗಳೂರಿಗರೇ ಎಚ್ಚರ.. ಇನ್ಮುಂದೆ ಸಿಗಲ್ಲ ಬಿಸಿ ಬಿಸಿ ವಡೆ, ಬಜ್ಜಿ, ಪಕೋಡ; ಸ್ನ್ಯಾಕ್ಸ್ ಮೆನುವಿಗೂ 'ಕೋಕ್'!

ಬೆಂಗಳೂರು: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ತೀವ್ರ ಕೊರತೆಯಿಂದಾಗಿ (LPG Crisis) ಈಗಾಗಲೇ ರಾಜ್ಯದ ರಾಜಧಾನಿಯಲ್ಲಿ ಹಲವು ಹೋಟೆಲ್‌ಗಳು ಬೀಗ ಹಾಕಿವೆ. ಇನ್ಮುಂದೆ ನಿಮ್ಮ ನೆಚ್ಚಿನ ಕಟಕ್ ವಡೆ, ಬಿಸಿ ಬಿಸಿ ಬಜ್ಜಿ ಅಥವಾ ಪೂರಿ ಸಿಗುವುದು ಕಷ್ಟವಾಗಬಹುದು. ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ವ್ಯಾಪರಸ್ಥರು ಹೈರಾಣಾಗಿಸಿದ್ದು, ಅನಿವಾರ್ಯವಾಗಿ ಸ್ನ್ಯಾಕ್ಸ್ ಐಟಂಗಳಿಗೆ ಹೋಟೆಲ್ ಮಾಲೀಕರು ಬ್ರೇಕ್ ಹಾಕುತ್ತಿದ್ದಾರೆ.

ಸ್ನ್ಯಾಕ್ಸ್ ತಯಾರಿಕೆ ಸ್ಥಗಿತಕ್ಕೆ ಕಾರಣವೇನು?

ಸಾಮಾನ್ಯವಾಗಿ ವಡೆ, ಬಜ್ಜಿ, ಪಕೋಡ ಅಥವಾ ಗೋಬಿ ಮಂಚೂರಿಯನ್‌ನಂತಹ ಪದಾರ್ಥಗಳನ್ನು ಎಣ್ಣೆಯಲ್ಲಿ ಕರಿಯಲು ಹೆಚ್ಚಿನ ಉರಿಯ (High Flame) ಅವಶ್ಯಕತೆ ಇರುತ್ತದೆ. ಇದರಿಂದ ಗ್ಯಾಸ್ ಅತಿ ಶೀಘ್ರವಾಗಿ ಖಾಲಿಯಾಗುತ್ತದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ (LPG Crisis) ಉಂಟಾಗಿರುವುದರಿಂದ, ಲಭ್ಯವಿರುವ ಅಲ್ಪ ಪ್ರಮಾಣದ ಅನಿಲವನ್ನು ಉಳಿಸಿಕೊಳ್ಳಲು ಹೋಟೆಲ್ ಮಾಲೀಕರು ಈ ಕಠಿಣ ನಿರ್ಧಾರಕ್ಕೆ ಬಂದಿದ್ದಾರೆ.

ಮೆನುವಿನಲ್ಲಿ ‘ರೈಸ್ ಐಟಂ’ಗೆ ಮಾತ್ರ ಆದ್ಯತೆ

ಹೆಚ್ಚು ಗ್ಯಾಸ್ ವ್ಯಯಿಸುವ ತಿಂಡಿಗಳ ಬದಲಿಗೆ, ಕಡಿಮೆ ಅವಧಿಯಲ್ಲಿ ಮತ್ತು ಕಡಿಮೆ ಇಂಧನ ಬಳಸಿ ತಯಾರಿಸಬಹುದಾದ ಚಿತ್ರಾನ್ನ, ಪಲಾವ್, ಬಿಸಿಬೇಳೆ ಬಾತ್ ನಂತಹ ರೈಸ್ ಐಟಂಗಳಿಗೆ ಹೋಟೆಲ್‌ಗಳು ಆದ್ಯತೆ ನೀಡುತ್ತಿವೆ. “ಗ್ರಾಹಕರು ಪರಿಸ್ಥಿತಿಯನ್ನು ಅರ್ಥೈಸಿಕೊಂಡು ಸಹಕರಿಸಬೇಕು, ಎಣ್ಣೆ ತಿಂಡಿಗಳಿಗಾಗಿ ಒತ್ತಾಯಿಸಬಾರದು” ಎಂದು ಹೋಟೆಲ್ ಸಂಘಟನೆಗಳು ಮನವಿ ಮಾಡಿವೆ.

ಇದನ್ನೂ ಓದಿ: Geopolitics: ಟ್ರಂಪ್‌ ಸ್ನೇಹದಿಂದ ತೈಲ ರಿಯಾಯತಿ ಖತಂ! ರಷ್ಯಾ ಸ್ನೇಹಕ್ಕೆ ಕುತ್ತು ತಂದ ಅಮೆರಿಕ ಆಲಂಗಿನ

ಹೋಟೆಲ್ ಉದ್ಯಮಕ್ಕೆ ಆರ್ಥಿಕ ಪೆಟ್ಟು

ಈ ಬದಲಾವಣೆಯಿಂದ ಹೋಟೆಲ್ ಮಾಲೀಕರು ಕೇವಲ ಗ್ರಾಹಕರನ್ನಷ್ಟೇ ಅಲ್ಲ, ಆದಾಯವನ್ನೂ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

  • ಆದಾಯ ಕುಸಿತ: ಸ್ನ್ಯಾಕ್ಸ್ ಮತ್ತು ಎಣ್ಣೆ ತಿಂಡಿಗಳ ಮಾರಾಟ ನಿಂತರೆ ಒಟ್ಟಾರೆ ಆದಾಯದಲ್ಲಿ ಶೇ. 30 ರಿಂದ 40 ರಷ್ಟು ಕುಸಿತವಾಗುವ ಸಾಧ್ಯತೆಯಿದೆ.
  • ಸಂಜೆಯ ವ್ಯಾಪಾರಕ್ಕೆ ಹೊಡೆತ: ಸಂಜೆ ವೇಳೆ ಪಾರ್ಸೆಲ್ ಕೊಂಡೊಯ್ಯುವವರು ಹೆಚ್ಚಾಗಿ ಬಜ್ಜಿ, ಬೋಂಡಾ ಮತ್ತು ಗೋಬಿಯಂತಹ ತಿಂಡಿಗಳನ್ನೇ ಬಯಸುತ್ತಾರೆ. ಇವುಗಳಿಲ್ಲದಿದ್ದರೆ ಸಂಜೆಯ ವ್ಯಾಪಾರ ಶೇ. 50 ರಷ್ಟು ಕುಸಿಯಬಹುದು ಎಂದು ಅಂದಾಜಿಸಲಾಗಿದೆ.

ಗ್ರಾಹಕರಲ್ಲಿ ವಿನಂತಿ: “ನಮ್ಮಲ್ಲಿ ಸಿಲಿಂಡರ್ ಸ್ಟಾಕ್ ಕಡಿಮೆ ಇರುವುದರಿಂದ, ಸದ್ಯಕ್ಕೆ ವಡೆ, ಪೂರಿ ಮತ್ತು ಸ್ನ್ಯಾಕ್ಸ್ ಲಭ್ಯವಿರುವುದಿಲ್ಲ. ದಯವಿಟ್ಟು ರೈಸ್ ಐಟಂಗಳನ್ನು ಆರ್ಡರ್ ಮಾಡಿ ಸಹಕರಿಸಿ.” – ಇದು ಸದ್ಯ ಬೆಂಗಳೂರಿನ ಬಹುತೇಕ ಹೋಟೆಲ್‌ಗಳ ಮುಂದಿರುವ ಬೋರ್ಡ್‌ಗಳ ಸಾರಾಂಶ.

ಒಟ್ಟಾರೆಯಾಗಿ, ಇಂಧನ ಪೂರೈಕೆ ಸರಿಹೋಗುವವರೆಗೂ ಬೆಂಗಳೂರಿಗರು ತಮ್ಮ ನೆಚ್ಚಿನ ‘ಕ್ರಿಸ್ಪಿ’ ತಿಂಡಿಗಳಿಗಾಗಿ ಸ್ವಲ್ಪ ದಿನ ಕಾಯಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಸ್ವತಂತ್ರ ಮಾಧ್ಯಮ ಬೆಂಬಲಿಸಿ

ಯಾರ ಹಂಗೂ ಇಲ್ಲದ, ಯಾರಿಗೂ ಬಗ್ಗದ ಸ್ವತಂತ್ರ ಮಾಧ್ಯಮಕ್ಕೆ ನಿಮ್ಮ ಬೆಂಬಲದ ಅವಶ್ಯಕತೆ ಇದೆ...