Homeವಿಶ್ಲೇಷಣೆNCERT Row: ಪಠ್ಯದಲ್ಲಿ ಲಂಚದ ಪಾಠ; ಸುಪ್ರೀಂ ಕೋರ್ಟ್ ಕೆಂಗಣ್ಣು!

NCERT Row: ಪಠ್ಯದಲ್ಲಿ ಲಂಚದ ಪಾಠ; ಸುಪ್ರೀಂ ಕೋರ್ಟ್ ಕೆಂಗಣ್ಣು!

NCERT Row: ದೇಶದಲ್ಲಿ ಶಿಕ್ಷಣ ವ್ಯವಸ್ಥೆ ಹಾಗೂ ನ್ಯಾಯಾಂಗದ ಗೌರವದ ಕುರಿತಾಗಿ ಮಹತ್ವದ ಚರ್ಚೆಗೆ ಕಾರಣವಾದ ಒಂದು ಘಟನೆ ಬೆಳಕಿಗೆ ಬಂದಿದೆ. ಶಾಲಾ ಪಠ್ಯಪುಸ್ತಕದಲ್ಲಿನ ವಿಷಯವನ್ನು ಆಧರಿಸಿ ಉದ್ಭವಿಸಿದ ವಿವಾದದ ಹಿನ್ನೆಲೆಯಲ್ಲಿ ಭಾರತದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸುವುದಷ್ಟೆ ಅಲ್ಲದೆ ಇದನ್ನು ಯಾವುದೇ ಕಾರಣಕ್ಕೂ ಸುಮ್ಮನೆ ಬಿಡುವುದಿಲ್ಲ ಇದಕ್ಕೆ ತಲೆದಂಡ ಆಗಲೇ ಬೇಕು ಎನ್ನುವ ರೀತಿ ಹೇಳುತ್ತಿದ್ದಾರೆ. ಮತ್ತೊಂದು ಕಡೆ ಕೇಂದ್ರ ಸರ್ಕಾರ ಕ್ಷಮೆಯಾಚಿಸಿದೆ. ಈ ಘಟನೆ ಪಠ್ಯಪುಸ್ತಕಗಳ ವಿಷಯ, ಶಿಕ್ಷಣದ ಹೊಣೆಗಾರಿಕೆ ಹಾಗೂ ನ್ಯಾಯಾಂಗದ ಗೌರವ ಕುರಿತು ರಾಷ್ಟ್ರವ್ಯಾಪಿ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.

ಶಾಲಾ ಪಠ್ಯಪುಸ್ತಕದ ವಿಷಯದ ಮೇಲೆ ನ್ಯಾಯಾಂಗವು ವ್ಯಕ್ತಪಡಿಸಿದ ಕಠಿಣ ಪ್ರತಿಕ್ರಿಯೆ, ಶಿಕ್ಷಣದ ಸ್ವಾಯತ್ತತೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮಿತಿಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ತಲೆದೂರಿವೆ. ವಿದ್ಯಾರ್ಥಿಗಳಿಗೆ ವಾಸ್ತವಾಂಶಗಳನ್ನು ತಿಳಿಸುವ ಪ್ರಯತ್ನವೇ ವಿವಾದಕ್ಕೀಡಾದರೆ, ಶಿಕ್ಷಣದ ವ್ಯಾಪ್ತಿ ಎಷ್ಟರವರೆಗೆ ಇರಬೇಕು ಮತ್ತು ಸಂಸ್ಥೆಗಳ ಗೌರವದ ಮಿತಿ ಎಲ್ಲಿ ಆರಂಭವಾಗುತ್ತದೆ ಎಂಬ ಚರ್ಚೆ ಅನಿವಾರ್ಯವಾಗುತ್ತದೆ.

ಏನಿದು NCERT Row?

ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT) ಇತ್ತೀಚೆಗೆ ಪಠ್ಯಕ್ರಮ ಪರಿಷ್ಕರಣೆ ಪ್ರಕ್ರಿಯೆಯನ್ನು ಕೈಗೊಂಡಿದ್ದು, ಅದರ ಭಾಗವಾಗಿ 8ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕ Exploring Society: India and Beyond, Vol II ಅನ್ನು ಡಿಜಿಟಲ್ ರೂಪದಲ್ಲಿ ಪ್ರಕಟಿಸಿದೆ. ಈ ಪುಸ್ತಕ ವಿದ್ಯಾರ್ಥಿಗಳ ಕೈಗೆ ತಲುಪುವ ಹಂತಕ್ಕೆ ಬಂದ ಬಳಿಕ ಅದರ ಒಂದು ಅಧ್ಯಾಯದ ವಿಷಯವಸ್ತು ಸಾರ್ವಜನಿಕ ಚರ್ಚೆಗೆ ಕಾರಣವಾಗಿದೆ.

ಅಧ್ಯಾಯ 4ರಲ್ಲಿ “ನಮ್ಮ ಸಮಾಜದಲ್ಲಿ ನ್ಯಾಯಾಂಗದ ಪಾತ್ರ” ಎಂಬ ವಿಷಯವನ್ನು ವಿವರಿಸುವ ಸಂದರ್ಭದಲ್ಲಿ, ದೇಶದ ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆ ಪೂರ್ಣಗೊಳ್ಳದೇ ಬಾಕಿ ಉಳಿದಿರುವ ಪ್ರಕರಣಗಳ ಕುರಿತು ಉಲ್ಲೇಖಿಸಲಾಗಿದೆ. ಈ ಬಾಕಿ ಪ್ರಕರಣಗಳ ಪ್ರಮಾಣದಿಂದ ನ್ಯಾಯದ ವಿತರಣೆಯಲ್ಲಿ ವಿಳಂಬ ಉಂಟಾಗುತ್ತಿರುವುದನ್ನು ಪುಸ್ತಕದಲ್ಲಿ ಚರ್ಚಿಸಲಾಗಿದೆ. ಜೊತೆಗೆ, ನ್ಯಾಯಾಂಗ ವ್ಯವಸ್ಥೆಯೊಳಗಿನ ಭ್ರಷ್ಟಾಚಾರ ಸಂಬಂಧಿತ ವಿಚಾರಗಳನ್ನೂ ಅಂಕಿಅಂಶಗಳ ಆಧಾರದ ಮೇಲೆ ವಿವರಿಸಲಾಗಿದೆ.

ಪಠ್ಯಪುಸ್ತಕದ “Justice Delayed is Justice Denied” ಎಂಬ ಉಪಶೀರ್ಷಿಕೆಯ ಅಡಿಯಲ್ಲಿ ನ್ಯಾಯಾಂಗ ವ್ಯವಸ್ಥೆಯ ಕಾರ್ಯಕ್ಷಮತೆ ಕುರಿತಾಗಿ ಹಲವು ಗಂಭೀರ ಅಂಶಗಳನ್ನು ಪ್ರಸ್ತಾಪಿಸಲಾಗಿದೆ. ದೇಶದ ವಿವಿಧ ಹಂತದ ನ್ಯಾಯಾಲಯಗಳಲ್ಲಿ ಬಾಕಿ ಉಳಿದಿರುವ ಪ್ರಕರಣಗಳ ಸಂಖ್ಯೆಯನ್ನು ಸ್ಪಷ್ಟ ಅಂಕಿ-ಅಂಶಗಳೊಂದಿಗೆ ಇಲ್ಲಿ ಉಲ್ಲೇಖಿಸಲಾಗಿದೆ. ಅದರಂತೆ, ಸರ್ವೋಚ್ಚ ನ್ಯಾಯಾಲಯದಲ್ಲಿ ಸುಮಾರು 81,000 ಪ್ರಕರಣಗಳು, ಉಚ್ಚ ನ್ಯಾಯಾಲಯಗಳಲ್ಲಿ 62,40,000 ಪ್ರಕರಣಗಳು ಹಾಗೂ ಜಿಲ್ಲಾ ಮತ್ತು ಇತರೆ ಅಧೀನ ನ್ಯಾಯಾಲಯಗಳಲ್ಲಿ ಸುಮಾರು 4 ಕೋಟಿ 70 ಲಕ್ಷಕ್ಕೂ ಅಧಿಕ ಪ್ರಕರಣಗಳು ಇನ್ನೂ ಬಾಕಿ ಇವೆ ಎಂದು ವಿವರಿಸಲಾಗಿದೆ. ಈ ಅಂಕಿ-ಅಂಶಗಳ ಆಧಾರದಲ್ಲಿ ನ್ಯಾಯ ವಿತರಣೆಯಲ್ಲಿ ಉಂಟಾಗುತ್ತಿರುವ ವಿಳಂಬವನ್ನು ಪುಸ್ತಕವು ಉಲ್ಲೇಖಿಸುತ್ತದೆ.

ಇದಕ್ಕೆ ಜೊತೆಯಾಗಿ “Corruption in Judiciary” ಅಂದರೆ ನ್ಯಾಯಾಂಗದಲ್ಲಿನ ಭ್ರಷ್ಟಾಚಾರ ಎಂಬ ವಿಷಯವನ್ನೂ ಪುಸ್ತಕದಲ್ಲಿ ಪ್ರಸ್ತಾಪಿಸಲಾಗಿದೆ. ನ್ಯಾಯಾಂಗ ವ್ಯವಸ್ಥೆಯೊಳಗೆ ಭ್ರಷ್ಟಾಚಾರ ಸಂಬಂಧಿತ ದೂರುಗಳು ದಾಖಲಾಗಿರುವುದನ್ನು ಸೂಚಿಸಿ, 2016ರಿಂದ 2025ರವರೆಗೆ ಸುಮಾರು 8,600 ದೂರುಗಳು ದಾಖಲಾಗಿವೆ ಎಂದು ಹೇಳಲಾಗಿದೆ. ಅದರಲ್ಲಿ 2014ರಲ್ಲಿ ಮಾತ್ರವೇ 1,170 ದೂರುಗಳು ದಾಖಲಾಗಿದ್ದವು ಎಂಬ ಅಂಕಿ-ಅಂಶಗಳನ್ನೂ ನೀಡಲಾಗಿದೆ. ಈ ದೂರುಗಳು ಪ್ರಸ್ತುತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನ್ಯಾಯಮೂರ್ತಿಗಳ ವಿರುದ್ಧವಾಗಿಯೇ ದಾಖಲಾಗಿವೆ ಎಂಬ ಉಲ್ಲೇಖವೂ ಇದೆ.

ಈ ಉಲ್ಲೇಖಗಳಲ್ಲಿನ ಮಾಹಿತಿಗಳು ವಾಸ್ತವಾಂಶಗಳ ಆಧಾರದಲ್ಲಿ ಪ್ರಸ್ತಾಪಿಸಿದ್ದರೂ, , ನ್ಯಾಯಾಂಗದ ಗೌರವ ಮತ್ತು ಅದರ ಸಾರ್ವಜನಿಕ ಪ್ರತಿಷ್ಠೆಗೆ ಧಕ್ಕೆಯಾಗಬಹುದು ಎಂಬ ಆಕ್ಷೇಪಣೆಗಳು ವ್ಯಕ್ತವಾಗಿವೆ. ಇದರ ಪರಿಣಾಮವಾಗಿ, ಪಠ್ಯಪುಸ್ತಕದ ವಿಷಯವಸ್ತು, ಅದರ ಉದ್ದೇಶ ಮತ್ತು ಶಿಕ್ಷಣದ ಮಿತಿಗಳ ಕುರಿತು ವಿವಾದ ಸೃಷ್ಟಿಯಾಗಿದೆ.

ಇದನ್ನೂ ಓದಿ: ‘ಹಲಗೆ ಮಜಲು’; ಕೋಮುವಾದಿಗಳ ಕುತಂತ್ರಕ್ಕೆ ಸೌಹಾರ್ದತೆಯ ಚಡಿ ಏಟು!

ಮಾನ್ಯ ಸರ್ವೋಚ್ಚ ನ್ಯಾಯಾಲಯದ ಪ್ರತಿಕ್ರಿಯೆ

ಈ ವಿಷಯವನ್ನು ಮಾನ್ಯ ಸರ್ವೋಚ್ಚ ನ್ಯಾಯಾಲಯ ಅತ್ಯಂತ ಗಂಭೀರವಾಗಿ ಪರಿಗಣಿಸಿ ಸ್ವಯಂ ಪ್ರೇರಿತ (suo motu) ಪ್ರಕರಣವನ್ನು ದಾಖಲಿಸಿಕೊಂಡಿತು. ನಂತರ ಈ ವಿಚಾರವನ್ನು ಪರಿಶೀಲಿಸಲು ಮೂರು ನ್ಯಾಯಾಧೀಶರ ಪೀಠವನ್ನು ರಚಿಸಲಾಯಿತು. ಈ ಪೀಠದ ನೇತೃತ್ವವನ್ನು ಮುಖ್ಯ ನ್ಯಾಯಮೂರ್ತಿಗಳಾದ ಮಾನ್ಯ ಸುರ್ಯಕಾಂತರವರು ವಹಿಸಿದ್ದರು. ವಿಚಾರಣೆ ಪೀಠದ ಮುಂದೆ ಬಂದಾಗ, ನ್ಯಾಯಾಲಯವು ಪಠ್ಯಪುಸ್ತಕದ ವಿಷಯವಸ್ತುವಿನ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿತು.

ಪೀಠವು ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುವ ವೇಳೆ ಕಠಿಣ ಪದಗಳನ್ನು ಬಳಸಿದುದಾಗಿ ವರದಿಯಾಗಿದೆ. ನ್ಯಾಯಾಂಗದ ಮೇಲೆ “ಗುಂಡು ಹಾರಿಸಲಾಗಿದೆ” ಎಂಬ ರೂಪಕದ ಮೂಲಕ ಸಂಸ್ಥೆಯ ಗೌರವಕ್ಕೆ ಧಕ್ಕೆಯಾಗಿದೆ ಎಂದು ಹೇಳಲಾಗಿದೆ. ನ್ಯಾಯಾಂಗದ “ರಕ್ತ ಸುರಿಯುತ್ತಿದೆ” ಎಂಬ ಅಭಿವ್ಯಕ್ತಿಯ ಮೂಲಕ ಈ ವಿಷಯದ ಗಂಭೀರತೆಯನ್ನು ಒತ್ತಿ ಹೇಳಲಾಗಿದೆ. ನ್ಯಾಯಾಂಗದ ಮುಖ್ಯಸ್ಥನಾಗಿ, ಈ ಪರಿಸ್ಥಿತಿಗೆ ಕಾರಣರಾದವರನ್ನು ಪತ್ತೆಹಚ್ಚುವುದು ತನ್ನ ಕರ್ತವ್ಯವೆಂದು ಮುಖ್ಯ ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟರು.

ಅವರು ಮುಂದುವರೆದು, ಇಂತಹ ಘಟನೆಗಳನ್ನು ನಿಯಂತ್ರಿಸದಿದ್ದರೆ ನ್ಯಾಯಾಂಗದ ಪಾವಿತ್ರ್ಯತೆಗೆ ಧಕ್ಕೆಯಾಗುತ್ತದೆ ಮತ್ತು ಸಾರ್ವಜನಿಕರ ವ್ಯವಸ್ಥೆಯ ಮೇಲಿನ ನಂಬಿಕೆ ಕುಗ್ಗುವ ಅಪಾಯವಿದೆ ಎಂದು ಎಚ್ಚರಿಸಿದರು. ಈ ಹೇಳಿಕೆಗಳು ವಿಚಾರದ ತೀವ್ರತೆಯನ್ನು ಮಾತ್ರವಲ್ಲದೆ, ನ್ಯಾಯಾಂಗವು ತನ್ನ ಪ್ರತಿಷ್ಠೆ ಮತ್ತು ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ತಾಳಿದ ದೃಢ ನಿಲುವನ್ನೂ ಪ್ರತಿಬಿಂಬಿಸುತ್ತವೆ.

ಅವರು ಮುಂದುವರೆದು ಮಾತನಾಡುತ್ತಾ, ನ್ಯಾಯಾಂಗವನ್ನು ಅವಹೇಳನ ಮಾಡುವ ಉದ್ದೇಶದಿಂದಲೇ ಲೆಕ್ಕಾಚಾರ ಮಾಡಿ ಇಂತಹ ಸಂಚು ರೂಪಿಸಲಾಗಿದೆ ಎಂಬ ಅನುಮಾನ ವ್ಯಕ್ತಪಡಿಸಿದರು. ಈ ಕುರಿತು ನ್ಯಾಯಾಲಯಗಳು ನೀಡಿರುವ ನಿರ್ದೇಶನಗಳನ್ನು ಪಾಲಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು. ನ್ಯಾಯಾಲಯಕ್ಕೆ ಶಾಶ್ವತ ಕಳಂಕ ತರುವ ಉದ್ದೇಶದಿಂದ ಇಂತಹ ಅನಾಚಾರ ನಡೆಗಳನ್ನು ಕೈಗೊಳ್ಳುವುದು ಕ್ರೀಮಿನಲ್ ನಿಂದನೆಗೆ ಒಳಪಡುವ ವಿಷಯವಾಗಬಹುದು ಎಂದು ಅವರು ಹೇಳಿದರು. ಇಂತಹ ಕ್ರಮಗಳ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳಬೇಕು, ಇಲ್ಲವಾದರೆ ಜನರು ನ್ಯಾಯಾಲಯದ ಮೇಲೆ ಇಟ್ಟಿರುವ ನಂಬಿಕೆಗೆ ಧಕ್ಕೆ ಉಂಟಾಗುತ್ತದೆ ಎಂಬ ಆತಂಕವನ್ನೂ ವ್ಯಕ್ತಪಡಿಸಿದರು.

NCERT ಸಂಸ್ಥೆ ಕೇಂದ್ರ ಹಾಗೂ ರಾಜ್ಯಗಳ ಶಿಕ್ಷಣ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ, ಸಂಬಂಧಿಸಿದ ಪಠ್ಯಪುಸ್ತಕಗಳ ಎಲ್ಲಾ ಪ್ರತಿಗಳನ್ನು ಜಪ್ತಿ ಮಾಡಬೇಕು ಹಾಗೂ ಅವು ಸಾರ್ವಜನಿಕರಿಗೆ ಲಭ್ಯವಾಗದಂತೆ ಖಾತರಿಪಡಿಸಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು. ಜೊತೆಗೆ, ಆ ಪುಸ್ತಕಗಳ ಮರುಮುದ್ರಣ ನಡೆಯಬಾರದು ಮತ್ತು ಡಿಜಿಟಲ್ ಪ್ರತಿಗಳೂ ಲಭ್ಯವಾಗಬಾರದು ಎಂದು ಹೇಳಿದರು. ಮುಂದುವರೆದು, 8ನೇ ತರಗತಿಯಲ್ಲಿ ಓದುತ್ತಿರುವ ಮಕ್ಕಳಿಗೆ ಇಂತಹ ವಿಷಯಗಳನ್ನು ಹೇಳುವುದರಿಂದ ಏನನ್ನು ಸಾಧಿಸಲು ಹೋಗುತ್ತಿದ್ದೀರಿ? ಮಕ್ಕಳ ಮನಸ್ಸಿನಲ್ಲಿ ನ್ಯಾಯಾಂಗದ ಕುರಿತು ಏನು ಬಿತ್ತಲು ಯತ್ನಿಸುತ್ತಿದ್ದೀರಿ? ಎಂದು ಪ್ರಶ್ನಿಸಿದರು. ರಾಜಕೀಯ ವ್ಯವಸ್ಥೆಯ ಭಾಗವಾದ ಕಾರ್ಯಾಂಗ ಮತ್ತು ಶಾಸಕಾಂಗದಲ್ಲಿರುವ ಭ್ರಷ್ಟಾಚಾರದ ಬಗ್ಗೆ ಏಕೆ ಉಲ್ಲೇಖ ಮಾಡಲಾಗಿಲ್ಲ? ಕೇವಲ ನ್ಯಾಯಾಂಗವನ್ನೇ ಏಕೆ ನೇರವಾಗಿ ಹೊಣೆಗಾರಿಕೆ ಮಾಡುತ್ತಿದ್ದೀರಿ? ಎಂದು ಅವರು ಪ್ರಶ್ನೆ ಎತ್ತಿದರು.

ಇದನ್ನೂ ಓದಿ: ದೇಶಕ್ಕೆ ಸೈನಿಕ, ಹಳ್ಳಿಗೆ ದಲಿತ! ಸಾವಿನಲ್ಲೂ ಅಸ್ಪೃಶ್ಯತೆಯ ಅಟ್ಟಹಾಸ!

ಸಾರ್ವಜನಿಕ ಸಾಮಾಜಿಕ ಜಾಲತಾಣಗಳಲ್ಲಿ ಏನು ಚರ್ಚೆ ಆಗುತ್ತಿದೆ?

NCERT ಕುರಿತ ಈ ವಿವಾದ ಹೊಸದೇನಲ್ಲ. ಈ ಸಂಸ್ಥೆ ಪಠ್ಯಪುಸ್ತಕಗಳ ಮೇಲಿನ ನಿಯಂತ್ರಣ ಮತ್ತು ಹಸ್ತಕ್ಷೇಪದ ಬಗ್ಗೆ ಹಲವಾರು ಶಿಕ್ಷಣ ತಜ್ಞರು, ಇತಿಹಾಸಕಾರರು ಹಾಗೂ ವಿಚಾರವಾದಿಗಳು ಈಗಾಗಲೇ ಆಕ್ಷೇಪ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಹಿಂದೆ ವಿಜ್ಞಾನ ಮತ್ತು ಇತಿಹಾಸ ಪಠ್ಯಗಳಲ್ಲಿ NCERT ಮಾಡಿದ ಅಪಚಾರಗಳು ಕಡಿಮೆ ಅಲ್ಲ.
ವಿಶೇಷವಾಗಿ, ವಿಜ್ಞಾನ ಪಠ್ಯಗಳಲ್ಲಿ ವಿಜ್ಞಾನಕ್ಕೆ ಸಂಬಂಧಿಸದ ವಿಷಯಗಳನ್ನು ಸೇರಿಸಿರುವುದು ಕಂಡುಬಂದಿದೆ. ಉದಾಹರಣೆಗೆ, ಪುರಾಣ ಕಥೆಗಳನ್ನು ವಿಜ್ಞಾನ ಪಾಠಗಳಲ್ಲಿ ಸೇರಿಸಿ, ಅವನ್ನು ವಿಜ್ಞಾನದ ಹೆಸರಿನಲ್ಲಿ ವಿದ್ಯಾರ್ಥಿಗಳಿಗೆ ಬೋಧಿಸುವ ಪ್ರಯತ್ನ ನಡೆದಿದೆ ಎಂಬ ಆರೋಪಗಳು ಕೇಳಿಬಂದಿವೆ. ಇದು ದೇಶದ ವೈಜ್ಞಾನಿಕ ಹಾಗೂ ತಾರ್ಕಿಕ ಚಿಂತನೆಗಳ ಮೇಲೆ ಪರಿಣಾಮ ಬೀರಿದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ಇತಿಹಾಸ ಪಠ್ಯಗಳ ವಿಷಯದಲ್ಲೂ NCERT ಕೈಗೊಂಡ ಕ್ರಮಗಳು ಚರ್ಚೆಗೆ ಕಾರಣವಾಗಿವೆ. ಭಾರತದ ಇತಿಹಾಸದ ಕೆಲವು ಮೂಲ ಅಂಶಗಳನ್ನು ತಿದ್ದುಪಡಿ ಮಾಡಿ, ಕೆಲ ವಿಷಯಗಳನ್ನು ತೆಗೆದುಹಾಕಲಾಗಿದೆ ಎಂದು ಟೀಕೆಗಳಿವೆ. ಉದಾಹರಣೆಗೆ, 8ನೇ ತರಗತಿಯ ಪಠ್ಯಪುಸ್ತಕದಲ್ಲಿ Tipu Sultan, Razia Sultana ಹಾಗೂ Nur Jahan ಮುಂತಾದ ಐತಿಹಾಸಿಕ ವ್ಯಕ್ತಿಗಳ ಉಲ್ಲೇಖವನ್ನು ಕೈಬಿಟ್ಟ ಘಟನೆ ಚರ್ಚೆಗೆ ಕಾರಣವಾಗಿತ್ತು. ಈ ಕ್ರಮವನ್ನು NCERT ಸಮರ್ಥಿಸಿಕೊಂಡಿತ್ತು. ಆದರೆ, ಇಂತಹ ಬದಲಾವಣೆಗಳು ಭಾರತೀಯ ಶಿಕ್ಷಣದ ಮಟ್ಟವನ್ನು ಕುಗ್ಗಿಸುವ ಸಾಧ್ಯತೆ ಇದೆ ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ.

ಇದೀಗ ಮೊದಲ ಬಾರಿಗೆ NCERTನ ಬೆಜವಾಬ್ದಾರಿಯ ಬಗ್ಗೆ ತೀವ್ರವಾಗಿ ಖಂಡನೆ ವ್ಯಕ್ತವಾಗಿದೆ. ಮಾನ್ಯ ಸರ್ವೋಚ್ಚ ನ್ಯಾಯಾಲಯದ ಸಿಟ್ಟಿನಿಂದ ಕೇಂದ್ರ ಸರ್ಕಾರವೂ ಕಂಗಾಲಾದಂತಾಗಿದೆ. ಪಠ್ಯಪುಸ್ತಕದಲ್ಲಿ ನಡೆದ ಈ ಅಚಾತುರ್ಯದ ಕುರಿತು ಸರ್ಕಾರ ಕ್ಷಮೆಯಾಚಿಸಿದೆ. ಈ ಸಂಸ್ಥೆ ಪಠ್ಯಪುಸ್ತಕಗಳೊಂದಿಗೆ ಚಲ್ಲಾಟ ನಡೆಸುತ್ತಿರುವುದು ಕೊನೆಗೂ ನ್ಯಾಯಾಲಯದ ಗಮನಕ್ಕೆ ಬಂದಿದೆ. ವಿಶೇಷವಾಗಿ ನ್ಯಾಯಾಂಗ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರ ಕುರಿತ ವಿಷಯದ ಬಗ್ಗೆ ಮಾನ್ಯ ಸರ್ವೋಚ್ಚ ನ್ಯಾಯಾಲಯ ದ್ವನಿ ಎತ್ತಿದೆ. ಆದರೆ, ವಿಜ್ಞಾನ ಮತ್ತು ಇತಿಹಾಸ ಪಠ್ಯಗಳಲ್ಲಿ ಈಗಾಗಲೇ ನಡೆದಿರುವ ಅಚಾತುರ್ಯಗಳ ಬಗ್ಗೆ ಏಕೆ ನ್ಯಾಯಾಲಯ ಗಮನ ಹರಿಸಲಾಗಲಿಲ್ಲ ಎಂಬುದು ಸಾರ್ವಜನಿಕರ ವಾದವಾಗಿದೆ.

ಇದನ್ನೂ ಓದಿ: Arvind Kejriwal: ಮೋದಿ ಸರ್ಕಾರದ ‘ಸಂಚು’ ಧೂಳೀಪಟ; CBI ‘ಕೈಗೊಂಬೆ’ ಎಂದ ಕೋರ್ಟ್! ಪ್ರಕರಣದ ಆಳ ಅಗಲ ಇಲ್ಲಿದೆ…

ಸಾಮಾಜಿಕ ಜಾಲತಾಣಗಳಲ್ಲಿ ಈಗ ಚರ್ಚೆಯಾಗುತ್ತಿರುವ ಪ್ರಮುಖ ಅಂಶವೆಂದರೆ, ನ್ಯಾಯಾಂಗ ವ್ಯವಸ್ಥೆಯಲ್ಲಿ ಭ್ರಷ್ಟಾಚಾರವೇ ಇಲ್ಲ ಎಂದು ಹೇಳುವುದು ಸರಿಯಲ್ಲ ಎಂಬ ಮಾತು. ಇತ್ತೀಚೆಗೆ ಒಬ್ಬ ನ್ಯಾಯಾಧೀಶರ ಮನೆಯಲ್ಲಿ ಕೋಟಿ ಕೋಟಿ ರೂಪಾಯಿ ಹಣ ಪತ್ತೆಯಾದ ಘಟನೆ ಪ್ರಶ್ನೆಗಳನ್ನು ಹುಟ್ಟಿಸಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಇಷ್ಟು ಪ್ರಮಾಣದ ಹಣ ಹೇಗೆ ಸಂಗ್ರಹಿಸಲಾಯಿತು? ಅದರ ಮೂಲ ಏನು? ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ ಎಂದು ಚರ್ಚಿಸಲಾಗುತ್ತಿದೆ.

ಅದರ ಜೊತೆಗೆ, 2016ರಿಂದ 2025ರವರೆಗೆ ನ್ಯಾಯಾಂಗದಲ್ಲಿನ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಸುಮಾರು 8,600 ದೂರುಗಳು ದಾಖಲಾಗಿವೆ ಎಂದು ಸರ್ಕಾರದ ಅಂಕಿಅಂಶಗಳೇ ಹೇಳುತ್ತಿವೆ ಎಂಬ ಹೇಳಿಕೆಗಳೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಆದರೆ, ಇಂತಹ ಅಂಶಗಳ ಕುರಿತು ಅಧಿಕೃತ ತನಿಖೆಗಳು, ನ್ಯಾಯಾಲಯದ ತೀರ್ಪುಗಳು ಮತ್ತು ದೃಢೀಕೃತ ಮಾಹಿತಿಗಳ ಆಧಾರದಲ್ಲೇ ಅಂತಿಮ ನಿರ್ಣಯಕ್ಕೆ ಬರಬೇಕು ಎಂಬ ಅಭಿಪ್ರಾಯವೂ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ನಿನ್ನೆ ನಾನು ಒಂದು ಕಾರ್ಟೂನ್ ಚಿತ್ರ ನೋಡಿದೆ. ಅದು ತಾಯಿ ಮತ್ತು ಮಗನ ನಡುವಿನ ಸಂಭಾಷಣೆಯಾಗಿತ್ತು. ಶಾಲೆಯಿಂದ ಮನೆಗೆ ಬಂದ ಮಗ, “ಅಮ್ಮ, ಭ್ರಷ್ಟಾಚಾರವನ್ನು ತೆಗೆದುಹಾಕಲಾಗಿದೆ” ಎಂದು ಹೇಳುತ್ತಾನೆ. ಅದನ್ನು ಕೇಳಿದ ತಾಯಿ ಆಶ್ಚರ್ಯದಿಂದ ಮತ್ತು ಅನುಮಾನದಿಂದ, “ಓಹ್… ಹಾಗೇನಾ? ತುಂಬಾ ಒಳ್ಳೆಯದು. ಎಲ್ಲಿಂದ ತೆಗೆದುಹಾಕಿದರು?” ಎಂದು ಕೇಳುತ್ತಾಳೆ. ಅದಕ್ಕೆ ಮಗ, “ಪಠ್ಯಪುಸ್ತಕದಿಂದ ಅಮ್ಮ…” ಎಂದು ಉತ್ತರಿಸುತ್ತಾನೆ. ಇದನ್ನು ಕೇಳಿದ ತಾಯಿ “ಪಠ್ಯಪುಸ್ತಕದಿಂದನಾ?” ಎಂದು ದೀರ್ಘ ನಿಟ್ಟುಸಿರು ಬಿಡುತ್ತಾ ಪಠ್ಯ ಪುಸ್ತಕದಿಂದಾನಾ…..? ಎನ್ನುತ್ತಾಳೆ. ಈ ಕಾರ್ಟೂನ್ ಕೇವಲ ನಾಲ್ಕು ಸಾಲಿನ ಕಥೆಯಾದರೂ, ಅದರೊಳಗೆ ಬಹಳ ದೊಡ್ಡ ಸಂದೇಶ ಅಡಗಿದೆ.

ನಮ್ಮ ಸಂವಿಧಾನದ ಮೂರು ಪ್ರಮುಖ ಅಂಗಗಳು ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗ. ಇವುಗಳು ಪ್ರಜಾಪ್ರಭುತ್ವದ ತತ್ವಗಳ ಆಧಾರದ ಮೇಲೆ ಕೆಲಸ ಮಾಡಬೇಕು. ಸರ್ವಾಧಿಕಾರದಿಂದ ವರ್ತಿಸದೇ ಸರ್ವರ ಅಧಿಕಾರವನ್ನು ಎತ್ತಿಹೀಡಿಯಬೇಕು. ಪ್ರತಿಯೊಬ್ಬರ ಹಕ್ಕು ಮತ್ತು ಅಧಿಕಾರವನ್ನು ಗೌರವಿಸಿ, ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಪ್ರಯತ್ನಿಸಬೇಕು. ಆಗ ಮಾತ್ರ ದೇಶದ ಪ್ರಗತಿ ಸಾಧ್ಯವಾಗುತ್ತದೆ. ಈ ರೀತಿಯಾಗಿ ಕೆಲಸ ಮಾಡಿದರೆ, ನಮ್ಮ ದೇಶವು ಎಲ್ಲಾ ಕ್ಷೇತ್ರಗಳಲ್ಲಿ ಇತರ ದೇಶಗಳಿಗೆ ಮಾದರಿಯಾಗುವಲ್ಲಿ ಯಾವುದೇ ಸಂದೇಹವಿಲ್ಲ.

♠:- ನೀಲಾ ಸೋಮಶೇಖರ

RELATED ARTICLES

Most Popular

Recent Comments