Saturday, September 12, 2026
Home ಸುದ್ದಿಗಳು PUC Exam: ಮೊದಲ ದಿನವೇ ‘ಹಾದಿ ತಪ್ಪಿಸಿದ’ ಮಂಡಳಿ: ವಿದ್ಯಾರ್ಥಿಗಳ ಪರದಾಟ!

PUC Exam: ಮೊದಲ ದಿನವೇ ‘ಹಾದಿ ತಪ್ಪಿಸಿದ’ ಮಂಡಳಿ: ವಿದ್ಯಾರ್ಥಿಗಳ ಪರದಾಟ!

PUC Exam: ಮೊದಲ ದಿನವೇ 'ಹಾದಿ ತಪ್ಪಿಸಿದ' ಮಂಡಳಿ: ವಿದ್ಯಾರ್ಥಿಗಳ ಪರದಾಟ!

ರಾಜ್ಯಾದ್ಯಂತ ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆಗಳ (PUC Exam) ಹಬ್ಬ ಶುರುವಾಗಿದೆ. ಆದರೆ, ಪರೀಕ್ಷಾ ಮಂಡಳಿ ಮತ್ತು ಕಾಲೇಜು ಆಡಳಿತ ಮಂಡಳಿಗಳ ‘ತಾಂತ್ರಿಕ ಎಡವಟ್ಟು’ ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಕ್ಕೆ ಹೋಗುವ ಬದಲು ರಸ್ತೆ ರಸ್ತೆಯಲ್ಲಿ ಅಲೆಯುವಂತೆ ಮಾಡಿದೆ. ಯಾದಗಿರಿಯ ಸಬಾ ಪಿಯು ಕಾಲೇಜಿನ ವಿದ್ಯಾರ್ಥಿಗಳು ಅನುಭವಿಸಿದ ಈ ಸಂಕಟ ಈಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ವಿಳಾಸವೇ ಅದಲು ಬದಲು: ಹಾಲ್ ಟಿಕೆಟ್ ನೀಡಿದ ಶಾಕ್!

ಯಾದಗಿರಿಯ ಸಬಾ ಪಿಯು ಕಾಲೇಜು ಇರುವುದು ಲುಂಬಿನಿ ಪಾರ್ಕ್ ಹತ್ತಿರ. ಆದರೆ, ಪಿಯು ಮಂಡಳಿ ನೀಡಿದ ಹಾಲ್ ಟಿಕೆಟ್‌ನಲ್ಲಿ ಪರೀಕ್ಷಾ ಕೇಂದ್ರದ ವಿಳಾಸವನ್ನು ‘ಗಂಜ್ ರೋಡ್’ ಎಂದು ನಮೂದಿಸಲಾಗಿತ್ತು. ಬೇರೆ ಊರುಗಳಿಂದ ಬಂದಿದ್ದ ನೂರಾರು ವಿದ್ಯಾರ್ಥಿಗಳು ಹಾಲ್ ಟಿಕೆಟ್ ನೋಡಿ ಗಂಜ್ ರೋಡ್‌ನಲ್ಲಿ ಕಾಲೇಜು ಹುಡುಕಿ ಸುಸ್ತಾಗಿದ್ದಾರೆ. ಪರೀಕ್ಷೆ ಆರಂಭವಾಗುವ ಆತಂಕದ ನಡುವೆ, ಕೊನೆ ಕ್ಷಣದಲ್ಲಿ ಸ್ಥಳೀಯರ ಸಹಾಯದಿಂದ ನಿಜವಾದ ಕೇಂದ್ರ ತಲುಪುವಷ್ಟರಲ್ಲಿ ವಿದ್ಯಾರ್ಥಿಗಳ ಆತ್ಮವಿಶ್ವಾಸವೇ ಕುಸಿದುಹೋಗಿತ್ತು.

ಪ್ರಶ್ನೆ ಇರುವುದು ಇಷ್ಟೇ: ಇಡೀ ರಾಜ್ಯದ ಪರೀಕ್ಷೆಯ ಜವಾಬ್ದಾರಿ ಹೊತ್ತಿರುವ ‘ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ’ಗೆ ಒಂದು ಕಾಲೇಜಿನ ಸರಿಯಾದ ವಿಳಾಸ ಪರಿಶೀಲಿಸಲು ಸಾಧ್ಯವಿಲ್ಲವೇ?

ಇದು ಮೊದಲೇನಲ್ಲ: ಪಿಯು ಮಂಡಳಿಯ ಎಡವಟ್ಟುಗಳ ಇತಿಹಾಸ

ಇಂದಿನ ಯಾದಗಿರಿ ಘಟನೆ ಕೇವಲ ಒಂದು ಉದಾಹರಣೆಯಷ್ಟೇ. ಕಳೆದ ಕೆಲವು ವರ್ಷಗಳಿಂದ ಪಿಯು ಮಂಡಳಿ ಒಂದಲ್ಲ ಒಂದು ಯಡವಟ್ಟು ಮಾಡಿಕೊಳ್ಳುತ್ತಲೇ ಬಂದಿದೆ:

  • ಪ್ರಶ್ನೆಪತ್ರಿಕೆ ಸೋರಿಕೆ ಕಳಂಕ: ಈ ಹಿಂದೆ ರಸಾಯನಶಾಸ್ತ್ರ ಪ್ರಶ್ನೆಪತ್ರಿಕೆ ಸತತ ಎರಡು ಬಾರಿ ಸೋರಿಕೆಯಾಗಿ ಇಡೀ ದೇಶದ ಮುಂದೆ ಕರ್ನಾಟಕದ ಪರೀಕ್ಷಾ ಪದ್ಧತಿ ನಗೆಪಾಟಲಿಗೀಡಾಗಿತ್ತು.
  • ಕನ್ನಡ ಆವೃತ್ತಿಯ ತಪ್ಪುಗಳು: ವಿಜ್ಞಾನ ಮತ್ತು ಗಣಿತ ವಿಷಯದ ಪ್ರಶ್ನೆಪತ್ರಿಕೆಗಳಲ್ಲಿ ಇಂಗ್ಲಿಷ್‌ನಿಂದ ಕನ್ನಡಕ್ಕೆ ಅನುವಾದ ಮಾಡುವಾಗ ಅದೆಷ್ಟೋ ಬಾರಿ ಗಂಭೀರ ತಪ್ಪುಗಳಾಗಿ ವಿದ್ಯಾರ್ಥಿಗಳು ಗೊಂದಲಕ್ಕೀಡಾದ ಉದಾಹರಣೆಗಳಿವೆ.
  • ಅಂಕಪಟ್ಟಿ ವಿತರಣೆಯಲ್ಲಿ ವಿಳಂಬ: ಮೌಲ್ಯಮಾಪನ ಸರಿಯಾಗಿ ಮಾಡದೆ ಅಂಕಗಳನ್ನು ಅದಲು ಬದಲು ಮಾಡುವುದು ಅಥವಾ ವೆಬ್‌ಸೈಟ್ ಕ್ರ್ಯಾಶ್ ಆಗಿ ವಿದ್ಯಾರ್ಥಿಗಳು ಫಲಿತಾಂಶಕ್ಕಾಗಿ ದಿನಗಟ್ಟಲೆ ಕಾಯುವಂತಾದ ಪರಿಸ್ಥಿತಿ ಮರುಕಳಿಸುತ್ತಲೇ ಇರುತ್ತದೆ.

ಇದನ್ನೂ ಓದಿ: Mallikarjun Mutya: ಪೋಕ್ಸೋ ಕೇಸ್‌ನಲ್ಲಿ ಫೋನ್‌ ಜಪ್ತಿ; ಮುತ್ಯಾನ ಮೊಬೈಲ್‌ದಾಗ ಏನೇನೈತಿ?

ಕಠಿಣ ನಿಯಮಗಳ ನಡುವೆ ಅಧಿಕಾರಿಗಳ ನಿರ್ಲಕ್ಷ್ಯವೇಕೆ?

ಪರೀಕ್ಷಾ ಕೇಂದ್ರದಲ್ಲಿ ಸಿಸಿ ಕ್ಯಾಮರಾ ಕಣ್ಗಾವಲು, ಮೊಬೈಲ್ ನಿಷೇಧ, ಬಿಗಿ ಭದ್ರತೆ ಎಂದು ವಿದ್ಯಾರ್ಥಿಗಳ ಮೇಲೆ ಕಠಿಣ ನಿಯಮ ಹೇರುವ ಮಂಡಳಿ, ತನ್ನ ಆಡಳಿತಾತ್ಮಕ ತಪ್ಪುಗಳನ್ನು ಸರಿಪಡಿಸಿಕೊಳ್ಳುವಲ್ಲಿ ಸೋಲುತ್ತಿದೆ. ಹಾಲ್ ಟಿಕೆಟ್ ಪ್ರಿಂಟ್ ಆಗುವ ಮೊದಲು ಕನಿಷ್ಠ ಪಕ್ಷ ವಿಳಾಸವನ್ನಾದರೂ ಮರುಪರಿಶೀಲಿಸುವ ಸೌಜನ್ಯವನ್ನು ಮಂಡಳಿ ತೋರಬೇಕಿತ್ತು.

ಮುಖ್ಯಮಂತ್ರಿಗಳ ಹಾರೈಕೆಯ ನಡುವೆಯೂ ಕಹಿ ಅನುಭವ:

ಸಿಎಂ ಸಿದ್ದರಾಮಯ್ಯ ಅವರು ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಿರಿ ಎಂದು ಶುಭ ಹಾರೈಸಿದ್ದಾರೆ. ಆದರೆ, ಸಿಸ್ಟಮ್ ಮಾಡಿದ ತಪ್ಪಿನಿಂದಾಗಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಮೊದಲೇ ಮಾನಸಿಕವಾಗಿ ಸೋತು ಹೋಗುವ ಪರಿಸ್ಥಿತಿ ನಿರ್ಮಾಣವಾಗಿರುವುದು ದುರಂತ.

ಸ್ವತಂತ್ರ ಮಾಧ್ಯಮ ಬೆಂಬಲಿಸಿ

ಯಾರ ಹಂಗೂ ಇಲ್ಲದ, ಯಾರಿಗೂ ಬಗ್ಗದ ಸ್ವತಂತ್ರ ಮಾಧ್ಯಮಕ್ಕೆ ನಿಮ್ಮ ಬೆಂಬಲದ ಅವಶ್ಯಕತೆ ಇದೆ...