ರಾಜ್ಯ ಬಿಜೆಪಿಯಲ್ಲಿ ಶಿಸ್ತು ಮತ್ತು ನಿಯಮಗಳು ಈಗ ಕೇವಲ ಕಾಗದದ ಮೇಲಿನ ಅಕ್ಷರಗಳಾಗಿ ಉಳಿದಿವೆಯೇ? ಈ ಪ್ರಶ್ನೆ ಈಗ ಬಾಗಲಕೋಟೆ ಜಿಲ್ಲೆಯ ರಾಜಕೀಯ ವಿದ್ಯಮಾನಗಳನ್ನು ಗಮನಿಸಿದರೆ ಎದ್ದುಕಾಣುತ್ತಿದೆ. ಪಕ್ಷದ ಪರಮೋಚ್ಛ ನಾಯಕತ್ವದ ವಿರುದ್ಧ ಸಮರ ಸಾರಿದ ಕಾರಣಕ್ಕೆ ಉಚ್ಛಾಟನೆಗೊಂಡಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Yatnal) ಅವರಿಗೆ ಇಂದು ಬಾಗಲಕೋಟೆಯ ಬಿಜೆಪಿ ದಿಗ್ಗಜರೇ ಬೆಂಗಾವಲಾಗಿ ನಿಂತಿರುವುದು ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದೆ. ಇದು ಕೇವಲ ಒಂದು ಪ್ರತಿಭಟನೆಯ ಸೌಜನ್ಯವಲ್ಲ, ಬದಲಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ವಿರುದ್ಧ ಬಾಗಲಕೋಟೆ ಜಿಲ್ಲೆಯೇ ಬಂಡಾಯದ ‘ಕೇಂದ್ರ ಬಿಂದು’ವಾಗಿ ಮಾರ್ಪಟ್ಟಿದೆಯೇ ಎಂಬ ಅನುಮಾನವನ್ನು ಹುಟ್ಟುಹಾಕಿದೆ.
ಉಚ್ಛಾಟಿತ ಶಾಸಕನ ಸುತ್ತ ‘ಬಿಜೆಪಿ’ ಕೋಟೆ!
ಯಾವುದೇ ಒಂದು ರಾಜಕೀಯ ಪಕ್ಷದಲ್ಲಿ ಒಬ್ಬ ವ್ಯಕ್ತಿಯನ್ನು ಉಚ್ಛಾಟನೆ ಮಾಡಿದರೆ, ಆತನೊಂದಿಗೆ ವೇದಿಕೆ ಹಂಚಿಕೊಳ್ಳುವುದು ಅಥವಾ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಪಕ್ಷದ ಶಿಸ್ತಿಗೆ ವಿರುದ್ಧವಾದ ಕೃತ್ಯ. ಆದರೆ ಬಾಗಲಕೋಟೆಯಲ್ಲಿ ಈ ನಿಯಮ ಗಾಳಿಗೆ ತೂರಲ್ಪಟ್ಟಿದೆ. ಉಚ್ಛಾಟಿತ ಶಾಸಕ ಯತ್ನಾಳ್ ಸುತ್ತಲೂ ಬಿಜೆಪಿಯ ರಾಜ್ಯಸಭಾ ಸದಸ್ಯ ನಾರಾಯಣ ಸಾ ಭಾಂಡಗೆ, ಶಾಸಕ ಸಿದ್ದು ಸವದಿ, ಮುಖಂಡರಾದ ಮೋಹನ್ ಜಾದವ್, ಅಶೋಕ್ ಲಿಂಗಾವಳಿ, ಗಿರೀಶ್ ಭಾಂಡಗೆ ಹಾಗೂ ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರ ಆಪ್ತ ವಲಯದ ಮುಖಂಡರು ಸದಾ ‘ಬಾಡಿಗಾರ್ಡ್’ಗಳಂತೆ ನೆರಳಿನಂತೆ ನಿಂತಿರುವುದು ವಿಜಯೇಂದ್ರ ಅವರ ನಾಯಕತ್ವಕ್ಕೆ ಮಾಡಿದ ಅವಮಾನವಲ್ಲವೇ? ಈ ನಾಯಕರು ಯತ್ನಾಳ್ ಅವರನ್ನು ರಕ್ಷಿಸುತ್ತಿರುವ ರೀತಿ ನೋಡಿದರೆ, ಇವರಿಗೆ ಪಕ್ಷದ ಅಧ್ಯಕ್ಷರಿಗಿಂತ ಉಚ್ಛಾಟಿತ ನಾಯಕನೇ ಹಿರಿಯ ಎನಿಸಿದಂತಿದೆ.
ವಿಜಯೇಂದ್ರ ವಿರೋಧಿ ಬಣದ ಉದಯ?
ಯತ್ನಾಳ್ (Yatnal) ಅವರು ಈ ಹಿಂದೆ ಬಿ.ಎಸ್. ಯಡಿಯೂರಪ್ಪ ಹಾಗೂ ಬಿ.ವೈ. ವಿಜಯೇಂದ್ರ ಅವರ ವಿರುದ್ಧ ಅತ್ಯಂತ ಕಟುವಾದ ಪದಗಳನ್ನು ಬಳಸಿ ಟೀಕಿಸಿದ್ದರು. “ಯಡಿಯೂರಪ್ಪ ಕುಟುಂಬ ಬಿಜೆಪಿಯನ್ನು ನುಂಗುತ್ತಿದೆ”, “ವಿಜಯೇಂದ್ರ ಅವರಿಗೆ ರಾಜಕೀಯ ಪಕ್ವತೆ ಇಲ್ಲ”, “ಇದು ಹೊಂದಾಣಿಕೆ ರಾಜಕಾರಣದ ಫಲ” ಎಂದು ನೇರವಾಗಿ ವಾಗ್ದಾಳಿ ನಡೆಸುತ್ತಲೇ ಬಂದಿದ್ದರು. ಹಾಗಾಗಿ ಯತ್ನಾಳ್ ಅವರನ್ನು ಪಕ್ಷದಿಂದ ಹೊರಹಾಕಲಾಗಿದೆ, ಆದರೆ, ಬಾಗಲಕೋಟೆ ಜಿಲ್ಲೆಯ ಪ್ರಮುಖ ನಾಯಕರು ಅವರ ಜೊತೆ ಸಾಲಾಗಿ ನಿಲ್ಲುವುದು ಏನನ್ನು ಸೂಚಿಸುತ್ತದೆ? ಇದು ಸ್ಪಷ್ಟವಾಗಿ ವಿಜಯೇಂದ್ರ ಅವರ ನಾಯಕತ್ವದ ವಿರುದ್ಧ ಬಾಗಲಕೋಟೆಯಲ್ಲಿ ಒಂದು ಪ್ರಬಲ “ವಿರೋಧಿ ಬಣ” ಸೃಷ್ಟಿಯಾಗುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಬಾಗಲಕೋಟೆಯ ಈ ನಾಯಕರೆಲ್ಲರೂ ಒಂದಾಗಿ ಯತ್ನಾಳ್ ಅವರಿಗೆ ಶಕ್ತಿ ತುಂಬುವ ಮೂಲಕ, ನಾವು ರಾಜ್ಯಾಧ್ಯಕ್ಷರ ನಿರ್ಧಾರದ ಜೊತೆಗಿಲ್ಲ ಎಂಬ ಸಂದೇಶವನ್ನು ಹೈಕಮಾಂಡ್‌ಗೆ ರವಾನಿಸುತ್ತಿದ್ದಾರಾ? ಎನ್ನುವ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಇದನ್ನೂ ಓದಿ: Bagalkot: ಕೇಸರಿ ಪಡೆಯ ‘ಡೆಡ್‌ಲೈನ್’ಗೆ ಡೋಂಟ್ ಕೇರ್! ಎಸ್‌ಪಿ ಸಿದ್ದಾರ್ಥ ಗೋಯಲ್ ಖಡಕ್ ‘ದಂಡಯಾತ್ರೆ’
ಹಳೆಯ ವಾಗ್ದಾಳಿಗಳ ಕಹಿನೆನಪು ಮತ್ತು ಬಂಡಾಯದ ಇಂಧನ
ಯತ್ನಾಳ್ ಅವರು ವಿಜಯೇಂದ್ರ ವಿರುದ್ಧ ಈ ಹಿಂದೆ ಮಾಡಿದ್ದ ಟೀಕೆಗಳು ಈಗ ಈ ಬಣಕ್ಕೆ ಇಂಧನದಂತೆ ಕೆಲಸ ಮಾಡುತ್ತಿವೆ. “ರಾಜ್ಯ ಬಿಜೆಪಿ ಅಧ್ಯಕ್ಷ ಪಟ್ಟ ಅಪ್ಪ ಹಾಕಿಕೊಟ್ಟ ಭಿಕ್ಷೆ” ಎಂದು ಯತ್ನಾಳ್ ಲೇವಡಿ ಮಾಡಿದ್ದರು. ವಿಜಯೇಂದ್ರ ಅವರು ಅಧ್ಯಕ್ಷರಾದ ದಿನದಿಂದಲೂ ಯತ್ನಾಳ್ ಅವರ ಕೆಂಗಣ್ಣಿಗೆ ಗುರಿಯಾಗಿದ್ದರು. ಬಿಜೆಪಿಯ ಹಿರಿಯ ನಾಯಕರನ್ನು ಕಡೆಗಣಿಸಿ ವಿಜಯೇಂದ್ರ ಅವರಿಗೆ ಅಧಿಕಾರ ನೀಡಲಾಗಿದೆ ಎಂಬುದು ಯತ್ನಾಳ್ ಅವರ ವಾದವಾಗಿತ್ತು. ಈಗ ಬಾಗಲಕೋಟೆಯ ಶಾಸಕರು ಮತ್ತು ಮುಖಂಡರು ಯತ್ನಾಳ್ ಅವರ ಈ ವಾದಕ್ಕೆ ಸಹಮತ ವ್ಯಕ್ತಪಡಿಸುತ್ತಿದ್ದಾರೆಯೇ? ನಾರಾಯಣ ಸಾ ಭಾಂಡಗೆ ಮತ್ತು ಸಿದ್ದು ಸವದಿ ಅವರಂತಹ ಹಿರಿಯರು ಯತ್ನಾಳ್ ಅವರ ಈ ‘ಕುಟುಂಬ ರಾಜಕಾರಣ’ ವಿರೋಧಿ ಅಜೆಂಡಾಕ್ಕೆ ಮಾರುಹೋಗಿದ್ದಾರೆಯೇ ಎಂಬುದು ಪಕ್ಷದ ಕಾರ್ಯಕರ್ತರನ್ನು ಕಾಡುತ್ತಿರುವ ಪ್ರಶ್ನೆ.
ಬಾಗಲಕೋಟೆಯೇ ಬಂಡಾಯದ ಕೇಂದ್ರ ಬಿಂದು!
ಮಸೀದಿಯಿಂದ ಕಲ್ಲು ತೂರಾಟ ನಡೆದ ಘಟನೆಯನ್ನು ಮುಂದಿಟ್ಟುಕೊಂಡು ಯತ್ನಾಳ್ ಅವರು ಜಿಲ್ಲೆಯಲ್ಲಿ ಸಂಚಲನ ಮೂಡಿಸಿದರು. ಈ ಸಮಯದಲ್ಲಿ ಜಿಲ್ಲೆಯ ಬಿಜೆಪಿ ನಾಯಕರು ಯತ್ನಾಳ್ ಅವರನ್ನು ಮುಂಚೂಣಿಯಲ್ಲಿ ನಿಲ್ಲಿಸಿ, ತಾವು ಅವರ ಬೆನ್ನ ಹಿಂದೆ ನಿಂತಿದ್ದು ರಾಜಕೀಯವಾಗಿ ಒಂದು ಮಾಸ್ಟರ್ ಪ್ಲಾನ್ ನಂತೆ ಕಾಣುತ್ತಿದೆ. ಬಾಗಲಕೋಟೆ ಜಿಲ್ಲೆಯು ಈಗ ವಿಜಯೇಂದ್ರ ಅವರ ಹಿಡಿತದಿಂದ ತಪ್ಪಿ ಹೋಗುತ್ತಿದೆಯೇ ಎಂಬ ಆತಂಕ ಮಲ್ಲೇಶ್ವರಂ ಕಚೇರಿಯಲ್ಲಿ ಶುರುವಾಗಿದೆ. ಜಿಲ್ಲೆಯ ನಾಯಕರು ಯತ್ನಾಳ್ ಅವರಿಗೆ ನೀಡುತ್ತಿರುವ ಅತಿಥಿ ಸತ್ಕಾರ ಮತ್ತು ಭದ್ರತೆ ನೋಡಿದರೆ, ಇಡೀ ಜಿಲ್ಲಾ ಘಟಕವೇ ರಾಜ್ಯಾಧ್ಯಕ್ಷರ ವಿರುದ್ಧ ಬಂಡಾಯ ಸಾರಿದಂತಿದೆ. ಈ ಬಗ್ಗೆ ಬಾಗಲಕೋಟೆಯ ಜಿಲ್ಲಾ ಅಧ್ಯಕ್ಷ ಶಾಂತಗೌಡ ಪಾಟೀಲ್ ಅವರು ಕೂಡ ಎಲ್ಲವೂ ಕಣ್ಣೆದುರು ನಡೆಯುತ್ತಿದ್ದರೂ ಕಣ್ಣುಮುಚ್ಚಿಕುಳಿತಿದ್ದಾರೆ. ಪಕ್ಷದ ರೂಲ್ಸ್ ಬ್ರೇಕ್ ಮಾಡಿದ್ರೂ ಜಿಲ್ಲಾಧ್ಯಕ್ಷರು ಕೇರ್‌ಲೆಸ್ ಮಾಡಿರೋದು ಅಚ್ಚರಿ ಮೂಡಿಸಿದೆ.
ಇದನ್ನೂ ಓದಿ: Bagalkot: ಪಂಖಾ ಮಸೀದಿಗೆ ಬೀಗ? ಬೃಹತ್ ಹೋರಾಟದ ಮುನ್ಸೂಚನೆ! SP ವಿರುದ್ಧವೂ ಕೇಸರಿ ಸಂಗ್ರಾಮ
ಪಕ್ಷದ ರೂಲ್ಸ್ ವರ್ಸಸ್ ವೈಯಕ್ತಿಕ ನಿಷ್ಠೆ
ಬಿಜೆಪಿಯ ನಿಯಮಗಳ ಪ್ರಕಾರ, ಉಚ್ಛಾಟಿತ ವ್ಯಕ್ತಿಯ ಜೊತೆ ಯಾವುದೇ ಅಧಿಕೃತ ಸಂಬಂಧ ಇಟ್ಟುಕೊಳ್ಳುವಂತಿಲ್ಲ. ಆದರೆ ಇಲ್ಲಿ ಸಂಸದರು, ಶಾಸಕರು ಮತ್ತು ಮಾಜಿ ಶಾಸಕರ ಬೆಂಬಲಿಗರು ಯತ್ನಾಳ್ ಅವರನ್ನೇ ತಮ್ಮ ಸರ್ವೋಚ್ಚ ನಾಯಕನೆಂಬಂತೆ ಬಿಂಬಿಸುತ್ತಿದ್ದಾರೆ. ಮೋಹನ್ ಜಾದವ್, ಅಶೋಕ್ ಲಿಂಗಾವಳಿ ಅವರಂತಹ ಮುಖಂಡರು ಯತ್ನಾಳ್ ಹೋದ ಕಡೆಯಲ್ಲೆಲ್ಲಾ ಕವಚದಂತೆ ನಿಂತಿರುವುದು ವಿಜಯೇಂದ್ರ ಅವರಿಗೆ ನೀಡಿದ ಬಹಿರಂಗ ಸವಾಲಾಗಿದೆ. “ನೀವು ಪಕ್ಷದಿಂದ ಹೊರಹಾಕಬಹುದು, ಆದರೆ ನಮ್ಮ ಮನಸ್ಸಿನಿಂದಲ್ಲ” ಎಂಬ ಧಾಟಿಯಲ್ಲಿ ಈ ನಾಯಕರು ವರ್ತಿಸುತ್ತಿದ್ದಾರೆ.
ಮುಂದಿನ ಹಾದಿ ಸಂಘರ್ಷಮಯ
ಒಟ್ಟಾರೆಯಾಗಿ ಬಾಗಲಕೋಟೆಯಲ್ಲಿ ನಡೆಯುತ್ತಿರುವ ಈ ಬೆಳವಣಿಗೆಗಳು ರಾಜ್ಯ ಬಿಜೆಪಿಯಲ್ಲಿ ದೊಡ್ಡ ಸ್ಫೋಟಕ್ಕೆ ವೇದಿಕೆ ಸಿದ್ಧಪಡಿಸುತ್ತಿವೆ. ಯತ್ನಾಳ್ ಉಚ್ಛಾಟನೆಗೊಂಡಿದ್ದರೂ ಅವರ ಪ್ರಭಾವ ಕುಗ್ಗಿಲ್ಲ, ಬದಲಾಗಿ ಬಾಗಲಕೋಟೆಯ ನಾಯಕರ ಸಾಥ್‌ನಿಂದಾಗಿ ಅದು ಮತ್ತಷ್ಟು ಹೆಚ್ಚಾಗಿದೆ. ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಇದು ಅತ್ಯಂತ ಮುಜುಗರದ ಸಂಗತಿ. ತನ್ನದೇ ಪಕ್ಷದ ಶಾಸಕರು ಮತ್ತು ಸಂಸದರು ಉಚ್ಛಾಟಿತ ವ್ಯಕ್ತಿಯ “ಬಾಡಿಗಾರ್ಡ್ಸ್” ರೀತಿ ನಡೆದುಕೊಳ್ಳುತ್ತಿರುವುದು ಅವರ ನಾಯಕತ್ವದ ಮೇಲೆ ಪ್ರಶ್ನಾರ್ಥಕ ಚಿಹ್ನೆ ಮೂಡಿಸಿದೆ.
ಬಾಗಲಕೋಟೆಯಲ್ಲಿ ಸಿದ್ಧವಾಗಿರುವ ಈ ವಿಜಯೇಂದ್ರ ವಿರೋಧಿ ಬಣ, ಮುಂಬರುವ ದಿನಗಳಲ್ಲಿ ರಾಜ್ಯ ರಾಜಕಾರಣದ ದಿಕ್ಕನ್ನು ಬದಲಿಸುವ ಶಕ್ತಿ ಹೊಂದಿದೆಯೇ? ಅಥವಾ ಹೈಕಮಾಂಡ್ ಈ “ಅಶಿಸ್ತಿನ” ನಾಯಕರ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತದೆಯೇ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾದರೆ ಕೆಲ ದಿನ ಕಾಯಲೇಬೇಕು. ಆದರೆ ಸದ್ಯಕ್ಕಂತೂ ಬಾಗಲಕೋಟೆಯಲ್ಲಿ ಯತ್ನಾಳ್ ಗೆದ್ದಿದ್ದಾರೆ ಮತ್ತು ಬಿಜೆಪಿಯ ಅಧಿಕೃತ ಶಿಸ್ತು ಸೋತಿದೆ ಎಂಬುದು ಕಟು ಸತ್ಯ.

