U19 World Cup 2026: ವಿಶ್ವ ಕ್ರಿಕೆಟ್‌ನಲ್ಲಿ ಭಾರತದ ಯುವ ಪರ್ವ ಮುಂದುವರಿದಿದೆ. ಜಿಂಬಾಬ್ವೆಯ ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ನಡೆದ U19 World Cup 2026ನ ಮಹಾ ಫೈನಲ್‌ನಲ್ಲಿ ಬ್ರಿಟೀಷರನ್ನು ಅಕ್ಷರಶಃ ಬಗ್ಗುಬಡಿದ ಭಾರತದ ಯುವ ಪಡೆ, ಆರನೇ ಬಾರಿಗೆ ವಿಶ್ವ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಇಂಗ್ಲೆಂಡ್ ವಿರುದ್ಧದ ಈ ಭರ್ಜರಿ ಗೆಲುವು ಭಾರತೀಯ ಕ್ರಿಕೆಟ್‌ನ ಭವಿಷ್ಯ ಎಷ್ಟು ಸುಭದ್ರವಾಗಿದೆ ಎಂಬುದನ್ನು ಜಗತ್ತಿಗೆ ಸಾರಿದೆ.
U19 World Cup 2026ನಲ್ಲಿ ವೈಭವ್ ಅಬ್ಬರದ ಬ್ಯಾಟಿಂಗ್!
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತಕ್ಕೆ ಆರಂಭದಲ್ಲೇ ಆಘಾತ ಎದುರಾದರೂ, ನಂತರ ಶುರುವಾಗಿದ್ದು ಕೇವಲ 14 ವರ್ಷದ ವೈಭವ್ ಸೂರ್ಯವಂಶಿ ಎಂಬ ವಿಸ್ಮಯ ಬಾಲಕನ ಅಬ್ಬರ. ಮೈದಾನದ ಮೂಲೆ ಮೂಲೆಗೂ ಬೌಂಡರಿ, ಸಿಕ್ಸರ್‌ಗಳ ಸುರಿಮಳೆಗೈದ ವೈಭವ್, ಬ್ರಿಟೀಷ್ ಬೌಲರ್‌ಗಳ ಆತ್ಮವಿಶ್ವಾಸವನ್ನೇ ಧೂಳೀಪಟ ಮಾಡಿದರು. ಕೇವಲ 80 ಎಸೆತಗಳಲ್ಲಿ ಅವರು ಸಿಡಿಸಿದ ದಾಖಲೆಯ 175 ರನ್ (19 ಬೌಂಡರಿ, 10 ಸಿಕ್ಸರ್) ಇಡೀ ಪಂದ್ಯದ ಚಿತ್ರಣವನ್ನೇ ಬದಲಿಸಿತು. ಇವರಿಗೆ ಸಾಥ್ ನೀಡಿದ ನಾಯಕ ಆಯುಷ್ ಮ್ಹಾತ್ರೆ ಮತ್ತು ಮಿಡಲ್ ಆರ್ಡರ್ ಬ್ಯಾಟರ್‌ಗಳ ಸಮಯೋಚಿತ ಆಟದಿಂದ ಭಾರತ ನಿಗದಿತ 50 ಓವರ್‌ಗಳಲ್ಲಿ 411 ರನ್‌ಗಳ ಬೃಹತ್ ಮೊತ್ತ ಪೇರಿಸಿತು.
ಇದನ್ನೂ ಓದಿ: T20 World Cup: ಭಾರತದ ವಿರುದ್ಧ ಪಂದ್ಯ ಆಡದಿದ್ದರೆ ಪಾಕ್‌ಗೆ ಸಂಕಷ್ಟ; ವಿಶ್ವಕಪ್‌ನಿಂದಲೇ ಗೇಟ್‌ಪಾಸ್ ಸಾಧ್ಯತೆ?
ಬ್ರಿಟೀಷರ ಸೊಕ್ಕು ಅಡಗಿಸಿದ ಬೌಲರ್‌ಗಳು
412 ರನ್‌ಗಳ ಹಿಮಾಲಯದಂತಹ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡಕ್ಕೆ ಭಾರತದ ವೇಗಿಗಳು ಆರಂಭದಲ್ಲೇ ಸಿಂಹಸ್ವಪ್ನವಾದರು. ಮೊದಲ ಹತ್ತು ಓವರ್‌ಗಳಲ್ಲೇ ಪ್ರಮುಖ ಮೂರು ವಿಕೆಟ್ ಕಳೆದುಕೊಂಡ ಬ್ರಿಟೀಷ್ ಪಡೆಯ ಮೇಲೆ ಆರ್‌ಎಸ್ ಅಂಬರೀಶ್ ಮತ್ತು ದೀಪೇಶ್ ಸತತ ಒತ್ತಡ ಹೇರಿದರು. ಮಧ್ಯಮ ಕ್ರಮಾಂಕದಲ್ಲಿ ಇಂಗ್ಲೆಂಡ್ ಚೇತರಿಸಿಕೊಳ್ಳಲು ಪ್ರಯತ್ನಿಸಿದರೂ, ಸ್ಪಿನ್ನರ್ ಕನಿಷ್ಕ್ ಚೌಹಾಣ್ ಅವರ ಮಾಂತ್ರಿಕ ಬೌಲಿಂಗ್‌ಗೆ ಉತ್ತರವಿಲ್ಲದೆ ಶರಣಾದರು. ಅಂತಿಮವಾಗಿ ಇಂಗ್ಲೆಂಡ್ ತಂಡ 311 ರನ್‌ಗಳಿಗೆ ಆಲೌಟ್ ಆಗುವ ಮೂಲಕ 100 ರನ್‌ಗಳ ಹೀನಾಯ ಸೋಲು ಅನುಭವಿಸಿತು.
ಆರನೇ ಬಾರಿ ವಿಶ್ವದಾಖಲೆಯ ಸಾಧನೆ
ಈ ಗೆಲುವಿನೊಂದಿಗೆ ಭಾರತ ಅಂಡರ್-19 ವಿಶ್ವಕಪ್ ಇತಿಹಾಸದಲ್ಲೇ 6 ಬಾರಿ ಚಾಂಪಿಯನ್ ಆದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಹಿಂದೆ 2000, 2008, 2012, 2018 ಮತ್ತು 2022ರಲ್ಲಿ ಭಾರತ ಟ್ರೋಫಿ ಗೆದ್ದಿತ್ತು. ಈಗ 2026ರಲ್ಲಿ ಮತ್ತೊಮ್ಮೆ ಬ್ರಿಟೀಷರನ್ನು ಅವರದೇ ಶೈಲಿಯಲ್ಲಿ ಮಣಿಸಿರುವುದು ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ. ಮೈದಾನದಲ್ಲಿ ಭಾರತೀಯ ಆಟಗಾರರು ತ್ರಿವರ್ಣ ಧ್ವಜ ಹಿಡಿದು ವಿಜಯೋತ್ಸವ ಆಚರಿಸಿದ ಕ್ಷಣ ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ ಪಡುವಂತಿತ್ತು.
ಒಟ್ಟಿನಲ್ಲಿ, ಹಿರಿಯರ ತಂಡದಂತೆಯೇ ಕಿರಿಯರ ತಂಡವೂ ವಿಶ್ವಮಟ್ಟದಲ್ಲಿ ಅಧಿಪತ್ಯ ಸ್ಥಾಪಿಸಿದೆ. ಈ ಯುವ ಹೈದಗಳ ಕೆಚ್ಚೆದೆಯ ಆಟವು ಭಾರತಕ್ಕೆ ಮತ್ತೊಂದು ವಿಶ್ವಕಪ್ ತಂದುಕೊಟ್ಟಿದೆ. ಅಭಿನಂದನೆಗಳು ಟೀಮ್ ಇಂಡಿಯಾ!

