ಕ್ರಿಕೆಟ್ ಲೋಕದಲ್ಲಿ ಸದಾ ಒಂದಲ್ಲ ಒಂದು ವಿವಾದಗಳಿಂದ ಸುದ್ದಿಯಾಗುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB), ಇದೀಗ 2026ರ T20 World Cupನಲ್ಲಿ ಹೊಸ ಸಂಚಲನ ಮೂಡಿಸಿದೆ. ಬಾಂಗ್ಲಾದೇಶವನ್ನು ಟೂರ್ನಿಯಿಂದ ಹೊರಗಿಟ್ಟಿರುವುದನ್ನು ವಿರೋಧಿಸಿ, ಭಾರತದ ವಿರುದ್ಧದ ಹೈವೋಲ್ಟೇಜ್ ಪಂದ್ಯವನ್ನು ಬಹಿಷ್ಕರಿಸುವುದಾಗಿ ಪಾಕ್ ಹೇಳಿಕೊಂಡಿದೆ. ಆದರೆ, ಈ ‘ಬಹಿಷ್ಕಾರದ ಹಠ’ ಪಾಕಿಸ್ತಾನ ತಂಡಕ್ಕೆ ಮುಳುವಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.
ಪಾಕಿಸ್ತಾನದ ಲೆಕ್ಕಾಚಾರವೇನು?
T20 World Cupನ ‘ಎ’ ಬಣದಲ್ಲಿ ಭಾರತ, ಪಾಕಿಸ್ತಾನ, ಅಮೆರಿಕ, ನೆದರ್ಲೆಂಡ್ ಮತ್ತು ನಮೀಬಿಯಾ ತಂಡಗಳಿವೆ. ಪ್ರತಿ ಬಣದಿಂದ ಮೊದಲ ಎರಡು ಸ್ಥಾನ ಪಡೆಯುವ ತಂಡಗಳು ಮಾತ್ರ ‘ಸೂಪರ್ 8’ ಹಂತಕ್ಕೆ ಅರ್ಹತೆ ಪಡೆಯುತ್ತವೆ. ಪಾಕಿಸ್ತಾನದ ಪ್ಲ್ಯಾನ್ ಪ್ರಕಾರ, ಭಾರತದ ವಿರುದ್ಧದ ಪಂದ್ಯವನ್ನು ಬಿಟ್ಟುಕೊಟ್ಟರೂ (ಬಹಿಷ್ಕರಿಸಿದರೂ), ಉಳಿದ ಮೂರು ತಂಡಗಳಾದ ಅಮೆರಿಕ, ನೆದರ್ಲೆಂಡ್ ಮತ್ತು ನಮೀಬಿಯಾವನ್ನು ಸುಲಭವಾಗಿ ಸೋಲಿಸಿ 6 ಅಂಕಗಳೊಂದಿಗೆ ಮುಂದಿನ ಹಂತಕ್ಕೆ ಹೋಗಬಹುದು ಎಂಬುದು ಅವರ ಅಂದಾಜು. ಆದರೆ, ಕ್ರಿಕೆಟ್ ಅನಿಶ್ಚಿತತೆಯ ಆಟ. ಇಲ್ಲಿ ಪಾಕಿಸ್ತಾನ ಅಂದುಕೊಂಡಷ್ಟು ಹಾದಿ ಸುಗಮವಾಗಿಲ್ಲ.
ಒಂದು ಪಂದ್ಯ ಸೋತರೂ ಮನೆಗೆ!: ಪಾಕಿಸ್ತಾನಕ್ಕೆ ಅಸಲಿ ಕಂಟಕವಿರುವುದು ಇಲ್ಲಿಯೇ. ಭಾರತದ ವಿರುದ್ಧ ಮೈದಾನಕ್ಕೆ ಇಳಿಯದಿದ್ದರೆ ಭಾರತಕ್ಕೆ ನೇರವಾಗಿ 2 ಅಂಕಗಳು ಲಭಿಸುತ್ತವೆ. ಆಗ ಪಾಕಿಸ್ತಾನಕ್ಕೆ ಉಳಿದ 3 ಪಂದ್ಯಗಳು ‘ಡು ಆರ್ ಡೈ’ (Do or Die) ಇದ್ದಂತೆ.
ಇದನ್ನೂ ಓದಿ: WPL Final: ಡೆಲ್ಲಿ ಧೂಳೀಪಟ! ಈ ಸಲವೂ ಕಪ್ ನಮ್ದೇ; RCB ಸೃಷ್ಟಿಸಿದ 9 ಐತಿಹಾಸಿಕ ದಾಖಲೆಗಳಿವು.
- ಅಚ್ಚರಿಯ ಫಲಿತಾಂಶದ ಭೀತಿ: ನೆದರ್ಲೆಂಡ್ ಮತ್ತು ಅಮೆರಿಕ ತಂಡಗಳು ಸಣ್ಣ ತಂಡಗಳಾದರೂ, ಅಚ್ಚರಿಯ ಫಲಿತಾಂಶ ನೀಡುವಲ್ಲಿ ಹೆಸರುವಾಸಿ. 2024ರ ವಿಶ್ವಕಪ್ನಲ್ಲಿ ಅಮೆರಿಕ ತಂಡ ಪಾಕಿಸ್ತಾನಕ್ಕೆ ಶಾಕ್ ನೀಡಿದ್ದನ್ನು ಮರೆಯುವಂತಿಲ್ಲ.
- ಮಳೆಯ ಕಾಟ: ಒಂದು ವೇಳೆ ಯಾವುದಾದರೂ ಒಂದು ಪಂದ್ಯ ಮಳೆಯಿಂದ ರದ್ದಾಗಿ ಅಂಕ ಹಂಚಿಕೆಯಾದರೂ ಪಾಕಿಸ್ತಾನದ ಲೆಕ್ಕಾಚಾರ ಉಲ್ಟಾ ಆಗಲಿದೆ.
ಪಾಕಿಸ್ತಾನದ ಪಂದ್ಯಗಳ ವೇಳಾಪಟ್ಟಿ:
ಪಾಕಿಸ್ತಾನಕ್ಕೆ ಒಂದು ಪ್ಲಸ್ ಪಾಯಿಂಟ್ ಎಂದರೆ, ಭಾರತದ ಪಂದ್ಯಕ್ಕಿಂತ ಮೊದಲೇ ಅವರು ನೆದರ್ಲೆಂಡ್ ಮತ್ತು ಅಮೆರಿಕ ವಿರುದ್ಧ ಆಡಲಿದ್ದಾರೆ.
- ಫೆಬ್ರವರಿ 7: ಪಾಕಿಸ್ತಾನ Vs ನೆದರ್ಲೆಂಡ್
- ಫೆಬ್ರವರಿ 10: ಪಾಕಿಸ್ತಾನ Vs ಅಮೆರಿಕ
- ಫೆಬ್ರವರಿ 15: ಭಾರತ Vs ಪಾಕಿಸ್ತಾನ (ಬಹಿಷ್ಕಾರದ ಗೊಂದಲ)
- ಫೆಬ್ರವರಿ 18: ಪಾಕಿಸ್ತಾನ Vs ನಮೀಬಿಯಾ
ಇದನ್ನೂ ಓದಿ: Online Game: ಜೀವ ತೆಗೆಯುತ್ತಿದೆ ಕೊರಿಯನ್ ಗೇಮ್; ಅಪಾಯದಿಂದ ಮಕ್ಕಳನ್ನು ರಕ್ಷಿಸೋದು ಹೇಗೆ?
ಪಿಸಿಬಿ ‘ಮೈಂಡ್ ಗೇಮ್’ ಆಡುತ್ತಿದೆಯೇ?
ಇಷ್ಟೆಲ್ಲಾ ಸದ್ದು ಮಾಡುತ್ತಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಈವರೆಗೂ ಐಸಿಸಿಗೆ (ICC) ಪಂದ್ಯ ಬಹಿಷ್ಕಾರದ ಬಗ್ಗೆ ಯಾವುದೇ ಲಿಖಿತ ಪತ್ರ ನೀಡಿಲ್ಲ! ಇದು ಪಾಕಿಸ್ತಾನದ ದ್ವಂದ್ವ ನಿಲುವನ್ನು ತೋರಿಸುತ್ತದೆ.
ಫೆಬ್ರವರಿ 15ರಂದು ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಟಾಸ್ಗೆ ಮೈದಾನಕ್ಕೆ ಬಂದಾಗ, ಪಾಕ್ ನಾಯಕ ಬರದಿದ್ದರೆ ಮಾತ್ರ ಅದು ‘ವಾಕ್ ಓವರ್’ ಎಂದು ಪರಿಗಣಿಸಲ್ಪಡುತ್ತದೆ. ಒಂದು ವೇಳೆ ಆರಂಭಿಕ ಎರಡು ಪಂದ್ಯಗಳಲ್ಲಿ ಪಾಕಿಸ್ತಾನ ಸೋತರೆ ಅಥವಾ ಅಂಕ ಕಳೆದುಕೊಂಡರೆ, ಮರ್ಯಾದೆ ಉಳಿಸಿಕೊಳ್ಳಲು ಭಾರತದ ವಿರುದ್ಧ ಆಡಲು ಬಂದರೂ ಅಚ್ಚರಿಯಿಲ್ಲ!
ಬಾಂಗ್ಲಾದೇಶವನ್ನು ಬೆಂಬಲಿಸುವ ನೆಪದಲ್ಲಿ ಭಾರತದ ವಿರುದ್ಧದ ಪಂದ್ಯದಿಂದ ಹಿಂದೆ ಸರಿಯುವುದು ಪಾಕಿಸ್ತಾನಕ್ಕೆ ದೊಡ್ಡ ರಿಸ್ಕ್ ಆಗಲಿದೆ. ರಾಜಕೀಯ ಹಠಕ್ಕೆ ಬಿದ್ದು ಒಂದು ಪಂದ್ಯ ಸೋತರೂ, ಪಾಕಿಸ್ತಾನ ವಿಶ್ವಕಪ್ನಿಂದಲೇ ಹೊರಬೀಳುವ (ಗೇಟ್ಪಾಸ್) ಭೀತಿ ಎದುರಾಗಿದೆ. ಒಟ್ಟಿನಲ್ಲಿ ಫೆಬ್ರವರಿ 15ರ ಪಂದ್ಯ ನಡೆಯುತ್ತೋ ಇಲ್ಲವೋ ಎಂಬುದು ಇಡೀ ವಿಶ್ವದ ಕುತೂಹಲಕ್ಕೆ ಕಾರಣವಾಗಿದೆ.

