ನವಿ ಮುಂಬೈ: ಬಹುನಿರೀಕ್ಷಿತ ಐಸಿಸಿ T20 World Cup 2026ರ ಸಮರಕ್ಕೆ ದಿನಗಣನೆ ಆರಂಭವಾಗಿರುವಾಗಲೇ ಹಾಲಿ ಚಾಂಪಿಯನ್ ಭಾರತ ತಂಡಕ್ಕೆ ಭಾರೀ ಆಘಾತ ಎದುರಾಗಿದೆ. ತಂಡದ ಉದಯೋನ್ಮುಖ ವೇಗಿ ಹರ್ಷಿತ್ ರಾಣಾ ಗಾಯದ ಸಮಸ್ಯೆಯಿಂದಾಗಿ ಇಡೀ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಅವರ ಸ್ಥಾನಕ್ಕೆ ಅನುಭವಿ ವೇಗಿ ಮೊಹಮ್ಮದ್ ಸಿರಾಜ್ ಅವರಿಗೆ ಅದೃಷ್ಟ ಒಲಿದು ಬಂದಿದ್ದು, ತಂಡವನ್ನು ಸೇರಿಕೊಂಡಿದ್ದಾರೆ.
ಅಭ್ಯಾಸ ಪಂದ್ಯದಲ್ಲಿ ಎದುರಾದ ವಿಘ್ನ:
ಫೆಬ್ರವರಿ 4ರಂದು ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಅಭ್ಯಾಸ ಪಂದ್ಯ ಹರ್ಷಿತ್ ರಾಣಾ ಪಾಲಿಗೆ ದುಬಾರಿಯಾಗಿ ಪರಿಣಮಿಸಿತು. ಪಂದ್ಯದ ವೇಳೆ ಕೇವಲ ಒಂದು ಓವರ್ ಎಸೆದ ರಾಣಾ, ಮೊಣಕಾಲಿನ ತೀವ್ರ ನೋವಿನಿಂದಾಗಿ ಮೈದಾನ ತೊರೆದಿದ್ದರು. ಕೇವಲ ಎರಡು ಬಾರಿ ರನ್ ಅಪ್ ತೆಗೆದುಕೊಂಡರೂ ಓಡಲು ಸಾಧ್ಯವಾಗದೆ ಅವರು ಪರದಾಡಿದ್ದರು. ಬಿಸಿಸಿಐ ವೈದ್ಯಕೀಯ ತಂಡವು ರಾಣಾ ಅವರ ಫಿಟ್ನೆಸ್ ಪರೀಕ್ಷಿಸಿದ ಬಳಿಕ, ಅವರು ಟೂರ್ನಿಯಲ್ಲಿ ಆಡಲು ಅನ್-ಫಿಟ್ ಎಂದು ಘೋಷಿಸಿದೆ. ಹಾಗಾಗಿ T20 World Cup 2026ರ ಟೂರ್ನಿಯಲ್ಲಿ ಅಲಭ್ಯರಾಗಿದ್ದಾರೆ. ಇದರ ಬೆನ್ನಲ್ಲೇ ಬಿಸಿಸಿಐ ಮೊಹಮ್ಮದ್ ಸಿರಾಜ್ ಅವರ ಹೆಸರನ್ನು ಅಧಿಕೃತವಾಗಿ ಪ್ರಕಟಿಸಿದೆ.
ಇದನ್ನೂ ಓದಿ: T20 World Cup: ಭಾರತದ ವಿರುದ್ಧ ಪಂದ್ಯ ಆಡದಿದ್ದರೆ ಪಾಕ್‌ಗೆ ಸಂಕಷ್ಟ; ವಿಶ್ವಕಪ್‌ನಿಂದಲೇ ಗೇಟ್‌ಪಾಸ್ ಸಾಧ್ಯತೆ?
ಗಾಯಾಳುಗಳ ಪಟ್ಟಿಯಿಂದ ಕಂಗೆಟ್ಟ ಭಾರತ
ವಿಶ್ವಕಪ್ ಅಭಿಯಾನ ಆರಂಭಕ್ಕೂ ಮುನ್ನವೇ ಭಾರತ ತಂಡದಲ್ಲಿ ಗಾಯದ ಸಮಸ್ಯೆ ಸರಣಿಯಂತೆ ಮುಂದುವರಿಯುತ್ತಿದೆ:
- ವಾಶಿಂಗ್ಟನ್ ಸುಂದರ್: ಸ್ಪಿನ್ ಆಲ್ರೌಂಡರ್ ಸುಂದರ್ ಈಗಾಗಲೇ ಗಾಯದ ಸಮಸ್ಯೆಯಲ್ಲಿದ್ದರೂ, ಗುಣಮುಖರಾಗುವ ನಿರೀಕ್ಷೆಯ ಮೇಲೆ ತಂಡದಲ್ಲಿ ಉಳಿಸಿಕೊಳ್ಳಲಾಗಿದೆ.
- ತಿಲಕ್ ವರ್ಮಾ: ಬ್ಯಾಟರ್ ತಿಲಕ್ ವರ್ಮಾ ಗಾಯದಿಂದ ಚೇತರಿಸಿಕೊಂಡು ಅಭ್ಯಾಸ ಪಂದ್ಯದಲ್ಲಿ 45 ರನ್ ಗಳಿಸಿದರೂ, ಅವರ ಫಿಟ್ನೆಸ್ ಬಗ್ಗೆ ಟೀಂ ಮ್ಯಾನೇಜ್‌ಮೆಂಟ್ ಇನ್ನೂ ಕಳವಳ ಹೊಂದಿದೆ.
ಭಾರತದ ವಿಶ್ವಕಪ್ ವೇಳಾಪಟ್ಟಿ
ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ ಇಂದು (ಫೆಬ್ರವರಿ 7ರ ಶನಿವಾರದಂದು) ಅಮೆರಿಕ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ.
- ಫೆಬ್ರವರಿ 12: ನಮೀಬಿಯಾ ವಿರುದ್ಧ
- ಫೆಬ್ರವರಿ 15: ಪಾಕಿಸ್ತಾನ (ಪಾಕ್ ತಂಡ ಟೂರ್ನಿಯಿಂದ ಹಿಂದೆ ಸರಿದಿರುವುದರಿಂದ ಭಾರತಕ್ಕೆ 2 ಅಂಕಗಳು ಸುಲಭವಾಗಿ ಲಭಿಸಲಿವೆ)
- ಫೆಬ್ರವರಿ 18: ನೆದರ್ಲೆಂಡ್ಸ್ ವಿರುದ್ಧ
ಇದನ್ನೂ ಓದಿ: Black Eye Club: ಕಪ್ಪು ಕಲೆ ಹಿಂದಿದೆ ಬೆಚ್ಚಿಬೀಳಿಸಯವ ರಹಸ್ಯ; ವಿಶ್ವದ ಪ್ರಭಾವಿಗಳ ಅಸಲಿ ಮುಖವಾಡ ಕಳಚಿದ ಫೈಲ್ಸ್!
ಪರಿಷ್ಕೃತ ಭಾರತ ತಂಡ ಹೀಗಿದೆ:
ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್ (ಉಪನಾಯಕ), ರಿಂಕು ಸಿಂಗ್, ಜಸ್ಪ್ರೀತ್ ಬುಮ್ರಾ, ಅರ್ಶದೀಪ್ ಸಿಂಗ್, ಕುಲ್ದೀಪ್ ಯಾದವ್, ವರುಣ್ ಚಕ್ರವರ್ತಿ, ವಾಶಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್.

