ಬೆಂಗಳೂರು: ಕರ್ನಾಟಕದ ರಾಜಕಾರಣದಲ್ಲಿ ಸಿದ್ದರಾಮಯ್ಯ (Siddaramaiah) ಎಂದರೆ ಅದೊಂದು ಗಟ್ಟಿ ಸಿದ್ಧಾಂತದ ಹೆಸರು. ಲೋಹಿಯಾ ಮಾರ್ಗದಲ್ಲಿ ನಡೆದು, ಅಹಿಂದ ವರ್ಗಗಳ ಆಶಾಕಿರಣವಾಗಿ, ಸಂಘಪರಿವಾರದ ಕೋಮುವಾದಿ ಅಜೆಂಡಾಗಳನ್ನು ಕಟು ಶಬ್ದಗಳಲ್ಲಿ ಟೀಕಿಸುವ ಸಿದ್ದರಾಮಯ್ಯ ಅವರೀಗ ವಿಚಿತ್ರ ಸಂದಿಗ್ಧಕ್ಕೆ ಸಿಲುಕಿದ್ದಾರೆ. ಸಿದ್ದರಾಮಯ್ಯ ಅವರ ಸಿದ್ಧಾಂತ ಬದಲಾಗಿಲ್ಲದಿರಬಹುದು, ಆದರೆ ಅವರ ಸುತ್ತಲೂ ಇರುವ ‘ಭಟಂಗಿ’ಗಳ ವರಸೆ ಮತ್ತು ಅವರು ಸಾಕುತ್ತಿರುವ ‘ವಿಷಜಂತು’ಗಳ ಬೆಳವಣಿಗೆ ನೋಡಿದರೆ, ಸಮಾಜವಾದಿ ಮನಸ್ಸುಗಳಲ್ಲಿ ರಕ್ತ ಕುದಿಯುತ್ತಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ್ ಖರ್ಗೆ ಮತ್ತು ಬಿ.ಕೆ. ಹರಿಪ್ರಸಾದ್ ಅವರಂತಹ ನಾಯಕರು ಕೋಮುವಾದಿ ಸಂಘಟನೆಗಳ ವಿರುದ್ಧ ಹೋರಾಡಲು ಮೊದಲ ಸಾಲಿನಲ್ಲಿ ನಿಂತಿದ್ದರೆ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಚೇರಿ ಮತ್ತು ಅವರ ಸುತ್ತಲಿನ ಆಪ್ತವಲಯ ಮಾತ್ರ ಅದೇ ಕೋಮುವಾದಿಗಳಿಗೆ ‘ಆಮ್ಲಜನಕ’ ನೀಡುತ್ತಿದೆಯೇ ಎಂಬ ಅನುಮಾನ ಈಗ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.
ಬಿಜೆಪಿ ಕಾಲದಲ್ಲಿ ಗತಿ ಇಲ್ಲದವರು, ಸಿದ್ದು ಕಾಲದಲ್ಲಿ ಕುಬೇರರಾದರು!
ರಾಜ್ಯದ ಖ್ಯಾತ ಪತ್ರಕರ್ತ ಎನಿಸಿಕೊಂಡಿರುವ ಈ ಮಹಾಶಯ ವಿಷ ಕಕ್ಕುವುದರಲ್ಲಿ ಮೊದಲ ಪಂಕ್ತಿಯಲ್ಲಿ ನಿಲ್ಲುತ್ತಾನೆ. ಈತನ ಕೆಲಸವೇ ದಿನವಿಡೀ ಅಲ್ಪಸಂಖ್ಯಾತರ ವಿರುದ್ಧ, ದಲಿತರ ವಿರುದ್ಧ ಮತ್ತು ಪ್ರಗತಿಪರ ಚಿಂತನೆಗಳ ವಿರುದ್ಧ ‘ವಿಷ’ ಕಕ್ಕುವುದು. ಬಲಪಂಥೀಯ ಸಿದ್ಧಾಂತದ ಅಮಲು ಏರಿಸಿಕೊಂಡು ಸಮಾಜದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುವ ಈತನ ಪತ್ರಿಕೆ, ಸ್ವತಃ ಬಿಜೆಪಿ ಅಧಿಕಾರದಲ್ಲಿದ್ದಾಗಲೂ ಅಟ್ಟಕ್ಕೆ ಏರಿರಲಿಲ್ಲ. ವರದಿಗಾರರಿಗೆ ಸಂಬಳ ಕೊಡಲು ಗತಿ ಇರಲಿಲ್ಲ, ಪತ್ರಿಕೆ ಪ್ರಿಂಟ್ ಹಾಕಲು ಕಾಸಿಲ್ಲದೆ ಸೊರಗಿ ಹೋಗಿತ್ತು. ಆರ್ಥಿಕವಾಗಿ ದಿವಾಳಿಯಾಗಿದ್ದ ಆ ಪತ್ರಿಕೆ ಮತ್ತು ಪತ್ರಕರ್ತ ಸದ್ದಿಲ್ಲದೆ ಮೂಲೆ ಸೇರುತ್ತಿದ್ದರು.
ಆದರೆ ಯಾವಾಗ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದರೋ, ಆ ಪತ್ರಕರ್ತನ ಅದೃಷ್ಟವೇ ಬದಲಾಯಿತು! ಸಮಾಜವಾದಿ ಸಿದ್ದರಾಮಯ್ಯ ಅವರ ಅಧಿಕಾರದ ನೆರಳಿನಲ್ಲಿ, ಆ ‘ವಿಷ’ ಕಕ್ಕುವ ಪತ್ರಕರ್ತನ ಪತ್ರಿಕೆ ಇಂದು ಮುಗಿಲೆತ್ತರಕ್ಕೆ ಬೆಳೆದು ನಿಂತಿದೆ. ಸಂಬಳ ಕೊಡಲು ಯೋಗ್ಯತೆ ಇಲ್ಲದವನು ಇಂದು ಪತ್ರಿಕೆಯಿಂದ ಡಿಜಿಟಲ್ ಮೀಡಿಯಾ, ಡಿಜಿಟಲ್ನಿಂದ ಟಿವಿಯತ್ತ ನೆಗೆಯುತ್ತಿದ್ದಾನೆ. ಇಲ್ಲಿ ಪ್ರಶ್ನೆ ಇರುವುದು ಇಷ್ಟೇ—ಬಿಜೆಪಿ ಕಾಲದಲ್ಲೇ ಉದ್ಧಾರವಾಗದ ಬಲಪಂಥೀಯ ಪತ್ರಕರ್ತ, ಒಬ್ಬ ಸಮಾಜವಾದಿ ಮುಖ್ಯಮಂತ್ರಿಯ ಕಾಲದಲ್ಲಿ ಇಷ್ಟೊಂದು ಎತ್ತರಕ್ಕೆ ಬೆಳೆದಿದ್ದು ಹೇಗೆ? ಈ ಆರ್ಥಿಕ ಶಕ್ತಿ ಮತ್ತು ಪ್ರಭಾವದ ಮೂಲ ಎಲ್ಲಿದೆ?
ಇದನ್ನೂ ಓದಿ: Baba budan giri: ಸಂಘ ಪರಿವಾರದ ಅಜೆಂಡಾಕ್ಕೆ ‘ಕೈ’ ಶರಣು? ಸೌಹಾರ್ದ ಪರಂಪರೆಯ ಕೊಲೆಗೆ ಕಾಂಗ್ರೆಸ್ಸೇ ಸುಪಾರಿ ಕೊಟ್ಟಿತೇ?
ಸ್ನೇಹವೋ? ಅಥವಾ ಸಿದ್ಧಾಂತದ ಬಲಿಯೋ?
ಸಿದ್ದರಾಮಯ್ಯ ಅವರಿಗೆ ಆ ಪತ್ರಕರ್ತನ ಜೊತೆ ವೈಯಕ್ತಿಕ ಗೆಳತನ ಇರಬಹುದು. ಒಬ್ಬ ಮನುಷ್ಯನಾಗಿ ವೈಯಕ್ತಿಕ ಸ್ನೇಹ ಇಟ್ಟುಕೊಳ್ಳುವುದು ತಪ್ಪಲ್ಲ. ಆದರೆ, ಅಧಿಕಾರದಲ್ಲಿದ್ದಾಗ ಆ ಸ್ನೇಹದ ಹೆಸರಿನಲ್ಲಿ ‘ವ್ಯವಹಾರ’ ಮತ್ತು ‘ಲಾಭ’ ನಡೆಯಬಾರದು ಅಲ್ವೇ? ಸಿದ್ದರಾಮಯ್ಯ ಅವರ ಸಿದ್ಧಾಂತಕ್ಕೆ ದಿನಬೆಳಗಾದರೆ ಉಗಿಯುವ ವ್ಯಕ್ತಿಗೆ, ಸಿದ್ದರಾಮಯ್ಯ ಅವರ ಅಧಿಕಾರದ ಅವಧಿಯಲ್ಲೇ ಅತಿ ಹೆಚ್ಚು ಲಾಭವಾಗುತ್ತಿದೆ ಎಂದರೆ ಅದರ ಅರ್ಥವೇನು? ಇದು ಸಮಾಜವಾದಿ ಚಿಂತನೆಗೆ ಮಾಡುತ್ತಿರುವ ದ್ರೋಹವಲ್ಲವೇ?
ಒಂದೆಡೆ ಸಿದ್ದರಾಮಯ್ಯನವರು ವೇದಿಕೆ ಮೇಲೆ ನಿಂತು ಸಂಘಪರಿವಾರದ ವಿರುದ್ಧ ಗುಡುಗುತ್ತಾರೆ. ಇನ್ನೊಂದೆಡೆ ಅವರದೇ ಕಚೇರಿಯ ಒಳಗಿರುವ ಅಧಿಕಾರಿಗಳು ಮತ್ತು ಭಟಂಗಿಗಳು ಅದೇ ಸಂಘಪರಿವಾರದ ಪತ್ರಕರ್ತರಿಗೆ ರೆಡ್ ಕಾರ್ಪೆಟ್ ಹಾಸುತ್ತಾರೆ. ಇದು ದ್ವಂದ್ವ ನಿಲುವಲ್ಲದೆ ಮತ್ತೇನು? ಸಿದ್ಧಾಂತದ ಹೆಸರಿನಲ್ಲಿ ಮತ ಹಾಕಿದ ಅಹಿಂದ ವರ್ಗದ ಜನರಿಗೆ ನೀವು ನೀಡುತ್ತಿರುವ ಸಂದೇಶವೇನು?
ಸಿದ್ದರಾಮಯ್ಯ ಸುತ್ತಲ ‘ಭಟಂಗಿ’ಗಳ ದರ್ಬಾರು!
ಹಿಂದಿನ ಅವಧಿಯಲ್ಲಿ ಸಿದ್ದರಾಮಯ್ಯ ಅವರ ಜೊತೆ ದಿನೇಶ್ ಅಮೀನ್ ಮಟ್ಟು ಅವರಂತಹ ಪ್ರಖರ ಸಿದ್ಧಾಂತವಾದಿಗಳು ಸಲಹೆಗಾರರಾಗಿದ್ದರು. ಆಗಿನ ಸಿದ್ದರಾಮಯ್ಯನವರಲ್ಲಿ ಒಂದು ತೇಜಸ್ಸು ಇತ್ತು, ಸ್ಪಷ್ಟತೆ ಇತ್ತು. ಆದರೆ ಈಗ ಸಿದ್ದರಾಮಯ್ಯ ಅವರ ಸುತ್ತಲೂ ‘ಭಟಂಗಿ’ಗಳ ಹಿಂಡು ಸೇರಿಕೊಂಡಿದೆ. ಈ ಭಟಂಗಿಗಳಿಗೆ ಸಿದ್ಧಾಂತಕ್ಕಿಂತ ಅಧಿಕಾರದ ಲಾಭವೇ ಮುಖ್ಯವಾಗಿದೆ.
ಇತ್ತೀಚೆಗೆ ಮಂಗಳೂರಿಗೆ ಹೋದಾಗ ಕಟ್ಟರ್ ಬಲಪಂಥೀಯ ಸುದ್ದಿ ವಾಹಿನಿಯ ಸಿಇಒ ಮನೆಗೆ ಸಿದ್ದರಾಮಯ್ಯ ಭೇಟಿ ನೀಡಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿತ್ತು. ದಿನವಿಡೀ ಸಿದ್ದರಾಮಯ್ಯ ಅವರನ್ನೇ ಲೇವಡಿ ಮಾಡುವ, ಅವರ ಸರ್ಕಾರವನ್ನು ಕೆಡವಲು ಹೊಂಚು ಹಾಕುವವರ ಮನೆಗೆ ಮುಖ್ಯಮಂತ್ರಿಗಳು ಹೋಗುತ್ತಾರೆ ಎಂದರೆ, ಅವರ ಸುತ್ತಲಿರುವ ಸಲಹೆಗಾರರು ಅವರನ್ನು ಯಾವ ದಾರಿಯಲ್ಲಿ ಕರೆದೊಯ್ಯುತ್ತಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತದೆ.
ಇದನ್ನೂ ಓದಿ: Women’s Day Special: ಅಧಿಕಾರ ಮೀರಿದ ಅಪ್ಪುಗೆ; ನೊಂದ ಹೆಣ್ಣುಮಕ್ಕಳ ಪಾಲಿನ ‘ಮನೆಯ ಮಗಳು’ ಡಾ. ನಾಗಲಕ್ಷ್ಮಿ ಚೌಧರಿ
ಸಿಎಂ ಕಚೇರಿಯಲ್ಲಿ ‘ಕಮಲ’ದ ಕಂಪು!
ಸಿದ್ದರಾಮಯ್ಯ ಅವರ ಕಚೇರಿ ಈಗ ಆರ್.ಎಸ್.ಎಸ್ ಪ್ರೇಮಿಗಳ ತಾಣವಾಗಿದೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ. ಆಡಳಿತದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಆಯಕಟ್ಟಿನ ಜಾಗಗಳಲ್ಲಿ ಬಿಜೆಪಿ ಮತ್ತು ಸಂಘಪರಿವಾರದ ಒಲವುಳ್ಳ ಅಧಿಕಾರಿಗಳೇ ತುಂಬಿಕೊಂಡಿದ್ದಾರೆ. ಇವರು ಸಿದ್ದರಾಮಯ್ಯ ಅವರಿಗೆ ನೀಡುತ್ತಿರುವ ಸಲಹೆಗಳು ಸಮಾಜಮುಖಿಯಾಗಿದೆಯೇ ಅಥವಾ ಸಂಘದ ಅಜೆಂಡಾಗಳನ್ನು ಜಾರಿಗೆ ತರುವ ಹುನ್ನಾರವೇ? ಆರ್.ಎಸ್.ಎಸ್ ಮುಕ್ತ ಸಮಾಜದ ಕನಸು ಕಾಣುವ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಕಚೇರಿಯೇ ‘ಜೀ’ಗಳ (ಸಂಘದ ಪ್ರಚಾರಕರು) ಪ್ರಭಾವದಲ್ಲಿದೆ ಎಂದರೆ ಇದಕ್ಕಿಂತ ದೊಡ್ಡ ವಿಪರ್ಯಾಸ ಬೇರೊಂದಿಲ್ಲ.
ಸಿದ್ಧಾಂತಕ್ಕೆ ಬಿದ್ದ ಕನ್ನ!
ರಾಹುಲ್ ಗಾಂಧಿಯವರು ದೇಶಾದ್ಯಂತ ಕೋಮುವಾದಿ ಶಕ್ತಿಗಳ ವಿರುದ್ಧ ಪಾದಯಾತ್ರೆ ಮಾಡುತ್ತಿದ್ದಾರೆ. ಅವರು ಆರ್ಎಸ್ಎಸ್ನ ಸಿದ್ಧಾಂತ ದೇಶಕ್ಕೆ ಅಪಾಯಕಾರಿ ಎಂದು ಎಚ್ಚರಿಸುತ್ತಿದ್ದಾರೆ. ಆದರೆ, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವಿದ್ದರೂ, ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿದ್ದರೂ ಬಲಪಂಥೀಯ ಶಕ್ತಿಗಳು ರಾಜಾರೋಷವಾಗಿ ಆರ್ಥಿಕ ಲಾಭ ಪಡೆಯುತ್ತಿವೆ. ಸಮಾಜವಾದಿ ಸಿದ್ದರಾಮಯ್ಯ ಅವರ ಹೆಸರನ್ನು ಬಳಸಿಕೊಂಡು, ಅವರ ಬೆನ್ನಿಗೆ ಚೂರಿ ಹಾಕುವ ಕೆಲಸ ಈ ಭಟಂಗಿಗಳಿಂದ ನಡೆಯುತ್ತಿದೆ.
ಸಿದ್ದರಾಮಯ್ಯನವರೇ, ಸಿದ್ಧಾಂತ ಅನ್ನೋದು ಬಟ್ಟೆಯಲ್ಲ, ಅದು ಉಸಿರು. ಸಹವಾಸ ದೋಷದಿಂದಾಗಿ ನಿಮ್ಮ ಉಸಿರೇ ಸಂಘಪರಿವಾರದ ಮಡುವಿಗೆ ಬೀಳದಂತೆ ಎಚ್ಚರವಹಿಸಬೇಕಾದ ಸಮಯ ಈಗ ಬಂದಿದೆ. ಒಬ್ಬ ‘ವಿಷ’ ಕಕ್ಕುವ ಪತ್ರಕರ್ತನ ಏಳಿಗೆಗಾಗಿ ನಿಮ್ಮ ಸಿದ್ಧಾಂತವನ್ನು ಬಲಿ ಕೊಡಬೇಡಿ. ನಿಮ್ಮ ಸುತ್ತಲಿರುವ ‘ಸಂಘಿ’ ವಾಸನೆಯ ಅಧಿಕಾರಿಗಳನ್ನು ಮತ್ತು ಸಲಹೆಗಾರರನ್ನು ತಕ್ಷಣ ಹೊರಹಾಕದಿದ್ದರೆ, ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ.
ಅಧಿಕಾರದ ಸ್ನೇಹ ಲಾಭಕ್ಕಾಗಿ ಇರಬಾರದು, ಅದು ಸಮಾಜದ ಉದ್ಧಾರಕ್ಕಾಗಿ ಇರಬೇಕು. ಸಿದ್ದರಾಮಯ್ಯನವರು ಈಗಲಾದರೂ ಕಣ್ತೆರೆದು ತಮ್ಮ ಸುತ್ತಲಿರುವ ಈ ಭಟಂಗಿಗಳ ಮಾಯಜಾಲದಿಂದ ಹೊರಬರುತ್ತಾರೆಯೇ? ಅಥವಾ ಈ ವಿಷವರ್ತುಲಕ್ಕೆ ಬಲಿಯಾಗುತ್ತಾರೆಯೇ? ಕಾಲವೇ ಉತ್ತರಿಸಲಿದೆ.

