Ration card: ದೇಶದ ಬಡಜನತೆಯ ಹಸಿವು ನೀಗಿಸುವ ಪಡಿತರ ವ್ಯವಸ್ಥೆಯಲ್ಲಿ (PDS) ಪಾರದರ್ಶಕತೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ರೇಷನ್ ಹಂಚಿಕೆಯಲ್ಲಿ ನಡೆಯುತ್ತಿದ್ದ ಅಕ್ರಮ, ಸೋರಿಕೆ ಹಾಗೂ ಮಧ್ಯವರ್ತಿಗಳ ಹಾವಳಿಗೆ ಮುಕ್ತಿ ಹಾಡಲು ಈಗ ‘ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ’ (CBDC) ಆಧಾರಿತ ಡಿಜಿಟಲ್ ಆಹಾರ ಕೂಪನ್ ಎಂಬ ಹೊಸ ಅಸ್ತ್ರವನ್ನು ಪ್ರಯೋಗಿಸಿದೆ. ಹಾಗಾದ್ರೆ ಈಗ ಇರುವ Ration cardಗಳು ರದ್ದಾಗ್ತಾವಾ? ಇಲ್ಲ, ಈ ರೇಷನ್ ಕಾರ್ಡ್‌ಗಳು ಡಿಜಿಟಲ್‌ಗೆ ಅಪ್ಡೇಟ್ ಆಗುತ್ತವೆ. ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ, ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ ಅವರ ನೇತೃತ್ವದಲ್ಲಿ ಈ ಕ್ರಾಂತಿಕಾರಿ ಬದಲಾವಣೆ ಜಾರಿಗೆ ಬಂದಿದೆ.
ಏನಿದು ಡಿಜಿಟಲ್ ಆಹಾರ ಕೂಪನ್?
ಇದುವರೆಗೆ Ration card ತೋರಿಸಿ ಅಥವಾ ಹೆಬ್ಬೆಟ್ಟು ಒತ್ತುವ ಮೂಲಕ ರೇಷನ್ ಪಡೆಯಲಾಗುತ್ತಿತ್ತು. ಆದರೆ ಈಗ ತಂತ್ರಜ್ಞಾನದ ಮುಂದಿನ ಹೆಜ್ಜೆಯಾಗಿ ‘ಡಿಜಿಟಲ್ ಕರೆನ್ಸಿ’ ಬಳಕೆಯಾಗಲಿದೆ. ಫಲಾನುಭವಿಗಳ ಡಿಜಿಟಲ್ ವ್ಯಾಲೆಟ್‌ಗೆ ಸರ್ಕಾರವು ನೇರವಾಗಿ ಡಿಜಿಟಲ್ ರೂಪಾಯಿಯನ್ನು (e-Rupee) ಜಮೆ ಮಾಡುತ್ತದೆ. ಇದನ್ನು ಕೇವಲ ಪಡಿತರ ಅಂಗಡಿಗಳಲ್ಲಿ ಆಹಾರ ಧಾನ್ಯ ಖರೀದಿಸಲು ಮಾತ್ರ ಬಳಸಲು ಸಾಧ್ಯವಾಗುವಂತೆ ‘ಪ್ರೋಗ್ರಾಮ್’ ಮಾಡಲಾಗಿರುತ್ತದೆ.
ಗುಜರಾತ್‌ನಲ್ಲಿ ಶುಭಾರಂಭ
ಈ ವಿನೂತನ ಯೋಜನೆಯನ್ನು ಪ್ರಾಯೋಗಿಕವಾಗಿ ಗುಜರಾತ್‌ನ ಅಹಮದಾಬಾದ್‌ನಲ್ಲಿ ಇತ್ತೀಚೆಗೆ ಗೃಹ ಸಚಿವ ಅಮಿತ್ ಶಾ ಮತ್ತು ಸಚಿವ ಪ್ರಲ್ಹಾದ್ ಜೋಶಿ ಅವರು ಉದ್ಘಾಟಿಸಿದರು. ಮೊದಲ ಹಂತದಲ್ಲಿ ಗುಜರಾತ್‌ನ ಅಹಮದಾಬಾದ್, ಆನಂದ್, ದಾಹೋದ್ ಮತ್ತು ಸಬರಮತಿ ಜಿಲ್ಲೆಗಳಲ್ಲಿ ಇದು ಜಾರಿಯಾಗಿದೆ. ಶೀಘ್ರದಲ್ಲೇ ಪುದುಚೇರಿ ಮತ್ತು ಚಂಡೀಗಢ ಸೇರಿದಂತೆ ಇತರ ಭಾಗಗಳಿಗೂ ವಿಸ್ತರಿಸಲು ಸರ್ಕಾರ ಸಜ್ಜಾಗಿದೆ.
ಇದನ್ನೂ ಓದಿ: Ghislaine Maxwell: ಪಾಪ ಕೂಪದ ಕ್ವೀನ್; ಎಫ್‌ಸ್ಟೀನ್ ಸಾಮ್ರಾಜ್ಯದ ಅಸಲಿ ಸೂತ್ರಧಾರಿ ಈಕೆಯೇ!
ರೇಷನ್ ಮಾಫಿಯಾಗೆ ಹೇಗೆ ಬೀಳಲಿದೆ ಬ್ರೇಕ್?
ಈ ಡಿಜಿಟಲ್ ವ್ಯವಸ್ಥೆಯಿಂದ ಹಲವು ಪ್ರಯೋಜನಗಳಿದ್ದು, ಅಕ್ರಮಗಳಿಗೆ ಸಂಪೂರ್ಣ ತಡೆ ಬೀಳಲಿದೆ:
- ನೈಜ-ಸಮಯದ ಟ್ರ್ಯಾಕಿಂಗ್: ಪ್ರತಿಯೊಂದು ವಹಿವಾಟು ಡಿಜಿಟಲ್ ಆಗಿ ದಾಖಲಾಗುವುದರಿಂದ, ರೇಷನ್ ಯಾರಿಗೆ ತಲುಪಿದೆ ಮತ್ತು ಎಷ್ಟು ತಲುಪಿದೆ ಎಂಬುದು ಕ್ಷಣಾರ್ಧದಲ್ಲಿ ಸರ್ಕಾರಕ್ಕೆ ತಿಳಿಯುತ್ತದೆ.
- QR ಕೋಡ್ ತಂತ್ರಜ್ಞಾನ: ಸ್ಮಾರ್ಟ್‌ಫೋನ್ ಇರುವವರು QR ಕೋಡ್ ಮೂಲಕ ಹಾಗೂ ಸಾಮಾನ್ಯ ಫೋನ್ ಬಳಸುವವರು 10 ಅಂಕಿಗಳ ಕೋಡ್ ಮೂಲಕ ಸುಲಭವಾಗಿ ಪಡಿತರ ಪಡೆಯಬಹುದು.
- ಮಧ್ಯವರ್ತಿಗಳಿಲ್ಲ: ಡಿಜಿಟಲ್ ಕರೆನ್ಸಿ ನೇರವಾಗಿ ಫಲಾನುಭವಿಯ ವ್ಯಾಲೆಟ್‌ಗೆ ಬರುವುದರಿಂದ ಹಣ ಅಥವಾ ಧಾನ್ಯದ ಸೋರಿಕೆಗೆ ಅವಕಾಶವೇ ಇರುವುದಿಲ್ಲ.
- ತ್ವರಿತ ಕಮಿಷನ್: ನ್ಯಾಯಬೆಲೆ ಅಂಗಡಿಗಳ ಮಾಲೀಕರಿಗೂ ಅವರ ಕಮಿಷನ್ ಮೊತ್ತ ತಕ್ಷಣವೇ ಡಿಜಿಟಲ್ ರೂಪದಲ್ಲಿ ಪಾವತಿಯಾಗುತ್ತದೆ, ಇದರಿಂದ ವ್ಯವಸ್ಥೆಯಲ್ಲಿ ವಿಳಂಬ ತಪ್ಪುತ್ತದೆ.
ಇದನ್ನೂ ಓದಿ: ಪಾಕಿಸ್ತಾನ ಪರ ಆಡಿದ್ದ ಸಚಿನ್! ಶಾಕ್ ಆಯ್ತಾ? ಈ ಸ್ಟೋರಿ ಓದಿ
‘ಒಂದು ದೇಶ-ಒಂದು ರೇಷನ್ ಕಾರ್ಡ್’ಗೆ ಬಲ
ಈ ಡಿಜಿಟಲ್ ಕೂಪನ್ ವ್ಯವಸ್ಥೆಯು ವಲಸೆ ಕಾರ್ಮಿಕರಿಗೆ ವರದಾನವಾಗಲಿದೆ. ದೇಶದ ಯಾವುದೇ ಮೂಲೆಯಲ್ಲಿದ್ದರೂ ತಮ್ಮ ಡಿಜಿಟಲ್ ವ್ಯಾಲೆಟ್ ಬಳಸಿ ಪಡಿತರ ಪಡೆಯಲು ಇದು ಪೂರಕವಾಗಿದೆ. ಆಧಾರ್ ಆಧಾರಿತ ದೃಢೀಕರಣ ಇರುವುದರಿಂದ ಯಾವುದೇ ಅವ್ಯವಹಾರಕ್ಕೆ ಇಲ್ಲಿ ಜಾಗವಿಲ್ಲ.
ಒಟ್ಟಾರೆಯಾಗಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಸಾರಥ್ಯದಲ್ಲಿ ಜಾರಿಯಾಗಿರುವ ಈ ಡಿಜಿಟಲ್ ಆಹಾರ ಕೂಪನ್ ವ್ಯವಸ್ಥೆಯು, ದೇಶದ ಪಡಿತರ ವಿತರಣಾ ಇತಿಹಾಸದಲ್ಲೇ ಒಂದು ಹೊಸ ಮೈಲಿಗಲ್ಲು ಎನ್ನಬಹುದು. ತಂತ್ರಜ್ಞಾನದ ಬಳಕೆಯಿಂದ ಕಟ್ಟಕಡೆಯ ಬಡವನಿಗೂ ನ್ಯಾಯಯುತವಾಗಿ ಪಡಿತರ ತಲುಪಿಸುವ ಈ ಪ್ರಯತ್ನಕ್ಕೆ ಈಗ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ.

