ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತದ ಹಳಿ ತಪ್ಪಿದೆಯೇ? ಅಥವಾ ಸಿದ್ದರಾಮಯ್ಯನವರ ಅಧಿಕಾರಿಗಳು ಕಣ್ಣು ಮುಚ್ಚಿ ಫೈಲುಗಳಿಗೆ ಸಹಿ ಹಾಕುತ್ತಿದ್ದಾರೆಯೇ? ಹೀಗೊಂದು ಪ್ರಶ್ನೆ ಈಗ ಸಾರ್ವಜನಿಕ ವಲಯದಲ್ಲಿ ಬಲವಾಗಿ ಕೇಳಿಬರುತ್ತಿದೆ. ಕಾರಣ, ಸರ್ಕಾರಿ ಕೆಲಸಕ್ಕೆ ಗುಡ್ಬೈ ಹೇಳಿ, ಕಾವಿ ಧರಿಸಿ, ಈಗ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿಗಳಾಗಿ ಆಧ್ಯಾತ್ಮಿಕ ಲೋಕದಲ್ಲಿರುವ ವ್ಯಕ್ತಿಗೆ ಸಿದ್ದು ಸರ್ಕಾರ ‘ಬಡ್ತಿ ಭಾಗ್ಯ’ ಕಲ್ಪಿಸಿದೆ!
ಏನಿದು ಎಡವಟ್ಟು?
ಇತ್ತೀಚೆಗೆ ರಾಜ್ಯ ಸರ್ಕಾರವು 20 ಕೆಎಎಸ್ (KAS) ಅಧಿಕಾರಿಗಳಿಗೆ ಹಿರಿಯ ಶ್ರೇಣಿಗೆ ಬಡ್ತಿ ನೀಡಿ ಅಧಿಕೃತ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಈ ಪಟ್ಟಿಯಲ್ಲಿ ಹೆಚ್.ಎಲ್. ನಾಗರಾಜ್ ಎಂಬುವವರ ಹೆಸರೂ ಸೇರಿದೆ. ಅಚ್ಚರಿಯ ವಿಷಯವೆಂದರೆ, ನಾಗರಾಜ್ ಅವರು ಈಗಾಗಲೇ ಸರ್ಕಾರಿ ಸೇವೆಯಿಂದ ಸ್ವಯಂ ನಿವೃತ್ತಿ ಪಡೆದಿದ್ದಾರೆ. ಅಷ್ಟೇ ಅಲ್ಲದೆ, ಅವರು ಪ್ರಸ್ತುತ ಕಾವಿ ಧರಿಸಿ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿಗಳಾಗಿ ಆಧ್ಯಾತ್ಮಿಕ ಜೀವನ ನಡೆಸುತ್ತಿದ್ದಾರೆ.. ಸೇವೆಯಲ್ಲಿಲ್ಲದ, ಅದರಲ್ಲೂ ಸಂನ್ಯಾಸತ್ವ ಸ್ವೀಕರಿಸಿರುವ ವ್ಯಕ್ತಿಯನ್ನು ಗುರುತಿಸದಷ್ಟು ಸರ್ಕಾರ ಅಂಧವಾಗಿದೆಯೇ ಎಂದು ಜನ ಆಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಪತ್ರಿಕೋದ್ಯಮದ ಕಗ್ಗೊಲೆ! ಕಾಮುಕನಿಗೆ ಮೀಡಿಯಾ ಸಲಾಮು; ನೈತಿಕತೆ ಮಣ್ಣುಪಾಲು
R Ashok ಚಾಟಿ:
ಸರ್ಕಾರದ ಈ ಕ್ರಮದ ವಿರುದ್ಧ ಎಕ್ಸ್ (ಟ್ವಿಟರ್) ಮೂಲಕ ಗುಡುಗಿರುವ ಆರ್. ಅಶೋಕ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತ ವೈಖರಿಯನ್ನು ಕಟುವಾಗಿ ಪ್ರಶ್ನಿಸಿದ್ದಾರೆ:
- ಅದಕ್ಷತೆಯ ಪರಮಾವಧಿ: “ಸೇವೆಯಿಂದ ನಿವೃತ್ತರಾಗಿ ಪೀಠಾಧಿಪತಿಯಾಗಿರುವವರಿಗೂ ಬಡ್ತಿ ನೀಡುವ ಮೂಲಕ ಕಾಂಗ್ರೆಸ್ ಸರ್ಕಾರ ತನ್ನ ಅದಕ್ಷತೆಯನ್ನು ಪ್ರದರ್ಶಿಸಿದೆ,” ಎಂದು ಅಶೋಕ್ ಕಿಡಿಕಾರಿದ್ದಾರೆ.
- ದಾಖಲೆಗಳ ಪರಿಶೀಲನೆ ಎಲ್ಲಿ?: ಅಧಿಕಾರಿಯೊಬ್ಬರು ನಿವೃತ್ತರಾಗಿರುವುದು ಸರ್ಕಾರದ ದಾಖಲೆಗಳಲ್ಲಿ ಇಲ್ಲವೇ? ಸಿಎಂ ಮತ್ತು ಸಚಿವರು ಫೈಲುಗಳನ್ನು ಓದದೆ ಕಣ್ಣು ಮುಚ್ಚಿಕೊಂಡು ಸಹಿ ಹಾಕುತ್ತಾರೆಯೇ ಎಂದು ಅವರು ಪ್ರಶ್ನಿಸಿದ್ದಾರೆ.
- ಜನರ ವಿಶ್ವಾಸಕ್ಕೆ ಧಕ್ಕೆ: “ಯಾರು ಸೇವೆಯಲ್ಲಿದ್ದಾರೆ, ಯಾರು ನಿವೃತ್ತರಾಗಿದ್ದಾರೆ ಎಂಬ ಕನಿಷ್ಠ ಮಾಹಿತಿಯೂ ಇಲ್ಲದ ಈ ಸರ್ಕಾರದ ಮೇಲೆ ಜನತೆ ಹೇಗೆ ವಿಶ್ವಾಸ ಇಡಬೇಕು?” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
- ಭವಿಷ್ಯದ ಆತಂಕ: ಇಂದು ನಿವೃತ್ತರಿಗೆ ಬಡ್ತಿ ನೀಡಿದವರು, ನಾಳೆ ನಿಧನ ಹೊಂದಿದವರಿಗೆ ವರ್ಗಾವಣೆ ಆದೇಶ ನೀಡಿದರೂ ಆಶ್ಚರ್ಯವಿಲ್ಲ ಎಂದು ಅಶೋಕ್ ಲೇವಡಿ ಮಾಡಿದ್ದಾರೆ.
“ಇದು ಕೇವಲ ಆಕಸ್ಮಿಕ ಎಡವಟ್ಟಲ್ಲ, ಇದು ಸಿದ್ದರಾಮಯ್ಯ ಸರ್ಕಾರದ ಆಡಳಿತ ಯಂತ್ರ ಸಂಪೂರ್ಣ ತುಕ್ಕು ಹಿಡಿದಿರುವುದಕ್ಕೆ ಸಾಕ್ಷಿ. ಇನ್ನೆಷ್ಟು ದಿನ ಈ ರೀತಿ ಮುಖಭಂಗ ಅನುಭವಿಸುತ್ತೀರಿ? ಕೂಡಲೇ ರಾಜೀನಾಮೆ ನೀಡಿ ಗೌರವ ಉಳಿಸಿಕೊಳ್ಳಿ.”
ಆರ್. ಅಶೋಕ್, ವಿರೋಧ ಪಕ್ಷದ ನಾಯಕ.
ಸಾವಿರ ಎಡವಟ್ಟುಗಳ ಕಾಂಗ್ರೆಸ್ ಸರ್ಕಾರದಲ್ಲಿ ನಿವೃತ್ತ ಅಧಿಕಾರಿಗೂ ಸಿಗ್ತು ಸರ್ವಿಸ್ ಬಡ್ತಿ!
ರಾಜ್ಯ ಸರ್ಕಾರ ಇತ್ತೀಚೆಗೆ 20 ಕೆಎಎಸ್ (KAS) ಅಧಿಕಾರಿಗಳಿಗೆ ಬಡ್ತಿ ನೀಡಿ ಅಧಿಕೃತ ಆದೇಶ ಹೊರಡಿಸಿದೆ. ಈ ಪಟ್ಟಿಯಲ್ಲಿ ಹಿರಿಯ ಶ್ರೇಣಿಯ ಅಧಿಕಾರಿಗಳಿಗೆ ಪದೋನ್ನತಿ ನೀಡಲಾಗಿದೆ. ಆದರೆ, ಅಚ್ಚರಿಯ ವಿಷಯವೆಂದರೆ ಈ ಪಟ್ಟಿಯಲ್ಲಿ ಈಗಾಗಲೇ ಸರ್ಕಾರಿ… pic.twitter.com/0u6zb6dgW5
— R. Ashoka (@RAshokaBJP) February 14, 2026
ಆಡಳಿತ ಯಂತ್ರದ ವಿಫಲತೆ?
ಒಬ್ಬ ಅಧಿಕಾರಿ ನಿವೃತ್ತರಾದಾಗ ಅಥವಾ ಸಂನ್ಯಾಸ ಸ್ವೀಕರಿಸಿದಾಗ ಆ ಮಾಹಿತಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಲ್ಲಿ (DPAR) ಅಪ್ಡೇಟ್ ಆಗಿರಬೇಕು. ಆದರೆ, ಅಂತಹ ಯಾವುದೇ ಪರಿಶೀಲನೆ ನಡೆಸದೆ ಬಡ್ತಿ ಪಟ್ಟಿ ಸಿದ್ಧಪಡಿಸಿರುವುದು ಸರ್ಕಾರದ ಬೇಜವಾಬ್ದಾರಿತನಕ್ಕೆ ಹಿಡಿದ ಕನ್ನಡಿಯಂತಿದೆ. ಈ ಎಡವಟ್ಟು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಸರ್ಕಾರದ ವಿರುದ್ಧ ಟೀಕೆಗಳು ವ್ಯಕ್ತವಾಗುತ್ತಿವೆ.

