Homeವಿಶ್ಲೇಷಣೆNarendra Modi: ಭಾರತೀಯರು ಬರಿ 'ಆಕ್ಟರ್ಸ್' ಎಂದ ಅಮೆರಿಕ! ವಿಶ್ವಗುರು ಮೌನವೇಕೆ? ಟ್ರಂಪ್-ಲಿವಿಟ್ ಸರಣಿ ಅವಮಾನ!

Narendra Modi: ಭಾರತೀಯರು ಬರಿ ‘ಆಕ್ಟರ್ಸ್’ ಎಂದ ಅಮೆರಿಕ! ವಿಶ್ವಗುರು ಮೌನವೇಕೆ? ಟ್ರಂಪ್-ಲಿವಿಟ್ ಸರಣಿ ಅವಮಾನ!

Narendra Modi: ಭಾರತ ಒಂದು ಸಾರ್ವಭಮ ಸ್ವತಂತ್ರ ರಾಷ್ಟ್ರ, ಮುಂದುವರೆದ ರಾಷ್ಟ್ರವಾಗದೇ ಇದ್ದರೂ ಕೂಡ ಅಂತರಾಷ್ಟೀಯ ಮಟ್ಟದಲ್ಲಿ ಈ ಹಿಂದಿನಿಂದಲೂ ಅದಕ್ಕೆ ಆದ ಗೌರವ ಇದೆ. ಆದರೆ ಇತ್ತೀಚಿಗಿನ ಬೆಳವಣಿಗೆ ನೋಡುತ್ತಿದ್ದರೆ, ಅಂತರರಾಷ್ಟ್ರೀಯ ರಾಜಕೀಯದ ವೇದಿಕೆಯಲ್ಲಿ ಭಾರತದ ಮಾನ ಹರಾಜಾಗುತ್ತಿದೆಯೇ? ಎನ್ನುವ ಅನುಮಾನ ಕಾಡುತ್ತಿದೆ. ಹೌದು, ಜಗತ್ತೇ ನಮ್ಮತ್ತ ತಿರುಗಿ ನೋಡುತ್ತಿದೆ ಎಂದು ಬೀಗುವ ನಾವು, ಇಂದು ಅಮೆರಿಕದಂತಹ ದೇಶದ ಎದುರು ಮಂಡಿಯೂರಿ ನಿಂತಿದ್ದೇವಾ? ಎನ್ನುವ ಅನುಮಾನ ಬರಲು ಕಾರಣ, ನಿನ್ನೆ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲಿವಿಟ್ ನೀಡಿರುವ ಒಂದು ಹೇಳಿಕೆ ಈಗ ಇಡೀ ದೇಶದ ಸ್ವಾಭಿಮಾನಿಗಳಲ್ಲಿ ಕಿಚ್ಚು ಹಚ್ಚಿದೆ. ನಮ್ಮನ್ನು “ಗುಡ್ ಆಕ್ಟರ್ಸ್” (ಒಳ್ಳೆಯ ನಟರು) ಎಂದು ಹೇಳುವ ಮೂಲಕ ಭಾರತವು ಅಮೆರಿಕ ಕುಣಿಸಿದಂತೆ ಕುಣಿಯುವ ನಟನಿದ್ದಂತೆ ಎನ್ನುವ ಅರ್ಥದಲ್ಲಿ ಲೇವಡಿ ಮಾಡಿದ್ದಾರೆ. ಇಷ್ಟಾದರೂ ಅಮೆರಿಕಕ್ಕೆ ನಮ್ಮ ಸರ್ಕಾರ ಯಾಕೆ ತಕ್ಕ ಉತ್ತರ ನೀಡುತ್ತಿಲ್ಲ? ಇದು 140 ಕೋಟಿ ಭಾರತೀಯರ ಪ್ರಶ್ನೆಯಾಗಿದೆ.

ಭಾರತದಲ್ಲಿ ಪ್ರಧಾನಿ ಮೋದಿ (Narendra Modi) ಅವರನ್ನು ವಿರೋಧ ಪಕ್ಷದ ನಾಯಕರು ಹಾಗೂ ಅವರನ್ನು ಟೀಕಿಸುವವರು ಒಳ್ಳೆಯ ನಟ ಎಂದು ಹೇಳುತ್ತಾರೆ. ಏಕೆಂದರೆ ಅವರ ವಿವಿಧ ಗೆಟಪ್‌ಗಳು ಹಾಗೂ ದೇಶದಲ್ಲಿ ನಡೆಯುವ ಘಟನೆಗಳಿಗೆ ಮೌನವಾಗಿರುವುದಕ್ಕೆ ಹಾಗೇ ಹೇಳುವುದು ಒಂದು ಟೀಕೆ ಎಂದು ಹೇಳಬಹುದು. ಆದರೆ ಅಮೆರಿಕ ಹೇಳುವುದು ಎಷ್ಟು ಸರಿ? ಅಮೆರಿಕ ಹೀಗೆ ಭಾರತವನ್ನು ಅವಮಾನಿಸುವುದು ಇದೇ ಮೊದಲಲ್ಲ, ಕೆಲವು ದಿನಗಳ ಹಿಂದೆಯೂ ಅಮೆರಿಕ ಅಧ್ಯಕ್ಷ ಟಂಪ್‌, ನಮ್ಮ ಭಾರತದ ಪ್ರಧಾನಿಯ ಬಗ್ಗೆಯೂ ಲಗುವಾಗಿ ಮಾತನಾಡಿ ಅಪಹಾಸ್ಯ ಮಾಡಿದ್ದರು. ಆಗಲೂ ಪ್ರಧಾನಿ ಮೋದಿ ಮೌನವಹಿಸಿದ್ದರು. ಮೋದಿ ಟಂಪ್‌ ಸ್ನೇಹ ಎಂಥಹದ್ದೇ ಇರಬಹುದು ಆದರೆ ಮೋದಿ ಕೇವಲ ಟಂಪ್‌ನ ಗೆಳೆಯ ಮಾತ್ರವಲ್ಲ ಜಗತ್ತಿನ ಅತಿದೊಡ್ಡ ರಾಷ್ಟ್ರದ ಪ್ರಧಾನಿಯಾಗಿದ್ದಾರೆ. ಅವರಿಗೆ ಮಾಡಿದ ಅವಮಾನ ಇಡೀ ಭಾರತಕ್ಕೆ ಮಾಡಿದಂತಾಗುತ್ತದೆ.

ಅಷ್ಟಕ್ಕೂ ಏನಿದು ವಿವಾದ? ಅಮೆರಿಕ ಅಹಂಕಾರದ ಮಾತುಗಳೇನು?

ಇತ್ತೀಚೆಗೆ ರಷ್ಯಾದಿಂದ ತೈಲ ಖರೀದಿಸುವ ವಿಷಯದಲ್ಲಿ ಅಮೆರಿಕದ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲಿವಿಟ್ ನೀಡಿರುವ ಹೇಳಿಕೆ ಅತ್ಯಂತ ಆಘಾತಕಾರಿಯಾಗಿದೆ. “ಭಾರತದವರು ಒಳ್ಳೆಯ ನಟರು, ನಾವು ಹೇಳಿದ ಹಾಗೆ ಆಕ್ಟ್ ಮಾಡ್ತಿದ್ದಾರೆ. ನಾವು ರಷ್ಯಾದಿಂದ ತೈಲ ಖರೀದಿ ನಿಲ್ಲಿಸಿ ಅಂದಾಗ ಅವರು ನಿಲ್ಲಿಸಿದ್ದರು. ಈಗ ಯುದ್ಧದ ಸಂದರ್ಭದಲ್ಲಿ ತೈಲ ಕೊರತೆ ಇರುವುದರಿಂದ 30 ದಿನಗಳ ಕಾಲ ರಷ್ಯಾದಿಂದ ತೈಲ ಖರೀದಿಸಲು ನಾವೇ ಅವರಿಗೆ ಪರ್ಮಿಷನ್ ಕೊಟ್ಟಿದ್ದೇವೆ” ಎಂದು ಲಿವಿಟ್ ಹೇಳಿದ್ದಾರೆ.

ಇದರ ಅರ್ಥವೇನು? ನಮ್ಮ ದೇಶಕ್ಕೆ ಬೇಕಾದ ತೈಲವನ್ನು ಎಲ್ಲಿಂದ ಖರೀದಿಸಬೇಕು ಎಂದು ನಿರ್ಧರಿಸಲು ನಮಗೆ ಸ್ವತಂತ್ರ ಇಲ್ಲವೇ? ನಾವು ಅಮೆರಿಕದ ಕೈಗೊಂಬೆಗಳೇ? “ನಾವು ಕೂತ್ಕೋ ಅಂದ್ರೆ ಕೂತ್ಕೊಳ್ತಾರೆ, ನಿಂತ್ಕೋ ಅಂದ್ರೆ ನಿಂತ್ಕೊಳ್ತಾರೆ” ಎಂಬ ಅಹಂಕಾರದ ಧಾಟಿಯಲ್ಲಿ ಅಮೆರಿಕದ ಅಧಿಕಾರಿಗಳು ಮಾತನಾಡುತ್ತಿರುವುದು ಪ್ರತಿಯೊಬ್ಬ ಭಾರತೀಯನ ಆತ್ಮಗೌರವಕ್ಕೆ ತಗುಲಿದ ದೊಡ್ಡ ಪೆಟ್ಟು.

ಇದನ್ನೂ ಓದಿ: Diplomacy: ಅಮೆರಿಕದ ‘ರಿಮೋಟ್ ಕಂಟ್ರೋಲ್’ಗೆ ಸಿಲುಕಿದೆಯೇ ಭಾರತ? ಸಾರ್ವಭೌಮತ್ವದ ಅಸಲಿ ಮುಖವಾಡ ಕಳಚಿದೆಯೇ?

ಹಳೆಯ ಗಾಯಕ್ಕೆ ಉಪ್ಪು ಸವರಿದ ಟ್ರಂಪ್ ಹೇಳಿಕೆ!

ಅಮೆರಿಕವು ಮೋದಿಯವರನ್ನು ಮತ್ತು ಭಾರತವನ್ನು ಇಷ್ಟು ಹಗುರವಾಗಿ ಕಾಣುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮೋದಿಯವರ ಬಗ್ಗೆ ಆಡಿದ್ದ ಮಾತುಗಳನ್ನು ನಾವು ಮರೆಯಬಾರದು. “ಮೋದಿಯವರಿಗೆ ನನ್ನ ಮೇಲೆ ಅಪಾರ ಪ್ರೀತಿ ಇದೆ, ಆದರೆ ಆ ಪ್ರೀತಿಯಿಂದ ಅವರ ರಾಜಕೀಯ ಭವಿಷ್ಯ (Career) ಹಾಳಾಗುವುದು ನನಗಿಷ್ಟವಿಲ್ಲ” ಎಂದು ಟ್ರಂಪ್ ವ್ಯಂಗ್ಯವಾಡಿದ್ದರು.

ಅಂದು ಟ್ರಂಪ್ ಅವರು ಮೋದಿಯವರ ರಾಜಕೀಯ ಅಸ್ತಿತ್ವದ ಬಗ್ಗೆ ಲೇವಡಿ ಮಾಡಿದ್ದರು, ಇಂದು ಲಿವಿಟ್ ಅವರು ಭಾರತದ ಆಡಳಿತವನ್ನು “ನಟನೆ” ಎಂದು ಜರೆದಿದ್ದಾರೆ. ಇಷ್ಟೆಲ್ಲಾ ಸರಣಿ ಅವಮಾನಗಳು ನಡೆಯುತ್ತಿದ್ದರೂ ನಮ್ಮ ದೇಶದ ವಿದೇಶಾಂಗ ಇಲಾಖೆಯಾಗಲಿ ಅಥವಾ ಸ್ವತಃ ಪ್ರಧಾನಿ ಮೋದಿಯವರಾಗಲಿ ಯಾಕೆ ಪ್ರತಿರೋಧ ತೋರುತ್ತಿಲ್ಲ?

ಮೋದಿ ಅವರ ‘ಮೌನ’ ದೇಶಕ್ಕೆ ಅಪಾಯಕಾರಿಯೇ?

ಚುನಾವಣೆ ಬಂದಾಗ ಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿದೆವು ಎಂದು ಎದೆ ಉಬ್ಬಿಸಿ ಹೇಳುವ ನಮ್ಮ ನಾಯಕರು, ಅಮೆರಿಕದ ಎದುರು ಮಾತ್ರ ಮೌನಕ್ಕೆ ಶರಣಾಗುವುದೇಕೆ? ದೇಶದ ಒಳಗೆ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳ ಮೇಲೆ ಗರ್ಜಿಸುವ ಮೋದಿಯವರು, ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ಬಂದಾಗ ಯಾಕೆ ತುಟಿ ಬಿಚ್ಚುತ್ತಿಲ್ಲ?

  • ವಿಶ್ವಗುರು ಅಭಿಯಾನಕ್ಕೆ ತಗುಲಿದ ಪೆಟ್ಟು: ನಾವು ವಿಶ್ವಗುರು ಆಗುತ್ತಿದ್ದೇವೆ ಎಂದು ಹಳ್ಳಿ ಹಳ್ಳಿಯಲ್ಲೂ ಪ್ರಚಾರ ಮಾಡಲಾಗುತ್ತಿದೆ. ಆದರೆ ಅಮೆರಿಕದಂತಹ ದೇಶಗಳು ನಮ್ಮನ್ನು ಕೇವಲ “ಆಕ್ಟರ್‌ಗಳು” ಎಂದು ಕರೆಯುತ್ತಿವೆ. ಇದು ಭಾರತದ ಅಸಲಿ ಪರಿಸ್ಥಿತಿಯೇ?
  • ಡೆಡ್‌ಲೈನ್‌ಗಳ ಭೀತಿ: ಅಮೆರಿಕವು ನಮಗೆ 30 ದಿನಗಳ ಡೆಡ್‌ಲೈನ್ ನೀಡುತ್ತದೆ ಎಂದರೆ, ಭಾರತದ ವಿದೇಶಾಂಗ ನೀತಿಯನ್ನು ವಾಷಿಂಗ್ಟನ್‌ನಿಂದ ನಿಯಂತ್ರಿಸಲಾಗುತ್ತಿದೆಯೇ ಎಂಬ ಅನುಮಾನ ಮೂಡುವುದು ಸಹಜ.
  • ರಾಜಕೀಯ ಲಾಭಕ್ಕಾಗಿ ಸ್ವಾಭಿಮಾನ ಬಲಿ: ಅಮೆರಿಕದ ಜೊತೆಗಿನ ಸ್ನೇಹದ ಹೆಸರಿನಲ್ಲಿ ನಾವು ನಮ್ಮ ಸ್ವಾಭಿಮಾನವನ್ನು ಬಲಿ ಕೊಡುತ್ತಿದ್ದೇವಾ? ಟ್ರಂಪ್ ಮತ್ತು ಬೈಡನ್ ಅವರಂತಹ ನಾಯಕರು ಭಾರತವನ್ನು ಕೇವಲ ತಮ್ಮ ವ್ಯಾಪಾರಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆಯೇ?

ಇದನ್ನೂ ಓದಿ: Diplomatic Surrender: ಅಮೆರಿಕದ ‘ತೈಲ ಭಿಕ್ಷೆ’: ಭಾರತವೀಗ ವಾಷಿಂಗ್ಟನ್‌ನ ಗುಲಾಮಿ ರಾಷ್ಟ್ರವೇ?

ಜನಸಾಮಾನ್ಯರ ಪ್ರಶ್ನೆಗಳು ಮತ್ತು ಸರ್ಕಾರದ ಹೊಣೆ

ಬೆಂಕಿ ಇಲ್ಲದೆ ಹೊಗೆಯಾಡುವುದಿಲ್ಲ ಎಂಬಂತೆ, ಇತ್ತೀಚಿನ ಈ ಬೆಳವಣಿಗೆಗಳು ಭಾರತೀಯರಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿವೆ.

  • ಭಾರತವು ಒಂದು ಸ್ವತಂತ್ರ ದೇಶವಾಗಿದ್ದರೂ, ತನ್ನ ತೈಲ ನೀತಿಗಾಗಿ ಅಮೆರಿಕದ ಅನುಮತಿ ಪಡೆಯುವ ಅನಿವಾರ್ಯತೆ ನಮಗಿದೆಯೇ?
  • 56 ಇಂಚಿನ ಎದೆಯ ನಾಯಕರು ಎಂದು ಕರೆಸಿಕೊಳ್ಳುವವರು ಅಮೆರಿಕದ ಅಧಿಕಾರಿಯೊಬ್ಬರ ಲೇವಡಿಗೆ ತಕ್ಕ ಪ್ರತ್ಯುತ್ತರ ನೀಡಲು ಯಾಕೆ ಹಿಂದೇಟು ಹಾಕುತ್ತಿದ್ದಾರೆ?
  • ಹೌಡಿ ಮೋದಿ (Howdy Modi) ನಮಸ್ತೆ ಟ್ರಂಪ್ (Namaste Trump) ಅಂದಿದ್ದರ ಪ್ರತಿಫಲವೇ ಇದು?

ನಮಗೆ ಬೇಕಾಗಿರುವುದು ಭಾಷಣವಲ್ಲ, ಬದ್ಧತೆ!

ಭಾರತವು ಇಂದು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಬೆಳೆಯುತ್ತಿದೆ. ಇಂತಹ ಸಂದರ್ಭದಲ್ಲಿ ನಮಗೆ ಅಮೆರಿಕದಂತಹ ದೇಶಗಳ ಸರ್ಟಿಫಿಕೇಟ್ ಬೇಕಿಲ್ಲ. ನಮ್ಮ ಪ್ರಧಾನಿಯವರು ದೇಶದ ಒಳಗೆ ನೀಡುವ ವೀರಾವೇಶದ ಭಾಷಣಗಳನ್ನು ಅಂತರರಾಷ್ಟ್ರೀಯ ವೇದಿಕೆಯಲ್ಲಿಯೂ ಪ್ರದರ್ಶಿಸಬೇಕಿದೆ. ಅಮೆರಿಕದ ದುರಹಂಕಾರದ ಮಾತುಗಳಿಗೆ ಭಾರತವು ರಾಜತಾಂತ್ರಿಕವಾಗಿ ತಕ್ಕ ಉತ್ತರ ನೀಡಲೇಬೇಕು. ಇಲ್ಲವಾದರೆ, ಮುಂದಿನ ದಿನಗಳಲ್ಲಿ ಇತಿಹಾಸವು ನಮ್ಮನ್ನು “ಹೆದರಿದ ನಾಯಕರು” ಎಂದು ಕರೆಯಬಹುದು.

ದೇಶಪ್ರೇಮ ಎಂಬುದು ಕೇವಲ ಗಡಿ ಕಾಯುವುದಲ್ಲ, ದೇಶದ ಗೌರವಕ್ಕೆ ದಕ್ಕೆ ಬಂದಾಗ ಸಿಡಿದೇಳುವುದು ಕೂಡ ದೇಶಪ್ರೇಮವೇ. ಅಮೆರಿಕದ ಈ ಅವಮಾನಕ್ಕೆ ಭಾರತ ಯಾವಾಗ ಮತ್ತು ಹೇಗೆ ಉತ್ತರ ನೀಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಅಮೆರಿಕದ ಈ ದುರಹಂಕಾರದ ಹೇಳಿಕೆ ಮತ್ತು ಸರ್ಕಾರದ ಮೌನದ ಬಗ್ಗೆ ನಿಮ್ಮ ಅಭಿಪ್ರಾಯವೇನು? ಕೂಡಲೇ ಕಾಮೆಂಟ್ ಮಾಡಿ ಮತ್ತು ಈ ಲೇಖನವನ್ನು ಎಲ್ಲರಿಗೂ ತಲುಪಿಸಿ. ಭಾರತದ ಸ್ವಾಭಿಮಾನಕ್ಕಾಗಿ ಧ್ವನಿ ಎತ್ತಿ!

Praveen Yalligutti
Praveen Yalliguttihttp://asalisuddi.com
ಕನ್ನಡದ ವಿವಿಧ ಸುದ್ದಿ ಮಾಧ್ಯಮ ಸಂಸ್ಥೆಗಳಲ್ಲಿ ಸುಮಾರು 8 ವರ್ಷಗಳ ಕಾಲ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ ನನಗಿದೆ. ಸುದ್ದಿಗಳ ಅಸಲಿಯತ್ತನ್ನು ಮತ್ತು ನಿಖರವಾದ ಮಾಹಿತಿಯನ್ನು ಜನರಿಗೆ ತಲುಪಿಸಬೇಕು ಎನ್ನುವ ಉದ್ದೇಶದಿಂದ ಈಗ 'ಅಸಲಿ ಸುದ್ದಿ' (Asali Suddi) ಎನ್ನುವ ಸುದ್ದಿ ಸಂಸ್ಥೆಯನ್ನು ಆರಂಭಿಸಿದ್ದೇನೆ. ಸತ್ಯಕ್ಕೆ ಹತ್ತಿರವಾದ ಮತ್ತು ಜನೋಪಕಾರಿ ವರದಿಗಳನ್ನು ನೀಡುವುದೇ ನನ್ನ ಮೊದಲ ಆದ್ಯತೆ.
RELATED ARTICLES

Most Popular

Recent Comments