ಯಾದಗಿರಿ: ರಾಜ್ಯಾದ್ಯಂತ ಸಂಚಲನ ಮೂಡಿಸಿರುವ ಮಹಲ್ ರೋಜಾದ ಮಲ್ಲಿಕಾರ್ಜುನ ಮುತ್ಯಾ (Mallikarjuna Mutya) ವಿರುದ್ಧದ ಪೋಕ್ಸೋ (POCSO) ಪ್ರಕರಣ ಈಗ ನಿರ್ಣಾಯಕ ಹಂತಕ್ಕೆ ತಲುಪಿದೆ. ಇಷ್ಟು ದಿನ ಭಕ್ತರ ಪಾಲಿನ ‘ದೈವಾಂಶ ಸಂಭೂತ’ನಾಗಿದ್ದ ಮುತ್ಯಾನ ಅಸಲಿ ಮುಖವಾಡ ಕಳಚುತ್ತಾ ಎಂಬ ಪ್ರಶ್ನೆ ಮೂಡಿದ್ದು, ಆತನ ಸಂಪೂರ್ಣ ಭವಿಷ್ಯ ಈಗ ಸಂತ್ರಸ್ತ ಬಾಲಕಿ ನ್ಯಾಯಾಧೀಶರ ಮುಂದೆ ನೀಡಿರುವ ಹೇಳಿಕೆಯ ಮೇಲೆ ನಿಂತಿದೆ.
ಕೋರ್ಟ್ನಲ್ಲಿ ಹೇಳಿಕೆ ದಾಖಲು: ಮುಚ್ಚಿದ ಲಕೋಟೆಯಲ್ಲಿ ರಹಸ್ಯ
ಶಹಾಪುರ ಜೆಎಂಸಿ ನ್ಯಾಯಾಲಯದಲ್ಲಿ ಸಂತ್ರಸ್ತ ಬಾಲಕಿಯ ಹೇಳಿಕೆಯನ್ನು ನ್ಯಾಯಾಧೀಶರು ಯಶಸ್ವಿಯಾಗಿ ದಾಖಲಿಸಿಕೊಂಡಿದ್ದಾರೆ. ಕಾನೂನಿನ ಪ್ರಕಾರ, ಅತ್ಯಂತ ಗೌಪ್ಯವಾಗಿ ದಾಖಲಿಸಲಾದ ಈ ಹೇಳಿಕೆಯ ಪ್ರತಿಯನ್ನು ಈಗ ಮುಚ್ಚಿದ ಲಕೋಟೆಯಲ್ಲಿ ತನಿಖಾಧಿಕಾರಿಗಳಿಗೆ ಹಸ್ತಾಂತರಿಸಲಾಗುತ್ತಿದೆ. ಈ ಹೇಳಿಕೆಯಲ್ಲಿ ಬಾಲಕಿ ಏನನ್ನು ವಿವರಿಸಿದ್ದಾಳೆ ಎನ್ನುವುದೇ ಮಲ್ಲಿಕಾರ್ಜುನ ಮುತ್ಯಾ (Mallikarjuna Mutya) ಜೈಲು ಪಾಲಾಗುತ್ತಾನೋ ಅಥವಾ ಪಾರಾಗುತ್ತಾನೋ ಎಂಬುದನ್ನು ನಿರ್ಧರಿಸಲಿದೆ.
ಹೈಕೋರ್ಟ್ ಮೆಟ್ಟಿಲೇರಿದ ಮುತ್ಯಾ; ಮುಂದುವರಿದ ಕಾನೂನು ಹೋರಾಟ
ಒಂದೆಡೆ ಪೊಲೀಸರ ತನಿಖೆ ತೀವ್ರಗೊಂಡಿದ್ದರೆ, ಇನ್ನೊಂದೆಡೆ ತನ್ನ ವಿರುದ್ಧದ ಎಫ್ಐಆರ್ (FIR) ರದ್ದುಗೊಳಿಸುವಂತೆ ಕೋರಿ ಮಲ್ಲಿಕಾರ್ಜುನ ಮುತ್ಯಾ (Mallikarjuna Mutya) ಕಲಬುರಗಿ ಹೈಕೋರ್ಟ್ ಮೊರೆ ಹೋಗಿದ್ದಾನೆ. ಸೋಮವಾರಕ್ಕೆ ನಿಗದಿಯಾಗಿದ್ದ ಈ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯವು ಮುಂದೂಡಿದ್ದು, ಕಾನೂನು ಕುಣಿಕೆ ಬಿಗಿಯಾಗುತ್ತಿದೆ. ಅಜ್ಞಾತ ಸ್ಥಳದಲ್ಲಿದ್ದುಕೊಂಡೇ ವಿಡಿಯೋ ಬಿಡುಗಡೆ ಮಾಡುತ್ತಿರುವ ಮುತ್ಯಾ, ತನ್ನ ಅಸ್ತಿತ್ವಕ್ಕಾಗಿ ಹರಸಾಹಸ ಪಡುತ್ತಿದ್ದಾನೆ.
ಇದನ್ನೂ ಓದಿ: Darshan: ಜೈಲಿನಲ್ಲಿರುವ ದರ್ಶನ್ ಭವಿಷ್ಯ? ಕೋಡಿಶ್ರೀ ಅಚ್ಚರಿಯ ಹೇಳಿಕೆ ವೈರಲ್!
ಪರ-ವಿರೋಧದ ವಿಡಿಯೋ ಸಮರ
ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳ ಸಮರವೇ ನಡೆಯುತ್ತಿದೆ. ಮೊದಲಿಗೆ ಮುತ್ಯಾ ತನ್ನ ಸ್ಪಷ್ಟನೆ ನೀಡುವ ವಿಡಿಯೋ ಬಿಡುಗಡೆ ಮಾಡಿದ್ದ. ಇದರ ಬೆನ್ನಲ್ಲೇ ಬಾಲಕಿಯ ಪೋಷಕರು ಕೂಡ ವಿಡಿಯೋ ಹಂಚಿಕೊಂಡಿದ್ದು, “ಕಿಡಿಗೇಡಿಗಳು ವಿಡಿಯೋ ತಿರುಚಿ ಅಪಪ್ರಚಾರ ಮಾಡುತ್ತಿದ್ದಾರೆ, ಅಪ್ಪಾಜಿ ಅವರು ದೇವರಿಗೆ ಸಮಾನ” ಎಂದು ಹೇಳುವ ಮೂಲಕ ಪ್ರಕರಣಕ್ಕೆ ಹೊಸ ತಿರುವು ನೀಡಲು ಯತ್ನಿಸಿದ್ದಾರೆ. ಆದರೆ, ನ್ಯಾಯಾಧೀಶರ ಮುಂದೆ ಬಾಲಕಿ ನೀಡಿರುವ ಅಧಿಕೃತ ಹೇಳಿಕೆ ಮಾತ್ರ ಅಂತಿಮವಾಗಿ ಪರಿಗಣಿಸಲ್ಪಡುತ್ತದೆ.
ಭಕ್ತರಿಂದ ಪ್ರತಿಭಟನೆ, ಮುಂದುವರಿದ ಆಕ್ರೋಶ
ಮಲ್ಲಿಕಾರ್ಜುನ ಮುತ್ಯಾ ಮೇಲಿನ ಪೋಕ್ಸೋ ಕೇಸ್ ರದ್ದುಪಡಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಕೋಲಿ ಕಬ್ಬಲಿಗ ಹೋರಾಟ ಸಮಿತಿ ಹಾಗೂ ಮಠದ ಭಕ್ತರು ಇಂದು ಕಲಬುರಗಿಯಲ್ಲಿ ಬೃಹತ್ ಮೆರವಣಿಗೆ ನಡೆಸಿದರು. ವಿವಿಧ ಮಠಾಧೀಶರ ಬೆಂಬಲದೊಂದಿಗೆ ನಡೆದ ಈ ಪ್ರತಿಭಟನೆಯಲ್ಲಿ ಮುತ್ಯಾನ ಫೋಟೋ ಹಿಡಿದು ಜೈಕಾರ ಹಾಕಲಾಯಿತು. ತನಿಖೆ ನಡೆಯುತ್ತಿರುವಾಗಲೇ ಈ ರೀತಿಯ ಒತ್ತಡ ತಂತ್ರಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿವೆ.
ಸದ್ಯಕ್ಕೆ ಎಲ್ಲರ ಕಣ್ಣು ನ್ಯಾಯಾಲಯದ ಮುಂದಿನ ಕ್ರಮದ ಮೇಲಿದ್ದು, ಸಂತ್ರಸ್ತೆಯ ಮಾತು ಮುತ್ಯಾನನ್ನು ಕಟಕಟೆಗೆ ತಳ್ಳಲಿದೆಯೇ ಎಂಬುದು ಕುತೂಹಲ ಮೂಡಿಸಿದೆ.

