Karnataka Politics: ರಾಜ್ಯ ರಾಜಕಾರಣದಲ್ಲಿ ಈಗ ‘ಸಾವಿರ ದಿನದ ಸಡಗರ’ಕ್ಕಿಂತ ‘ಕುರ್ಚಿ ಕದನ’ದ ಸದ್ದೇ ಜೋರಾಗಿ ಕೇಳಿಸುತ್ತಿದೆ. ಹೈಕಮಾಂಡ್ ಭೇಟಿ ಮುಗಿಸಿ ಬಂದಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ವರಸೆ ನೋಡಿ ವಿರೋಧ ಪಕ್ಷದ ನಾಯಕರು, “ಡಿಕೆಶಿ ದೆಹಲಿಯಿಂದ ರಾಜಕೀಯ ಗನ್ ಹಿಡಿದುಕೊಂಡು ಬಂದಿದ್ದಾರೆ” ಎಂದು ಕುಟುಕುತ್ತಿದ್ದಾರೆ. ಇತ್ತ ಸಿಎಂ ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವಿನ ‘ಮೌನ ಯುದ್ಧ’ ಅಂತರಾಷ್ಟ್ರೀಯ ವೇದಿಕೆಯಲ್ಲೇ ಸ್ಫೋಟಗೊಂಡಿದೆ!
ಹೊಸ ಸ್ವರೂಪ ಪಡೆದುಕೊಂಡ ‘ಕುರ್ಚಿ ಕದನ’
ರಾಜ್ಯ ಕಾಂಗ್ರೆಸ್ ಸರ್ಕಾರವು ತನ್ನ 1000 ದಿನಗಳ ಆಡಳಿತದ ಸಡಗರವನ್ನು ಹಾವೇರಿಯಲ್ಲಿ ಬೃಹತ್ ಕಾರ್ಯಕ್ರಮದ ಮೂಲಕ ಆಚರಿಸಲು ಸಜ್ಜಾಗಿದೆ. ಆದರೆ, ಈ ಸಂಭ್ರಮದ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವಿನ ‘ಕುರ್ಚಿ ಕದನ’ ಹೊಸ ಸ್ವರೂಪ ಪಡೆದುಕೊಂಡಿದೆ. ಇಬ್ಬರು ನಾಯಕರ ನಡುವಿನ ಶೀತಲ ಸಮರ ಈಗ ಅಂತರಾಷ್ಟ್ರೀಯ ವೇದಿಕೆಯಲ್ಲೇ ಸ್ಫೋಟಗೊಂಡಿರುವುದು ರಾಜ್ಯ ರಾಜಕಾರಣದಲ್ಲಿ ತಲ್ಲಣ ಸೃಷ್ಟಿಸಿದೆ.
ಅಂತರಾಷ್ಟ್ರೀಯ ವೇದಿಕೆಯಲ್ಲೇ ‘ಮೌನ’ ಸ್ಫೋಟ!
ಬೆಂಗಳೂರಿನಲ್ಲಿ ಶನಿವಾರ ನಡೆದ ‘ಅಂತರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಸಮ್ಮೇಳನ’ ಕೇವಲ ತಾಂತ್ರಿಕ ಚರ್ಚೆಗೆ ಸೀಮಿತವಾಗಲಿಲ್ಲ. ಜಗತ್ತಿನ ನಾನಾ ಭಾಗಗಳ ಗಣ್ಯರು ಭಾಗವಹಿಸಿದ್ದ ಈ ಗಂಭೀರ ವೇದಿಕೆಯಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ನಡುವಿನ ಅಂತರ ಎದ್ದು ಕಾಣುತ್ತಿತ್ತು. ಅಕ್ಕಪಕ್ಕ ಕುಳಿತಿದ್ದರೂ ಪರಸ್ಪರ ಮುಖ ನೋಡದ, ಮಾತುಕತೆ ನಡೆಸದ ಇಬ್ಬರು ನಾಯಕರ ವರ್ತನೆ ‘ಕೈ’ ಪಾಳಯದ ಒಡಕಿಗೆ ಕನ್ನಡಿ ಹಿಡಿದಿದೆ. ಕಾರ್ಯಕ್ರಮದ ಶಿಷ್ಟಾಚಾರದಂತೆ ಪುಸ್ತಕ ಬಿಡುಗಡೆಯ ಸಂದರ್ಭದಲ್ಲಿ ಮಾತ್ರ ಅನಿವಾರ್ಯವಾಗಿ ಮಾತನಾಡಿದ್ದು ಬಿಟ್ಟರೆ, ಉಳಿದಂತೆ ಇಬ್ಬರ ನಡುವೆ ‘ಭೀಕರ ಮೌನ’ ಆವರಿಸಿತ್ತು.
ಇದನ್ನೂ ಓದಿ: ಶಾಸಕರ ‘ಫಾರಿನ್ ಟೂರ್’ ಫಜೀತಿ: ಹೈಕಮಾಂಡ್ ಕೆಂಗಣ್ಣು, ನಾಯಕರಿಗೆ ನಡುಕ!
ಬಿಜೆಪಿ ವ್ಯಂಗ್ಯ: “ಡೆಲ್ಲಿಯಿಂದ ಗನ್ ಹಿಡಿದು ಬಂದ್ರಾ ಡಿಕೆ?”
ಕಾಂಗ್ರೆಸ್ ನಾಯಕರ ಈ ನಡೆಗೆ ವಿರೋಧ ಪಕ್ಷ ಬಿಜೆಪಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ಇತ್ತೀಚೆಗಷ್ಟೇ ದೆಹಲಿಗೆ ಹೋಗಿ ಹೈಕಮಾಂಡ್ ಭೇಟಿ ಮಾಡಿ ಬಂದಿರುವ ಡಿಕೆಶಿ ವರಸೆ ಸಂಪೂರ್ಣ ಬದಲಾಗಿದೆ. ಇದನ್ನು ಕಂಡು ಬಿಜೆಪಿ ನಾಯಕರು, “ಡಿಕೆ ಶಿವಕುಮಾರ್ ದೆಹಲಿಯಿಂದ ರಾಜಕೀಯ ಗನ್ ಹಿಡಿದುಕೊಂಡು ಬಂದಿದ್ದಾರೆ, ಅದಕ್ಕೇ ಸಿಎಂ ಅವರ ಮುಖ ನೋಡಲು ಹೆದರುತ್ತಿದ್ದಾರೆ” ಎಂದು ಲೇವಡಿ ಮಾಡಿದ್ದಾರೆ.
‘ನಾ ಕೊಡೆ’ ಎಂಬ ಸಿಎಂ, ‘ನಾ ಬಿಡೆ’ ಎನ್ನುವ ಡಿಕೆಶಿ!
ದೆಹಲಿಯಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರ ಮುಂದೆ ತಮ್ಮ ಹಕ್ಕು ಮಂಡಿಸಿ ಬಂದಿರುವ ಡಿಕೆಶಿ, ಈಗ “ಕಾಲವೇ ಉತ್ತರಿಸಲಿದೆ” ಎನ್ನುವ ನಿಗೂಢ ಮಂತ್ರ ಜಪಿಸುತ್ತಿದ್ದಾರೆ. ಅತ್ತ ಸಿಎಂ ಸಿದ್ದರಾಮಯ್ಯ ಅವರು ಬಜೆಟ್ ಮಂಡನೆಗೆ ಸಜ್ಜಾಗುವ ಮೂಲಕ “ನಾನೇ ಬಾಸ್” ಎಂಬ ಸಂದೇಶ ರವಾನಿಸುತ್ತಿದ್ದಾರೆ. ಈ ಇಬ್ಬರು ನಾಯಕರ ನಡುವಿನ ‘ನಾ ಕೊಡೆ – ನಾ ಬಿಡೆ’ ಪಟ್ಟು ಈಗ ಫೆಬ್ರವರಿ 17ರ ನಂತರ ಹೊಸ ತಿರುವು ಪಡೆಯುವ ಲಕ್ಷಣಗಳಿವೆ.
ಅಜ್ಜಯ್ಯನ ಶಕ್ತಿ ಮತ್ತು ಮುಂದಿನ ಹಾದಿ
ನೊಣವಿನಕೆರೆ ಅಜ್ಜಯ್ಯನ ಸನ್ನಿಧಿಗೆ ಭೇಟಿ ನೀಡಿದ್ದ ಡಿ.ಕೆ. ಶಿವಕುಮಾರ್, “ಅಜ್ಜಯ್ಯನ ಶಕ್ತಿ ಇಲ್ಲದಿದ್ದರೆ ಈ ಸರ್ಕಾರ ಇಷ್ಟು ಶಕ್ತಿಯುತವಾಗಿ ಇರುತ್ತಿರಲಿಲ್ಲ. ಮುಂದೆ ಏನಾಗುತ್ತದೆ ಎಂದು ನಾನು ಈಗಲೇ ಚರ್ಚೆ ಮಾಡುವುದಿಲ್ಲ” ಎಂದು ಹೇಳುವ ಮೂಲಕ ಹೊಸ ಟ್ವಿಸ್ಟ್ ಕೊಟ್ಟಿದ್ದಾರೆ. ಹೈಕಮಾಂಡ್ ಫೆಬ್ರವರಿ 17ರ ಬಳಿಕ ಇಬ್ಬರನ್ನೂ ದೆಹಲಿಗೆ ಕರೆಸುವ ಸಾಧ್ಯತೆ ಇದ್ದು, ಸಚಿವರು ಮತ್ತು ಶಾಸಕರ ಅಭಿಪ್ರಾಯ ಸಂಗ್ರಹಿಸಲು ಎಐಸಿಸಿ ಮುಂದಾಗಿದೆ ಎನ್ನಲಾಗಿದೆ.
ಇದನ್ನೂ ಓದಿ: ಲೇಡಿ ಆಫೀಸರ್ ಬೆಡ್‌ರೂಮ್‌ಗೆ ಕನ್ನ; ಬೆತ್ತಲೆ ವಿಡಿಯೋದಿಂದ ಬ್ಲ್ಯಾಕ್‌ಮೇಲ್! ‘ನಕಲಿ’ ಪತ್ರಕರ್ತರು ಅರೆಸ್ಟ್
ಸಾವಿರ ದಿನದ ಸಂಭ್ರಮದ ನಡುವೆ ಆತಂಕ
ಸರ್ಕಾರ ಸಾವಿರ ದಿನ ಪೂರೈಸಿದ ಹಿನ್ನೆಲೆಯಲ್ಲಿ ಹಾವೇರಿಯಲ್ಲಿ ಹಮ್ಮಿಕೊಂಡಿರುವ ಬೃಹತ್ ಕಾರ್ಯಕ್ರಮದ ಮೇಲೆ ಈಗ ಕುರ್ಚಿ ಕದನದ ನೆರಳು ಬಿದ್ದಿದೆ. ಪಟ್ಟದಾಟದ ನಡುವೆ ಈ ಸಂಭ್ರಮ ಎಷ್ಟು ದಿನ ಇರಲಿದೆ ಎಂಬ ಪ್ರಶ್ನೆ ಈಗ ಸಾರ್ವಜನಿಕ ವಲಯದಲ್ಲಿ ಮೂಡಿದೆ.

