Homeವಿಶ್ಲೇಷಣೆJnanpith Controversy: ಕಾವ್ಯದ ಮುಖವಾಡವೋ? ಕಾಮದ ವಿಕಾರವೋ? ವೈರಮುತ್ತು 'ಜ್ಞಾನಪೀಠ'ಕ್ಕೆ ವಿರೋಧವೇಕೆ?

Jnanpith Controversy: ಕಾವ್ಯದ ಮುಖವಾಡವೋ? ಕಾಮದ ವಿಕಾರವೋ? ವೈರಮುತ್ತು ‘ಜ್ಞಾನಪೀಠ’ಕ್ಕೆ ವಿರೋಧವೇಕೆ?

ಗೌರವದ ಮೌಲ್ಯ ಕುಸಿದಾಗ…

Jnanpith Controversy: ಭಾರತೀಯ ಸಾಹಿತ್ಯ ಲೋಕದ ಅತ್ಯುನ್ನತ ಮೈಲಿಗಲ್ಲು ಎನ್ನಲಾಗುವ ‘ಜ್ಞಾನಪೀಠ’ ಪ್ರಶಸ್ತಿಯು ಈ ಬಾರಿ ತಮಿಳಿನ ಖ್ಯಾತ ಸಾಹಿತಿ, ಗೀತರಚನೆಕಾರ ವೈರಮುತ್ತು ರಾಮಸ್ವಾಮಿ (Vairamuthu) ಅವರಿಗೆ ಘೋಷಣೆಯಾಗಿದೆ. ಸುಮಾರು 24 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ತಮಿಳು ಸಾಹಿತ್ಯಕ್ಕೆ ಈ ಗೌರವ ಲಭಿಸಿರುವುದು ಸಂಭ್ರಮದ ಸಂಗತಿಯಾಗಬೇಕಿತ್ತು. ಆದರೆ, ಇವತ್ತು ದೇಶಾದ್ಯಂತ ಸಂಭ್ರಮಕ್ಕಿಂತ ಹೆಚ್ಚಾಗಿ ‘ಆಕ್ರೋಶ’ದ ಅಲೆ ಎದ್ದಿದೆ. ಇದಕ್ಕೆ ಕಾರಣ, ವೈರಮುತ್ತು ಅವರ ಮೇಲಿರುವ ಗಂಭೀರ ಸ್ವರೂಪದ ಲೈಂಗಿಕ ಕಿರುಕುಳದ ಆರೋಪಗಳು (Sexual harassment allegations). ಕಲೆ ಮತ್ತು ಕಲಾವಿದನ ನೈತಿಕತೆಯ ನಡುವಿನ ಈ ಸಂಘರ್ಷ ಈಗ ಬೀದಿಗೆ ಬಂದಿದೆ. ಇದು ಕೇವಲ ಒಂದು ಪ್ರಶಸ್ತಿಯ ವಿವಾದವಲ್ಲ; ಬದಲಾಗಿ ನಮ್ಮ ವ್ಯವಸ್ಥೆ, ರಾಜಕೀಯ ಮತ್ತು ಪಿತೃಪ್ರಧಾನ ಸಮಾಜವು ಮಹಿಳಾ ಸಂತ್ರಸ್ತೆಯರ ದನಿಯನ್ನು ಹೇಗೆ ಹತ್ತಿಕ್ಕುತ್ತದೆ ಎಂಬುದಕ್ಕೆ ಕನ್ನಡಿ ಹಿಡಿದಂತಿದೆ.

ಸಾಹಿತ್ಯಿಕ ಕೃಷಿ ಮತ್ತು ಕಳಂಕಿತ ವ್ಯಕ್ತಿತ್ವದ ದ್ವಂದ್ವ

ವೈರಮುತ್ತು ಅವರ ಸಾಹಿತ್ಯಿಕ ಸಾಧನೆಯನ್ನು ಯಾರೂ ಕಡೆಗಣಿಸುವಂತಿಲ್ಲ. ಏಳು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದವರು, ಪದ್ಮಶ್ರೀ ಮತ್ತು ಪದ್ಮಭೂಷಣ ಗೌರವಕ್ಕೆ ಪಾತ್ರರಾದವರು. ಸುಮಾರು 7500ಕ್ಕೂ ಅಧಿಕ ಹಾಡುಗಳನ್ನು ಬರೆದು, 40ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ ಇವರನ್ನು ತಮಿಳುನಾಡಿನಲ್ಲಿ ‘ಕವಿ ಸಾಮ್ರಾಟ’ ಎಂದೇ ಕರೆಯಲಾಗುತ್ತದೆ. ಅವರ ‘ಕಳ್ಳಿಕಾಟ್ಟು ಇದಿಹಾಸಂ’ ಕೃತಿಯು ಗ್ರಾಮೀಣ ತಮಿಳುನಾಡಿನ ಬದುಕನ್ನು ಮನೋಜ್ಞವಾಗಿ ಚಿತ್ರಿಸಿದೆ. ಹಿರಿಯ ಚಿಂತಕ ಪುರುಷೋತ್ತಮ ಬಿಳಿಮಲೆ ಅವರು ಹೇಳುವಂತೆ, “ವೈರಮುತ್ತು ತಮಿಳುನಾಡಿನ ಗ್ರಾಮೀಣ ಜೀವನ ಮತ್ತು ಸಾಮಾಜಿಕ ಬದಲಾವಣೆಗಳ ಬಗ್ಗೆ ಉತ್ಕಟವಾಗಿ ಬರೆಯುತ್ತಾರೆ.”

ಆದರೆ, ಪ್ರಶ್ನೆ ಉದ್ಭವಿಸುವುದು ಇಲ್ಲೇ— ಒಬ್ಬ ವ್ಯಕ್ತಿಯ ಬರಹಗಳು ಎಷ್ಟು ಉತ್ಕಟವಾಗಿದ್ದರೂ, ಆತನ ನಡವಳಿಕೆಗಳು ಅಧಃಪತನಕ್ಕಿಳಿದಿದ್ದರೆ ಆ ಸಾಹಿತ್ಯಕ್ಕೆ ಬೆಲೆ ಇದೆಯೇ? 2018ರ ‘ಮೀಟೂ’ (#MeToo) ಅಭಿಯಾನದ ಸಮಯದಲ್ಲಿ ಸುಮಾರು 17ರಿಂದ 20 ಮಹಿಳೆಯರು ವೈರಮುತ್ತು ವಿರುದ್ಧ ಲೈಂಗಿಕ ಕಿರುಕುಳದ ಗಂಭೀರ ಆರೋಪ ಮಾಡಿದ್ದರು. ಅನುಚಿತ ಸ್ಪರ್ಶ, ಲೈಂಗಿಕ ಸಹಕಾರಕ್ಕೆ ಒತ್ತಾಯ ಮತ್ತು ವೃತ್ತಿಪರ ಅವಕಾಶಗಳ ಆಮೇಶವೊಡ್ಡಿ ದೌರ್ಜನ್ಯ ಎಸಗಿದ ಆರೋಪಗಳು ಇವರ ಬೆನ್ನಿಗಿವೆ. ಈ ಆರೋಪಗಳನ್ನು ಎದುರಿಸುತ್ತಿರುವ ವ್ಯಕ್ತಿಗೆ ‘ಜ್ಞಾನ’ದ ಹೆಸರಿನಲ್ಲಿ ನೀಡುವ ಅತ್ಯುನ್ನತ ಪ್ರಶಸ್ತಿ ನೀಡುವುದು ಜ್ಞಾನಪೀಠದ ಆಶಯಕ್ಕೇ ಮಾಡಿದ ಅಪಮಾನವಲ್ಲವೇ?

ಇದನ್ನೂ ಓದಿ: Bagalkot Medical college: ಬೂಟ್ ಪಾಲಿಶ್ ಚಳವಳಿಯಿಂದ ಶಂಕುಸ್ಥಾಪನೆಯವರೆಗೆ; ಜಿಲ್ಲಾ ನಾಯಕರ ಪಿತೂರಿ ಬಯಲು ಮಾಡಿದ ಬದ್ನೂರ್!

ಚಿನ್ಮಯಿ ಶ್ರೀಪಾದ್: ಒಂಟಿ ಹೋರಾಟದ ಕಿಡಿ

ಈ ವಿವಾದದ ಕೇಂದ್ರಬಿಂದುವಿನಲ್ಲಿರುವವರು ಖ್ಯಾತ ಗಾಯಕಿ ಚಿನ್ಮಯಿ ಶ್ರೀಪಾದ್ (Chinmayi Sripad). ಸ್ವಿಟ್ಜರ್ಲ್ಯಾಂಡ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ವೈರಮುತ್ತು ತಮಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ್ದರು ಎಂದು ಅವರು ನೇರವಾಗಿ ಗುಡುಗಿದ್ದರು. ಚಿನ್ಮಯಿ ತೋರಿಸಿದ ಧೈರ್ಯದಿಂದಾಗಿ ಭುವನ ಶೇಷನ್, ಸಿಂಧುಜಾ ರಾಜಾರಾಮ್, ಎ.ಆರ್. ರಹಯಾನಾ ಸೇರಿದಂತೆ ಹತ್ತಾರು ಮಹಿಳೆಯರು ಮುಂದೆ ಬಂದು ವೈರಮುತ್ತು ಅವರ “ಕಾಮಪಿಪಾಸು” ಮುಖವನ್ನು ಬಯಲು ಮಾಡಿದ್ದರು.

ಈಗ ಜ್ಞಾನಪೀಠ ಘೋಷಣೆಯಾದ ನಂತರ ಚಿನ್ಮಯಿ ಅವರು “ಎಕ್ಸ್” (ಟ್ವಿಟ್ಟರ್) ಮೂಲಕ ಸರಣಿ ಆಕ್ರೋಶ ಹೊರಹಾಕಿದ್ದಾರೆ. “ಚಿಕ್ಕ ಹುಡುಗಿಯರಿಂದ ಹಿಡಿದು ವಿವಿಧ ವಯೋಮಾನದ ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ ಆರೋಪ ಹೊತ್ತ ವ್ಯಕ್ತಿಗೆ ಜ್ಞಾನಪೀಠ ನೀಡಿರುವುದು ವಿಶಾದಕರ. ಇದು ಜ್ಞಾನಪೀಠ ಸಂಸ್ಥೆಗೆ ಕಪ್ಪುಚುಕ್ಕೆ,” ಎಂದು ಅವರು ಕಿಡಿಕಾರಿದ್ದಾರೆ. ಅಷ್ಟೇ ಅಲ್ಲದೆ, ವೈರಮುತ್ತು ಅವರು ಸಾಹಿತ್ಯ ದಿಗ್ಗಜ ಜಯಕಾಂತನ್ ಅವರ ಹೆಸರಿನಲ್ಲಿ ನಕಲಿ ಪತ್ರ ಸೃಷ್ಟಿಸಿ ತನ್ನನ್ನು ತಾನೇ ಹೊಗಳಿಕೊಂಡಿದ್ದ ಕೆಟ್ಟ ಇತಿಹಾಸವನ್ನೂ ಅವರ ಮಗಳು ಬಹಿರಂಗಪಡಿಸಿರುವುದು ವೈರಮುತ್ತು ಅವರ “ಅಗ್ಗದ ಜನಪ್ರಿಯತೆ”ಗೆ ಸಾಕ್ಷಿಯಾಗಿದೆ.

ನಟರಾದ ರಜನಿಕಾಂತ್ ಮತ್ತು ಕಮಲ್ ಹಾಸನ್ ವಿರುದ್ಧ ಹರಿಹಾಯ್ದ ಸಂತ್ರಸ್ತೆಯರು

ತಮಿಳು ಚಿತ್ರರಂಗದ ದೈತ್ಯ ಪ್ರತಿಭೆಗಳಾದ ರಜನಿಕಾಂತ್ ಮತ್ತು ಕಮಲ್ ಹಾಸನ್ ಅವರು ವೈರಮುತ್ತುಗೆ ಅಭಿನಂದನೆ ಸಲ್ಲಿಸಿರುವುದು ವಿವಾದವನ್ನು ಮತ್ತಷ್ಟು ಉಲ್ಬಣಗೊಳಿಸಿದೆ. ಅಧಿಕಾರ ಮತ್ತು ಪ್ರಭಾವ ಹೊಂದಿರುವ ಈ ನಟರು ತಮ್ಮ “ಸಹೋದರತ್ವ”ವನ್ನು ಪ್ರದರ್ಶಿಸುತ್ತಿದ್ದಾರೆಯೇ ಹೊರತು ಮಹಿಳೆಯರ ನೋವಿಗೆ ಸ್ಪಂದಿಸುತ್ತಿಲ್ಲ ಎಂಬ ಟೀಕೆ ವ್ಯಕ್ತವಾಗಿದೆ.

ಚಿನ್ಮಯಿ ಅವರು ಈ ಕುರಿತು ಅತ್ಯಂತ ಖಡಕ್ ಆಗಿ ಹೇಳಿದ್ದಾರೆ: “ಪುರುಷರು ಯಾವಾಗಲೂ ತಮ್ಮ ಸಹೋದರರು, ಗೆಳೆಯರು ಮತ್ತು ಮಾರ್ಗದರ್ಶಕರ ಪರವಾಗಿಯೇ ನಿಲ್ಲುತ್ತಾರೆ. ಲೈಂಗಿಕ ಕಿರುಕುಳಕ್ಕೆ ಒಳಗಾದ ಹೆಣ್ಣುಮಕ್ಕಳ ಬಗ್ಗೆ ಇವರಿಗೆ ಕಿಂಚಿತ್ತೂ ಕಾಳಜಿಯಿಲ್ಲ. ರಾಜಕೀಯಕ್ಕೆ ಬರಲು ಸಜ್ಜಾಗಿರುವ ಇವರು ಮಹಿಳೆಯರ ಸುರಕ್ಷತೆಯ ಬಗ್ಗೆ ಇಟ್ಟಿರುವ ನಿಲುವು ಇದೇನಾ?” ಎಂಬುದು ಈಗ ಮತದಾರರು ಮತ್ತು ಸಾರ್ವಜನಿಕರು ಕೇಳಬೇಕಾದ ಪ್ರಶ್ನೆ.

ರಾಜಕೀಯ ಲಾಬಿ ಮತ್ತು ಚುನಾವಣಾ ತಂತ್ರದ ಲೇಪನ

ತಮಿಳುನಾಡು ವಿಧಾನಸಭಾ ಚುನಾವಣೆ ಕೆಲವೇ ವಾರಗಳಲ್ಲಿ ನಡೆಯಲಿರುವ ಈ ಸಂದರ್ಭದಲ್ಲಿ ಈ ಪ್ರಶಸ್ತಿ ಘೋಷಣೆಯಾಗಿರುವುದು ಆಕಸ್ಮಿಕವೇ? ಖಂಡಿತ ಇಲ್ಲ ಎಂದು ವಿಶ್ಲೇಷಕರು ವಾದಿಸುತ್ತಿದ್ದಾರೆ. ಬಿಜೆಪಿ ಸರ್ಕಾರವು ಪ್ರಾದೇಶಿಕ ಅಸ್ಮಿತೆಯನ್ನು ಬಳಸಿಕೊಂಡು ತಮಿಳು ಮತಗಳನ್ನು ಸೆಳೆಯಲು ಈ ಸಾಹಿತ್ಯಿಕ ದಾಳವನ್ನು ಬಳಸಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ವೈರಮುತ್ತು ಅವರ ರಾಜಕೀಯ ಪ್ರಭಾವ ಎಷ್ಟಿದೆ ಎಂದರೆ, ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಕೂಡ ಅವರನ್ನು ಅಭಿನಂದಿಸಿದ್ದಾರೆ. ಇದನ್ನು ಖಂಡಿಸಿರುವ ಲೇಖಕಿ ಮೀನಾ ಕಂದಸಾಮಿ, “ಪೆರಿಯಾರ್ ಅವರ ಸಿದ್ಧಾಂತದಲ್ಲಿ ಬಂದವರು ಲೈಂಗಿಕ ಕಿರುಕುಳದ ಆರೋಪ ಹೊತ್ತವರನ್ನು ಬೆಂಬಲಿಸುವುದು ಮಹಿಳೆಯರಿಗೆ ಮಾಡುವ ಅವಮಾನ,” ಎಂದು ನೆನಪಿಸಿದ್ದಾರೆ. ಬರಹಗಾರ್ತಿ ಸುಚಿತ್ರಾ ಅವರ ಪ್ರಕಾರ, “ವೈರಮುತ್ತುಗಿಂತಲೂ ಘನವಾದ ಸಾಹಿತಿಗಳು ತಮಿಳಿನಲ್ಲಿದ್ದಾರೆ. ಈ ಆಯ್ಕೆಯು ಕೇವಲ ಲಾಬಿಯಿಂದ ನಡೆದಿದೆ. ವೈರಮುತ್ತು ಒಬ್ಬ ಅಗ್ಗದ ಜನಪ್ರಿಯ ಕವಿ (Poetaster) ಅಷ್ಟೇ.”

ಕನ್ನಡಿಗರ ಆಕ್ರೋಶ ಮತ್ತು ಸಮಾಜದ ಜವಾಬ್ದಾರಿ

ಕನ್ನಡದ ಚಿಂತಕ ಅರುಣ್ ಜೋಳದಕುಡ್ಲಗಿ ಅವರು ತಮ್ಮ ಫೇಸ್‌ಬುಕ್ ಬರಹದಲ್ಲಿ ಅತ್ಯಂತ ಕಟುವಾಗಿ ಪ್ರತಿಕ್ರಿಯಿಸಿದ್ದಾರೆ. “ಹೆಣ್ಣುಬಾಕ ವೈರಮುತ್ತು ಜ್ಞಾನಪೀಠಕ್ಕೆ ಕಳಂಕ. ಈತ ಒಳ್ಳೆಯ ಕವಿ ಇರಬಹುದು, ಆದರೆ ಒಳ್ಳೆಯ ಮನುಷ್ಯನಲ್ಲ,” ಎಂದು ಅವರು ಗುಡುಗಿದ್ದಾರೆ. ಭಾರತದಲ್ಲಿ ಮಹಿಳಾ ಚಳವಳಿಗಳು ಮತ್ತು ಸಾಹಿತ್ಯಿಕ ಸಂಘಟನೆಗಳು ಈ ಕೂಡಲೇ ಜಾಗೃತವಾಗಿ ವೈರಮುತ್ತುಗೆ ನೀಡಿದ ಪ್ರಶಸ್ತಿಯನ್ನು ಹಿಂಪಡೆಯಲು ಒತ್ತಾಯಿಸಬೇಕು ಎಂಬುದು ಅವರ ಆಗ್ರಹವಾಗಿದೆ.

ಕೇರಳದ ಓ.ಎನ್.ವಿ ಕುರುಪ್ ಸಾಹಿತ್ಯ ಪ್ರಶಸ್ತಿಯನ್ನು ಈ ಹಿಂದೆ ಸಾರ್ವಜನಿಕ ಪ್ರತಿರೋಧಕ್ಕೆ ಹೆದರಿ ಸರ್ಕಾರ ಹಿಂಪಡೆದಿತ್ತು. ಅಂತಹದ್ದೇ ಒಂದು ಬಲಿಷ್ಠ ಪ್ರತಿರೋಧ ಭಾರತದಾದ್ಯಂತ ನಡೆಯಬೇಕಿದೆ. ಜ್ಞಾನಪೀಠ ಸಂಸ್ಥೆಯು ಕೇವಲ “ಸಾಹಿತ್ಯಿಕ ಮೌಲ್ಯ”ದ ನೆಪವೊಡ್ಡಿ ನೈತಿಕ ಪತನವನ್ನು ಬೆಂಬಲಿಸಬಾರದು.

ಅಸಲಿ ಸುದ್ದಿಯ ವಿಶ್ಲೇಷಣೆ

ಪ್ರಶಸ್ತಿಗಳು ಕೇವಲ ಅಲಂಕಾರಿಕ ವಸ್ತುಗಳಲ್ಲ; ಅವು ಸಮಾಜದ ಆದರ್ಶಗಳನ್ನು ಪ್ರತಿಬಿಂಬಿಸುವ ಸಾಧನಗಳು. ಲೈಂಗಿಕ ಕಿರುಕುಳದ ಆರೋಪ ಹೊತ್ತು, ಮಹಿಳೆಯರ ಶೋಷಣೆ ಮಾಡಿದ ವ್ಯಕ್ತಿಯನ್ನು ‘ಜಗದ ಕವಿ’ಯನ್ನಾಗಿ ಕೂರಿಸಿದರೆ, ಅದು ಬರೆಯುತ್ತಿರುವ ಮುಂದಿನ ತಲೆಮಾರಿನ ಹೆಣ್ಣುಮಕ್ಕಳಿಗೆ ನೀಡುವ ತಪ್ಪು ಸಂದೇಶವಾಗುತ್ತದೆ. ಅಧಿಕಾರ, ಪ್ರಭಾವ ಮತ್ತು ರಾಜಕೀಯ ಲಾಬಿಗಳಿಂದ ಸತ್ಯವನ್ನು ಬಹಳ ಕಾಲ ಮುಚ್ಚಿಡಲು ಸಾಧ್ಯವಿಲ್ಲ.

ವೈರಮುತ್ತು ಅವರ ಸಾಹಿತ್ಯದ ಘನತೆಯು ಅವರ ವ್ಯಕ್ತಿತ್ವದ ಕಪ್ಪುಚುಕ್ಕೆಯ ಮುಂದೆ ಕರಗಿ ಹೋಗಿದೆ. ರಾಜಕೀಯ ನಾಯಕರು ಮತ್ತು ಸಿನಿಮಾ ಸ್ಟಾರ್‌ಗಳು ಇವರನ್ನು ಬೆಂಬಲಿಸುವ ಮೂಲಕ ತಾವು ಯಾವ ವರ್ಗದ ಪರವಾಗಿ ನಿಂತಿದ್ದೇವೆ ಎಂಬುದನ್ನು ಸಾಬೀತು ಮಾಡಿದ್ದಾರೆ. ಈಗ ಚೆಂಡು ಜ್ಞಾನಪೀಠ ಆಯ್ಕೆ ಸಮಿತಿಯ ಅಂಗಳದಲ್ಲಿದೆ. ದೇಶಾದ್ಯಂತ ಕೇಳಿಬರುತ್ತಿರುವ #RetrieveJnanpith ಅಭಿಯಾನಕ್ಕೆ ಕಿವಿಕೊಡದಿದ್ದರೆ, ಜ್ಞಾನಪೀಠದ ಘನತೆ ಇತಿಹಾಸದ ಪುಟಗಳಲ್ಲಿ ಮಂಕಾಗುವುದರಲ್ಲಿ ಸಂದೇಹವಿಲ್ಲ.

ಸಾಹಿತ್ಯವು ಮನುಷ್ಯನನ್ನು ಸಂವೇದನಾಶೀಲನನ್ನಾಗಿ ಮಾಡಬೇಕು. ಆದರೆ ಸಂವೇದನೆಯೇ ಇಲ್ಲದ ವ್ಯಕ್ತಿಯ ಸಾಹಿತ್ಯಕ್ಕೆ ಪೀಠ ಹಾಕುವುದು ಪ್ರಜಾಪ್ರಭುತ್ವದ ಮತ್ತು ಸಾಹಿತ್ಯದ ಬಹುದೊಡ್ಡ ಸೋಲು. ವೈರಮುತ್ತು ಜ್ಞಾನಪೀಠವನ್ನು ಹಿಂತಿರುಗಿಸಲಿ ಅಥವಾ ಸಂಸ್ಥೆಯೇ ಅದನ್ನು ವಾಪಸ್ ಪಡೆಯಲಿ; ಅಲ್ಲಿಯವರೆಗೆ ಸಾಹಿತ್ಯದ ಆತ್ಮಕ್ಕೆ ಶಾಂತಿ ಇಲ್ಲ.

ಇದನ್ನೂ ಓದಿ: By-Election: ಏ. 9ಕ್ಕೆ ಮತದಾನ, ಮೇ 4ಕ್ಕೆ ಫಲಿತಾಂಶ; ಬಾಗಲಕೋಟೆ-ದಾವಣಗೆರೆಯಲ್ಲಿ ಯಾರಿಗೆ ಟಿಕೆಟ್?

Praveen Yalligutti
Praveen Yalliguttihttp://asalisuddi.com
ಕನ್ನಡದ ವಿವಿಧ ಸುದ್ದಿ ಮಾಧ್ಯಮ ಸಂಸ್ಥೆಗಳಲ್ಲಿ ಸುಮಾರು 8 ವರ್ಷಗಳ ಕಾಲ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ ನನಗಿದೆ. ಸುದ್ದಿಗಳ ಅಸಲಿಯತ್ತನ್ನು ಮತ್ತು ನಿಖರವಾದ ಮಾಹಿತಿಯನ್ನು ಜನರಿಗೆ ತಲುಪಿಸಬೇಕು ಎನ್ನುವ ಉದ್ದೇಶದಿಂದ ಈಗ 'ಅಸಲಿ ಸುದ್ದಿ' (Asali Suddi) ಎನ್ನುವ ಸುದ್ದಿ ಸಂಸ್ಥೆಯನ್ನು ಆರಂಭಿಸಿದ್ದೇನೆ. ಸತ್ಯಕ್ಕೆ ಹತ್ತಿರವಾದ ಮತ್ತು ಜನೋಪಕಾರಿ ವರದಿಗಳನ್ನು ನೀಡುವುದೇ ನನ್ನ ಮೊದಲ ಆದ್ಯತೆ.
RELATED ARTICLES

Most Popular

Recent Comments