ಕೋಲ್ಕತ್ತಾ: ಕ್ರಿಕೆಟ್ ಕಾಶಿ ಈಡನ್ ಗಾರ್ಡನ್ಸ್ ಮೈದಾನ ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ. ಟಿ20 ವಿಶ್ವಕಪ್‌ನ ಸೂಪರ್-8 ಹಂತದ ಅತ್ಯಂತ ನಿರ್ಣಾಯಕ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ (IND vs WI) ಅಮೋಘ ಜಯ ದಾಖಲಿಸಿದೆ. ಟೀಂ ಇಂಡಿಯಾದ ಈ ಗೆಲುವಿನ ಹಿಂದೆ ಒಬ್ಬನೇ ಒಬ್ಬ ವ್ಯಕ್ತಿಯ ಕೆಚ್ಚೆದೆಯ ಹೋರಾಟವಿದೆ, ಅವರೇ ಕೇರಳದ ಕಲಿ ಸಂಜು ಸ್ಯಾಮ್ಸನ್. ಟೀಂ ಇಂಡಿಯಾದಲ್ಲಿ ಅವಕಾಶಗಳಿಗಾಗಿ ಹಪಹಪಿಸುತ್ತಿದ್ದ ಸಂಜು, ಇಂದು ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡು ಭಾರತವನ್ನು ಸೆಮಿಫೈನಲ್‌ಗೆ ಕೊಂಡೊಯ್ದಿದ್ದಾರೆ.
ವಿಂಡೀಸ್ ಬ್ಯಾಟಿಂಗ್ ಅಬ್ಬರ: ಭಾರತಕ್ಕೆ ಬೆಟ್ಟದಂತಹ ಗುರಿ
IND vs WI: ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡಕ್ಕೆ ಆರಂಭಿಕರಾದ ಶಾಯ್ ಹೋಪ್ ಮತ್ತು ರೋಸ್ಟನ್ ಚೇಸ್ ಭದ್ರ ಬುನಾದಿ ಹಾಕಿಕೊಟ್ಟರು. ಮೊದಲ ವಿಕೆಟ್‌ಗೆ 68 ರನ್‌ಗಳ ಜೊತೆಯಾಟವಾಡಿದ ಈ ಜೋಡಿ ಭಾರತೀಯ ಬೌಲರ್‌ಗಳನ್ನು ಕಾಡಿತು. ಭಾರತದ ಫೀಲ್ಡಿಂಗ್ ವೈಫಲ್ಯವೂ ವಿಂಡೀಸ್‌ಗೆ ವರದಾನವಾಯಿತು. ಅಭಿಷೇಕ್ ಶರ್ಮಾ ಸುಲಭ ಕ್ಯಾಚ್ ಕೈಬಿಟ್ಟರೆ, ವರುಣ್ ಚಕ್ರವರ್ತಿ ರನೌಟ್ ಅವಕಾಶವನ್ನು ಕೈಚೆಲ್ಲಿದರು.
ಪಂದ್ಯದ ಮೊದಲ 10 ಓವರ್‌ಗಳಲ್ಲಿ ಭಾರತ ನಿಯಂತ್ರಣ ಸಾಧಿಸಿ ಕೇವಲ 82 ರನ್ ನೀಡಿದ್ದರೂ, ನಂತರದ 10 ಓವರ್‌ಗಳಲ್ಲಿ ವಿಂಡೀಸ್ ಬ್ಯಾಟರ್‌ಗಳು ರೌದ್ರಾವತಾರ ತಾಳಿದರು. ಜೇಸನ್ ಹೋಲ್ಡರ್ (37*) ಮತ್ತು ನಾಯಕ ರೋವ್ಮನ್ ಪೊವೆಲ್ (34*) ಅಜೇಯ ಆಟದ ನೆರವಿನಿಂದ ಕೊನೆಯ 10 ಓವರ್‌ಗಳಲ್ಲಿ ಬರೋಬ್ಬರಿ 113 ರನ್ ಚಚ್ಚಿದರು. ಅಂತಿಮವಾಗಿ ವಿಂಡೀಸ್ 20 ಓವರ್‌ಗಳಲ್ಲಿ 195 ರನ್‌ಗಳ ಬೃಹತ್ ಮೊತ್ತ ಪೇರಿಸಿತು.
ಭಾರತಕ್ಕೆ ಆರಂಭಿಕ ಆಘಾತ
IND vs WI: ಟಿ20 ವಿಶ್ವಕಪ್ ಇತಿಹಾಸದಲ್ಲಿ ಇಷ್ಟು ದೊಡ್ಡ ಮೊತ್ತವನ್ನು ಭಾರತ ಎಂದೂ ಬೆನ್ನಟ್ಟಿರಲಿಲ್ಲ. ಸವಾಲಿನ ಗುರಿ ಬೆನ್ನಟ್ಟಿದ ಭಾರತಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ಯುವ ಆಟಗಾರ ಅಭಿಷೇಕ್ ಶರ್ಮಾ (10) ಮತ್ತು ಇಶಾನ್ ಕಿಶನ್ (10) ಬೇಗನೇ ಪೆವಿಲಿಯನ್ ಸೇರಿಕೊಂಡರು. ಕೇವಲ 20 ರನ್ ದಾಟುವಷ್ಟರಲ್ಲಿ ಪ್ರಮುಖ ವಿಕೆಟ್ ಕಳೆದುಕೊಂಡ ಭಾರತ ಸೋಲಿನ ಸುಳಿಗೆ ಸಿಲುಕಿದಂತೆ ಭಾಸವಾಯಿತು.
ಇದನ್ನೂ ಓದಿ: Sachin Tendulkar: ಪಾಕಿಸ್ತಾನ ಪರ ಆಡಿದ್ದ ಸಚಿನ್! ಶಾಕ್ ಆಯ್ತಾ? ಈ ಸ್ಟೋರಿ ಓದಿ
ಸಂಜು ಸ್ಯಾಮ್ಸನ್ ಎಂಬ ಒಂಟಿ ಸಲಗನ ಹೋರಾಟ
ಒಂದು ಕಡೆ ವಿಕೆಟ್‌ಗಳು ಉರುಳುತ್ತಿದ್ದರೂ ಎದೆಗುಂದದ ಸಂಜು ಸ್ಯಾಮ್ಸನ್, ವಿಂಡೀಸ್ ಬೌಲರ್‌ಗಳ ಮೇಲೆ ಪ್ರತಿಾಕ್ರಮಣ ನಡೆಸಿದರು. ಆರಂಭಿಕನಾಗಿ ಕಣಕ್ಕಿಳಿದಿದ್ದ ಸಂಜು, ಅನುಭವಿ ಆಟಗಾರನಂತೆ ಇನ್ನಿಂಗ್ಸ್ ಕಟ್ಟಿದರು. ಮೈದಾನದ ಮೂಲೆ ಮೂಲೆಗೂ ಬೌಂಡರಿ, ಸಿಕ್ಸರ್‌ಗಳ ಸುರಿಮಳೆಗೈದ ಅವರು ವಿಂಡೀಸ್ ಪಡೆಯ ರಣತಂತ್ರವನ್ನು ಉಡೀಸ್ ಮಾಡಿದರು.
ಸಂಜು ಸ್ಯಾಮ್ಸನ್ ಕೇವಲ ಎಸೆತಗಳಲ್ಲಿ 12 ಬೌಂಡರಿ ಹಾಗೂ 4 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ ಅಜೇಯ 97 ರನ್ ಸಿಡಿಸಿದರು. ದುರದೃಷ್ಟವಶಾತ್ ಅವರು ಶತಕ ವಂಚಿತರಾದರೂ, ತಂಡಕ್ಕೆ ಬೇಕಿದ್ದ ಜಯವನ್ನು ತಂದುಕೊಟ್ಟರು.
ವಿರಾಟ್ ಕೊಹ್ಲಿ ದಾಖಲೆ ಬ್ರೇಕ್: ಈ ಸ್ಮರಣೀಯ ಇನ್ನಿಂಗ್ಸ್ ಮೂಲಕ ಸಂಜು ಸ್ಯಾಮ್ಸನ್ ಹೊಸ ದಾಖಲೆ ಬರೆದಿದ್ದಾರೆ. ಟಿ20 ವಿಶ್ವಕಪ್‌ನ ರನ್ ಚೇಸ್‌ನಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಹಿಂದೆ ಪಾಕಿಸ್ತಾನದ ವಿರುದ್ಧ 82 ರನ್ ಗಳಿಸಿದ್ದ ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ಸಂಜು ಇಂದು ಅಳಿಸಿಹಾಕಿದ್ದಾರೆ.
Cometh the hour, cometh Sanju Samson! 🫡
9⃣7⃣*(50) – A knock for the ages to take #TeamIndia into the semi-finals 👏
Scorecard ▶️ https://t.co/ur4pr8Bi3K#T20WorldCup | #MenInBlue | #INDvWI | @IamSanjuSamson pic.twitter.com/ftJRp2wMTE
— BCCI (@BCCI) March 1, 2026
ತಿಲಕ್-ದುಬೆ ಸಾಥ್
ಸಂಜು ಹೋರಾಟಕ್ಕೆ ಯುವ ಆಟಗಾರ ತಿಲಕ್ ವರ್ಮಾ (27 ರನ್) ಉತ್ತಮ ಸಾಥ್ ನೀಡಿದರು. ಅಂತಿಮ ಕ್ಷಣಗಳಲ್ಲಿ ಶಿವಂ ದುಬೆ (8*) ಸಂಜು ಜೊತೆಗೂಡಿ ಭಾರತಕ್ಕೆ ಐತಿಹಾಸಿಕ ಗೆಲುವು ತಂದುಕೊಟ್ಟರು. ಈ ಗೆಲುವಿನೊಂದಿಗೆ ಭಾರತ ಅಧಿಕೃತವಾಗಿ ಸೆಮಿಫೈನಲ್ ಹಂತಕ್ಕೆ ಪ್ರವೇಶ ಪಡೆದಿದೆ.
ಕಡೆಗಣಿಸಿದವರಿಗೆ ಬ್ಯಾಟ್ ಮೂಲಕವೇ ಉತ್ತರ!
ಸಂಜು ಸ್ಯಾಮ್ಸನ್ ಅವರ ಪ್ರತಿಭೆಯ ಬಗ್ಗೆ ಯಾರಿಗೂ ಸಂಶಯವಿರಲಿಲ್ಲ. ಆದರೆ ಅವರಿಗೆ ಸಿಗುತ್ತಿದ್ದ ಅಸ್ಥಿರ ಅವಕಾಶಗಳು ಅಭಿಮಾನಿಗಳಲ್ಲಿ ಬೇಸರ ಮೂಡಿಸಿತ್ತು. ಹಲವು ಬಾರಿ ತಂಡದಿಂದ ಹೊರಬಿದ್ದಿದ್ದ ಸಂಜು, ಇಂದು ಅಕ್ಷರಶಃ ‘ಫೀನಿಕ್ಸ್’ ನಂತೆ ಎದ್ದು ಬಂದಿದ್ದಾರೆ. “ಬೇಡ ಎಂದು ಬಿಸಾಡಿದವರೇ ಮೆಚ್ಚಿಕೊಳ್ಳುವಂತೆ” ಸಂಜು ಇಂದು ಆಡಿದ್ದಾರೆ. ಈ ಗೆಲುವು ಭಾರತಕ್ಕೆ ಕೇವಲ ಸೆಮಿಫೈನಲ್ ಟಿಕೆಟ್ ಮಾತ್ರವಲ್ಲ, ಒಬ್ಬ ಪರಿಪೂರ್ಣ ಮ್ಯಾಚ್ ವಿನ್ನರ್ ಅನ್ನು ನೀಡಿದೆ.

